ಸಮಾಜವಾದ ಮಾತ್ರವೇ ಮೋದಿಯನ್ನು ಸೋಲಿಸಬಲ್ಲದು

ಶುಭಂ ಶರ್ಮ ಕೃಪೆ: ನ್ಯೂಸ್‌ಕ್ಲಿಕ್, ಜೂನ್ 2, 2021
ಲೇಖಕರು ಕೇಂದ್ರಿಜ್ ವಿಶ್ವವಿದ್ಯಾಲಯದ ಜಾಗತಿಕ ಇತಿಹಾಸ ವಿಭಾಗದಲ್ಲಿ ರಿಸರ್ಚ್ ಸ್ಕಾಲರ್ ಆಗಿದ್ದಾರೆ.

ಅನು: ಕೆ.ಎಂ.ನಾಗರಾಜ್

ಸಮಾಜವಾದದ ಪರಿಕಲ್ಪನೆಯನ್ನು ಒಂದು ಹಳಸಲು ನುಡಿಯ ಮಟ್ಟಕ್ಕೆ ಇಳಿಸಲಾಗಿದೆ. ಆದಾಗ್ಯೂ, ಈ ಸಮಾಜವಾದವು, ಧರ್ಮನಿರಪೇಕ್ಷತೆ (ಜಾತ್ಯತೀತತೆ)ಯ ಪರಿಕಲ್ಪನೆಯು ಒಳಗಾದ ಮಟ್ಟದ ನಿರ್ದಯ ಅಪಹಾಸ್ಯಕ್ಕೆ ಒಳಗಾಗಲಿಲ್ಲ. ಹಾಗಾದಿರಲು ಕಾರಣವೆಂದರೆ, ಸಮಾಜವಾದವನ್ನು ನಂಬದಿರುವಂತೆ ಮಾಡಲು ಅಥವಾ ಸಮಾಜವಾದದ ಹೆಸರಿಗೆ ಕಳಂಕ ಹಚ್ಚಲು ಬಿಜೆಪಿ ಟ್ರೋಲ್ ಸೇನೆ ಮಾಡಬಹುದಾದರೂ ಏನು? ಒಂದು ಪೈಸೆಯನ್ನೂ ಖರ್ಚು ಮಾಡದೆ ಚಿಕಿತ್ಸೆ ಒದಗಿಸುವ ಉನ್ನತ ದರ್ಜೆಯ ಸಾರ್ವಜನಿಕ ಆಸ್ಪತ್ರೆಗಳನ್ನು ಅಣಕಿಸುವ ಚಿತ್ರಗಳನ್ನು ಕಳುಹಿಸುತ್ತಾರಾ? ಖಾಸಗಿ ವಲಯದ ಲಸಿಕೆ ಉತ್ಪಾದನೆಯ ಕೊರತೆಯೇ ಪ್ರಸ್ತುತ ಹತ್ಯಾಕಾಂಡಕ್ಕೆ ಕಾರಣವಾಗಿರುವ ಸಂದರ್ಭದಲ್ಲಿ ಲಸಿಕೆ ತಯಾರಿಸುವ ಸಾರ್ವಜನಿಕ ವಲಯದ ಘಟಕಗಳ ಬಲವರ್ಧನೆಯ ಬಗ್ಗೆ ನಗಲುಂಟೆ? ಅನೇಕ ಸಮಾಜವಾದಿ ನೀತಿಗಳಲ್ಲಿ, ಸಾರ್ವತ್ರಿಕ ಆರೋಗ್ಯ ಸೇವೆಯ  ಈ ಒಂದು ನೀತಿಯ ಸುತ್ತ ವಿರೋಧಿ ರಾಜಕೀಯ ಪಕ್ಷಗಳು ನೆರೆಯಲು ಸಾಧ್ಯವಿದೆ. ಭಾರತದ ಜನರು ಹಿಂದುತ್ವ ಮತ್ತು ಅದರ ಗಡ್ಡಧಾರಿ ದ್ಯೋತಕದಿಂದ ಬೇಸತ್ತಿದ್ದಾರೆ. ಅವರಿಂದ ತಮ್ಮ ವಿಮೋಚನೆಯ ದಿನಕ್ಕೆ ಕಾಯುತ್ತಿದ್ದಾರೆ.

ಕೋವಿಡ್-19 ಬಿಕ್ಕಟ್ಟಿನ ನಿರ್ವಹಣೆಯಲ್ಲಿ ಸಂಪೂರ್ಣವಾಗಿ ವಿಫಲವಾಗಿರುವ ನರೇಂದ್ರ ಮೋದಿ ಸರ್ಕಾರದ ನಿರಾಶೆಗಳ ಪಯಣವು ಮುಂದುವರೆದಿದೆ. ಐದು ರಾಜ್ಯಗಳಲ್ಲಿ ಇತ್ತೀಚೆಗೆ ನಡೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಗೆ ಭಾರೀ ಮುಖಭಂಗವಾಗಿದೆ. ಶಕ್ತಿಶಾಲಿಯಾದದ್ದೆಂದು ಹೇಳಲಾದ ಕೋಮು ರಥದ ಚಕ್ರಗಳು ಪಶ್ಚಿಮ ಬಂಗಾಳದಲ್ಲಿ ಕಳಚಿ ಬಿದ್ದಿವೆ. ಶಬರಿಮಲೈ ದೇವಾಲಯ ಪ್ರವೇಶ ಸಂಬಂಧಿಸಿ ಕೋಮು ವಿಷ ಹರಡುವ ಪ್ರಯತ್ನಗಳು ಕೇರಳದಲ್ಲಿ ಖಾತೆ ಮುಚ್ಚುವಲ್ಲಿ ಪರಿಣಮಿಸಿವೆ. ತಮಿಳುನಾಡಿನಲ್ಲಿ ಅದ್ದೂರಿಯಾಗಿ ನಿರ್ಮಿಸಿದ ರಾಜಕೀಯ ಸಿನೆಮಾ ತೋಪಾಗಿದೆ. ಅಸ್ಸಾಂ ರಾಜ್ಯದ ಫಲಿತಾಂಶಗಳು ಈ ಪ್ರವೃತ್ತಿಯಿಂದ ಭಿನ್ನವಾಗಿವೆ. ಅಸ್ಸಾಂನಲ್ಲಿ ಕಾಂಗ್ರೆಸ್ ಪಕ್ಷವು ರೈತ ನಾಯಕ ಅಖಿಲ್ ಗೊಗೊಯ್ ಮತ್ತು ಇತರ ಕೆಲವು ಪ್ರಗತಿಪರ ಮತ್ತು ಸಾಮಾಜಿಕ ಶಕ್ತಿಗಳೊಂದಿಗೆ ಚುನಾವಣಾ ಮೈತ್ರಿಯನ್ನು ವಿಸ್ತರಿಸಲು ವಿಫಲವಾದ ಕಾರಣದಿಂದಾಗಿ ಬಿಜೆಪಿಗೆ ಗೆಲ್ಲುವ ಅವಕಾಶ ದೊರಕಿದೆ. ಒಟ್ಟಾರೆಯಾಗಿ ಹೇಳುವುದಾದರೆ, ಒಂದು ಜಾತ್ಯತೀತ ಮತ್ತು ಪ್ರಗತಿಪರ ಮೈತ್ರಿಕೂಟವು ಮೋದಿ ನೇತೃತ್ವದ ಬಿಜೆಪಿಯನ್ನು ಚುನಾವಣಾ ಕಣದಲ್ಲಿ ಸೋಲಿಸಬಹುದು ಎಂಬುದು ಸ್ಪಷ್ಟವಾಗುತ್ತದೆ. ಈಗ, 31 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಪೈಕಿ 14 ರಲ್ಲಿ ಬಿಜೆಪಿಯೇತರ ಸರ್ಕಾರಗಳಿವೆ.

ಈ ಚುನಾವಣಾ ಪರಿಣಾಮಗಳ ವಿಶ್ಲೇಷಣೆಯನ್ನು ಭಾರತ ಕಮ್ಯುನಿಸ್ಟ್ ಪಕ್ಷ (ಮಾರ್ಕ್ಸ್‌ವಾದಿ)-ಸಿಪಿಐ(ಎಂ),  ಪ್ರಧಾನ ಕಾರ್ಯದರ್ಶಿ ಸೀತಾರಾಮ್‌ ಯೆಚೂರಿಯವರು ಇತ್ತೀಚೆಗೆ ಬಹಳ ನಿಖರವಾಗಿ ಮತ್ತು ಬಹಳ ಸಂಕ್ಷಿಪ್ತವಾಗಿ ಒಂದೇ ಮಾತಿನಲ್ಲಿ “ಜನರು ಒಂದು ಜಾತ್ಯತೀತ ಸರ್ಕಾರವನ್ನು ಬಯಸುತ್ತಾರೆ- ಇದು ಗೋಡೆಯ ಮೇಕಿನ ಬರಹ” ಎಂದು ಹೇಳಿದ್ದಾರೆ. ಅವರು ಹೇಳಿರದ ಮತ್ತು ಒತ್ತುಕೊಟ್ಟು ಹೇಳಬಹುದಾದ ಮಾತೆಂದರೆ, ಭಾರತದ ಜನರು ಒಂದು ಸಮಾಜವಾದಿ ಸರ್ಕಾರವನ್ನು ಬಯಸುತ್ತಾರೆ ಎಂಬುದು.

ಇದನ್ನು ಓದಿ: ಕೋವಿಡ್‌ ದಾಳಿಯ ನಡುವೆ ಗ್ರಹಿಸಬೇಕಾದ ಕೆಲವು ನೀತಿಗಳು

ಇಂದಿರಾ ಗಾಂಧಿ ಅವರನ್ನು ಅಧಿಕಾರದಿಂದ ಕೆಳಗಿಳಿಸುವ ತಂತ್ರದ ಭಾಗವಾಗಿ, ಒಂದು ಗೊತ್ತು ಗುರಿ ಇಲ್ಲದ ಸಮಾಜವಾದದ ಬ್ಯಾನರ್ ಅಡಿಯಲ್ಲಿ ಕೆಲವು ವಿರೋಧ ಪಕ್ಷಗಳು ಒಗ್ಗೂಡಿದ ಸನ್ನಿವೇಶದಲ್ಲಿ, ವಿರೋಧ ಪಕ್ಷಗಳನ್ನು ನಿರಾಯುಧರನ್ನಾಗಿಸುವ ಕಪಟೋಪಾಯದ ಭಾಗವಾಗಿ ದಿವಂಗತ ಪ್ರಧಾನಿ ಇಂದಿರಾ ಗಾಂಧಿ ಅವರು 1976ರಲ್ಲಿ “ಸಮಾಜವಾದಿ” ಎಂಬ ಪದವನ್ನು ಭಾರತದ ಸಂವಿಧಾನಕ್ಕೆ ಸೇರಿಸಿದರು. ಅಂದಿನಿಂದ, ಇಂದಿನವರೆಗೆ ಭಾರತದ ಬಡವರಿಗೆ ಯಾವುದೇ ಪ್ರಯೋಜನವನ್ನೂ ತಂದು ಕೊಡದ ಸಮಾಜವಾದದ ಪರಿಕಲ್ಪನೆಯನ್ನು ಒಂದು ಹಳಸಲು ನುಡಿಯ ಮಟ್ಟಕ್ಕೆ ಇಳಿಸಲಾಗಿದೆ. ಆದಾಗ್ಯೂ, ಈ ಸಮಾಜವಾದವು, ಧರ್ಮನಿರಪೇಕ್ಷತೆ (ಜಾತ್ಯತೀತತೆ)ಯ ಪರಿಕಲ್ಪನೆಯು ಒಳಗಾದ ಮಟ್ಟದ ನಿರ್ದಯ ಅಪಹಾಸ್ಯಕ್ಕೆ ಒಳಗಾಗಲಿಲ್ಲ. ಹಾಗಾದಿರಲು ಕಾರಣವೇನು ಎಂಬ ಪ್ರಶ್ನೆ ಏಳುತ್ತದೆ. ಕಾರಣವೆಂದರೆ, ಸಮಾಜವಾದವು ದುಡಿಯುವ ಜನರ ಮತ್ತು ಮಧ್ಯಮ ವರ್ಗಗಳ ಸ್ಥಿತಿ-ಗತಿಗಳನ್ನು ಉತ್ತಮಗೊಳಿಸುವ ಸಾಮರ್ಥ್ಯವನ್ನು ಹೊಂದಿದೆ.

ಚಿತ್ರ ಕೃಪೆ: ಫಿನಾನ್ಶಿಯಲ್ ಟೈಮ್ಸ್

ಬಿಜೆಪಿ ಕೂಡ ತಾನು ಸ್ಥಾಪನೆಗೊಂಡ ಸಮಯದಲ್ಲಿ ಒಂದು ಕೆಲಸಕ್ಕೆ ಬಾರದ ರೀತಿಯ ಗಾಂಧಿ-ಸಮಾಜವಾದದ ಪರಿಕಲ್ಪನೆಯನ್ನು ತನ್ನ ಪಕ್ಷದ ಸಂವಿಧಾನದಲ್ಲಿ ಸೇರಿಸಿಕೊಂಡಿತ್ತು. ತಳ ಸಮುದಾಯಗಳ ಚಳುವಳಿಗಳ ಒತ್ತಡದಿಂದಾಗಿ ಹಿಂದುಳಿದ ವರ್ಗಗಳಿಗೆ ಮೀಸಲಾತಿ ಒದಗಿಸುವ ಮಂಡಲ್ ಆಯೋಗದ ವರದಿಯ ಅನುಷ್ಠಾನದ ನಂತರ ಬಿಜೆಪಿಯು ಹಿಂಸಾತ್ಮಕ ಹಿಂದುತ್ವವನ್ನು ತನ್ನ ಸಿದ್ಧಾಂತವಾಗಿ ಅಳವಡಿಸಿಕೊಂಡಿತು. ಬಿಜೆಪಿಯ ಒಲವುಳ್ಳ ಕಾರ್ಮಿಕರು ಮತ್ತು ರೈತರು ಈಗಲೂ “ಅತ್ಮನಿರ್ಭರತಾ”ದ ಅಡಿಯಲ್ಲಿ ಸದ್ದಿಲ್ಲದ ಸಮಾಜವಾದದ ರೂಪದ ಬಗ್ಗೆ ಹೆಮ್ಮೆಪಡುತ್ತಾರೆ. ಅದೇನೇ ಇರಲಿ, ಇತರ ಪಕ್ಷಗಳಿಗಿಂತ ಬಿಜೆಪಿ ಹೊಂದಿರುವ ಒಂದು ದೊಡ್ಡ ಅನುಕೂಲವೆಂದರೆ, ಅದರ ಸಾಮಾಜಿಕ ಮಾಧ್ಯಮ (ಅಪ)ನಿರ್ವಹಣೆ. ವಾಟ್ಸಪ್, ಟ್ವಿಟರ್ ಅಥವಾ ಫೇಸ್‌ಬುಕ್ ಮಾಧ್ಯಮಗಳ ಮೂಲಕ ಒಂದು ಹಸುವಿನ ಹತ್ಯೆಯ ಅಥವಾ ಬೀದಿ ಬದಿ ವ್ಯಾಪಾರದ ಒಬ್ಬ ಮುಸ್ಲಿಂ ಉಗುಳಿದ ತರಕಾರಿ ಮಾರಿದ ದೃಷ್ಯ ಅಥವಾ ವಿಶ್ವದ ಯಾವುದೇ ಭಾಗದಲ್ಲಿ ನಡೆದಿದೆ ಎಂದು ಹೇಳಲಾದ “ಗುಂಪು ಹಿಂಸಾಚಾರ”ದ ವಿಡಿಯೋ ಸಂದೇಶಗಳನ್ನು ಕ್ಷಣಾರ್ಧದಲ್ಲಿ ತಲುಪಿಸುವ ಫಾರ್ವರ್ಡ್‌ಗಳು, ಅಪಹಾಸ್ಯಕ್ಕೊಳಗಾದ ಸಾಂವಿಧಾನಿಕ ಮೌಲ್ಯವಾದ ಜಾತ್ಯತೀತತೆಯನ್ನು ಬೀದಿಯಲ್ಲಿ ಅಟ್ಟಾಡಿಸಿ ಕೊಲ್ಲುವ ಸಾಮರ್ಥ್ಯ ಹೊಂದಿವೆ.

ಆದರೂ, ಭಾರತದಲ್ಲಿ ಸಮಾಜವಾದವನ್ನು ಕೊನೆಗಾಣಿಸುವುದು ಅಸಾಧ್ಯವೇ ಸರಿ. ಸಮಾಜವಾದವನ್ನು ನಂಬದಿರುವಂತೆ ಮಾಡಲು ಅಥವಾ ಸಮಾಜವಾದದ ಹೆಸರಿಗೆ ಕಳಂಕ ಹಚ್ಚಲು ಬಿಜೆಪಿ ಟ್ರೋಲ್ ಸೇನೆ ಮಾಡಬಹುದಾದರೂ ಏನು? ಒಂದು ಪೈಸೆಯನ್ನೂ ಖರ್ಚು ಮಾಡದೆ ಚಿಕಿತ್ಸೆ ಒದಗಿಸುವ ಉನ್ನತ ದರ್ಜೆಯ ಸಾರ್ವಜನಿಕ ಆಸ್ಪತ್ರೆಗಳನ್ನು ಅಣಕಿಸುವ ಚಿತ್ರಗಳನ್ನು ಕಳುಹಿಸುತ್ತಾರಾ? ಎಲ್ಲರಿಗೂ ದೊರೆಯುವ ಉಚಿತ ಶಿಕ್ಷಣ ವ್ಯವಸ್ಥೆಯ ಬಗ್ಗೆ ಅಣಕವಾಡಲಾದೀತೇ? ಖಾಸಗಿ ವಲಯದ ಲಸಿಕೆ ಉತ್ಪಾದನೆಯ ಕೊರತೆಯೇ ಪ್ರಸ್ತುತ ಹತ್ಯಾಕಾಂಡಕ್ಕೆ ಕಾರಣವಾಗಿರುವ ಸಂದರ್ಭದಲ್ಲಿ ಲಸಿಕೆ ತಯಾರಿಸುವ ಸಾರ್ವಜನಿಕ ವಲಯದ ಘಟಕಗಳ ಬಲವರ್ಧನೆಯ ಬಗ್ಗೆ ನಗಲುಂಟೆ? ವ್ಯಾಪಾರ-ವಹಿವಾಟುಗಳ ಏಕಸ್ವಾಮ್ಯದ ಅಂತ್ಯವನ್ನು ಟೀಕಿಸುವುದೇ? ಭೂ-ರಹಿತ ದಲಿತ ಕೃಷಿ ಕಾರ್ಮಿಕರಿಗೆ ಕೃಷಿಯೋಗ್ಯ ಭೂಮಿ ಹಂಚುವುದನ್ನು ವಿರೋಧಿಸುವುದೇ? ಅಥವಾ, ಭಾರತದ ಕಾರ್ಮಿಕರು ಮತ್ತು ರೈತರ ಸ್ಥಿತಿ-ಗತಿಗಳನ್ನು ಉತ್ತಮಗೊಳಿಸುವುದನ್ನು ವಿರೋಧಿಸುತ್ತಾರಾ? ಇಂತಹ ಎಲ್ಲ ಪ್ರಯತ್ನಗಳಲ್ಲಿ ಟ್ರೋಲಿಗರು ನೆಲ ಕಚ್ಚುವುದು ಖಂಡಿತ. ಟ್ರೋಲಿಗರಲ್ಲಿ ಅನೇಕರು ನಿರುದ್ಯೋಗಿಗಳಾಗಿರುವುದರಿಂದ, ಅವರು ಬಿಡಿಗಾಸಿಗೆ ಮರುಳಾಗಿ ಸುಳ್ಳು-ದ್ವೇಷಗಳಿಂದ ಕೂಡಿದ ವಿಡಿಯೊಗಳನ್ನು ಹರಡುವ ಬದಲು, ಈ ಕೆಲವು ವಾಸ್ತವಿಕ ಪ್ರಸ್ತಾಪಗಳ ಪರವಾಗಿ ನಿಲ್ಲಬಹುದು. ಕೆಲಸದ ಹಕ್ಕು ಅಥವಾ ಉದ್ಯೋಗ ಖಾತ್ರಿ ಯೋಜನೆಯನ್ನು ಬಿಜೆಪಿ ಮತ್ತು ಮೋದಿ ಬಲುವಾಗಿ ಇಷ್ಟಪಡುವುದಿಲ್ಲ, ನಿಜ. ಆದರೆ, ಅದನ್ನು ಕೊನೆಗೊಳಿಸುವ ಪ್ರಯತ್ನದಲ್ಲಿ ವಿಫಲರಾಗಿದ್ದಾರೆ ಎಂಬುದನ್ನು ನೆನಪಿಸಿಕೊಳ್ಳಬಹುದು. ಕೊರೊನಾ ಸಾಂಕ್ರಾಮಿಕದ ಸಮಯದಲ್ಲಿ ನಿರುದ್ಯೋಗದ ಬಿಕ್ಕಟ್ಟಿನಿಂದ ಜನರು ಹೊರ ಬರಲು ಈ ಯೋಜನೆಯು ಸಹಾಯಕವಾಗಿದೆ ಮತ್ತು ಜನರ ಸಂಕಟಗಳು ಹೆಚ್ಚುತ್ತಿರುವುದರಿಂದಾಗಿ ಈ ಯೋಜನೆಯ ಅಡಿಯಲ್ಲಿ ಕೆಲಸ ಕೇಳುವವರ ಸಂಖ್ಯೆಯು ಹೆಚ್ಚುತ್ತಲೇ ಇದೆ.

ಇದನ್ನು ಓದಿ: ಪಾಠ ಕಲಿಯಲು ನಿರಾಕರಿಸುವ ಈ ಸರ್ಕಾರ ಜನತೆಯ ಮತ್ತು ದೇಶದ ದುರಂತ

ಈ ಕೆಲವು ಸಂಗತಿಗಳು ಇನ್ನೂ ಹೆಚ್ಚಿನ ರಾಜ್ಯಗಳಲ್ಲಿ ಬಿಜೆಪಿ ಸರ್ಕಾರಗಳನ್ನು ಸೋಲಿಸಲು ತೆರೆದಿಟ್ಟ ರಹಸ್ಯ ಉಪದೇಶವೂ ಆಗಿವೆ. ಹಾಗಾಗಿ, ಈ ನಿಟ್ಟಿನಲ್ಲಿ ಇಡಬೇಕಾದ ಮೊದಲ ಹೆಜ್ಜೆಯೆಂದರೆ, ಭಾರತದ ಜನರನ್ನು ಬಂಡವಾಳಶಾಹಿಯಿಂದ ಮತ್ತು ಜಿಡಿಪಿ ಬೆಳವಣಿಗೆ ದರಗಳ ನಿಗೂಢತೆಯಿಂದ ಹೊರತರುವುದು ಮತ್ತು ಬಂಡವಾಳಶಾಹಿಯು ಸೃಷ್ಟಿಸಿರುವ ಸಮಸ್ಯೆಗಳು ಮತ್ತು ಅದು ಉಂಟುಮಾಡಿರುವ ಬೃಹತ್ ಸಾಮಾಜಿಕ-ಆರ್ಥಿಕ ದುಷ್ಪರಿಣಾಮಗಳ ಬಗ್ಗೆ ಮತ್ತು ಅವುಗಳ ಪರಿಹಾರಗಳ ಬಗ್ಗೆ ಜನರನ್ನು ಎಚ್ಚರಿಸುವುದು. ಭಾರತದ ಅರ್ಥವ್ಯವಸ್ಥೆಯ ಗಾತ್ರವನ್ನು 5 ಟ್ರಿಲಿಯನ್ ಡಾಲರ್ ಮಟ್ಟಕ್ಕೆ ಕೊಂಡೊಯ್ಯುವ ಬಗ್ಗೆ ಮೋದಿ ಸರ್ಕಾರವು ಆಕಾಶದಲ್ಲಿ ತೇಲಾಡುತ್ತಿದೆ. ತನ್ನ ಆಳ್ವಿಕೆಯಲ್ಲಿ, ವಹಿವಾಟುಗಳ ಸುಗಮತೆಯಲ್ಲಿ 79 ಮೆಟ್ಟಿಲುಗಳನ್ನು ಏರಿದ ಭಾರತವು 190 ದೇಶಗಳ ಪೈಕಿ 63 ನೇ ಸ್ಥಾನದಲ್ಲಿರುವ ಬಗ್ಗೆ ಮೋದಿ ಸರ್ಕಾರ ಹೆಮ್ಮೆಪಡುತ್ತದೆ. ಆದರೆ, ಇತರ ಅಂತರರಾಷ್ಟ್ರೀಯ ಸಂಸ್ಥೆಗಳ ಶ್ರೇಯಾಂಕದ ಪ್ರಕಾರ, ಗಾಳಿಯ ಗುಣಮಟ್ಟದಲ್ಲಿ 180 ದೇಶಗಳಲ್ಲಿ 179ನೇ ಸ್ಥಾನ, ನೀರಿನ ಗುಣಮಟ್ಟದಲ್ಲಿ 122 ರಲ್ಲಿ 120ನೇ ಸ್ಥಾನ ಮತ್ತು ಜಾಗತಿಕ ಹಸಿವು ಸೂಚ್ಯಂಕದಲ್ಲಿ 107 ರಲ್ಲಿ 94ನೇ ಸ್ಥಾನಗಳಿಗೆ ಭಾರತವು ಕುಸಿದಿರುವ ಬಗ್ಗೆ ಮಾತೇ ಇಲ್ಲ. ಹಸಿವಿನ ಅಂಕಿ-ಅಂಶವು ಅತ್ಯಂತ ಆಶ್ಚರ್ಯಕರವಾಗಿದೆ. ಏಕೆಂದರೆ, ಭಾರತವು ಹೊಂದಿರುವ ಆಹಾರ ಧಾನ್ಯಗಳ ಬೃಹತ್ ಸಂಗ್ರಹವು ಕೊಳೆಯುವ ಮಟ್ಟದಲ್ಲಿದೆ.

ಈಗಿರುವ ವಿಷಮ ಪರಿಸ್ಥಿತಿಯೇ ಸಾಲದೆಂಬಂತೆ ಅದನ್ನು ಮತ್ತಷ್ಟು ಹದಗೆಡಿಸಲು ನೀತಿ ಆಯೋಗವು 2013ರ ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆಯನ್ನು ಪರಿಷ್ಕರಿಸುವಂತೆ ಇತ್ತೀಚೆಗೆ ಶಿಫಾರಸು ಮಾಡಿದೆ. ಈ ತಿದ್ದುಪಡಿಯ ಉದ್ದೇಶವೆಂದರೆ, ಗ್ರಾಮೀಣ ಪ್ರದೇಶಗಳಲ್ಲಿ ಪಡಿತರದ ವ್ಯಾಪ್ತಿಯನ್ನು ಶೇ.75 ರಿಂದ ಶೇ.60ಕ್ಕೆ ಮತ್ತು ನಗರ ಪ್ರದೇಶಗಳಲ್ಲಿ ಶೇ.50 ರಿಂದ ಶೇ.40ಕ್ಕೆ ಕಡಿತಗೊಳಿಸುವ ಮೂಲಕ ಆಹಾರ ಸಬ್ಸಿಡಿಗಾಗಿ ಮಾಡುವ 47,229 ಕೋಟಿ ರೂಗಳ ವಾರ್ಷಿಕ ವೆಚ್ಚದ ಉಳಿತಾಯವೇ. ಉದ್ದೇಶಿತ ಕೃಷಿ ಕಾನೂನುಗಳು ಭಾರತದಲ್ಲಿ ಹಸಿವೆಯ ಸಮಸ್ಯೆಯನ್ನು ಉಲ್ಬಣಗೊಳಿಸುತ್ತವೆ. ಹಾಗಾಗಿ, ಈ ತಿದ್ದುಪಡಿಯು ಪ್ರಸ್ತಾಪಿತ ರೂಪದಲ್ಲಿ ಜಾರಿಗೆ ಬಂದರೆ, ಹಸಿವೆಯ ಬಿಕ್ಕಟ್ಟು ಮತ್ತಷ್ಟು ಉಲ್ಬಣಗೊಳ್ಳುತ್ತದೆ. ಏಕೆಂದರೆ, ದೊಡ್ಡ ದೊಡ್ಡ ಬಂಡವಾಳಗಾರರು ಆಹಾರ ಧಾನ್ಯಗಳನ್ನು ಬೃಹತ್ ಪ್ರಮಾಣದ ಖಾಸಗಿ ಸಿಲೋ( ಹಗೇವು)ಗಳಲ್ಲಿ ಸಂಗ್ರಹಿಸುತ್ತಾರೆ. ಪರಿಣಾಮವಾಗಿ ಆಹಾರ ಧಾನ್ಯಗಳ ಬೆಲೆಗಳು ಏರುತ್ತವೆ.

ತಮ್ಮ ಅನುಯಾಯಿಗಳಿಗೆ ಮತ್ತು ಸಾಮಾನ್ಯವಾಗಿ ಹಿಂದೂಗಳಿಗೆ ತಾವು ಹಿಂದೂ ಹೃದಯ ಸಾಮ್ರಾಟರೆಂದು ಮೋದಿ ತಮ್ಮನ್ನು ತಾವೇ ಬಿಂಬಿಸಿಕೊಳ್ಳುತ್ತಾರೆ. ಅದಕ್ಕಾಗಿ ಅವರು ಮಾಡದ ಪ್ರಯತ್ನವೇ ಇಲ್ಲ. ಗಣರಾಜ್ಯ ದಿನ ಮತ್ತು ಸ್ವಾತಂತ್ರ್ಯ ದಿನದ ಪ್ರದರ್ಶನಗಳಲ್ಲಿ ಅವರು ಮಾಡಿಕೊಳ್ಳುವ ಅಲಂಕಾರ, ವೇಷ-ಭೂಷಣ, ಮತ್ತು ತಲೆಗೆ ಸುತ್ತಿಕೊಳ್ಳುವ ಉದ್ದ ಬಾಲದ ಪಗ್ಡಿಗಳನ್ನು (ರುಮಾಲುಗಳು) ಗಮನಿಸಿ. ವಿಚಿತ್ರವೆಂದರೆ, ಈ ಸಾಮ್ರಾಟರು ಬಾದಶಹರಿಗೆ, ಅಂದರೆ, ದೊಡ್ಡ ಬಂಡವಾಳಗಾರರಿಗೆ ಋಣಿ ಎಂಬುದನ್ನು ಫೆಬ್ರವರಿ 2021 ರ ಬಜೆಟ್ ಅಧಿವೇಶನದಲ್ಲಿ ಅವರು ಸ್ಫಟಿಕದಷ್ಟು ಸ್ಪಷ್ಟಗೊಳಿಸಿದ್ದಾರೆ.

ಇದನ್ನು ಓದಿ: ಗೆದ್ದೆವು ಎಂದು ಕಾಲಹರಣ ಮಾಡಿದ ಕೇಂದ್ರ-ಮುಂಬರುವ ಪರಿಣಾಮದ ಕಡೆ ಗಮನ ಹರಿಸಲಿಲ್ಲ: ಅಮರ್ತ್ಯ ಸೇನ್

ಮೊಬೈಲ್ ಫೋನ್‌ಗಳ ಉತ್ಪಾದನೆ, ಲಸಿಕೆಗಳ ಉತ್ಪಾದನೆ ಮತ್ತು ಔಷಧಗಳ ತಯಾರಿಕೆಯಲ್ಲಿ ಸಾಧಿಸಿದ ಮೂರು ಪ್ರಮುಖ ಯಶಸ್ಸನ್ನು ಉಲ್ಲೇಖಿಸುವ ಮೂಲಕ ಮೋದಿ “ಸಂಪತ್ತಿನ ಸೃಷ್ಟಿಕರ್ತರನ್ನು” ಹಾಡಿ ಹೊಗಳಿದರು. ವಿಪರ್ಯಾಸವೆಂದರೆ, ಐದು ವರ್ಷಗಳಲ್ಲಿ ಭಾರತದಲ್ಲಿ ಹತ್ತು ಪಟ್ಟು ಹೆಚ್ಚಳವಾದ (2014-15 ರಲ್ಲಿ  2.9 ಬಿಲಿಯನ್‌ನಿಂದ 2019-20 ರಲ್ಲಿ  30 ಬಿಲಿಯನ್‌ಗೆ) ಮೊಬೈಲ್ ಫೋನ್‌ಗಳ ಉತ್ಪಾದನೆಯು ಸಾಧ್ಯವಾದದ್ದು ಚೀನಾದಿಂದ ಆಮದು ಮಾಡಿಕೊಂಡ ಬಿಡಿ-ಭಾಗಗಳಿಂದಲೇ. ದೇಶದಲ್ಲಿ ಉತ್ಪಾದನೆಯಾದ ಶೇ.85ಕ್ಕಿಂತ ಹೆಚ್ಚಿನ ಭಾಗದ ಮೊಬೈಲ್ ಫೋನ್‌ಗಳನ್ನು ಚೀನಾ ಮೂಲದ ಮೊಬೈಲ್ ಕಂಪನಿಗಳಾದ ಒಪ್ಪೋ, ವಿವೋ, ಶಿಯೋಮಿ ಇತ್ಯಾದಿಗಳೇ ತಯಾರಿಸಿವೆ.

ಎರಡನೆಯದಾಗಿ, ಯಾವ ಖಾಸಗಿ ವಲಯದ ವೈಭವವನ್ನು ಮೋದಿಯವರು ಹಾಡಿ ಹೊಗಳಿ ಅಟ್ಟಕ್ಕೇರಿಸಿದರೊ ಅದೇ ಖಾಸಗಿ ವಲಯದ ಲಸಿಕೆ ಉತ್ಪಾದಕರು ಎರಡನೇ ಅಲೆಯಿಂದ ಉಂಟಾದ ಹತ್ಯಾಕಾಂಡದಿಂದ ಭಾರತೀಯರನ್ನು ರಕ್ಷಿಸುವಲ್ಲಿ ವಿಫಲರಾದರು. ಹಣದ ಕೊರತೆಯಿಂದ ಒದ್ದಾಡುತ್ತಿದ್ದ ಈ ಖಾಸಗಿ ಕಂಪೆನಿಗಳು ಲಸಿಕೆ ಉತ್ಪಾದನೆಯನ್ನು ಹೆಚ್ಚಿಸಲು ಹಣಕ್ಕಾಗಿ ಕೈಚಾಚಿದಾಗ ಅವರ ಕೈ ಹಿಡಿದದ್ದು ಬಂಡವಾಳಶಾಹಿ ಮಾರುಕಟ್ಟೆಯಲ್ಲ, ತೆರಿಗೆದಾರರ ಹಣ. ಸರ್ಕಾರದ ಹಣ ಸಹಾಯದಿಂದಾಗಿ ಅವರು ತಮ್ಮ ಕಸುಬನ್ನು ಮುಂದುವರಿಸುವಂತಾಯಿತು.

ಖಾಸಗಿ ವಲಯದ ಬಗ್ಗೆ ಮೋದಿಯವರು ಹೊಂದಿರುವ ವ್ಯಾಮೋಹದಿಂದಾಗಿ ಭಾರತವು ಲಸಿಕೆಗಳ ಭಾರಿ ಪ್ರಮಾಣದ ಕೊರತೆಯನ್ನು ಎದುರಿಸುವಂತಾಗಿದೆ. ಎಲ್ಲಾ ಆಫ್ರಿಕನ್ ದೇಶಗಳೂ ಆಫ್ರಿಕನ್ ಯೂನಿಯನ್ ಟ್ರಸ್ಟ್‌ನ ಅಡಿಯಲ್ಲಿ ಒಗ್ಗೂಡಿ ಜಾನ್ಸನ್ ಮತ್ತು ಜಾನ್ಸನ್ ಕಂಪೆನಿಯಿಂದ 220 ಮಿಲಿಯನ್ ಡೋಸ್ ಲಸಿಕೆಗಳನ್ನು ಪಡೆಯಲು ಮಾತುಕತೆ ನಡೆಸಿರುವಾಗ ಮತ್ತು 27 ಯುರೋಪಿಯನ್ ದೇಶಗಳ ಪರವಾಗಿ ಯುರೋಪಿಯನ್ ಒಕ್ಕೂಟವು ಮಾತುಕತೆ ನಡೆಸಿರುವಾಗ, ಲಸಿಕೆಗಳನ್ನು ಸಂಗ್ರಹಿಸಿಕೊಳ್ಳಲು ಅಂತರರಾಷ್ಟ್ರೀಯ ಮಟ್ಟದಲ್ಲಿ ಮಾತುಕತೆ ನಡೆಸುವ ಮನಸ್ಸು ಮೋದಿಯವರಿಗಿಲ್ಲ. ಅವರ ಈ ಕಾರ್ಯತಂತ್ರವು ಫಲಿಸದು.

ಇದನ್ನು ಓದಿ: ಹ್ರಾಂ ಹ್ರೂಂ ವಿಜ್ಞಾನ ಮತ್ತು ಹ್ರಾಂ ಹ್ರೂಂ ಅರ್ಥಶಾಸ್ತ್ರ

ಭಾರತದ ಔಷಧ ವಲಯದ ಯಶಸ್ಸು, ಬಹುರಾಷ್ಟ್ರೀಯ ಔಷಧ ಕಂಪೆನಿಗಳ ಪ್ರೇಯಸಿಯಾದ ಟ್ರಿಪ್ಸ್-ಅನುಮೋದನೆಯ ಉತ್ಪನ್ನ ಪೇಟೆಂಟ್‌ಗಳ (product patent) ಮೂಲಕ ಸಾಧಿಸಿದ್ದಲ್ಲ, ಬದಲಿಗೆ ಔಷದ ತಯಾರಿಸುವ ಕಾರ್ಯವಿಧಾನ ಪೇಟೆಂಟ್ (process patent) ಮೂಲಕ ಗಳಿಸಿದ್ದಾಗಿದೆ. ಬೇರೆ ದೇಶಗಳಲ್ಲಿ, ಮುಖ್ಯವಾಗಿ ಅಮೇರಿಕಾದಲ್ಲಿ, ಸಾಮಾನ್ಯ(ಜೆನೆರಿಕ್) ಮತ್ತು ಜೀವ ಉಳಿಸುವ ಔಷಧಗಳ ಉತ್ಪಾದನೆಯನ್ನು ಏಕಸ್ವಾಮ್ಯಗೊಳಿಸುವ ಮೂಲಕ ಬೆಲೆಗಳನ್ನು ಹೆಚ್ಚಿಸಿದ ರೀತಿಯಲ್ಲಿ ಭಾರತದ ಔಷಧ ದೈತ್ಯರಿಗೆ ಸುಲಿಗೆ ಬೆಲೆ ನಿಗದಿಪಡಿಸುವುದು ಸಾಧ್ಯವಾಗಿಲ್ಲ. ಬೇರೆ ದೇಶಗಳ ಪರಿಸ್ಥಿತಿಗೆ ವ್ಯತಿರಿಕ್ತವಾಗಿ, ಈ ಕಾರ್ಯವಿಧಾನ ಪೇಟೆಂಟ್ (process patent) ನಿಂದಾಗಿ ಭಾರತದ ಔಷಧ ತಯಾರಕರು ಸಾಮಾನ್ಯ(ಜೆನೆರಿಕ್) ಔಷಧಗಳನ್ನು ಬೃಹತ್ ಪ್ರಮಾಣದಲ್ಲಿ ಉತ್ಪಾದಿಸುವ ಮತ್ತು ಉತ್ತಮ ಕಾರ್ಯವಿಧಾನಗಳನ್ನು ಕಂಡುಹಿಡಿಯುವ ಒತ್ತಡ ಸೃಷ್ಟಿಯಾಯಿತು. ಪರಿಣಾಮವಾಗಿ, ಔಷಧಗಳ ಬೆಲೆಗಳೂ ಇಳಿಯುವಂತಾಯಿತು.

ದೊಡ್ಡ ಬಂಡವಾಳ ಮತ್ತು ಮುಕ್ತ ಮಾರುಕಟ್ಟೆಯೊಂದಿಗಿನ ಮೋದಿ ಅವರ ಪ್ರೇಮ ಪ್ರಕರಣವು ಅವರನ್ನು ಭಾರತದ ಔಷಧ ವಲಯದಲ್ಲಿ ಅಮೆಜಾನ್‌ನಂತಹ ಚಿಲ್ಲರೆ ಇ-ಕಾಮರ್ಸ್ ದೈತ್ಯರಿಗೆ ಹಸಿರು ನಿಶಾನೆ ತೋರಿಸುವತ್ತ ಕೊಂಡೊಯ್ದಿದೆ. ಈ ಕ್ರಮವು ನೇರವಾಗಿ 8, 50,000 ಸಣ್ಣ ಮತ್ತು ಮಧ್ಯಮ ಗಾತ್ರದ ಔಷಧ ಮಳಿಗೆಗಳಿಗೆ ಮತ್ತು ಅವುಗಳಲ್ಲಿ ಕೆಲಸ ಮಾಡುವ ಹತ್ತು ಲಕ್ಷಕ್ಕೂ ಹೆಚ್ಚು ಉದ್ಯೋಗಿಗಳಿಗೆ ಅಪಾಯವನ್ನುಂಟು ಮಾಡುತ್ತದೆ. ಒಟ್ಟಾರೆಯಾಗಿ ಹೇಳುವುದಾದರೆ, ಮೋದಿ ಅವರ ಪರಿಕಲ್ಪನೆಯ ಮುಕ್ತ ಮಾರುಕಟ್ಟೆಯೆಂದರೆ ಭರ್ಜಿಗಳಿಗೆ ತಿವಿಯುವ ಸ್ವಾತಂತ್ರ್ಯ ಮತ್ತು ಪುಟ್ಟ ಮೀನುಗಳಿಗೆ ಸಾವು.

ಮೋದಿ ವಿರೋಧಿ ಮೈತ್ರಿಯ ಕಾರ್ಮೋಡಗಳು ದಟ್ಟೈಸುತ್ತಿವೆ. ಕೆಲವು ದಿನಗಳ ಹಿಂದೆ, ಟ್ವಿಟರ್‌ನಲ್ಲಿ #ಪ್ರಧಾನಿಯಾಗಿ ಮಮತಾ ಒಂದು ಟ್ರೆಂಡ್ ಆಗಿ ಕಾಣಿಸಿಕೊಂಡರು. 2022ರ ಉತ್ತರ ಪ್ರದೇಶ ಚುನಾವಣೆಯಲ್ಲಿ ಬಿಜೆಪಿಗೆ ಹಿನ್ನಡೆಯಾಗುವ ಸಾಧ್ಯತೆಗಳು ಹೆಚ್ಚಿದ ನಂತರ, ಹೊಸ ಹ್ಯಾಶ್‌ಟ್ಯಾಗ್(#)ಗಳು  ಟ್ರೆಂಡ್ ಆಗುವುದ ಖಂಡಿತ. ಆದರೆ, ಭಾರತದ ರಾಜಕೀಯ ಇತಿಹಾಸವು ಸೂಚಿಸುವಂತೆ, ಜನ-ಪರ ಮತ್ತು ಸಮಾಜವಾದಿ ಕಾರ್ಯಕ್ರಮ ಆಧಾರಿತ ರಾಜಕೀಯ ಪಕ್ಷಗಳ ಒಂದು ಮೈತ್ರಿ ಕೂಟವು ಈವರೆಗೂ ಉದಯಿಸುವ ಲಕ್ಷಣಗಳಿಲ್ಲ. ಇಂತಹ ಪರಿಸ್ಥಿತಿಯಲ್ಲಿಯೇ ಮೋದಿ ತಮ್ಮ ಸಾಟಿಯಿಲ್ಲದ ವಾಕ್ಚಾತುರ್ಯದ ಸಾಮರ್ಥ್ಯವನ್ನು ಹಿಗ್ಗಾ ಮುಗ್ಗಾ ಬಳಸಿಕೊಳ್ಳುತ್ತಾರೆ. ಹಿಂದೂ ಧರ್ಮಕ್ಕೆ ಎರಗಿದ ಕಾಲ್ಪನಿಕ ಬೆದರಿಕೆಯನ್ನು ಜನರ ಮುಂದಿಟ್ಟು, “ಮೋದಿಗೆ ಎದುರಾಳಿ ಯಾರು?” ಎಂಬ ಪ್ರಶ್ನೆಯನ್ನು ಜನರ ಮುಂದಿಡುತ್ತಾರೆ. ಈ ಚಾಣಾಕ್ಷ ವಿದ್ಯಮಾನವನ್ನು ತಡೆಗಟ್ಟಬಹುದಾದ ಏಕೈಕ ಮಾರ್ಗವೆಂದರೆ, ಒಬ್ಬ ವ್ಯಕ್ತಿಯ ಬದಲಿಗೆ ಒಂದು ಕಾರ್ಯಕ್ರಮವನ್ನು ಎದುರು ನಿಲ್ಲಿಸಬೇಕಾಗುತ್ತದೆ.  ಸಮಾಜವಾದದ ಮರುಹಂಚಿಕೆಯ ರೂಪವು ಆ ಕಾರ್ಯಕ್ರಮದ ತಿರುಳು ಆಗಿರಬೇಕು. ಆಟವನ್ನೇ ಬದಲಿಸಬಹುದಾದ ಅಂಥಹ ಒಂದು ಕಾರ್ಯಕ್ರಮವೆಂದರೆ, ಸಾರ್ವತ್ರಿಕ ಆರೋಗ್ಯ ರಕ್ಷಣೆಯೇ.

ಇದನ್ನು ಓದಿ: ಲಸಿಕೆ ಪೂರೈಕೆಯನ್ನು ತುರ್ತಾಗಿ ವಿಸ್ತರಿಸಬೇಕಾಗಿದೆ ಮತ್ತು ಅದು ಸಾಧ್ಯವಿದೆ-ಜನವಿಜ್ಞಾನ ಜಾಲದ ಹೇಳಿಕೆ

ಸಾರ್ವತ್ರಿಕ ಆರೋಗ್ಯ ಸೇವಾ ವ್ಯವಸ್ಥೆಯ ಅನೇಕ ಯಶಸ್ವಿ ಉದಾಹರಣೆಗಳು ನಮ್ಮ ಮುಂದಿವೆ. ಕ್ರಾಂತಿಕಾರಿ ಸಮಾಜವಾದದ ಪ್ರೇರಣೆಯಿಂದ ಹುಟ್ಟಿದ ಕ್ಯೂಬಾದಲ್ಲಿ ಆರೋಗ್ಯ ಸೇವೆಗಳನ್ನು ಎಲ್ಲಾ ನಾಗರಿಕರಿಗೂ ಉಚಿತವಾಗಿ ಒದಗಿಸಲಾಗಿದೆ. ಕ್ಯೂಬಾದಲ್ಲಿ ಶಿಶು ಮರಣ ಪ್ರಮಾಣವು (ಐಎಂಆರ್) ಪ್ರತಿ ಸಾವಿರ ಜನನಗಳಲ್ಲಿ 4.2. ಆದರೆ, ಭಾರತದಲ್ಲಿ, 2018 ರಲ್ಲಿ, ಇದೇ ಪ್ರಮಾಣವು 32ರಷ್ಟಿತ್ತು. ವಿಶ್ವದಲ್ಲೇ ಅತಿದೊಡ್ಡ ಮತ್ತು ಶ್ರೀಮಂತ ಬಂಡವಾಳಶಾಹಿ ಶಕ್ತಿ ಎನಿಸಿದ ಅಮೇರಿಕಾದಲ್ಲಿ ಶಿಶು ಮರಣ ಪ್ರಮಾಣವು 6.5ರಷ್ಟಿದ್ದು ಅದು ಕ್ಯೂಬಾಗಿಂತಲೂ ಹಿಂದಿದೆ. ಶಿಶು ಮರಣ ಪ್ರಮಾಣವು 3.5 ರಷ್ಟಿರುವ ಇಂಗ್ಲೆಂಡ್‌ನೊಂದಿಗೆ ಹೋಲಿಸಿದಾಗ ಮಾತ್ರ ಕ್ಯೂಬಾ ಹಿಂದೆ ನಿಲ್ಲುತ್ತದೆ. ಇಂಗ್ಲೆಂಡ್ ಮುಂದಿರುವ ಕಾರಣವೆಂದರೆ ಅದು ಅನುಸರಿಸುತ್ತಿರುವ ಬಂಡವಾಳಶಾಹಿ ವ್ಯವಸ್ಥೆಯಲ್ಲ. ಇಂಗ್ಲೆಂಡ್ ಹೊಂದಿರುವ ಒಂದು ಸದೃಢ ಸಾರ್ವಜನಿಕ-ಧನಸಹಾಯದ ರಾಷ್ಟ್ರೀಯ ಆರೋಗ್ಯ ಸೇವೆ(ಎನ್ ಎಚ್ ಎಸ್) ಯೋಜನೆಯಿಂದಾಗಿಯೇ ಅದು ಮುಂದಿದೆ. ಕ್ಯೂಬಾದ ಆರೋಗ್ಯ ಸೇವಾ ವ್ಯವಸ್ಥೆಯ ಅತ್ಯಂತ ಆಸಕ್ತಿದಾಯಕ ಅಂಶವೆಂದರೆ, ಅದು ಆರೋಗ್ಯ ಸೇವೆಗಾಗಿ ತಲಾ $300-$400 ಖರ್ಚು ಮಾಡುತ್ತದೆ. ವೈದ್ಯರಿಗೆ ತಿಂಗಳಿಗೆ $64 ರಷ್ಟು ಸಣ್ಣ ಮೊತ್ತವನ್ನು ಸಂಬಳವಾಗಿ ಪಾವತಿಸುತ್ತದೆ. ಸಾಗರೋತ್ತರ ವೈದ್ಯಕೀಯ ಸೇವೆಗಳಿಗೆ ಪ್ರತಿಫಲವಾಗಿ ವಾರ್ಷಿಕ $8 ಬಿಲಿಯನ್ ಆದಾಯ ಗಳಿಸುತ್ತದೆ. ಈ ಗಳಿಕೆಯ ದೊಡ್ಡ ಭಾಗವನ್ನು ರಾಷ್ಟ್ರೀಯ ಆರೋಗ್ಯ ಸೇವೆಗಳ ವರ್ಧನೆಗಾಗಿ ಮರು ಹೂಡಿಕೆ ಮಾಡುತ್ತದೆ.

ಅನೇಕ ಸಮಾಜವಾದಿ ನೀತಿಗಳಲ್ಲಿ  ಈ ಒಂದು ನೀತಿಯ, ಸಾರ್ವತ್ರಿಕ ಆರೋಗ್ಯ ಸೇವೆಯ ಸುತ್ತ ವಿರೋಧಿ ರಾಜಕೀಯ ಪಕ್ಷಗಳು ನೆನರೆಯಲು ಸಾಧ್ಯವಿದೆ. ಭಾರತದ ಜನರು ಹಿಂದುತ್ವ ಮತ್ತು ಅದರ ಗಡ್ಡಧಾರಿ ದ್ಯೋತಕದಿಂದ ಬೇಸತ್ತಿದ್ದಾರೆ. ಅವರಿಂದ ತಮ್ಮ ಮುಕ್ತಿಯ ದಿನಕ್ಕೆ ಕಾಯುತ್ತಿದ್ದಾರೆ.

Donate Janashakthi Media

One thought on “ಸಮಾಜವಾದ ಮಾತ್ರವೇ ಮೋದಿಯನ್ನು ಸೋಲಿಸಬಲ್ಲದು

  1. ನಮಗೆ ಸದ್ಯದ ಸಮಯದಲ್ಲಿ ಬೇಕಾಗಿರೋದು ಹಿಂದೂ ಹೃದಯ ಸಾಮ್ರಾಟ ಅಲ್ಲ…ಜನ ಸಾಮಾನ್ಯರ ಸಂಕಷ್ಟಗಳ ಅರಿವಿರುವ ಹೃದಯ ಸಾಮ್ರಾಟ.

Leave a Reply

Your email address will not be published. Required fields are marked *