ಸಾಮಾಜಿಕ ಅಸ್ವಸ್ಥತೆ ಮತ್ತು ಸನಾತನವಾದ

ವಿ.ಎನ್. ಲಕ್ಷ್ಮಿನಾರಾಯಣ

ಸಂಘಪರಿವಾರದ ನೇತಾರರು ಮತ್ತು ಕಾಲಾಳುಗಳಲ್ಲಿ ಸಮಾನವಾಗಿ ಕಂಡುಬರುವ ತಾತ್ವಿಕತೆ, ಪಿತೃಪ್ರಧಾನ ಸಾಮಾಜಿಕ ಮೌಲ್ಯಗಳು, ತಾರತಮ್ಯಯುಕ್ತ, ಶ್ರೇಣೀಕೃತ ಸಂಬಂಧಗಳು ಹಿಂದಿನ ಗುಲಾಮೀ ಸಮಾಜ ಮತ್ತು ಊಳಿಗಮಾನ್ಯ ಸಮಾಜದಲ್ಲಿ ತಮ್ಮ ಆಳವಾದ ಬೇರುಗಳನ್ನು ಹೊಂದಿವೆ. ಆದ್ದರಿಂದಲೇ ಸಂಘಪರಿವಾರವು ಯಾವಾಗಲೂ ಸನಾತನ ಧರ್ಮದ ಜಪ ಮಾಡುತ್ತದೆ. ವ್ಯಕ್ತಿಯು ಮಗುವಿನ ವಯಸ್ಸನ್ನು ಮೀರಿದ ಮೇಲೂ ವಸ್ತುನಿಷ್ಠತೆಯ ಮತ್ತು ಬೌದ್ಧಿಕ ಬೆಳವಣಿಗೆ ಆಗದಿದ್ದರೆ ಸಾಮಾಜಿಕ ಅಸ್ವಸ್ಥತೆ ಉಂಟಾಗುತ್ತದೆ.

ಈ ಸನಾತನ ಅಸ್ವಸ್ಥತೆಗೆ ಮದ್ದಿಲ್ಲ ಎಂಬುದು ಅಪ್ರಿಯವಾದ ಕಟ್ಟು ಸತ್ಯ, ನಿಜ. ಆದರೆ ಭಾರತದ ಜನರ ಕಷ್ಟಕ್ಕೆ ಪರಿಹಾರವಿದೆ. ವೈಚಾರಿಕವಾದ, ವೈಜ್ಞಾನಿಕವಾದ ಆರೋಗ್ಯಕರವಾದ ಧೋರಣೆ-ಉದ್ದೇಶ ಮತ್ತು ಗ್ರಹಿಕೆಯುಳ್ಳ ಶ್ರಮಿಕ ಜನರು ಪಡೆಯಬೇಕಾದ ರಾಜಕೀಯ ಅಧಿಕಾರ, ಇಂದಾಗಲಿ, ಎಂದಾಗಲಿ ಸಾಂವಿಧಾನಿಕವಾಗಿ ಸಾಧ್ಯವಿರುವ ಏಕೈಕ ಪರಿಹಾರ. ಯಾವ ಬದಲಾವಣೆಯೂ ತಾನಾಗಿ ಆಗುವುದಿಲ್ಲ. ಬದಲಾವಣೆಯನ್ನು ಮಾಡಬೇಕು.

ಪ್ರಜ್ಞೆಯು ನಮ್ಮ ಸುತ್ತಲಿನ ಪ್ರಪಂಚದಲ್ಲಿನ ವಸ್ತುಗಳ ಅರಿವು ಮತ್ತು ಜ್ಞಾನದಿಂದ ರೂಪುಗೊಂಡಿದೆ. ಅದನ್ನು ತನಗಾಗಿ ಮತ್ತು ಇತರರಿಗಾಗಿ ದೈಹಿಕ ಸನ್ನೆ ಮತ್ತು ಶಾಬ್ದಿಕ ಸಂಜ್ಞೆಗಳ ಮೂಲಕ ವ್ಯಕ್ತಪಡಿಸುವ ವ್ಯವಸ್ಥೆಯನ್ನು ಭಾಷೆ ಎನ್ನುತ್ತೇವೆ. ಹೀಗಾಗಿ ಪ್ರಜ್ಞೆ ಮತ್ತು ಭಾಷೆ ಎರಡೂ ಸಾಮಾಜಿಕವಾದವುಗಳು.

ಜ್ಞಾನವೆಂದರೆ, ವಸ್ತುಗಳ ಜ್ಞಾನವೇ. ವಸ್ತುಗಳೆಲ್ಲವೂ ಒಂದಲ್ಲ ಒಂದು ರೀತಿಯಲ್ಲಿ ಸಾಮ್ಯತೆಯನ್ನು ಪಡೆದಿದ್ದರೂ, ಪರಸ್ಪರ ಸಂಬಂಧವನ್ನು ಹೊಂದಿದ್ದರೂ, ಒಂದು ವಸ್ತುವು ಮತ್ತೊಂದು ವಸ್ತುವಿಗಿಂತ ಭಿನ್ನ ಎಂದು ಅರಿಯುವುದೇ ಜ್ಞಾನ. ‘ಕ್ಷೇತ್ರ ಕ್ಷೇತ್ರಜ್ಞಯೋರ್ಜ್ಞಾನಂ ಯತ್ತ ಜ್ಞಾನಂ ಮತಂ ಮಮ’ (ನನ್ನ ಅಭಿಪ್ರಾಯದಲ್ಲಿ ಕ್ಷೇತ್ರ ಬೇರೆ, ಅದರ ಮಾಲೀಕನು ಬೇರೆ ಎಂಬ ಅರಿವೇ ಜ್ಞಾನ) ಎಂಬುದು ಭಗವದ್ಗೀತೆಯಲ್ಲಿ ವ್ಯಾಸನು ಕೃಷ್ಣನ ಬಾಯಲ್ಲಿ ಹೇಳಿಸುವ ಜ್ಞಾನದ ನಿರ್ವಚನ.

ಜ್ಞಾನವಂತಳಲ್ಲದ ತಾಯಿಗೆ ಮಗುವು ತನ್ನದೊಂದು ಭಾಗ ಎಂಬ ಭಾವನೆ ಬಲವಾಗಿರುತ್ತದೆ. ಜ್ಞಾನ ಇನ್ನೂ ಬಲಗೊಳ್ಳದ ಮಗುವಿಗೆ ಇಡೀ ಪ್ರಪಂಚ ತಾನೇ ಎಂಬ ‘ಅದ್ವೈತ’ ಭಾವವಿರುತ್ತದೆ. ಇಂಥ ಮನಸ್ಥಿತಿಯನ್ನು ಬೆಳೆದವರಲ್ಲಿಯೂ ತಾತ್ವೀಕರಿಸುವ ಅದ್ವೈತ ಮತವು ‘ವ್ಯಕ್ತಿಯ ಬಿಡುಗಡೆಯಲ್ಲಿ ವಿಶ್ವದ ಬಿಡುಗಡೆ ಇದೆ’ ಎಂಬ ತಲೆಕೆಳಗು ದೃಷ್ಟಿಯನ್ನು ಪ್ರತಿಪಾದಿಸುತ್ತದೆ. ಭಾವನಾವಾದದಿಂದ ಬಿಡಿಸಿಕೊಳ್ಳದ ಕಾಲ್ಪನಿಕ ಸಮಾಜವಾದವು ತನ್ನ ವ್ಯಕ್ತಿನಿಷ್ಠ ಸಮಾಜವಾದೀ ಬಿಡುಗಡೆಯನ್ನು ಪ್ರತಿಪಾದಿಸುವುದೂ ಸಹ ಈ ನೆಲೆಯಿಂದಲೇ.

ಮಾತೃಪ್ರಧಾನ ಕುಟುಂಬದ ಸಾಮಾಜಿಕ ಬೇರುಗಳನ್ನು ಹೊಂದಿರುವ ಅದ್ವೈತ ಮತದ ‘ಸರ್ವಂ ಖಲ್ವಿದಂ ಬ್ರಹ್ಮ (ಎಲ್ಲವೂ ಬ್ರಹ್ಮವೇ) ಎಂಬ ದೃಷ್ಟಿಯಲ್ಲಿ ಸಕಲ ಚರಾಚರಗಳ ನಡುವೆ ತಾತ್ವಿಕಮಟ್ಟದ ಸಮಾನತೆ ಇದೆ. ಆದರೆ  ಅದ್ವೈತ ಮತದ ಪ್ರಕಾರವೇ ಲೌಕಿಕವಾಗಿ ಅಂದರೆ, ಸಾಮಾಜಿಕವಾಗಿ ಅಸಮಾನತೆ ಸಹಜವಾದದ್ದು. ಪಿತೃಪ್ರಧಾನ ಕುಟುಂಬದ ಸಾಮಾಜಿಕ ಹಿನ್ನೆಲೆಯ  ದ್ವೈತಮತದ ತಾತ್ವಿಕತೆಯ ಪ್ರಕಾರ ಸಕಲ ಚರಾಚರಗಳ ನಡುವೆ ತಾತ್ವಿಕವಾಗಿಯೂ ಮತ್ತು ಸಾಮಾಜಿಕವಾಗಿಯೂ ಇರುವ ಅಸಮಾನತೆ ನೈಸರ್ಗಿಕವಾದದ್ದು ಮತ್ತು ಸರಿಯಾದದ್ದು. ದ್ವೈತ ಮತದ ಸಾಮಾಜಿಕ ಆಚರಣೆಯಲ್ಲಿ ಕಾಣಿಸುವ ನೈಷ್ಠಿಕ ಕಠೋರತೆಗಳು ಮತ್ತು ಇತರ ಮತ-ಧರ್ಮಗಳ ಬಗೆಗಿನ ತಾತ್ವಿಕ ಅಸಹನೆ, ಅದರ ಪಿತೃಪ್ರಧಾನ ಕುಟುಂಬದ ಹಿನ್ನೆಲೆಯ ಕಾರಣದಿಂದಾಗಿ ಬಂದಿರಬಹುದು.  ದ್ವೈತಮತವನ್ನು ವೈಷ್ಣವ ಮತ ಎಂದೂ ಕರೆಯುತ್ತಾರೆ.

ಪಿತೃಪ್ರಧಾನ ಕುಟುಂಬದ ಸದಸ್ಯರಲ್ಲಿ ತಂದೆಯು ಎಲ್ಲರಿಗಿಂತಲೂ ದೊಡ್ಡವನು ಎಂಬ ಶ್ರೇಣೀಕೃತ ಕೌಟುಂಬಿಕ ಸಂಬಂಧವಿದೆ. ತಂದೆಯು ತನಗೆ ಮಾತ್ರವಲ್ಲ ತನ್ನ ತಾಯಿಗೂ ರಕ್ಷಕನೇ ಎಂಬ ಭಾವನೆ ಅಲ್ಲಿ ಬೆಳೆಯುವ ಮಕ್ಕಳಲ್ಲಿ ಸಹಜವಾಗಿ ಇರುತ್ತದೆ. ಈ ದೃಷ್ಟಿಯನ್ನು ಆಧರಿಸಿದ  ದ್ವೈತಮತದಲ್ಲಿ ಕುಟುಂಬದ ಹಿರಿಯನಾದ ತಂದೆಯಂತೆ, ಸೃಷ್ಟಿಯ ಹಿರಿಯರಾದ ತ್ರಿಮೂರ್ತಿಗಳಲ್ಲಿ ವಿಷ್ಣು ಸರ್ವೋತ್ತಮ. ಜೀವ-ದೇವರ ನಡುವಿನ ಭಿನ್ನತೆ, ಜೀವ-ಜೀವದ ನಡುವಿನ ಭಿನ್ನತೆ, ಜೀವ-ಜಡದ ನಡುವಿನ ಭಿನ್ನತೆ, ದೇವರು-ಜಡದ ನಡುವಿನ ಭಿನ್ನತೆ ಮತ್ತು ಜಡ-ಜಡದ ನಡುವಿನ ಭಿನ್ನತೆಗಳು ಕೇವಲ ಭಿನ್ನತೆಗಳಾಗಿರದೆ ಶಾಶ್ವತವಾದ ಶ್ರೇಷ್ಠ-ನೀಚ ಎಂಬ ತಾರತಮ್ಯದಿಂದ ಕೂಡಿವೆ.

ಮಕ್ಕಳು ತಂದೆಯ ಅಂಶಗಳಾಗಿರುವಂತೆ, ಮನುಷ್ಯರು ದೇವರ ಅಂಶಗಳು. ಆದರೆ, ಅವರೇ ದೇವರಲ್ಲ, ಅಲ್ಲದೆಯೂ ಅಲ್ಲ, ದೇವರಲ್ಲಿ ಪ್ರಪತ್ತಿ (ಸಂಪೂರ್ಣ ಶರಣಾಗತಿ)ಯೊಂದೇ ಸಂಸಾರದಿಂದ (ಅಂದರೆ ಬಡತನ ಮುಂತಾದ ಕಷ್ಟ ಕೋಟಲೆಗಳಿಂದ) ಬಿಡುಗಡೆ ಪಡೆಯಲು ದಾರಿ ಎಂದು ಪ್ರತಿಪಾದಿಸುವ ವಿಶಿಷ್ಟಾದ್ವೈತವು ತ್ರಿಮೂರ್ತಿಗಳಲ್ಲಿ ಶ್ರೇಷ್ಠನಾದ ವಿಷ್ಣುವಿಗೆ ಶರಣಾಗಿ ಯಾರು ಬೇಕಾದರೂ ಮುಕ್ತಿ ಪಡೆಯಬಹುದು ಎಂದು ನಂಬುತ್ತದೆ. ಶ್ರೇಣೀಕೃತ ಜಾತಿ ವ್ಯವಸ್ಥೆಯಲ್ಲಿ ಬ್ರಾಹ್ಮಣರು ತುತ್ತತುದಿಯಲ್ಲೂ ಚಂಡಾಲರು ಅತ್ಯಂತ ಕೆಳಗಿರುವವರು ಎಂದಾದರೂ ವಿಷ್ಣುವಿಗೆ ಶರಣಾಗಿ ವೈಷ್ಣವರಾದವರು ಈ ಶ್ರೇಣೀಕರಣದಿಂದ ಪಾರಾಗುತ್ತಾರೆ.

ಭಾಗವತ ಮತ್ತು ವಿಷ್ಣುಪುರಾಣಗಳಲ್ಲಿ ನಮೂದಿಸಿರುವಂತೆ ಧರ್ಮಸಂಸ್ಥಾಪನೆಗಾಗಿ ವಿಷ್ಣುವು ಎತ್ತಿದ ಅವತಾರಗಳ ಸಂಖ್ಯೆ 12. ಅವುಗಳಲ್ಲಿ ರಾಮ ಮತ್ತು ಕೃಷ್ಣರ ಅವತಾರಗಳನ್ನು ಬಿಟ್ಟು ಉಳಿದ ಹತ್ತು ಅವತಾರಗಳು ಕೇವಲ ಸಾಂದರ್ಭಿಕವಾಗಿ ಬಿಡಿ ಸಮಸ್ಯೆಗಳನ್ನು ಪರಿಹರಿಸಲು ಎತ್ತಿದ ಅಂಶಾವತಾರಗಳು. ರಾಮ ಮತ್ತು ಕೃಷ್ಣರ ಅವತಾರಗಳು ಮಾತ್ರ ಪೂರ್ಣಾವತಾರಗಳು. ಅಂದರೆ ವಿಷ್ಣುವು ಭೂಮಿಯ ಮೇಲೆ ಮನುಷ್ಯರಂತೆ ಹುಟ್ಟಿ, ಬೆಳೆದು, ಮದುವೆಯಾಗಿ, ರಾಜ್ಯಭಾರ ಮಾಡಿ, ದೇವತೆಗಳ ದಾಯಾದಿಗಳಾದ ರಾಕ್ಷಸರೊಂದಿಗೆ ಯುದ್ಧಮಾಡಿ ಮನುಷ್ಯರಂತೆಯೇ ಕಷ್ಟ-ನಷ್ಟ-ಅವಮಾನಗಳನ್ನು ಅನುಭವಿಸಿ ಕೊನೆಗೆ ದುಃಖ ಅಸಹಾಯಕತೆಯನ್ನು ಅನುಭವಿಸುತ್ತಾ ಅವಸಾನ ಹೊಂದಿದ ಅವತಾರಗಳು.

ಸನಾತನವಾದ

ಭಾರತದ ಪೌರಾಣಿಕ ಕಥನಗಳಲ್ಲಿ ಬ್ರಾಹ್ಮಣರು ಸರ್ವಶೇಷ್ಠರು. ಬ್ರಹ್ಮ ಎಂದರೆ ಎಲ್ಲಕ್ಕಿಂತಾ ದೊಡ್ಡದು ಎಂಬ ಅರ್ಥವನ್ನು ಕೊಡುವ ಗುಣವಾಚಕ ಶಬ್ದ. ಬ್ರಹ್ಮಜ್ಞಾನ, ಬ್ರಹ್ಮಾನಂದ, ಬ್ರಹ್ಮರಥ, ಬ್ರಹ್ಮಕಳಶ, ಬ್ರಹ್ಮರಾಕ್ಷಸ, ಹೀಗೆ ಬ್ರಹ್ಮ ಪದವನ್ನು ಎಲ್ಲೆಲ್ಲಿ ಬಳಸಲಾಗಿದೆಯೋ ಅಲ್ಲೆಲ್ಲಾ ಅದು ಅತ್ಯಂತ ದೊಡ್ಡದು ಎಂಬ ಅರ್ಥವನ್ನೇ ಕೊಡುತ್ತದೆ. ಬ್ರಾಹ್ಮಣರು ಭಾರತದ ಚಾತುರ್ವರ್ಣದ ಶ್ರೇಣಿಯಲ್ಲಿ ಎಲ್ಲರಿಗಿಂತಾ ಮೇಲಿದ್ದು ಬ್ರಹ್ಮಜ್ಞಾನದ ವಾರಸುದಾರರಾಗಿದ್ದವರು. ಅಂಥ ಬ್ರಾಹ್ಮಣನಾದ ಜಮದಗ್ನಿಯ ಮೇಲೆ ಕ್ಷತ್ರಿಯ ರಾಜನೊಬ್ಬನು ಮಾಡಿದ ದೌರ್ಜನ್ಯಕ್ಕಾಗಿ ಇಡೀ ಕ್ಷತ್ರಿಯ ಕುಲವನ್ನೇ ನಾಶಮಾಡಲು ಕೊಡಲಿ ಹಿಡಿದು ಅವರೊಂದಿಗೆ ಯುದ್ಧಮಾಡಿದವನು ಅವನ ಮಗ ಪರಶುರಾಮ. ಅವನು ಬ್ರಹ್ಮಜ್ಞಾನ ಮತ್ತು ಕ್ಷಾತ್ರಬಲ ಎರಡನ್ನೂ ಪಡೆದ ವಿಷ್ಣುವಿನ ಅವತಾರ. ಅಂಥವನ ಅವತಾರ ಮತ್ತೊಬ್ಬ ಕ್ಷತ್ರಿಯನಾದ ಬಿಲ್ಲು ಹಿಡಿದ ರಾಮನಿಂದ ಕೊನೆಗೊಂಡಿತು.

ಸಂಘ ಪರಿವಾರವೆಂಬ ಹಡಗಿನ ಚುಕ್ಕಾಣಿಯನ್ನು ಕೈಯಲ್ಲಿಟ್ಟುಕೊಂಡ ಮಹಾರಾಷ್ಟ್ರದ ಚಿತ್ಪಾವನ ಬ್ರಾಹ್ಮಣರು ಪರಶುರಾಮನನ್ನು ತಮ್ಮ ಮೂಲ ಪುರುಷ ಎಂದು ನಂಬುತ್ತಾರೆ. ಪರಶುರಾಮನಂತೆ ತಾವೂ ಸಹ ಬ್ರಹ್ಮತೇಜಸ್ಸು ಮತ್ತು ಕ್ಷಾತ್ರಬಲ ಎರಡನ್ನೂ ಪಡೆದವರಾದ್ದರಿಂದ ತಾವೇ ಭಾರತವನ್ನು ಆಳಲು ತಕ್ಕವರು ಎಂಬ ಸಮರ್ಥನೆಯನ್ನು ಕೊಡುತ್ತಾರೆ. ಅವರ ಪ್ರಕಾರ ಸನಾತನ ಧರ್ಮ ಎಂದರೆ ಬ್ರಾಹ್ಮಣ ಧರ್ಮವೇ. ಹಿಂದೂಗಳ ದೇಶವಾದ ಹಿಂದೂಸ್ತಾನದಲ್ಲಿ ಹಿಂದುಗಳು ಮಾತ್ರ ಇರಬೇಕು ಎಂದು ಪ್ರತಿಪಾದಿಸುವುದೇ ಹಿಂದುತ್ವ. ಅವರ ಪ್ರಕಾರ ಇದು ಹೇಗೆ ಸಾಧ್ಯವೆಂದರೆ ಭಾರತದಲ್ಲಿ ಇರುವವರೆಲ್ಲರೂ ಹಿಂದೂಗಳಾಗಬೇಕು. ಅಥವಾ ಹಿಂದೂಗಳಲ್ಲದವರು, ಅನ್ಯ ಧರ್ಮೀಯರು, ಅಂದರೆ ಧಾರ್ಮಿಕ ಅಲ್ಪ ಸಂಖ್ಯಾತರು, ಅದರಲ್ಲೂ ಮುಸ್ಲಿಮರು ಮತ್ತು ಕ್ರೈಸ್ತರು ದೇಶಬಿಟ್ಟು ಹೋಗಬೇಕು. ಈ ರಾಜಕೀಯ ಗುರಿಯನ್ನು ಸಾಧಿಸಲು ರಾಮ ಮತ್ತು ಕೃಷ್ಣರ ಹೆಸರಿನಲ್ಲಿ ರಥಯಾತ್ರೆಗಳು, ಬಾಬ್ರಿ ಮಸೀದಿಯ ಧ್ವಂಸ, ದೇವಸ್ಥಾನಗಳ ನಿರ್ಮಾಣ ಮುಂತಾದುವನ್ನು ಹಿಂದುತ್ವ ರಾಜಕೀಯದ ಭಾಗವಾಗಿ ಮಾಡುತ್ತಾರೆ. ಕೋಮು ರಾಜಕೀಯ, ಸನಾತನ ಧರ್ಮ-ಹಿಂದೂ ಸಂಸ್ಕೃತಿಯ ರಕ್ಷಣೆ-ಪುನರುದ್ಧಾರ ಉದ್ದೇಶದ ಹಿಂದೂ ಮಹಾಸಭಾ, ವಿಶ್ವ ಹಿಂದೂ ಪರಿಷತ್ ರಾಮನ ದಾಸನಾದ ಹನುಮಂತನ ಹೆಸರಿನಲ್ಲಿ ಭಜರಂಗದಳ ಮುಂತಾದ ವಿವಿಧ ಸೇನೆಗಳು, ಸಂಘಟನೆಗಳು, ವಿವಿಧ ಉದ್ದೇಶಗಳ ಸಂಸ್ಥೆಗಳು, ವಿವಿಧ ವಯಸ್ಸಿನ, ವಿವಿಧ ಹಿನ್ನೆಲೆಯ, ಜೀವನ ಶೈಲಿಯ ಜನರನ್ನು ಧರ್ಮ-ಸಂಸ್ಕೃತಿಯ ಹೆಸರಿನಲ್ಲಿ ಸಂಘಟಿಸಲು ವಿವಿಧ ಹೆಸರುಗಳಲ್ಲಿ ಹುಟ್ಟುತ್ತಲೇ ಇವೆ. ಇಂಥ ಮನಸ್ಥಿತಿಯ ಎಲ್ಲ ವಯಸ್ಸಿನ ಜನರು ಸಂಘಪರಿವಾರದ ಸಂಘಟನೆಗಳ ಸದಸ್ಯರಾಗಿ, ಕಾರ್ಯಕರ್ತರಾಗಿ, ಉದ್ಯೋಗಿಗಳಾಗಿ ವಿವಿಧ ಬಗೆಯ ಫಲಾನುಭವಿಗಳಾಗಿ ಕಳೆದ ಆರೇಳು ದಶಕಗಳಿಂದಲೂ ದುಡಿಯುತ್ತಾ ಭಾರತದ ಈಗಿನ ರಾಜಕೀಯ ಸ್ಥಿತಿಯು ನಿರ್ಮಾಣವಾಗಿದೆ.

ಸಾಮಾಜಿಕ ಅಸ್ವಸ್ಥತೆ

ಮಗು ಬೆಳೆಯುವುದೆಂದರೆ ತಾಯಿ-ಮಗು ಇಬ್ಬರಲ್ಲೂ ಇರಬಹುದಾದ ‘ತಾನೇ ಪ್ರಪಂಚ’, ‘ಮಗು ನನ್ನ ಭಾಗ’ ಎಂಬ ಭಾವನೆಗಳಲ್ಲಿ ಆಗುವ ಬದಲಾವಣೆ. ಅಂದರೆ, ವಾಸ್ತವಿಕವಾಗಿ ತಾವು ಒಂದು ಕುಟುಂಬವಾಗಿ ಮತ್ತು ಸಮುದಾಯವಾಗಿ ಪ್ರಪಂಚದೊಂದಿಗೆ ಮತ್ತು ಪರಸ್ಪರವಾಗಿ ಅವಲಂಬನದ – ಸಹಕಾರದ ನಂಟನ್ನು ಹೊಂದಿದ್ದು, ತಮ್ಮಷ್ಟಕ್ಕೇ ಭಿನ್ನರೂ, ಸಾಪೇಕ್ಷವಾಗಿ ಸ್ವತಂತ್ರರೂ ಆಗಿದ್ದೇವೆಂದು ಕಂಡುಕೊಳ್ಳುತ್ತಾ ಬದುಕನ್ನು ಕಟ್ಟಿಕೊಳ್ಳುವುದು. ಇದನ್ನೇ ವ್ಯಕ್ತಿಯ ಸಾಮಾಜೀಕರಣ ಎನ್ನುತ್ತಾರೆ. ಯಾವುದೇ ಕಾರಣಕ್ಕಾಗಿ ಈ ಬದಲಾವಣೆಯು ತಾಯಿ ಅಥವಾ ಮಗುವಿನಲ್ಲಿ, ಅಥವಾ ಇಬ್ಬರಲ್ಲಿಯೂ ಸರಿಯಾಗಿ ಆಗದಿದ್ದರೆ, ಅಂಥವರು ಸದಾ ಅಭದ್ರತೆಯಿಂದ, ಅಕಾರಣವಾದ ಆತಂಕದಿಂದ, ಮನುಷ್ಯರ ಮೇಲೆ ನಂಬಿಕೆ ಪ್ರೀತಿ-ವಿಶ್ವಾಸಗಳು ಇಲ್ಲದಂಥ ಸಾಮಾಜಿಕ ಅಸ್ವಸ್ಥತೆಯಿಂದ ನರಳುತ್ತಾರೆ. ಇತರರನ್ನೂ ನರಳಿಸುತ್ತಾರೆ. ಕೇವಲ ನಂಬಿಕೆಯ ಆಧಾರದ ಮೇಲೆ ನಿಂತ ಸರ್ವಶಕ್ತ ದೇವರೆನ್ನುವ ಅತಿಮಾನುಷ ಶಕ್ತಿಗೆ ಶರಣಾಗುತ್ತಾರೆ. ಅಂಥ ದೇವರ ಪ್ರತೀಕವಾದ ವ್ಯಕ್ತಿಗಳನ್ನು ಆರಾಧಿಸುತ್ತಾರೆ. ತಮಗಿಂತ ಚಿಕ್ಕವರು ಅಥವಾ ದುರ್ಬಲರು ತಮಗೆ ಸದಾ ವಿಧೇಯರಾಗಿರಬೇಕೆಂದು ಬಯಸುತ್ತಾರೆ. ಹಣ, ಅಧಿಕಾರ ಸಿಕ್ಕಾಗ ಅವರಲ್ಲಿ ತಾನು ಹೇಳಿದಂತೆಯೇ ಎಲ್ಲರೂ ಕೇಳಬೇಕೆಂದು, ತಾನು ಹೇಳಿದ್ದೇ ಸರಿ ಮತ್ತು ಸತ್ಯವೆಂದೂ, ಭಿನ್ನ ಮತ, ಭಿನ್ನ ಧೋರಣೆ, ಭಿನ್ನ ಆಲೋಚನೆ ಇರಲೇಬಾರದೆಂದೂ ನಂಬುವ ಸಾಮಾಜಿಕ ವ್ಯಕ್ತಿತ್ವ ರೂಪುಗೊಳ್ಳುತ್ತದೆ. ಅಂಥವರಿಗೆ ರಾಜಕೀಯ ಅಧಿಕಾರ ಸಿಕ್ಕರೆ, ತನ್ನಂತೆಯೇ ಇರುವ ಜನರನ್ನು ಸಂಘಟಿಸಿ ಇತರರನ್ನು ಆಳುತ್ತಾ, ಕೊನೆಗೆ ಅಂಥ ಆಳ್ವಿಕೆಯೇ ಸರ್ವಾಧಿಕಾರವಾಗಿ, ಸಂಘಟನಾತ್ಮಕವಾಗಿ ಫ್ಯಾಸೀವಾದವಾಗಿ ಸಮಾಜವನ್ನು ವ್ಯಾಪಿಸುತ್ತದೆ. ಭಿನ್ನಮತದ ಬಗೆಗಿರುವ ಅಸಹನೆಯು ಅಂತಿಮವಾಗಿ ದ್ವೇಷವಾಗಿ ಭಿನ್ನ ಮತದ, ಭಿನ್ನ ಧೋರಣೆಯ ವ್ಯಕ್ತಿಗಳ ನಿರ್ನಾಮವನ್ನು ಬಯಸುತ್ತದೆ. ಅಂಥ ಮನಸ್ಥಿತಿ ಮತ್ತು ನಡವಳಿಕೆಗಳು ಸಾಮಾಜಿಕ ಮತ್ತು ಮಾನಸಿಕ ಅಸ್ವಸ್ಥತೆಯ ಲಕ್ಷಣ. ಅಂಥವರಿಗೆ ಬೇರೆಯವರ ನೋವು-ನರಳಿಕೆಗಳು ತಟ್ಟುವುದೇ ಇಲ್ಲ.

ಮಗುವಿನ ಮಾನಸಿಕ ಮತ್ತು ಸಾಮಾಜಿಕ ಬೆಳವಣಿಗೆಯಲ್ಲಿ ಎರಡು ಪ್ರಮುಖ ಅಂಶಗಳಿವೆ. ಒಂದು, ವಸ್ತುನಿಷ್ಠತೆ (ಆಬ್ಜೆಕ್ಟಿವಿಟಿ)ಯ ವಿಕಾಸ. ಅಂದರೆ, ವಸ್ತುಗಳು, ಮತ್ತು ವ್ಯಕ್ತಿಗಳು, ಒಟ್ಟಿನಲ್ಲಿ ಪ್ರಪಂಚವು ತನಗಿಂತ ಬೇರೆ ಮತ್ತು ತನ್ನಿಂದ ಸ್ವತಂತ್ರ ಅಸ್ತಿತ್ವವನ್ನು ಪಡೆದ ವಾಸ್ತವವಾಗಿದೆ ಎಂಬ ತಿಳುವಳಿಕೆಯ ಬೆಳವಣಿಗೆ. ಎರಡು, ವಸ್ತು ಮತ್ತು ವ್ಯಕ್ತಿಗಳು ಒಂದೇ ರೀತಿಯಲ್ಲಿ ಕಂಡರೂ ಅವೆಲ್ಲವೂ, ಅವರೆಲ್ಲರೂ ಪರಸ್ಪರ ಅನನ್ಯ ಮತ್ತು ವಿಶಿಷ್ಟ ಎಂದು ಗುರುತಿಸುವ ಬೌದ್ಧಿಕಶಕ್ತಿಯ ಬೆಳವಣಿಗೆ. ವ್ಯಕ್ತಿಯು ಮಗುವಿನ ವಯಸ್ಸನ್ನು ಮೀರಿದ ಮೇಲೂ ಇವುಗಳ ಬೆಳವಣಿಗೆ ಆಗಿಲ್ಲವೆಂದರೆ, ಹೊರನೋಟಕ್ಕೆ ಯಾವ ನ್ಯೂನತೆಯೂ ಕಾಣುವುದಿಲ್ಲವಾದ್ದರಿಂದ ಅಂಥ ವ್ಯಕ್ತಿಗಳನ್ನು ಯಾರೂ ‘ಅಂಗವಿಕಲರು’ ಎನ್ನುವುದಿಲ್ಲ. ಅಂಥವರು ಪ್ರಭಾವಶಾಲಿಗಳಾದರೆ ಮುಗ್ಧರೆಂದು, ನಿರ್ಲಿಪ್ತರೆಂದು, ಗಟ್ಟಿ ವ್ಯಕ್ತಿತ್ವದವರೆಂದು, ಉಕ್ಕಿನ ಮನಸ್ಸಿನವರೆಂದು ಹೊಗಳುತ್ತಾರೆ. ನಿರ್ಬಲರು ಅಥವಾ ಬಡವರಾದರೆ ಪೆದ್ದರೆಂದು ಲೇವಡಿ ಮಾಡುತ್ತಾರೆ. ಹುಟ್ಟಿನಿಂದಲೇ ಬರುವ ದೈಹಿಕ, ಬೌದ್ಧಿಕ ಅಥವಾ ಮಾನಸಿಕ ವಿಕಲತೆಯ ವ್ಯಕ್ತಿಗಳು ಈ ಗುಂಪಿಗೆ ಸೇರುವುದಿಲ್ಲ. ಈ ಕಾರಣಕ್ಕಾಗಿಯೇ ಅಂಥವರನ್ನು ಭಿನ್ನ ಸಾಮರ್ಥ್ಯದ ಅಥವಾ ವಿಶೇಷ ಸಾಮರ್ಥ್ಯದವರೆಂದು ಗುರುತಿಸಬೇಕಾದ ಮಾನವೀಯ ಅಗತ್ಯ ಹುಟ್ಟಿಕೊಂಡಿದೆ. ಆದರೆ ಅಂಗವಿಕಲತೆಗೂ, ವಸ್ತುನಿಷ್ಠತೆ, ವಿವೇಕ ಮತ್ತು ತರ-ತಮದ ಜ್ಞಾನ (ಡಿಸ್‌ಕ್ರಿಶನ್) ಇಲ್ಲದಿರುವ ಸ್ಥಿತಿಗೂ ಇರುವ ನಿಜವಾದ ವ್ಯತ್ಯಾಸ ಮಕ್ಕಳಿಗೆೆ ಹೇಗೆ ತಿಳಿಯುವುದಿಲ್ಲವೋ ಹಾಗೆಯೇ ಸ್ವತಹ ತಾವೇ ಮಾನಸಿಕ ಮತ್ತು ಸಾಮಾಜಿಕ ಅಸ್ವಸ್ಥತೆಯಿಂದ ನರಳುವ ಪೆದ್ದರಿಗೂ ತಿಳಿಯುವುದಿಲ್ಲ.

ಆಳುವ ವರ್ಗದ ಬುದ್ಧಿವಂತರು ಮತ್ತು ಪೆದ್ದರು

ಸಾವಿರಾರು ವರ್ಷಗಳ ಹಿಂದೆ ಇದ್ದ ಗುಲಾಮೀ ಸಮಾಜದ ಒಡೆಯ-ಗುಲಾಮ ಸಂಬಂಧಗಳಲ್ಲಿ ಕ್ರರ‍್ಯವಂತೂ ಇದ್ದೇ ಇತ್ತು. ಜೊತೆಗೆ ಅಪರೂಪಕ್ಕೆ ವರ್ಗತಾರತಮ್ಯ ಬೆರೆತ ಮಾನವೀಯತೆಯೂ ಇತ್ತು. ಆದರೆ ಅವು ಬೇರೆ ಬೇರೆ ಒಡೆಯ-ಗುಲಾಮರ ನಡುವೆ, ಬೇರೆ ಬೇರೆ ಸಂದರ್ಭಗಳಲ್ಲಿ ಇದ್ದಂಥವು. ಗುಲಾಮರು, ಅಸಹಾಯಕರಾಗಿದ್ದರೂ, ಅವರವರ ಒಡೆಯರ ಜನ-ಧನ ಬಲಕ್ಕೆ ಹೋಲಿಸಿದರೆ ದುರ್ಬಲರಾಗಿದ್ದಿರಬಹುದೇ ಹೊರತು ಅವರು ಪೆದ್ದರಾಗಿರಬೇಕೆಂದೇನೂ ಇಲ್ಲ. ಈಸೋಪನಂಥ ಗುಲಾಮ, ಹನುಮಂತನಂಥ ದಾಸ ಬಹುಶಃ ಅವರವರ ಒಡೆಯರಿಗಿಂತಲೂ ಹೆಚ್ಚು ಬುದ್ಧಿವಂತರಾಗಿದ್ದರೆಂಬುದಕ್ಕೆ ಸಾಹಿತ್ಯಕ ದೃಷ್ಟಾಂತಗಳು ಸಿಗುತ್ತವೆ. ಆದರೆ ಒಡೆಯರು ಪೆದ್ದರಾಗಿದ್ದೂ ಅವರ ಪೆದ್ದುತನ ಬೆಳಕಿಗೆ ಬಾರದ್ದಕ್ಕೆ ಅವರ ಪರವಾದ ಶಕ್ತಿ ರಾಜಕಾರಣದ ಚರಿತ್ರೆ ಕಾರಣವಿರಬಹುದು. ರಾಜ-ಪ್ರಜೆ ಮಾದರಿಯ ಊಳಿಗಮಾನ್ಯ ಸಂಬಂಧಗಳು ನೂರಾರು ವರ್ಷಗಳ ಕಾಲ ಜನರ ಮನಸ್ಸನ್ನು ಆವರಿಸಿ ಅವರ ಪ್ರಜ್ಞೆಯ ಭಾಗವಾಗಿರುವುದರಿಂದ, ರಾಜಭಕ್ತಿ, ರಾಜೋಪಚಾರ, ರಾಜಕಾಲುವೆ, ರಾಜಮಾರ್ಗ ಮುಂತಾದ ಪರಿಕಲ್ಪನೆಗಳ ಜೊತೆಗೆ, ರಾಜದ್ರೋಹ ಮುಂತಾದ ಅಪರಾಧದ ಕಲ್ಪನೆಗಳು ಈಗಲೂ ಚಾಲ್ತಿಯಲ್ಲಿವೆ. ಆದರೆ ಆಳುವ ವರ್ಗದ ಪೆದ್ದರಿಗೆ ಇಂಥವು ಈಗಲೂ ಅವರ ನ್ಯಾಯ ಪ್ರಪಂಚದ ವಾಸ್ತವತೆಗಳಾಗಿವೆ.

ಸಂಘಪರಿವಾರದ ನೇತಾರರು ಮತ್ತು ಕಾಲಾಳುಗಳಲ್ಲಿ ಸಮಾನವಾಗಿ ಕಂಡುಬರುವ ತಾತ್ವಿಕತೆ, ಪಿತೃಪ್ರಧಾನ ಸಾಮಾಜಿಕ ಮೌಲ್ಯಗಳು, ತಾರತಮ್ಯಯುಕ್ತ, ಶ್ರೇಣೀಕೃತ ಸಂಬಂಧಗಳು ಹಿಂದಿನ ಗುಲಾಮೀ ಸಮಾಜ ಮತ್ತು ಊಳಿಗಮಾನ್ಯ ಸಮಾಜದಲ್ಲಿ ತಮ್ಮ ಆಳವಾದ ಬೇರುಗಳನ್ನು ಹೊಂದಿವೆ. ಆದ್ದರಿಂದಲೇ ಸಂಘಪರಿವಾರವು ಯಾವಾಗಲೂ ಸನಾತನ ಧರ್ಮದ, ಋಷಿ, ಮುನಿ, ಸಂತರು, ರಾಜ ಮಹಾರಾಜರು ಚಕ್ರವರ್ತಿಗಳು, ಸ್ಮೃತಿಕಾರರ ಜಪ ಮಾಡುತ್ತದೆ. ಸಂಸ್ಕೃತಭಾಷೆಯನ್ನು ತನ್ನ ಸಂಸ್ಕೃತಿ ಭಾಷೆಯೆಂದು ಕೀರ್ತಿಸುತ್ತದೆ. ಅಮೆರಿಕಾದ ಕಾನೂನು ಕವಚಿದ ಧೂರ್ತ ಮಿಲಿಟರಿ ಬಂಡವಾಳವಾದ, ಹಿಟ್ಲರ್ ಜರ್ಮನಿಯ ಶಿಸ್ತುಬದ್ಧ ಸಾಂಘಿಕ ಮೃಗಬಲ, ಇಸ್ರೇಲಿನ ಕ್ರೌರ್ಯ-ಗೂಢಚಾರಿಕೆ, ದೇಶೀಯ ಕಾರ್ಪೊರೇಟ್ ಬಂಡವಾಳದ ಹಣಬಲ-ತಾಂತ್ರಿಕ ಸೌಲಭ್ಯಗಳನ್ನು ಪಡೆದು ಸಾಧು-ಸನ್ಯಾಸಿಗಳ ವೇಷದಲ್ಲಿ ಅಧಿಕಾರ ನಡೆಸುವ ಸಂಘಪರಿವಾರವು ಸಾಮಾಜಿಕವಾಗಿ ಅಸ್ವಸ್ಥರಾದ ಪೆದ್ದರ ಸಂಘಟನೆಯಾಗಿದೆ. ಎಲ್ಲ ಆಧುನಿಕ ಆವಿಷ್ಕಾರ-ತಂತ್ರಜ್ಞಾನಗಳ ಫಲಾನುಭವಿಗಳಾಗಿದ್ದುಕೊಂಡು ಮಧ್ಯಯುಗದ ಮೌಲ್ಯಗಳನ್ನು ಪ್ರತಿಪಾದಿಸುವ ಸಾಮಾಜಿಕ ಸಂಬಂಧಗಳನ್ನು ಮುನ್ನೊತ್ತುತ್ತಿದೆ. ಸರಿ-ತಪ್ಪು, ಸತ್ಯ-ಸುಳ್ಳು, ಒಳ್ಳೆಯದು-ಕೆಟ್ಟದ್ದು, ನ್ಯಾಯ-ಅನ್ಯಾಯ, ವೈಚಾರಿಕ-ಅವೈಚಾರಿಕ, ಜ್ಞಾನ-ಮೌಢ್ಯಗಳ ನಡುವಿನ ಗೆರೆಯನ್ನು ಬೇಕಾದ ಕಡೆಗೆ ಸರಿಸುವ ಮಾನಸಿಕ ಮತ್ತು ಸಾಮಾಜಿಕ ಅಸ್ವಾಸ್ಥ್ಯದಿಂದ ನರಳುತ್ತಿದೆ. ಈ ಆರೇಳು ದಶಕಗಳ ಅವಿರತ ಮತ್ತು ನಿಯೋಜಿತ ಪ್ರಯತ್ನಗಳಿಂದಾಗಿ ರಾಜ್ಯಾಡಳಿತ, ಸಾಂವಿಧಾನಿಕ ಸಂಸ್ಥೆಗಳು, ಪೊಲೀಸು, ಕೋರ್ಟು, ಕಛೇರಿ, ಮೀಡಿಯಾ, ಸರ್ಕಾರಿ ಮತ್ತು ಖಾಸಗಿ ಸಾಹಿತ್ಯಕ ಮತ್ತು ಸಾಂಸ್ಕೃತಿಕ ಸಂಸ್ಥೆಗಳು ಹೀಗೆ ಎಲ್ಲಾ ಕಡೆಗಳಲ್ಲೂ ಸಾಮಾಜಿಕ ಅಸ್ವಸ್ಥತೆಯಿಂದ ನರಳುವ ಜನರನ್ನು ತುಂಬಿಬಿಟ್ಟಿದೆ. ಇಡೀ ಆಡಳಿತ ಯಂತ್ರವನ್ನು ರಾಚನಿಕವಾಗಿ ಸಾಮಾಜಿಕ ಅಸ್ವಸ್ಥರ ಕೈಗೆ ಕೊಟ್ಟಿದೆ. ಹೀಗಾಗಿ ಸಂಘಪರಿವಾರವು ಒಂದುವೇಳೆ ರಾಜ್ಯಾಧಿಕಾರವನ್ನು ಕಳೆದುಕೊಂಡರೂ ಅದು ಈಗಾಗಲೇ ತಂದು ತುಂಬಿರುವ ಸಾಮಾಜಿಕ ಅಸ್ವಸ್ಥರಿಂದ ಆಡಳಿತ ಯಂತ್ರವನ್ನು ಮುಕ್ತಗೊಳಿಸುವುದು ಅಷ್ಟು ಸುಲಭವಾದ ಕಾರ್ಯವೇನಲ್ಲ.

ಈ ಸನಾತನ ಅಸ್ವಸ್ಥತೆಗೆ ಮದ್ದಿಲ್ಲ ಎಂಬುದು ಅಪ್ರಿಯವಾದ ಕಟ್ಟು ಸತ್ಯ, ನಿಜ. ಆದರೆ ಭಾರತದ ಜನರ ಕಷ್ಟಕ್ಕೆ ಪರಿಹಾರವಿದೆ. ವೈಚಾರಿಕವಾದ, ವೈಜ್ಞಾನಿಕವಾದ ಆರೋಗ್ಯಕರವಾದ ಧೋರಣೆ-ಉದ್ದೇಶ ಮತ್ತು ಗ್ರಹಿಕೆಯುಳ್ಳ ಶ್ರಮಿಕ ಜನರು ಪಡೆಯಬೇಕಾದ ರಾಜಕೀಯ ಅಧಿಕಾರ, ಇಂದಾಗಲಿ, ಎಂದಾಗಲಿ ಸಾಂವಿಧಾನಿಕವಾಗಿ ಸಾಧ್ಯವಿರುವ ಏಕೈಕ ಪರಿಹಾರ. ಯಾವ ಬದಲಾವಣೆಯೂ ತಾನಾಗಿ ಆಗುವುದಿಲ್ಲ. ಬದಲಾವಣೆಯನ್ನು ಮಾಡಬೇಕು.

ನಾವೆಲ್ಲರೂ ವಿಶ್ವಕುಟುಂಬಿಯಾಗೋಣ, ಜಗತ್ತಿನ ಎಲ್ಲ ಜನರೂ ಸುಖ ನೆಮ್ಮದಿಗಳಿಂದ ಬಾಳಲಿ. ಎಲ್ಲೆಡೆ ಸುಖ ಸಮೃದ್ಧಿಗಳು ಸಾಧ್ಯವಾಗಲಿ, ಎಲ್ಲೆಡೆ ಸುಖ ಶಾಂತಿಗಳು ನೆಲಸಲಿ ಎಂದು ಸದಾ ಬಯಸುವುದು ಸ್ವಸ್ಥ ಮನಸ್ಸಿನ ಲಕ್ಷಣ. ಇವು ಹಿಂದಿನಿಂದಲೂ ನಮ್ಮ ಹಿರಿಯರೂ ಸಹ ಹೇಳಿಕೊಂಡು ಬಂದ ಆಶಯಗಳು. ಇವನ್ನು ನಾವೂ ಇಂದು ಸಂಸ್ಕೃತದಲ್ಲಿ ಹೇಳಿದ ಮಾತ್ರಕ್ಕೆ ಅವು ಈಡೇರುವುದಿಲ್ಲ. ಅವನ್ನು ನಿಜ ಜೀವನದಲ್ಲಿ ವಾಸ್ತವವಾಗಿಸಬಲ್ಲ ಭೌತಿಕ ವಸ್ತುಸ್ಥಿತಿಗಳನ್ನು ನಿರ್ಮಿಸಬೇಕಾದ್ದು ಎಲ್ಲ ಸ್ವಸ್ಥ ಮನಸ್ಸಿನ ಜನರ ಜವಾಬ್ದಾರಿ. ಅದಕ್ಕಾಗಿ ಅಗತ್ಯವಾದ ಕ್ರಿಯಾಶೀಲವಾದ ತಿಳುವಳಿಕೆ ಮತ್ತು ಸೃಜನಶೀಲ ಜ್ಞಾನವನ್ನು ಸಂಪಾದಿಸಬೇಕು.

Donate Janashakthi Media

Leave a Reply

Your email address will not be published. Required fields are marked *