ಡಿಸೆಂಬರ್ 27ರಂದು ಬಿಡುಗಡೆ ಮಾಡಿದ ಜಂಟಿ ಹೇಳಿಕೆಯಲ್ಲಿ, 16 ಮಹಿಳಾ ಸಂಘಟನೆಗಳು, ಮಾನವ ಹಕ್ಕುಗಳ ಗುಂಪುಗಳು ಮತ್ತು ಸಾಮಾಜಿಕ ಕಾರ್ಯಕರ್ತರು ಭಾರತದ ಕುಸ್ತಿ ಒಕ್ಕೂಟದ (ಡಬ್ಲ್ಯುಎಫ್ಐ) ಇತ್ತೀಚಿನ ಬೆಳವಣಿಗೆಗಳ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿವೆ ಮತ್ತು ಭಾರತೀಯ ಕ್ರೀಡಾ ಕ್ಷೇತ್ರದಲ್ಲಿ ವ್ಯಾಪಕವಾಗಿರುವ ಲೈಂಗಿಕ ದೌರ್ಜನ್ಯದ ಸಮಸ್ಯೆಯನ್ನು ಪರಿಹರಿಸಲು ತಕ್ಷಣದ ಕ್ರಮಕ್ಕೆ ಕರೆ ನೀಡಿದ್ದಾರೆ.
ಸಂಜಯ್ ಸಿಂಗ್ ನೇತೃತ್ವದ ಹೊಸದಾಗಿ ಚುನಾಯಿತವಾದ ಡಬ್ಲ್ಯುಎಫ್ಐ ಸಮಿತಿಯನ್ನು ಇತ್ತೀಚೆಗೆ ಅಮಾನತುಗೊಳಿಸಿರುವುದನ್ನು ಎತ್ತಿ ತೋರಿಸುತ್ತ ಕ್ರೀಡಾ ಸಚಿವಾಲಯದ ನಿರ್ಧಾರವು ಸಮಿತಿಯನ್ನು ಕೊನೆಗೊಳಿಸುವ ಬದಲು ಅಮಾನತುಗೊಳಿಸಿದೆಯಷ್ಟೇ ಎಂದು ಕಳವಳ ವ್ಯಕ್ತಪಡಿಸಿರುವ ಹೇಳಿಕೆ, ಭಾರತೀಯ ಕ್ರೀಡಾ ಸಮುದಾಯದೊಳಗೆ ಲೈಂಗಿಕ ದೌರ್ಜನ್ಯಕ್ಕೆ ಶೂನ್ಯ ಸಹಿಷ್ಣುತೆಯ ಸ್ಪಷ್ಟ ಸಂದೇಶವನ್ನು ಕಳುಹಿಸಲಿಕ್ಕಾಗಿ ಅಮಾನತುಗೊಂಡ ಸಮಿತಿಯು ಹಿಂತಿರುಗುವುದನ್ನು ತಡೆಯಬೇಕು, ಅದಕ್ಕಾಗಿ ಅದನ್ನು ವಜಾಗೊಳಿಸುವುದು ಅಗತ್ಯ ಎಂದು ಒತ್ತಿ ಹೇಳಿದೆ.
ಪೊಷ್ ಕಾನೂನು ಎಂದು ಕರೆಯಲ್ಪಡುವ ‘ಕೆಲಸದ ಸ್ಥಳದಲ್ಲಿ ಮಹಿಳೆಯರ ಲೈಂಗಿಕ ಕಿರುಕುಳ (ತಡೆಗಟ್ಟುವಿಕೆ, ನಿಷೇಧ ಮತ್ತು ಪರಿಹಾರ) ಕಾಯಿದೆ’ಯನ್ನು ಜಾರಿಗೆ ತರಲು ವಿಫಲವಾದ ಕಾರಣಕ್ಕಾಗಿ ಯಾವುದೇ ಫೆಡರೇಶನ್ ಅನ್ನು ಅಮಾನತುಗೊಳಿಸಲಾಗಿಲ್ಲ ಎಂದು ಈ ಸಂಘಟನೆಗಳು ಕ್ರೀಡಾ ಸಚಿವಾಲಯವನ್ನು ಟೀಕಿಸಿವೆ. ಈ ಕಾನೂನು ಹತ್ತು ವರ್ಷಗಳಿಂದ ಜಾರಿಯಲ್ಲಿದ್ದರೂ, ರಾಷ್ಟ್ರೀಯ ಕ್ರೀಡಾ ಸಂಸ್ಥೆಗಳಲ್ಲಿ 50% ಕ್ಕಿಂತ ಹೆಚ್ಚು ಆಂತರಿಕ ದೂರು ಸಮಿತಿಗಳನ್ನು ಹೊಂದಿಲ್ಲ ಎಂಬ ಸಂಗತಿಯತ್ತ ಅವು ಗಮನ ಸೆಳೆದಿವೆ.
‘ನಾವೀಗ ‘ಕೆಲಸದ ಸ್ಥಳದಲ್ಲಿ ಮಹಿಳೆಯರ ಲೈಂಗಿಕ ಕಿರುಕುಳ (ತಡೆಗಟ್ಟುವಿಕೆ, ನಿಷೇಧ ಮತ್ತು ಪರಿಹಾರ) ಕಾಯಿದೆ, 2013 ರ ಅನುಷ್ಠಾನದ ಹತ್ತು ವರ್ಷಗಳನ್ನು ಆಚರಿಸುತ್ತಿದ್ದೇವೆ. ದೇಶದೆಲ್ಲೆಡೆ ಸಂಭ್ರಮಾಚರಣೆ ನಡೆಯುತ್ತಿರುವಾಗ, ದೇಶಕ್ಕೆ ಕೀರ್ತಿ ತಂದ ನಮ್ಮ ಚಾಂಪಿಯನ್ಗಳಾದ ಸಾಕ್ಷಿ, ವಿನೇಶ್, ಸಂಗೀತಾ ಮತ್ತು ಇತರ ಮಹಿಳಾ ಕುಸ್ತಿಪಟುಗಳಿಗೆ ಅವರ ‘ಕೆಲಸದ ಸ್ಥಳದಲ್ಲಿ’ ಈ ಕನಿಷ್ಠ ರಕ್ಷಣೆಯ ಭರವಸೆ ಸಿಕ್ಕಿಲ್ಲ. ಲೈಂಗಿಕ ಕೊಳ್ಳೆಕೋರರಿಗೆ ಕ್ರೀಡಾ ಸಂಸ್ಥೆಗಳಲ್ಲಿ ಅಧಿಕಾರದ ಚುಕ್ಕಾಣಿ ಹಿಡಿಯಲು ಅವಕಾಶವಿಲ್ಲ ಮತ್ತು ಅಂತಹ ಕ್ರೀಡಾವ್ಯಕ್ತಿಗಳು ಮತ್ತು ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು ಎಂಬ ಯಾವುದೇ ಬಲವಾದ ಸಂದೇಶವಿಲ್ಲ’ ಎಂದು ಜಂಟಿ ಹೇಳಿಕೆ ಖೇದ ವ್ಯಕ್ತಪಡಿಸಿದೆ.
2010 ರಿಂದ 2020 ರ ದಶಕದಲ್ಲಿ ಕೇವಲ 45 ಕ್ರೀಡಾ ಮಹಿಳಾ ಕ್ರೀಡಾಪಟುಗಳು ಲೈಂಗಿಕ ಕಿರುಕುಳದ ದೂರುಗಳನ್ನು ದಾಖಲಿಸಿದ್ದಾರೆ ಎಂದು ಎತ್ತಿ ತೋರಿಸುತ್ತಾ, ಪೊಷ್ ಕಾನೂನನ್ನು ಅನುಷ್ಠಾನಗೊಳಿಸುವಲ್ಲಿ ಕ್ರೀಡಾ ಸಚಿವಾಲಯ ನಿಜವಾಗಿಯೂ ಬದ್ಧತೆ ಹೊಂದಿದೆಯೇ ಎಂದು ಈ ಜಂಟಿ ಹೇಳಿಕೆ ಪ್ರಶ್ನಿಸಿದೆ. ಕ್ರೀಡಾ ಫೆಡರೇಶನ್ಗಳಲ್ಲಿ ಒಂದು ಸಮಗ್ರ ಬದಲಾವಣೆ ತರಬೇಕಾಗಿದೆ, ಮತದಾರರ ಕೊಲಿಜಿಯಂನಲ್ಲಿ ಮಹಿಳೆಯರಿಗೆ 33% ಮೀಸಲಾತಿಯಿರಬೇಕು ಮತ್ತು ಅತ್ಯುತ್ತಮ ಕ್ರೀಡಾ ವ್ಯಕ್ತಿಗಳನ್ನು ಒಳಗೊಳ್ಳಬೇಕು ಎಂದು ಜಂಟಿ ಹೇಳಿಕೆ ಆಗ್ರಹಿಸಿದೆ.
ಇದನ್ನು ಓದಿ : ಜನವರಿ 10 ರಿಂದ ದೇಶದಾತ್ಯಂತ RSS & BJP ವಿರುದ್ಧ ಮನೆ ಮನೆ ಭೇಟಿ ಮತ್ತು ಕರಪತ್ರ ವಿತರಣೆ – ಎಸ್ಕೆಎಂ
ಕೊನೆಯಲ್ಲಿ, ಪ್ರಸಕ್ತ ಒಕ್ಕೂಟ ಸರಕಾರ ಮತ್ತು ಕ್ರೀಡಾ ಸಚಿವಾಲಯ ಕ್ರೀಡೆಯಲ್ಲಿ ಮಹಿಳೆಯರಿಗೆ ಸುರಕ್ಷಿತ ಮತ್ತು ಒಳಗೊಳ್ಳುವ ವಾತಾವರಣವನ್ನು ಪ್ರೋತ್ಸಾಹಿಸುವುದಕ್ಕೆ ಆದ್ಯತೆ ನೀಡುತ್ತದೆಯೇ ಎಂದು ಪ್ರಶ್ನಿಸುತ್ತ, ಬ್ರಿಜ್ ಭೂಷಣ್ ಶರಣ್ ಸಿಂಗ್ರಂತಹ ಕ್ರೀಡಾಕ್ಷೇತ್ರದೊಳಗೆ ದೈಹಿಕ ಮತ್ತು ಲೈಂಗಿಕ ಹಿಂಸಾಚಾರದ ಸಂಸ್ಸೃತಿಯನ್ನು ಬಹಿರಂಗವಾಗಿಯೇ ಪ್ರೋತ್ಸಾಹಿಸುವ ಎಂಪಿಗಳನ್ನು ಕ್ರೀಡಾ ಸಂಸ್ಥೆಗಳ ಚುನಾವಣೆಗೆ ಸ್ಪರ್ಧಿಸದಂತೆ ನಿರ್ಬಂಧಿಸಬೇಕು ಮಾತ್ರವಲ್ಲ, ಮುಂಬರುವ ಲೋಕಸಭಾ ಚಉನಾವಣೆಯಲ್ಲೂ ಆತ ಒಬ್ಬ ಅಭ್ಯರ್ಥಿಯಾಗಿರದಂತೆ ಬಿಜೆಪಿ ಖಚಿತಪಡಿಸಬೇಕು, ಡಬ್ಲ್ಯುಎಫ್ಐ ಸಂಸ್ಥೆಯ ಅಮಾನತನ್ನು ವಜಾ ಆಗಿ ಪರಿವರ್ತಿಸಬೇಕು, ಲೈಂಗಿಕ ಕಿರುಕುಳವನ್ನು ಎದುರಿಸಲು ಬದ್ಧತೆ ಮತ್ತು ಹೋರಾಟ ನಡೆಸುತ್ತಿರುವ ಸಾಕ್ಷಿ ಮಲ್ಲಿಕ್, ವಿನೇಶ್ ಫೋಗಟ್ ಮತ್ತು ಭಜರಂಗ್ ಪುನಿಯ ಸೇರಿದಂತೆ ಇತರ ಚಾಂಪಿಯನ್ಗಳಿಗೆ ಘನತೆಯನ್ನು ಮರುಸ್ಥಾಪಿಸಬೇಕು ಮತ್ತು ಅವರು ಕ್ರೀಡಾಕ್ಷೇತ್ರಕ್ಕೆ ಮತ್ತೆ ಬರುವಂತೆ ಮಾಡಬೇಕು ಎಂದು ಈ ಸಂಘಟನೆಗಳು ಮತ್ತು ವ್ಯಕ್ತಿಗಳು ಆಗ್ರಹಿಸಿವೆ.
ಎಐಡಿಡಬ್ಲ್ಯುಎ, ಎಐಪಿಡಬ್ಲ್ಯುಎ, ಎಐಎಂಎಸ್ಎಸ್, ಎನ್ಎಫ್ಐಡಬ್ಲ್ಯು, ಐಸಿಡಬ್ಲ್ಯುಎಂ ಮತ್ತಿತರ ಮಹಿಳಾ ಸಂಘಟನೆಗಳು, ಮಾನವಹಕ್ಕು ಸಂಘಟನೆಗಳು ಮತ್ತು ವ್ಯಕ್ತಿಗಳು ಈ ಜಂಟಿ ಹೇಳಿಕೆಗೆ ಸಹಿ ಹಾಕಿದ್ದಾರೆ.