ಬೆಂಗಳೂರು: ಸಂಸತ್, ವಿಧಾನಸಭೆ ಹಾಗೂ ಸ್ಥಳೀಯ ಸಂಸ್ಥೆಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಹಾಗೂ ಹಿಂದುಳಿದ ವರ್ಗಗಳು ಪ್ರತಿನಿಸುವಂತಹ ಅವಕಾಶಕತೆ ಇದ್ದು, ಇದಕ್ಕಾಗಿ ಸಂವಿಧಾನದಲ್ಲಿ ತಿದ್ದುಪಡಿ ಮಾಡಬೇಕಾಗಿದೆ ಎಂದು ಸುಪ್ರೀಂಕೋರ್ಟ್ ನಿವೃತ್ತ ನ್ಯಾಯಮೂರ್ತಿ ವಿ.ಗೋಪಾಲಗೌಡ ತಿಳಿಸಿದರು.
ಕರ್ನಾಟಕ ರಾಜ್ಯ ಅತಿ ಹಿಂದುಳಿದ ವರ್ಗಗಳ ಜಾಗೃತಿ ವೇದಿಕೆ ವತಿಯಿಂದ ಶಾಸಕರ ಭವನದ ಸಮ್ಮೇಳನ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ʻಸಂವಿಧಾನ ದಿನಾಚರಣೆ ಹಾಗೂ ಜಾಗೃತಿ ವೇದಿಕೆʼ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಸಂಸತ್, ವಿಧಾನಸಭೆ ಹಾಗೂ ಸ್ಥಳೀಯ ಸಂಸ್ಥೆಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಹಾಗೂ ಹಿಂದುಳಿದ ವರ್ಗಗಳು ಪ್ರತಿನಿಸುವಂತಹ ಅವಕಾಶ ನೀಡಲು ಸಂವಿಧಾನದಲ್ಲಿ ತಿದ್ದುಪಡಿ ತರಬೇಕು. ಸುಪ್ರೀಂ ಕೋರ್ಟ್ ಈಗಾಗಲೇ ಬೊಮ್ಮಾಯಿ ಪ್ರಕರಣದಲ್ಲಿ 1994ರಲ್ಲಿ ಹೇಳಿದಂತೆ ಹಾಗೂ 1996ರಲ್ಲಿ ಮೊದಲಿಯಾರ್ ಐಡಲ್ ಕೇಸ್‍ನಲ್ಲಿ ಸೆಕ್ಷನ್ 14ರ ಅನುಚ್ಚೇದ -1956ರ ಪ್ರಕಾರ ನಾಗರಿಕ ಹಕ್ಕು, ಶಿಕ್ಷಣ ಹಕ್ಕು, ಸಾಂಸ್ಕೃತಿಕ ಹಕ್ಕು, ಆರ್ಥಿಕ ಹಕ್ಕು ಹೆಣ್ಣು ಮಕ್ಕಳಿಗೂ ಸಮಾನವಾಗಿ ಸಲ್ಲಬೇಕಾಗಿದೆ. ಆಗ ಮಾತ್ರ ದೇಶದ ಅಭಿವೃದ್ಧಿ ಸಾಧ್ಯ ಎಂದಿದೆ. ಇಂತಹ ತೀರ್ಪುಗಳು ಕಾರ್ಯಾಂಗ ಮತ್ತು ಶಾಸಕಾಂಗದಲ್ಲಿ ಅನುಷ್ಠಾನಗೊಳ್ಳಬೇಕು. ಇಲ್ಲದಿದ್ದರೆ ದೇಶದ ಪ್ರಗತಿ ಕುಂಠಿತಗೊಳ್ಳುತ್ತದೆ ಎಂದು ವಿ.ಗೋಪಾಲಗೌಡ ಅವರು ಎಚ್ಚರಿಕೆ ನೀಡಿದರು.
ರಾಜಕೀಯ ಧುರೀಣರು, ಎಲ್ಲಾ ರಾಷ್ಟ್ರ, ರಾಜಕೀಯ ಪಕ್ಷಗಳು, ಪ್ರಾದೇಶಿಕ ಪಕ್ಷಗಳು ಅತಿ ಹಿಂದುಳಿದ ವರ್ಗದವರಿಗೆ ಬೆಂಬಲ ನೀಡಿ, ಅವರಿಗೆ ನ್ಯಾಯ ದೊರಕಿಸಿಕೊಡಬೇಕು. ಸುಪ್ರೀಂ ಕೋರ್ಟ್‍ನಲ್ಲಿ ಈಗಾಗಲೇ 2009ರಲ್ಲಿ ಪ್ರಸ್ತಾಪಿಸಿದಂತೆ ಹೆಣ್ಣು ಮಕ್ಕಳು ಅಬಲರು. ಅವರನ್ನು ಸಬಲೀಕರಣಗೊಳಿಸುವ ಅವಶ್ಯವಿದೆ. ಯಾವುದೇ ಮತ ಅಥವಾ ಜಾತಿಯ ಜನರಾಗಲಿ, ಹಿಂದುಳಿದ ವರ್ಗದವರಾಗಲಿ, ಅವರಿಗೆ ಸಲ್ಲಬೇಕಾದ ಹಕ್ಕುಗಳನ್ನು ಕಲ್ಪಿಸುವುದು ಅವಶ್ಯ ಎಂದು ತಿಳಿಸಿದರು.
ಸೌಲಭ್ಯ ಮತ್ತು ಸಮಾಜದ ಸಂಪತ್ತುಗಳು ಸಮಾನವಾಗಿ ದಕ್ಕುವಂತೆ ನೀತಿಗಳನ್ನು ರೂಪಿಸಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಅನುಷ್ಠಾನಕ್ಕೆ ತಂದು ಪ್ರಾಮಾಣಿಕವಾಗಿ ಅರ್ಹರಿಗೆ ತಲುಪಿಸುವಂತೆ ಮಾಡಿದಾಗ ಮಾತ್ರ ದೇಶದ ಪ್ರಗತಿ ಮತ್ತು ಅಭಿವೃದ್ಧಿ ಸಾಧ್ಯ ಎಂದರು.
ರಾಜ್ಯದ ಅತಿ ಹಿಂದುಳಿದ ವರ್ಗಗಳ ಜಾಗೃತಿ ವೇದಿಕೆ ಗೌರವ ಸಲಹೆಗಾರ ಸಿ.ಎಸ್. ದ್ವಾರಕಾನಾಥ್ ಮಾತನಾಡಿ, ಧ್ವನಿಯಿಲ್ಲದ ಸಮುದಾಯಗಳಿಗೆ ಧ್ವನಿ ನೀಡಬೇಕಾಗಿದೆ. ಏಕೆಂದರೆ, ಈ ಸಮುದಾಯಗಳಿಗೆ ಯಾವುದೇ ಮಠ-ಮಾನ್ಯಗಳಿಲ್ಲ. ಹೀಗಾಗಿ ಅತಿ ಹಿಂದುಳಿದ ವರ್ಗಗಳ ಪರವಾಗಿ ನಿಲ್ಲಬೇಕಾಗಿದೆ ಎಂದರು.
ಅತಿ ಹಿಂದುಳಿದ ವರ್ಗಗಳ ಜಾಗೃತಿ ವೇದಿಕೆ ಅಧ್ಯಕ್ಷ ಎಂ.ಸಿ.ವೇಣುಗೋಪಾಲ್ ಮಾತನಾಡಿ, ಪ್ರವರ್ಗ-1ರಲ್ಲಿ 95 ಜಾತಿಗಳಿವೆ. ಪ್ರವರ್ಗ-2ಎನಲ್ಲಿ 102 ಜಾತಿಗಳಿವೆ. ಈ ಎರಡೂ ಸೇರಿ 197 ಜಾತಿಗಳಿವೆ. ಅತಿ ಹಿಂದುಳಿದ ವರ್ಗಗಳ ವೇದಿಕೆ ಎಂದು ಏಕೆ ಮಾಡಲಾಗಿದೆ ಎಂದರೆ ಯುಪಿ ಬಿಹಾರದಲ್ಲಿರುವ ಮೇಜರ್ ಸಮುದಾಯಗಳು ಹಿಂದುಳಿದ ವರ್ಗಗಳೇ ಆಗಿವೆ. ಇಲ್ಲೂ ಕೂಡ ಮೇಜರ್ ಸಮುದಾಯಗಳು ಹಿಂದುಳಿದ ವರ್ಗಗಳೇ ಆಗಿವೆ.
ಸಂವಿಧಾನವನ್ನು ಅರ್ಪಿಸಿಕೊಂಡು 72 ವರ್ಷವಾದರೂ ನಮಗೆ ಈವರೆಗೆ ಯಾವುದೇ ಸವಲತ್ತು ಸಿಕ್ಕಿಲ್ಲ, ರಾಜಕೀಯ ಪ್ರಾತಿನಿಧ್ಯ ಸಿಕ್ಕಿಲ್ಲ. ಇಂತಹ ಸಂದರ್ಭದಲ್ಲಿ ಧ್ವನಿ ಎತ್ತಲೇಬೇಕು. ಹೋರಾಟವನ್ನೂ ರೂಪಿಸಬೇಕಾದ ಅನಿವಾರ್ಯತೆ ಇದೆ ಎಂದರು.
ರಾಜ್ಯ ಅತಿ ಹಿಂದುಳಿದ ವರ್ಗಗಳ ಜಾಗೃತಿ ವೇದಿಕೆ ಅಧ್ಯಕ್ಷ ಎಂ.ಸಿ. ವೇಣುಗೋಪಾಲ, ಗೌರವ ಸಲಹೆಗಾರರಾದ ಸಿ.ಎಸ್. ದ್ವಾರಕಾನಾಥ್, ಪಿ.ಎನ್.ಶ್ರೀನಿವಾಸಾಚಾರಿ, ಪ್ರಧಾನ ಕಾರ್ಯದರ್ಶಿ ಎಂ.ನಾಗರಾಜು, ಖಜಾಂಚಿ ಮಂಜುನಾಥ್ ಮತ್ತು ಅತಿ ಹಿಂದುಳಿದ ವರ್ಗಕ್ಕೆ ಸೇರಿದ ಮಠಾೀಶರು ಮತ್ತಿತರರು ಉಪಸ್ಥಿತರಿದ್ದರು.