ಸಮಾಜವಾದ ಮತ್ತು ಮಹಾರೋಗ

ಅನು : ಟಿ.ಸುರೇಂದ್ರ ರಾವ್

ಕೃಪೆ : ಇಂಡಿಯನ್ ಎಕ್ಸ್ ಪ್ರೆಸ್

ಕೋವಿಡ್-19 ಮಹಾರೋಗವನ್ನು ಹೆಚ್ಚು ಯಶಸ್ವಿಯಾಗಿ ನಿಯಂತ್ರಣ ಮಾಡಿರುವ ದೇಶಗಳು ಎಡ ಪಕ್ಷಗಳ ಆಡಳಿತದಲ್ಲಿರುವ ಕಲ್ಯಾಣ ರಾಜ್ಯಗಳಾಗಿವೆ. ಇಲ್ಲಿ ನಮಗೊಂದು ಪಾಠವಿದೆ.

ಸಂವಿಧಾನದ ಪ್ರಸ್ತಾವನೆಯಲ್ಲಿರುವ ‘ಸಮಾಜವಾದ’ಮತ್ತು ‘ಜಾತ್ಯತೀತವಾದ’ಪದಗಳನ್ನು ತೆಗೆದುಹಾಕಬೇಕೆಂಬ ಒಂದು ಅರ್ಜಿಯನ್ನು ಸುಪ್ರೀಂಕೋರ್ಟಿನಲ್ಲಿ ಸಲ್ಲಿಸಲಾಗಿದೆ. ಆದರೆ ಕಳೆದ ಒಂದೆರಡು ದಶಕಗಳಿಂದ ನಿರಂತರವಾದ ಸವೆತಕ್ಕೆ ಒಳಗಾಗಿದ್ದರೂ, ಇವೆರಡೂ ತತ್ವಗಳು ನಮ್ಮ ರಾಜಕೀಯ ಪೂರ್ವಜರು ಕಲ್ಪಿಸಿಕೊಂಡಿದ್ದ ಗಣತಂತ್ರ ವ್ಯವಸ್ಥೆಯ ಕೇಂದ್ರಗಳಾಗಿದ್ದವು. ತೊಂಭತ್ತರಲ್ಲಿ ನವ-ಉದಾರವಾದಿ ನೀತಿಗಳನ್ನು ಅಪ್ಪಿಕೊಳ್ಳುವುದರೊಂದಿಗೆ, ಸಮಾಜವಾದವನ್ನು ಪಕ್ಕಕ್ಕೆ ತಳ್ಳಲಾಯಿತು. ಆದರೆ ಈಗ ಮುಂದುವರಿಯುತ್ತಿರುವ ಮಹಾರೋಗದ ಕಾರಣದಿಂದಾಗಿ, ಸಮಾಜವಾದ ಕೇವಲ ಭಾರತಕ್ಕೆ ಮಾತ್ರವಲ್ಲ ಇಡೀ ವಿಶ್ವಕ್ಕೇ ಪ್ರಸ್ತುತವಾಗಿ ಪರಿಣಮಿಸಿದೆ. ಕೋವಿಡ್-19 ಮಹಾರೋಗಕ್ಕೆ ಲಸಿಕೆ ಕಂಡುಹಿಡಿಯಲು ಜಗತ್ತು ಕೈ ಕೈ ಮಿಲಾಯಿಸುತ್ತಿರುವಾಗ ಮಹಾರೋಗದ ಪರಿಣಾಮವನ್ನು ಸ್ಥೂಲವಾಗಿ ಪರಿಶೀಲಿಸಿದಾಗ ಕಂಡುಬಂದಿರುವುದೇನೆಂದರೆ, ಸಮಾಜವಾದಿ ಆದರ್ಶಗಳು ಜೀವರಕ್ಷಕವಾಗಿ ಪರಿಣಮಿಸಿವೆ. ಇದನ್ನು ಇನ್ನೂ ಸಮರ್ಥಿಸಬೇಕಾದ ಹಾಗೂ ಮೌಲ್ಯಮಾಪನ ಮಾಡಬೇಕಾದ ಅಗತ್ಯವಿದೆ.

ನವ-ಉದಾರವಾದಿ ಜಗತ್ತಿನಲ್ಲಿ, ಯಾವುದೇ ಒಂದು ದೇಶವನ್ನು ಶುದ್ಧ ಸಮಾಜವಾದಿ ದೇಶವೆಂದು ಒಂದೇ ಗುಂಪಿಗೆ ಸೇರಿಸುವುದು ಕಷ್ಟವೇ ಸರಿ. ಸಮಾಜದ ಸ್ವಾಮ್ಯಕ್ಕೆ ಒಳಪಡಿಸಿದ ಔಷಧಿಗಳನ್ನು ಪೂರೈಸುವ ದೇಶಗಳು ಕಲ್ಯಾಣ ರಾಜ್ಯಗಳೆಂದು ಕರೆಯಬಹುದಾದ – ಹಿಂದಿನ ವರ್ಷಗಳ ಸಮಾಜವಾದಿ ದೇಶಗಳ ತೀರ ಹತ್ತಿರದ ಬಂಧುವೆನ್ನಬಹುದಾದ – ಮಾದರಿಗಳನ್ನು ರೂಪಿಸಿದವು.

ಕೋವಿಡ್-19 ಮಹಾರೋಗವು ಸರ್ಕಾರಗಳ ದೌರ್ಬಲ್ಯವನ್ನು, ಆರೋಗ್ಯಸೇವಾ ಮಾದರಿಗಳನ್ನು ಮತ್ತು ರಾಜಕೀಯ ಸಿದ್ಧಾಂತಗಳನ್ನು ಬಯಲುಮಾಡಿದೆ. ಕೋವಿಡ್ಗೆ ಸಂಬಂಧಪಟ್ಟಂತೆ ರೋಗದ ವ್ಯಾಪಕತೆ ಹಾಗೂ ಮರಣ ಪ್ರಮಾಣದ ಎರಡೂ ವಿಷಯಗಳಲ್ಲಿ ಈ ಮಹಾರೋಗವನ್ನು ನಿರ್ವಹಿಸುವಲ್ಲಿ ಯಾವ ದೇಶಗಳು ಉತ್ತಮ ಕೆಲಸ ಮಾಡಿವೆ ಮತ್ತು ಯಾವ ರಾಜಕೀಯ ಸಿದ್ದಾಂತಗಳನ್ನು ಆಡಳಿತವು ಅನುಸರಿಸುತ್ತಿವೆ ಎನ್ನುವುದನ್ನು ನಾವು ಮುಖ್ಯವಾಗಿ ನೋಡಬೇಕಾಗಿದೆ.

ಉತ್ತಮ ಆರೋಗ್ಯ ವ್ಯವಸ್ಥೆಯನ್ನು ಹೊಂದಿರುವ ದೇಶಗಳು ಈ ಮಹಾರೋಗದ ಅವಧಿಯಲ್ಲಿ ಉತ್ತಮ ಕಾರ್ಯ ನಿರ್ವಹಿಸಬಹುದು ಎಂದು ಕಲ್ಪಿಸಿಕೊಳ್ಳಲು ಇದು ರಾಕೆಟ್ ವಿಜ್ಞಾನವಲ್ಲ. ಹೀಗೆ ಹೇಳಿದ ಮೇಲೆ, ಈ ಮಹಾರೋಗದ ಗುಣಲಕ್ಷಣ ಕುರಿತ ಸ್ಪಂದನೆ ಮತ್ತು ಫಲಿತಾಂಶಗಳು ಅಂತಹ ಯಾವುದೇ ಸರಳ ಪ್ರವೃತ್ತಿಯನ್ನು ತೋರಿಸಲಿಲ್ಲ. ಆರೋಗ್ಯ ಆರೈಕೆ ನಿರ್ವಹಣೆಯ ಜೊತೆಯಲ್ಲೇ ಅದು ರಾಜಕೀಯ ಸ್ಪಂದನೆ ಮತ್ತು ಸಂಕಲ್ಪವನ್ನೂ ಒಳಗೊಂಡಿರುತ್ತದೆ.

ಒಂದು ಉತ್ತಮ ಸಾರ್ವಜನಿಕ ಆರೋಗ್ಯ ವ್ಯವಸ್ಥೆಯ ಯೋಜನೆ ಮತ್ತು ಅನುಷ್ಠಾನ ಯಾವುದೇ ಸಮಾಜವಾದಿ ಸ್ವರೂಪದ ಬಹು ಮುಖ್ಯವಾದ ಅಂಗವಾಗಿರುತ್ತದೆ ಎಂಬ ಸಂಗತಿಯು ಈ ಬಾರಿಯ ಮಹಾರೋಗದ ಅವಧಿಯಲ್ಲಿ ಉತ್ತಮ ಪರಿಣಾಮ ಬೀರಿದಂತೆ ತೋರುತ್ತದೆ. ಅತ್ಯಾಧುನಿಕ ಆರೋಗ್ಯಸೇವೆಯ ತಂತ್ರಜ್ಞಾನದ ಲಭ್ಯತೆಯನ್ನು ಹೊಂದಿದ್ದರೂ ಕೂಡ ಬಂಡವಾಳಶಾಹಿ ವ್ಯವಸ್ಥೆಯಲ್ಲಿನ ಖಾಸಗಿ ಆರೋಗ್ಯ ಸೇವೆ ತೀರಾ ಕಳಪೆಯದಾಗಿತ್ತು. ಅಮೆರಿಕದ ಆರೋಗ್ಯ ಸೇವೆ ಇದಕ್ಕೆ ಸ್ವಷ್ಟ ನಿದರ್ಶನ.

ಉತ್ತಮ ಸ್ಪಂದನೆಯ ದೃಷ್ಟಿಯಿಂದ ಆಸ್ಟ್ರೇಲೇಶಿಯ(ಆಸ್ಟ್ರೇಲಿಯ, ನ್ಯೂಜಿಲೆಂಡ್ ಮತ್ತು ಅವುಗಳ ಸುತ್ತಣ ದಕ್ಷಿಣ ಶಾಂತಸಾಗರದ ದ್ವೀಪಗಳು) ಪ್ರದೇಶದಲ್ಲಿ ನ್ಯೂಜಿಲೆಂಡ್ ಎದ್ದುಕಾಣುವ ದೇಶವಾಗಿದೆ. ಅಲ್ಲಿ ಸರಿಸುಮಾರು 1757 ಪ್ರಕರಣಗಳೊಂದಿಗೆ ಅತ್ಯಂತ ಕಡಿಮೆ ಸಾವಿನ ದರವಾದ ಒಂದು ಮಿಲಿಯನ್ಗೆ 456 ಸಾವುಗಳು ಮಾತ್ರ ಸಂಭವಿಸಿ, ಕೋವಿಡ್-19ರ ಅಂಕಿಅಂಶಗಳಲ್ಲಿ ನ್ಯೂಜಿಲೆಂಡ್ ಜಗತ್ತಿನಲ್ಲೇ ಅತ್ಯಂತ ಉತ್ತಮ ಸ್ಥಾನದಲ್ಲಿದೆ. ಆ ದೇಶವು ಪ್ರಸ್ತುತ ಲೇಬರ್ ಪಕ್ಷದ ಆಡಳಿತದಲ್ಲಿದೆ, ಎಡಪಂಥೀಯ ನಿಲುವನ್ನು ಹೊಂದಿದೆ. ಅಲ್ಲಿ ಆರೋಗ್ಯ ವಲಯಕ್ಕೆ ಜಿಡಿಪಿಯ ಶೇಕಡಾ 11 ರಷ್ಟು ವೆಚ್ಚ ಮಾಡಲಾಗುತ್ತದೆ. ಅದೇ ಭಾರತದಲ್ಲಿ, ಸಂವಿಧಾನದ ಪ್ರಸ್ತಾವನೆಯಲ್ಲಿ “ಸಮಾಜವಾದ” ಎಂಬ ಕಲ್ಪನೆಯನ್ನು ಹೊಂದಿದ್ದಾಗ್ಯೂ ಆರೋಗ್ಯ ವಲಯಕ್ಕೆ ವಿಷಾದಕರ ಕೇವಲ ಶೇಕಡಾ 1 ನ್ನು ಮಾತ್ರ ತೆಗೆದಿರಿಸಲಾಗಿದೆ.

ಈ ಬಾರಿಯ ಮಹಾರೋಗದ ಅವಧಿಯಲ್ಲಿ ಉತ್ತಮ ಸಾಧನೆ ಮಾಡಿರುವ ಬಹುತೇಕ ಯೂರೋಪಿಯನ್ ದೇಶಗಳು ಸಂಪೂರ್ಣವಾಗಿ ಕಲ್ಯಾಣ ರಾಜ್ಯಗಳಾಗಿದ್ದು ಅವು ಸಮಾಜವಾದದತ್ತ ವಾಲಿವೆ ಅಥವಾ ಎಡ ಮೈತ್ರಿಕೂಟದ ಅಧಿಕಾರ ಹೊಂದಿವೆ. ಜರ್ಮನಿಯಲ್ಲಿ ಮಹಾರೋಗವು ತೀವ್ರಗತಿಯಲ್ಲಿ ಹಬ್ಬಿತು, ಆದರೆ ಬಹಳ ಬೇಗನೆ ಸಾವನ್ನು ನಿಯಂತ್ರಿಸಲು ಸಾಧ್ಯವಾಯಿತು. ಇಲ್ಲಿಯವರೆಗೆ, ಜರ್ಮನಿಯಲ್ಲಿ 2,47,000 ಪ್ರಕರಣಗಳು ವರದಿಯಾಗಿವೆ, ಆದರೆ ಸಾವಿನ ದರವು ಒಂದು ಮಿಲಿಯನ್ಗೆ 108 ಮಾತ್ರ. ಜರ್ಮನಿಯ ಆರೋಗ್ಯ ವೆಚ್ಚ ಜಿಡಿಪಿಯ ಶೇಕಡಾ 11 ರಷ್ಟಿದೆ, ಮತ್ತು ಇದು ಯೂರೋಪಿಯನ್ ಯೂನಿಯನ್ನ ಇತರ ದೇಶಗಳು ಆರೋಗ್ಯಕ್ಕೆ ಮಾಡುವ ಸರಾಸರಿ ವೆಚ್ಚದ ಶೇಕಡಾ 1 ರಷ್ಟು ಹೆಚ್ಚಿದೆ. ಕಳೆದ ಹಲವಾರು ವರ್ಷಗಳಿಂದ ಎಡಪಂಥೀಯ ಮೈತ್ರಿಕೂಟದ ಸರ್ಕಾರವನ್ನು ಹೊಂದಿರುವ ಪೋರ್ಚುಗಲ್ ದೇಶವು ಮಹಾರೋಗವನ್ನು ಉತ್ತಮವಾಗಿ ನಿಯಂತ್ರಿಸಿದೆ. ಅಲ್ಲಿಯ ಪ್ರಜಾಸತ್ತಾತ್ಮಕವಾಗಿ ಯೋಜಿಸಿ ಜಾರಿಗೆ ತಂದ ಲಾಕ್ಡೌನ್ ಬೇರೆಲ್ಲಾ ಯೂರೋಪಿಯನ್ ಯೂನಿಯನ್ ದೇಶಗಳಿಗಿಂತ ಮೊದಲೇ ಸಡಿಲಗೊಳಿಸಲಾಯಿತು. ಅಲ್ಲಿ 58,000 ಪ್ರಕರಣಗಳೊಂದಿಗೆ 1,827 ಸಾವುಗಳು ಆದವು. ಇದು ಪಕ್ಕದಲ್ಲೇ ಇರುವ ನೆರೆಹೊರೆ ದೇಶವಾದ ಸ್ಪೇನ್ಗೆ ಹೋಲಿಸಿದರೆ ಪಕ್ಕಾ ಕಣ್ಣಿಗೆ ರಾಚುವಷ್ಟು ವ್ಯತಿರಿಕ್ತವಾಗಿತ್ತು. ಸ್ಪೇನ್ ವೈರಾಣುವಿನಿಂದ 4,80,000 ಪ್ರಕರಣಗಳೊಂದಿಗೆ 29,194 ಸಾವುಗಳನ್ನು ಕಂಡು ಅತ್ಯಂತ ವಿನಾಶಕ್ಕೆ ತಳ್ಳಲ್ಪಟ್ಟಿತು. ಆರೋಗ್ಯ ವಲಯಕ್ಕೆ ಪೋರ್ಚುಗಲ್ಲಿನ ಒಟ್ಟು ವೆಚ್ಚ ಅದರ ಜಿಡಿಪಿಯ ಶೇಕಡಾ 9.5 ರಷ್ಟಿದೆ. ಇದೇ ರೀತಿಯ ಮತ್ತೊಂದು ಯೂರೋಪಿಯನ್ ದೇಶ ಮಹಾರೋಗವನ್ನು ನಿರ್ವಹಿಸುವಲ್ಲಿ ಉತ್ತಮ ಸಾಧನೆ ಮಾಡಿರುವುದು ಐಸ್ಲ್ಯಾಂಡ್, ಅಲ್ಲಿ 2,121 ಪ್ರಕರಣಗಳು ಮತ್ತು 10 ಸಾವುಗಳಾಗಿವೆ. ಸ್ವಾರಸ್ಯವೆಂದರೆ, ಐಸ್ಲ್ಯಾಂಡಿನ ಜನರು 2017ರ ಸಾರ್ವತ್ರಿಕ ಚುನಾವಣೆಯಲ್ಲಿ ಬಹುಮತದೊಂದಿಗೆ ಎಡಪಂಥೀಯ ಸರ್ಕಾರವನ್ನು ಆಯ್ಕೆ ಮಾಡಿದ್ದಾರೆ.

ಲ್ಯಾಟಿನ್ ಅಮೆರಿಕಾದ ದೇಶಗಳಲ್ಲಿ ಕೂಡ, ಜನ ಕೇಂದ್ರಿತ ಕಾರ್ಯಕ್ರಮಗಳ ಜತೆ ಆರೋಗ್ಯ ವಲಯಕ್ಕೆ ಹೆಚ್ಚು ವೆಚ್ಚ ಮಾಡಿದ ದೇಶಗಳು ‘ಜಾಗರೂಕ’ವಾಗಿ ವೆಚ್ಚ ಮಾಡಿದ ದೇಶಗಳಿಗಿಂತ ಉತ್ತಮವಾಗಿ ಮಹಾರೋಗವನ್ನು ಎದುರಿಸಿವೆ. ಆರ್ಜಂಟೈನಾ ಅದಕ್ಕೆ ಅತ್ಯುತ್ತಮ ಉದಾಹರಣೆ. 40,000 ಕೋವಿಡ್-19 ಪ್ರಕರಣಗಳು ಮತ್ತು 800 ಸಾವುಗಳೊಂದಿಗೆ ತನ್ನ ಇತರ ನೆರೆಹೊರೆಯವರಿಗಿಂತ ಉತ್ತಮ ಸಾಧನೆ ಮಾಡಿದೆ. ಆ ದೇಶದಲ್ಲಿ ಪೆರೊನಿಸ್ಟರು ಅಧಿಕಾರದಲ್ಲಿದ್ದಾರೆ, ಅವರು ಎಡಪಂಥೀಯ ಆರ್ಥಿಕ ನೀತಿಗಳನ್ನು ಅನುಸರಿಸುತ್ತಾರೆ. ಅರ್ಜಂಟೈನಾದ ಜನಸಂಖ್ಯೆಯು ಸರಿಸುಮಾರು ಪಕ್ಕದ ಬ್ರೆಜಿಲ್ಗೆ ಹೋಲಿಸಬಹುದಾದರೂ, 3.96 ಲಕ್ಷದ ಪ್ರಕರಣಗಳು ಮತ್ತು 1.23 ಲಕ್ಷ ಸಾವಿನೊಂದಿಗೆ ಬಲಪಂಥೀಯ ಸರ್ಕಾರ ಹೊಂದಿರುವ ಬ್ರೆಜಿಲ್ ವಿನಾಶದತ್ತ ಸಾಗಿದೆ. ಕಳೆದ ಎರಡು ದಶಕಗಳಿಂದ ಸಮಾಜವಾದಿ ಆಳ್ವಿಕೆಯನ್ನು ಹೊಂದಿರುವ ವೆನಿಜೂಲವು ಮಹಾರೋಗದ ಸಂದರ್ಭದಲ್ಲಿ ಅಶಾದಾಯಕ ಫಲಿತಾಂಶಗಳನ್ನು ತೋರಿಸಿದೆ. ವೆನಿಜೂಲದಲ್ಲಿ 47,756 ಪ್ರಕರಣಗಳು ಮತ್ತು ಕೇವಲ 400 ಸಾವುಗಳು ವರದಿಯಾಗಿವೆ.

ಈ ಪ್ರತಿಪಾದನೆಗೆ ವಿರುದ್ಧವಾಗಿ ಒಂದು ವಾದವನ್ನು ಮುಂದಿಡಬಹುದು: ನ್ಯೂಜಿಲೆಂಡ್, ಜರ್ಮನಿ, ಐಸ್ಲೆಂಡ್ ಅಥವಾ ಅರ್ಜಂಟೈನಾ ಕೂಡ ಸೇರಿಕೊಂಡಂತೆ ಆ ದೇಶಗಳ ಸ್ಥಿತಿಯನ್ನು ಭಾರತದ ಪರಿಸ್ಥಿತಿಗೆ ಹೋಲಿಸುವುದು ಸರಿಯಲ್ಲ, ಏಕೆಂದರೆ ನಮ್ಮ ಜನಸಂಖ್ಯೆಯು ಆ ಎಲ್ಲಾ ದೇಶಗಳ ಒಟ್ಟು ಜನಸಂಖ್ಯೆಯನ್ನು ಮೀರಿಸುತ್ತದೆ. ಈ ಮಾರುಕಟ್ಟೆ ಆರ್ಥಿಕತೆಯ ಪ್ರತಿಪಾದಕರ ಅಥವಾ ಬೆಂಬಲಿಗರ ಸಮಸ್ಯೆ ಏನೆಂದರೆ ಎಲ್ಲ ಸಮಸ್ಯೆಗಳಿಗೂ ಜನಸಂಖ್ಯೆಯ ಏರಿಕೆಯನ್ನು ಮುಂದಿಡುತ್ತಾರೆ. ಅವರ ವಾದವನ್ನೇ ಪರಿಗಣಿಸುವುದಾದರೆ, ಭಾರತದಲ್ಲಿ ಅತ್ಯಂತ ಯಶಸ್ವಿಯಾಗಿ ಮಹಾರೋಗವನ್ನು ಎದುರಿಸುತ್ತಿರುವ ಕೇರಳ ರಾಜ್ಯವು ಅತ್ಯಂತ ಹೆಚ್ಚು ಜನಸಾಂದ್ರತೆಯನ್ನು ಹೊಂದಿರುವ ರಾಜ್ಯವಾಗಿದೆ. ಜನಸಂಖ್ಯೆ ಏರಿಕೆಯ ಆತಂಕಗಳು ಯಾವಾಗಲೂ ಬಡಜನರ ಜನಸಂಖ್ಯೆ ಕುರಿತ ಪ್ರಧಾನ ಕಾಳಜಿ ವ್ಯಕ್ತಪಡಿಸುವ ರಾಜಕೀಯ ಕಾರ್ಯಸೂಚಿಯ ಭಾಗವಾಗಿದೆ. ಜನಸಂಖ್ಯೆಯ ಸ್ಥಿರೀಕರಣದ ಹಾದಿಯು ಒಟ್ಟಾರೆ ಜನಸಮುದಾಯದ ಆರ್ಥಿಕ-ಸಾಮಾಜಿಕ ಅಭಿವೃದ್ಧಿಯ ನೆಲೆಯಲ್ಲಿ ಸಾಗಬೇಕು ಎನ್ನುವುದನ್ನು ನಾವು ಅರ್ಥಮಾಡಿಕೊಳ್ಳುತ್ತಿಲ್ಲ, ಇದನ್ನು ಕೋವಿಡ್-19ನ ಮಹಾರೋಗವು ಚೆನ್ನಾಗಿ ಬಯಲುಮಾಡಿದೆ.

ಒಟ್ಟಿನಲ್ಲಿ, ಸಮಾಜವಾದವು ಯಾವ ಉಪಯೋಗಕ್ಕೂ ಬಾರದ ಒಂದು ವಿಲಕ್ಷಣವಾದ ಸಾಧನವಲ್ಲ ಎನ್ನುವುದು ಈಗ ಸ್ಪಷ್ಟ. ಅದರ ಅತ್ಯಂತ ನಿಷ್ಕ್ರಿಯ, ರೂಪಾಂತರಗೊಂಡ, ಅಸಂಬದ್ಧ ಸ್ವರೂಪದಲ್ಲಿ ಕೂಡ, ಕೋವಿಡ್-19 ಮಹಾರೋಗವನ್ನು ಯಶಸ್ವಿಯಾಗಿ ಸೆಣೆಸಲು ಅದೊಂದು ಕೈಗೆಟಕುವ ಅಸ್ತ್ರವಾಗಿ ನಮಗೆ ದೊರೆತಿದೆ. ಸಮಾಜವಾದಿ ವ್ಯವಸ್ಥೆಗಾಗಿ ಭಾರತೀಯ ಹುಡುಕಾಟದ ಹಾದಿ ತಪ್ಪಿರಬಹುದು, ಆದರೆ ಜನರ ಆರೋಗ್ಯದ ವಿಷಯಗಳಿಗೆ ಸಂಬಂಧಪಟ್ಟಂತೆ ನಮ್ಮಂಥ ದೇಶಗಳಲ್ಲಿ ಕೂಡ ಸಮಾಜವಾದಿ ಸಿದ್ಧಾಂತಗಳು ಭರವಸೆಯ ಕಿರಣಗಳನ್ನು ಹೊರಸೂಸುತ್ತವೆ.

ಲೇಖಕರು: -ಪ್ರೊ. ಶಾ ಅಲಂ ಖಾನ್

ಪ್ರಾಧ್ಯಾಪಕರು, ಮೂಳೆಚಿಕಿತ್ಸೆ ವಿಭಾಗ, ಆಲ್ ಇಂಡಿಯಾ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್

 

Donate Janashakthi Media

Leave a Reply

Your email address will not be published. Required fields are marked *