ಸಂಪುಟ ವಿಸ್ತರಣೆಯ ಒಣ ಕಸರತ್ತು

ಎಸ್.ವೈ. ಗುರುಶಾಂತ್

ಸಚಿವ ಸಂಪುಟವನ್ನು ವಿಸ್ತರಣೆಗೆ ಪಟ್ಟಿಹಿಡಿದು ದೆಹಲಿಗೆ ಹೋಗಿದ್ದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಬರಿಗೈಯಲ್ಲಿ ವಾಪಸ್ಸಾಗಿದ್ದಾರೆ. ಸಚಿವಾಕಾಂಕ್ಷಿಗಳಾಗಿ ದೆಹಲಿಯಲ್ಲಿ ಬೀಡುಬಿಟ್ಟಿದ್ದ ಅನೇಕರಿಗೆ ನಿರಾಶೆಯಾಗಿದೆ. ಸಚಿವ ಸಂಪುಟದ ವಿಸ್ತರಣೆಯ ಜೊತೆಯಲ್ಲಿ ಪುನರ‍್ರಚನೆಯ ಪ್ರಸ್ತಾವವು ಬಹಳದಿನಗಳಿಂದ ಚರ್ಚೆಯಾಗುತ್ತಲೇ ಇದೆ. ಅಂತಹವರಿಗೆ ಈ ಮುಂದೂಡಿಕೆ ಒಂದಿಷ್ಟು ಸಮಾಧಾನವನ್ನು ತಂದಿದೆ. ಇದೇ ತಿಂಗಳು 16 ಮತ್ತು 17ರಂದು ವಿಜಯನಗರ ಜಿಲ್ಲೆಯ ಹೊಸಪೇಟೆಯಲ್ಲಿ ನಡೆಯಲಿರುವ ರಾಜ್ಯ ಕಾರ್ಯಕಾರಣಿ ಸಭೆಯ ನಂತರ ಈ ಕುರಿತು ಚಿಂತಿಸೋಣ ಎಂದು ಹೈಕಮಾಂಡ್ ಹೇಳಿ ಬೊಮ್ಮಾಯಿಯವನ್ನು ವಾಪಾಸು ಕಳಿಸಿದೆ.

ಇದನ್ನು ಓದಿ: ಬಿಜೆಪಿ, ಕಾಂಗ್ರೆಸ್ ಗೆ ಕಮ್ಯುನಿಸ್ಟ್ ಸಂಪುಟ ಪಾಠ!

ಹಳೆಯ ಗಾದೆ ಮಾತಿನಂತೆ `ರೋಮ್ ಸಾಮ್ರಾಜ್ಯ ಹೊತ್ತಿ ಉರಿಯುವಾಗ ನೀರೋ ಪೀಟಿಲು ಬಾರಿಸುತ್ತಿದ್ದ’ ಎನ್ನುವಂತೆ ಮುಖ್ಯಮಂತ್ರಿಯವರು ಕರ್ನಾಟಕ ರಾಜ್ಯದಲ್ಲಿ ಕೋಮುದ್ವೇಷದ ಕಿಡಿಗಳು ಸಿಡಿಯುತ್ತಿರುವಾಗ ಮತ್ತು ಕ್ಯಾಬಿನೆಟ್ ಸಚಿವರಿಂದ ಹಿಡಿದು ಪಕ್ಷದ ನಾಯಕರು, ಸಂಘಪರಿವಾರದ ಅಂಗ ಸಂಸ್ಥೆಗಳ ಪ್ರಮುಖರು ಪ್ರತಿನಿತ್ಯವೂ ಕೋಮುದ್ವೇಷ ಹೆಚ್ಚಿಸಿ ಸಾಮರಸ್ಯ ಕೆಡಿಸುವ ಕೃತದಯಗಳಲ್ಲಿ ತೊಡಗಿದ್ದಾರೆ. ಇವರಿಗೆ ವಿವೇಕ ಹೇಳಬೇಕಾದ ಪರಿವಾರದ ಪ್ರಮುಖರು ಕುಮ್ಮಕ್ಕು ನೀಡುತ್ತಿದ್ದಾರೆ. ರಾಜ್ಯದ ಆರ್ಥಿಕತೆಯು ಕುಸಿದಿದೆ. ಹೊಸ ಸಾಧನೆಗಳನ್ನು ಮಾಡಬೇಕಿರುವಾಗ ಮುಖ್ಯಮಂತ್ರಿ ಬೊಮ್ಮಾಯಿ ಯವರು ಕೇವಲ ನವಕರ್ನಾಟಕದ ನಿರ್ಮಾಣಕ್ಕೆ ವಿದೇಶಿ ಸಾಲ, ಹೂಡಿಕೆ ಬಂದರೆ ಸಾಕು ಎನ್ನುವ ಸಮಾಧಾನದಲ್ಲಿ ಇದ್ದಂತೆ ಕಾಣುತ್ತದೆ. ಇಂತಹ ಸನ್ನಿವೇಶದಲ್ಲಿ ಸಚಿವರಾಗಲು ಮುಖ್ಯಮಂತ್ರಿಯವರ ಮೇಲೆ ಸಂಪುಟವನ್ನು ವಿಸ್ತರಿಸಲು ಕೆಲವರು ಸತತ ಒತ್ತಾಯಿಸುತ್ತಲೇ ಇದ್ದಾರೆ. ಕೇವಲ ಒಬ್ಬರಲ್ಲ ಅಧಿಕಾರದಾಹಿಗಳು ಹಲವು ಹನ್ನೊಂದು ನಾಯಕರಿದ್ದಾರೆ. ಅಧಿಕಾರ ಅನುಭವಿಸುವ ಲಾಲಸೆಯಲ್ಲಿ ಮಗ್ನರಾಗಿದ್ದಾರೆ.

ಸಚಿವ ಸಂಪುಟ ವಿಸ್ತರಣೆ ಮತ್ತು ಪುನರ‍್ರಚನೆ ಎನ್ನುವುದು ನುಂಗಲೂ ಆಗದ, ಉಗುಳಲೂ ಬಾರದ ಬಿಸಿ ತುಪ್ಪದಂತೆ ಬೊಮ್ಮಾಯಿ ಅವರ ಬಾಯಲ್ಲಿ ಮಳಲುತ್ತಿದೆ. ರಮೇಶ್ ಜಾರಕಿಹೊಳಿ, ರೇಣುಕಾಚಾರ್ಯ, ಬಸವರಾಜ ಪಾ. ಯತ್ನಾಳ ಅವರನ್ನು ಒಳಗೊಂಡಂತೆ ಹಲವು ಶಾಸಕರು ಸಚಿವ ಹುದ್ದೆಯ ತೀವ್ರ ಆಕಾಂಕ್ಷಿಗಳಾಗಿದ್ದಾರೆ ಮತ್ತು ಮುಖ್ಯಮಂತ್ರಿಯವರ ಮೇಲೆ ಸತತ ಒತ್ತಡವನ್ನು ಹಾಕುತ್ತಿದ್ದಾರೆ. ಅದರಲ್ಲೂ ರಮೇಶ್ ಜಾರಕಿಹೊಳಿ ತಮ್ಮನ್ನು ಸಂಪುಟಕ್ಕೆ ಸೇರಿಸಿಕೊಳ್ಳದೇ ಇದ್ದರೆ ತನ್ನ ಬೆಂಬಲಿಗರೊಂದಿಗೆ ಪಕ್ಷವನ್ನೇ ತೊರೆಯುವ ಬೆದರಿಕೆಯನ್ನು ಪರೋಕ್ಷವಾಗಿ ಹಾಕುತ್ತಲೇ ಬರುತ್ತಿದ್ದಾರೆ. ಇಂತಹ ಕನಿಷ್ಠ 10 ಸಚಿವಾಕಾಂಕ್ಷಿಗಳಿಗೆ ಸ್ಥಾನ ಕಲ್ಪಿಸಿ ಕೊಡಬೇಕೆಂದರೆ ಕೆಲವರನ್ನು ತೆಗೆಯಲೇಬೇಕಾದ ಅನಿವಾರ್ಯತೆಯಿದೆ. ಬಿಜೆಪಿಯ ಹೈಕಮಾಂಡ್ ಚುನಾವಣೆಯನ್ನು ಗಮನದಲ್ಲಿರಿಸಿ ಪಕ್ಷದ ಸಂಘಟನೆ ಮತ್ತು ಹೊಸ ಮುಖಗಳನ್ನು ಪರಿಚಯಿಸಬೇಕು ಎನ್ನುವ ದೃಷ್ಟಿಯಲ್ಲಿ ಕೆ.ಎಸ್.ಈಶ್ವರಪ್ಪ, ಆರ್.ಅಶೋಕ್ ಮುಂತಾದವರನ್ನು ಸಚಿವ ಸ್ಥಾನದಿಂದ ಬಿಡಿಸಿ ಅವರನ್ನು ಪಕ್ಷದ ಸಂಘಟನೆಯ ಕೆಲಸಗಳಿಗೆ ತೊಡಗಿಸಬೇಕು ಎನ್ನುವ ಇಂಗಿತವನ್ನು ಎಂದೋ ಕೊಟ್ಟಾಗಿದೆ. ಆ ಕಾರಣದಿಂದಲೇ ಕೆ.ಎಸ್.ಈಶ್ವರಪ್ಪ ನಂತಹವರು ತಮ್ಮ ಕಟ್ಟರ್ ಹಿಂದುತ್ವವಾದವನ್ನು ಪ್ರದರ್ಶಿಸುತ್ತಾ ಆರ್.ಎಸ್.ಎಸ್. ಅನ್ನು ಮೆಚ್ಚಿಸಲು ಇನ್ನಿಲ್ಲದಂತೆ ಉಗ್ರವಾದಿಗಳಾಗಿ ವರ್ತಿಸುತ್ತಿರುವುದು ಗೊತ್ತಿರುವ ಸಂಗತಿ.

ಇದನ್ನು ಓದಿ: ಸಂಪುಟ ವಿಸ್ತರಣೆ ಬಗ್ಗೆ ಮಾತನಾಡಿದರೆ ನನ್ನ ಸಚಿವ ಸ್ಥಾನ ಹೋಗುತ್ತೆ: ಎಸ್‌ಟಿ ಸೋಮಶೇಖರ್

ಬಿಜೆಪಿಯಲ್ಲಿ ಸಚಿವರ ದಕ್ಷತೆ ಹೆಚ್ಚು ಗಣನೆಗೆ ಬರುವುದಿಲ್ಲ. ಮೇಲಾಗಿ ಮೋದಿ ಸಂಪುಟದಲ್ಲಾಗಲಿ ಅಥವಾ ಬೊಮ್ಮಾಯಿ ಅವರ ಸಂಪುಟದಲ್ಲಾಗಲೀ ಮಂತ್ರಿಗಳು ನಾಮಕಾವಸ್ಥೆ ಹುದ್ದೆ ಅಲಂಕರಿಸಿ ಓಡಾಡುವುದನ್ನು ಬಿಟ್ಟರೆ ಅವರವರ ಇಲಾಖೆಯಲ್ಲಿ ಅತ್ಯುತ್ತಮವಾದ ರೀತಿಯಲ್ಲಿ ಕಾರ್ಯನಿರ್ವಹಿಸಿ ಜನತೆಗೆ ಸೇವೆ ಸಲ್ಲಿಸಲು ತೊಡಗುವುದು ಒಂದು ವಿರಳ ಸಂಗತಿಯಾಗಿ ಬಿಟ್ಟಿದೆ. ಎಲ್ಲವೂ ಕೆಲವರಲ್ಲೇ ಕೇಂದ್ರೀಕರಣಗೊಂಡು ಸಂಘವೇ ಎಲ್ಲವನ್ನೂ ನಿಯಂತ್ರಿಸುತ್ತದೆ, ನಿರ್ದೇಶಿಸುತ್ತದೆ. ಜನತೆಗೆ ಮಂತ್ರಿಗಳಿಂದ ಪರಿಹಾರ ಸಿಗುತ್ತದೆ ಬಿಡುತ್ತದೆಯೋ, ಇಲ್ಲವೋ ಬೇರೆ ವಿಷಯ. ಆದರೆ ತಮಗೆ ಒಂದಿಷ್ಟು ಆದಾಯ ತರುವ ಖಾತೆಗಳು ಅಥವಾ ಸಚಿವರಾಗಿ, ಜಿಲ್ಲೆಯ ಉಸ್ತುವಾರಿಗಳಾಗಿ, ಒಂದಿಷ್ಟು ದುಡ್ಡು ದೋಚುವ ಅವಕಾಶಕ್ಕೆ ಕಾಯುವವರೇ ಹೆಚ್ಚಾಗಿದ್ದಾರೆ.

ವಿಚಿತ್ರವೆಂದರೆ, ಹಿಂದೆ ಯಡಿಯೂರಪ್ಪನವರ ಸಂಪುಟವೇ ಆಗಿರಲಿ ಅಥವಾ ಬೊಮ್ಮಾಯಿ ಅವರ ಆಗಿರಲಿ ಇದುವರೆಗೂ ಬಿಜೆಪಿ ಒಂದು ಸ್ಥಿರವಾದ ಸರ್ಕಾರವನ್ನು, ಸದೃಢವಾದ ಸಂಪುಟವನ್ನು ರಚಿಸುವುದಾಗಿರಲಿ, ಉತ್ತಮ ಆಡಳಿತ ನೀಡುವುದಾಗಲಿ ಆಗಿಲ್ಲ. ಕೇವಲ ಕಾಲಹರಣ ಮತ್ತು ರಾಜ್ಯದ ಲೂಟಿ. ಇವೆರಡೂ ಅಭಾಧಿತವಾಗಿರಲು ಸಮಾಜದ ಒಳಗಡೆಯಲ್ಲಿ ದ್ವೇಷವನ್ನು ಹುಟ್ಟುಹಾಕುವ ಅಪಾಯಕಾರಿ ವರ್ತನೆಗಳು ಸರ್ಕಾರದ ಸಾಧನೆ ಎನ್ನುವಂತೆ ಆಗಿದೆ.

ಸಚಿವ ಸಂಪುಟ ವಿಸ್ತರಿಸುವುದಾಗಲೀ, ಪುನರ್ ಸಂಘಟಿಸುವುದಾಗಲೀ ಅಥವಾ ಯಥಾರೀತಿ ಮುಂದುವರೆಯುವುದು ಕೂಡ ಅತೃಪ್ತಿ ಮತ್ತು ಅಭದ್ರತೆ ಎನ್ನುವುದು ಬಸವರಾಜ ಬೊಮ್ಮಾಯಿ ಅವರಿಗೆ ಕಟ್ಟಿಟ್ಟ ಬುತ್ತಿ. ಬಿಜೆಪಿಗೂ ಸಂಕಷ್ಟವೇ. ಹೀಗಾಗಿ ಹೈಕಮಾಂಡ್ ಕೂಡ ಎಚ್ಚರಿಕೆಯ ಹೆಜ್ಜೆಗಳನ್ನು ಇರಿಸುತ್ತಿದೆ. ಆದರೆ ಅಧಿಕಾರದ ಲಾಲಸೆ, ಗದ್ದುಗೆಯ ಸುತ್ತಸುತ್ತುವ ಪೀಡಕ ಗ್ರಹಗಳೇ ತುಂಬಿರುವಾಗ ಅಂತಿಮವಾಗಿ ಜನತೆಗೆ ಉತ್ತಮ ಆಡಳಿತ ಮರೀಚಿಕೆ.

ದುರ್ಬುದ್ಧಿಯ ಸರಣಿಯಲ್ಲಿ ಈಗ ದೇವರ ಪ್ರಾರ್ಥನೆ!

ಸಂಘ ಪರಿವಾರದ ಖ್ಯಾತೆಗಳು ಈ ವಾರವೂ ಮುಂದುವರಿದಿವೆ ಅಲ್ಪಸಂಖ್ಯಾತರ ಅದರಲ್ಲೂ ವಿಶೇಷವಾಗಿ ಮುಸ್ಲಿಮರ ಮೇಲೆ ನಡೆಸುತ್ತಿರುವ ಸರಣಿ ಧಾಳಿಗಳ ಸಾಲಿನಲ್ಲಿ ಬೆಳಗಿನ ಜಾವ ಪ್ರಾರ್ಥನೆಯ ಅಜಾನ್ ಕೂಗದಂತೆ ನಿರ್ಬಂಧಿಸಬೇಕು ಎನ್ನುವುದು ಸೇರಿದೆ. ಮಸೀದಿಗಳಲ್ಲಿ ಧ್ವನಿವರ್ಧಕದ ಮೂಲಕ ಅಸ್ಸಾಂ ಹೋಗುವುದರ ಬಗ್ಗೆ ಇರುವ ವಿವಾದಗಳು ನ್ಯಾಯಾಲಯದ ಮೆಟ್ಟಿಲನ್ನೂ ಇರುವೆ ಅಲ್ಲಿಂದ ತೀರ್ಪು ಕೂಡ ಬಂದಿವೆ ಎನ್ನುವುದು ನಿಜ ಇಂತಹ ಪ್ರಶ್ನೆಗಳನ್ನು ಅದರ ಜಾರಿ ಮಾಡುವಾಗ ಸರ್ಕಾರಗಳೇ ಸೂಕ್ತವಾದ ಕ್ರಮವಹಿಸುವುದು ಅದರ ಹೊಣೆಗಾರಿಕೆಯಾಗಿದೆ. ಇದ್ದಕ್ಕಿದ್ದಂತೆ ಇದರಲ್ಲಿ ಸರ್ಕಾರೇತರ ಶಕ್ತಿಗಳು ಮಧ್ಯಪ್ರವೇಶಿಸಿ ವಿವಾದಗಳನ್ನು ಹುಟ್ಟಿಸುವುದರ ಅರ್ಥವೇನು? ಸರ್ಕಾರ ತಾನು ಮಾಡಬೇಕಾದ ಕನಿಷ್ಠ ಕರ್ತವ್ಯಗಳನ್ನು ಇಂತಹ ಶಕ್ತಿಗಳಿಗೆ ವಹಿಸಿಕೊಟ್ಟಿದೆಯೇ ಅಥವಾ ಶಾಮಿಲು ಆಗಿದೆಯೇ?

ಇದೇ ಏಪ್ರಿಲ್ 3 ರಿಂದ ರಂಜಾನ್ ಪವಿತ್ರ ಉಪವಾಸ ಆರಂಭಗೊಂಡಿದೆ. ಅಲ್ಲಾಹು ದೇವರ ಸ್ಮರಣೆ, ಧಾರ್ಮಿಕ ವಿಧಿಗಳ ಆಚರಣೆ, ತ್ಯಾಗ, ಸಹಬಾಳ್ವೆಯ ಸಂದೇಶವನ್ನು ಸಾರುವ ಈ ಹಬ್ಬದಲ್ಲಿ ಮಗ್ನರಾಗಿರುವ ಸಮುದಾಯಕ್ಕೆ ಕಿರಿಕಿರಿಯನ್ನು ಉಂಟು ಮಾಡುವ ದುರುದ್ದೇಶ ಹೊರತುಪಡಿಸಿದರೆ ಸಂಘಪರಿವಾರಕ್ಕೆ ಮತ್ತೇನಿದೆ? ಇಂತಹ ದುರ್ಬುದ್ಧಿಯನ್ನು ಹಿಂದೂ ಧರ್ಮವನ್ನು ಒಳಗೊಂಡು ಯಾವ ಮತಧರ್ಮಗಳೂ ಬೋಧಿಸುವುದಿಲ್ಲ ಮತ್ತು ಸಹಿಸುವುದೂ ಇಲ್ಲ. ಅಮಾನವೀಯ, ಅಸಹಿಷ್ಣುತೆಯ ವರ್ತನೆಗಳು ಧರ್ಮವನ್ನಾಗಲಿ ದೇಶವನ್ನಾಗಲಿ ರಕ್ಷಿಸ ಬಲ್ಲವು ಎನ್ನುವುದು ಒಂದು ಶುದ್ಧ ಭ್ರಾಂತಿ ಎನ್ನುವುದನ್ನು ಯಾರಾದರೂ ಅರ್ಥ ಮಾಡಿಕೊಳ್ಳಬೇಕು. ಬದಲಾಗಿ, ಇಂತಹ ಶಕ್ತಿಗಳು ಉದಾತ್ತತೆಯ ಮೌಲ್ಯಗಳನ್ನು, ಸಮಾಜವನ್ನು ಅವನತಿಯತ್ತ ಕೊಂಡೊಯ್ಯ ಬಲ್ಲವು ಎನ್ನುವುದನ್ನು ಭ್ರಾಂತಿಯಲ್ಲಿರುವವರು ಮನವರಿಕೆ ಮಾಡಿಕೊಳ್ಳಬೇಕು.

Donate Janashakthi Media

Leave a Reply

Your email address will not be published. Required fields are marked *