ಬೆಂಗಳೂರು: ದಲಿತ ಸಂಘರ್ಷ ಸಮಿತಿಗಳ ಐಕ್ಯ ಹೋರಾಟ ಚಾಲನಾ ಸಮಿತಿ ವತಿಯಿಂದ ಡಿಸೆಂಬರ್ 06ರಂದು ಜರುಗಿದ ʻದಲಿತ ಸಾಂಸ್ಕೃತಿಕ ಪ್ರತಿರೋಧʼ ಎಂಬ ಬೃಹತ್ ಸಮಾವೇಶದಿಂದ ಸ್ಪೂರ್ತಿ ಪಡೆದ ಸಂಘಟನೆಗಳು ಮತ್ತೊಂದು ಬೃಹತ್ ಕಾರ್ಯಕ್ರಮಕ್ಕೆ ಮುಂದಾಗಿದೆ. ಡಿಸೆಂಬರ್ 25ರಂದು ಬೆಂಗಳೂರು ನಗರದ ಟೌನ್‌ಹಾಲ್ ಮುಂಭಾಗ ಬೆಳಿಗ್ಗೆ 11 ಗಂಟೆಗೆ ʻಬನ್ನಿ ಸಂವಿಧಾನವನ್ನು ಎದೆಗಪ್ಪಿಕೊಳ್ಳೋಣʼ ಕಾರ್ಯಕ್ರಮ ಆಯೋಜಿಸಲಾಗಿದೆ.
ದಲಿತ ಸಂಘರ್ಷ ಸಮಿತಿಗಳ ಐಕ್ಯ ಹೋರಾಟ ಚಾಲನಾ ಸಮಿತಿ ನೇತೃತ್ವದಲ್ಲಿ ನಡೆಯಲಿರುವ ಈ ಕಾರ್ಯಕ್ರಮಕ್ಕೆ ರಾಜ್ಯದ ಎಲ್ಲಾ ದಲಿತ ಸಂಘಟನೆಗಳು, ಪ್ರಗತಿಪರ ಸಂಘಟನೆಗಳು, ಜನಪರ ಸಂಘಟನೆಗಳು ಕೈಜೋಡಿಸಿವೆ. 1927 ಡಿಸೆಂಬರ್ 25 ಭಾರತ ದೇಶಕ್ಕೆ ವಿಶೇಷವಾದ ದಿನ ಅಂದು ಬಾಬಾ ಸಾಹೇಬ್ ಡಾ. ಬಿ.ಆರ್ ಅಂಬೇಡ್ಕರರು ಮೇಲು-ಕೀಳು, ಸ್ಪೃಶ್ಯ-ಅಸ್ಪೃಶ್ಯ, ಜಾತಿ ಹಾಗೂ ಲಿಂಗ ತಾರತಮ್ಯದ ಅಸಮಾನತೆಯನ್ನು ಹೇರುವ ದಲಿತ, ಹಿಂದುಳಿದ ಹಾಗೂ ಶೂದ್ರ ಸಮುದಾಯಗಳ ವಿರೋಧಿ ಮನುಸ್ಪೃತಿ ದಹನ ಮಾಡಿದ ದಿನವಾಗಿದೆ. ಅದರ ನೆನಪಿಗಾಗಿ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಇದನ್ನು ಓದಿ: ಡಿಸೆಂಬರ್ 25, 1927 ಮನುಸ್ಮೃತಿ ದಹನ ದಿನ
ಆರ್ಯರ ಆಕ್ರಮಣಗಳ ತರುವಾಯ ಋಗ್ವೇದದ ಅಂತ್ಯಭಾಗಕ್ಕೆ ಸೇರ್ಪಡೆಯಾದ “ಪುರುಷ ಸೂಕ್ತ” ಎಂಬ ವರ್ಣಾಶ್ರಮ ಪದ್ಧತಿಗೆ ಸಮರ್ಥನೆ ನೀಡಿದ ಗ್ರಂಥದಿಂದ. ಅದರ ಮುಂದುವರಿದ ಭಾಗವಾಗಿರುವ ಮನುಸ್ಮೃತಿಯು, ಸಮಾಜದ ಮೇಲೆ ಹೇರಿದ ಸಾಮಾಜಿಕ, ಶೈಕ್ಷಣಿಕ, ರಾಜಕೀಯ, ಆರ್ಥಿಕ, ಧಾರ್ಮಿಕ ಕ್ಷೇತ್ರಗಳಲ್ಲಿ ವಿಧಿಸಿದ ಅಮಾನವೀಯ-ಅಸಮಾನತೆಯ ನೀತಿ ಸಂಹಿತೆಗಳು ಈ ದೇಶದ ಬಹುಸಂಖ್ಯಾತ ದುಡಿಯುವ ಶ್ರಮಜೀವಿ ಸಮುದಾಗಳ ಶಿಕ್ಷಣ, ಸಾಮಾಜಿಕ ಸಮಾನತೆ, ಸ್ವಾತಂತ್ರ್ಯ, ಅರ್ಥಿಕ ಸ್ವಾವಲಂಬನೆಯ ಬದುಕನ್ನು ಬಲಿ ತೆಗೆದುಕೊಂಡವು. ತತ್ಪರಿಣಾಮವಾಗಿ; ಕಸುಬಿನ ಆಧಾರದಲ್ಲಿ ಜಾತಿಗಳನ್ನು ಸೃಷ್ಟಿಸಿ ಇಂತಿಂಥ ಜಾತಿಗಳು ಇಂತಿಂಥ ಕೆಲಸಗಳನ್ನಷ್ಟೆ ಮಾಡಬೇಕೆಂದು ಕಟ್ಟುಪಾಡು ಮಾಡಿ ದುಡಿಯುವ ಜನವರ್ಗಗಳನ್ನು ವಿಭಜನೆ ಮಾಡಲಾಯಿತು.
ಇದನ್ನು ಓದಿ: ಎಸೆದು ಬಿಡು ನಿನ್ನ ಹಾಡುಗಳನೆಲ್ಲ ದೂರ – ಮಹಿಳೆ: ದುಡಿಮೆ ಮತ್ತು ಸ್ವಾತಂತ್ರ್ಯಹೀನತೆ
ಭಾರತದ ಸ್ವಾತಂತ್ರ್ಯ ಪೂರ್ವದಲ್ಲಿ ಜಾತಿವ್ಯವಸ್ಥೆ ಪ್ರಧಾನವಾಗಿ ಜಾರಿಯಲ್ಲಿತ್ತು. ಅದರ ದುಷ್ಪರಿಣಾಮಗಳು ಅಸಂಖ್ಯಾತ. ಅದರೊಂದಿಗೆ ಮೌಢ್ಯ, ಬಡತನ, ಅನಕ್ಷರತೆ, ಸಾಮಾಜಿಕ ಅಸಮಾನತೆ, ಅಸ್ಪೃಶ್ಯತೆ, ಅನ್ಯಾಯ, ಅತ್ಯಾಚಾರ, ಕೊಲೆ-ಸುಲಿಗೆಗಳಿಂದ ಹೀನಾಯ ಸ್ಥಿತಿಗೆ ತಲುಪಿದ್ದ ದೇಶದೊಳಗೆ ಸ್ವಾತಂತ್ರ್ಯ ಚಳವಳಿಯು, ಸಾಮಾಜಿಕ ಬದಲಾವಣೆಯ ಹಲವು ಜನಾಂದೋಲನಗಳಿಗೂ ದಾರಿಮಾಡಿಕೊಟ್ಟಿತು. ಭಾರತ ದೇಶಕ್ಕೆ ಸ್ವಾತಂತ್ರ್ಯ ನಂತರ ಜಾರಿಗೊಂಡ ಜಗತ್ತಿಗೆ ಶ್ರೇಷ್ಟತೆಯ ಸಂವಿಧಾನ ತನ್ನ ಹಿರಿಮೆಯನ್ನು ದಾಖಲಿಸಿಕೊಂಡಿದೆ.
1950ರಲ್ಲಿ ಜಾರಿಗೆ ಬಂದ ನೂತನ ಭಾರತದ ಸಂವಿಧಾನ. ದುಡಿಯುವ ಜನವರ್ಗಗಳಾದ ದಲಿತರು, ಹಿಂದುಳಿದ ಜಾತಿ ಹಾಗೂ ಗ್ರಾಮೀಣ ರೈತಾಪಿ ಸಮುದಾಯಗಳನ್ನ ಚರಿತ್ರಯುದ್ದಕ್ಕೂ ಇನ್ನಿಲ್ಲದಂತೆ ನರಳಿಸಿದ್ದ “ಮನುಸ್ಮೃತಿ”ಯು, ತನ್ನ ಪಟ್ಟಭದ್ರ ನೆಲೆಗಳನ್ನು ಕಳೆದುಕೊಳ್ಳುವುದು ಅನಿವಾರ್ಯವಾಗಿತ್ತು. ಜಾತಿ ಪ್ರಭುತ್ವದ ಫಲಾನುಭವಿಗಳಾದ ಬ್ರಾಹ್ಮಣಶಾಯಿ ಹಾಗೂ ಬಂಡವಾಳಶಾಹಿ ಪಟ್ಟಭದ್ರರ ಸಂಭ್ರಮ ಪಡುವ ಸರಳ ಸಂಗತಿಯೇನೂ ಆಗಿರಲಿಲ್ಲ. ಅಂಬೇಡ್ಕರ್ ಅವರ ಹೋರಾಟದ ಆ ಸಂದರ್ಭಗಳಲ್ಲಿಯೂ ಮತ್ತು ಈಗಲೂ ಇದು ತೀವ್ರ ಸ್ವರೂಪದ ಪ್ರತಿರೋಧದ ಸಂಘರ್ಷದ ಸನ್ನಿವೇಶಗಳನ್ನು ಸೃಷ್ಟಿಸುತ್ತಲೇ ಇದೆ.
ಇದನ್ನು ಓದಿ: ದಲಿತ ಸಾಂಸ್ಕೃತಿಕ ಪ್ರತಿರೋಧ; ಜನರ ಸಮಸ್ಯೆಗಳಿಗೆ ಜನಪರ ಹೋರಾಟಗಳೇ ಮದ್ದು: ನ್ಯಾ.ನಾಗಮೋಹನ ದಾಸ್
ಜಗತ್ತಿನ ಮಹಾನ್ ಪಾತಕಗಳಾಗಿರುವ ಜಾತಿ ಮತ್ತು ಅಸ್ಪೃಶ್ಯತೆಗಳೇ ಎಲ್ಲ ಅಸಮಾನತೆಗಳಿಗೆ ತಾಯಿ ಬೇರು. ಆದರೆ, ಅಸಮಾನತೆಯು ನಿಸರ್ಗದ ವೈವಿಧ್ಯತೆಯಂತೆ ಸಹಜ ತತ್ವವೆಂದು ವೈದಿಕ ಜ್ಞಾನವು(ಬ್ರಾಹ್ಮಣ್ಯವು) ಕೆಟ್ಟ ಸಮರ್ಥನೆ ನೀಡುತ್ತದೆ. ಇಂತಹ ಕುತರ್ಕವನ್ನು ಸವಾಲಾಗಿ ಸ್ವೀಕರಿಸಿದ ಅಂಬೇಡ್ಕರ್ ರವರು, ಅಸ್ಪೃಶ್ಯತೆ ಮತ್ತು ಜಾತಿ ಪದ್ದತಿಯ ಉಗಮ, ವಿಕಾಸದ ಬಗ್ಗೆ ವೈಜ್ಞಾನಿಕವಾದ ಸಮಗ್ರವಾದ ಅಧ್ಯಯನ ನಡೆಸಿ, ಅವುಗಳ ವಿನಾಶಕ್ಕೆ ಒಂದು ಸೈದ್ಧಾಂತಿಕ ನೆಲೆಗಟ್ಟು ಒದಗಿಸಿದರು.
ಡಿಸೆಂಬರ್ 25, 1927ರಂದು ಮಹಡ್ ನಲ್ಲಿ ಮನುಸ್ಮೃತಿಯನ್ನು ಬಹಿರಂಗವಾಗಿ ಸುಡುವ ಮೂಲಕ ಸಮಾನತೆಯ ಮಹಾಸಮರಕ್ಕೆ ಸ್ವತಃ ನಾಯಕತ್ವ ನೀಡಿ, ಭವಿಷ್ಯದಲ್ಲಿ ಅಸ್ಪೃಶ್ಯ, ಹಿಂದುಳಿದ ಸಮುದಾಯಗಳು ತುಳಿಯಬೇಕಾದ ದಾರಿಯತ್ತ ತಮ್ಮ ದೃಢ ಹೆಜ್ಜೆ ಇಟ್ಟು, ಸಾಮಾಜಿಕ ಬದಲಾವಣೆಗೆ ಸ್ಪೂರ್ತಿ ನೀಡಿದ ದಿನವಾಗಿದೆ.
ಪ್ರಸಕ್ತ ಸಂದರ್ಭದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘ(ಆರ್‌ಎಸ್‌ಎಸ್), ಭಾರತೀಯ ಜನತಾ ಪಕ್ಷ(ಬಿಜೆಪಿ) ಪ್ರಜಾಪ್ರಭುತ್ವದ ಹೆಸರಿನಲ್ಲಿ ನಡೆಸುತ್ತಿರುವ ಪ್ರತಿಯೊಂದು ಚಟುವಟಿಕೆಗಳ ಹಿಂದೆಯೂ ಸಂವಿಧಾನವನ್ನು ಬುಡಮೇಲು ಮಾಡಿ, ಆ ಸ್ಥಾನದಲ್ಲಿ “ಮನುಸ್ಮೃತಿ”ಯನ್ನು ಮರು ಸ್ಥಾಪನೆ ಮಾಡುವ ಸಂಚನ್ನು ರೂಪಿಸುತ್ತಿದೆ. ಹಾಗಾಗಿಯೇ ಸ್ವಾತಂತ್ರ್ಯ ಪೂರ್ವದ ಜಾತಿ, ಅಸ್ಪೃಶ್ಯತೆ, ಅಸಮಾನತೆಗಳ ಕರಾಳತೆ ಮತ್ತೊಮ್ಮೆ ನಮ್ಮ ಮುಂದೆ ತಂದೊಡ್ಡದಿರಲೆಂದು ನಮ್ಮ ಸಂವಿಧಾನವನ್ನು ಎದೆಗಪ್ಪಿಕೊಂಡು ನಮ್ಮ ಸಂವಿಧಾನಕ್ಕೆ ಅಡ್ಡಗಾಲಾಗಿರುವ “ಮನುಸ್ಮೃತಿ”ಯನ್ನು ಡಿಸೆಂಬರ್ 25, 2022ರಂದು ಸುಟ್ಟು ಹಾಕಿ ಬಾಬಾ ಸಾಹೇಬ್ ಅಂಬೇಡ್ಕರ್ ರವರ ಸಂವಿಧಾನ ಮತ್ತು ಪ್ರಜಾಪ್ರಭುತ್ವವನ್ನು ಕಾಪಾಡುವ ನಿಟ್ಟಿನಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಇಲ್ಲಿ ಕ್ಲಿಕ್ ಮಾಡಿ : ಜನಶಕ್ತಿ ಮೀಡಿಯಾ ವಾಟ್ಸ್‌ಪ್ ಗುಂಪು ಸೇರಲು ಈ ಲಿಂಕ್ ಕ್ಲಿಕ್ ಮಾಡಿ