ಸಮುದಾಯದ ಸಾಮರಸ್ಯಕ್ಕೆ ಕಾಳಜಿ ಇಲ್ಲದವರೇ ಪ್ರತಿಭಟಿಸುವವರು: ಸಮಾನ ಮನಸ್ಕರು

ಮೈಸೂರು: ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ತಮ್ಮ ಸಿಟ್ಟನ್ನು ಅಭಿಪ್ರಾಯವನ್ನು, ವಿಚಾರಗಳನ್ನು ಬಿಂಬಿಸಲು ಯಾರೂ ಶಾಂತ ರೀತಿಯಲ್ಲಿ ಪ್ರತಿಭಟನೆ ಮಾಡಬಹುದು. ಮೆರವಣಿಗೆ ತೆಗೆಯಬಹುದು. ಆ ಹಕ್ಕನ್ನು ನಮ್ಮ ಸಂವಿಧಾನ, ಡಾ. ಬಾಬಾ ಸಾಹೇಬ್‌ ಅಂಬೇಡ್ಕರ್‌ ಮುಂದಾಳುತನದಲ್ಲಿ ಸಂವಿಧಾನ ನೀಡಿದೆ. ಆದರೆ, ಪ್ರತಿಭಟನೆ ನಡೆಸಿದ ಶಕ್ತಿಗಳಿಗೆ ಸಮಾಜದ ಪ್ರಗತಿಯ ಬಗೆಗಾಗಲಿ, ಈ ಸಮಾಜದಲ್ಲಿ ಬದುಕುತ್ತಿರುವ ನೂರಾರು ಸಮುದಾಯಗಳ ಸಾಮರಸ್ಯದ ಬಗೆಗಾಗಲಿ ಕಾಳಜಿ ಇಲ್ಲದಿರುವುದು ನಿಚ್ಚಳವಾಗಿ ಕಾಣಿಸುತ್ತಿದೆ. ಇದರಾಚೆಗೆ ರಾಜಕೀಯ ಅಜೆಂಡಾ ಇಟ್ಟುಕೊಂಡಿರುವುದೂ ಗೋಚರವಾಗುತ್ತದೆ ಎಂದು ಸಮಾನ ಮನಸ್ಕರು ತಮ್ಮ ನಿಲುವನ್ನು ವ್ಯಕ್ತಪಡಿಸಿದ್ದಾರೆ.

ಮೈಸೂರಿನ ರಾಮಕೃಷ್ಣ ನಗರದ ರಮಾ ಗೋವಿಂದ ರಂಗಮಂದಿರದಲ್ಲಿ ನವೆಂಬರ್‌ 15 ರಂದು ʻಸಿದ್ದರಾಮಯ್ಯ-75ʼ ಎಂಬ ಕೃತಿ ಬಿಡುಗಡೆ ಕಾರ್ಯಕ್ರಮದಲ್ಲಿ ಸಮಾಜವಾದಿ ಚಿಂತಕ ಮತ್ತು ಹೋರಾಟಗಾರ ಪ.ಮಲ್ಲೇಶ್‌ ಆಡಿದ ಒಂದು ಮಾತಿನ ವಿರುದ್ಧ ಬ್ರಾಹ್ಮಣ ಸಮುದಾಯದ ಕೆಲ ಸಂಘಟನೆಗಳನ್ನು ಪ್ರತಿಭಟನೆ ನಡೆಸಿದ್ದು, ʻಸಮರಕ್ಕೂ ನಾವು ಸಿದ್ದʼ ಎಂಬ ಯುದ್ಧದ ಮಾತುಗಳನ್ನು ಆಡಿದ್ದಾರೆ. ಇದು ಆ ಸಮುದಾಯಕ್ಕಾಗಲೀ, ಸಮಗ್ರ ಸಮಾಜಕ್ಕಾಗಲೀ, ರಾಷ್ಟ್ರದ ಒಳಿತಿಗಾಗಲೀ ಶೋಭೆ ತರುವುದಿಲ್ಲ. ತಳ ಸಮುದಾಯಗಳು ಮೈಕೊಡವಿ ಎದ್ದುನಿಂತರೆ ಏನಾಗಬಹುದು? ಅಂಥದನ್ನು ಯಾರೂ ಬಯಸಬಾರದು. ಅಂಥ ಪ್ರಚೋದನೆಯೂ ಸಮಾಜಕ್ಕೆ ಹಿತವಾಗಲಾರದು ಎಂದು ಸಮಾನ ಮನಸ್ಕರು ತಿಳಿಸಿದ್ದಾರೆ.

ಸಮ ಸಮಾಜದ ಕನಸನ್ನು ಹೊತ್ತಿರುವ ಪ.ಮಲ್ಲೇಶ್‌ ರಾಜ್ಯದ ಜನತೆಗೆ ಅಪರಿಚತರೇನೂ ಅಲ್ಲ. ಅವರು ಸಿದ್ದರಾಮಯ್ಯ ಅವರ ಬಗೆಗಿನ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ತಮ್ಮ ಸಾಮಾಜಿಕ ಕಳಕಳಿಯನ್ನು ಇಟ್ಟುಕೊಂಡೇ ಮಾತನಾಡಿದರು. ಉದ್ವಿಗ್ನತೆಯಲ್ಲಿ ಮಾತನಾಡುತ್ತಿದ್ದ ಅವರು, ʻಬ್ರಾಹ್ಮಣರನ್ನು ಮತ್ತು ಬ್ರಾಹ್ಮಣ್ಯವನ್ನು ನಂಬಬೇಡಿʼ ಎಂದೂ ಹೇಳಿದರು. ನಂತರ ತಮ್ಮ ಈ ಒಂದು ವಾಕ್ಯಕ್ಕಾಗಿ ಅವರು ವಿಷಾದವನ್ನೂ ಸೂಚಿಸಿದರು. ಇದನ್ನು ಪರಿಗಣನೆಗೆ ತೆಗೆದುಕೊಳ್ಳದ ಕೆಲವರು ಬ್ರಾಹ್ಮಣ ಸಮುದಾಯವನ್ನು ಎತ್ತಿಕಟ್ಟಿ ಪ್ರತಿಭಟನೆಗೆ ಮುಂದಾಗಿದ್ದಾರೆ.

ಸಾವಿರಾರು ವರ್ಷಗಳಿಂದ ನೋವು, ಅಪಮಾನ ಅನುಭವಿಸುತ್ತ, ಚಕಾರ ಎತ್ತದೆ ವರ್ಣವ್ಯವಸ್ಥೆಯನ್ನು ಒಪ್ಪಿಕೊಂಡು ಬಂದಿರುವ ತಳ ಸಮುದಾಯಗಳು ಈಗ, ಪ್ರಜಾಪ್ರಭುತ್ವದ ಅಡಿಯಲ್ಲಿ ಅರಿವನ್ನು ಪಡೆದುಕೊಳ್ಳುತ್ತಿವೆ. ಅರಿವು ಜಾಗೃತವಾದಂತೆಲ್ಲ ತಮ್ಮನ್ನು ಈ ಸ್ಥಿತಿಗೆ ತಂದವರು ಯಾರು ಎಂಬುದು ಅವರಿಗೆ ತಿಳಿಯುತ್ತಿದೆ. ವರ್ಣ ವ್ಯವಸ್ಥೆ, ಜಾತಿ ವ್ಯವಸ್ಥೆಯಲ್ಲಿ ಮೇಲಿದ್ದ ಮತ್ತು ಈಗಲೂ ಇರುತ್ತಿರುವ ಸಮುದಾಯಗಳಿಗೆ ತಳ ಸಮುದಾಯಗಳ ನೋವಾಗಲಿ, ಕೋಪವಾಗಲೀ ಇನ್ನೂ ಅರ್ಥವಾಗದೇ ಉಳಿದಿರುವುದು ಬಹುದೊಡ್ಡ ದುರಂತ. ಮೇಲಿನ ಸಮುದಾಯಗಳಿಗೆ ಸಾವಿರಾರು ವರ್ಷಗಳಿಂದ ನೂರಾರು ಸಮುದಾಯಗಳನ್ನು ತುಳಿದಿರುವ ಮತ್ತು ಮಾನವ ಘನತೆಗೇ ಕುಂದು ತರುವಂತೆ ಈ ಸಮುದಾಯಗಳನ್ನು ನಡೆಸಿಕೊಂಡಿರುವ ಬಗ್ಗೆ ಪಶ್ಚಾತ್ತಾಪ ಇರಬೇಕಾಗಿತ್ತು. ಈ ಪಾಪವನ್ನು ತಲೆಯ ಮೇಲೆ ಹೊತ್ತಕೊಂಡಿರುವ ಅರಿವೂ ಇರಬೇಕಾಗಿತ್ತು. ತಮ್ಮನ್ನು ತಾವು ಬುದ್ದಿವಂತಿಕೆಯ, ಚಿಂತನೆಯ ತರ್ಕ ವಿಚಾರಗಳ ವಾರಸುದಾರರು ಎಂದು ನಂಬಿರುವ ಜಾತಿ ವ್ಯವಸ್ಥೆಯ ಮೇಲಿನ ಸಮುದಾಯಗಳು ಈ ಸೂಕ್ಷ್ಮವನ್ನು ತಿಳಿಯಲಾರದಷ್ಟು ಒರಟು ಮನಸ್ಸು ಬೆಳೆಸಿಕೊಂಡಿರುವುದು ನೆನೆದಾಗ ಈ ರಾಷ್ಟ್ರದಲ್ಲಿ ಸಮ ಸಮಾಜವನ್ನು ಕನಸುವವರ ದಾರಿ ಎಷ್ಟು ಭೀಕರ ಎಂಬುದು ತಿಳಿಯುತ್ತದೆ ಎಂದು ಉಲ್ಲೇಖಿಸಲಾಗಿದೆ.

ಇಲ್ಲಿ ಪ. ಮಲ್ಲೇಶ್‌ ಅವರಾಗಲಿ, ಅವರಾಡಿದ ಮಾತುಗಳಾಗಲೀ ಮುಖ್ಯವಾಗಬೇಕಾಗಿಲ್ಲ. ವರ್ಣವ್ಯವಸ್ಥೆಯನ್ನು ಒಪ್ಪಿಕೊಂಡ ಗಾಂಧೀಜಿಗೆ ಈ ಜಾತಿ ವ್ಯವಸ್ಥೆಯ ಘೋರ ತಿಳಿದಿತ್ತು. ಹಾಗಾಗಿಯೇ ಅವರು ಹರಿಜನ ಕಲ್ಯಾಣವನ್ನೇ ತಮ್ಮ ಬದುಕಿನ ಪರಮ ಆದರ್ಶ ಎಂದು ಪರಿಭಾವಿಸಿದ್ದರು. ಬಹುದೊಡ್ಡ ಸಮಾಜವಾದಿ ಚಿಂತಕರಾದ ಡಾ. ಲೋಹಿಯಾ ಅವರು ಆಡುತ್ತಿದ್ದ ಮಾತುಗಳೆಲ್ಲ ಈ ಬ್ರಾಹ್ಮಣ್ಯದ ವಿರುದ್ಧವೇ ಇದ್ದವು. ಪ್ರತಿಜಾತಿಯಲ್ಲಿಯೂ ಇರುವ ಬ್ರಾಹ್ಮಣ್ಯವನ್ನು ತೊಡೆದು ಹಾಕದೆ ಸಮಾಜದ ಉದ್ದಾರವಿಲ್ಲ ಎಂದು ಲೋಹಿಯಾ ಹೇಳುತ್ತಲೇ ಇದ್ದರು. ಬ್ರಾಹ್ಮಣ್ಯದ ಒಂದು ರೂಪಕವಾಗಿ ಒಂದು ಸಮುದಾಯ ಕಾಣಿಸಿದರೆ, ಸಹಜವಾಗಿಯೇ ಕೋಪ ಈ ಸಮಯದಾಯದ ಮೇಲಿರುತ್ತದೆ. ನೋವು ಅಪಮಾನಗಳನ್ನು ಸಹಿಸಿಕೊಂಡವರು ಸಿಡಿದು ಆಡುವ ಒಂದು ಮಾತನ್ನು ಸಹಿಸುವ ಉದಾರತೆಯನ್ನು ಮೇಲಿನ ಸಮುದಾಯಗಳು ತೋರಿಸಬೇಕಾಗುತ್ತದೆ. ಅಲ್ಲದೆ ವೈಚಾರಿಕ ಚಿಂತನೆಯನ್ನು ವೈಚಾರಿಕವಾಗಿಯೇ ಎದುರಿಸುವ ದಿಟ್ಟತನವನ್ನೂ ತೋರಿಸಬೇಕೆಂದು ಸಮಾನ ಮನಸ್ಕರು ಆಗ್ರಹಿಸಿದ್ದಾರೆ.

ವಿವೇಕ, ತಾಳ್ಮೆ, ಸಹನೆ, ಸಹಬಾಳ್ವೆ ಈ ಹೊತ್ತಿನ ನಡೆಯಾಗಬೇಕೆಂಬುದನ್ನು ನಾವೆಲ್ಲ ವಿನಯಪೂರ್ವಕವಾಗಿ ಹೇಳಬಯಸುತ್ತೇವೆ ಎಂದು ಸಮಾನ ಮನಸ್ಕರ ಪರವಾಗಿ ಜಿ.ಪಿ. ಬಸವರಾಜು, ಪ್ರಗತಿಪರ ಸಂಘಟನೆಗಳ ಒಕ್ಕೂಟ. ಜನಾರ್ಧನ್‌ ಹೆಚ್‌.(ಜನ್ನಿ), ಜನಮನ ಸಾಂಸ್ಕೃತಿಕ ಸಂಘಟನೆ, ಮೈಸೂರು. ಬಸವರಾಜ್‌ ಕೆ., ಎಸ್‌.ಬಿ. ಬಲರಾಂ, ಲ. ಜಗನ್ನಾಥ್‌, ಭಾರತ ಕಮ್ಯೂನಿಸ್ಟ್‌ ಪಕ್ಷ (ಮಾರ್ಕ್ಸ್‌ವಾದಿ)-ಸಿಪಿಐ(ಎಂ), ಹೊಸಕೋಟಿ ಬಸವರಾಜು, ಕರ್ನಾಟಕ ರಾಜ್ಯ ರೈತ ಸಂಘ, ಮೈಸೂರು ಜಿಲ್ಲೆ ಮೈಸೂರು. ಚೋರನಹಳ್ಳಿ ಶಿವಪ್ಪ, ಪಿ. ಸಾಂಬಯ್ಯ, ಕೆ.ವಿ. ದೇವೇಂದ್ರ, ದಲಿತ ಸಂಘರ್ಷ ಸಮಿತಿ(ದಸಂಸ), ಮೈಸೂರು. ಚಂದ್ರಶೇಖರ ಮೇಟಿ, ಎಐಯುಟಿಯುಸಿ. ಎಚ್‌.ಎಂ. ಕುಮಾರಸ್ವಾಮಿ, ಲೇಖಕ, ಅನುವಾದಕ. ಭದ್ರಪ್ಪ. ಶಿ ಹೆನ್ಲಿ,  ಬಿ.ಎನ್‌.ಶ್ರೀರಾಮ್‌, ಅಭಿರುಚಿ ಗಣೇಶ್‌, ಡಾ. ಹರೀಶ್‌ ಕುಮಾರ್‌, ಎಸ್‌.ಜಿ. ರಮೇಶ್‌, ಮತ್ತಿತರರು ಸಹಿ ಮಾಡಿದ್ದಾರೆ.

Donate Janashakthi Media

Leave a Reply

Your email address will not be published. Required fields are marked *