ಸಮುದಾಯ, ರಂಗಭೂಮಿಗಳೊಂದಿಗೆ ದಲಿತಕವಿ ಸಿದ್ಧಲಿಂಗಯ್ಯ ನಂಟು

ಗುಂಡಣ್ಣ ಚಿಕ್ಕಮಗಳೂರು

ಸಮುದಾಯದ ಸಾಂಸ್ಕೃತಿಕ ಶಿಬಿರಗಳು, ಎಲ್ಲಾ ಜಾಥಾಗಳು, ರಾಜ್ಯದಲ್ಲಿ ನಡೆದ ಕಾರ್ಮಿಕರ ಹೋರಾಟಗಳು, ರೈತರ ವಿಧಾನಸೌಧ ಚಲೋ ರಾಜ್ಯ ಮಟ್ಟದ ಜಾಥಾಗಳು, ಸಿದ್ಧಲಿಂಗಯ್ಯನವರು ಬರೆದ ಅನೇಕ ಪ್ರತಿಭಟನಾ ಹಾಡುಗಳನ್ನು ಬಿತ್ತರಿಸುವ ವೇದಿಕೆಗಳಾಗಿವೆ. ಹಾಡುಗಳು ಕೇವಲ ಮನರಂಜನೆಯ ಹಾಡುಗಳಲ್ಲ. ಹಾಡುವ ರಾಗಗಳ ವೈವಿಧ್ಯತೆಯಲ್ಲಿ ಮನರಂಜನೆ ಇದ್ದರೂ ಸಹ, ಸಾಂಸ್ಕೃತಿಕ ಚಟುವಟಿಕೆಗಳ ಮುಖಾಂತರ ಜನರನ್ನು ಹೋರಾಟಕ್ಕೆ ಅಣಿನೆರೆಸುವ ಸಮುದಾಯದ ಆಶಯಗಳಿಗೆ ಚಿಂತನೆಗಳಿಗೆ ರೂಪ ಕೊಟ್ಟ, ನಮ್ಮ ನಡುವೆಯೇ ಬದುಕಿದ್ದೂ ಸತ್ತಂತಾಗಿದ್ದ ಕಾರ್ಮಿಕರೈತರ ಶೋಷಣೆಯ ವಿವಿಧ ಮುಖಗಳನ್ನು ಅನಾವರಣಗೊಳಿಸುವ, ಅವರ ದಾರುಣ ಬದುಕಿನ ಕಥೆಯನ್ನು ಉಳ್ಳವರ ಹಾಗೂ ಮಧ್ಯಮ ವರ್ಗಗಳಿಗೆ ಪರಿಚಯಿಸುವ ಹಾಡುಗಳಾಗಿದ್ದವು.

ನಾಡಿನ ಅಪ್ರತಿಮ ಕವಿ. ದಲಿತ ಅಸ್ಮಿತೆಯ ಕವಿ ಡಾ. ಸಿದ್ಧಲಿಂಗಯ್ಯ ಅವರು 11.06.2021 ರಂದು ಸಾವಿರಾರು ಅಭಿಮಾನಿಗಳನ್ನು ನೂರಾರು ಸಂಘಟನೆಗಳನ್ನು ಸಹೃದಾಯಿಗಳನ್ನು ಅಗಲಿದ್ದಾರೆ. 38 ದಿನಗಳ ಕಾಲ, ಕೋವಿಡ್ ಕಾರಣದಿಂದ ಆಸ್ಪತ್ರೆ ಸೇರಿದ ಸಿದ್ಧಲಿಂಗಯ್ಯ ಅವರು. ಕೊನೆಗೆ ಕೋವಿಡ್‌ನಿಂದ ಗುಣಮುಖರಾದರೂ ಸಹ, ಎರಡನೇ ಬಾರಿಗೆ ಆದ ಹೃದಯಾಘಾತದಿಂದ ನಿಧನ ಹೊಂದಿದರು.

ಇದನ್ನು ಓದಿ: ಕವಿ ಡಾ. ಸಿದ್ದಲಿಂಗಯ್ಯ ನಿಧನ

ದಲಿತರ ಸ್ಥಿತಿಗತಿಗಳ ಕುರಿತು, ಅವರ ತಳಮಟ್ಟದ ಶೋಷಣೆಯ ಕುರಿತು, ಅಪಮಾನ, ಅನುಮಾನಗಳ ನಡುವೆಯೇ ಬಾಳುವೆ ನಡೆಸಿದ ಲಕ್ಷಾಂತರ ದಲಿತರ ಅಸ್ಮಿತೆಯೇ ಆಗಿ, ಅವರ ಬದುಕುಗಳ ಕುರಿತು ಬರೆದ ಸಿದ್ಧಲಿಂಗಯ್ಯ ಅವರ ಕವನಗಳು, ನವ್ಯೋತ್ತರ ಕನ್ನಡ ಕಾವ್ಯ ರಂಗವನ್ನು, ಮುಂದೆ ಬಂಡಾಯ ಸಾಹಿತ್ಯ ಸಂಘಟನೆಯನ್ನು ಹಾಗೂ ಯುವ ಪ್ರತಿಭಾವಂತ ಕವಿಗಳನ್ನು ಹೊಸ ದಿಕ್ಕಿನೆಡೆಗೆ ಕರೆದುಕೊಂಡು ಹೋಯಿತು. ಅದೇ ಸಮಯದಲ್ಲಿ, ಅಂದಿನ ನವ್ಯ ಮತ್ತು ನವ್ಯೋತ್ತರ ಕವಿಗಳ ಪ್ರತಿಷ್ಠಿತ ಚಿಂತನೆಗಳಿಗೆ ಪರ್ಯಾಯ ಚಿಂತನೆಗಳನ್ನು ನೀಡಿದರು. ಈ ಕುದಿಯುತ್ತಿದ್ದ ಅಸಮಾನತೆಯ ಪಾಕಗಳಿಗೆ, ಕೇವಲ ಧ್ವನಿ ಮಾತ್ರ ಧಿಕ್ಕಾರವಾಗದೆ, ಅಕ್ಷರ ರೂಪಗಳಲ್ಲೂ ಗಟ್ಟಿಯಾಗಿ ಪ್ರತಿಭಟನೆಯ ಮಜಲನ್ನು ಹುಟ್ಟು ಹಾಕಿದ ಕವಿ ಸಿದ್ಧಲಿಂಗಯ್ಯನವರು.

ಸಿದ್ಧಲಿಂಗಯ್ಯ ಒಬ್ಬ ದಲಿತ ಜಾತಿಯಲ್ಲಿ ಹುಟ್ಟಿದವರು ಎನ್ನುವ ಕಾರಣಕ್ಕೆ ಅವರು ದಲಿತ ಕವಿ ಎಂದು ಕರೆಸಿಕೊಳ್ಳಲಿಲ್ಲ. ಅದುವರೆವಿಗೂ ಯಾವ ಶ್ರೇಷ್ಠ ಕವಿಯೂ ಬರೆಯದ ಲಕ್ಷಾಂತರ ದಲಿತರ ಬದುಕನ್ನು, ನೈಜತೆಯನ್ನು ಅಕ್ಷರ ರೂಪಕಿಳಿಸಿ ಪ್ರತಿಭಟನೆಯ ದಾರಿ ತೋರಿದ ಕವಿಯಾದ್ದರಿಂದ ದಲಿತ ಕವಿ ಎನ್ನಿಸಿಕೊಂಡರು. ಅದು ಸಿದ್ಧಲಿಂಗಯ್ಯನವರಿಗೂ ಪ್ರೀತಿಯ ಮತ್ತು ಹೆಮ್ಮೆಯ ಸಂಕೇತವಾಯಿತು.

ಸಮುದಾಯದೊಂದಿಗೆ ದೀರ್ಘ ನಂಟು

ಸಮುದಾಯ ಸಂಘಟನೆ, ಒಂದು ರಂಗತಂಡದ ರೂಪದಲ್ಲಿ ಬೆಂಗಳೂರಿನಲ್ಲಿ ಪ್ರಾರಂಭವಾಗಿದ್ದು 1975 ರಲ್ಲಿ. ಬೆಂಗಳೂರು ವಿಶ್ವ ವಿದ್ಯಾಲಯದ ಅನೇಕ ಮೇಷ್ಟರುಗಳು, ವಿದ್ಯಾರ್ಥಿಗಳು ಸೇರಿ, ಸಾಮುದಾಯಿಕವಾಗಿ ಕಟ್ಟಿದ ಒಂದು ಪ್ರಗತಿಪರ ಚಿಂತನೆಗಳ ರಂಗತಂಡ ಸಮುದಾಯ. ಈ ಪ್ರತಿಷ್ಠಿತರ ಪಟ್ಟಿಯಲ್ಲಿ ಸಿದ್ಧಲಿಂಗಯ್ಯನವರದ್ದು ಕೂಡಾ ಒಂದು ಹೆಸರು. ಸಮುದಾಯದ ಮೊದಲ ನಾಟಕ ‘ಹುತ್ತರ ಬಡಿದರೆ’. ಈ ನಾಟಕಕ್ಕೆ ರಂಗರೂಪವನ್ನು ಕೊಟ್ಟವರು ಕೆ.ವಿ.ನಾರಾಯಣ್. ನಂತರದಲ್ಲಿ ಬಂದ ನಾಟಕ ‘ತಾಯಿ’. ಇದರ ಅನುವಾದ ಸಿ. ವೀರಣ್ಣ ಅವರದು. ಇದೇ ರೀತಿಯಲ್ಲಿ ಸಿದ್ಧಲಿಂಗಯ್ಯನವರೂ ಕೂಡಾ ಅನೇಕ ನಾಟಕಗಳು ಹಾಗೂ ದಲಿತ-ಬಂಡಾಯ ಸಾಹಿತ್ಯದ ಕವನಗಳ ಮುಖಾಂತರ ಸಮುದಾಯದೊಟ್ಟಿಗೆ ನಿರಂತರವಾಗಿ ಗುರುತಿಸಿಕೊಂಡವರು. ಸಮುದಾಯ ಬೆಂಗಳೂರು, ‘ಹುತ್ತವ ಬಡಿದರೆ’ ನಾಟಕದ ನಂತರ, ಒಂದು ಪ್ರಯೋಗವನ್ನು ಮಾಡಿತು. ಅದು ಹುಗಿನೋ ಅಯನೆಸ್ಕೂ ಅವರ ‘ದಿ ಲೆಸನ್’ (The lesson). ಅದು ಬಹಳ ಚಿಕ್ಕದಾದ ನಾಟಕವಾದ್ದರಿಂದ ಸಿದ್ಧಲಿಂಗಯ್ಯನವರ ಖಂಡಕಾವ್ಯ ‘ಅಲ್ಲೇ ಕುಂತವರೇ’ ಕಾವ್ಯವನ್ನು ವಾಚನ ಮತ್ತು ನಾಟಕಾಭಿನಯ ಮಾಡಿ, ‘ಲೆಸನ್ 2’ ಎಂದು ಕರೆಯಲಾಯಿತು. ಬಹುಶಃ ಇದು ಸಿದ್ಧಲಿಂಗಯ್ಯನವರ ಕಾವ್ಯ ನಾಟಕ ರೂಪ ಪಡೆದುಕೊಂಡ ಮೊಟ್ಟ ಮೊದಲ ಪ್ರಯೋಗ. ಅದರಲ್ಲಿ ಕಾವ್ಯವನ್ನು ವಾಚಿಸಿದವರೂ ಕೂಡ ಸಿದ್ಧಲಿಂಗಯ್ಯನವರೇ.

ಇದನ್ನು ಓದಿ: ಕಲಾಗ್ರಾಮದಲ್ಲಿ ಸರಕಾರಿ ಗೌರವದೊಂದಿಗೆ ಡಾ. ಸಿದ್ದಲಿಂಗಯ್ಯ ಅವರ ಅಂತ್ಯಕ್ರಿಯೆ

ಈ ಪ್ರಯೋಗದೊಂದಿಗೆ ಪ್ರಾರಂಭವಾದ ಸಿದ್ಧಲಿಂಗಯ್ಯನವರ ನಂಟು, ನಂತರದಲ್ಲಿ ಅಗಾಧವಾಗಿ ಮತ್ತು ಬಲಿಷ್ಠವಾಗಿ ಬೆಳೆಯಿತು. ಅವರು ಬರೆದ ಕವನಗಳು, ಕ್ರಾಂತಿ ಗೀತೆಗಳು ಗೆಳೆಯ ಜನಾರ್ಧನ್‌(ಜನ್ನಿ) ಮುಖಾಂತರ ಹಾಡಿನ ರೂಪ ಪಡೆದು, ಜನಮಾನಸದ ಗೀತೆಗಳಾಗಿ ಪ್ರತಿಧ್ವನಿಸಿತು. ಸಮುದಾಯದ ಮುಂದಿನ ನಾಟಕ “ತಾಯಿ” ಗೆ ಅವರು ಬರೆದ ಒಂದು ರಂಗ ಗೀತೆ ‘ಓ ಗೆಳತಿ ವ್ಲಾಸೋವ…’, ತಾಯಿ ವ್ಲಾಸೋವ ಗೆ ಅವಳ ಮಗ ಪಾವೆಲ್‌ನ ನಿಧನದ ಸುದ್ದಿಯನ್ನು ಬಿತ್ತರಿಸುವ ಒಂದು ಶೋಕಗೀತೆ. ನಂತರದ ದಿನಗಳಲ್ಲಿ ಇದು ರಂಗಗೀತೆಯ ಚೌಕಟ್ಟನ್ನು ಮೀರಿ, ಎಲ್ಲಾ ಸಂದರ್ಭಗಳಲ್ಲೂ ಹಾಡುವ ಒಂದು ಕ್ರಾಂತಿ ಗೀತೆಯಾಗಿ ಮಾರ್ಪಾಡಾಯಿತು.

ನಾಟಕಗಳು ಬೀದಿಗೆ ಇಳಿದದ್ದು

ಅವರು ಬರೆದ ಬೀದಿ ನಾಟಕ ‘ಬೆಲ್ಚಿ’ಯನ್ನು ಬೆಂಗಳೂರು ಸಮುದಾಯಕ್ಕೆ ನಿರ್ದೇಶನ ಮಾಡಿದವರು ಸಿ.ಜಿ. ಕೃಷ್ಣಸ್ವಾಮಿ(ಸಿಜಿಕೆ). ಅದು ಎಷ್ಟು ಸಾವಿರ ಪ್ರದರ್ಶನ ಕಂಡಿದೆ ಎನ್ನುವುದನ್ನು ನಿಖರವಾಗಿ ಇಂದಿಗೂ ಹೇಳಲು ಸಾಧ್ಯವೇ ಇಲ್ಲ. ಕೇವಲ ಬೆಂಗಳೂರಿಗೆ ಮತ್ತು ಕರ್ನಾಟಕ ರಾಜ್ಯಕ್ಕೆ ಸೀಮಿತಗೊಳ್ಳದ ಈ ಬೀದಿ ನಾಟಕ ರಾಷ್ಟ್ರದ ಎಲ್ಲಾ ಪ್ರಮುಖ ನಗರಗಳಲ್ಲೂ ಪ್ರಮುಖ ಸಾಂಸ್ಕೃತಿಕ ಚಟುವಟಿಕೆಗಳ ಸಮಯದಲ್ಲೂ ಪ್ರದರ್ಶನಗೊಂಡಿದೆ. ನಂತರದ ದಿನಗಳಲ್ಲಿ ಪ್ರಾರಂಭವಾದ ಹಲವಾರು ಸಮುದಾಯ ಘಟಕಗಳೂ ಸಹ ಈ ಪ್ರಸಿದ್ಧ ನಾಟಕವನ್ನು ಅನೇಕ ಯುವ, ಹೊಸ ನಿರ್ದೇಶಕರ ನಿರ್ದೇಶನದಲ್ಲಿ ಪ್ರಯೋಗ ಮಾಡಿದ್ದಾರೆ. 1977-79 ರ ಅಸುಪಾಸಿನಲ್ಲಿ ಬಿಹಾರ ರಾಜ್ಯದ ಬೆಲ್ಚಿ ಎಂಬ ಗ್ರಾಮದಲ್ಲಿ ಸವರ್ಣಿಯರಿಂದ ಸಜೀವ ದಹನಗೊಂಡ ದಲಿತರ ದಾರುಣ ಕಥೆಯ ವಿಷಯಾಧಾರಿತ ನಾಟಕ ಇದು. ಜೀತ ಪದ್ದತಿಯಲ್ಲಿ ಹೊಲದಲ್ಲಿ ಕೆಲಸ ಮಾಡುತ್ತಿದ್ದ ದಲಿತ ರೈತರು, ತಮ್ಮ ಕೆಲಸಕ್ಕೆ ತಕ್ಕುದಾದ ಕೂಲಿಯನ್ನು ಕೊಡಿ ಎಂದು ಕೇಳಿದ್ದಕ್ಕಾಗಿ, ಜಮೀನುದಾರರ ಕೈಯಲ್ಲಿ ಅವರ ದಾರುಣ ಹತ್ಯೆಯಾಗುತ್ತದೆ. ಅಂದಿನ ಇ.ಪಿ.ಡಬ್ಲ್ಯೂ. ಮತ್ತು ‘ಪೀಪಲ್ಸ್ ಡೆಮೊಕ್ರಸಿ’ ವಾರಪತ್ರಿಕೆಗಳಲ್ಲಿ ಬಂದಿದ್ದ ವರದಿಯನ್ನು ಆಧರಿಸಿ, ಅದಕ್ಕೆ ನಾಟಕ ರೂಪ ಕೊಟ್ಟವರು ಸಿದ್ಧಲಿಂಗಯ್ಯ. ಈ ಬೀದಿನಾಟಕದಲ್ಲಿ ಬರುವ “ದೊಡ್ಡ ಗೌಡರ ಬಾಗಿಲೀಗೆ ನಮ್ಮ ಮೂಳೆಯ ತೋರಣ” ಎನ್ನುವ ಹಾಡು, ಕೇವಲ ಈ ಬೀದಿ ನಾಟಕಕ್ಕೆ ಸೀಮಿತವಾಗದೆ ಇಂದಿಗೂ ರೈತ-ಕಾರ್ಮಿಕರ ಬವಣೆಯನ್ನು ದೊಡ್ಡ ಜಮೀನುದಾರರ ಶೋಷಣೆಯ ಮುಖದ ಮುಖವಾಡವನ್ನು ಕಳಚಿ ಹಾಕುವ ಸರ್ವಕಾಲಿಕ ವಾಸ್ತವತೆಯ ಹಾಡಾಗಿದೆ.

ಇದನ್ನು ಓದಿ: ದಮನಿತ, ಶೋಷಿತ ಸಮುದಾಯದ ಒಡಲೊಳಗಿಂದ ಚಿಮ್ಮಿದ ಕವಿ – ಡಾ ಸಿದ್ದಲಿಂಗಯ್ಯ: ಸಿಪಿಐ(ಎಂ) ಶ್ರದ್ಧಾಂಜಲಿ

ಎಲ್ಲಿಯವರೆಗೂ ದೊಡ್ಡ ಜಮೀನುದಾರರಿಂದ ದಲಿತ ರೈತ ಕೂಲಿಕಾರರ ಶೋಷಣೆ ಇರುತ್ತದೋ, ಜೀತ ಪದ್ಧತಿಯ ಅಸಮಾನತೆ ಇರುತ್ತದೋ, ಅಲ್ಲಿಯವರೆಗೂ ಈ ಹಾಡು ಶೋಷಣೆಯ ವಿರುದ್ಧದ ರೈತ ಗೀತೆಯಾಗಿ ಮಾರ್ದನಿಸುತ್ತದೆ. ಇದರ ನಂತರ ಮತ್ತೊಂದು ಬೀದಿನಾಟಕ ‘ಪತ್ರೆ ಸಂಗಪ್ಪನ ಕೊಲೆ ಪ್ರಕರಣ’ ಸಹ, ‘ಬೆಲ್ಚಿ’ಯ ತರಹವೇ ಸಾವಿರಾರು ಪ್ರದರ್ಶನಗಳನ್ನು ಕಂಡಿತು. ಚಿಕ್ಕಮಗಳೂರು ಜಿಲ್ಲೆಯ ಜೀತದಾಳು ಪತ್ರೆ ಸಂಗಪ್ಪ, ಅವನ ಜಮೀನುದಾರನಿಂದ ದಾರುಣವಾಗಿ ಕೊಲೆಯಾಗುವ ಕಥಾ ವಸ್ತುವಿನ ನಾಟಕ ಇದು. 1979, 1981ರ ಜಾಥಾಗಳಲ್ಲಿ, 1978ರ ಚಿಕ್ಕಮಗಳೂರಿನಲ್ಲಿ ಲೋಕಸಭೆ ಕ್ಷೇತ್ರಗಳಲ್ಲಿ ನಡೆಸಿದ ಜಾಥಾಗಳಲ್ಲಿ ಪ್ರದರ್ಶನ ಕಂಡ ಹೆಮ್ಮೆಯ ಬೀದಿನಾಟಕ ಇದು.

ಜಾಥಾದಲ್ಲಿ, ಸಿದ್ಧಲಿಂಗಯ್ಯನವರ ಮತ್ತೊಂದು ಬೀದಿ ನಾಟಕ ‘ನೆಲಸಮ’, ತುರ್ಕಮನ್ ಕೊಳೆಗೇರಿ ಕುರಿತ ನಾಟಕ. ತುರ್ಕಮನ್ ಎಂಬುದು ದೆಹಲಿಯಲ್ಲಿದ ಸುಪ್ರಸಿದ್ಧ ಮತ್ತು ಬಹಳ ವಿಶಾಲವಾದ ಕೊಳೆಗೇರಿ. ತುರ್ತು ಪರಿಸ್ಥಿತಿಯ ಸಮಯದಲ್ಲಿ, ಈ ಕೊಳೆಗೇರಿಯಿಂದ ದೆಹಲಿಯ ಸೌಂದರ್ಯಕ್ಕೆ ಧಕ್ಕೆಯಾಗುತ್ತದೆ ಎನ್ನುವ ಕಾರಣದಿಂದ, ರಾತ್ರೋರಾತ್ರಿ ಅದನ್ನು ನೆಲಸಮಗೊಳಿಸುತ್ತಾರೆ. ಇದರ ಹಿಂದೆ ಸಂಜಯಗಾಂಧಿಯ ಸೂಚನೆ ಇರುತ್ತದೆ. ಮಾರುತಿ ಕಾರಿನ ಕಾರ್ಖಾನೆಗಾಗಿ ಈ ಭೂಮಿ ಬೇಕು ಎಂಬ ವಾದ ಮುಂದಿಟ್ಟು ಅಲ್ಪಸಂಖ್ಯಾತರು ವಾಸಿಸುತ್ತಿದ್ದ ಕೊಳೆಗೇರಿಯನ್ನು ನೆಲಸಮ ಮಾಡುತ್ತಾರೆ. ಇಂದಿರಾಗಾಂಧಿಯ ಸರ್ವಾಧಿಕಾರಿ ಧೋರಣೆ, ತುರ್ತು ಪರಿಸ್ಥಿತಿ ಹೇರುವಿಕೆ ಮುಂತಾದ ವಿಷಯಗಳನ್ನು ಇಟ್ಟುಕೊಂಡು ಅವರನ್ನು ಸೋಲಿಸುವ ಕರೆಕೊಟ್ಟು ಮಾಡಿದ ಜನಜಾಗೃತಿಯ ಜಾಥಾದಲ್ಲಿ ಇದು ಪ್ರದರ್ಶಿತವಾಯಿತು. ಚಿಕ್ಕಮಗಳೂರಿನ ಏಳು ವಿಧಾನಸಭಾ ಕ್ಷೇತ್ರಗಳಲ್ಲಿ ಎರಡು ತಂಡಗಳಾಗಿ ಸಮುದಾಯ ಬೆಂಗಳೂರು ಮಾಡಿದ ಜಾಥಾದಲ್ಲಿ, ಕೆಲವು ಪ್ರದೇಶಗಳಲ್ಲಿ ಸಿದ್ಧಲಿಂಗಯ್ಯ ಅವರು ಸ್ವತಃ ಭಾಗವಹಿಸಿದ್ದರು.

ಸಿದ್ಧಲಿಂಗಯ್ಯನವರ ರಂಗಬಾಂಧವ್ಯ, ಬೆಂಗಳೂರು ಸಮುದಾಯಕ್ಕೆ ಮಾತ್ರ ಸೀಮಿತವಾಗಿರಲಿಲ್ಲ. ತುಮಕೂರು ಸಮುದಾಯ ತಂಡ ‘ಪಂಚಮ’ ನಾಟಕವನ್ನು ರಂಗದ ಮೇಲೆ (ಸಿಜೆಕೆ ನಿರ್ದೇಶನ) ಪ್ರಯೋಗಿಸಿದರು. ಗೌರಿಬಿದನೂರು ಸಮುದಾಯದಿಂದ ಹ.ವೆಂ. ವೇಣುಗೋಪಾಲ ಅವರ ನಿರ್ದೇಶನದಲ್ಲಿ ‘ಕತ್ತೆ ಮತ್ತು ಧರ್ಮ’ ನಾಟಕ ಪ್ರಯೋಗಗೊಂಡಿದೆ. ಬೆಂಗಳೂರು ಸಮುದಾಯ ‘ಬಡಪಾಯಿ ಮಾದಪ್ಪ’ ನಾಟಕವನ್ನು ಜನಾರ್ಧನ ಅವರ ನಿರ್ದೇಶನದಲ್ಲಿ ಪ್ರಯೋಗ ಮಾಡಿದೆ. ಉತ್ತರ ಕರ್ನಾಟಕದ ಹಲವು ಸಮುದಾಯ ಘಟಕಗಳು ‘ಬೆಲ್ಚಿ’, ‘ಪತ್ರೆ ಸಂಗಪ್ಪ..’ ಮತ್ತು ‘ಏಕಲವ್ಯ’ ನಾಟಕಗಳ ಪ್ರಯೋಗಗಳನ್ನು ಮಾಡಿದೆ.

ದಲಿತ ಶೋಷಿತರ ನೋವು ಹಾಡಾಗಿದ್ದು

ಸಮುದಾಯದ ಸಾಂಸ್ಕೃತಿಕ ಶಿಬಿರಗಳು, ಸಮುದಾಯದ ಎಲ್ಲಾ ಜಾಥಾಗಳು, ರಾಜ್ಯದಲ್ಲಿ ನಡೆದ ಕಾರ್ಮಿಕರ ಹೋರಾಟಗಳು, ರೈತರ ವಿಧಾನಸೌಧ ಚಲೋ ರಾಜ್ಯ ಮಟ್ಟದ ಜಾಥಾಗಳು, ಸಿದ್ಧಲಿಂಗಯ್ಯನವರು ಬರೆದ ಅನೇಕ ಪ್ರತಿಭಟನಾ ಹಾಡುಗಳನ್ನು ಬಿತ್ತರಿಸುವ ವೇದಿಕೆಗಳಾದವು. ಜನಾರ್ಧನ, ಪಿಚ್ಚಳ್ಳಿ ಶ್ರೀನಿವಾಸ್‌, ರಾಜಣ್ಣ, ಮೋಹನ, ಭಾಸ್ಕರ, ಶೀಲಾಸ್ವಾಮಿ, ಶಿವಶಂಕರ್, ರವೀಂದ್ರ, ಎಂಜಿವಿ, ಬಸು, ನಾನು ಮುಂತಾದವರು ಹಾಡುತ್ತಿದ್ದ ಎಲ್ಲಾ ಹಾಡುಗಳೂ ಸಿದ್ಧಲಿಂಗಯ್ಯನವರ ರಚನೆಯ ಹಾಡುಗಳೇ ಆಗಿದ್ದವು. ‘ಹಸಿವಿನಿಂದ ಸತ್ತೋರು’, ‘ಗುಡಿಸಲುಗಳು ಗುಡುಗುತ್ತಿವೆ’, ‘ನಾಡನಡುವಿನಿಂದ ಸಿಡಿದ ನೋವಿನ ಕೂಗೇ’, ‘ಆಕಾಶವ ಎತ್ತಿ ನಿಲ್ಲಿಸಿ’, ‘ನಿನ್ನೆ ದಿನ ನನ್ನ ಜನ’, ‘ಯಾರಿಗೆ ಬಂತು ಎಲ್ಲಿಗೆ ಬಂತು 47ರ ಸ್ವಾತಂತ್ರ್ಯ’, ‘ಎಲ್ಲಿದ್ದರೋ ಅವರು ಎಂಗಿದ್ದರೋ ಅವರು’, ‘ಚೋಮನ ಮಕ್ಕಳು ನಾವುಗಳು’, ‘ದೊಡ್ಡಗೌಡರ ಬಾಗಿಲೀಗೆ’, ‘ದಲಿತರು ಬರುವರು ದಾರಿ ಬಿಡಿ’, ‘ತುರ್ತು ಪರಿಸ್ಥಿತಿಯ ಕರಾಳ ರಾಣಿಯ’, ‘ಕುಂತ ಮನಗಳೇ’, ‘ಓ ಗೆಳತಿ ವ್ಲಾಸೋವಾ’, ‘ಆ ಬೆಟ್ಟದಲ್ಲಿ ಬೆಳದಿಂಗಳಲ್ಲಿ’- ಹೀಗೆ ಹಾಡುಗಳ ಪಟ್ಟಿ ಸಾಗುತ್ತದೆ. ಈ ಹಾಡುಗಳು ಕೇವಲ ಮನರಂಜನೆಯ ಹಾಡುಗಳಲ್ಲ. ಹಾಡುವ ರಾಗಗಳ ವೈವಿಧ್ಯತೆಯಲ್ಲಿ ಮನರಂಜನೆ ಇದ್ದರೂ ಸಹ, ಸಾಂಸ್ಕೃತಿಕ ಚಟುವಟಿಕೆಗಳ ಮುಖಾಂತರ ಜನರನ್ನು ಹೋರಾಟಕ್ಕೆ ಅಣಿನೆರೆಸುವ ಸಮುದಾಯದ ಆಶಯಗಳಿಗೆ ಚಿಂತನೆಗಳಿಗೆ ರೂಪ ಕೊಟ್ಟ, ನಮ್ಮ ನಡುವೆಯೇ ಬದುಕಿದ್ದೂ ಸತ್ತಂತಾಗಿದ್ದ ಕಾರ್ಮಿಕ-ರೈತರ ಶೋಷಣೆಯ ವಿವಿಧ ಮುಖಗಳನ್ನು ಅನಾವರಣಗೊಳಿಸುವ, ಅವರ ದಾರುಣ ಬದುಕಿನ ಕಥೆಯನ್ನು ಉಳ್ಳವರ ಹಾಗೂ ಮಧ್ಯಮ ವರ್ಗಗಳಿಗೆ ಪರಿಚಯಿಸುವ ಹಾಡುಗಳಾಗಿದ್ದವು.

ಇದನ್ನು ಓದಿ: ನೋವುಗಳನ್ನೇ ಹಾಡಾಗಿಸಿದ ಕವಿ ಸಿದ್ದಲಿಂಗಯ್ಯ: ಸಿಐಟಿಯು

ಅಂದಿನ ಸಮಯದಲ್ಲಿ ಕಾರ್ಮಿಕ, ರೈತ ಕೂಲಿಕಾರರ ಸಭೆಗಳು, ಸಮಾವೇಶಗಳು, ಪ್ರತಿಭಟನೆಯ ಮುಷ್ಕರಗಳಲ್ಲಿ ಬೆಂಗಳೂರು ಸಮುದಾಯಕ್ಕೆ ಈ ಕ್ರಾಂತಿಕಾರಿ, ಹೋರಾಟ ಮನೋಭಾವದ ಹಾಡುಗಳನ್ನು ಹಾಡಲು ಆಹ್ವಾನವಿರುತ್ತಿತ್ತು. ಸಮಯ ಮಾಡಿಕೊಂಡು ಅರ್ಧಗಂಟೆ ಹಾಡಿನ ಕಾರ್ಯಕ್ರಮದ ನಂತರ ಸಭೆ ಪ್ರಾರಂಭವಾಗುತಿತ್ತು. ಈ ಹಾಡುಗಳು ಮತ್ತು ಬೀದಿ ನಾಟಕಗಳ ಮುಖಾಂತರ, ಸಮುದಾಯದ ಆಶಯಗಳು, ‘ಕಲೆ ಕೇವಲ ಮನರಂಜನೆಗಾಗಿ ಮಾತ್ರ ಅಲ್ಲ’ ಎನ್ನುವ ಧೇಯ-ಧೋರಣೆಗಳು ಸಂಪೂರ್ಣವಾಗಿ ಈಡೇರುತ್ತಿದ್ದವು. ಇದರೊಟ್ಟಿಗೆ, ಸಿದ್ಧಲಿಂಗಯ್ಯನವರ ಹಾಡುಗಳು, ಅವರ ಕವನ ಸಂಕಲನ ಪ್ರಕಟಗೊಳ್ಳುವುದಕ್ಕೆ ಮುಂಚೆಯೇ ಜನ ಸಾಮಾನ್ಯರಲ್ಲಿ ಮಧ್ಯಮ ಮತ್ತು ಕೂಲಿಕಾರ ವರ್ಗದವರಲ್ಲಿ ಜನಪ್ರಿಯಗೊಳ್ಳುತ್ತಿದ್ದವು. ಕೇಂದ್ರ ಸರ್ಕಾರಿ ನೌಕರರ ಸಂಘಟನೆಗಳ ಸಮಾವೇಶಗಳು, ಬ್ಯಾಂಕ್, ಎಲ್.ಐ.ಸಿ., ರಾಜ್ಯ ಸರ್ಕಾರಿ ನೌಕರರ ಸಮ್ಮೇಳನಗಳು, ಸಾರ್ವಜನಿಕ ಉದ್ದಿಮೆಗಳ ನೌಕರರ ಸಮ್ಮೇಳನಗಳಲ್ಲಿ ಸಮುದಾಯ ಭಾಗವಹಿಸಿ, ಈ ಎಲ್ಲಾ ಬೀದಿ ನಾಟಕಗಳನ್ನು ಆಡಿ ಹಾಡುಗಳನ್ನು ಹಾಡಿ, ಆ ಸಮಾರಂಭಗಳಲ್ಲಿ ಚರ್ಚೆಯಾಗುವ ಕಾರ್ಮಿಕರ, ರೈತರ ಅಜೆಂಡಾಗಳಿಗೆ ಪ್ರೇರಕಶಕ್ತಿಯಾಗಿ ಕಾರ್ಯನಿರ್ವಹಿಸಿದೆ.

ಸಿದ್ಧಲಿಂಗಯ್ಯನವರ ಹಾಡುಗಳು, ಸಮುದಾಯದ ‘ತಾಯಿ’, ‘ಪಂಚಮ’, ‘ಅಲ್ಲೇ ಕುಂತವರೆ’, ‘ಏಕಲವ್ಯ’, ‘ಚೋರ ಚರಣದಾಸ’, (‘ಉತ್ತರ ದಿಕ್ಕಿನಲ್ಲಿ ರಾಣಿಯೊಬ್ಬಳು’) ‘ಬೆಲ್ಚಿ’ ‘ಪತ್ರೆ ಸಂಗಪ್ಪ’, ನಾಟಕಗಳಲ್ಲಿ ಬಳಕೆಯಾದಂತೆ, ರಂಗಸಂಪದ ತಂಡದ ‘ಚೋಮ’ ನಾಟಕದಲ್ಲಿ ಮತ್ತು ರಂಗನಿರಂತರ ಎರಡನೇ ಬಾರಿಗೆ ಪ್ರಸ್ತುತ ಪಡಿಸಿದ ‘ಅಲ್ಲೇ ಕುಂತವರೇ’ ನಾಟಕಗಳ ಪ್ರಯೋಗಗಳಲ್ಲೂ ಬಳಕೆಯಾಗಿದೆ. ಸಮುದಾಯ ಬೆಂಗಳೂರು ತಂಡ ಮಾಂಸಾಹಾರಿ ಹೋಟಲ್ಲುಗಳ ನೌಕರರ ಬವಣೆ ಮತ್ತು ಶೋಷಣೆ ಕುರಿತಾದ ನಾಟಕ ರಘುನಂದನ ಅವರ ನಿರ್ದೇಶನದಲ್ಲಿ ಪ್ರಸ್ತುತವಾಯಿತು. ಅದಕ್ಕೆ ಸಿದ್ಧಲಿಂಗಯ್ಯ ಅವರು ಬರೆದ “ರಂಜಾನಿನ ಹಬ್ಬದಲ್ಲಿ ಬಣ್ಣ ಬೆಳಕು ಸುತ್ತಲೂ, ಬಡವರ ಮನೆ ಅಂಗಳದಲ್ಲಿ ಕತ್ತಲೋ ಕತ್ತಲು” ಎಂಬ ಕರುಳು ಹಿಂಡಿವ ಹಾಡು, ಇಂದಿಗೂ ಆರ್ಥಿಕ ಸಂಕಷ್ಟದಿಂದಾಗಿ ರಂಜಾನ್ ಹಬ್ಬ ಆಚರಣೆ ಮಾಡಲಾಗದ ನಮ್ಮ ಬಂಧುಗಳ ನೋವಿನ ಹಾಡಾಗಿದೆ.

ಈ ಎಲ್ಲಾ ಹಾಡುಗಳು ಮತ್ತು ನಾಟಕಗಳು ಮಾಡಿದ್ದ ಬಹಳ ದೊಡ್ಡ ಸದ್ದಿನಿಂದಾಗಿ, ಸಿದ್ಧಲಿಂಗಯ್ಯನವರ ಕೆಲವು ಹಾಡುಗಳು ಚಲನಚಿತ್ರದಲ್ಲೂ ಬಳಕೆಯಾದವು. ಆದರೆ, ಆ ಚಿತ್ರರಂಗದ ಸ್ವರ ಮಾಧುರ್ಯದ ಗೀತೆಗಳು, ನಮ್ಮ ಸಮುದಾಯ ಮತ್ತು ರಂಗಭೂಮಿ ತಂಡಗಳಿಗೆ ಇಷ್ಟವಾಗಲಿಲ್ಲ. ಅದು ಬೆರೆಯದೆ ಚರ್ಚೆಗೆ ದಾರಿ ಮಾಡುತ್ತದೆ.

ದಲಿತಬಂಡಾಯದ ಜೊತೆ ನಂಟು

ಈ ಅನ್ಯೋನ್ಯ ಸಾಂಸ್ಕೃತಿಕ ಸಂಬಂಧ ಹೇಗೆ ಸಮುದಾಯದ ಬೆಳವಣಿಗೆಗೆ ಸಹಕಾರವಾಗಿತ್ತೋ, ಅದೇ ರೀತಿ, ಕರ್ನಾಟಕದಲ್ಲಿ ದಲಿತ ಸಂಘರ್ಷ ಸಮಿತಿ ಮತ್ತು ಬಂಡಾಯ ಸಾಹಿತ್ಯ ಸಂಘಟನೆಗಳ ಹುಟ್ಟಿಗೆ ಮತ್ತು ನಂತರದ ಸಕ್ರಿಯ ಪ್ರಗತಿಪರ ಚಟುವಟಿಕೆಗಳಿಗೆ ಇಂಬುಕೊಟ್ಟಿತು. ಈ ಸಂಘಟನೆಗಳು ನಾಡಿನಾದ್ಯಂತ ಪ್ರಸರಿಸಲು ಪೂರಕವಾಯಿತು. ಸಮುದಾಯ ಸಂಘಟನೆ, ರಾಜ್ಯದ ಹಲವು ಜಿಲ್ಲೆಗಳಲ್ಲಿ, ತಾಲ್ಲೂಕು ಕೇಂದ್ರಗಳಲ್ಲಿ ನಡೆಸುತ್ತಿದ್ದ ಚಟುವಟಿಕೆಗಳನ್ನು ದ.ಸಂ.ಸ. ಮತ್ತು ಬಂಡಾಯ ಸಂಘಟನೆಗಳ ಜೊತೆ ಜೊತೆಯಾಗಿ ಮಾಡಲು ಸಾಧ್ಯವಾಯಿತು. ಸಮುದಾಯ ಪ್ರಕಾಶನ, ಸಿದ್ಧಲಿಂಗಯ್ಯನವರ ‘ಸಾವಿರಾರು ನದಿಗಳು’ ಕವನ ಸಂಕಲನವನ್ನು ಪ್ರಕಟಣೆ ಮಾಡಿತು.

“ಹೊಲೆ ಮಾದಿಗರ ಹಾಡು” ಕವನ ಸಂಕಲನ ಪ್ರಕಟಗೊಂಡಾಗ ಮತ್ತು ಅದರಲ್ಲಿನ ಹಾಡುಗಳು ಜನಪ್ರಿಯಗೊಳ್ಳುತ್ತಿದ್ದಾಗ ನಾಡಿನ ಅನೇಕ ಕವಿಗಳು ಅದನ್ನು ಮೊದಲು ಗಾಬರಿಯಿಂದ ಕೇಳಿದರೂ ಸಹ, ನಂತರದಲ್ಲಿ ಅವುಗಳನ್ನು ಸ್ವಾಗತಿಸಿದ್ದಾರೆ. ಸಮಾಜದ ಸ್ವಾಸ್ಥ್ಯವನ್ನು ಸಮತೋಲನದಲ್ಲಿ ಕಾಪಾಡಲು ಈ ಗೀತೆಗಳು ಅತಿ ಅವಶ್ಯ ಅನ್ನುವ ಮಾತುಗಳು, ಪ್ರತಿಕ್ರಿಯೆಗಳು – ಜಿ.ಎಸ್.ಶಿವರುದ್ರಪ್ಪ, ಚಂದ್ರಶೇಖರ ಪಾಟೀಲ, ದೇವನೂರ ಮಹಾದೇವ, ಬೆಸಗರಹಳ್ಳಿ ರಾಮಣ್ಣ, ಕಾಳೇಗೌಡ ನಾಗವಾರ, ಡಿ.ಆರ್. ನಾಗರಾಜ್, ಶೂದ್ರ ಶ್ರೀನಿವಾಸ್, ಚಂದ್ರಶೇಖರ ಕಂಬಾರ, ದೊಡ್ಡ ರಂಗೇಗೌಡ – ಮುಂತಾದ ನಾಡಿನ ಅನೇಕ ಹೆಸರಾಂತ ಕವಿಗಳಿಂದ ವಿಮರ್ಶಕರಿಂದ ಪ್ರಕಟವಾಗಿದೆ.

ಕನ್ನಡ ಪುಸ್ತಕ ಪ್ರಾಧಿಕಾರ, ಕನ್ನಡ ಅಭಿವೃದ್ಧಿ ಪ್ರಾಧಿಕಾರ, ಎರಡು ಬಾರಿ ವಿಧಾನ ಪರಿಷತ್ ಸದಸ್ಯರಾಗಿ, ತಾವು ಕಾರ್ಯನಿರ್ವಹಿಸಿದ ಎಲ್ಲಾ ಕ್ಷೇತ್ರಗಳಲ್ಲೂ ಸಿದ್ಧಲಿಂಗಯ್ಯ ತಮ್ಮ ಛಾಪನ್ನು ಮೂಡಿಸಿದ್ದಾರೆ. ಸದಾ ಜಾಗೃತ ಮನಸ್ಸಿನಿಂದ ಕಾರ್ಯ ನಿರ್ವಹಿಸಿ, ದಲಿತ ಮತ್ತು ಶೋಷಿತ ಸಮುದಾಯದ ಕಷ್ಟಗಳಿಗೆ ಸ್ಪಂದಿಸಿದ ಮಾನವೀಯ ನಾಯಕರಾಗಿ ಅವರು ಗುರುತಿಸಿಕೊಂಡಿದ್ದಾರೆ. ಸದನದಲ್ಲಿ ಹಲವಾರು ಬಾರಿ. ಬಹಳ ಮೌಲ್ಯಯುತ ಪ್ರಶ್ನೆಗಳನ್ನು ಕೇಳಿ, ಪರಿಹಾರ ಒದಗಿಸಿದ್ದಾರೆ. ಬಾಬ್ರಿ ಮಸೀದಿ ಧ್ವಂಸ ಆದ ನಂತರ, ಅವರು ಮಾಡಿದ ಭಾಷಣ ಕೋಮುವಾದದ ವಿರುದ್ಧ ಅವರು ಎತ್ತಿದ ಧ್ವನಿಯ ಸರ್ವಕಾಲಿಕ ಉತ್ತಮ ಭಾಷಣ.

ಇದನ್ನು ಓದಿ: ದಲಿತ ಧ್ವನಿ, ದಲಿತಕವಿ ಸಿದ್ದಲಿಂಗಯ್ಯ ಅವರಿಗೆ ಡಿಹೆಚ್‌ಎಸ್‌ ಶ್ರದ್ಧಾಂಜಲಿ

ನಾನು ನನ್ನ ಲೇಖನದಲ್ಲಿ, ಸಿದ್ಧಲಿಂಗಯ್ಯ ಅವರನ್ನು ಸಾಂಸ್ಕೃತಿಕ ಕ್ಷೇತ್ರದ ಅದರಲ್ಲೂ ರಂಗಭೂಮಿಯ ಚೌಕಟ್ಟಿನಲ್ಲಿ ಮಾತ್ರ ಗುರುತಿಸಲು ಪ್ರಯತ್ನಿಸಿದ್ದೇನೆ. ಅವರ ಸರ್ವತೋಮುಖ ಚಟುವಟಿಕೆಗಳನ್ನು ಗುರುತಿಸಿ, ದಾಖಲು ಮಾಡುವುದು ನನ್ನ ಸಾಮರ್ಥ್ಯಕ್ಕೆ ಮೀರಿದ ಕೆಲಸ.

ಸಮುದಾಯದ ಪ್ರಾರಂಭಿಕ ದಿನಗಳಿಂದ, ಅವರು ಅಗಲುವ ಎರಡು ತಿಂಗಳ ಮುಂಚಿನವರೆಗೂ ಸಂಪರ್ಕದಲ್ಲಿದ್ದ, ಕಂಡಾಗಲೆಲ್ಲಾ ಅತ್ಯಂತ ಗೌರವದಿಂದ ಮತ್ತು ಪ್ರೀತಿಯಿಂದ ಮಾತಾಡಿಸುತ್ತಿದ್ದ, ಅನೇಕ ಬಾರಿ ಮನೆಗೆ ಬರಲು ಆಹ್ವಾನ ನೀಡಿದ ಕಾಮ್ರೇಡ್ (ನಾನು ಅವರನ್ನು ಮತ್ತು ಅವರೂ ಸಹ ನನ್ನನ್ನು ಹಾಗೆಯೇ ಕರೆಯುತ್ತಿದ್ದದ್ದು) ಸಿದ್ಧಲಿಂಗಯ್ಯ ಅವರು ನಮ್ಮೊಟ್ಟಿಗೆ ಇಲ್ಲ ಎನ್ನುವುದು ಊಹೆಗೂ ಮೀರಿದ ಕಟು ಸತ್ಯ ಮತ್ತು ನಂತರದ ದಿನಗಳ ನೋವಿನ ಸಂಗತಿ.

ಕಾಮ್ರೇಡ್‌ಗೆ ನಮನಗಳು,

Donate Janashakthi Media

Leave a Reply

Your email address will not be published. Required fields are marked *