ಬೆಂಗಳೂರು: ನಮ್ಮದು ಕಲ್ಯಾಣ ರಾಜ್ಯ ಆಳ್ವಿಕೆಯೇ ಹೊರತು, ಈಸ್ಟ್ ಇಂಡಿಯಾ ಕಂಪನಿ ಆಳ್ವಿಕೆಯಲ್ಲ, ಇಲ್ಲಿ ಸಂವಿಧಾನಬದ್ಧವಾಗಿಯೇ ಎಲ್ಲ ನಡೆಯಬೇಕು ಎಂದು ಕರ್ನಾಟಕ ಹೈಕೋರ್ಟ್ ನ್ಯಾಯಪೀಠವು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ(ಬಿಡಿಎ)ಕ್ಕೆ ಎಚ್ಚರಿಕೆ ನೀಡಿದೆ.
ಬಿಡಿಎ ಆದೇಶ ಪ್ರಶ್ನಿಸಿ ಬಿ.ವಿ. ಓಂಪ್ರಕಾಶ್ ಎಂಬುವರು ಸಲ್ಲಿಸಿದ್ದ ರಿಟ್ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಅವರಿದ್ದ ಏಕಸದಸ್ಯ ಪೀಠ ಅರ್ಜಿದಾರರ ಮನವಿಯನ್ನು ಪುರಸ್ಕರಿಸಿದೆ.
ಇದನ್ನು ಓದಿ: ಬಿಡಿಎ ಬಹುಕೋಟಿ ರೂಪಾಯಿ ಹಗರಣ: ಪ್ರಕರಣ ದಾಖಲು
ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು ಸಾರ್ವಜನಿಕರಿಗೆ ಸೇರಿದ ನಿವೇಶನವನ್ನು ಸಿಎ ನಿವೇಶನವೆಂದು ಘೋಷಿಸಿ ಹೊರಡಿಸಿದ್ದ ಆದೇಶವನ್ನು ಹೈಕೋರ್ಟ್ ನ್ಯಾಯಪೀಠ ರದ್ದುಪಡಿಸಿದೆ. ದುಬಾರಿ ದಂಡ ವಿಧಿಸಲು ಇದು ಸೂಕ್ತ ಪ್ರಕರಣವಾಗಿದೆಯಾದರೂ, ಬಿಡಿಎ ವಕೀಲರ ಮನವಿ ಹಿನ್ನೆಲೆಯಲ್ಲಿ ದಂಡ ವಿಧಿಸುವ ನಿರ್ಧಾರದಿಂದ ನ್ಯಾಯಾಲಯ ಹಿಂದೆ ಸರಿದಿದೆ ಎಂದೂ ಸಹ ಎಚ್ಚರಿಕೆ ನೀಡಿದೆ.
ಹೈಕೋರ್ಟ್ ನ್ಯಾಯಪೀಠವು, ‘ಸಂವಿಧಾನದ 300ಎ ವಿಧಿಯಡಿ ಆಸ್ತಿಯ ಹಕ್ಕುಗಳನ್ನು ಖಾತರಿಪಡಿಸಲಾಗಿದೆ. ಹೀಗಾಗಿ, ಲೇಔಟ್ ಯೋಜನೆಯ ಅಧಿಕೃತತೆಯ ಬಗ್ಗೆ ಯಾವುದೇ ವಿವಾದ ಇಲ್ಲ. ಸೊಸೈಟಿಯಿಂದ ಅಧಿಕಾರಿಗಳು ಸೂಕ್ತ ಮಾಹಿತಿ ಪಡೆದುಕೊಂಡಿದ್ದರೆ, ಅರ್ಜಿದಾರರನ್ನು ಈ ಸ್ಥಿತಿಗೆ ದೂಡುತ್ತಿರಲಿಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿದೆ.
ಇದನ್ನು ಓದಿ: ಪ್ರಧಾನಿ ಬಂದರೆ ಮಾತ್ರ ರಸ್ತೆ ಸರಿ ಮಾಡ್ತೀರಾ? ಬಿಡಿಎಗೆ ಹೈಕೋರ್ಟ್ ತರಾಟೆ
ಬಿಡಿಎ ಕಾಯ್ದೆ-1976 ಜಾರಿಗೆ ಬರುವ ಮೊದಲೇ ಅಭಿವೃದ್ಧಿಪಡಿಸಲಾದ ಲೇಔಟ್‌ನಲ್ಲಿರುವ ಅರ್ಜಿದಾರರ ನಿವೇಶಗಳನ್ನು ಸಿಎ ನಿವೇಶನ ಎಂದು 2013ರ ಜೂನ್ 20ರಂದು ಬಿಡಿಎ ಆಯುಕ್ತರು ಆದೇಶಿಸಿದ್ದಾರೆ. ಇದನ್ನು ಒಪ್ಪಲಾಗದು ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ.
ಪ್ರಕರಣದ ಹಿನ್ನೆಲೆ
ಶ್ರೀ ರಾಧಾಕೃಷ್ಣ ಹೌಸ್ ಬಿಲ್ಡಿಂಗ್ ಕೋ-ಆಪರೇಟಿವ್ ಸೊಸೈಟಿ ಲಿಮಿಟೆಡ್ ಖಾಸಗಿ ಲೇಔಟ್ ಅಭಿವೃದ್ಧಿಪಡಿಸಿತ್ತು. ಸೊಸೈಟಿಯು 1985ರ ಜೂನ್ 7ರಂದು ಓಂಪ್ರಕಾಶ್ ಅವರಿಗೆ 2 ನಿವೇಶನಗಳನ್ನು ಕ್ರಯ ಮಾಡಿಕೊಟ್ಟಿದೆ. ಈ ಕ್ರಯ ಪತ್ರದಲ್ಲಿ ಕೆಲ ದೋಷಗಳು ಕಂಡುಬಂದ ಹಿನ್ನೆಲೆಯಲ್ಲಿ 1997ರ ಮಾರ್ಚ್ 29ರಂದು ಮತ್ತೊಂದು ಕ್ರಯಪತ್ರ ಮಾಡಿಕೊಡಲಾಗಿದೆ.
ಖಾಸಗಿ ಬಡಾವಣೆಯನ್ನು 1973ರ ಅ.24ರಂದೇ ಅಂದರೆ ಬಿಡಿಎ ಕಾಯ್ದೆ-1976 ಜಾರಿಗೆ ಬರುವ ಮೊದಲೇ ಕಟ್ಟಡ ನಿರ್ಮಾಣ ಕ್ಷೇತ್ರದ ತರಬೇತಿ ಮಂಡಳಿಯು (ಸಿಐಟಿಬಿ) ಒಪ್ಪಿಗೆ ನೀಡಿತ್ತು. ನಂತರದಲ್ಲಿ ಕಂದಾಯ ಅಧಿಕಾರಿಗಳು 1973ರ ಲೇಔಟ್ ಯೋಜನೆಯ ಅಧಿಕೃತತೆ ಆಕ್ಷೇಪಿಸಿ ಪ್ರಮಾಣಪತ್ರ ಸಲ್ಲಿಸಿದ್ದರು. ವಿಚಾರಣೆ ವೇಳೆ ಬಿಡಿಎ ವಕೀಲರು ಈ ಅಂಶವನ್ನು ನ್ಯಾಯಪೀಠದ ಗಮನಕ್ಕೆ ತಂದರು.
ಇಲ್ಲಿ ಕ್ಲಿಕ್ ಮಾಡಿ : ಜನಶಕ್ತಿ ಮೀಡಿಯಾ ವಾಟ್ಸ್‌ಪ್ ಗುಂಪು ಸೇರಲು ಈ ಲಿಂಕ್ ಕ್ಲಿಕ್ ಮಾಡಿ