ಬೆಂಗಳೂರು: ರಾಷ್ಟ್ರೀಯ ಶಿಕ್ಷಣ ನೀತಿಯ ಪಠ್ಯಕ್ರಮದಲ್ಲಿ ಕೆಲವು ಅಂಶಗಳ ಸೇರ್ಪಡೆಗೆ ಕರ್ನಾಟಕ ರಾಜ್ಯ ನಿಯೋಜಿಸಿದ 26 ಸದಸ್ಯರ ಸಮಿತಿಯು ತನ್ನ ಶಿಫಾರಸ್ಸನ್ನು ಈಗ ಕೇಂದ್ರ ಸರ್ಕಾರಕ್ಕೆ ನೀಡಿದೆ. ಈಗಿನ ಶಿಕ್ಷಣ ವ್ಯವಸ್ಥೆ ಮಕ್ಕಳನ್ನು ಬೇರಿಲ್ಲದವರಾಗಿ ಮಾಡುತ್ತದೆ, ಹಾಗಾಗಿ ಈ ಬದಲಾವಣೆ ಬೇಕು ಎಂದು ಸಮಿತಿ ಅಭಿಪ್ರಾಯಪಟ್ಟಿದೆ. ಆದರೆ, ಅತ್ಯಂತ ಆಘಾತಕಾರಿ ಬೆಳವಣಿಗೆ ಎಂದರೆ, ಶಾಲೆಗಳಲ್ಲಿ ಕಲಿಸುವ ಸ್ಥಾಪಿತ ವೈಜ್ಞಾನಿಕ ಅಂಶಗಳನ್ನು ಈ ಸಮಿತಿ ಅಲ್ಲಗೆಳೆದಿದೆ. ‘ಪೈಥಾಗರಸ್ ಪ್ರಮೇಯ’ ಹಾಗೂ ‘ಗುರುತ್ವಾಕರ್ಷಣೆ ಕುರಿತ ನ್ಯೂಟನ್ ರ ಸೇಬಿನ ಘಟನೆಯನ್ನು ‘ನಕಲಿ ಸುದ್ದಿ’ ಎಂದು ಈ ಸಮಿತಿಯು ಹೇಳಿದೆ. ಮುಂದುವರೆದು, ಪೈಥಾಗರಸ್ ಹಾಗೂ ಗುರುತ್ವಾಕರ್ಷಣೆ ಸಂಬಂಧಿಸಿದ ಮೂಲಗಳು ವೇದಿಕ ಗಣಿತದಲ್ಲಿಯೆ ದೊರಕುತ್ತವೆ, ಪ್ರಾಚೀನ ಭಾರತದಲ್ಲಿ ಎಲ್ಲವೂ ಇತ್ತು ಎಂದಿರುವುದು ಸುಳ್ಳಿನ ಶಿಫಾರಸ್ಸಾಗಿದೆ.
ಈ ಬಗ್ಗೆ ಹೇಳಿಕೆಯನ್ನು ಬಿಡುಗಡೆಗೊಳಿಸಿರುವ ಆಲ್ ಇಂಡಿಯಾ ಡೆಮಾಕ್ರೆಟಿಕ್ ಸ್ಟೂಡೆಂಟ್ಸ್ ಆರ್ಗನೈಜೇಷನ್(ಎಐಡಿಎಸ್‌ಓ) ರಾಜ್ಯ ಕಾರ್ಯದರ್ಶಿ ಅಜಯ್ ಕಾಮತ್ ಅವರು ಎನ್‌ಇಪಿಯಲ್ಲಿ ಹಲವು ವಿಷಯಗಳ ಸೇರ್ಪಡೆಗಾಗಿ ಕೇಂದ್ರ ಸರ್ಕಾರಕ್ಕೆ ಕರ್ನಾಟಕ ರಾಜ್ಯ ಸಲ್ಲಿಸಲು ಸಿದ್ಧಪಡಿಸಿರುವ ವರದಿ ಅತ್ಯಂತ ಅವೈಜ್ಞಾನಿಕ. ಸತ್ಯಕ್ಕೆ ದೂರವಾದ, ಐತಿಹಾಸಿಕ ಘಟನೆಗಳನ್ನು ತಿರುಚಿರುವ, ಗೊಡ್ಡು ವಿಚಾರಗಳ ಹರಿಬಿಡುವ ಈ ವರದಿಯನ್ನು ರಾಜ್ಯ ಸರ್ಕಾರ ಈ ಕೂಡಲೇ ಹಿಂಪಡೆಯಬೇಕು ಎಂದು ಆಗ್ರಹಿಸಿದ್ದಾರೆ.
ಪ್ರಪಂಚದ ಬೇರೆ ಬೇರೆ ಭಾಗಗಳಿಂದ ದೊರಕಿರುವ ವಿಜ್ಞಾನ, ಸಮಾಜಶಾಸ್ತ್ರ ಇತರೆ ಅಂಶಗಳು ‘ನಕಲಿ’ ಎಂದೂ, ಪುರಾತನ ಭಾರತದ ಜ್ಞಾನವೇ ಬೇರು ಹೊಂದಿರುವಂಥದ್ದು ಮತ್ತು ಶ್ರೇಷ್ಠ ಎಂಬ ರೀತಿಯಲ್ಲಿ ಈ ವರದಿ ಸಿದ್ಧವಾಗಿರುವುದು ರಾಜ್ಯದ ಹಲವು ಶಿಕ್ಷಣ ತಜ್ಞರು, ವಿಜ್ಞಾನಿಗಳು, ಉಪನ್ಯಾಸಕರ ಆತಂಕಕ್ಕೆ ಕಾರಣವಾಗಿದೆ.
ಇತಿಹಾಸ ವಿಭಾಗದಲ್ಲಿ ವಸಾಹತುಶಾಹಿ ಆಡಳಿತದ ಕುರಿತ ಪಾಠಗಳನ್ನು ಓದುವ ಬದಲು ವಿದ್ಯಾರ್ಥಿಗಳು ಭಾರತದ ಪ್ರಾಚೀನ ಜ್ಞಾನಶಾಸ್ತ್ರವನ್ನು ಓದಬೇಕು ಎಂದು ಸಮಿತಿ ಶಿಫಾರಸ್ಸು ಮಾಡಿದೆ. ಯಾವ ‘ಪ್ರಾಚೀನ ಭಾರತದ ಜ್ಞಾನವು’ ಶೋಷಿತ ಜನತೆಯನ್ನು ಶಿಕ್ಷಣದಿಂದ ಸಂಪೂರ್ಣ ದೂರ ಉಳಿಸಿ, ಅದನ್ನು ಕೇವಲ ಉಳ್ಳವರ ಸ್ವತ್ತಾಗಿ ಮಾಡಿತ್ತೋ, ಈಗ ಅದೇ ‘ಜ್ಞಾನ’ ದ ಹೆಸರಿನಲ್ಲಿ ಬದಲಾದ ಪಠ್ಯವನ್ನು ವಿದ್ಯಾರ್ಥಿಗಳು ಓದಬೇಕು ಎಂದು ಹೇಳಿದೆ. ಇದರೊಂದಿಗೆ, ಕಲಿಯುವ 3 ಭಾಷೆಗಳಲ್ಲಿ, ಕಡ್ಡಾಯ ಸಂಸ್ಕೃತ ಕಲಿಕೆಯನ್ನು ಸಮಿತಿಯು ಒತ್ತಾಯಿಸಿದೆ. ಆದರೆ, ಸಂಸ್ಕೃತ ಕಲಿಕೆಯು ದೇಶವನ್ನು ಹಿಂದಕ್ಕೆ ತಳ್ಳುತ್ತದೆ ಎಂದು ಮಹಾನ್ ದಾರ್ಶನಿಕ ಸ್ವಾಮಿ ವಿವೇಕಾನಂದರೇ ಹೇಳುತ್ತಾರೆ.
ಇಂತಹದ್ದೇ ಸುಳ್ಳುಗಳನ್ನು ಒಳಗೊಂಡಿರುವ ಹಲವಾರು ಅಂಶಗಳು ಈ ವರದಿಯಲ್ಲಿ ಸೇರಿವೆ ಎಂದಿರುವ ಅಜಯ್ ಕಾಮತ್ ಅವರು, ಗಮನಕ್ಕೆ ಬಂದ ಅಂಶಗಳನ್ನು ಗಮನಿಸುವುದಾದರೆ, ಅತ್ಯಂತ ಆಘಾತಕಾರಿ ರೀತಿಯಲ್ಲಿ ವರದಿ ಸಿದ್ಧವಾಗಿದೆ ಎಂಬುದು ಸ್ಪಷ್ಟ. ಅಲ್ಲದೆ, ಬಹುಮುಖ್ಯವಾಗಿ ಸ್ಥಾಪಿತ, ವೈಜ್ಞಾನಿಕ ಹಾಗೂ ಐತಿಹಾಸಿಕ ಸತ್ಯಗಳನ್ನು ಈ ವರದಿ ಸಂಪೂರ್ಣ ಮೂಲೆಗುಂಪು ಮಾಡಿರುವುದಲ್ಲದೆ, ಅಲ್ಲಿ ಪ್ರಾಚೀನ ಗೊಡ್ಡು ವಿಚಾರಗಳನ್ನು ತುಂಬುವ ಸಂಚು ರೂಪಿಸಿದೆ. ಈ ವರದಿ ಅನುಷ್ಠಾನಕ್ಕೆ ಬಂದರೆ ಕೆಳಗಿನ ಸಮಸ್ಯೆಗಳಿಗೆ ನಾವು ಸಾಕ್ಷಿಯಾಗುತ್ತೇವೆ.
ಒಂದು, ಸ್ಥಾಪಿತ ಸತ್ಯ ಮತ್ತು ವೈಜ್ಞಾನಿಕ ವಿಶ್ಲೇಷಣೆಗಳನ್ನು ಮರೆಮಾಚುವುದರಿಂದ ಭಾರತದ ನಿಜವಾದ ಇತಿಹಾಸ ಹಾಗೂ ನವೋದಯ ಕಾಲದ ಪ್ರಮುಖ ಚಳುವಳಿಗಳು, ವಿಜ್ಞಾನದಲ್ಲಿನ ಹಲವು ಮಹಾನ್ ಕೊಡುಗೆಗಳನ್ನು ಮೂಲೆಗುಂಪು ಮಾಡಿ, ಭಾರತದ ನಿಜವಾದ ವೈವಿಧ್ಯತೆ ಹಾಗೂ ಭವ್ಯ ಐತಿಹಾಸಿಕ ಬೆಳವಣಿಗೆಯನ್ನು ತಿರುಚಿ, ಹಳೆಯ ಗೊಡ್ಡು ವಿಚಾರಗಳನ್ನೇ ಸತ್ಯ ಎಂದು ಬಿಂಬಿಸುತ್ತದೆ. ಎರಡನೆಯದು, ಇದೇ ವಿಚಾರಗಳನ್ನು ಪಠ್ಯದ ಮೂಲಕ ವಿದ್ಯಾರ್ಥಿಗಳ ನಡುವೆ ಹರಿಬಿಡುವುದರಿಂದ, ಅದು ಅವರ ಆಲೋಚನಾ ಪ್ರಕ್ರಿಯೆ, ಸತ್ಯಾನ್ವೇಷಣೆಯ ತವಕ ಹಾಗೂ ನಿಜವಾದ ಇತಿಹಾಸ ಅರಿಯುವ ಪ್ರಯತ್ನದಿಂದ ಅವರನ್ನು ಸಂಪೂರ್ಣ ದೂರ ಮಾಡಿ, ಅವರ ತಾರ್ಕಿಕ, ವೈಜ್ಞಾನಿಕ ಆಲೋಚನೆಯನ್ನು ಮೊಟಕುಗೊಳಿಸುತ್ತದೆ.
ಈ ಎಲ್ಲ ಕಾರಣಗಳಿಂದ, ಶಿಫಾರಸ್ಸು ಮಾಡಿರುವ ವರದಿಯನ್ನು ರಾಜ್ಯ ಸರ್ಕಾರ ಸಾರಾಸಗಟಾಗಿ ತಿರಸ್ಕರಿಸಿ ಅದನ್ನು ಹಿಂಪಡೆಯಬೇಕು ಮತ್ತು ಶೈಕ್ಷಣಿಕ ರಂಗದಲ್ಲಿ ಕೇವಲ ಸ್ಥಾಪಿತ ಸತ್ಯ, ವೈಜ್ಞಾನಿಕ ಮನೋಭಾವ, ತಾರ್ಕಿಕ ಚಿಂತನೆ ಮತ್ತು ಭಾರತದ ನಿಜವಾದ ಇತಿಹಾಸವನ್ನು ಮಾತ್ರವೇ ಪ್ರೋತ್ಸಾಹಿಸಬೇಕು ಎಂದು ಎಐಡಿಎಸ್‌ಓ ಆಗ್ರಹಿಸಿದೆ.