ಸಮ್ಮೇಳನದಲ್ಲಿ ಸರ್ವರನ್ನು ಒಳಗೊಳಿಸದ ಕಸಾಪ ಅಧ್ಯಕ್ಷ ಮಹೇಶ ಜೋಷಿ ಅಹಂಕಾರಕ್ಕೆ ಖಂಡನೆ

ಹಾವೇರಿ: ಸೌಹಾರ್ದ ಪರಂಪರೆಯ ಜಿಲ್ಲೆಯಾದ ಹಾವೇರಿಗೆ ಒದಗಿ ಬಂದಿರುವ 86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಯಶಸ್ವಿಗೊಳಿಸಲು, ಕನ್ನಡ ಸಾಹಿತ್ಯ ಪರಿಷತ್ತು(ಕಸಾಪ) ರಾಜ್ಯ ಘಟಕದ ಅಧ್ಯಕ್ಷ ಮಹೇಶ ಜೋಷಿ ಜಿಲ್ಲೆಯ ಸರ್ವರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳಬೇಕಿತ್ತು. ಅದರಲ್ಲೂ ಪ್ರಮುಖವಾಗಿ ದಲಿತ, ದಮನಿತ, ರೈತ, ಕಾರ್ಮಿಕ, ವಿದ್ಯಾರ್ಥಿ, ಯುವಜನ, ಮಹಿಳಾ, ಲಿಂಗತ್ವ ಅಲ್ಪ ಸಂಖ್ಯಾತ ಹಾಗೂ ಅಲ್ಪಸಂಖ್ಯಾತ ಸಮುದಾಯಗಳ ಬರಹಗಾರರು, ಸಾಹಿತಿಗಳು, ಮುಖಂಡರನ್ನು ಒಳಗೊಳಿಸಲು ಆದ್ಯತೆ ನೀಡಬೇಕಿತ್ತು ಎಂದು ಭಾರತ ಪ್ರಜಾಸತ್ತಾತ್ಮಕ ಯುವಜನ ಫೆಡರೇಷನ್‌ (ಡಿವೈಎಫ್ಐ) ರಾಜ್ಯ ಕಾರ್ಯದರ್ಶಿ ಬಸವರಾಜ ಪೂಜಾರ ಹೇಳಿದರು.

ನಗರದ ಪತ್ರಿಕಾ ಭವನದಲ್ಲಿ ಸಮಾನ ಮನಸ್ಕ ಸಂಘಟನೆಗಳ ವತಿಯಿಂದ ನಡೆದ ಮಾಧ್ಯಮ ಗೋಷ್ಠಿಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಕನ್ನಡ ನಾಡು, ನುಡಿಗಾಗಿ, ನಾಡಿನ ಜನರ ಬದುಕು ಹಸನಾಗಲು ಹಲವಾರು ವರ್ಷಗಳಿಂದ ದುಡಿಯುತ್ತಿರುವವರನ್ನು ಕನಿಷ್ಠ ಸೌಜನ್ಯಕ್ಕೂ ಪರಿಗಣಿಸದಿರುವುದು ಸಹ್ಯವಲ್ಲ. ಸಮ್ಮೇಳನದಲಿ ಗೋಷ್ಟಿಗಳಿಂದ ಒಬ್ಬ ನಿಜವಾದ ನಾಡು ನುಡಿಗಾಗಿ ದುಡಿಯುವವರಿಗೆ, ಸಾಹಿತಿಗಳಿಗೆ ಆಗಬೇಕಾದ್ದೇನಿಲ್ಲ. ಆದರೆ ಪ್ರತಿಭಾಶಾಲಿ, ವಿದ್ವಾಂಸರನ್ನು ಹೊರಗಿಟ್ಟ ಸಮ್ಮೇಳನ ಅದೊಂದು ಆಡಂಬೋಲವಲ್ಲದೇ ಮತ್ತೇನೂ ಆಗದು ಎಂದರು.

ಇದನ್ನು ಓದಿ: ಕನ್ನಡದ ಪರವಾಗಿ ಧ್ವನಿ ಎತ್ತಿ- ನಾಯಕತ್ವ ನೀಡುವ ಅರ್ಹತೆಯನ್ನು ಕಸಾಪ ಕಳೆದುಕೊಂಡಿದೆ

ಜಿಲ್ಲೆಗೆ ಒದಗಿರುವ ಸಾಹಿತ್ಯ ಸಮ್ಮೇಳನ ಯಶಸ್ವಿಗೊಳಿಸುವುದು ನಮ್ಮ ಕರ್ತವ್ಯ ಅದನ್ನು ನಮ್ಮಗಳ ಮಿತಿಯಲ್ಲಿ ನಿರ್ವಹಿಸುತ್ತೇವೆ. ಆದರೇ ನಮ್ಮ ಹಿರಿಯರು ಕಟ್ಟಿದ ಸಾಮರಸ್ಯ, ಸೌಹಾರ್ದತೆಯ ತಾಣವಾದ ಹಾವೇರಿಯಲ್ಲಿ ನಡೆಯುವ ಸಾಹಿತ್ಯ ಸಮ್ಮೇಳನದ ಸಂದರ್ಭದಲ್ಲಿ ನಮ್ಮ ಜಿಲ್ಲೆಯ ಪರಂಪರೆಗೆ ಧಕ್ಕೆ ತರುವ ಕಸಾಪ ಅಧ್ಯಕ್ಷರ ನಿರಾಕರಣೆಯ ಅಹಂಕಾರವನ್ನು ಬಲವಾಗಿ ಖಂಡಿಸುತ್ತೇವೆ ಎಂದರು.

ಈಗಾಗಲೇ ಮಹೇಶ ಜೋಷಿಯವರ ತಾರತಮ್ಯದ ನಿಲುವನ್ನು ಪ್ರತಿರೋಧಿಸಿ, ಹಲವು ಕವಿ, ಬರಹಗಾರ, ಸಾಹಿತಿಗಳು ಸಮ್ಮೇಳನದ ಗೋಷ್ಠಿಗಳನ್ನು ಬಹಿಷ್ಕರಿಸಿದ್ದಾರೆ. ಇದಕ್ಕೆ ನೇರ ಹೊಣೆ ಜೋಶಿಯವರೇ ಆಗಿದ್ದಾರೆ. ಇವರ ನಿಲವು ಕುರಿತು ಅಭಿಪ್ರಾಯ ವ್ಯಕ್ತಪಡಿಸಿದ ಕನ್ನಡ ಸಾಹಿತ್ಯ ಬೆಳವಣಿಗೆಗೆ ಶ್ರಮಿಸಿದ ರಾಜ್ಯದ ಹಿರಿಯ ಸಾಹಿತಿಗಳು, ಪ್ರಗತಿಪರ ಚಿಂತಕರ ಮೇಲೆ ಸುಳ್ಳು ಆರೋಪಗಳನ್ನು ಹೊರೆಸಿ, ಅವಮಾನಿಸುವುದನ್ನು ಸಹಿಸಲು ಸಾಧ್ಯವಿಲ್ಲ.

ಇದನ್ನು ಓದಿ: “ಪಂಪ ಮಹಾಕವಿ ರಸ್ತೆ” ಹೆಸರು ಬದಲಿಸಲು ಮುಂದಾದ ಕಸಾಪ ! ಜೋಷಿ ನಡೆಗೆ ಸಾಹಿತಿಗಳ ವಿರೋಧ

ಪೆಂಡಾಲ್ ಗುತ್ತಿಗೆ ಸಾಬೀತು ಪಡಿಸಲಿ : ಪ್ರೊ. ಪುರುಷೋತ್ತಮ ಬಿಳಿಮಲೆ ಅವರು ಸಮ್ಮೇಳನದಲ್ಲಿ ಮುಸ್ಲಿಂ ವ್ಯಕ್ತಿಗೆ ಶಾಮಿಯಾನ ಗುತ್ತಿಗೆ ಕೊಡಿಸುವ ಕುರಿತು ಮಾತಾಡಿದ್ದರು ಎಂದು ಹೇಳಿರುವ ಜೋಷಿ ಅವರು ಆ ಕುರಿತು ಸಾರ್ವಜನಿಕವಾಗಿ ದಾಖಲೆ ನೀಡಿ ಸಾಬೀತುಗೊಳಿಸಬೇಕು. ಇಲ್ಲವಾದಲ್ಲಿ ಸಾರ್ವಜನಿಕವಾಗಿ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದರು.

ಗೋಷ್ಠಿ ಬಹಿಷ್ಕಾರ:

ಲಿಂಗತ್ವ ಅಲ್ಪಸಂಖ್ಯಾತರ ಒಕ್ಕೂಟದ ರಾಜ್ಯ ಕಾರ್ಯದರ್ಶಿ ಅಕ್ಷತಾ ಕೆ.ಸಿ ಮಾತನಾಡಿ, ಸರ್ವಜನಾಂಗದ ಶಾಂತಿಯ ತೋಟ ಹಾಗೂ ಭಾವೈಕ್ಯತೆಯ ನಾಡಿಗೆ ಹಿರಿಮೆಯಾಗಿರುವ ಹಾವೇರಿ ನೆಲದಲ್ಲಿ ನಡೆಯುತ್ತಿರುವ ಸಮ್ಮೇಳನದಲ್ಲಿ ಪ್ರಮುಖ ಬರಹಗಾರರಿರಿಗೆ, ದಲಿತ ದಮನಿತರಿಗೆ ಮುಖ್ಯ ಗೋಷ್ಠಿಗಳಿಂದ ದೂರ ಇಟ್ಟಿರುವುದು ಸಹಿಸುವುದಿಲ್ಲ ಎಂದರು.

ಲಿಂಗತ್ವ ಅಲ್ಪ ಸಂಖ್ಯಾತರ ವಿಷಯ ಕುರಿತು ಪ್ರಥಮ ಬಾರಿಗೆ ಗೋಷ್ಠಿ ಏರ್ಪಡಿಸಿದ್ದು ಸ್ವಾಗತಾರ್ಹ ಕ್ರಮ. ಆದರೆ ಗೋಷ್ಠಿಯಲ್ಲಿ ಮಾತಾಡಲು ಹಲವು ಕಟ್ಟಳೆಗಳನ್ನು ಹೇರಿ ಅವಕಾಶ ನೀಡಿರುವುದನ್ನು ಖಂಡಿಸಿ ಹಾಗೂ ಸರ್ವರನ್ನೊಳಗೊಳ್ಳದ ನಿಲವನ್ನು ಪ್ರತಿರೋಧಿಸಿ ಗೋಷ್ಠಿಯನ್ನು ಬಹಿಷ್ಕರಿಸುವುದಾಗಿ ಹೇಳಿದರು.

ಹಾವೇರಿಯಲ್ಲಿ ಪ್ರತಿರೋಧ ಸಮಾವೇಶ

ಎಐಟಿಯುಸಿ ರಾಜ್ಯ ಮುಖಂಡರಾದ ಹೊನ್ನಪ್ಪ ಮರೆಮ್ಮನವರ ಮಾತನಾಡಿ, ಜಿಲ್ಲೆಯಲ್ಲಿ ಕಾರ್ಮಿಕರ, ರೈತರ, ಮಹಿಳೆ ಹಾಗೂ ದಲಿತ ಚಳುವಳಿಗಳು ದೊಡ್ಡಮಟ್ಟದಲ್ಲಿ ನಡೆದಿವೆ. ನಮ್ಮ ಜಿಲ್ಲೆಯಲ್ಲಿ ಸಮ್ಮೇಳನ ನಡೆಯುವಾಗ ರೈತರ ಕಾರ್ಮಿಕರ ಬವಣೆಗಳ ಕುರಿತು ಗೋಷ್ಠಿ ಏರ್ಪಡಿಸದಿರುವುದಕ್ಕೆ ಬೇಸರ ವ್ಯಕ್ತಪಡಿಸಿದರು. ಈ ಕುರಿತು ಮುಂಬರುವ ದಿನಗಳಲ್ಲಿ ಹಾವೇರಿಯಲ್ಲಿ ಪ್ರತಿರೋಧ ಸಮಾವೇಶ ನಡೆಸುವ ಕುರಿತು ಚರ್ಚಿಸಲಾಗುವುದು ಎಂದರು.

ಇದನ್ನು ಓದಿ: ಸಾಹಿತ್ಯ ಸಮ್ಮೇಳನದಲ್ಲಿ ತಾರತಮ್ಯ : ಕವಿಗೋಷ್ಠಿಯಿಂದ ಹಿಂದೆ ಸರಿದ ಕವಿಗಳು

ವಕೀಲರಾದ ಎಸ್.ಎಸ್ ಖಾಜಿ ಮಾತನಾಡಿ, ಸಮ್ಮೇಳನದಲ್ಲಿ ಎಲ್ಲರನ್ನು ಒಳಗೊಳಿಸುವ ಬದಲು ಮಹೇಶ ಜೋಷಿ ಅವರು ರಾಜಕಾರಣಿಗಳನ್ನು ಮೆರೆಸುತ್ತಿರುವುದು ಸರಿಯಲ್ಲ. ಈಗಲೂ ಕಾಲ ಮಿಂಚಿಲ್ಲ ಜೋಷಿ ಅವರು ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಲು ಮುಂದಾಗಬೇಕಿದೆ ಎಂದರು.

ಜನ ಸಾಹಿತ್ಯ ಸಮ್ಮೇಳನ: ಮಹೇಶ ಜೋಷಿ ಅವರ ಈ ನಿಲುವನ್ನು ಪ್ರತಿರೋಧಿಸಿ ಜನವರಿ 8 ರಂದು ನಾಡು, ಜನ ಜೀವನ ಕಟ್ಟುವಲ್ಲಿ ಬದ್ದತೆಯಿಂದ ತೊಡಗಿಸಿಕೊಂಡಿರುವ ಸಾಹಿತಿ, ಚಿಂತಕ ಮನಸ್ಸುಗಳು ಒಟ್ಟುಗೂಡಿ ಸರ್ವರನ್ನೊಳಗೊಂಡ ಜನ ಸಾಹಿತ್ಯ ಸಮ್ಮೇಳನವನ್ನು ಬೆಂಗಳೂರಿನಲ್ಲಿ ಆಯೋಜಿಸಿದ್ದಾರೆ. ನಾಡಿನ ಸಾಕ್ಷಿ ಪ್ರಜ್ಞೆಯಾಗಿರುವ ದೇವನೂರು ಮಹಾದೇವ, ಬರಗೂರು ರಾಮಚಂದ್ರಪ್ಪ, ರಾಜೇಂದ್ರ ಚೆನ್ನಿ, ಕುಂವೀ ಸೇರಿದಂತೆ ಅನೇಕ ಹಿರಿಯ ಹಾಗೂ ಕಿರಿಯ ಸಾಹಿತಿಗಳು, ಜೀವಪರ, ಪ್ರಗತಿಪರ ಚಿಂತಕರ ಬೆಂಬಲವೂ ಕೂಡ ವ್ಯಕ್ತವಾಗಿದೆ. ರಾಜ್ಯಾದ್ಯಂತ ಹಾಗೂ ಹಾವೇರಿ ಜಿಲ್ಲೆಯಿಂದಲೂ ಸಾಹಿತಿಗಳು, ಹೋರಾಟಗಾರರು ಆ ಸಮ್ಮೇಳನದಲ್ಲಿ ಭಾಗವಹಿಸುತ್ತಿದ್ದಾರೆ ಎಂದು ಬಸವರಾಜ ಪೂಜಾರ ಮಾಹಿತಿ ನೀಡಿದರು.

ಇದನ್ನು ಓದಿ : ಪೆಂಡಾಲ್ ಹೇಳಿಕೆ : ಸಾಕ್ಷಿ ನೀಡುವಂತೆ ಸವಾಲೆಸೆದ ಬಿಳಿಮಲೆ

ಪತ್ರಿಕಾಗೋಷ್ಠಿಯಲ್ಲಿ ಅಖಿಲ ಭಾರತ ವಕೀಲರ ಸಂಘಟನೆ ಮುಖಂಡರಾದ ನಾರಾಯಣ ಕಾಳೆ, ರೈತ ಸಂಘಟನೆ ಎಐಕೆಎಸ್ ಜಿಲ್ಲಾಧ್ಯಕ್ಷರಾದ ಜಿ.ಡಿ ಪೂಜಾರ, ಯುವ ಮುಖಂಡರಾದ ಮಹಮದಸಾಬ್ ಕಾಲೇಬಾಗ್, ಎಸ್ಎಫ್ಐ ಜಿಲ್ಲಾ ಸಹಕಾರ್ಯದರ್ಶಿ ಬಸವರಾಜ ಭೋವಿ, ಅರುಣ ಕಡಕೋಳ, ಗುಡ್ಡಪ್ಪ ಮಡಿವಾಳರ ಉಪಸ್ಥಿತರಿದ್ದರು.

Donate Janashakthi Media

Leave a Reply

Your email address will not be published. Required fields are marked *