ಗಂಭೀರ ಕೋವಿಡ್ ಪರಿಸ್ಥಿತಿಯನ್ನು ʻʻವ್ಯವಸ್ಥೆಯ ಕುಸಿತʼʼ ಎಂದೋ, ಪ್ರಭುತ್ವದ ವಿಫಲತೆಯೆಂದೋ ತಿಪ್ಪೆ ಸಾರಿಸುವ ಪ್ರಯತ್ನಕ್ಕಿಂತ ಹೆಚ್ಚಾಗಿ, ಈ ಪರಿಸ್ಥಿತಿಗೆ ಸರ್ಕಾರವನ್ನು ಹೊಣೆ ಮಾಡುವಂತಿಲ್ಲ ಎಂಬ ಒಂದು ಕಥನವನ್ನು ಸರ್ಕಾರದ ಬೆಂಬಲಿಗರು ಹುಟ್ಟು ಹಾಕಿರುವುದು ಕಳವಳಕಾರಿ. ವಾಸ್ತವವಾಗಿ ನಾವೀಗ ಪ್ರಭುತ್ವವನ್ನು ಉತ್ತರದಾಯಿಯನ್ನಾಗಿ ಮಾಡಲಾಗದ ನಮ್ಮ ಅಸಮರ್ಥತೆಯಿಂದಾಗಿ ನಮ್ಮ ಸುತ್ತಮುತ್ತ ಕಾಣುತ್ತಿರುವುದು ‘ಸಾಮಾಜಿಕ ಕೊಲೆ’ ಎನ್ನಬಹುದಾದ್ದನ್ನು. ಆಮ್ಲಜನಕದ ಕೊರತೆಯಿಂದಾಗಿ ಸಂಭವಿಸುತ್ತಿರುವ ಸಾವುಗಳು ʻʻನರಮೇಧಕ್ಕಿಂತ ಕಡಿಮೆಯಿಲ್ಲʼʼ ಎಂದು ಅಲಹಾಬಾದ್ ಹೈಕೋರ್ಟ್ ವ್ಯಕ್ತಪಡಿಸಿದ ಕಟು ಅಭಿಪ್ರಾಯದಿಂದಷ್ಟೇ ತೃಪ್ತಿಪಡಬೇಕಾಗಿದೆ ಎನ್ನುತ್ತಾರೆ ನಿಸ್ಸೀಮ್ ಮನ್ನತ್ತುಕಾರನ್ ಈ ಲೇಖನದಲ್ಲಿ. ಇವರು ಕೆನಡಾದ ಡಲ್‍ಹೌಸಿ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕರು.
ಅನುವಾದ: ಕೆ.ಎಂ.ನಾಗರಾಜ್
ಜನರನ್ನು ಕ್ರೂರಿಗಳಿಗಷ್ಟೇ ಇಷ್ಟಪಡುವ ಪರಿಸ್ಥಿತಿಗಳಿಗೆ ಒಳಪಡಿಸಿದಾಗ, ಅವರು ಬಂಡಾಯವೇಳದೆ ಇನ್ನೇನು ಮಾಡಲು ಸಾಧ್ಯ, ಹಾಗೆ ಏಳದಿದ್ದರೆ ಕ್ರೌರ್ಯಕ್ಕೆ ಬಲಿಯಾಗಬೇಕು ಎಂದಿದ್ದರು ಫ್ರೆಡ್ರಿಕ್ ಎಂಗೆಲ್ಸ್.
ಭಾರತದಲ್ಲಿ ಈಗ ಕಾಣುತ್ತಿರುವ ದೃಶ್ಯಗಳು ಪ್ರಳಯಾಂತಕಾರಿ ಸ್ವರೂಪದವು. ವೈದ್ಯಕೀಯ ಚಿಕಿತ್ಸೆ ದೊರೆಯದ ಕಾರಣದಿಂದಾಗಿ ತನ್ನ ಕುಟುಂಬದ ಒಂದು ಜೀವ ಹೋಯಿತೆಂದು ಒಬ್ಬ ನಾಗರಿಕ ಆಸ್ಪತ್ರೆ ಸಿಬ್ಬಂದಿಯನ್ನು ಥಳಿಸುತ್ತಾನೆಂದರೆ, ಅಥವ ಒಬ್ಬ ನಾಗರಿಕ ಫುಟ್‌ಪಾತ್‌ನಲ್ಲಿ ಆಮ್ಲಜನಕ ಸಿಲಿಂಡರ್‌ನೊಂದಿಗೆ ಉಸಿರಾಡಲು ಒದ್ದಾಡುತ್ತಾನೆಂದರೆ, ಅದೊಂದು ಬಹುಸ್ತರಗಳ ಬಿಕ್ಕಟ್ಟು ಎಂದೇ ಹೇಳಬೇಕು. ಜನರು ಹೈರಾಣಾಗಿದ್ದಾರೆ.
ದಿಗಿಲುಗೊಳಿಸುವ ವ್ಯಾಖ್ಯಾನಗಳು
ಕೊರೊನಾ ಹರಡಿದ ಪರಿ ಮತ್ತು ಪರಿಣಾಮವಾಗಿ ಒಂದು ಅಲ್ಲೋಲ ಕಲ್ಲೋಲವೇ ಸೃಷ್ಟಿಯಾಗಿದೆ. ಪರಿಸ್ಥಿತಿ ಗಂಭೀರವಾಗಿದೆ. ಆದರೆ, ಅದನ್ನು “ವ್ಯವಸ್ಥೆಯ ಕುಸಿತ” ಎಂದೋ, ಪ್ರಭುತ್ವದ ವಿಫಲತೆಯೆಂದೋ ತಿಪ್ಪೆ ಸಾರಿಸುವ ಪ್ರಯತ್ನಕ್ಕಿಂತ ಹೆಚ್ಚಾಗಿ, ಈ ಪರಿಸ್ಥಿತಿಗೆ ಸರ್ಕಾರವನ್ನು ಹೊಣೆ ಮಾಡುವಂತಿಲ್ಲ ಎಂಬ ಒಂದು ಕಥನವನ್ನು ಸರ್ಕಾರದ ಬೆಂಬಲಿಗರು ಹುಟ್ಟು ಹಾಕಿರುವುದು ಅತ್ಯಂತ ಕಳವಳಕಾರಿ.
ಇದು, ಭಾರತದ ಪ್ರಜಾಪ್ರಭುತ್ವದ ಮೇಲೆ ಗಂಭೀರ ದುಷ್ಪರಿಣಾಮಗಳನ್ನು ಬೀರುವ ಕಥನ..
ಕಾರ್ಮಿಕ ವರ್ಗದ ಸಿದ್ಧಾಂತವನ್ನು ರೂಪಿಸಿದ ಕಾರ್ಲ್ ಮಾರ್ಕ್ಸ್‌ರವರ ಸಹವರ್ತಿಯಾಗಿದ್ದ ಫ್ರೆಡ್ರಿಕ್ ಎಂಗೆಲ್ಸ್, ಹತ್ತೊಂಭತ್ತನೇ ಶತಮಾನದ ಇಂಗ್ಲೆಂಡಿನ ಕಾರ್ಮಿಕರ ಸ್ಥಿತಿ-ಗತಿಗಳ ಬಗ್ಗೆ ಹೇಳುತ್ತ, ಕಾರ್ಮಿಕರ ಕೆಲಸದ ಸ್ಥಳದಲ್ಲಿ ಮತ್ತು ಅವರ ವಸತಿ, ಹೊಟ್ಟೆ, ಬಟ್ಟೆ, ನೈರ್ಮಲ್ಯ ಮುಂತಾದವುಗಳಿಗೆ ಸಂಬಂಧಿಸಿದಂತೆ ಅಲ್ಲಿನ ಆಳುವ ವರ್ಗ ಮತ್ತು ಪ್ರಭುತ್ವ ಎಂತಹ ಭೀಕರ ಕೆಲಸದ ಮತ್ತು ಬದುಕಿನ ಪರಿಸ್ಥಿತಿಗಳನ್ನು ಸೃಷ್ಟಿಸಿದ್ದರು ಎಂದರೆ, ಕಾರ್ಮಿಕರು ಅನಾರೋಗ್ಯದಿಂದ ನರಳಿ ನರಳಿ ಅಕಾಲ ಮರಣಕ್ಕೆ ತುತ್ತಾಗುತ್ತಿದ್ದರು ಎಂದಿದ್ದರು. ಎಂಗೆಲ್ಸ್ ಈ ರೀತಿಯ ಸಾವುಗಳನ್ನು “ಸಾಮಾಜಿಕ ಕೊಲೆ” ಎಂದು ಕರೆಯುತ್ತಾರೆ. ಇದು ಒಬ್ಬ ವ್ಯಕ್ತಿ ಮಾಡುವ ಕೊಲೆಯಂತೆಯೇ, ಒಂದೇ ವ್ಯತ್ಯಾಸವೆಂದರೆ ಈ ಕೊಲೆ “ಮರೆಮಾಚಲ್ಪಟ್ಟಿರುತ್ತದೆ” ಏಕೆಂದರೆ, ಈ ಕೊಲೆಗಳು ಕಣ್ಣಿಗೆ ಕಾಣಿಸುವುದಿಲ್ಲ, ಕೊಲೆಗಾರರನ್ನು ಯಾರೂ ಕಣ್ಣಾರೆ ನೋಡಿರುವುದಿಲ್ಲ. ಅವು “ಸಹಜ ಸಾವು”ಗಳಾಗಿಯೇ ಕಾಣುತ್ತವೆ.
ಇದನ್ನು ಓದಿ: ಪಾಠ ಕಲಿಯಲು ನಿರಾಕರಿಸುವ ಈ ಸರ್ಕಾರ ಜನತೆಯ ಮತ್ತು ದೇಶದ ದುರಂತ
ನಾವೀಗ ಪ್ರಭುತ್ವವನ್ನು ಉತ್ತರದಾಯಿಯನ್ನಾಗಿ ಮಾಡಲಾಗದ ನಮ್ಮ ಅಸಮರ್ಥತೆಯಿಂದಾಗಿ ನಮ್ಮ ಸುತ್ತಮುತ್ತ ಕಾಣುತ್ತಿರುವುದು ಈ ಸಾಮಾಜಿಕ ಕೊಲೆಯನ್ನೇ. ಸಾಂಕ್ರಾಮಿಕ ರೋಗಗಳಿಂದ ಸಾವಿಗೀಡಾಗುತ್ತಿದ್ದ 1840ರ ದಶಕದ ಎಂಗೆಲ್ಸರ ಇಂಗ್ಲೆಂಡಿಗೂ, ಈಗಿನ ಭಾರತಕ್ಕೂ ಇರುವ ಏಕೈಕ ವ್ಯತ್ಯಾಸವೆಂದರೆ, ಈ ಬಾರಿಯ ಕೋವಿಡ್ ಎರಡನೆಯ ಅಲೆಯು ಕೇವಲ ದುರ್ಬಲ ಜನವಿಭಾಗಗಳನ್ನಷ್ಟೇ ಬೇಟೆಯಾಡಿಲ್ಲ. ಹಾಗಾಗಿ, ಇನ್ನು ಮುಂದೆ ಈ ಸಾವುಗಳು, ಅಗೋಚರವಾಗುವುದಿಲ್ಲ.
ಪ್ರಭುತ್ವದ ಕ್ರಿಯೆಗಳು–ಕ್ರಮಗಳು
ಆದರೆ, ಭಾರತದಲ್ಲಿ ವಕ್ಕರಿಸಿದ ಮೊದಲ ಕೋವಿಡ್ ಅಲೆಯ ಸಂದರ್ಭದಲ್ಲಿ ಲಾಕ್‌ಡೌನ್ ಘೋಷಣೆ ಮಾಡಿದಾಗ, ಅನ್ಯ ಮಾರ್ಗವಿಲ್ಲದೆ ತಮ್ಮ ತಮ್ಮ ಊರು ಸೇರಿಕೊಳ್ಳಲು ಕಾಲ್ನಡಿಗೆಯಲ್ಲಿ ಸಾವಿರಾರು ಕಿಲೋಮೀಟರ್ ದೂರ ಕ್ರಮಿಸಿದ ಲಕ್ಷ ಲಕ್ಷ ಅಂತರ-ರಾಜ್ಯ ವಲಸೆ ಕಾರ್ಮಿಕರ ದುಃಸ್ಥಿತಿ ಅಗೋಚರವಾಗಿಯೇ ಉಳಿಯಿತು. ಅದೊಂದು ಸಾಮಾಜಿಕ ಕೊಲೆಯ ಪಕ್ಕಾ ಪ್ರಕರಣವೇ. ಕಾರ್ಮಿಕರು ತಾವಾಗಿಯೇ ಅಂತಹ ತೊಂದರೆ ತೆಗೆದುಕೊಂಡರು ಎಂಬ ಕಥನದ ಮೂಲಕ ಅವರ ದುಃಸ್ಥಿತಿಯನ್ನು ಸಮರ್ಥಿಸಿಕೊಳ್ಳಲಾಯಿತು. ಅದೇ ಧಾಟಿಯಲ್ಲಿ, ಕೋವಿಡ್ ಎರಡನೇ ಅಲೆಗೆ ಸ್ವತಃ ಜನರೇ ಕಾರಣಕರ್ತರು; ತಮ್ಮ ಬೇಜವಾಬ್ದಾರಿತನದ ಮೂಲಕ ಅವರೇ ಅದನ್ನು ಮೈಮೇಲೆ ಎಳೆದುಕೊಂಡರು; ಅವರೇ ಅದನ್ನು ಅನುಭವಿಸಲಿ ಎಂಬ ಪ್ರತಿಕ್ರಿಯೆಯೆಗಳ ಮೂಲಕ ಹೊಣೆಗಾರಿಕೆಯನ್ನು ಜನರ ತಲೆಗೆ ಕಟ್ಟಲಾಗುತ್ತಿದೆ. ವಿಪರ್ಯಾಸವೆಂದರೆ, ಮಹಾಭಾರತ ಯದ್ಧದ ಗೆಲುವಿನ ಕೀರ್ತಿಯನ್ನು ಶ್ರೀಕೃಷ್ಣನಿಗೆ ಅರ್ಪಿಸಿದ ರೀತಿಯಲ್ಲಿ, ಜನವರಿಯಲ್ಲಿ ನಡೆದ ವಿಶ್ವ ಆರ್ಥಿಕ ಚಾವಡಿಯ ಮುಂದೆ ಕೋವಿಡ್ ಯುದ್ಧವನ್ನು ಗೆದ್ದ ಘೋಷಣೆ ಮಾಡಿದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರಿಗೆ ಫೆಬ್ರವರಿಯಲ್ಲಿ ಭಾರತೀಯ ಜನತಾ ಪಕ್ಷವು ತನ್ನ ಅಧಿಕೃತ ನಿರ್ಣಯದ ಮೂಲಕ, ಕೋವಿಡ್-19ನ್ನು ಸೋಲಿಸಿದ ಕೀರ್ತಿಯನ್ನು ಸಮರ್ಪಿಸಿ ಸಂಭ್ರಮಿಸಿತ್ತು.
ಕೋವಿಡ್ ಸಂಬಂಧವಾಗಿ ತಜ್ಞ-ಅಭಿಪ್ರಾಯಗಳ ಗಾಳಿ ಗಂಧವೂ ಇಲ್ಲದ ಮತ್ತು ತಜ್ಞರ ಬಳಿ ಸುಳಿಯಲೂ ಅವಕಾಶವಿಲ್ಲದ ಜನ ಸಾಮಾನ್ಯರ ಕೋವಿಡ್-ಅಸಮಂಜಸ ವರ್ತನೆಯ ಬಗ್ಗೆ ಅವರನ್ನು ತಪ್ಪೊಪ್ಪಿಕೊಳ್ಳುವಂತೆ ಕೇಳಿದಾಗ, ಬಂಗಾಳದಲ್ಲಿ ಎಂಟು ಹಂತದ-ಎರಡು ತಿಂಗಳ ಚುನಾವಣೆ ನಡೆಸಿದ ಭಾರತದ ಚುನಾವಣಾ ಆಯೋಗವನ್ನು, ಪುಣ್ಯ-ಸ್ನಾನ ಮಾಡಿದರೆ ಸೋಂಕು ತಗುಲುವುದಿಲ್ಲ ಎಂದು ಕುಂಭಮೇಳವನ್ನು ಸಮರ್ಥಿಸಿದ ಉತ್ತರಾಖಂಡ ಮುಖ್ಯಮಂತ್ರಿಯನ್ನು, ಮತ್ತು, 2,00,000ಕ್ಕೂ ಹೆಚ್ಚು ಭಾರತೀಯರು ಹೊಸದಾಗಿ ಕೊರೊನಾ ಸೋಂಕಿಗೆ ಒಳಗಾದ ದಿನವೇ ಪಶ್ಚಿಮ ಬಂಗಾಳದ ಚುನಾವಣಾ ರ‍್ಯಾಲಿಯಲ್ಲಿ ನೆರೆದ ಜನಸಂದಣಿಯ ಬಗ್ಗೆ ಹರ್ಷೋಲ್ಲಾಸ ವ್ಯಕ್ತಪಡಿಸಿದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ವರ್ತನೆಯನ್ನು ಪ್ರಶ್ನಿಸಲೇ ಇಲ್ಲ. ಇವೆಲ್ಲವೂ ಪ್ರಭುತ್ವದ ಕ್ರಿಯೆಗಳೇ. ಲೋಪಗಳೇ. ಈ ಬಗ್ಗೆ ಪ್ರಶ್ನೆ ಕೇಳಲೇ ಇಲ್ಲ.
ಪ್ರಭುತ್ವವು ತನ್ನ ಹೊಣೆ ಜಾರಿಸಿಕೊಳ್ಳುವ ಕ್ರಿಯೆಯಲ್ಲಿ ಭಾಗವಹಿಸುವವರು ಸಾಮಾಜಿಕ ಕೊಲೆಯ ಪರಿಸ್ಥಿತಿಗಳನ್ನು ಪೋಷಿಸುತ್ತಾರೆ. ಶವಸಂಸ್ಕಾರ ಸಂಬಂಧಿತ ಕ್ರಿಯೆಗಳು ಹಿಂದೂಗಳಿಗೆ ಪವಿತ್ರವಾಗಿರುವುದರಿಂದ ಟಿ.ವಿ ಚಾನೆಲ್‌ಗಳು ಅದನ್ನು ನೇರ ಪ್ರಸಾರ ಮಾಡಬಾರದು, ಪತ್ರಿಕೆಗಳು ಫೋಟೊ ತೋರಿಸಬಾರದು ಎಂಬ ವಾದವೂ ಸಹ ಸಾಮಾಜಿಕ ಕೊಲೆಯ ಭಾಗವೇ. ಹಿಂದೂ ಶವಸಂಸ್ಕಾರಗಳನ್ನು ನೇರವಾಗಿ ತೋರಿಸಬಾರದು ಅಥವಾ ರೆಕಾರ್ಡ್ ಮಾಡಬಾರದು ಎಂಬ ತಪ್ಪು ಕಲ್ಪನೆಯನ್ನು ಪಕ್ಕಕ್ಕೆ ಸರಿಸಿ, ವಿಷಯಕ್ಕೆ ಬರೋಣ. ಸಕಾಲದಲ್ಲಿ ಆಮ್ಲಜನಕ ಪೂರೈಕೆಯಂತಹ ಒಂದು ಸಣ್ಣ ಕೆಲಸ ಮಾಡಿದ್ದರೆ ಎಷ್ಟು ಸಾವುಗಳನ್ನು ತಪ್ಪಿಸಬಹುದಿತ್ತು? ಇಂತಹ ನಿರ್ಲಕ್ಷಗಳಿಂದ ಸಾವಿಗೀಡಾದ ತಮ್ಮ ಪ್ರೀತಿಪಾತ್ರರನ್ನು ಜನಗಳು ಪಾರ್ಕಿಂಗ್ ಸ್ಥಳಗಳಲ್ಲಿ ಅಥವಾ ಫುಟ್‌ಪಾತ್‌ಗಳಲ್ಲೇ ದಹನ ಮಾಡಬೇಕಾದ ಪರಿಸ್ಥಿತಿ ಏಕೆ ಬಂತು? ಇದೇನು ಸಾವಿನ ಕತೆಯನ್ನು ಜಗತ್ತಿಗೆ ಹೇಳಿರುವುದಕ್ಕಿಂತ ಕಡಿಮೆ ಘನತೆಯ ವಿಷಯವೇ? ಇದಕ್ಕೂ ಉತ್ತರ ಇನ್ನೂ ಬರಬೇಕಿದೆ.
ಇದನ್ನು ಓದಿ: ಕೋವಿಡ್ ನಿರ್ವಹಣೆ : ಮೃತರ ವಿಚಾರದಲ್ಲಿ ಸುಳ್ಳು ಹೇಳಿ, ತನ್ನದೆ ಇಲಾಖೆಯ ಅಂಕಿ ಅಂಶಗಳಿಂದ ಬೆತ್ತಲಾದ ಗುಜರಾತ್ ಮಾಡೆಲ್
ಸಾಂಕ್ರಾಮಿಕ ರೋಗದ ತೀವ್ರತೆಯನ್ನು ಮಂಕಾಗಿಸುವುದು ಅಥವಾ ಮುಚ್ಚುಮರೆ ಮಾಡುವುದು ಒಂದು ಬಹು ದೊಡ್ಡ ವಿಪತ್ತಿಗೆ ಹಾದಿಯಾಗುತ್ತದೆ ಎಂಬ ಅಂಶವನ್ನು ಸಾಂಕ್ರಾಮಿಕ ರೋಗಶಾಸ್ತ್ರಜ್ಞರು ಒತ್ತಿ ಒತ್ತಿ ಹೇಳಿದ್ದಾರೆ. ಕೊರೊನಾ ಸಾಂಕ್ರಾಮಿಕ ರೋಗವನ್ನು ಅದರ ಆರಂಭಿಕ ಹಂತದಲ್ಲಿ ಚೀನಾ ದೇಶವು ಒಂದು ವೇಳೆ ಮುಚ್ಚುಮರೆ ಮಾಡದಿದ್ದರೆ, ಜಗತ್ತು ಬಹುಶಃ ಇಂತಹ ಅಪಾಯಕಾರಿ ಹಂತವನ್ನು ತಲುಪುತ್ತಿರಲಿಲ್ಲ. ಆದ್ದರಿಂದಲೇ, ಅತಿ ಹೆಚ್ಚು ಸಾವುಗಳು ಸಂಭವಿಸಿದ ಅಪಾಯಕಾರಿ ಪ್ರದೇಶಗಳೆಂದು ಗುರುತಿಸಿದ ಇಟಲಿ, ಇರಾನ್, ಅಮೇರಿಕಾ, ಬ್ರಿಟನ್, ಬ್ರೆಜಿಲ್, ಪೆರು ಮುಂತಾದ ದೇಶಗಳ ಪರಿಸ್ಥಿತಿಯ ಬಗ್ಗೆ ಜಾಗತಿಕ ಮಾಧ್ಯಮಗಳು ನಿರಂತರವಾಗಿ ತಮ್ಮ ಗಮನವನ್ನು ಕೇಂದ್ರೀಕರಿಸಿದ್ದವು. ಆದರೆ, ಭಾರತದಲ್ಲಿನ ಪ್ರಸಕ್ತ ದುರಂತವನ್ನು ಅದರ ಸಾಂಸ್ಕೃತಿಕ-ಭಾವನಾತ್ಮಕ ಅಸಾಧಾರಣತೆಯಿಂದಾಗಿ ನೇರ ಪ್ರಸಾರ ಮಾಡಬಾರದೆಂದು ಹೇಳಲಾಗುತ್ತಿದೆ.
ಒಂದು ವಿಭಿನ್ನ ಪಿತ್ರಾರ್ಜಿತತೆ
ಭಾರತದ ಪ್ರಭುತ್ವವು ಕಳೆದ ಏಳು ವರ್ಷಗಳಲ್ಲಿ ವಿಶಿಷ್ಟ ಪ್ರವೃತ್ತಿಗಳನ್ನು ಬೆಳೆಸಿಕೊಂಡಿದೆ. ಇದನ್ನು ಜರ್ಮನ್ ಸಮಾಜಶಾಸ್ತ್ರಜ್ಞ ಮ್ಯಾಕ್ಸ್ ವೆಬರ್ ‘ಪಿತ್ರಾರ್ಜಿತಾವಾದ’ ಎಂದಿದ್ದಾರೆ. ಅಂದರೆ, ಆಳುವವನು ಒಂದು ಸಾಂಪ್ರದಾಯಿಕ ಸ್ವರೂಪದ ಅಧಿಕಾರವನ್ನು ಚಲಾಯಿಸುತ್ತಾನೆ. ಈ ಅಧಿಕಾರವು “ಅನಾದಿ ಕಾಲದ ಸಂಪ್ರದಾಯಗಳ ಪಾವಿತ್ರ್ಯ”ದ ಮೇಲೆ ನಿಂತಿದೆಯೇ ಹೊರತು ಒಂದು ವಿವೇಚನಾಯುತ-ಕಾನೂನಾತ್ಮಕ ಅಧಿಕಾರ ವ್ಯವಸ್ಥೆ ಅಥವ ವ್ಯಕ್ತಿಗತವಲ್ಲದ ನಿಯಮಗಳನ್ನಲ್ಲ. ಆದರೆ, ಈ ಅತಿ ವ್ಯಕ್ತಿ-ಕೇಂದ್ರಿತ ಮತ್ತು ಕೇಂದ್ರೀಕರಣಗೊಂಡ ಆಳ್ವಿಕೆಯು ಒಂದು ಮಾದರಿ ಪಿತ್ರಾರ್ಜಿತತೆಗಿಂತ ಭಿನ್ನವಾಗಿದೆ, ವಂಶಪಾರಂಪರ್ಯ,ರಕ್ತ-ಸಂಬಂಧ ಅಥವಾ ಸ್ವಾಮಿನಿಷ್ಠೆಗಳನ್ನು ಇದು ಆಧರಿಸಿಲ್ಲ. ಬದಲಿಗೆ, ಧಾರ್ಮಿಕ ಬಹುಸಂಖ್ಯಾತವಾದಿ ಮತ್ತು ರಾಷ್ಟ್ರವಾದಿ ಸಿದ್ಧಾಂತವನ್ನು ಆಧರಿಸಿದೆ ಮತ್ತು ಚುನಾವಣೆಗಳಲ್ಲಿ ಗೆಲ್ಲುವ ಮೂಲಕ ಇದು ಕಾನೂನು ಮನ್ನಣೆಯನ್ನೂ ಗಳಿಸಿಕೊಂಡಿದೆ. ಕರ್ತವ್ಯ, ದೇಶಭಕ್ತಿ ಮುಂತಾದವು ಇಲ್ಲಿ ಅತ್ಯಂತ ಮಹತ್ವದ ಪದಗಳಾಗುತ್ತವೆ ಎಂಬುದನ್ನು ನೋಟು ರದ್ದತಿಯ ಸಮಯದಲ್ಲಿ ಹರಿಯಬಿಟ್ಟ ಸಂಕಟಗಳ ಕಾಲದಲ್ಲಿ ನೋಡಿದ್ದೇವೆ.
ವಿಪರ್ಯಾಸವೆಂದರೆ, ಮಕ್ಕಳನ್ನು ಪೊರೆವ ಅಪ್ಪ ಅಮ್ಮನಂತಹ(ಮಾಯಿ-ಬಾಪ್) ಸರಕಾರ ಇದು, ಪ್ರಜೆಗಳನ್ನು ಮಕ್ಕಳಂತೆ ನೋಡಿಕೊಳ್ಳುವಂತದ್ದು ಎಂದು ಹೆಮ್ಮೆಪಡುತ್ತಿದ್ದ ಈ ಸರ್ಕಾರವು, ಇದ್ದಕ್ಕಿದ್ದಂತೆ, ನಿಮಗೆ ಬೇಕಾಗುವ ಆಂಬ್ಯುಲೆನ್ಸ್ ವಾಹನದ ವ್ಯವಸ್ಥೆಯನ್ನು ನೀವೇ ಮಾಡಿಕೊಳ್ಳಿ, ನಿಮಗೆ ಬೇಕಾಗುವ ಆಮ್ಲಜನಕ ಸಿಲಿಂಡರ್‌ಗಳನ್ನು ನೀವೇ ಹೊಂದಿಸಿಕೊಳ್ಳಿ ಎಂದು ಪ್ರಜೆಗಳನ್ನು ನಡು ನೀರಿನಲ್ಲಿ ಕೈ ಬಿಡುವ ಸರ್ಕಾರವಾಗಿ ರೂಪಾಂತರಗೊಳ್ಳುತ್ತದೆ. ಸರ್ಕಾರದ ಈ ಧೋರಣೆಯು, ಬದುಕುಳಿಯುವ ಸಾಧನ-ಸಾಮರ್ಥ್ಯ ಉಳ್ಳವರು ಮಾತ್ರ ಉಳಿಯುತ್ತಾರೆ ಎನ್ನುವ ಸಾಮಾಜಿಕ ಡಾರ್ವಿನ್‌ವಾದವಾಗಿ ಬಿಟ್ಟಿದೆ.
ಆಮ್ಲಜನಕದ ಕೊರತೆ ಎಂದೂ ಇರಲಿಲ್ಲ ಎಂದು ಕೇಂದ್ರ ಆರೋಗ್ಯ ಸಚಿವರು ಒತ್ತಿ ಒತ್ತಿ ಹೇಳುತ್ತಾರೆ. ಆಮ್ಲಜನಕ ಏಕೆ ಕೊಡುತ್ತಿಲ್ಲ ಎಂದು ಕೇಳಿದವರ ಮೇಲೆ ಉತ್ತರ ಪ್ರದೇಶ ಸರ್ಕಾರವು ಎಫ್ಐಆರ್ (ಪ್ರಥಮ ಮಾಹಿತಿ ವರದಿ) ಜಡಿಯುತ್ತದೆ. ಸತ್ತವರು ಹಿಂತಿರುಗುವುದಿಲ್ಲ, ಆದ್ದರಿಂದ, ಲೆಕ್ಕಕ್ಕೆ ಸಿಗದ ಸಾವುಗಳ ಬಗ್ಗೆ ಚರ್ಚಿಸುವುದು ಅರ್ಥವಿಲ್ಲದ್ದು ಎಂದು ಹರಿಯಾಣದ ಮುಖ್ಯಮಂತ್ರಿ ಹೇಳುತ್ತಾರೆ. ತಾನೇ ಘೋಷಿಸಿಕೊಂಡಿದ್ದ ತನ್ನ ಉಪಕಾರ ಬುದ್ಧಿ-ಸ್ವಭಾವ-ಉದ್ದೇಶಗಳ ಸೋಗಿನ ಪೊರೆಯನ್ನು ಸರ್ಕಾರವು ಕೊರೊನಾ ವೈರಸ್ ಸಾಂಕ್ರಾಮಿಕದ ಸಮಯದಲ್ಲಿ ಕಳಚಿಕೊಂಡು ತನ್ನ ನಿಜ ಸ್ವರೂಪದಲ್ಲಿ ಕಾಣಿಸಿಕೊಳ್ಳುತ್ತಿದೆ.
ಇದನ್ನು ಓದಿ: ಕೋವಿಡ್ ಪರಿಹಾರ : ಬಾಯಿ ಮುಚ್ಚಿದ ಸಿಎಂ! – ಹಳ್ಳ ಹಿಡಿಯಿತೇ ಪಿಎಂ ಆತ್ಮನಿರ್ಭರ್!!
ವಿದ್ವಾಂಸರು ಗುರುತಿಸಿರುವಂತೆ, ಪಿತ್ರಾರ್ಜಿತಾವಾದೀ ಆಡಳಿತದ ಒಂದು ಮೂಲಭೂತ ಸಮಸ್ಯೆ ಎಂದರೆ, ಅದರ ಉತ್ತರದಾಯಿತ್ವವನ್ನು ಖಚಿತಪಡಿಸಿಕೊಳ್ಳುವ ಬಗೆ. ಮಕ್ಕಳು ಕರೆದರೆ ಓಗೊಡುವ ಅಪ್ಪ ಅಮ್ಮನ ರೀತಿಯದ್ದೆಂದು ಹೇಳಿಕೊಂಡ ಸರ್ಕಾರವು ಸಾಂಕ್ರಾಮಿಕದ ಸಮಯದಲ್ಲಿ ಕಾಣೆಯಾಗಿರುವುದನ್ನು ಇಡೀ ವಿಶ್ವವೇ ಗಮನಿಸಿದೆ. ಒಂದು ಕಡೆ, ಪ್ರಧಾನ ಮಂತ್ರಿಯವರು ಆಮ್ಲಜನಕ ತಯಾರು ಮಾಡುವ ಘಟಕಗಳನ್ನು ಮಂಜೂರು ಮಾಡುವಲ್ಲಿ ಬಹಳ ತಡವಾಗಿದ್ದರೂ ಸಹ ಮತ್ತು ಈ ಮಂಜೂರಾತಿಯು ಅಪ್ಪ ಅಮ್ಮನ ರೀತಿಯ ಸರ್ಕಾರವೆಂದು ಹೇಳಿಕೊಂಡದ್ದಕ್ಕೆ ಅನುಗುಣವಾಗಿದ್ದರೂ ಸಹ, ಪ್ರಧಾನ ಮಂತ್ರಿಗಳು ಮಾಡಿದ್ದು ಒಂದು ದೊಡ್ಡ ಉಪಕಾರ ಎಂಬಂತೆ, ಆಮ್ಲಜನಕ ಘಟಕಗಳನ್ನು ಮಂಜೂರು ಮಾಡಿದ ಕೃಪೆಗಾಗಿ, ಸಂಪುಟದ ಸಚಿವರು ಒಕ್ಕೊರಲಿನಿಂದ ಕೃತಜ್ಞತೆಯನ್ನು ವ್ಯಕ್ತಪಡಿಸುತ್ತಾರೆ. ಮತ್ತೊಂದೆಡೆ, ಪ್ರಧಾನ ಮಂತ್ರಿಯವರು ಕೋವಿಡ್-19 ಸಂಬಂಧವಾಗಿ ಒಂದು ಪತ್ರಿಕಾಗೋಷ್ಠಿಯನ್ನೂ ನಡೆಸಿಲ್ಲ. ವಿಶ್ವದ ಅತಿ ದೊಡ್ಡ ಪ್ರಜಾಪ್ರಭುತ್ವವೆಂದು ಹೆಮ್ಮೆ ಪಡುವ ದೇಶದ ಪ್ರಧಾನ ಮಂತ್ರಿಯವರ ಈ ನಡತೆಯು ಜಾಗತಿಕವಾಗಿ ಪ್ರಜಾಪ್ರಭುತ್ವವಾದಿಗಳ ಹುಬ್ಬೇರಿಸಿದೆ.
ನಾಗರಿಕರಾಗಿ ಬದಲಾಗಿ, ಪ್ರಜೆಗಳಾಗಿಯೇ ಉಳಿಯದಿರಿ
ಉತ್ತರದಾಯಿತ್ವಕ್ಕೆ ಸಂಬಂಧಿಸಿ ಈ ಒಂದು ಪ್ರಸ್ತುತ ಉದಾಹರಣೆಯನ್ನು ಗಮನಿಸಿ. ಕೋವಿಡ್-19 ನಿರ್ವಹಣೆ ಪರಿಶೀಲನೆಯ ಸಂಬಂಧವಾಗಿ ಸ್ವೀಡನ್ ಪ್ರಧಾನ ಮಂತ್ರಿಯವರನ್ನು ಆ ದೇಶದ ಸಂವಿಧಾನದ ಅಧಿಕಾರ ಹೊಂದಿದ ಒಂದು ಸಮಿತಿಯು ಇತ್ತೀಚೆಗೆ ವಿಚಾರಣೆಗೆ ಒಳಪಡಿಸಿತ್ತು. ಆದರೆ, ಪ್ರಸ್ತುತ ಕೋವಿಡ್ ಬಿಕ್ಕಟ್ಟಿಗೆ ಕಾರಣವಾದ ಸರ್ಕಾರದ ನಿರ್ಧಾರಗಳ ಕಾಲಾನುಕ್ರಮಣಿಕೆಯನ್ನು ಗಂಭೀರವಾಗಿ ಪರಿಶೀಲನೆ ಮಾಡುವಂತಹ ವ್ಯವಸ್ಥೆಯೇ ಭಾರತದಲ್ಲಿಲ್ಲ. ಸದ್ಯದ ಮಟ್ಟಿಗೆ ಹೇಳುವುದಾದರೆ, ಆಮ್ಲಜನಕದ ಕೊರತೆಯಿಂದಾಗಿ ಸಂಭವಿಸುತ್ತಿರುವ ಸಾವುಗಳು “ನರಮೇಧಕ್ಕಿಂತ ಕಡಿಮೆಯಿಲ್ಲ” ಎಂದು ಅಲಹಾಬಾದ್ ಹೈಕೋರ್ಟ್ ವ್ಯಕ್ತಪಡಿಸಿದ ಕಟು ಅಭಿಪ್ರಾಯದಿಂದಲೇ ತೃಪ್ತಿಪಡಬೇಕಾಗಿದೆ.
ಬ್ರಿಟಿಷ್ ಆಳುವ ವರ್ಗವು ಕಾರ್ಮಿಕರ ಬಗ್ಗೆ ಹೊಂದಿದ್ದ ವರ್ಗ ಪೂರ್ವಾಗ್ರಹ, ತಾತ್ಸಾರ-ತಿರಸ್ಕಾರ-ಕೀಳು ಭಾವನೆಗಳಿಂದಾಗಿ ತನ್ನ ಸುತ್ತಲೂ ನಡೆಯುತ್ತಿದ್ದ ಸಾಮಾಜಿಕ ಕೊಲೆಗಳ ಬಗ್ಗೆ ಅದು ಕುರುಡಾಗಿತ್ತು. ಆಳುವವರು ಕುರುಡಾಗಿದ್ದರು ಏಕೆಂದರೆ, ಈ ಸಾವುಗಳಿಂದ ಅವರು ತೊಂದರೆಗೊಳಗಾಗಲಿಲ್ಲ ಎಂದು ಎಂಗೆಲ್ಸ್ ವ್ಯಾಖ್ಯಾನಿಸಿದ್ದರು. ಆದರೆ, ಸಾಂಕ್ರಾಮಿಕದ ಅಡಿಯಲ್ಲಿ ನಲುಗುತ್ತಿರುವ ಇಂದಿನ ಭಾರತದಲ್ಲಿ ಬೇರೊಂದು ರೀತಿಯ ಪೂರ್ವಾಗ್ರಹ, ಪೂರ್ವಕಲ್ಪಿತ ಅಭಿಪ್ರಾಯಗಳು ಮತ್ತು ಹುಚ್ಚು ಕುರುಡುತನ ಈ ಸಾಮಾಜಿಕ ಕೊಲೆಗಳನ್ನು ಮೌನವಾಗಿ ಸಮ್ಮತಿಸಿದೆ. ಜನರು ಪಿತ್ರಾರ್ಜಿತವಾದೀ ಆಳ್ವಿಕೆಯಡಿಯಲ್ಲಿರುವ ಪ್ರಜೆಗಳಾಗಿ ಉಳಿಯದೆ, ಒಂದು ಗಣರಾಜ್ಯದ ನಾಗರಿಕರಾಗದ ಹೊರತು, ಸಾಂಕ್ರಾಮಿಕ ರೋಗದ ವಿಪತ್ಕಾರೀ ಮೋಡಗಳು ಭಾರತದ ಪ್ರಜಾಪ್ರಭುತ್ವದ ಭವಿಷ್ಯವನ್ನು ಅಯೋಮಯಗೊಳಿಸುತ್ತವೆ.