ಇಂದು ಏಪ್ರಿಲ್ 12 ಸಫ್ದರ್ ಹಶ್ಮಿಯವರ ಜನುಮದಿನ. ಇದೇ ಕಾರಣಕ್ಕಾಗಿ ಸಫ್ದರ್ ಹಶ್ಮಿಯವರ ಜನುಮದಿನವನ್ನು ರಾಷ್ಟ್ರೀಯ ಬೀದಿ ನಾಟಕ ದಿನವನ್ನಾಗಿ ಆಚರಿಸಲಾಗುತ್ತಿದೆ ಬೀದಿನಾಟಕ ಚಳುವಳಿಗೆ ಅಪಾರ ಕೊಡುಗೆ ನೀಡಿದ ಸಫ್ದರ್ ಹಶ್ಮಿ ಬರೆದ ಒಂದು ಮಕ್ಕಳ ನಾಟಕದ ಬಗೆಗಿನ ಕೆಲವು ಸಾಲುಗಳನ್ನು ಹಂಚಿಕೊಳ್ಳುವ ಮೊದಲು….
ಕನ್ನಡದಲ್ಲಿ ಮಕ್ಕಳ ರಂಗಭೂಮಿಯ ಆಗುಹೋಗುಗಳ ಸಣ್ಣ ವಿವರವನ್ನೂ ನೀಡಬೇಕಾಗುತ್ತದೆ. ಇವತ್ತಿನ ಮಕ್ಕಳ ರಂಗಭೂಮಿಯ ಚಟುವಟಿಕೆಗಳನ್ನು.ಶಾಲಾ ಶಿಕ್ಷಣದಿಂದ ಪ್ರತ್ಯೇಕವಾಗಿ ನೋಡಲಾಗುವುದಿಲ್ಲ. ನೂರಕ್ಕೂ ಹೆಚ್ಚು ವರ್ಷಗಳ ಮಕ್ಕಳ ರಂಗಭೂಮಿಯ ಇತಿಹಾಸ ನಮ್ಮೊಂದಿಗಿದ್ದರೂ ಕನ್ನಡನಾಡಿನಲ್ಲಿ ಅದನ್ನು ಕೇವಲ ಮನೋರಂಜನೆಯ ಚಟುವಟಿಕೆಯಾಗಿ ನೋಡಲಾಗಿದೆ.ನಮ್ಮ ಶಾಲಾ ಶಿಕ್ಷಣವಾದರೋ ನಿಗದಿಪಡಿಸಿದ ಸಿಲೆಬಸ್, ನಾಲ್ಕು ಗೋಡೆಗಳ ನಡುವಣ ಕೋಣೆ, ಅಚ್ಚುಕಟ್ಟಾದ ಸಮವಸ್ತ್ರ ,ಶಿಸ್ತು ಬದ್ಧ ಪಾಠ ಮತ್ತು ಅಭ್ಯಾಸಗಳು ಪರೀಕ್ಷೆ ಹಾಗೂ ಮೌಲ್ಯಮಾಪನ, ಅಂಕಪಡೆಯುವುದರಲ್ಲಿ ಸ್ಪರ್ಧೆ ,ಪಾಸು ಫೇಲು ಗಳನ್ನು ಒಳಗೊಂಡಿದೆ.
ಮಕ್ಕಳ ರಂಗಭೂಮಿ ಎಂದರೆ ಇದಕ್ಕೆ ತದ್ವಿರುದ್ದವಾದದ್ದು. ಇದಕ್ಕೆ ನಿರ್ದಿಷ್ಟವಾದ ಪಠ್ಯಕ್ರಮವಿಲ್ಲ .ನಾಲ್ಕು ಕೋಣೆಗಳಿಂದ ಹೊರಬಂದು ಆಟ ಆಡುವುದೇ ಪ್ರಾರಂಭದ ಪಾಠ. ಸಮವಸ್ತ್ರವನ್ನು ಕಳಚಿಟ್ಟು ಬಣ್ಣ ಬಣ್ಣದ ಪಾತ್ರೋಚಿತವಾದ ಉಡುಗೆ ತೊಡುಗೆಗಳ ಮೂಲಕ ತಾನು ಮತ್ತು ತಾನಲ್ಲದ ಇನ್ನೊಂದು ಪಾತ್ರವನ್ನು ನಟಿಸುವುದರ ಮೂಲಕ ಸಂಭ್ರಮಿಸುವುದು ಇದರ ಪ್ರಮುಖ ತಾಕತ್ತು. ಶಿಸ್ತು ಆಂತರಿಕವಾಗಿ ರೂಪುಗೊಳ್ಳಬೇಕೇ ಹೊರತು ಹೇರಿಕೆಯದ್ದಾಗಬಾರದು.
ನಮ್ಮ ಶಿಕ್ಷಣ ವ್ಯವಸ್ಥೆಯಲ್ಲಿ ಯಾವುದೇ ಮಕ್ಕಳು ಏನನ್ನಾದರೂ ಪ್ರಶ್ನಿಸಿದರೆ ‘ನೀನು ಸುಮ್ಮನಿರು..ಇಲ್ಲೆಲ್ಲ ನಿನ್ನರಾಜಕೀಯ ನಡೆಯುವುದಿಲ್ಲ.. ಮಕ್ಕಳು ರಾಜಕೀಯ ಚಟುವಟಿಕೆಗಳಲ್ಲಿ ಭಾಗವಹಿಸಬಾರದು ಎಂದು ಹೇಳುತ್ತಲೇ “ ಶಾಲಾ ನಾಯಕ” “ಶಾಲಾ ಮಂತ್ರಿಮಂಡಲ”ವನ್ನು ಚುನಾವಣೆಯ ಅಣಕ ಎಂಬಂತೆ ಮಾಡಿಸುವುದೂ ಉಂಟು.
ಇಂತಹ ಪರಿಸ್ಥಿತಿಯಲ್ಲಿ ಮಕ್ಕಳಿಗಾಗಿ ರಾಜಕೀಯ ಅರಿವು ಮೂಡಿಸುವ ನಾಟಕ ಬೇಕಲ್ಲವೇ ಎಂಬ ಪ್ರಶ್ನೆಗೆ ಉತ್ತರ ಎನ್ನುವಂತೆ ‘ಸಫ್ದರ್ ಹಶ್ಮಿ’ ಯವರು ಬರೆದ ‘ರಾಜಾ ಕಾ ಖೋಜ್’ ಎಂಬ ಹಿಂದಿ ಮಕ್ಕಳ ನಾಟಕದ ಬಗ್ಗೆ ಹೇಳಲೇಬೇಕು.
ಕನ್ನಡದಲ್ಲಿ ಮಕ್ಕಳ ನಾಟಕಗಳಿಗೆ ಸಂಬಂಧಿಸಿದ ಹಾಗೆ ದೊಡ್ಡ ಪರಂಪರೆಯೇ ಇದೆ .ಹಿರಿಯ ಸಾಹಿತಿಗಳೂ ನಾಟಕಕಾರರೂ ಆಗಿರುವ ಹಲವು ವಿದ್ವಾಂಸರು ಮಕ್ಕಳಿಗಾಗಿ ನಾಟಕ ಬರೆದಿದ್ದಾರೆ .ಕನ್ನಡದಲ್ಲಿ ಅವುಗಳ ಹಲವು ಪ್ರಯೋಗಗಳು, ಪ್ರದರ್ಶನಗಳು ನಡೆದಿವೆ.ಅವುಗಳಲ್ಲಿ ಮುಖ್ಯವಾಗಿ ಕುವೆಂಪು ರಚಿಸಿರುವ ‘ಬೊಮ್ಮನಹಳ್ಳಿಯ ಕಿಂದರಿ ಜೋಗಿ’ ದ.ರಾ.ಬೇಂದ್ರೆ ಅವರ ‘ಸಾಯೋ ಆಟ’ ಶಿವರಾಮ ಕಾರಂತರ ‘ದೆವ್ವನ ಜಾಲ’ ಬಿವಿ ಕಾರಂತರ ‘ಪಂಜರ ಶಾಲೆ’ ‘ಪಂಚತಂತ್ರ’ ಆಧರಿಸಿದ ಮಕ್ಕಳ ನಾಟಕಗಳು .ಹೀಗೆ…. ಇವುಗಳೆಲ್ಲವುಗಳ ವಸ್ತುವು ಪ್ರಖರ ರಾಜಕೀಯ ಅರಿವು ಮೂಡಿಸುವುದೇ ಆಗಿದ್ದರೂ ಅದನ್ನು ಹಾಗೆ ಮಾಡದೆ ಮಕ್ಕಳ ಮನಸ್ಸಿಗೆ ಮುದಗೊಳಿಸುವ ಹಾಗೆ ರಂಜನೀಯವಾಗಿ ಪ್ರದರ್ಶಿಸಲಾಗಿದೆ. ಯಶಸ್ವಿಯೂ ಆಗಿದೆ .
ಈ ನಿಟ್ಟಿನಲ್ಲಿ ಗಮನಿಸಬಹುದಾದ ಒಂದು ಮಕ್ಕಳ ನಾಟಕವೆಂದರೆ ಸಫ್ದರ್ ಹಶ್ಮಿಬರೆದಿರುವ ಹಿಂದಿ ನಾಟಕ ‘ರಾಜಾ ಕಾ ಖೋಜ್ ‘ಮಕ್ಕಳೇ ಅಭಿನಯಿಸಿ ಸಂತಸ ಪಡಬಹುದಾದ ಪ್ರಾಣಿಗಳೇ ಮುಖ್ಯ ಪಾತ್ರಗಳಾಗಿರುವ ಮಕ್ಕಳ ನಾಟಕ ಇದು.
ಸಫ್ದರ್ ಹಶ್ಮಿ ಬರೆದಿರುವ ಈ ಮಕ್ಕಳ ನಾಟಕವನ್ನು ‘ರಾಜಕೀಯ ಅರಿವನ್ನು ತಿಳಿಸುವ’ ನಾಟಕವೆಂದೇ ರಚಿಸಲಾಗಿದೆ.ಮತ್ತು ಆ ರೀತಿಯಲ್ಲಿಯೇ ಪ್ರಯೋಗಗಳನ್ನು ಮಾಡಲಾಗಿದೆ. ಪ್ರಜಾಪ್ರಭುತ್ವದಲ್ಲಿ ಜನಸಾಮಾನ್ಯರು ಭಾಗವಹಿಸಬಹುದಾದ ಬಗೆ ಮತ್ತು ಸಂವಿಧಾನದ ಮಹತ್ವವನ್ನು ಸರಳವಾಗಿಯೇ ಅರ್ಥೈಸಿಕೊಳ್ಳುವ ಹಾಗೆ ಸಿದ್ಧಪಡಿಸಲಾಗಿದೆ.
ಮಕ್ಕಳೆಲ್ಲರನ್ನು ನಾಟಕ ಕಲಿಕೆಯೊಂದಿಗೆ ಜೊತೆ ಸೇರಿಸಿಕೊಂಡು ಅವರ ಮನಮುಟ್ಟುವ ಹಾಗೆ ಸ್ನೇಹಪೂರ್ವಕವಾಗಿ ಮಾತನಾಡುತ್ತಾ ದೇಶದ ರಾಜಕೀಯ ಸ್ಥಿತಿಗತಿಗಳನ್ನು ಅವರು ಒಪ್ಪಿಕೊಳ್ಳುವ ಹಾಗೆ ಮಾಡುವುದು ಸುಲಭ ಮತ್ತು ಸರಳವಾದ ಕೆಲಸವೇನೂ ಅಲ್ಲ .
ಮಕ್ಕಳ ನಾಟಕಗಳು, ಮಕ್ಕಳ ರಂಗಭೂಮಿ ಇತ್ಯಾದಿ ಚಟುವಟಿಕೆಗಳನ್ನು ಬಾಲಿಶ ರಂಗ ಭೂಮಿ ಎಂದೋ ಅಥವಾ ಮಕ್ಕಳಲ್ಲವೇ.. ಏನು ಮಾಡಿದರೂ ಚಂದ ಎನ್ನುವ ಇಂದಿನ ದಿನಗಳಲ್ಲಿ ಮಕ್ಕಳು ನಾಟಕದಲ್ಲಿ ನಟಿಸುತ್ತಾ ದೇಶದ ಆಗುಹೋಗುಗಳನ್ನು ಸುಲಭವಾಗಿ ಅರಿತುಕೊಳ್ಳುವ ಹಾಗೆ ಸಫ್ದರ್ ಹಶ್ಮಿಯವರು ಈ ‘ರಾಜಾ ಕಾ ಖೋಜ್’ ನಾಟಕವನ್ನು ಹೆಣೆದಿದ್ದಾರೆ .
ಸಫ್ದರ್ ಹಶ್ಮಿ ಮೂಲತ: ಒಬ್ಬಸಾಂಸ್ಕೃತಿಕ ಚಳುವಳಿಯ ಕಾರ್ಯಕರ್ತ.ಜನ ನಾಟ್ಯ ಮಂಚದ ಎಲ್ಲ ಬೀದಿ ನಾಟಕಗಳಲ್ಲಿ ಯಾವುದೇ ಮುಜುಗರವಿಲ್ಲದೆ.. ಸಾರ್ವಜನಿಕ ಸ್ಥಳಗಳಲ್ಲಿ ತನ್ನ ಪಕ್ಷ ಸಿದ್ಧಾಂತಗಳನ್ನು ಸಾಮಾಜಿಕ ಜವಾಬ್ದಾರಿ ಗಳನ್ನು ಕಲಾತ್ಮಕವಾಗಿ ನಿರೂಪಿಸುತ್ತಾ ಬಂದವರು.ಕೆಂಪು ಬಾವುಟವನ್ನು ಒಂದು ಕಲಾತ್ಮಕ ಚಿತ್ರಕೃತಿಯನ್ನಾಗಿಸುವ ಸೃಜನಶೀಲ ಜಾಣ್ಮೆ ಅವರಲ್ಲಿತ್ತು.ಹಾಗಾಗಿಯೇ ಅವರು ಭಾಗವಹಿಸಿದ ಮೊದಲ ನಾಟಕ ‘ಮಷೀನ್’ ಆಗಲಿ ಅಥವಾ ಕೊನೆಯ ನಾಟಕ ‘ಹಲ್ಲಾಬೋಲ್ ‘ನಲ್ಲೇ ಆಗಲಿ ಕೆಂಪು ಬಾವುಟದ ಶಕ್ತಿ -ತತ್ವಗಳನ್ನು ಪರಿಣಾಮಕಾರಿಯಾಗಿಯೇ ನಿರೂಪಿಸಿದವರು.
ಇದನ್ನು ಓದಿ : ಸಫ್ದರ್ ಹಾಶ್ಮಿಯ ಸಾವು – ಬದುಕಿನ ಹಲ್ಲಾಬೋಲ್ ಪುಸ್ತಕ ಕನ್ನಡಕ್ಕೆ
‘ರಾಜಾಕೀ ಖೋಜ್’ಒಂದು ಕಾಡಿನಲ್ಲಿ ನಡೆಯುವ ಕಥೆ. ಪ್ರಾಣಿಗಳೇ ಪಾತ್ರಗಳು. ಹೆಚ್ಚೆಂದರೆ ಪರಿಸರ ಸಂರಕ್ಷಣೆಯಂತಹ ಸಾಮಾಜಿಕ ಸಮಸ್ಯೆಗಳನ್ನು ತಿಳಿಸಬಹುದಾದ ನಾಟಕ. ಸಫ್ದರ್ ಹೊರತುಪಡಿಸಿ ಬೇರೆಯವರಾಗಿದ್ದರೆ ಸಮಕಾಲೀನಗೊಳಿಸುವ ಉತ್ಸಾಹದಲ್ಲಿ ಅದನ್ನು ಮಾಡುತ್ತಿದ್ದರೇನೋ…. ಆದರೆ ಈ ಮಕ್ಕಳ ನಾಟಕದಲ್ಲಿ ಕಾಡಿನ ಒಳಗಿನ ಆಹಾರ ಸಮಸ್ಯೆಯ ಬಗ್ಗೆ ಚರ್ಚಿಸ ತೊಡಗುತ್ತಾರೆ. ನಾಟಕದ ಮೊದಲ ದೃಶ್ಯದಲ್ಲಿ ಬರುವ ಸಂಭಾಷಣೆಯನ್ನು ಗಮನಿಸಿ.
ರಾಜಾಸಿಂಹ : ಏನಯ್ಯ ಆಹಾರ ದಾರಿಯನ್ನು ಎಷ್ಟು ಅಂತ ಕಾಯಬೇಕು? ಎಲ್ಲಿಯವರೆಗೆ.. ಎಲ್ಲಿಯವರೆಗೆ.. ಊಟ ಬರುವ ದಾರಿ ಕಾಯಬೇಕು.? ಹೂಂ…
ನರಿ: ಕಾಡಿನಲ್ಲಿ ಆಹಾರದ ಕೊರತೆ ಇದೆ ಮಹಾರಾಜಾ ..ಕಾಡಿನಲ್ಲಿ ಪ್ರಾಣಿಗಳೇ ಇಲ್ಲ ಮಹಾರಾಜಾ..ಕಾಡಿನಲ್ಲಿರುವ ಪ್ರಾಣಿಗಳು ವಿನಾಶದ ಅಂಚಿಗೆ ತಲುಪಿವೆ.ಇಲ್ಲಿದ್ದ ಕೆಲವು ಪ್ರಾಣಿಗಳು ಬೇರೆಲ್ಲಾದರೂ ಆಹಾರ ಸಿಗಬಹುದೇ ಎಂದು ನಗರಗಳಿಗೆ ವಲಸೆ ಹೋಗಿವೆ. ಬೇರೆ ಸ್ಥಳದಿಂದ ಪ್ರಾಣಿಗಳನ್ನು ಇಂಪೋರ್ಟ್ ಮಾಡಿಕೊಳ್ಳದೆ ಬೇರೆ ಗತಿ ಇಲ್ಲ ಮಹಾರಾಜ. ಅದಕ್ಕೆ ಹಣ ಬೇಕು….ಮಹಾರಾಜ ಹಣಬೇಕು.ಈಗಂತೂ ಕಾಡಿನಲ್ಲಿ ಪ್ರಾಣಿಗಳೇ ಇಲ್ಲ.ಹಾಗಾಗಿ ಇಲ್ಲಿ ಆಹಾರವೂ ಇಲ್ಲ .ಅಷ್ಟೆ…
ಸಿಂಹ:ನಿನ್ನ ನರಿಬುದ್ಧಿಯ ಜಾಣತನದಿಂದ ನಮ್ಮನ್ನು ದಾರಿ ತಪ್ಪಿಸುತ್ತಿದ್ದೀಯ..ಮುಂಗಡ ಕೇಳಿ ಹಣ ನುಂಗಿ ಹಾಕುವವನು ನೀನು.
ಅಧಿಕಾರಿ: ದಾರಿ ತಪ್ಪಿಸಿ ನಮ್ಮನ್ನು ಮೂರ್ಖರನ್ನಾಗಿಸುವವನು ನೀನು.
ಸಿಂಹ: ನಮ್ಮ ಒಳ್ಳೆಯತನ ಮಾತ್ರ ನಿನಗೆ ಗೊತ್ತಿದೆ .ಆದರೆ ನಮ್ಮ ಸಿಟ್ಟು ಗೊತ್ತಿಲ್ಲ. ನಿನಗೆ .. ಅಧಿಕಾರಿಗಳೇ ಬಂಧಿಸಿ ಬಿಡಿ ಅಥವಾ ಇವನನ್ನೇ ತಿನ್ನಿರಿ… ತಿಂದು ಬಿಡಿ ಇವನನ್ನು..
ಕಥಾಹಂದರ ಮುಂದುವರಿದು ಹುಲಿ, ಕರಡಿ ,ತೋಳ ,ಎತ್ತು ,ಮೊಲ ಮುಂತಾದ ಪಾತ್ರಗಳು ಪ್ರವೇಶಿಸಿ ತಮ್ಮ ಉಳಿಯುವಿಕೆಗಾಗಿ ಹತ್ತು ಹಲವು ಕಾರಣಗಳೊಂದಿಗೆ ಹೇಗೆ ಹೇಗೋ ಬದುಕುತ್ತಿರುತ್ತದೆ .ಸಣ್ಣ ಮೊಲವೊಂದು ಮಾತ್ರ ಎಲ್ಲವನ್ನೂ ಗಮನಿಸುತ್ತಾ ಅವುಗಳ ಒಡನಾಟದಲ್ಲಿಯೇ ಇರುತ್ತದೆ. ಎಲ್ಲ ಪ್ರಾಣಿಗಳಿಗೂ ಮುದುಕ ಸಿಂಹ ಇಲ್ಲವಾದರೆ…ತಾನೇ ರಾಜನಾಗಬೇಕು ಎನ್ನುವ ಒಳ ಬಯಕೆ .ಅದಕ್ಕಾಗಿ ಬಗೆಬಗೆ ಪ್ರಯತ್ನಗಳನ್ನು ಮಾಡುತ್ತಿರುತ್ತಾರೆ.ಆ ಕುರಿತ ಮಾತುಗಳನ್ನೂ ಆಡುತ್ತಾರೆ. ಆದರೆ ಸಣ್ಣ ಮೊಲ ಅವರು ಮಾಡುತ್ತಿರುವ ಎಲ್ಲ ತಪ್ಪುಗಳನ್ನು ಗುರುತಿಸುತ್ತಾ ನಿಜವಾದ ರಾಜ ಯಾರಾಗಬೇಕೆಂದು ಪ್ರೇಕ್ಷಕ ಮಕ್ಕಳನ್ನೇ ಕೇಳುತ್ತಾ… ಸಂವಿಧಾನದ ಮಹತ್ವದ ಕುರಿತಾಗಿ ಮಾತನಾಡುತ್ತಾ.. ಮಕ್ಕಳನ್ನು ಸೇರಿಸಿಕೊಂಡು ಆಶಯ ಗೀತೆಯನ್ನು ಹಾಡುವುದರೊಂದಿಗೆ ಈ ನಾಟಕ ಮುಗಿಯುತ್ತದೆ.
ಈ ನಾಟಕ ಮೂಲತಃ ಹಿಂದಿಯಲ್ಲಿಯೇ ಬರೆದಿದ್ದರೂ ಜಗತ್ತಿನ ಯಾವುದೇ ಭಾಷೆಗೆ ಅನುವಾದಗೊಂಡು ಪ್ರಯೋಗ ಗೊಳ್ಳುವಷ್ಟು ಶಕ್ತಿಶಾಲಿಯಾಗಿದೆ.
ಅಷ್ಟು ಗಟ್ಟಿಯಾದ ಜಾಗತಿಕ ವಸ್ತು ವಿನ್ಯಾಸವನ್ನು ಹೊಂದಿದೆ .
ಈ ಜಾಗತಿಕ ವಸ್ತು ರೂಪ ಯಾವುದೆಂದರೆ…
1.ಕಾಡು;_ಇದು ಜಗತ್ತಿನ ಎಲ್ಲೆಡೆ ಇರುವಂತಹದ್ದೇ ಆಗಿದೆ.ಇದರ ಅಸ್ತಿತ್ವ ,ಸಮಸ್ಯೆ ,ಸಂರಕ್ಷಣೆ ,ಜಾಗತಿಕವಾದುದು
2. ಕಥಾ ನಿರೂಪಣೆ ; ಜಾಗತಿಕವಾಗಿ ಯಾವುದೇ ಭಾಷೆಗೆ ಅನ್ವಯಗೊಳಿಸಬಹುದಾದ, ವ್ಯಾಖ್ಯಾನಗೊಳಿಸಬಹುದಾದ, ಗಟ್ಟಿಶಕ್ತಿ- ಈ ಮಕ್ಕಳ ನಾಟಕಕ್ಕಿದೆ.
3 .ಪ್ರಜಾಪ್ರಭುತ್ವ; ಜಗತ್ತಿನ ಎಲ್ಲೆಡೆ ಪ್ರಜಾಪ್ರಭುತ್ವದ ಅಳಿವು ಉಳಿವಿಗಾಗಿ ಪ್ರತಿಭಟನೆ ,ಹೋರಾಟ ,ಯುದ್ಧ ,ಅಧಿಕಾರ ಎಲ್ಲವೂ ನಡೆಯುತ್ತಿರುವಾಗ ..ಜಗತ್ತಿನ ಎಲ್ಲ ಮಕ್ಕಳಿಗೂ ಪ್ರಜಾಪ್ರಭುತ್ವದ ಅರಿವು ಮೂಡಿಸುವ ಪ್ರಯತ್ನ ಈ ಕೃತಿಯೊಳಗೇ ಹುದುಗಿದೆ.
ಇಷ್ಟು ಮಾತ್ರವಲ್ಲದೆ ಬಲಿಷ್ಠ ಪ್ರಾಣಿಗಳೆಂದೇ ಗುರುತಿಸಲಾದ ಹುಲಿ, ಸಿಂಹ’ ತೋಳ, ಕರಡಿಗಳಿಗೆ ಭ್ರಷ್ಟಾಚಾರವನ್ನು ಮಾಡುವ ಬೆಂಬಲಿಸುವ ಪಾತ್ರಗಳನ್ನು ನೀಡಿದ್ದರೆ… ಜನಸಾಮಾನ್ಯನ ಪಾತ್ರವನ್ನು ಸಣ್ಣ ಗಾತ್ರದ ಮೊಲವೊಂದು ನಿರ್ವಹಿಸುತ್ತದೆ .
ಅತಿ ಅಭಿನಯದ ಮೂಲಕ ಪ್ರೇಕ್ಷಕರನ್ನು ಆಕರ್ಷಿಸಲು ಸಾಧ್ಯವೇ ಇಲ್ಲದ ಸಣ್ಣ ಮೊಲವೊಂದು ಕಥಾ ನಿರೂಪಕನಾಗಿ, ಆಗುಹೋಗುಗಳ ವಿಮರ್ಶಕನಾಗಿ, ಭಾಗವಹಿಸುವುದು ಪ್ರಜಾಪ್ರಭುತ್ವದ ಮತ್ತು ನಾಟಕದ ಹಿರಿಮೆಯೂ ಶಕ್ತಿಗೌರವವೂ ಆಗಿದೆ.
ಸಫ್ದರ್ ಹಶ್ಮಿಯವರನ್ನು ನೆನಪಿಸುವ ಸಲುವಾಗಿ ಈ ಮಕ್ಕಳ ನಾಟಕದ ಕುರಿತು ಹೇಳಬೇಕಾಯಿತು. ಕನ್ನಡದ ಮಕ್ಕಳ ನಾಟಕಾಸಕ್ತರು ‘ರಾಜಾ ಕಾ ಖೋಜ್’ ನಾಟಕವನ್ನು ತಮ್ಮ ಊರಿನ ಮಕ್ಕಳೊಂದಿಗೆ ಸೇರಿ ಪ್ರಯೋಗಿಸಬೇಕು ಮತ್ತು ತಮ್ಮ ಸುತ್ತಮುತ್ತಲ ಊರುಗಳಲ್ಲಿಯೂ ಪ್ರದರ್ಶಿಸಬೇಕು ಎನ್ನುವುದು ನನ್ನ ಅಪೇಕ್ಷೆ.
ಇದನ್ನು ನೋಡಿ : ಶೋಷಿತರ ಧ್ವನಿಗೆ ಪ್ರತಿಧ್ವನಿಯಾಗಿ ಮೊಳಗಿದ ಸಪ್ದರ್ ಹಾಶ್ಮಿ Janashakthi Media