– ತರಗತಿ ಆರಂಭ ಯೋಚನೆ ಸರ್ಕಾರದ ಮುಂದಿಲ್ಲ
ಬೆಂಗಳೂರು: ರಾಜ್ಯದಲ್ಲಿ ಕೊರೋನಾತಂಕ ಮುಂದುವರಿದಿದ್ದು, ಸೋಂಕಿತರ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿದೆ. ಮತ್ತೊಂದು ಸುತ್ತಿನ ಲಾಕ್ಡೌನ್ ಹೇರುವ ಚರ್ಚೆ ನಡೆಯುತ್ತಿದೆ. ಹೀಗಿರುವಾಗ ಶಾಲಾ- ಕಾಲೇಜುಗಳ ತರಗತಿ ಆರಂಭ ಮಾಡಲು ಶಾಲೆ ಸರ್ಕಾರ ಗಂಭೀರ ಚಿಂತನೆ ನಡೆಸಿದೆ ಎಂಬ ವಿಚಾರ ಕೇಳಿ ಬಂದ ಬೆನ್ನಲ್ಲೇ ಪೋಷಕರಿಂದ ಈ ಸಂಬಂಧ ಅಸಮಾಧಾನ ವ್ಯಕ್ತವಾಗಿತ್ತು. ಈ ಸಂಬಂಧ ಇದರ ಬೆನ್ನಲ್ಲೇ ಶಿಕ್ಷಣ ಸಚಿವ ಸುರೇಶ್ ಕುಮಾರ್ ಈ ವಿಚಾರಕ್ಕೆ ಸಂಬಂಧಿಸಿದಂತೆ ಸ್ಪಷ್ಟನೆ ನೀಡಿದ್ದಾರೆ.
ಶಾಲಾ ಕಾಲೇಜು ಪುನಾರಂಭ ಕುರಿತು ಸ್ಪಷ್ಟನೆ ನೀಡಿರುವ ಸಚಿವ ಸುರೇಶ್ ಕುಮಾರ್ ‘ಶಾಲಾ-ಕಾಲೇಜುಗಳ ಪ್ರಾರಂಭದ ಕುರಿತು ಯಾವುದೇ ನಿರ್ಧಾರ ಕೈಗೊಂಡಿಲ್ಲ. ಸದ್ಯಕ್ಕೆ ಶಾಲೆ-ಕಾಲೇಜುಗಳನ್ನು ಪ್ರಾರಂಭ ಮಾಡುವ ಯೋಚನೆಯು ಸರ್ಕಾರದ ಮುಂದೆ ಇಲ್ಲ ಎಂದಿದ್ದಾರೆ.
ಅಲ್ಲದೇ ಈ ಬಗ್ಗೆ ಈ ಕುರಿತು ಶಾಸಕರ ಮತ್ತು ಸಂಸದರ ಹಾಗೂ ಇತರೆ ಜನಪ್ರತಿನಿಧಿಗಳ ಅಭಿಪ್ರಾಯಗಳನ್ನು ಆಹ್ವಾನಿಸುತ್ತಿದ್ದೇನೆ. ಇದರ ಜೊತೆಗೆ ಶಿಕ್ಷಕ ಸಂಘಟನೆಗಳೊಂದಿಗೆ ಹಾಗೂ ಶಿಕ್ಷಣ ತಜ್ಞರೊಂದಿಗೆ ಸಂವಾದ ನಡೆಸುತ್ತಿದ್ದೇನೆ. ನಾನೀಗ ಸಧ್ಯಕ್ಕೆ ಬೀದರ್ ಜಿಲ್ಲೆಯ ಪ್ರವಾಸದಲ್ಲಿದ್ದು ಬೆಂಗಳೂರಿಗೆ ಬಂದ ನಂತರ ಈ ಕುರಿತು ಇನ್ನಷ್ಟು ವಿವರವಾಗಿ ವಾಸ್ತವಾಂಶವನ್ನು ತಿಳಿಸುತ್ತೇನೆ ಎಂದು ಹೇಳುವ ಮೂಲಕ ಪೋಷಕರ ಆತಂಕ ನಿವಾರಿಸಿದ್ದಾರೆ.
ಪೋಷಕರ ಆತಂಕಕ್ಕೆ ಏನು ಕಾರಣ?
ಶಾಲೆಗಳಲ್ಲಿ ಭೌತಿಕ ಅಂತರ ಅಸಾಧ್ಯ
ಸಂಸತ್ ಹಾಗೂ ವಿಧಾನಮಂಡಲದ ಕಲಾಪ ನಡೆಸುವ ಮುನ್ನ ಎಲ್ಲ ಜನಪ್ರತಿನಿಧಿಗಳು, ಅಧಿಕಾರಿಗಳು ಹಾಗೂ ವರದಿಗೆ ತೆರಳುವ ಪತ್ರಕರ್ತರಿಗೂ ಕೊರೊನಾ ಪರೀಕ್ಷೆ ನಡೆಸಲಾಗಿತ್ತು. ನಂತರ ಶಾಸನಸಭೆಯಲ್ಲಿ ಆಸನಗಳನ್ನು ದೂರದೂರಕ್ಕೆ ಹಾಕಿ, ಅವುಗಳ ಮಧ್ಯೆ ಫೈಬರ್ ಶೀಟ್ ಅಳವಡಿಸಿ, ಪ್ರತಿದಿನ ಸ್ಯಾನಿಟೈಸ್ ಮಾಡಿ ಸಾಕಷ್ಟು ಮುನ್ನೆಚ್ಚರಿಕೆ ವಹಿಸಲಾಗುತ್ತಿತ್ತು. ಕೆಲವೇ ನೂರು ಸಂಖ್ಯೆಯಲ್ಲಿರುವ ಜನಪ್ರತಿನಿಧಿಗಳ ವಿಷಯದಲ್ಲಿ ಇಷ್ಟು ಮುನ್ನೆಚ್ಚರಿಕೆ ತೆಗೆದುಕೊಂಡರೂ ಈಗ ಕಲಾಪ ಮುಗಿದ ಮೇಲೆ ಕೆಲ ಶಾಸಕರಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡಿದೆ.
ಇಷ್ಟಕ್ಕೂ ವಿಧಾನಮಂಡಲ ಹಾಗೂ ಸಂಸತ್ತಿನ ಅಧಿವೇಶನಕ್ಕೂ ಮುನ್ನ ಕೆಲವೇ ನೂರು ಸಂಖ್ಯೆಗಳಲ್ಲಿರುವ ಜನಪ್ರತಿನಿಧಿಗಳ ವಿಷಯದಲ್ಲಿ ಸರ್ಕಾರ ಕೈಗೊಂಡ ಮುನ್ನೆಚ್ಚರಿಕೆಯ ಶೇ.1ರಷ್ಟು ಮುನ್ನೆಚ್ಚರಿಕೆಯನ್ನೂ ಲಕ್ಷಾಂತರ ಸಂಖ್ಯೆಯಲ್ಲಿರುವ ಶಾಲಾ ಮಕ್ಕಳ ವಿಷಯದಲ್ಲಿ ಕೈಗೊಳ್ಳಲು ಸಾಧ್ಯವಿಲ್ಲ. ಇನ್ನು, ಪುಟ್ಟಪುಟ್ಟ ಮಕ್ಕಳು ಶಾಲೆಯಲ್ಲಿ ಭೌತಿಕ ಅಂತರ ಕಾಯ್ದುಕೊಳ್ಳುತ್ತಾರೆಯೇ? ಅವರು ಒಬ್ಬರ ಸಮೀಪ ಒಬ್ಬರು ಹೋಗದಂತೆ ಶಿಕ್ಷಕರು ನೋಡಿಕೊಳ್ಳುವುದು ಸಾಧ್ಯವಿದೆಯೇ? ಖಂಡಿತ ಇಲ್ಲ ಎನ್ನುತ್ತಾರೆ ಪೋಷಕರು.
ಮಕ್ಕಳು ಕೊರೋನಾ ಕ್ಯಾರಿಯರ್ ಆಗಬಹುದು
60 ವರ್ಷ ಮೇಲ್ಪಟ್ಟವರು ಹೇಗೆ ಕೊರೋನಾದ ರಿಸ್ಕ್ ಅಧಿಕವಿರುವ ವರ್ಗದಲ್ಲಿ ಬರುತ್ತಾರೋ ಹಾಗೆಯೇ 10 ವರ್ಷಕ್ಕಿಂತ ಕೆಳಗಿನ ಮಕ್ಕಳೂ ಅಧಿಕ ರಿಸ್ಕ್ ವರ್ಗದಲ್ಲೇ ಬರುತ್ತಾರೆ. ಆದ್ದರಿಂದ ವಯಸ್ಸಾದ ಜನಪ್ರತಿನಿಧಿಗಳಿಗೆ ಕೊರೊನಾ ಬರುತ್ತದೆ ಎಂದು ಕಾಳಜಿ ತೋರಿ ಅಧಿವೇಶನಗಳನ್ನು ಮೊಟಕುಗೊಳಿಸಿದ ಸರ್ಕಾರ ಪುಟ್ಟಮಕ್ಕಳಿಗೆ ಕೊರೊನಾ ತಗಲುವ ಅಪಾಯವನ್ನು ಅರ್ಥಮಾಡಿಕೊಳ್ಳದಿದ್ದರೆ ಅದು ದ್ವಂದ್ವ ನೀತಿಯಾಗುವುದಿಲ್ಲವೇ? ಎಲ್ಲಕ್ಕಿಂತ ಹೆಚ್ಚಾಗಿ ಮಕ್ಕಳು ಶಾಲೆಗೆ ಹೋಗಿ ಕೊರೊನಾ ಅಂಟಿಸಿಕೊಂಡರೆ ಮನೆಮಂದಿಗೆಲ್ಲ ಕೊರೊನಾ ಹರಡುವ ಅಪಾಯವಿರುತ್ತದೆ. ಹೆಚ್ಚಿನ ರೋಗನಿರೋಧಕ ಶಕ್ತಿಯಿರುವ ಮಕ್ಕಳು ಕೊರೊನಾವನ್ನು ಗೆದ್ದರೂ ಮನೆಗಳಲ್ಲಿರುವ ವಯಸ್ಸಾದವರು ಅವರಿಂದಾಗಿ ಅಪಾಯಕ್ಕೆ ಸಿಲುಕಬಹುದು ಎಂದು ಪೋಷಕರು ಆತಂಕ ವ್ಯಕ್ತಪಡಿಸಿದ್ದಾರೆ.