ʼಸೇಫ್ಟಿ ಐಲ್ಯಾಂಡ್‌ʼ ಮಹಿಳೆಯರು ಅಪಾಯದಲ್ಲಿದ್ರೆ ಈ ಯಂತ್ರದ ಬಟನ್ ಕ್ಲಿಕ್ ಮಾಡಿ

ಬೆಂಗಳೂರು : ಸೇಫ್‌ ಸಿಟಿ’ ಯೋಜನೆ ಅಡಿ ನಗರದಲ್ಲಿ ಮಹಿಳೆಯರು, ಮಕ್ಕಳು ಹಾಗೂ ವೃದ್ಧರ ಸುರಕ್ಷತೆಗೆ ಹಲವು ಯೋಜನೆಗಳು ಜಾರಿಗೊಳ್ಳುತ್ತಿದ್ದು ಈಗ 30 ಸ್ಥಳಗಳಲ್ಲಿ ಮಹಿಳೆಯರ ಸುರಕ್ಷತೆಗೆ ‘ಸುರಕ್ಷತಾ ದ್ವೀಪ’ (ಸೇಫ್ಟಿ ಐಲ್ಯಾಂಡ್‌) ಸ್ಥಾಪಿಸಲಾಗಿದೆ.

ಇದು ಮಹಿಳೆಯರ ನೆರವಿಗೆ ಬರುವ ಪೊಲೀಸರ ವಿನೂತನ ವ್ಯವಸ್ಥೆಯಾಗಿದೆ. ನಗರದ ಕಮಿಷನರೇಟ್‌ ವ್ಯಾಪ್ತಿಯಲ್ಲಿ 50 ‘ಸುರಕ್ಷತಾ ದ್ವೀಪ’ ಸ್ಥಾಪಿಸಲು ನಿರ್ಧರಿಸಲಾಗಿತ್ತು. ಮೊದಲ ಹಂತದಲ್ಲಿ ಮಹಿಳೆಯರು ಹೆಚ್ಚಾಗಿ ಸಂಚರಿಸುವ, ಸಾಫ್ಟ್‌ವೇರ್ ಕಂಪನಿಗಳಿರುವ ಹಾಗೂ ಸೂಕ್ಷ್ಮ ಪ್ರದೇಶಗಳೆಂದು ಗುರುತಿಸಲ್ಪಟ್ಟ 30 ಸ್ಥಳಗಳಲ್ಲಿ ಈ ದ್ವೀಪಗಳನ್ನು ಸ್ಥಾಪಿಸಲಾಗಿದೆ. ಮಹಿಳೆಯರ ಸುರಕ್ಷತೆಗೆ ನಗರ ಪೊಲೀಸರು ಇನ್ನೊಂದು ಹೆಜ್ಜೆ ಮುಂದಡಿ ಇಟ್ಟಿದ್ದಾರೆ. 8 ವಿಭಾಗದಲ್ಲೂ ಈ ದ್ವೀಪಗಳು ತಲೆಯೆತ್ತಿವೆ.

ನಿರ್ಭಯಾ ಪ್ರಕರಣದ ನಂತರ ದೇಶದ ಮಹಾನಗರಗಳಲ್ಲಿ ಮಹಿಳೆಯರ ಸುರಕ್ಷತೆಗೆ ತಂತ್ರಜ್ಞಾನ ಬಳಸಿಕೊಂಡು ಆರೋಪಿಗಳ ಪತ್ತೆ, ಕಾನೂನು ನೆರವು, ವೈದ್ಯಕೀಯ ಸೇವೆ ಕಲ್ಪಿಸಲು ಹಲವು ಯೋಜನೆ ರೂಪಿಸಲಾಗುತ್ತಿದೆ. ನಿರ್ಭಯಾ ನಿಧಿಯಿಂದಲೇ ಈ ಸುರಕ್ಷತಾ ದ್ವೀಪ ಸ್ಥಾಪಿಸಲಾಗಿದೆ ಎಂದು ಪೊಲೀಸ್‌ ಅಧಿಕಾರಿಗಳು ತಿಳಿಸಿದ್ದಾರೆ.

ಏನಿದು ಸೇಫ್ಟಿ ಐಲ್ಯಾಂಡ್‌?
ನೀಲಿ ಬಣ್ಣದಲ್ಲಿರುವ ಈ ಎಮರ್ಜೆನ್ಸಿ ಐಲ್ಯಾಂಡ್‌ ಬಾಕ್ಸ್‌ನಲ್ಲಿರುವ ರೆಡ್‌ ಬಟ್‌ ಒತ್ತಿದರೆ ಸಾಕು ಕಮಾಂಡ್‌ ಸೆಂಟರ್‌ನಲ್ಲಿ ಅಲಾರಂ ಆಗುತ್ತದೆ. ತಕ್ಷಣ ಐಲ್ಯಾಂಡ್‌ ಮಷೀನ್‌ ಬಳಿ ಇರುವ ಕ್ಯಾಮೆರಾ ಆನ್‌ ಆಗುತ್ತದೆ. ಕಮಾಂಡ್‌ ಸೆಂಟರ್‌ ಸಿಬ್ಬಂದಿ ತಕ್ಷಣವೇ ಪ್ರತಿಕ್ರಿಯಿಸುತ್ತಾರೆ. ಸಮಸ್ಯೆ ಆಲಿಸಿ ಸ್ಥಳೀಯ ಪೊಲೀಸರಿಗೆ ಮಾಹಿತಿ ರವಾನಿಸುತ್ತಾರೆ.

ಪೊಲೀಸರು ಐಲ್ಯಾಂಡ್‌ ಬಳಿ ಇರುವ ಕ್ಯಾಮೆರಾದಲ್ಲಿ ಘಟನೆಯನ್ನು ನೇರವಾಗಿ ನೋಡಿ ಅದನ್ನು ದಾಖಲಿಸುವ ವ್ಯವಸ್ಥೆ ಕೂಡ ಇದೆ. ಜನರ ಜತೆಗೆ ಸಂಪರ್ಕದಲ್ಲಿದ್ದು ಅವರಿಗೆ ಧೈರ್ಯ ತುಂಬುತ್ತಲೇ ಕೇವಲ 7 ನಿಮಿಷದ ಒಳಗೆ ಹೊಯ್ಸಳ ಬೀಟ್‌ ವಾಹನಗಳನ್ನು ಕಳಿಸುವ ವ್ಯವಸ್ಥೆ ಈ ಸೇಫ್ಟ್‌ ಐಲ್ಯಾಂಡ್‌ ಸಿಬ್ಬಂದಿ ಮಾಡುತ್ತಾರೆ. ಹೀಗಾಗಿ ಇದು ಸಮಸ್ಯೆಗೊಳಗಾದವರಿಗೆ ಅದರಲ್ಲೂ ಮಹಿಳೆಯರಿಗೆ ಸಾಕಷ್ಟು ಸಹಕಾರಿಯಾಗಲಿದೆ.

ಎಲ್ಲಿಲ್ಲಿದೆ ಸೇಫ್ಟಿ ಐಲ್ಯಾಂಡ್‌ ಮಷಿನ್‌?

ಈ ಸೇಫ್ಟಿ ಐಲ್ಯಾಂಡ್‌ ಯಂತ್ರವು ಇಂದಿರಾನಗರ , ಚಾಮರಾಜಪೇಟೆ, ಉಪ್ಪಾರ್‌ ಪೇಟೆ ಎಂ.ಜಿ ರಸ್ತೆ ಸೇರಿದಂತೆ ನಗರದ 30 ಕಡೆಗಳಲ್ಲಿ ಅಳವಡಿಸಲಾಗಿದೆ. ಇದನ್ನು ಮುಂದಿನ ದಿನಗಳಲ್ಲಿ ಹಂತ ಹಂತವಾಗಿ ಅಳವಡಿಸಲು ಪೊಲೀಸ್‌ ಇಲಾಖೆಯು ಸಿದ್ಧತೆ ನಡೆಸಿದೆ. ಸಾರ್ವಜನಿಕರು ಯಾವ ರೀತಿಯಲ್ಲಿ ಇದರ ಸದುಪಯೋಗ ಪಡೆದುಕೊಳ್ಳುತ್ತಾರೆ ಎಂಬುದನ್ನು ಕಾದುನೋಡಬೇಕಿದೆ.
Donate Janashakthi Media

Leave a Reply

Your email address will not be published. Required fields are marked *