ಬೆಂಗಳೂರು: ಸಂವಿಧಾನ ತಿದ್ದುಪಡಿ ವಿಚಾರವಾಗಿ ಹಾಸನದಲ್ಲಿ ವಿವಾದಾತ್ಮಕ ಹೇಳಿಕೆ ನೀಡಿದ್ದ ಪ್ರೊ.ದೊಡ್ಡರಂಗೇಗೌಡ ಸೋಮವಾರ ಸ್ಪಷ್ಟೀಕರಣ ನೀಡಿದ್ದಾರೆ.
ತಮ್ಮ ಹೇಳಿಕೆಯು ದಲಿತರ ವಿರುದ್ಧವಾದದ್ದಲ್ಲ; ಉಳ್ಳವರ ವಿರುದ್ಧವಾದದ್ದು. ಬಡವರ ಪರವಾದದ್ದು. ಇದರಿಂದ ಯಾರಿಗಾದರೂ ನೋವಾಗಿದ್ದರೆ ಕ್ಷಮೆ ಇರಲಿ ಎಂದು ಸ್ಪಷ್ಟೀಕರಣ ಪತ್ರದಲ್ಲಿ ತಿಳಿಸಿದ್ದಾರೆ.
‘ನಮ್ಮದು ಬಹುಮುಖೀ ರಾಷ್ಟ್ರವಾದರೂ ಏಕರೂಪದ ಶಿಕ್ಷಣ ಇಲ್ಲಿಲ್ಲ. ಈಗ ದೇಶದಲ್ಲಿ ಏಕರೂಪ ಶಿಕ್ಷಣ ಅನಿವಾರ್ಯ ಅನ್ನಿಸುತ್ತಿದೆ. ಬಡವರು ಬಡವರಾಗಿಯೇ ಉಳಿಯುತ್ತಿದ್ದಾರೆ. ಬಲ್ಲಿದರು ಹೆಚ್ಚಿನ ಲಾಭ ಗಳಿಸುತ್ತಿದ್ದಾರೆ. ಎಲ್ಲರಿಗೂ ಒಂದೇ ರೀತಿ ಶಿಕ್ಷಣ ದೊರೆಯುವಂತಾಗಬೇಕು. ಆಗ ಮಾತ್ರ ಸಮಾನತೆ ಸಾಧ್ಯ. ಅನುಭವ ಮಂಟಪದ ಮಾದರಿಯಲ್ಲಿ ಎಲ್ಲರಿಗೂ (ಹಿಂದುಳಿದವರಿಗೆ) ಹೆಚ್ಚಿನ ಅವಕಾಶ ಸಿಗುವಂತಾಗಬೇಕು. ಹಿಂದುಳಿದ ವರ್ಗಗಳಿಗೆ ಅನ್ಯಾಯವಾಗದಂತೆ ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ ಏಕರೂಪ ಶಿಕ್ಷಣ ಜಾರಿಗೆ ತರುವ ನಿಟ್ಟಿನಲ್ಲಿ ದೇಶದ ಸಂವಿಧಾನದಲ್ಲಿ ಮಾರ್ಪಾಟು ಮಾಡುವುದು ಸೂಕ್ತವಾದೀತು’ ಎಂದಿದ್ದಾಗಿ ಅವರು ಸ್ಪಷ್ಟೀಕರಣದಲ್ಲಿ ತಿಳಿಸಿದ್ದಾರೆ.
ಜನಶಕ್ತಿ ಮೀಡಿಯಾ ವಾಟ್ಸಪ್ ಸೇರಿಕೊಳ್ಳಲು ಈ ಲಿಂಕ್ ಕ್ಲಿಕ್ ಮಾಡಿ
ವಿವಾದವೇನು?: ಫೆ 20 ರಂದು ಹಾಸನ ಜಿಲ್ಲಾ 19ನೇ ಕನ್ನಡ ಸಾಹಿತ್ಯ ಸಮ್ಮೇಳನದ ಉದ್ಘಾಟನಾ ಸಮಾರಂಭದಲ್ಲಿ ದೊಡ್ಡರಂಗೇಗೌಡ ಮಾತನಾಡುತ್ತಾ, ” ಈ ದೇಶ, ಹೊಸ ಕಾಲಕ್ಕೆ ತಕ್ಕಂತೆ ಸಂವಿಧಾನವನ್ನು ಬರೆಯುವ ಪ್ರಯತ್ನ ಮಾಡುವುದಾದರೆ, ಇದಕ್ಕಿಂತ ದೊಡ್ಡ ಕೆಲಸ ಮತ್ತೊಂದಿಲ್ಲ. ಇದರಿಂದ ಸರ್ವರಿಗೆ ಸಮಪಾಲು, ಸಮಬಾಳು ಸಾಧ್ಯ. ಪ್ರಧಾನಿ ನರೇಂದ್ರ ಮೋದಿ ಈ ಪ್ರಯತ್ನ ಮಾಡಬೇಕು’ ಎಂದು ಮನವಿ ಮಾಡಿದ್ದರು. ಇವರ ಈ ಮಾತಿಗೆ ರಾಜ್ಯವ್ಯಾಪಿ ಜನಪರ ಸಂಘಟನೆಗಳು, ಸಾಹಿತಿಗಳು, ಸಂವಿಧಾನ ತಜ್ಞರು, ವಕೀಲರು ಆಕ್ಷೇಪವನ್ನು ವ್ಯಕ್ತಪಡಿಸಿ ಬಹಿರಂಗ ಕ್ಷಮೆಯಾಚಿಸುವಂತೆ ಆಗ್ರಹಿಸಿದ್ದರು.
ಇದನ್ನೂ ಓದಿ : ವಿವಾದಿತ ಹೇಳಿಕೆಗೆ ಕ್ಷಮೆಯಾಚಿಸಿದ ಸಾಹಿತಿ ದೊಡ್ಡರಂಗೇಗೌಡ
ದೊಡ್ಡರಂಗೇಗೌಡ 86 ಕನ್ನಡ ಸಾಹಿತ್ಯ ಸಮ್ಮೇಳನದ ನಿಯೋಜಿತ ಅಧ್ಯಕ್ಷರಾಗುತ್ತಿದ್ದಂತೆ ಒಂದರ ಹಿಂದೆ ಒಂದರಂತೆ ವಿವಾದಾತ್ಮಕ ಹೇಳಿಕೆ ನೀಡುತ್ತಿದ್ದಾರೆ. ಮೊದಲಿಗೆ ಹಿಂದಿ ಹೇರಿಕೆ ತಪ್ಪಲ್ಲ, ಅದು ರಾಷ್ಟ್ರೀಯ ಭಾಷೆ ಎಲ್ಲರೂ ಅದನ್ನು ಕಲಿಯಬೇಕು ಎಂದು ಹಿಂದಿ ಹೇರಿಕೆಯನ್ನು ಸಮರ್ಥಿಸಿಕೊಂಡಿದ್ದರು, ವಿರೋಧ ವ್ಯಕ್ತವಾದ ಹಿನ್ನಲೆಯಲ್ಲಿ ಆಗ ಅವರು ಕ್ಷಮೆ ಕೋರಿದ್ದರು. ಯಾರನ್ನೋ ಓಲೈಸಲು ಈ ರೀತಿಯ ವಿವಾದಾತ್ಮಕ ಹೇಳಿಕೆಯನ್ನು ನೀಡುವುದು ಸರಿಯಲ್ಲ ಎಂದು ಸಾಹಿತ್ಯ ವಲಯದಲ್ಲಿ ಚರ್ಚೆಯಾಗುತ್ತಿದೆ.