ಮಂಗಳೂರು : ಸರಕಾರವೇ ಖಾಸಗೀಕರಣಗೊಳ್ಳುತ್ತಿರುವ ಪ್ರಸಕ್ತ ಸಂದರ್ಭದಲ್ಲಿ ಸಾಮಾಜಿಕ ನ್ಯಾಯ ಕಲ್ಪಿಸಲು ಖಾಸಗಿ ಕ್ಷೇತ್ರದಲ್ಲೂ ಮೀಸಲಾತಿ ನೀಡುವುದು ಅನಿವಾರ್ಯ ಎಂದು ಹಿರಿಯ ಪತ್ರಕರ್ತ ದಿನೇಶ್ ಅಮೀನ್ ಮಟ್ಟು ಹೇಳಿದ್ದಾರೆ.
ಸೋಮವಾರ ನಗರದ ವಿಕಾಸ ಕಚೇರಿಯಲ್ಲಿ “ಮೀಸಲಾತಿ ಹೋರಾಟ: ಆತಂಕಗಳು, ಸಾಧ್ಯತೆಗಳು” ಎಂಬ ವಿಷಯ ಕುರಿತು ಏರ್ಪಡಿಸಲಾಗಿದ್ದ ಸಂವಾದ ಗೋಷ್ಟಿಯಲ್ಲಿ ಮಾತನಾಡಿದ ಅವರು ಸರ್ಕಾರ ಉದ್ಯೋಗ ನೀಡುವ ಬದಲು ಹೊರಗುತ್ತಿಗೆಯ ಆಧಾರದ ಮೇಲೆ ಉದ್ಯೋಗಿಗಳನ್ನು ನೇಮಿಸಿಕೊಳ್ಳುತ್ತಿದೆ. ಮತ್ತು ಪ್ರತಿಯೊಂದು ಕ್ಷೇತ್ರವನ್ನು ಖಾಸಗೀಕರಣಗೊಳ್ಳುತ್ತಿದೆ. ಈಗಿರುವಾಗ ಅರ್ಹತೆ ಪಡೆದ ಎಲ್ಲರಿಗೂ ಪ್ರಯೋಜನ ಲಭಿಸಬೇಕಾದರೆ ಖಾಸಗೀ ಕ್ಷೇತ್ರದಲ್ಲಿ ಮೀಸಲಾತಿ ಕಲ್ಪಿಸಬೇಕಾಗಿದೆ. ಪಂಚಮಸಾಲಿಗಳು ನಡೆಸುತ್ತಿರುವ ಮೀಸಲಾತಿ ಹೋರಾಟದಲ್ಲಿ ಗಟ್ಟಿತನವಿಲ್ಲ, ಪ್ರಾಯೋಗಿಕವೂ ಅಲ್ಲ, ಅವರ ಹೋರಾಟ ಕೇವಲ ಮುಖ್ಯಮಂತ್ರಿಯವರ ವಿರುದ್ಧ ಎಂಬಂಧತಹ ದಿಕ್ಕಿನಲ್ಲಿ ಚಲಿಸುತ್ತಿದೆ. ಹಿಂದುಳಿದ ವರ್ಗಗಳ ಸುಮಾರು 101 ಜಾತಿಗಳು ಜನರು ಅನಾಥ ಮಗುವಿನಂತಾಗಿದ್ದಾರೆ. ಈಗ ಪ್ರಬಲ ಜಾತಿಗಳ ನಡುವೆ ಒಡಕು ಸೃಷ್ಠಿಸುವ ಕೆಲಸ ಸಕ್ರಿಯವಾಗಿದೆ. ಇದನ್ನು ಬಿಜೆಪಿಯವರು ದಾಳವಾಗಿ ಬಳಸಿಕೊಳ್ಳುತ್ತಿದೆ. ಮುಸ್ಲಿಮರ ಜನಸಂಖ್ಯೆಗೆ ಅನುಗುಣವಾಗಿ ಮೀಸಲಾಗಿ ನೀಡಿಲ್ಲ, ಹಾಗಾಗಿ ಮೀಸಲಾತಿ ವಂಚಿತರಾದವರಿಗೆ ಮೀಸಲಾತಿ ಸಲ್ಲಬೇಕು, ಅವರಿಗೆ ಸ್ಥಾನ ಮಾನ ಹೆಚ್ಚಿಸುವ ದೃಷ್ಟಿಯಿಂದ, ಉದ್ಯೋಗ ಭದ್ರತೆ, ಪ್ರಾತಿನಿಧ್ಯ ನೀಡುವ ರೀತಿಯಲ್ಲಿ ಅವರ ಮೀಸಲಾತಿಯ ಪ್ರಮಾಣವನ್ನು ಹೆಚ್ಚಿಸಬೇಕಿದೆ.
ಜನಶಕ್ತಿ ಮೀಡಿಯಾ ವಾಟ್ಸಪ್ ಸೇರಿಕೊಳ್ಳಲು ಈ ಲಿಂಕ್ ಕ್ಲಿಕ್ ಮಾಡಿ
ಸಾಮಾಜಿಕ ನ್ಯಾಯದ ಹೋರಾಟಕ್ಕೆ ನಮ್ಮ ಕರ್ನಾಟಕ ದೇಶಕ್ಕೆ ಮಾದರಿಯಾಗಬೇಕಿತ್ತು. ಆದರೆ ಈಗಿರುವ ಪರಿಸ್ಥಿತಿಗಳು ಹಾಗಿಲ್ಲ. ಸಿದ್ದರಾಮಯ್ಯ ಅವರ ಅವಧಿಯಲ್ಲಿ ತಯಾರಿಸಲಾದ ಜನಸಂಖ್ಯೆಗೆ ಅನುಗುಣವಾಗಿ ರಾಜಕೀಯ ಪ್ರಾತಿನಿಧ್ಯ ನೀಡುವ ನಿಟ್ಟಿನಲ್ಲಿ ಶಾಶ್ವತ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಕಾಂತರಾಜ್ ನೇತೃತ್ವದ ಹಿಂದುಳಿದ ವರ್ಗಗಳ ಶೈಕ್ಷಣಿಕ, ಸಾಮಾಜಿಕ ಸ್ಥಿತಿಗತಿ ಕುರಿತ ಸಮೀಕ್ಷಾ ವರದಿ ಬಿಡುಗಡೆ ಆಗದಿರುವುದು ವಿಪರ್ಯಾಸ ಎಂದು ಹೇಳಿದರು.
ಈ ಸಂವಾದದಲ್ಲಿ ಡಿವೈಎಫ್ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ, ದ.ಕ. ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಲುಕ್ಸಾನ್ ಬಂಟ್ವಾಳ ಮಾಜಿ ಉಪಮೇಯರ್ ಮುಹಮ್ಮದ್ ಕುಂಜತ್ತಬೈಲ್, ರೈತ ಸಂಘದ ಯಾದವ ಶೆಟ್ಟಿ, ವಿಚಾರವಾದಿ ನರೇಂದ್ರನಾಯಕ್, ನ್ಯಾಯವಾದಿ ಯಶವಂತಮರೋಳಿ, ಸಮುದಾಯ ಸಂಘಟನೆಯ ಮುಖಂಡ ವಾಸುದೇವ ಉಚ್ಚಿಲ್, ನಿವೃತ್ತ ಪ್ರಾಂಶುಪಾಲ ಡಾ. ಅಸ್ಸಾಯಿಲ್ ಎನ್.ಮತ್ತಿತರರು ಭಾಗವಹಿಸಿದ್ದರು.