ನವದೆಹಲಿ: ಭೂಮಿಯ ಮೇಲ್ಮೈ ಭಾಗವು ಸುಮಾರು ಶೇ. 70 ರಷ್ಟು ಸಾಗರದಿಂದ ಆವರಿಸಿಕೊಂಡಿದೆ. ಅವು ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ಮಾನವರ ಜೀವನದ ಮೇಲೆ ಒಂದಿಲ್ಲೊಂದು ರೀತಿಯಲ್ಲಿ ಪರಿಣಾಮ ಬೀರುತ್ತವೆ. ಬ್ರಹ್ಮಾಂಡದ ರಹಸ್ಯವನ್ನು ತಿಳಿಯಲು “ಗಗನಯಾನ’, ಆಳ ಸಮುದ್ರದ ನಿಗೂಢ ಜಗತ್ತನ್ನು ಆವಿಷ್ಕರಿಸಲು “ಸಮುದ್ರಯಾನ’ ಅವಶ್ಯಕವಾಗಿದೆ.
ಭಾರತದ ವಿಜ್ಞಾನಿಗಳು ಮಹತ್ವದ ಸಾಹಕ್ಕೆ ಮುಂದಾಗುತ್ತಿದ್ದು, ಸದ್ಯದಲ್ಲೇ ಆರಂಭವಾಗಲಿರುವ “ಸಮುದ್ರಯಾನ’ ಯೋಜನೆಯ ಮೂಲಕ ನುರಿತ ತಜ್ಞರ ತಂಡವೊಂದು ಆಳ ಸಮುದ್ರಕ್ಕೆ ಇಳಿಯಲಿದೆ. ಮಾನವಸಹಿತ ಜಲಾಂತರ್ಗಾಮಿ ನೌಕೆ “ಮತ್ಸ್ಯ 6000’ದ ಮೂಲಕ ಮೂವರು ತಜ್ಞರು ಈ ಯೋಜನೆಯಲ್ಲಿ ಭಾಗಿಯಾಗಿದ್ದು, ಇದರಿಂದ ಹಲವು ಸಂಶೋಧನೆಗಳನ್ನು ಕೈಗೊಳ್ಳಲಿದ್ದಾರೆ.
ಸಾಗರದಾಳದಲ್ಲಿರುವ ಅನೇಕ ವಿಷಯಗಳು ಮಾನವನ ಕಲ್ಪನೆಗೆ ಇನ್ನೂ ನಿಲುಕದ ವಿಚಾರ. ಅದನ್ನು ಭೇದಿಸುವ ಮೂಲಕ ಹೊಸ ವಿಚಾರಗಳನ್ನು ಕಂಡುಕೊಳ್ಳಲು ಸಾಧ್ಯವಿದೆ. ಈ ಮೂಲಕ ಕಡಲಾಳದಲ್ಲಿನ ಪ್ರಮುಖ ಸಂಪನ್ಮೂಲಗಳ ಬಗ್ಗೆ ಅನ್ವೇಷಿಸಲು ಭಾರತ ಕಳೆದ ವರ್ಷ ಅಕ್ಟೋಬರ್‌ನಲ್ಲಿ ಪ್ರತಿಷ್ಠಿತ ಸಮುದ್ರಯಾನ ಯೋಜನೆ ಪ್ರಾರಂಭಿಸಿದೆ. ಸಾಗರಗಳ ಆಳದಲ್ಲಿ ಅಧ್ಯಯನ ನಡೆಸಲು ಮಾನವಸಹಿತ ಸಬ್ಮರ್ಸಿಬಲ್ ವಾಹನ ಸಮುದ್ರದಾಳಕ್ಕೆ ಇಳಿಯಲಿದೆ.
ಸ್ವಯಂ ಚಾಲಿತ ಸಬ್ಮರ್ಸಿಬಲ್ ಯಂತ್ರವನ್ನು ಅಭಿವೃದ್ಧಿಪಡಿಸುವುದು ಸಮುದ್ರಯಾನ ಯೋಜನೆಯ ಪ್ರಮುಖ ಉದ್ದೇಶ. ಆ ಗುರಿಯನ್ನು ತಲುಪುವ ಪ್ರಯತ್ನದ ಭಾಗವಾಗಿ ಭಾರತವು ಈಗಾಗಲೇ ದೇಶೀಯವಾಗಿ ‘ಮತ್ಸ್ಯ 6000’ ವಾಹನ ಅಭಿವೃದ್ಧಿಪಡಿಸಿದೆ. ಇದು ಆಳವಾದ ಸಾಗರದಲ್ಲಿ 12 ಗಂಟೆಗಳ ಕಾಲ ಕಾರ್ಯನಿರ್ವಹಿಸಬಲ್ಲದು. ತುರ್ತು ಸಂದರ್ಭಗಳಲ್ಲಿ ಅಗತ್ಯವಿದ್ದರೆ ಇದು 96 ಗಂಟೆಗಳ ಕಾಲ ಸಮುದ್ರ ಗರ್ಭದಲ್ಲಿ ಉಳಿಯಬಹುದು. ಇಸ್ರೊ ಮತ್ತು ಡಿಆರ್ಡಿಓ ನಂಥ ಪ್ರಮುಖ ಸಂಸ್ಥೆಗಳು ಈ ಯಂತ್ರವನ್ನು ಮತ್ತಷ್ಟು ಸುಧಾರಣೆ ಮಾಡಲಿವೆ.
ಸಮುದ್ರಯಾನದಲ್ಲಿ ಈ ಯೋಜನೆಯು ಆಳ ಸಮುದ್ರ ಪ್ರದೇಶದಲ್ಲಿ ಹಿಂದೆಂದೂ ಅನ್ವೇಷಿಸದ ಪ್ರದೇಶಗಳನ್ನು ನೇರವಾಗಿ ವೀಕ್ಷಿಸುತ್ತವೆ ಮತ್ತು ಅಲ್ಲಿನ ಪರಿಸ್ಥಿತಿಗಳನ್ನು ಕೂಲಂಕಷವಾಗಿ ಅಧ್ಯಯನ ಮಾಡಲಿವೆ. ‘ಮತ್ಸ್ಯ 6000′ ನಲ್ಲಿ ಅಳವಡಿಸಲಾಗಿರುವ ಹಲವು ಅತ್ಯಾಧುನಿಕ ಸಂವೇದಕಗಳು ಮತ್ತು ವೈಜ್ಞಾನಿಕ ಉಪಕರಣಗಳು ಈ ಕಾರ್ಯದಲ್ಲಿ ಅವರಿಗೆ ಸಹಾಯ ಮಾಡಲಿವೆ.
ಈ ಯೋಜನೆಯ ಉದ್ದೇಶವು ಪ್ರಮುಖವಾಗಿ ಸಮುದ್ರದಾಳದ ಜೀವಿಗಳು, ಜೀವವೈವಿಧ್ಯದ ಬಗ್ಗೆ ತಿಳಿಯುವುದು. ಆಳ ಸಮುದ್ರ ಗಣಿಗಾರಿಕೆ, ಖನಿಜಾಂಶಗಳು ಸೇರಿದಂತೆ ಹಲವು ಸಂಪನ್ಮೂಲಗಳ ಶೋಧನೆ. ಸಮುದ್ರದಡಿಯಲ್ಲಿ ಕಳೆದುಹೋದ ವಸ್ತುಗಳ ಪತ್ತೆ. ನೀರಿನಡಿಯಲ್ಲಿರುವ ಸಲಕರಣೆಗಳ ರಿಪೇರಿ ಮತ್ತು ನಿರ್ವಹಣೆ. ಆಳ-ಸಮುದ್ರ ತಂತ್ರಜ್ಞಾನ ಅಭಿವೃದ್ಧಿಗೆ ಉತ್ತೇಜನಕ್ಕೆ ಅದ್ಯತೆಯಾಗಿದೆ. ಇಲ್ಲಿಯವರೆ ಸುಮಾರು 5 ದೇಶಗಳು ಮಾನವಸಹಿತ ಸಮುದ್ರಯಾನ ಯೋಜನೆಯನ್ನು ಕೈಗೊಂಡಿದೆ.
ಭಾರತವು 7,517 ಕಿಮೀ ಉದ್ದದ ಕರಾವಳಿಯನ್ನು ಹೊಂದಿದೆ. 9 ಕರಾವಳಿ ರಾಜ್ಯಗಳು ಮತ್ತು 1,382 ದ್ವೀಪಗಳು ದೇಶದಲ್ಲಿವೆ. ಕಡಲು ಆರ್ಥಿಕತೆಯನ್ನು ದೇಶದ ಅಭಿವೃದ್ಧಿಗೆ ವೃದ್ದಿಸಿಕೊಳ್ಳಲು ಕೇಂದ್ರ ಸರ್ಕಾರ ಅನುಮೋದಿಸಿರುವ ಯೋಜನೆಯಗಳಲ್ಲಿ ಒಂದಾಗಿದೆ. ಹೀಗಾಗಿ ಸಮುದ್ರತಳದಲ್ಲಿನ ಸಂಪನ್ಮೂಲಗಳ ಪರಿಶೋಧನೆಯು ಅನಿವಾರ್ಯವಾಗಿದೆ. ಅದಕ್ಕಾಗಿಯೇ ಕೇಂದ್ರವು ರೂ.4,077 ಕೋಟಿ ವೆಚ್ಚದ ಡೀಪ್ ಓಶಿಯನ್ ಮಿಷನ್’ ಅನ್ನು ಅನುಮೋದಿಸಿದೆ. ಇದರ ಒಂದು ಭಾಗವೇ ಸಮುದ್ರಯಾನ ಯೋಜನೆ.