ಗುರುರಾಜ ದೇಸಾಯಿ
ಹಾವೇರಿಯಲ್ಲಿ ನಡೆದ 86 ನೇ ಸಾಹಿತ್ಯ ಸಮ್ಮೇಳನವು ಭಾಷೆ, ಸಾಹಿತ್ಯ ಮತ್ತು ಸಂಸ್ಕೃತಿಗಳಿಗೆ ಸಂಬಂಧಿಸಿದಂತೆ ಹಲವು ಪ್ರಶ್ನೆಗಳನ್ನು ಹುಟ್ಟು ಹಾಕಿತು. ರಾಜ್ಯದ ಅನೇಕ ಲೇಖಕರು ಮತ್ತು ಕಲಾವಿದರಿಂದ ಅಸಮಾಧಾನ ಹೊರಹೊಮ್ಮಿ ಜನಸಾಹಿತ್ಯ ಸಮ್ಮೇಳನದ ಮೂಲಕ ಪ್ರತಿರೋಧ ವ್ಯಕ್ತಪಡಿಸಿದರು. ಆ ಮೂಲಕ ಪತನಗೊಳ್ಳುತ್ತಿರುವ ಕಸಾಪಕ್ಕೆ ಎಚ್ಚರಿಕೆ ನೀಡಿದ್ದಾರೆ.
ರಾಜ್ಯದ ಮೂಲೆ ಮೂಲೆಯಿಂದ ಸಾವಿರಾರು ಸಂಖ್ಯೆಯಲ್ಲಿ ಆಗಮಿಸಿದ್ದ ಸಾಹಿತಿ, ಕಲಾವಿದರು, ಜನಪರ ಚಳುವಳಿಗಾರರು ಜನಸಾಹಿತ್ಯ ಸಮ್ಮೇಳನಕ್ಕೆ ಸಾಕ್ಷಿಯಾಗಿದ್ದರು. ನಾಡಗೀತೆ ಮೂಲಕ ಆರಂಭವಾದ ಜನಸಾಹಿತ್ಯ ಸಮ್ಮೇಳನ, ಪಾಯಸ, ಗೀರೈಸ್, ಅನ್ನ ಸಾಂಬರ್, ಚಿಕನ್ ಕಬಾಬ್, ಮೀನ್ಸಾರು ಸವಿದ ಸಭೀಕರ ನಡುವೆ ಆಹಾರದ ರಾಜಕಾರಣ ಬಿಸಿಬಿಸಿಯಾಗಿತ್ತು. ಆಡಳಿತವನ್ನು ಎಚ್ಚರಿಸುವ, ಸೌಹಾರ್ಧತೆಯ ಹೂವನ್ನು ಹೊಸಕಿ ಹಾಕುವವರ ವಿರುದ್ದ ಪ್ರತಿರೋಧದ ಕವಿತಗಳು ಕವಿಗೋಷ್ಠಿಯಿಂದ ಬಂದವು, “ಕಟ್ಟುತ್ತೇವ ನಾವು ಕಟ್ಟುತ್ತೇವೆ” ಕ್ರಾಂತಿಗೀತೆಯೊಂದಿಗೆ ಜನಸಾಹಿತ್ಯ ಸಮ್ಮೇಳನ ಸಮಾರೋಪಗೊಂಡಿತು.
ಗಮನ ಸೆಳೆದ ಬಂಡಾಯದ ಗೆರೆಗಳು : ಜನಸಾಹಿತ್ಯ ಸಮ್ಮೇಳನದಲ್ಲಿ ‘ಬಂಡಾಯದ ಗೆರೆಗಳು’ ವ್ಯಂಗ್ಯಚಿತ್ರ ಮತ್ತು ಪೋಸ್ಟರ್ ಗಳ ಪ್ರದರ್ಶನ ನೋಡುಗರ ಗಮನ ಸೆಳೆಯಿತು. ದೊಡ್ಡದಾದ ಕ್ಯಾನ್ವಾಸ್ ಮೇಲೆ ಆರಂಭದಲ್ಲಿ ರೈತ ನಾಯಕ ಎಚ್.ಆರ್. ನವೀನ್ ಕುಮಾರ್ ಎಲ್ಲವನ್ನೂ ಪ್ರಶ್ನಿಸುವ ಅರ್ಥದಲ್ಲಿ ? ಚಿಹ್ನೆಯ ಗೆರೆ ಎಳೆದರು. ಅದರ ಕೆಳಗೆ ಚಿತ್ರನಟ ಪ್ರಕಾಶ್ ರೈ ಜಸ್ಟ್ ಆಸ್ಕಿಂಗ್ ಎಂದು ಬರೆದರು. ನಾನು ಕನ್ನಡಿಗ, ಒಳಮೀಸಲಾತಿ ಜಾರಿಯಾಗಲಿ, ಸಮಾನತೆಯ ಹೂ ಎಲ್ಲಡೆ ಅರಳಲಿ ಎಂಬುದು ಸೇರಿದಂತೆ ಅವರವರ ಅಭಿವ್ಯಕ್ತಿ ಹೊರಹೊಮ್ಮಿತ್ತು. ಮೂರನೇ ತರಗತಿಯ ಸಾನ್ವಿ “ಮಾನವ ಸರಪಳಿ” ರಚಿಸಿ ಸೌಹಾರ್ಧ ಕರ್ನಾಟಕ ರಕ್ಷಿಸುವ ಭರವಸೆ ನೀಡಿದರೆ, 6ನೇ ತರಗತಿಯ ಸಾಕ್ಷಿ “ಒಗ್ಗಟ್ಟಿನಲ್ಲಿ ಬಲವಿದೆ” ಎಂದು ಬರೆಯುವ ಮೂಲಕ ಗೆಲ್ಲಲೊಂದು ಜಗತ್ತಿದೆ ಎಂಬ ಭರವಸೆ ಮೂಡಿಬಂತು.
ಖ್ಯಾತ ವ್ಯಂಗ್ಯಚಿತ್ರಗಾರ ಚಿತ್ರಗಳು ನೋಡುಗರನ್ನು ಸೆಳೆಯುವಲ್ಲಿ ಯಶಸ್ವಿಯಾದವು, ಪಿ.ಮಹಮ್ಮದ್, ದಿನೇಶ್ ಕುಕ್ಕುಜಡ್ಕ, ಸತೀಶ್ ಆಚಾರ್ಯ, ಚೇತನ್ ಪುತ್ತೂರು, ಕಲಾವಿದ ಬಾದಲ್ ನಂಜುಂಡಸ್ವಾಮಿ, ಚಂದ್ರಶೇಖರ್ ಶೆಟ್ಟಿ, ಸರೋವರ್ ಬೆಂಕಿಕೆರೆ, ಉದಯ ಗಾಂವ್ಕರ್, ನವೀನ್ ಹಾಸನ, ವಿಶ್ವವಿನ್ಯಾಸ, ಸುನೈಫ್, ರೂಮಿ ಹರೀಶ್, ರೂಪಶ್ರೀ ಕಲ್ಲಿಗನೂರು, ಚರಿತಾ ಮೈಸೂರು, ನಭಾ ಒಕ್ಕುಂದ ಸೇರಿ ಹಲವು ಮಂದಿ ಕಲಾವಿದರ ವ್ಯಂಗ್ಯಚಿತ್ರ ಮತ್ತು ಪೋಸ್ಟರ್ ಗಳು ಪ್ರದರ್ಶನದಲ್ಲಿ ಕಂಡುಬಂದವು.
ರಾಷ್ಟ್ರಗಳನ್ನು ನಿರ್ಮಿಸುವವರು ಕಲಾವಿದರು ಮತ್ತು ಕವಿಗಳು : ರಾಷ್ಟ್ರಗಳನ್ನು ನಿರ್ಮಿಸುವವರು ರಾಜಕಾರಣಿಗಳಲ್ಲ, ಕಲಾವಿದರು ಮತ್ತು ಕವಿಗಳು ಎಂದು ಹೇಳುವ ಮೂಲಕ ಡಾ. ಮೂಡ್ನಾಕೂಡು ಚಿನ್ನಸ್ವಾಮಿ, ಸಾಹಿತ್ಯದ ಗಟ್ಟಿತನ ಎಂತದ್ದು ಎಂಬುದನ್ನು ವಿವರಿಸಿದರು.
ಸಾಹಿತ್ಯ ಪರಿಷತ್ತು ಹಳಿ ತಪ್ಪಿದಾಗಲೆಲ್ಲಾ ಜನರೇ ಎಚ್ಚರಿಸುತ್ತಾ ಬಂದ ಪರಿಪಾಠವಿದೆ. ಕನ್ನಡ ಭಾಷೆಗೆ ಸುಮಾರು 2000 ವರ್ಷಗಳ ಇತಿಹಾಸವಿದೆ. ಕವಿರಾಜಮಾರ್ಗಕಾರನ ಮತ್ತೆ ಮತ್ತೆ ನೆನೆಯಬೇಕಾದ ಮಾತು ‘ಕಸವರನೆಂಬುದು ನೆರೆ ಸೈರಿಸಲಾರ್ಪೊಡೆ ಪರ ಧರ್ಮಮುಮಂ, ಪರ ವಿಚಾರಮುಮಂ.’ ಚಿನ್ನವೆಂದರೆ ಯಾವುದು? ಪರಧರ್ಮವನ್ನು ಪರರ ವಿಚಾರವನ್ನು ಗೌರವಿಸುವುದು. ಇಂತಹ ಭವ್ಯ ಇತಿಹಾಸವುಳ್ಳ ಕನ್ನಡ ಧರ್ಮಕ್ಕೆ ಅಪಚಾರವಾಗುವಂತೆ ಸಾಹಿತ್ಯ ಪರಿಷತ್ತು ಮುಸಲ್ಮಾನ ಬರಹಗಾರರನ್ನು ಬಹುತೇಕ ಹೊರಗಿಟ್ಟಿರುವುದು, ಕರ್ನಾಟಕದ ಭಾಷೆಗಳಾದ ತುಳು, ಕೊಡವ, ಅರೆಭಾಷೆ, ಕೊಂಕಣಿ ಭಾಷೆಗಳಿಗೆ ಅವಕಾಶ ನೀಡಿ ಬ್ಯಾರಿ ಭಾಷೆಗೆ ನಿರಾಕರಿಸಿರುವುದು ವಿಷಾದನೀಯ ಎಂದರು.
ವಿವಿಧ ಗೋಷ್ಠಿಗಳು : ಜನಸಾಹಿತ್ಯ ಸಮ್ಮೇಳನದಲ್ಲಿ 7 ಗೋಷ್ಠಿಗಳು ನಡೆದವು ಗೋಷ್ಠಿಯಲ್ಲಿ ಪಾಲ್ಗೊಂಡಿದ್ದವರ ಅನಿಸಿಕೆಗಳು ಹೀಗಿವೆ..
ಇದು ಪ್ರತಿಭಟನೆ ಅಲ್ಲ, ಪ್ರತಿರೋಧ ಎಂದು ಪ್ರಕಾಶ್ ರೈ ಕವಿತೆ ವಾಚಿಸಿ ಜನಸಾಹಿತ್ಯ ಸಮ್ಮೇಳನಕ್ಕೆ ಧ್ವನಿಯಾದರು. ಮುಸ್ಲಿಮರನ್ನು ಹೊರಗಟ್ಟಲಿಕ್ಕೆ ಇಷ್ಟು ಹುನ್ನಾರ ಬೇಕಿತ್ತೆ? ಎಂದು ಲೇಖಕಿ ಬಾನು ಮುಷ್ತಾಕ್ ಕಸಾಪದ ನಡೆಯನ್ನು ಪ್ರಶ್ನಿಸಿದರು. ನಮ್ಮನ್ನು ವೇಶ್ಯೆಯರು ಎನ್ನುತ್ತೀರಿ. ತಮ್ಮನ್ನು ತಾವೇ ಇನ್ನೊಂದು ಪಕ್ಷಕ್ಕೆ ಮಾರಿಕೊಂಡವರನ್ನು ಏನೆಂದು ನಿಂದಿಸಲಿ ಹೇಳಿ ಎಂದು ಅಕ್ಕೈ ಪದ್ಮಶಾಲಿ ಆಕ್ರೋಶ ಹೊರಹಾಕಿದರು. ಸಂಘ ಪರಿವಾರ ಹಂತಹಂತವಾಗಿ ಸೌಹಾರ್ದ ಮರವನ್ನ ಕಡಿಯುತ್ತಿದೆ ಎಂದು ಹಿರಿಯ ಪತ್ರಕರ್ತ ಅಗ್ನಿ ಶ್ರೀಧರ್ ಎಚ್ಚರಿಸಿದರು. ಕರ್ನಾಟಕ ಹಲವು ಭಾಷೆಗಳನ್ನೊಳಗೊಂಡ ರಂಗೋಲಿ. ಇದರಲ್ಲಿ ಒಂದು ಬಣ್ಣ ಮಾಸಿದರೂ ಕರ್ನಾಟಕ ಬಡವಾಗಲಿದೆ ಎಂಬ ಹಿರಿಯ ಸಾಹಿತಿ ಪುರುಷೋತ್ತಮ ಬಿಳಿಮಲೆ ಆಕ್ರೋಶಿತ ಮಾತುಗಳು, ಟಿಪ್ಪು ಈ ನಾಡಿನ ಹೆಮ್ಮೆ ಎಂದು ಪತ್ರಕರ್ತ ಟಿ.ಗುರುರಾಜ್ ಟಿಪ್ಪು ಮಹತ್ವವನ್ನು ಸಾರಿದರು.
ಆಹಾರದ ಮೇಲಿನ ರಾಜಕಾರಣ ಮತ್ತು ದೌರ್ಜನ್ಯ ಹೇಗೆ ನಡೆಯುತ್ತಿದೆ ಎಂದು ಚಿಂತಕ ರಂಗನಾಥ ಕಂಟನಕುಂಟೆ, ಲೇಖಕಿ ಪಲ್ಲವಿ ಇಡೂರು ವಿವರಿಸಿದರು. ಸಭೀಕರು ಊಟ ಸವಿಯುತ್ತ ಗೋಷ್ಠಿಯನ್ನು ಆಲಿಸಿದ್ದು ವಿಶೇಷವಾಗಿತ್ತು.
ಅಲ್ಪಸಂಖ್ಯಾತರು ಮತ್ತು ದಲಿತರ ಮೇಲಿನ ದಾಳಿ ಸಾಹಿತ್ಯ ಲೋಕದ ಜವಾಬ್ದಾರಿಗಳು ಎಂಬ ವಿಚಾರದ ಕುರಿತು ಮಾವಳ್ಳಿ ಶಂಕರ್ ಹಾಗೂ ಮುನೀರ್ ಕಾಟಿಪಳ್ಳ ವಿಷಯವನ್ನು ಮಂಡಿಸಲಿದರು. ಕನ್ನಡವನ್ನು ಬೆಳಗಿಸಿದ ಕ್ರೈಸ್ತ ಮಿಷನರಿಗಳು ಕುರಿತು ಡಾ. ಕುಮಾರಸ್ವಾಮಿ ಬೆಜ್ಜಿಹಳ್ಳಿ, ವಿಷಯ ಮಂಡಿಸಿದರು.
ಬೀದಿಗೆ ಬರಲಿ ಕಲೆ-ಸಾಹಿತ್ಯ ಎಂಬ ಅರ್ಥದೊಂದಿಗೆ ಸಮುದಾಯ ಬೆಂಗಳೂರು ತಂಡದಿಂದ ಮೂರು ಮಗ್ಗುಲ ಮುಳ್ಳು ಎಂಬ ಬೀದಿ ನಾಟಕ ಪ್ರದರ್ಶನಗೊಂಡಿತು. ಮುಸ್ಲಿಮರನ್ನು ಬೇಡವೆನ್ನುವುದು ಆಧುನಿಕ ಅಸ್ಪೃಶ್ಯತೆ ಎಂದು ಡಾ. ಜಿ.ರಾಮಕೃಷ್ಣ ಖಾರವಾಗಿಯೇ ಕಸಾಪ ನಡೆ ಹಾಗೂ ಮಹೇಶ್ ಜೋಷಿಯ ಉದ್ಧಟತನವನ್ನು ಟೀಕಿಸಿದರು.
ಸಾಹಿತ್ಯ ಸಮ್ಮೇಳನಗಳು ಸೇರಿದಂತೆ ಕನ್ನಡ ಸಾಹಿತ್ಯ ಪರಿಷತ್ ನಡೆಸುವ ಎಲ್ಲ ಕಾರ್ಯಕ್ರಮಗಳಲ್ಲಿ ಎಲ್ಲ ಸಮುದಾಯಗಳ ಒಳಗೊಳ್ಳಬೇಕು. ಹಿಂದಿ ಹೇರಿಕೆ ಹಾಗೂ ಕನ್ನಡದಲ್ಲೇ ಪ್ರಾಥಮಿಕ ಶಿಕ್ಷಣ, ಸಮಗ್ರ ಭಾಷಾ ನೀತಿಯನ್ನು ರೂಪಿಸಬೇಕು ಎಂಬುದು ಸೇರಿದಂತೆ 9 ನಿರ್ಣಯಗಳೊಂದಿಗೆ ಸಮಾರೋಪ ಗೊಂಡಿತು.
ಕವಿಗೋಷ್ಠಿ :ಯುವಜನರೇ ತುಂಬಿದ್ದ ಕವಿಗೋಷ್ಠಿಯಲ್ಲಿ ಆಡಳಿತವನ್ನು ಎಚ್ಚರಿಸುವ, ಸೌಹಾರ್ಧತೆಯ ಹೂವನ್ನು ಹೊಸಕಿ ಹಾಕುವವರ ವಿರುದ್ದ ಪ್ರತಿರೋಧದ ಕವಿತಗಳು ಹೊರಹೊಮ್ಮಿದವು. ನಿನ್ನ ದಾಖಲೆ ಯಾವಾಗ ನೀಡುತ್ತು ಎಂದು ಕೊಪ್ಪಳದ ಯುವಕವಿ ಸಿರಾಜ್ ಬಿಸರಳ್ಳಿ ದಾಖಲೆ ಕೇಳಿದವನ ಉದ್ದೇಶವನ್ನು ಪ್ರಶ್ನಿಸಿದರು. ದೀಪದ ಮಲ್ಲಿ ನಾನು ಹರಿಯುತ್ತಿರುವ ನದಿ ಎಂದರೆ, ದಾದಾಪೀರ್ ಜೈಮನ್ ಬಣ್ಣಗಳನ್ನು ಕಂಪಿಸಿದರು. ಈರಪ್ಪ ತಾಳದವರ “ಎದೆಯೊಳಗಿನ ಬ್ಯಾನಿ” ಕವಿತೆಯಾಗಿ ಬಂತು. ರೈತ ಕವಿ ಚಂಸು ಪಾಟೀಲ್ ಕವಿತೆಗೆ ಬೆಂಕಿಬಿತ್ತು ಎಂದರೆ, ಚಾಂದ್ ಪಾಷಾ “ಪಂಚರ್ ಹಾಕುವವರ” ಎದೆ ಸೀಳಿದರೆ ಮನುಷ್ಯತ್ವದ ಹೂವಿದೆ ಎಂದರು. ಚಾಂದಿನಿ ರಂಗೋಲಿಯ ಅಂಕುಡೊಂಕು ನಂಗಿಷ್ಟ ಎಂದರು. ಪ್ರಕಾಶ್ ಮಂಟೇದಾ, ಟೀನಾ ಶಶಿಕಾಂತ್ ಫಾತಿಮಾ ರಾಲಿಯಾ, ಹಾಜಿರ ಖಾನಂ, , ಶಿವರಾಜ್ ಮೋತಿ, ಪಂಚಮಿ ಎಸ್, ಸಂಘಮಿತ್ರೆ, ಮಂಜುನಾಥ್ ಮಾಗೊದಿ, ಪುನೀತ್, ಧನಂಜಯ ದೇವರಹಳ್ಳಿ, ವಿಕಾಸ್ ಮೌರ್ಯ, ರೂಮಿ ಹರೀಶ್, ಪ್ರವೀಣ್ ಬಿ ಎಂ ಕವಿತೆ ವಾಚಿಸಿದರು.
ಯಾವುದೇ ಒಬ್ಬ ಬರಹಗಾರ ಹಾಗೂ ಕವಿ ಕಾಲಕ್ಕೆ ಕೊರಳಾಗಬೇಕು ಎಂದು ಕವಿಗೋಷ್ಠಿಯ ಅಧ್ಯಕ್ಷತೆ ವಹಿಸಿದ್ದ ಚಿಂತಕ ಡಾ.ಬಂಜಗೆರೆ ಜಯಪ್ರಕಾಶ್ ಹೇಳಿದರು.
ಯುವಕರ ದಂಡು : ಸಮ್ಮೇಳನದ ಆಯೋಜನೆ, ಗೋಷ್ಠಿ, ಭಾಗವಹಿಸಿದ್ದ ಸಭೀಕರಲ್ಲಿ ಹೆಚ್ಚು ಕಂಡು ಬಂದಿದ್ದು ಯುವಜನತೆ. ಹೊಸ ಚಿಗುರು ಹಳೆ ಬೇರು ಕೂಡಿರಲು ಮರ ಸೊಬಗು ಎಂಬಂತೆ ಜನ ಸಾಹಿತ್ಯ ಸಮ್ಮೇಳನದ ಯಶಸ್ಸಿನ ಹಿಂದೆ ಯವಕರ ದಂಡೆ ಇತ್ತು. ಕನ್ನಡ ಸಾಹಿತ್ಯ ಪರಿಷತ್ ಹಾಗೂ ಸರಕಾರದ ಅನುದಾನ ಪಡೆದ ನಡೆಸುವ ಕಾರ್ಯಕ್ರಮಗಳಲ್ಲಿ ದಲಿತರು, ದಮನಿತರು, ಆದಿವಾಸಿಗಳು, ಮಹಿಳೆಯರು, ಲೈಂಗಿಕ ಅಲ್ಪಸಂಖ್ಯಾತರು ಮತ್ತು ಅಲ್ಪಸಂಖ್ಯಾತ ಸಮುದಾಯಗಳ ಒಳಗೊಳ್ಳುವಿಕೆ ಬೇಕು ಎಂಬ ಘೋಷಣೆಯನ್ನು ಮೊಳಗಿಸಿದರು. ಹೊಸ ತಲೆಮಾರಿನ ತಲ್ಲಣಗಳಿಗೆ ಮದ್ದು ನೀಡುವ ಆಸ್ಪತ್ರೆಯಾಗಿ ಜನಸಾಹಿತ್ಯ ಸಮ್ಮೇಳನ ಕಂಡುಬಂತು.