ಖಾತೆಗೆ 15 ಲಕ್ಷ ರೂ ಬೀಳುವ ಬದಲು, 1.40 ಲಕ್ಷ ರೂ ಸಾಲದ ಹೊರೆ ಬಿತ್ತು!!

ಗುರುರಾಜ ದೇಸಾಯಿ

 

“ಸಾಲ ಮಾಡಿಯಾದ್ರೂ ತುಪ್ಪ ತಿನ್ನು

ಗೋಳು ಪರದಾಟ ಸಾಕಿನ್ನು

ಬದ್ಕೋದ್‌ ಕಲಿಯೋ ಬಿಕನಾಸಿ

ನಗೋದಕ್ಕು ಯಾಕೆ ಚೌಕಾಸಿ

ನಗಿಸಿ ನಗುವುದೇ ಖುಷಿ”

 

ಈ ಸಾಲುಗಳು ದುನಿಯಾ ಸಿನೆಮಾದಲ್ಲಿ ಕೇಳಿರುತ್ತೀರಿ. ನಾವೀಗ ಈ ಹಾಡನ್ನು ಹಾಡುವ ಸ್ಥಿತಿಗೆ ಬಂದು ತಲುಪುತ್ತಿದ್ದೇವೆ. ಅದಕ್ಕೆ ಕಾರಣ ಏನೆಂದರೆ ಕೇಂದ್ರ ಮತ್ತು ರಾಜ್ಯ ಸರಕಾರಗಳು ನಮ್ಮ ಮೇಲೆ ಹೊರಸಿರುವ ಸಾಲದ ಹೊರೆ. ಪ್ರತಿ ಭಾರತೀಯನ ತಲೆ ಮೇಲಿದೆ ₹1.40 ಲಕ್ಷ‌ ಹೊರೆ!

ಅರೇ ಇದೇನಿದು ಈ ಸಾಲವನ್ನು ನಮ್ಮ ಮೇಲ್ಯಾಕೆ ಹಾಕುತ್ತಿದ್ದಾರೆ ಎಂದು ಪ್ರಶ್ನಿಸಿಕೊಳ್ಳುವ ಧೈರ್ಯ ಮಾಡಲೇಬೇಡಿ. ಆನುವಂಶಿಕ ಕಾಯಿಲೆಯಂತೆ ನವಜಾತ ಶಿಶುವಿಗೂ ಈ ಸಾಲದ ಸಂಬಂಧ ಮಾತ್ರ ತಪ್ಪಿದ್ದಲ್ಲ. ಅಜ್ಜ ಮಾಡಿದ ಸಾಲ ಮೊಮ್ಮಗ ತೀರಿಸಲೇಬೇಕು. ನಮ್ಮ ಹೆಮ್ಮೆಯ ಪ್ರಧಾನಿ ನರೇಂದ್ರ ಮೋದಿ,  ಪ್ರತಿಯೊಬ್ಬರ ಬ್ಯಾಂಕ್‌ ಖಾತೆಗೆ 15 ಲಕ್ಷ ರೂ ಹಾಕುತ್ತೇನೆ ಎಂದು ಹೇಳಿದ್ದರು. ಈಗ 1.40 ಲಕ್ಷ ರೂ ಸಾಲದ ಹೊರೆಯನ್ನು ನಮ್ಮ ಮೇಲೆ ಹಾಕಿದ್ದಾರೆ. ಇದಕ್ಕಿಂತ ಬೇರೆ ಸಂತಸ ಮತ್ತೊಂದು ಇರಲಿಕ್ಕಿಲ್ಲ.

ಈ ಅಂಕಿ ಅಂಶಗಳನ್ನು ಯಾರೋ ಸೃಷ್ಟಿಸಿದ್ದು ಅಲ್ಲ, ಹಣಕಾಸು ಸಚಿವಾಲಯವೇ ಇದನ್ನು ಬಹಿರಂಗಗೊಳಿಸಿದೆ. ಭಾರತದ ಒಟ್ಟು ಸಾಲ ಕಳೆದ ಸೆಪ್ಟೆಂಬರ್‌ ಅಂತ್ಯದ ವೇಳೆಗೆ 147.19 ಲಕ್ಷ ಕೋಟಿ ರೂ.ಗೆ ಏರಿಕೆಯಾಗಿದೆ ಎಂದು ಹಣಕಾಸು ಸಚಿವಾಲಯದ ವರದಿ ತಿಳಿಸಿದೆ. ಜೂನ್‌ ಅಂತ್ಯದ ವೇಳೆಗೆ 145 ಲಕ್ಷ ಕೋಟಿ ರೂ. ಇತ್ತು. ತ್ರೈಮಾಸಿಕದಿಂದ ತ್ರೈಮಾಸಿಕಕ್ಕೆ ಸಾಲದ ಮೊತ್ತದಲ್ಲಿ ಎರಡು ಪರ್ಸೆಂಟ್‌ನಷ್ಟು ಏರಿಕೆ ಆಗಿತ್ತ ಬಂದಿದೆ.

ಸಂಸತ್ತಿನಲ್ಲಿ ಇತ್ತೀಚೆಗೆ ಮಂಡನೆಯಾದ ಕೇಂದ್ರ ಸಾರ್ವಜನಿಕ‌ ಸಾಲ ನಿರ್ವಹಣಾ‌‌ ವರದಿ ಹಾಗೂ‌ ಆರ್‌ಬಿಐ‌ ವರದಿಗಳ ಪ್ರಕಾರ‌, 2027ರಲ್ಲಿ ಸ್ವದೇಶಿ‌ ಸಾಲ 400 ಲಕ್ಷ ಕೋಟಿ‌ ರೂ. ಹಾಗೂ ವಿದೇಶಿ‌ ಸಾಲ 65 ಲಕ್ಷ ಕೋಟಿ‌ ರೂ. ದಾಟಲಿದೆ. ಸಾಲದ‌ ಬಡ್ಡಿ, ಅಸಲು ಕಂತು ಪಾವತಿಗಾಗಿ ಸಾಲ ಮಾಡಬೇಕಾದ ಹೀನಾಯ‌ ಆರ್ಥಿಕ ಪರಿಸ್ಥಿತಿ ಬಂದೊದಗಲಿದೆ ಎಂಬ ಆತಂಕಕಾರಿ ವಿಚಾರ ಸದನದಲ್ಲಿ ಚರ್ಚೆಯಾಗಿದೆ.

ಇದನ್ನೂ ಓದಿಹುಟ್ಟಿದೂರಿನಲ್ಲಿ ಎಲ್ಲವೂ ಸಿಕ್ಕಿದ್ದರೆ ನವೀನ್ ಸಾಯುತ್ತಿರಲಿಲ್ಲ

ಸಾಲ ಮಾಡುವುದು ಭಾರತದ ಚಾಳಿ : ದೇಶ ಸಾಲ ಮಾಡುವುದು ಇವತ್ತು ನಿನ್ನೆಯ ಕಥೆ ಅಲ್ಲ. ಅದಕ್ಕೆ ಸುದೀರ್ಘ ಇತಿಹಾಸ ಇದೆ. ದೇಶಕ್ಕೆ ಸ್ವಾತಂತ್ರ್ಯ ಸಿಕ್ಕ 67 ವರ್ಷಗಳಲ್ಲಿ 26 ಲಕ್ಷ‌ ಕೋಟಿ‌ ರೂ.‌ ವಿದೇಶಿ‌ ಸಾಲ, 50 ಲಕ್ಷ‌ ಕೋಟಿ‌ ರೂ. ಸ್ವದೇಶಿ‌ ಸಾಲ‌ ಸಹಿತ ಒಟ್ಟಾರೆ ಇದ್ದ 76 ಲಕ್ಷ ಕೋಟಿ ರೂ.‌ ಸಾಲದ ಹೊರೆ ದೇಶದ ಮೇಲೆ ಇತ್ತು.  ಕಳೆದ‌‌ ಎಂಟು‌ ವರ್ಷಗಳಲ್ಲಿ ವಿದೇಶಿ ಸಾಲ 49 ಲಕ್ಷ ಕೋಟಿ‌ ರೂ, ಸ್ವದೇಶಿ ಸಾಲ 147 ಲಕ್ಷ‌ ಕೋಟಿ ರೂ.  ಒಟ್ಟು 196 ಲಕ್ಷ‌ ಕೋಟಿ‌ ರೂ. ಸಾಲ ಈಗ ಭಾರದ ಮೇಲಿದೆ. ಪ್ರತಿಯೊಬ್ಬ ಭಾರತೀಯನ ತಲೆ ಮೇಲೆ ಯುಪಿಎ‌‌‌ ಅವಧಿಯಲ್ಲಿ 63,583 ರೂ. ಸಾಲ‌ದ‌ ಹೊರೆ ಇತ್ತು ಈಗ ‌ ಎನ್‌ಡಿಎ‌ ಅವಧಿಯಲ್ಲಿ‌ 8 ವರ್ಷಗಳಲ್ಲಿ 1.40 ಲಕ್ಷ‌ ರೂ.ಗಳಿಗೆ ಹೆಚ್ಚಿದೆ. ಇನ್ನೂ ಎರಡು ವರ್ಷದ ಅವಧಿಯಲ್ಲಿ ಈ ಸಾಲದ ಹೊರೆ ಹೆಚ್ಚಾಗಲಿದೆ.

ಯಾರಿಂದ ಹೆಚ್ಚಾಯ್ತು ಭಾರತದ ಸಾಲ..? ಯಾರಿಂದ ಹೆಚ್ಚಾಯ್ತು ಭಾರತದ ಸಾಲ..? ಮೋದಿ ಸರ್ಕಾರ ಮಾಡಿದ್ದೆಷ್ಟು, ಮನಮೋಹನ್ ಸಿಂಗ್ ಮಾಡಿದ ಸಾಲವೆಷ್ಟು? ಎಂಬ ಚರ್ಚೆಗಳು ಈಗ ಕೇಳಿ ಬರುತ್ತಿವೆ. ಹಿಂದಿನ ಸಾಲದ ಲೆಕ್ಕಾಚಾರವನ್ನೊಂದಿಷ್ಟು ನೋಡೋಣ.

2004 ರಲ್ಲಿ ಅಟಲ್ ಬಿಹಾರಿ ವಾಜಪೇಯಿ ಪ್ರಧಾನಿ ಅವಧಿ ಮುಗಿದಾಗ ಭಾರತದ ಒಟ್ಟು ವಿದೇಶಿ ಸಾಲ 5 ಲಕ್ಷ ಕೋಟಿ ರೂಪಾಯಿ ಇತ್ತು. 2004ರ ಚುನಾವಣೆಯ ನಂತರ ಕಾಂಗ್ರೆಸ್ ನ ಮನಮೋಹನ್ ಸಿಂಗ್ ಪ್ರಧಾನಿಯಾದಾಗ  5 ಲಕ್ಷ ಕೋಟಿಯಿದ್ದ ಭಾರತದ ವಿದೇಶಿ ಸಾಲ ಮನಮೋಹನ್ ಸಿಂಗ್ ಅವರ ಮೊದಲ ಅವಧಿ ಮುಗಿಯುವಷ್ಟರಲ್ಲಿ ದುಪ್ಪಟ್ಟಾಗಿತ್ತು.  2004 ರಲ್ಲಿ ಭಾರತದ ಸಾಲ ಸ್ವದೇಶಿ 18.14 ಲಕ್ಷ ಕೋಟಿ, ವಿದೇಶಿ 5 ಲಕ್ಷ ಕೋಟಿ ಒಟ್ಟು 23. 14 ಲಕ್ಷ ಕೋಟಿಯಷ್ಟು ಸಾಲ ಇತ್ತು. 2009ರ ಚುನಾವಣೆಯ ನಂತರ ಮನಮೋಹನ್ ಸಿಂಗ್ ಮತ್ತೊಮ್ಮೆ ದೇಶದ ಪ್ರಧಾನಿಯಾದರು. 2014ರಲ್ಲಿ ಭಾರತದ ಒಟ್ಟು ವಿದೇಶಿ ಸಾಲ 26.7 ಲಕ್ಷ ಕೋಟಿ , ಸ್ವದೇಶಿ ಸಾಲ 49 ಲಕ್ಷ ಕೋಟಿ‌ ರೂಗೆ ಮುಟ್ಟಿತ್ತು. ಒಟ್ಟು 76 ಲಕ್ಷ ಕೋಟಿ ರೂ ನಷ್ಟು ಸಾಲ ಭಾರದ ಮೇಲೆ ಇತ್ತು.

ಇಲ್ಲಿ ಕ್ಲಿಕ್‌ ಮಾಡಿ : ಜನಶಕ್ತಿ ಮೀಡಿಯಾ ವಾಟ್ಸ್‌ಪ್‌ ಗುಂಪು ಸೇರಲು ಈ ಲಿಂಕ್‌ ಕ್ಲಿಕ್‌ ಮಾಡಿ

2014ರ ಚುನಾವಣೆಯಲ್ಲಿ ನರೇಂದ್ರ ಮೋದಿ (Narendra Modi) ಪ್ರಧಾನಿಯಾಗಿ ಆಯ್ಕೆಯಾದರು. 2014 ರಿಂದ 2019 ರವರೆಗೆ ಮೋದಿ ಸರಕಾರದ ಮೊದಲ ಅವಧಿಯಲ್ಲಿ 37 ಲಕ್ಷ ಕೋಟಿ ರೂ ವಿದೇಶಿ ಸಾಲ, 56 ಲಕ್ಷ ಕೋಟಿ ರೂ ನಷ್ಟು ಸ್ವದೇಶಿ ಸಾಲ ಸೇರಿ ಒಟ್ಟು 93 ಲಕ್ಷ ಕೋಟಿ ರೂ ಸಾಲ ಭಾರತದ ಮೇಲೆ ಬಿತ್ತು.  ಮೋದಿ 2019ರಲ್ಲಿ ಮತ್ತೊಮ್ಮೆ ಪ್ರಧಾನಿಯಾಗಿ 3 ವರ್ಷಗಳಾಗಿವೆ 2019 ರಿಂದ 2022 ರ ವರೆಗೆ 49 ಲಕ್ಷ ಕೋಟಿ ರೂ ವಿದೇಶಿ ಸಾಲ, 147 ಲಕ್ಷ ಕೋಟಿ ರೂ ಸ್ವದೇಶಿ ಸಾಲ ಸೇರಿ ಒಟ್ಟು 196 ಲಕ್ಷ‌ ಕೋಟಿ‌ ರೂ. ತಲುಪಿದೆ. ಇವರಿಬ್ಬರ ಆಡಳಿತದ ಕಾಲದಲ್ಲಿ ಸಾಲ ಹೆಚ್ಚಳ ಯಾರದು ಎಂಬುದು ಸ್ಪಷ್ಟವಾಗಿ ಗೊತ್ತಾಗಿದೆ.  ಮನಮೋಹನ್‌ ಸಿಂಗ್‌ ಆಡಳಿತಕ್ಕೆ ಹೋಲಿಸಿದರೆ ಪ್ರಧಾನಿ ಮೋದಿ‌ ಆಡಳಿತದಲ್ಲಿ ಸ್ವದೇಶಿ‌ ಸಾಲವು 97.40 ಲಕ್ಷ ಕೋಟಿ ರೂ.‌ ಹಾಗೂ‌ ವಿದೇಶಿ ಸಾಲವು 22.3 ಲಕ್ಷ‌ ಕೋಟಿ‌ ರೂ.ಗಳಷ್ಟು ಹೆಚ್ಚಳ ಕಂಡಿದೆ.

ಭಾರತ ಇನ್ನೊಂದು ಶ್ರೀಲಂಕಾ ಆಗದಿರಲಿ : ಭಾರತದ ಬಳಿಯಲ್ಲೇ ಇರುವ ಪುಟ್ಟ ರಾಷ್ಟ್ರ ವಿದೇಶಿ ಸಾಲದ ಸುಳಿಗೆ ಸಿಲುಕಿಕೊಂಡು ನರಳಾಡುತ್ತಿರುವುದು ಗೊತ್ತೇ ಇದೆ. ಶ್ರೀಲಂಕಾ ದಿವಾಳಿಯಾದ ಬೆನ್ನಲ್ಲಿಯೇ ಭಾರತದ ವಿದೇಶಿ ಸಾಲದ ಬಗ್ಗೆಯೋ ದೊಡ್ಡ ಮಟ್ಟದ ಚರ್ಚೆ ಆಗುತ್ತಿದೆ.  ಶ್ರೀಲಂಕಾಕ್ಕೆ ಒದಗಿದ ಸಂಕಷ್ಟ ಭಾರತದಲ್ಲಿ ಉದ್ಭವಿಸಿದರೂ ಅಚ್ಚರಿ ಪಡಬೇಕಿಲ್ಲ ಎಂದು ಆರ್ಥಿಕ ತಜ್ಞರು ಹೇಳುತ್ತಲೇ ಇದ್ದಾರೆ.

ಶ್ರೀಲಂಕಾದಲ್ಲಿ ಆರ್ಥಿಕತೆ ಪೂರ್ಣ ಕುಸಿದಿರುವ ಕಾರಣ ವಿದೇಶಿ ವಿನಿಮಯ(Foreign Exchange) ಸಂಗ್ರಹ ಪೂರ್ತಿ ಕರಗಿಹೋಗಿದೆ. ಹೀಗಾಗಿ ವಿದೇಶಗಳಿಂದ ಯಾವುದೇ ವಸ್ತುಗಳ ಖರೀದಿಗೆ ಅಗತ್ಯವಾದ ವಿದೇಶಿ ಕರೆನ್ಸಿ ಇಲ್ಲದ ಕಾರಣ, ಆಹಾರ, ವಿದ್ಯುತ್‌, ನೀರು, ಪೆಟ್ರೋಲ್‌ ಇಲ್ಲದೆ ಲಂಕಾದ ಜನ ತತ್ತರಿಸಿ ಹೋಗಿದ್ದರು. ಭಾರತದ ಇಂದಿನ ಸ್ಥಿತಿ ನೋಡಿದರೆ ಅಂತಹ ಸಂದರ್ಭಗಳು ಹೆಚ್ಚಾಗುವ ಸಾಧ್ಯತೆಗಳು ಇವೆ. ಮಾಡಿದ ಸಾಲವನ್ನು ಕೇಂದ್ರ ಸರಕಾರ ತೀರಿಸಲು ಯೋಜನೆ ರೂಪಿಸಬೇಕಿದೆ.

ಇದನ್ನೂ ಓದಿ : ನವ ಉದಾರೀಕರಣದಿಂದ ನಿರುದ್ಯೋಗ – ಖಾಲಿ ಹುದ್ದೆ – ಆಡಳಿತ ಯಂತ್ರದ ಕುಸಿತ

ರಾಜ್ಯದ ಸಾಲವೆಷ್ಟು ? : ಕರ್ನಾಟಕ ರಾಜ್ಯ ಸರಕಾರ 5.18 ಲಕ್ಷ‌ ಕೋಟಿ ರೂ.‌ ಸಾಲದ ಸುಳಿಯಲ್ಲಿ ಆಡಳಿತ ನಡೆಸುತ್ತಿದೆ. 2018, 19 ರಲ್ಲಿದ್ದ‌‌ 2.42 ಲಕ್ಷ ಕೋಟಿ‌ ರೂ.‌ ಸಾಲದ ಹೊರೆ 2022 -23ರಲ್ಲಿ 5.18 ಲಕ್ಷ‌ ಕೋಟಿ‌ ರೂ. ಮುಟ್ಟಿದೆ. ಅದೇ 2023-24ಕ್ಕೆ ರಾಜ್ಯದ ಒಟ್ಟು ಸಾಲ ಅಂದಾಜು 5,73,790 ಕೋಟಿ ರೂ. ತಲುಪಲಿದೆ. ಅದೇ 2024-25ರಲ್ಲಿ ರಾಜ್ಯದ ಒಟ್ಟು ಸಾಲದ ಹೊರೆ 6,42,578 ಕೋಟಿ ರೂ.ಗೆ ತಲುಪುವ ಅಂದಾಜು ಮಾಡಲಾಗಿದೆ. 2022-23ರಲ್ಲಿ ರಾಜ್ಯ ಸರ್ಕಾರ ಸುಮಾರು 75,000-80,000 ಕೋಟಿ ರೂ. ಸಾಲ ಮಾಡುವ ಸಾಧ್ಯತೆ ಇದೆ ಎನ್ನಲಾಗಿದೆ.

ರಾಜ್ಯವು 6.89 ಕೋಟಿ ಜನಸಂಖ್ಯೆ ಹೊಂದಿದ್ದು, ಪ್ರತಿಯೊಬ್ಬ ಕನ್ನಡಿಗನ ಮೇಲೆ 66,763 ರೂ. ಆರ್ಥಿಕ ಹೊರೆಯಿದೆ. ಕೇಂದ್ರ ಸರಕಾರ ಮಾಡಿದ ಸಾಲದ ತಲಾವಾರು ಸಾಲವನ್ನು ಲೆಕ್ಕಕ್ಕೆ ತೆಗೆದುಕೊಂಡರೆ ಪ್ರತಿಯೊಬ್ಬ ಕನ್ನಡಿಗನೂ ಬರೋಬ್ಬರಿ 1,63,819 ರೂ. ಸಾಲ ಹೊಂದಿದ್ದಾನೆ ಎಂಬುದು ರಾಜಕೀಯ ವಿಶ್ಲೇಷಕರ ಲೆಕ್ಕಾಚಾರವಾಗಿದೆ.

 ಈ ಪ್ರಮಾಣದಲ್ಲಿ ಸಾಲ ಮಾಡಲು ಕಾರಣವೇನು ಎಂಬ ಅಂಶಗಳನ್ನು ಬೆನ್ನತ್ತಿ ಹೋದಾಗ ಸಿಕ್ಕ ಉತ್ತರ ಅಚ್ಚರಿ ಮೂಡಿಸುತ್ತವೆ.  ಕೋವಿಡ್‌ ನಿರ್ವಹಣೆಗಾಗಿ, ಜನಪರ ಯೋಜನೆಗಳಿಗಾಗಿ ಸಾಲವನ್ನು ಮಾಡಲಾಗಿದೆ ಎಂದು ಸರಕಾರ ತನ್ನ ಸಾಲದ ಲೆಕ್ಕಾಚಾರವನ್ನು ಜನರ ಮುಂದಿಟ್ಟಿದೆ. ಆದರೆ, ಈ ಸಾಲ ಯಾವ ಜನಪರ ಯೋಜನೆಗಳಿಗೆ ಬಳಕೆಯಾಗಿದೆ ಎಂಬುದು ಮಾತ್ರ ಕಾಣುತ್ತಿಲ್ಲ. ಸಾಲವೂ ಏರಿಕೆ, ತೆರಿಗೆಯೂ ಏರಿಕೆ. ಆ ಎಲ್ಲ ಹಣ ಹೋಗುತ್ತಿರುವುದು ಎಲ್ಲಿಗೆ? ಎಂಬ ಪ್ರಶ್ನೆ ಎಲ್ಲರನ್ನೂ ಕಾಡುತ್ತಿದೆ.  ಈ ಸಾಲವನ್ನು ತೀರಿಸಲು ಸರಕಾರ ನಮ್ಮ ಮೇಲೆ ಇನ್ನಷ್ಟೊ ಹೊರೆ ಹೇಗೆ ಹಾಗಬಹುದು? ಯೋಚಿಸದರೆ ನಿದ್ದೆಯೂ ಬರುವುದಿಲ್ಲ. ನೆಮ್ಮದಿಯ ನಾಳೆಗಳು ಬೇಕು ಎನ್ನುವುದಾರೆ, ನಿದ್ದೆಯು ನಮಗಿಲ್ಲ ಇದ್ದೇಳಿ ಎಂಬ ಘೋಷಣೆ ನಮ್ಮೋಳಗೆ ಮೊಳಗುತ್ತಿರಬೇಕಿದೆ. ಸರ್ಕಾರವು ತನ್ನ ಸಾಲದ ಮೇಲಿನ ಬಡ್ಡಿಗೆ ಪ್ರತಿ ತಿಂಗಳು ₹ 81000 ಕೋಟಿಗಿಂತ ಹೆಚ್ಚು ಖರ್ಚು ಮಾಡುತ್ತಿದೆ ಎಂಬ ಸತ್ಯವನ್ನು ಜನರಿಗೆ ತಿಳಿಸಬೇಕಿದೆ. ಸಾಲದ ಸುಳಿಯಲ್ಲಿ ಸಿಲುಕಿಸಿದ ಸರಕಾರಗಳನ್ನು ಏನು ಮಾಡಬೇಕು ಎಂಬುದನ್ನು ಈ ಕ್ಷಣದಿಂದಲೇ ಯೋಚಿಸಬೇಕಿದೆ.

Donate Janashakthi Media

2 thoughts on “ಖಾತೆಗೆ 15 ಲಕ್ಷ ರೂ ಬೀಳುವ ಬದಲು, 1.40 ಲಕ್ಷ ರೂ ಸಾಲದ ಹೊರೆ ಬಿತ್ತು!!

  1. ನನ್ನ ಸಾಲ ದುಪ್ಪಟ್ಟು ಆಗಿದೆ ಹೋಟೆಲ್ ಉದ್ಯಮಕ್ಕಾಗಿ ತೆಗೆದುಕೊಂಡು ಅದರಲ್ಲಿ ಸಂಪೂರ್ಣ ಲಾಭ ಕಳೆದು ಹೋಯ್ತು ಇವಾಗ ಅದನ್ನು ತೀರಿಸಲು ಆಗದೆ ಮುಂದೆ ಬ್ಯಾಂಕಿನ ಸಾಲ ಪಡೆಯಲು ಅವಕಾಶ ಸಿಗದೆ ಕಂಗಾಲಾಗಿ ಇದ್ದೇನೆ ದಯಮಾಡಿ ನನಗೆ ಜೀವನ ಮಾಡಲು ಅವಕಾಶ ನೀಡಲು ಮನವಿ PMJ 🙏🙏

Leave a Reply

Your email address will not be published. Required fields are marked *