ಪಿ. ಕೃಷ್ಣಪ್ರಸಾದ್, ಎಐಕೆಎಸ್ ಹಣಕಾಸು ಕಾರ್ಯದರ್ಶಿಗಳು
ಸಾಮ್ರಾಜ್ಯಶಾಹಿ ಮತ್ತು ಮೂರನೇ ಜಗತ್ತಿನ ರಾಷ್ಟ್ರಗಳ ಜನರ ನಡುವೆ ಅಂತರರಾಷ್ಟ್ರೀಯ ಮಟ್ಟದಲ್ಲಿ ತೀವ್ರಗೊಳ್ಳುತ್ತಿರುವ ವೈರುಧ್ಯಗಳ ಸಂದರ್ಭದಲ್ಲಿ ಭಾರತದಲ್ಲಿನ ಈ ಹೋರಾಟವು ವಿಶೇಷ ಮಹತ್ವವನ್ನು ಹೊಂದಿದೆ. ಸಂಪತ್ತನ್ನು ಸೃಷ್ಟಿಸುವ ಶಕ್ತಿಗಳ ಬೆಳೆಯುತ್ತಿರುವ ಹೋರಾಟಗಳ ಆಧಾರದಲ್ಲಿ ಬಿಜೆಪಿ ವಿರುದ್ಧದ ಪರ್ಯಾಯವೊಂದು ರಾಷ್ಟ್ರ ಮಟ್ಟದಲ್ಲಿ ರೂಪುಗೊಳ್ಳಲಿದೆ. ಆದ್ದರಿಂದ ರಾಷ್ಟ್ರೀಯ ರಾಜಕಾರಣದಲ್ಲಿ ಬಿಜೆಪಿಗೊಂದು ಪರ್ಯಾಯವನ್ನು ಚುನಾವಣಾ ಸಮರಕ್ಕಿಂತಲೂ ಹೆಚ್ಚಾಗಿ ಸಂಸದಿಯೇತರ ಹೋರಾಟಗಳಿಂದ ಕಟ್ಟಲು ಸಾಧ್ಯವಾಗುತ್ತದೆ. ಇದು, ಭಾರತವನ್ನು ಸಾಮ್ರಾಜಶಾಹಿ-ನಿರ್ದೇಶಿತ ನವ-ಉದಾರವಾದಿ ವ್ಯವಸ್ಥೆಗೆ ವಿರುದ್ಧದ ಪ್ರಮುಖ ಹೋರಾಟದ ಕೇಂದ್ರವನ್ನಾಗಿ ಮಾರ್ಪಡಿಸಲಿದೆ. ಈಗ ಮುಂದುವರಿಯುತ್ತಿರುವ ಆಂದೋಲನವು ಸಾಮ್ರಾಜ್ಯಶಾಹಿ ಶೋಷಣೆಯ ವಿರುದ್ಧ ಕಾರ್ಪೊರೇಟ್-ನಿರ್ದೇಶಿತ ನವ-ಉದಾರವಾದಿ ವ್ಯವಸ್ಥೆಯ ವಿರುದ್ಧ ಭಾರತದ ಒಂದು ಮಹತ್ವದ ಹೊಸ ಘಟ್ಟವಾಗಿ ಪರಿಣಮಿಸಲಿದೆ.
ಭಾರತದಲ್ಲಿ ಈಗ ನಡೆಯುತ್ತಿರುವ ರೈತರ ಐಕ್ಯ ಹೋರಾಟವು ಭಾರತದ ಮತ್ತು ಜಾಗತಿಕವಾಗಿ ಕೂಡ ರಾಜಕೀಯ ವ್ಯಾಖ್ಯಾನವನ್ನೇ ಬದಲಾಯಿಸಿದೆ. ದೆಹಲಿ ಗಡಿಗಳಲ್ಲಿಯ ರೈತ ಹೋರಾಟದ ಗೆಲುವು ಭಾರತದಲ್ಲಿನ ಸಾಮ್ರಾಜ್ಯಶಾಹೀ ಜಾಗತೀಕರಣದ ಪ್ರಕ್ರಿಯೆಗೆ ಒಂದು ಗಮನಾರ್ಹವಾದ ಹಿನ್ನಡೆ ಉಂಟುಮಾಡಿದೆ. ಆದಕಾರಣ ಪ್ರಮುಖ ಆಳುವ ಪಕ್ಷವಾದ ಬಿಜೆಪಿ ಮತ್ತು ಅದರ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ರೈತರ ಐಕ್ಯ ಹೋರಾಟಕ್ಕೆ ಮಣಿದಿರುವುದನ್ನು ಸಾಮ್ರಾಜ್ಯಶಾಹಿ- ಪರ ಮಾಧ್ಯಮಗಳು ತೀಕ್ಷ್ಣ ಟೀಕೆಗೆ ಒಳಪಡಿಸಿವೆ.
ರೈತರ ಐಕ್ಯ ಹೋರಾಟವು ತಾನೇ ತಾನಾಗಿ ಮೂಡಿ ಬಂದಿಲ್ಲ. ನವ-ಉದಾರವಾದಿ ನೀತಿಗಳ ವಿರುದ್ಧ ಭಾರತದಲ್ಲಿ ಮತ್ತು ಇಡೀ ವಿಶ್ವದಲ್ಲಿ ಕಾರ್ಮಿಕ ವರ್ಗ ಹಾಗೂ ರೈತಾಪಿ ವರ್ಗಗಳು ನಿರಂತರವಾಗಿ ಹಾಗೂ ಪ್ರಜ್ಞಾಪೂರ್ವಕವಾಗಿ ನಡೆಸಿದ ಹೋರಾಟಗಳ ಫಲದಿಂದ ಈ ಐಕ್ಯತೆ ಸಾಧ್ಯವಾಗಿದೆ. ಈ ಆರ್ಥಿಕ ಸುಧಾರಣೆಗಳನ್ನು ಭಾರತದಲ್ಲಿ 1991 ರಲ್ಲಿ ನರಸಿಂಹ ರಾವ್ ನೇತೃತ್ವದ ಕಾಂಗ್ರೆಸ್ ಸರ್ಕಾರ ಜಾರಿಗೆ ತಂದಿತು. 1994ರಲ್ಲಿ ವಿಶ್ವ ವ್ಯಾಪಾರ ಒಪ್ಪಂದ (ಡಬ್ಲ್ಯೂಟಿಒ)ವು ಏರ್ಪಟ್ಟಿತು. ಈ ನವ-ಉದಾರವಾದಿ ನೀತಿಗಳ ವಿರುದ್ಧ ಕಾರ್ಮಿಕ ವರ್ಗ ಹಾಗೂ ಕಾರ್ಮಿಕ ಸಂಘಗಳ ಜಂಟೀ ವೇದಿಕೆಯು ಕಳೆದ ಮೂರು ದಶಕಗಳಿಂದ ದೃಢತೆಯಿಂದ ಹೋರಾಟಗಳನ್ನು ನಡೆಸಿದೆ. ಆ ನಾಯಕತ್ವದಲ್ಲಿ ಸುಮಾರು 20 ಅಖಿಲ ಭಾರತ ಮುಷ್ಕರಗಳನ್ನು ಸಂಘಟಿಸಲಾಗಿದೆ ಮತ್ತು ಇತ್ತೀಚಿನ ಮುಷ್ಕರಗಳನ್ನೂ ಒಳಗೊಂಡಂತೆ ಆ ಹೋರಾಟಗಳಿಗೆ ರೈತ ಚಳುವಳಿ ಅನೇಕ ಬಾರಿ ಸಕ್ರಿಯವಾಗಿ ಬೆಂಬಲ ನೀಡಿದೆ.
ತೀರ ಇತ್ತೀಚಿನವರೆಗೂ, ಒಂದು ವಿಭಾಗದ ರೈತಾಪಿ ಜನರಲ್ಲಿ, ಬಹಳ ಮುಖ್ಯವಾಗಿ ಶ್ರೀಮಂತ ರೈತರಲ್ಲಿ ಈ ಸುಧಾರಣೆಗಳು ತಮಗೆ ಭಾರಿ ಲಾಭ ತಂದುಕೊಡಬಹುದು ಎಂಬ ಒಂದು ಭ್ರಮೆ ಇತ್ತು. ಕಳೆದ ಮೂರು ದಶಕಗಳ ಅನುಭವಗಳು ಆ ಭ್ರಮೆಯನ್ನು ಹೋಗಲಾಡಿಸಿವೆ. ಈ ಹೊಸ ಜ್ಞಾನೋದಯವು ಐಕ್ಯ ಹೋರಾಟ ನಡೆಸಲು ಪ್ರೇರಣೆ ನೀಡಿದೆ ಮತ್ತು ಕಾರ್ಮಿಕ ವರ್ಗದ ಐಕ್ಯ ಚಳುವಳಿಯ ಬೆಂಬಲದಿಂದಾಗಿ ನವ-ಉದಾರವಾದಿ ಶಕ್ತಿಗಳ ವಿರುದ್ಧ ಅಸಾಧಾರಣವಾದ ಗೆಲುವನ್ನು ಸಾಧಿಸಲು ಶಕ್ಯವಾಗಿದೆ. ಇದೊಂದು ನಿರ್ಣಾಯಕವಾದ ಸಾಧನೆಯೇ ಸರಿ.
ಅಂತರರಾಷ್ಟ್ರೀಯ ಮಟ್ಟದಲ್ಲಿ ವೈರುಧ್ಯಗಳು ತೀವ್ರಗೊಳ್ಳುತ್ತಿರುವ ಸಂದರ್ಭದಲ್ಲಿ
ಸಾಮ್ರಾಜ್ಯಶಾಹಿ ಮತ್ತು ಮೂರನೇ ಜಗತ್ತಿನ ರಾಷ್ಟ್ರಗಳ ಜನರ ನಡುವೆ ಅಂತರರಾಷ್ಟ್ರೀಯ ಮಟ್ಟದಲ್ಲಿ ತೀವ್ರಗೊಳ್ಳುತ್ತಿರುವ ವೈರುಧ್ಯಗಳ ಸಂದರ್ಭದಲ್ಲಿ ಭಾರತದಲ್ಲಿನ ಈ ಹೋರಾಟವು ವಿಶೇಷ ಮಹತ್ವವನ್ನು ಹೊಂದಿದೆ. ಜಾಗತಿಕ ಬಂಡವಾಳಶಾಹಿ ವ್ಯವಸ್ಥೆಯು ಒಂದು ವ್ಯವಸ್ಥೆಯಾಗಿ ದೊಡ್ಡ ಬಿಕ್ಕಟ್ಟನ್ನು ಎದುರಿಸುತ್ತಿದೆ ಮತ್ತು 2008 ರ ಜಾಗತಿಕ ಆರ್ಥಿಕ ಮಹಾ ಪತನದ ನಂತರ ಇನ್ನೂ ಹೆಚ್ಚಿನ ಆರ್ಥಿಕ ಹಿಂಜರಿತದಲ್ಲಿ ಸಿಲುಕಿದೆ. ಈ ಹಿಂಜರಿತವು ಇನ್ನೂ ತೀವ್ರಗೊಳ್ಳುತ್ತಿದೆ ಮತ್ತು ಇದು ಭಾರತದ ಮೇಲೂ ವಿಪರೀತ ಪರಿಣಾಮ ಬೀರಲಿದೆ. ಆರ್ಥಿಕ ವ್ಯವಸ್ಥೆಯ ಮೇಲೆ ಬಹಳ ಕೆಟ್ಟ ಪರಿಣಾಮ ಬೀರಿದೆ ಮತ್ತು ಆಳುವ ವರ್ಗಗಳ ಮೈತ್ರಿಕೂಟವು ಹೆಚ್ಚಿನ ಬಿಕ್ಕಟ್ಟನ್ನು ಎದುರಿಸುತ್ತಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಗಂಭೀರ ಹಣಕಾಸು ಸಂಪನ್ಮೂಲದ ಕೊರತೆಯನ್ನು ಎದುರಿಸುತ್ತಿದ್ದು, ಜನರ ಗಂಭೀರ ಸಮಸ್ಯೆಗಳಾದ ಹೆಚ್ಚುತ್ತಿರುವ ನಿರುದ್ಯೋಗ, ಲಂಗುಲಗಾಮಿಲ್ಲದ ಬೆಲೆ ಏರಿಕೆ, ಆಹಾರದ ಭದ್ರತೆಗೆ ಸಂಚಕಾರ ತರುತ್ತಿರುವ ಸಾರ್ವಜನಿಕ ಪಡಿತರ ವ್ಯವಸ್ಥೆ, ಸಾರ್ವತ್ರಿಕ ಆರೋಗ್ಯ ಹಾಗೂ ಶಿಕ್ಷಣ ಸೇವೆಗಳ ಅವ್ಯವಸ್ಥೆಗಳನ್ನು ಪರಿಹರಿಸಲು ಸಾಧ್ಯವಾಗುತ್ತಿಲ್ಲ. ಇದರಿಂದಾಗಿ ಹಲವಾರು ರಾಜ್ಯ ಸರ್ಕಾರಗಳಿಗೆ ತಮ್ಮ ನೌಕರರಿಗೆ ಸರಿಯಾದ ಸಮಯಕ್ಕೆ ಸಂಬಳ ಮತ್ತು ನಿವೃತ್ತಿ ವೇತನ ನೀಡಲೂ ಕಷ್ಟವಾಗುತ್ತಿದೆ.
ರೈತ-ಕಾರ್ಮಿಕ ಐಕ್ಯತೆ ಮತ್ತು ವರ್ಗ ಹೋರಾಟ
ಈ ಹೋರಾಟದ ಅತ್ಯಂತ ಮಹತ್ವದ ಸಾಧನೆ ಏನೆಂದರೆ ಕಾರ್ಮಿಕ-ರೈತರ ಐಕ್ಯತೆ, ಬಹಳ ಮುಖ್ಯವಾಗಿ ಸ್ವಾತಂತ್ರ್ಯೋತ್ತರ ಭಾರತ ಎದುರಿಸುತ್ತಿರುವ ಕೃಷಿ ಸಮಸ್ಯೆಗಳಿಗೆ ಪರಿಹಾರ ಕಾಣುವಲ್ಲಿ ಉಂಟಾಗಿರುವ ಈ ಐಕ್ಯತೆಯು ಭಾರತದಲ್ಲಿ ಇನ್ನೂ ಗಟ್ಟಿಯಾಗುತ್ತಿದೆ. ಆದ್ದರಿಂದ ಸ್ವಾತಂತ್ರ್ಯಾನಂತರ ಮೊಟ್ಟ ಮೊದಲ ಬಾರಿಗೆ ರಾಷ್ಟ್ರೀಯ ರಾಜಕಾರಣದಲ್ಲಿ ಆಳುವ ವರ್ಗದ ಮೈತ್ರಿಕೂಟ ಮತ್ತು ಕಾರ್ಮಿಕರು ಹಾಗೂ ರೈತರ ಒಗ್ಗೂಡಿದ ಶಕ್ತಿಯ ನಡುವೆ ನೇರ ತಿಕ್ಕಾಟವನ್ನು ಕಾಣುತ್ತಿದ್ದೇವೆ. ಈ ತಿಕ್ಕಾಟವು ಅಥವಾ ವೈರುಧ್ಯವು ಭಾರತದ ಮುಂದಿನ ರಾಷ್ಟ್ರೀಯ ರಾಜಕಾರಣದ ದಿಕ್ಕನ್ನು ನಿರ್ಧರಿಸಲಿದೆ.
ಬಂಡವಾಳಶಾಹಿ ಅಭಿವೃದ್ಧಿ ಹಂತದಲ್ಲಿನ ಕಾರ್ಷಿಕ ಸುಧಾರಣೆಗಳನ್ನು ಈಡೇರಿಸದ ಕಾರಣದಿಂದಾಗಿ ಭಾರತದ ಕಾರ್ಷಿಕ ಬಿಕ್ಕಟ್ಟು ಪ್ರಮುಖವಾಗಿ ಮೂರು ಅಂಶಗಳಿಂದ ಉದ್ಭವಿಸಿದೆ. ಒಂದನೆಯದಾಗಿ, ಭೂಸುಧಾರಣೆಯ ಮೂಲಕ ಜಮೀನನ್ನು ವಿತರಣೆ ಮಾಡದಿರುವುದು; ಎರಡನೆಯದಾಗಿ, ಆಹಾರ ಸಂಸ್ಕರಣೆ ಮತ್ತು ಮೌಲ್ಯ ವರ್ಧನೆಗಾಗಿ ಕೃಷಿ ಆಧಾರಿತ ಉದ್ದಿಮೆಗಳನ್ನು ಸ್ಥಾಪನೆ ಮಾಡದಿರುವುದು; ಮತ್ತು ಮೂರನೆಯದಾಗಿ ಕೃಷಿ ಉತ್ಪನ್ನಗಳಿಗೆ ಪ್ರತಿಫಲದಾಯಕ ಬೆಲೆ, ಕೃಷಿ ಕೂಲಿಕಾರರಿಗೆ ಸುಸ್ಥಿರ ಉದ್ಯೋಗ ಹಾಗೂ ಕನಿಷ್ಠ ಕೂಲಿ ಖಾತ್ರಿಪಡಿಸುವ ಮೂಲಕ ಆಂತರಿಕ ಮಾರುಕಟ್ಟೆಯನ್ನು ಸೃಷ್ಟಿಮಾಡದಿರುವುದು.
ಭೂಸುಧಾರಣೆಯನ್ನು ಜಾರಿ ಮಾಡಿರುವಂತಹ ರಾಜ್ಯಗಳಲ್ಲಿ ಕೂಡ ಇನ್ನುಳಿದ ಎರಡು ಕಾರ್ಯಗಳನ್ನು ಸಮಗ್ರವಾಗಿ ಕೈಗೊಳ್ಳುವ ಕಾರ್ಯ ಹಾಗೆಯೇ ಉಳಿದಿದೆ. ಈ ಕಾರಣಗಳಿಂದಾಗಿ ಸ್ವದೇಶಿ ಹಾಗೂ ವಿದೇಶಿ ಕಾರ್ಪೊರೇಟ್ ಶಕ್ತಿಗಳು ಕೃಷಿ ವ್ಯಾಪಾರ ಹಾಗೂ ಕೃಷಿ ಸಂಸ್ಕರಣೆಯ ಕಾರ್ಯದಲ್ಲಿ ಪ್ರಾಬಲ್ಯ ಸಾಧಿಸಿವೆ ಮತ್ತು ನ್ಯಾಯಯುತ ಬೆಲೆ ಹಾಗೂ ಕನಿಷ್ಠ ಕೂಲಿಯನ್ನು ವಂಚಿಸುವ ಮೂಲಕ ರೈತರನ್ನು ಶೋಷಣೆ ಮಾಡುತ್ತಿವೆ. ರೈತರು ದಿವಾಳಿಯಾಗಲು, ಮೈತುಂಬಾ ಸಾಲ, ರೈತರ ಆತ್ಮಹತ್ಯೆ ಮತ್ತು ಗ್ರಾಮಗಳಿಂದ ಪಟ್ಟಣಗಳಿಗೆ ಕೂಲಿಗಾರರ ವಲಸೆ ಮುಂತಾದವುಗಳಿಗೆ ಇದು ಬಹು ಮುಖ್ಯ ಕಾರಣವಾಗಿದೆ.
ಕೋಮುವಾದಿ, ವಿಚ್ಛಿದ್ರಕಾರಿ ರಾಜಕೀಯಕ್ಕೆ ಸವಾಲು
ಕೃಷಿ ಸುಧಾರಣೆಗಳ ಮೂಲಕ ಕಾರ್ಪೊರೇಟ್ ಸುಲಿಗೆಯನ್ನು ತಡೆಯುವ ಬದಲು ಬಿಜೆಪಿ-ಆರ್.ಎಸ್.ಎಸ್. ನೇತೃತ್ವದ ಮೋದಿ ಸರ್ಕಾರವು ನವ-ಉದಾರವಾದಿ ಹಾಗೂ ಸಾಮ್ರಾಜ್ಯಶಾಹಿ ಶಕ್ತಿಗಳಿಗೆ ಶರಣಾಗಿದೆ ಮತ್ತು ಭಾರತದ ಕೃಷಿಯನ್ನು ಹೆಚ್ಚಿನ ಕಾರ್ಪೊರೇಟೀಕರಣದತ್ತ ನೂಕುತ್ತಿದೆ. ಬಿಜೆಪಿ-ಆರ್.ಎಸ್.ಎಸ್. ಕೂಟವು ತಮ್ಮ ಚರಿತ್ರೆಯಲ್ಲಿ ಎಂದೂ ಭೂಸುಧಾರಣೆ ಹಾಗೂ ಕೃಷಿ ಭೂಮಿಯನ್ನು ರೈತರಿಗೆ ಹಂಚುವುದರ ಪರ ಇರಲಿಲ್ಲ. ಬಿಜೆಪಿ ನೇತೃತ್ವದ ಯಾವ ರಾಜ್ಯ ಸರ್ಕಾರಗಳೂ ಈ ಸಮಸ್ಯೆಗಳನ್ನು ಪರಿಹರಿಸಿಲ್ಲ. ಇವತ್ತು, ರೈತರ ಬೆಳೆಗೆ ಪ್ರತಿಫಲದಾಯಕ ಬೆಲೆ ಹಾಗೂ ಕೃಷಿ ಕೂಲಿಕಾರರಿಗೆ ಸುಸ್ಥಿರ ಉದ್ಯೋಗದ ಜತೆ ಕನಿಷ್ಠ ಕೂಲಿಯನ್ನು ಖಾತ್ರಿಪಡಿಸುವುದು ಇಡೀ ರೈತಾಪಿ ಜನರ ಹಾಗೂ ಕಾರ್ಮಿಕ ವರ್ಗದ ಚಳುವಳಿಯ ಪ್ರಮುಖ ಬೇಡಿಕೆಗಳಾಗಿವೆ; ಜತೆಯಲ್ಲೇ, ಕಾರ್ಮಿಕ ವಿರೋಧಿ ಕಾರ್ಮಿಕ ಸಂಹಿತೆಗಳನ್ನು ಹಿಂತೆಗೆದುಕೊಳ್ಳಬೇಕು ಮತ್ತು ಸಾರ್ವಜನಿಕ ವಲಯದ ಉದ್ದಿಮೆಗಳ ಖಾಸಗೀಕರಣಕ್ಕೆ ಎಡೆಮಾಡಿಕೊಡುವ ರಾಷ್ಟ್ರೀಯ ಆಸ್ತಿಗಳ ನಗದೀಕರಣ ಯೋಜನೆ (ನ್ಯಾಷನಲ್ ಮಾನಿಟೈಸೇಷನ್ ಪೈಪ್ಲೈನ್ ಪ್ರಾಜೆಕ್ಟ್) ತಡೆಯಬೇಕು ಎನ್ನುವುದೂ ಕೂಡ ಈ ಚಳುವಳಿಯ ಮುಖ್ಯ ಬೇಡಿಕೆಗಳಾಗಿವೆ. ಸಂಪತ್ತನ್ನು ಸೃಷ್ಟಿ ಮಾಡುವ ಮೂರು ಪ್ರಮುಖ ವರ್ಗಗಳಾದ ಕಾರ್ಮಿಕರು, ರೈತರು ಹಾಗೂ ಕೃಷಿ ಕೂಲಿಕಾರರರು ನವ-ಉದಾರವಾದಿ ಶಕ್ತಿಗಳ ವಿರುದ್ಧ ಹೋರಾಟವನ್ನು ಕೈಗೆತ್ತಿಕೊಳ್ಳಲು ಇಂದು ಒಗ್ಗೂಡಿದ್ದಾರೆ.
ಈ ರೈತರ ಒಗ್ಗಟ್ಟಿನ ಹೋರಾಟವು ಬಿಜೆಪಿ-ಆರ್.ಎಸ್.ಎಸ್.ನ ಕೋಮುವಾದಿ ಹಾಗೂ ವಿಚ್ಛಿದ್ರಕಾರಿ ರಾಜಕೀಯವನ್ನು ಪ್ರತಿರೋಧಿಸುವಲ್ಲಿ ಪರಿಣಾಮಕಾರಿ ಪ್ರಭಾವವನ್ನು ಬೀರುವುದರ ಮೂಲಕ ಮತ್ತೊಂದು ಮಹತ್ವಪೂರ್ಣ ಸಾಧನೆ ಮಾಡಿದೆ. ರೈತರು ಹಾಗೂ ಕಾರ್ಮಿಕರ ಒಗ್ಗಟ್ಟಿನ ಹೋರಾಟವು ನಿಜವಾದ ವರ್ಗ ಹಾಗೂ ಬದುಕಿನ ಸಮಸ್ಯೆಗಳನ್ನು ರಾಷ್ಟ್ರೀಯ ರಾಜಕಾರಣದ ಮುನ್ನೆಲೆಗೆ ತರುವಲ್ಲಿ ಯಶಸ್ವಿಯಾಗಿದೆ. ಈ ಹೋರಾಟವು ಕೆಲವು ಪ್ರದೇಶಗಳಲ್ಲಿ ಉತ್ಪಾದಕ ಶಕ್ತಿಗಳ ನಡುವೆ ಇರುವ ಜಾತಿ ಹಾಗೂ ಮತಧರ್ಮಗಳ ಬೇಧವನ್ನು ಮರೆಸಿ ಐಕ್ಯತೆಯನ್ನು ತರುವಲ್ಲಿ ಯಶಸ್ಸನ್ನು ಗಳಿಸಿದೆ. ಇದು ನಿಜಕ್ಕೂ ಯಾವುದೇ ಕಾರಣಕ್ಕೂ ಸಣ್ಣ ಸಾಧನೆಯೇನಲ್ಲ. ಇದರಿಂದ ನಾವು ಕಲಿಯುವ ಪಾಠವೇನೆಂದರೆ ಜನರ ಬದುಕಿನ ಸಮಸ್ಯೆಗಳ ಆಧಾರದಲ್ಲಿ ನಡೆಯುವ ವರ್ಗ ಹೋರಾಟಗಳು ಮಾತ್ರವೇ ಕೋಮುವಾದಿ ಹಾಗೂ ವಿಚ್ಛಿದ್ರಕಾರಿ ರಾಜಕೀಯವನ್ನು ಮಣಿಸಬಹುದು ಎಂಬುದೇ ಆಗಿದೆ.
ಬಿಜೆಪಿ ರಾಜಕಾರಣದ ಪ್ರಮುಖ ಅಂಶವಾದ ಕೋಮುವಾದಿ ಹಾಗೂ ಜಾತಿಯಾಧಾರಿತ ಚುನಾವಣಾ ತಂತ್ರವನ್ನು ಹಿಮ್ಮೆಟ್ಟಿಸಲು ವರ್ಗಾಧಾರಿತ ಹೋರಾಟಗಳನ್ನು ಮುನ್ನಡೆಸುವುದೇ ಮುಂದಿನ ದಿನಗಳಲ್ಲಿ ರಾಷ್ಟ್ರ ಮಟ್ಟದಲ್ಲಿ ಕೈಗೊಳ್ಳಬೇಕಾದ ಕಾರ್ಯವಿಧಾನವಾಗಬೇಕು. ಶೋಷಿತ ವರ್ಗಗಳನ್ನು ವಿಭಜಿಸುವುದರ ಮೂಲಕ ತಮ್ಮ ಸುಲಿಗೆಯನ್ನು ಮುಂದುವರಿಸಲು ಕೋಮುವಾದಿ ರಾಜಕೀಯದ ಮೇಲೆ ಅವಲಂಬಿತರಾಗಿರುವ ಕಾರ್ಪೊರೇಟ್ ಶಕ್ತಿಗಳಿಗೆ ಈ ಐಕ್ಯ ಹೋರಾಟವು ದೊಡ್ಡ ಹೊಡೆತವನ್ನು ನೀಡಲಿದೆ. ರಾಜಕೀಯ ಲಾಭಕ್ಕಾಗಿ ಉಗ್ರ ಹಾಗೂ ಮೃದು ಕೋಮುವಾದ ಎರಡನ್ನೂ ಬಳಸುವ ಬಲಪಂಥೀಯ ರಾಜಕೀಯ ಪಕ್ಷಗಳನ್ನು ಹಿಮ್ಮೆಟಿಸಲು ಈಗ ಹೊರಹೊಮ್ಮುತ್ತಿರುವ ವಿಷಯಾಧಾರಿತ ವರ್ಗ ಹೋರಾಟಗಳಿಂದ ಮಾತ್ರ ಸಾಧ್ಯ.
ವರ್ಗಾಧಾರಿತ ಪರ್ಯಾಯ
ಕಾರ್ಪೊರೇಟ್ ಶಕ್ತಿಗಳ ವಿರುದ್ಧ ರೈತರು ಹಾಗೂ ಕಾರ್ಮಿಕರ ಒಗ್ಗಟ್ಟು, ಜನಸಮುದಾಯದ ಒಗ್ಗಟ್ಟು ಮತ್ತು ಕಾರ್ಪೊರೇಟ್ ಹಾಗೂ ಕೋಮುವಾದಿ ಶಕ್ತಿಗಳ ವಿರುದ್ಧ ಎಡ, ಪ್ರಜಾಸತ್ತಾತ್ಮಕ ಹಾಗೂ ಜಾತ್ಯತೀತ ಶಕ್ತಿಗಳ ವಿಶಾಲ ಐಕ್ಯತೆಯು ಇವತ್ತು ಭಾರತದ ರಾಷ್ಟ್ರೀಯ ರಾಜಕಾರಣದ ಆಧಾರಸ್ಥಂಭವಾಗಲಿದೆ. ಈ ಹೊಸದಾಗಿ ಹೊರಹೊಮ್ಮುತ್ತಿರುವ ಸನ್ನಿವೇಶಕ್ಕೆ ವಿವಿಧ ರಾಜಕೀಯ ಪಕ್ಷಗಳು ಹೇಗೆ ಸ್ಪಂದಿಸುತ್ತವೆ ಎನ್ನುವುದೇ ಅತ್ಯಂತ ನಿರ್ಣಾಯಕ ಅಂಶವಾಗಿದೆ. ದೇಶದ ತೀವ್ರ ಆರ್ಥಿಕ ಬಿಕ್ಕಟ್ಟು ಹಾಗೂ ರಾಜಕೀಯವಾಗಿ ಏಕಾಂಗಿಯಾಗುವ ಸ್ಥಿತಿಯು ಬಿಜೆಪಿಯನ್ನು ಚುನಾವಣಾ ಸೋಲಿನತ್ತ ತಳ್ಳಲಿದೆ. ಸಂಪತ್ತನ್ನು ಸೃಷ್ಟಿಸುವ ಶಕ್ತಿಗಳ ಬೆಳೆಯುತ್ತಿರುವ ಹೋರಾಟಗಳ ಆಧಾರದಲ್ಲಿ ಬಿಜೆಪಿ ವಿರುದ್ಧದ ಪರ್ಯಾಯವೊಂದು ರಾಷ್ಟ್ರ ಮಟ್ಟದಲ್ಲಿ ರೂಪುಗೊಳ್ಳಲಿದೆ. ಆದ್ದರಿಂದ ರಾಷ್ಟ್ರೀಯ ರಾಜಕಾರಣದಲ್ಲಿ ಬಿಜೆಪಿಗೊಂದು ಪರ್ಯಾಯವನ್ನು ಚುನಾವಣಾ ಸಮರಕ್ಕಿಂತಲೂ ಹೆಚ್ಚಾಗಿ ಸಂಸದಿಯೇತರ ಹೋರಾಟಗಳಿಂದ ಕಟ್ಟಲು ಸಾಧ್ಯವಾಗುತ್ತದೆ.
ಈ ನಿಟ್ಟಿನಲ್ಲಿ, ಕಾರ್ಮಿಕ ವರ್ಗ ಹಾಗೂ ರೈತರು ಆತ್ಮವಿಶ್ವಾಸದೊಂದಿಗೆ ಇನ್ನೂ ಒಟ್ಟಾಗಿ ಸಂಘಟಿತರಾಗಬೇಕಿದೆ ಮತ್ತು ಸಾಮ್ರಾಜ್ಯಶಾಹಿ ಸುಲಿಗೆಯಿಂದ ಎಲ್ಲಾ ವಿಭಾಗದ ಜನರ ಹಿತಾಸಕ್ತಿಯನ್ನು ಕಾಪಾಡುವ ಸಲುವಾಗಿ ದೊಡ್ಡ, ಬಲಿಷ್ಠ ಹೋರಾಟಗಳನ್ನು ನಡೆಸಲು ಯೋಜಿಸಬೇಕಿದೆ. ಸಂಯುಕ್ತ ಕಿಸಾನ್ ಮೋರ್ಚಾ ಹಾಗೂ ಕೇಂದ್ರ ಕಾರ್ಮಿಕ ಸಂಘಟನೆಗಳ ನಡುವಿನ ಸಮನ್ವಯತೆಯನ್ನು ಭಾರತದ ಎಲ್ಲಾ ರಾಜ್ಯ ಹಾಗೂ ಜಿಲ್ಲಾ ಮಟ್ಟದವರೆಗೂ ಮತ್ತು ಆ ಮೂಲಕ ಆರು ಲಕ್ಷ ಹಳ್ಳಿಗಳಿಗೂ ಹಾಗೂ ಪಟ್ಟಣಗಳಿಗೂ ವಿಸ್ತರಿಸಬೇಕು; ಅದು ರೈತ-ಕಾರ್ಮಿಕರ ಒಗ್ಗಟ್ಟನ್ನು ಮುಂದೆ ಕೊಂಡೊಯ್ಯುತ್ತದೆ ಮತ್ತು ಕಾರ್ಪೊರೇಟ್ ಶಕ್ತಿಗಳು ಹಾಗೂ ಸಾಮ್ರಾಜ್ಯಶಾಹಿಯ ವಿರುದ್ಧ ಜನರ ವಿಶಾಲ ಐಕ್ಯತೆಯನ್ನು ಬೆಸೆಯುವ ಉದ್ದೇಶವನ್ನು ಈಡೇರಿಸುತ್ತದೆ. ಇದು, ಸಾಮ್ರಾಜಶಾಹಿ-ನಿರ್ದೇಶಿತ ನವ-ಉದಾರವಾದಿ ವ್ಯವಸ್ಥೆಗೆ ವಿರುದ್ಧದ ಪ್ರಮುಖ ಹೋರಾಟದ ಕೇಂದ್ರವನ್ನಾಗಿ ಭಾರತವನ್ನು ಮಾರ್ಪಡಿಸಲಿದೆ. ಈಗ ಮುಂದುವರಿಯುತ್ತಿರುವ ಆಂದೋಲನವು ಸಾಮ್ರಾಜ್ಯಶಾಹಿ ಶೋಷಣೆಯ ವಿರುದ್ಧ ಕಾರ್ಪೊರೇಟ್-ನಿರ್ದೇಶಿತ ನವ-ಉದಾರವಾದಿ ವ್ಯವಸ್ಥೆಯ ವಿರುದ್ಧ ಭಾರತದ ಒಂದು ಮಹತ್ವದ ಹೊಸ ಘಟ್ಟವಾಗಿ ಪರಿಣಮಿಸಲಿದೆ.
ಅನು: ಟಿ. ಸುರೇಂದ್ರ ರಾವ್