ಮೋದಿ ಭರವಸೆ ಕೊಟ್ಟಿದ್ದು ಅತಿ ವೇಗದ ಬುಲೆಟ್ ರೈಲು…
ಬಂದದ್ದು ಸೆಮಿ ಹೈಸ್ಪೀಡ್ ಹೊಂದಿರುವ `ವಂದೇ ಭಾರತ್’ ರೈಲು!
ಸಿ.ಸಿದ್ಧಯ್ಯ
ದಕ್ಷಿಣ ಭಾರತದ ಮೊದಲ ಚೆನ್ನೈ-ಬೆಂಗಳೂರು-ಮೈಸೂರು ಮಾರ್ಗದ ‘ವಂದೇ ಭಾರತ್’ ರೈಲಿಗೆ ನವೆಂಬರ್ 11ರಂದು ಬೆಂಗಳೂರಿನ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣದಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಅಧಿಕೃತ ಚಾಲನೆ ನೀಡಿದರು. ದೇಶದಾದ್ಯಂತ ಈಗ ನಾಲ್ಕು ಮಾರ್ಗಗಳಲ್ಲಿ ಒಟ್ಟು ಎಂಟು ವಂದೇ ಭಾರತ್ ರೈಲುಗಳು ಸಂಚರಿಸುತ್ತಿವೆ. ಇವು ಗಂಟೆಗೆ 160 ಕಿಮೀ ವೇಗದಲ್ಲಿ ಚಲಿಸುವ ಸಾಮರ್ಥ್ಯ ಹೊಂದಿದೆಯಂತೆ. (ಕೆಲವು ಮಾದರಿ ಕಾರುಗಳೂ ಗಂಟೆಗೆ 150 ರಿಂದ 200 ಕಿಮಿ ವೇಗದಲ್ಲಿ ಓಡುವ ಸಾಮರ್ಥ್ಯ ಹೊಂದಿವೆ. ಆದರೆ ನಮ್ಮಲ್ಲಿನ ರಸ್ತೆಗಳು ಅದಕ್ಕೆ ಪೂರಕವಾಗಿ ನಿರ್ಮಾಣಗೊಂಡಿಲ್ಲ) ಆದರೆ ಈ ರೈಲುಗಳನ್ನು ದೇಶದ ಎಲ್ಲಾ ಮಾರ್ಗಗಳಲ್ಲೂ ಸರಾಸರಿ 70 ಕಿಮೀ ವೇಗದಲ್ಲಿ ಓಡಿಸಲಾಗುತ್ತಿದೆ. ನಮ್ಮಲ್ಲಿ ವಂದೇ ಭಾರತ್ ರೈಲುಗಳನ್ನು ವೇಗವಾಗಿ ಓಡಿಸಲು ಸಾಧ್ಯವಿರುವಂತಹ ಹಳಿ, ನಿಲ್ದಾಣ ಮತ್ತು ಸಿಗ್ನಲಿಂಗ್ ವ್ಯವಸ್ಥೆಯಂತಹ ಮೂಲಸೌಕರ್ಯಗಳು ಇಲ್ಲದೆ ಇರುವುದೇ ಇವು ವೇಗವಾಗಿ ಓಡದಿರಲು ಪ್ರಮುಖ ಕಾರಣ. ಈ ಎಂಟೂ ರೈಲುಗಳಲ್ಲಿ ಯಾವೊಂದರ ಸರಾಸರಿ ವೇಗವೂ ಗಂಟೆಗೆ 100 ಕಿ.ಮೀ. ಮೀರುವುದಿಲ್ಲ. ಭಾರತದಲ್ಲಿ ಇಂತಹ 400 ಕ್ಕೂ ಹೆಚ್ಚು ರೈಲುಗಳು ಬರಲಿವೆ ಎನ್ನಲಾಗುತ್ತಿದೆ.
ದೆಹಲಿ-ವಾರಾಣಸಿ ಮಧ್ಯೆ ಸಂಚರಿಸುವ ವಂದೇ ಭಾರತ್ ರೈಲು ಮಾತ್ರ ಕೆಲ ನಿಲ್ದಾಣಗಳ ಮಧ್ಯೆ ಗಂಟೆಗೆ 130 ಕಿ.ಮೀ. ವೇಗದಲ್ಲಿ ಓಡುತ್ತದೆ. ಇದರ ಸರಾಸರಿ ವೇಗ 95 ಕಿ.ಮೀ. ಮಾತ್ರ. ಇದು ದೇಶದಲ್ಲಿ ಈಗಾಗಲೇ ಇರುವ ಸೆಮಿಹೈಸ್ಪೀಡ್ ರೈಲು, ದೆಹಲಿ-ಆಗ್ರಾ ಗತಿಮಾನ್ ಎಕ್ಸ್ ಪ್ರೆಸ್‌ನ (ಗಂಟೆಗೆ 160 ಕಿ.ಮೀ. ಗರಿಷ್ಠ ವೇಗ) ವೇಗಕ್ಕಿಂತ ಕಡಿಮೆ.
497 ಕಿಮೀ ಉದ್ದದ ಚೆನ್ನೈ-ಬೆಂಗಳೂರು-ಮೈಸೂರು ಮಾರ್ಗದಲ್ಲಿ ಈಗಾಗಲೇ ಸಂಚರಿಸುತ್ತಿರುವ ಶತಾಬ್ದಿ ರೈಲು 7 ಗಂಟೆ ತೆಗೆದುಕೊಂಡರೆ, ಸಾಮಾನ್ಯ ಎಕ್ಸ್ ಪ್ರೆಸ್ ರೈಲುಗಳು 8-9 ಗಂಟೆ ತೆಗೆದುಕೊಳ್ಳುತ್ತವೆ. ವಂದೇ ಭಾರತ್ ಎಕ್ಸ್ ಪ್ರೆಸ್ ರೈಲು 6.30 ಗಂಟೆ ತೆಗೆದುಕೊಳ್ಳುತ್ತದೆ. ಅಂದರೆ, ಶತಾಬ್ದಿ ಎಕ್ಸ್ ಪ್ರೆಸ್ ಗಿಂತ ವಂದೇ ಭಾರತ್ ಎಕ್ಸ್ ಪ್ರೆಸ್ ನಲ್ಲಿ ಪ್ರಯಾಣಿಸಿದರೆ ಚೆನೈನಿಂದ ಮೈಸೂರಿಗೆ ಅರ್ಧ ಗಂಟೆ ಮಾತ್ರ ಕಡಿಮೆಯಾಗುತ್ತದೆ. ಶತಾಬ್ದಿಯ ಸರಾಸರಿ ವೇಗಕ್ಕಿಂತ, ವಂದೇ ಭಾರತ್ ರೈಲಿನ ಸರಾಸರಿ ವೇಗ 2 ಕಿ.ಮೀ.ನಷ್ಟು ಮಾತ್ರ ಹೆಚ್ಚು. ಶತಾಬ್ದಿಗಿಂತಲೂ ಹೆಚ್ಚಿನ ವೇಗವನ್ನು ನೀಡದ ಮತ್ತು ಪ್ರಯಾಣದ ಅವಧಿಯನ್ನು ಗಣನೀಯ ಪ್ರಮಾಣದಲ್ಲಿ ಕಡಿಮೆ ಮಾಡದ ಈ ವಂದೇ ಭಾರತ್ ಎಕ್ಸ್ ಪ್ರೆಸ್‌ನಿಂದ ಪ್ರಯಾಣಿಕರಿಗೆ ಹೆಚ್ಚೇನೂ ಉಪಯೋಗವಿಲ್ಲ.
160 ಕಿಮೀ ವೇಗದಲ್ಲಿ ಓಡುವ ಸಾಮರ್ಥ್ಯವಿದ್ದರೂ ವಂದೇ ಭಾರತ್ ರೈಲುಗಳನ್ನು ಕಡಿಮೆ ವೇಗದಲ್ಲಿ ಓಡಿಸುತ್ತಿರುವುದಕ್ಕೆ ರೈಲ್ವೆ ಇಲಾಖೆಯ ತಜ್ಞರು ಹಲವು ಕಾರಣಗಳನ್ನು ಪಟ್ಟಿ ಮಾಡಿದ್ದಾರೆ. ಹೀಗೆ ಪಟ್ಟಿ ಮಾಡಲಾದ ತೊಡಕುಗಳನ್ನು ನಿವಾರಿಸದೇ ಇದ್ದರೆ, ಈ ರೈಲುಗಳನ್ನು ವೇಗವಾಗಿ ಓಡಿಸಲು ಸಾಧ್ಯವಿಲ್ಲ.
ಮೈಸೂರು-ಬೆಂಗಳೂರು ನಡುವಿನ ದರ ದುಬಾರಿ:
ಪ್ರಯಾಣಿಕರು ಮೈಸೂರು ಮತ್ತು ಬೆಂಗಳೂರಿನ ನಡುವೆ 35 ರೂಪಾಯಿ ಟಿಕೇಟ್ ಖರೀದಿಸಿ ಪ್ಯಾಸೆಂಜರ್ ರೈಲು ಹತ್ತಿ ಮೂರು ಗಂಟೆಯಲ್ಲಿ ತಲುಪಬಹುದು. 80 ರಿಂದ 95 ರೂಪಾಯಿವರೆಗೆ ಹಣ ಕೊಟ್ಟು ಕಾಚಿಗುಡ ಎಕ್ಸ್ ಪ್ರೆಸ್, ರಾಜ್ಯ ರಾಣಿ ಎಕ್ಸ್ ಪ್ರೆಸ್ ಮುಂತಾದ ಎಕ್ಸ್ ಪ್ರೆಸ್ ರೈಲುಗಳಲ್ಲಿ ಪ್ರಯಾಣಿಸಿದರೆ ಎರಡೂವರೆ ಗಂಟೆಯಲ್ಲಿ ಈ ಅಂತರವನ್ನು ತಲುಪಬಹುದು. ಅಬ್ಬರದ ಪ್ರಚಾರದ ಮೂಲಕ ನಮ್ಮ ಪ್ರಧಾನಿ ಮೋದಿ ಅವರು ಉದ್ಘಾಟನೆ ಮಾಡಿದ ವಂದೇ ಭಾರತ್ ರೈಲು ಮೈಸೂರಿನಿಂದ ಬೆಂಗಳೂರು ತಲುಪಲು ಒಂದು ಗಂಟೆ ಐವತ್ತು ನಿಮಿಷ ಬೇಕಾಗುತ್ತದೆ. ಈ ಮಾರ್ಗದಲ್ಲಿ ಈಗಾಗಲೇ ಸಿರಿವಂತರಿಗೆ ಶತಾಬ್ದಿ ಎಕ್ಸ್ ಪ್ರೆಸ್ ರೈಲಿನ ಸಂಚಾರವಿದೆ. ವಂದೇ ಭಾರತ್ ರೈಲಿನಲ್ಲಿ ಪ್ರಯಾಣಿಸಿದರೆ ಶತಾಬ್ದಿ ಪ್ರಯಾಣಕ್ಕಿಂತ 10 ನಿಮಿಷಗಳ ಉಳಿತಾಯವಷ್ಟೆ. ವಂದೇ ಭಾರತ್ ರೈಲಿನ ಟಿಕೆಟ್ ದರ 368 ಮತ್ತು 768 ರೂಪಾಯಿಗಳಂತೆ. ಸಿರಿವಂತರು ಇಷ್ಟಪಡುವ ಎಕಾನಮಿ ಕ್ಲಾಸ್ ಮತ್ತು ಎಕ್ಸಿಕ್ಯೂಟಿವ್ ಕ್ಲಾಸ್ ಮಾತ್ರ. ಈ ಎರಡೂ ಎಕ್ಸ್ ಪ್ರೆಸ್ ರೈಲುಗಳಲ್ಲಿ ಸಾಮಾನ್ಯರ ಕೈಗೆಟುಕುವ ದರದ ಸಾಮಾನ್ಯ ದರ್ಜೆಯ ಬೋಗಿಗಳಿಲ್ಲ. ಸಾಮಾನ್ಯರ ಕೈಗೆಟುಕದ, ಸಿರಿವಂತರಿಗಾಗಿ ತಂದಿರುವ ಐಷಾರಾಮಿ ವ್ಯವಸ್ಥೆ ಹೊಂದಿರುವ ವಂದೇ ಭಾರತ್ ರೈಲುಗಳಿವು.
ವೇಗವಾಗಿ ಚಲಿಸಲು ಹಲವು ತೊಡಕುಗಳು:
ವಂದೇ ಭಾರತ್ ಎಕ್ಸ್ ಪ್ರೆಸ್ ರೈಲುಗಳನ್ನು, ಸಾಮಾನ್ಯ ಲೋಕೊಮೋಟಿವ್ ಎಂಜಿನ್ ರೈಲುಗಳನ್ನು ಓಡಿಸುವ ಮಾರ್ಗದಲ್ಲೇ ಓಡಿಸಬಹುದು. ಆದರೆ, ರೈಲುಮಾರ್ಗವು ನೇರವಾಗಿ ಇರಬೇಕು. ರೈಲುಮಾರ್ಗವು ನೇರವಾಗಿ ಇರದೇ ಇದ್ದರೆ ಮತ್ತು ತಿರುವುಗಳಿಂದ ಕೂಡಿದ್ದರೆ ಇವುಗಳನ್ನು ವೇಗವಾಗಿ ಓಡಿಸಲು ಸಾಧ್ಯವಿಲ್ಲ. ತಿರುವುಗಳಲ್ಲಿ ಈ ರೈಲುಗಳು ವೇಗವಾಗಿ ಓಡಿದರೆ, ಹಳಿತಪ್ಪುವ ಮತ್ತು ಉರುಳುವ ಅಪಾಯವಿರುತ್ತದೆ. ಈಗಾಗಲೇ ಇರುವ ಮಾರ್ಗಗಳಲ್ಲೇ ಇವು ಸಂಚರಿಸುತ್ತಿರುವುದರಿಂದ ಗರಿಷ್ಠ ವೇಗ ಸಾಧ್ಯವಾಗುತ್ತಿಲ್ಲ.
ರೈಲು ಮಾರ್ಗವು ಸಾಗುವ ಪ್ರದೇಶವು ಹಳ್ಳದಿಣ್ಣೆಗಳಿಂದ ಕೂಡಿದ್ದರೆ, ಮಾರ್ಗವೂ ಉಬ್ಬು-ತಗ್ಗಾಗಿರುತ್ತದೆ. ಅಂತಹ ಮಾರ್ಗದಲ್ಲಿ ಕಡಿಮೆ ವೇಗದ ರೈಲುಗಳು ಯಾವುದೇ ಅಪಾಯವಿಲ್ಲದೇ ಸಂಚರಿಸಬಹುದು. ಆದರೆ, ವೇಗದ ರೈಲುಗಳು ವೇಗವಾಗಿ ಸಂಚರಿಸಿದರೆ ಹಳಿತಪ್ಪುವ ಅಪಾಯವಿರುತ್ತದೆ. ಮೈಸೂರು-ಬೆಂಗಳೂರು-ಚೆನ್ನೈ ಮಾರ್ಗವೂ ಈ ರೀತಿಯ ತಿರುವು ಮತ್ತು ಉಬ್ಬು-ತಗ್ಗುಗಳಿಂದ ಕೂಡಿದೆ. ಹೀಗಾಗಿ ವಂದೇ ಭಾರತ್ ರೈಲನ್ನು ಗರಿಷ್ಠ ವೇಗದಲ್ಲಿ ಓಡಿಸಲು ಸಾಧ್ಯವಾಗುವುದಿಲ್ಲ.
ದೇಶದಲ್ಲಿರುವ ರೈಲುಮಾರ್ಗಗಳಿಗೆ ಬೇಲಿ ವ್ಯವಸ್ಥೆ ಇಲ್ಲ. ದೆಹಲಿ-ಆಗ್ರಾ ಮಧ್ಯೆ ಸಂಚರಿಸುವ ಗತಿಮಾನ್ ರೈಲಿಗೆ ಅನುಕೂಲ ಮಾಡಿಕೊಡುವ ಉದ್ದೇಶದಿಂದ 90 ಕಿ.ಮೀ.ನಷ್ಟು ಅಂತರದ ಮಾರ್ಗಕ್ಕೆ ಮಾತ್ರ ಎರಡೂ ಬದಿಯಲ್ಲಿ ಬೇಲಿ ಹಾಕಲಾಗಿದೆ. ಜನರು, ಜಾನುವಾರುಗಳು ಮತ್ತು ಪ್ರಾಣಿಗಳು ಈ ಬೇಲಿಯನ್ನು ದಾಟಿ ಬರುವ ಸಾಧ್ಯತೆ ಇಲ್ಲದೇ ಇರುವ ಕಾರಣ ರೈಲು ವೇಗವಾಗಿ ಸಂಚರಿಸಲು ಸಾಧ್ಯವಾಗುತ್ತದೆ. ಆದರೆ, ವಂದೇ ಭಾರತ್ ರೈಲುಗಳು ಸಂಚರಿಸುತ್ತಿರುವ ಮಾರ್ಗಗಳಲ್ಲಿ ಇಂತಹ ಬೇಲಿಯ ವ್ಯವಸ್ಥೆ ಇಲ್ಲ. ಬೇಲಿ ವ್ಯವಸ್ಥೆ ಇಲ್ಲದೇ ಇರುವ ಮಾರ್ಗಗಳಲ್ಲಿ ವಂದೇ ಭಾರತ್ ಎಕ್ಸ್ಪ್ರೆಸ್ ರೈಲಿನ ವೇಗಕ್ಕೆ ನಿರ್ಬಂಧ ಹೇರಲಾಗಿದೆ. ಕಳೆದ ಒಂದು ತಿಂಗಳ ಅವಧಿಯಲ್ಲಿ ಜಾನುವಾರುಗಳಿಗೆ ವಂದೇ ಭಾರತ್ ರೈಲುಗಳು ಡಿಕ್ಕಿ ಹೊಡೆದ ಮೂರು ಪ್ರಕರಣಗಳು ವರದಿಯಾಗಿದ್ದವು.
ದೇಶದ ರೈಲು ಮಾರ್ಗಗಳು ಹಾದುಹೋಗುವ ಪ್ರಮುಖ ನಿಲ್ದಾಣಗಳಲ್ಲಿ ರೈಲುಗಳು ಬಹುತೇಕ ಸಂದರ್ಭದಲ್ಲಿ ಹಳಿ ಬದಲಾವಣೆ ಮಾಡಬೇಕಾಗುತ್ತದೆ. ಬಹುತೇಕ ಸಂದರ್ಭದಲ್ಲಿ ಹಳಿ ಬದಲಾವಣೆ ಮಾಡುವಾಗ ರೈಲುಗಳ ವೇಗ ಗಂಟೆಗೆ 10 ಕಿ.ಮೀ. ಗಿಂತಲೂ ಕಡಿಮೆ ಇರಬೇಕು. ವಂದೇ ಭಾರತ್ ರೈಲುಗಳೂ ಈ ನಿಲ್ದಾಣಗಳನ್ನು ಹಾದು ಹೋಗಬೇಕಿರುವ ಕಾರಣ, ಅವೂ ಸಹ ಕಡಿಮೆ ವೇಗದಲ್ಲೇ ಹಳಿ ಬದಲಾವಣೆ ಮಾಡಬೇಕಾಗುತ್ತದೆ. ಹಳಿ ಬದಲಾವಣೆ ಮಾಡದೆಯೇ ನಿಲ್ದಾಣಗಳನ್ನು ಹಾದುಹೋಗುವಂತೆ ವ್ಯವಸ್ಥೆ ಮಾಡಿದರಷ್ಟೇ, ಈ ರೈಲುಗಳು ಉತ್ತಮ ವೇಗವನ್ನು ಕಾಯ್ದುಕೊಳ್ಳಲು ಸಾಧ್ಯ. ಕಡಿಮೆ ವೇಗದ ರೈಲುಗಳನ್ನು ಹಿಂದಿಕ್ಕಿ ಹೋಗಲೂ ಸಾಧ್ಯವಿಲ್ಲದೇ ಇರುವ ಕಾರಣ ವಂದೇ ಭಾರತ್ ರೈಲುಗಳು ವೇಗವನ್ನು ಕಾಯ್ದುಕೊಳ್ಳಲು ಸಾಧ್ಯವಿಲ್ಲ.
ರೈಲು ನಿಲ್ದಾಣಗಳಲ್ಲಿ ಜನರು ಒಂದು ಪ್ಲಾಟ್‌ಫಾರ್ಮ್ನಿಂದ ಮತ್ತೊಂದು ಪ್ಲಾಟ್‌ಫಾರ್ಮ್ಗೆ ಹೋಗಲು ಸಾಮಾನ್ಯವಾಗಿ ಮೇಲ್ಸೇತುವೆಯನ್ನು ನಿರ್ಮಿಸಲಾಗಿರುತ್ತದೆ. ಆದರೂ ಜನರು ಹಳಿಗಳನ್ನು ದಾಟಿಕೊಂಡೇ ಒಂದು ಪ್ಲಾಟ್‌ಫಾರ್ಮ್ನಿಂದ ಮತ್ತೊಂದು ಪ್ಲಾಟ್‌ಫಾರ್ಮ್ಗೆ ಹೋಗುವುದು ಸಾಮಾನ್ಯ. ಹೀಗಾಗಿಯೇ ರೈಲು ನಿಲ್ದಾಣವನ್ನು ಹಾದುಹೋಗುವಾಗ ರೈಲುಗಳ ವೇಗವನ್ನು ತಗ್ಗಿಸುವಂತೆ ಸೂಚಿಸಲಾಗುತ್ತದೆ. ವಂದೇ ಭಾರತ್ ಸೇರಿದಂತೆ ಎಲ್ಲಾ ಸೆಮಿ ಹೈಸ್ಪೀಡ್ ರೈಲುಗಳಿಗೂ ಇದು ಅನ್ವಯವಾಗುತ್ತದೆ. ಹೀಗಾಗಿಯೇ ವಂದೇ ಭಾರತ್ ರೈಲುಗಳೂ ಇಂತಹ ನಿಲ್ದಾಣವನ್ನು ಹಾದುಹೋಗುವಾಗ ವೇಗವನ್ನು ತಗ್ಗಿಸುತ್ತವೆ. ಈ ಕಾರಣದಿಂದ ಅವುಗಳು ಉತ್ತಮ ವೇಗ ಕಾಯ್ದುಕೊಳ್ಳಲು ಸಾಧ್ಯವಾಗುವುದಿಲ್ಲ. ಇದರಿಂದಾಗಿ ಅವುಗಳ ಸರಾಸರಿ ವೇಗ ಕಡಿಮೆಯಾಗುತ್ತದೆ.
ಹಾಗಿದ್ದರೆ, ಇಷ್ಟೊಂದು ಪ್ರಚಾರ, ಇದೊಂದು ಮೋದಿಯವರ ದೊಡ್ಡ ಸಾಧನೆ ಎಂಬಂಥ ಮಾತುಗಳೆಲ್ಲ ಈಗಲೇ ಯಾಕೆ? ರೈಲುಗಳು 160 ಕಿಮೀ ವೇಗದಲ್ಲಿ ಚಲಿಸಲು ಅನುಕೂಲವಾದ ಮೂಲಸೌಕರ್ಯ ಒದಗಿಸಿದ ನಂತರ ಈ ರೀತಿಯ ಪ್ರಚಾರ ಮಾಡಿದ್ದರೆ ಅದಕ್ಕೊಂದು ಬೆಲೆ ಸಿಗುತ್ತಿತ್ತು.