ಸದ್ದು ಮಾಡುತ್ತಿದೆ ‘ನೀಟ್‌ ರದ್ದುʼ ಅಭಿಯಾನ: ಹಿಂದಿನಂತೆ ಸಿಇಟಿ ವ್ಯವಸ್ಥೆಗೆ ಆಗ್ರಹ

ಬೆಂಗಳೂರು: ‘ಕನ್ನಡದ ಹುಡುಗ ನವೀನ್ ಸಾವಿನ ಹೊಣೆ ಹೊರುವವರು ಯಾರು? ಒಂದೆಡೆ ವೈದ್ಯಕೀಯ ಸೀಟಿಗೆ ಕೋಟ್ಯಂತರ ರೂಪಾಯಿ ಬಾಚುವ ಕ್ಯಾಪಿಟೇಷನ್ ಲಾಬಿ, ಇನ್ನೊಂದೆಡೆ ಕನ್ನಡಿಗರ ಹಕ್ಕುಗಳನ್ನು ಕಸಿಯುತ್ತಿರುವ ನೀಟ್ ಎಂಬ ಷಡ್ಯಂತ್ರ. ಬಲಿಯಾಗುತ್ತಿರುವುದು ಕನ್ನಡಿಗರು’ ಎಂದು ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ಟಿ.ಎ. ನಾರಾಯಣಗೌಡ ಟ್ವೀಟ್‌ ಮಾಡಿದ್ದಾರೆ.

ಉಕ್ರೇನ್‌ನಲ್ಲಿ ರಷ್ಯಾ ನಡೆಸಿದ ಶೆಲ್‌ ದಾಳಿಯಲ್ಲಿ ಹಾವೇರಿಯ ನವೀನ್‌ ಸಾವಿನ ನಂತರ, ವೈದ್ಯಕೀಯ ಕಾಲೇಜುಗಳ ಪ್ರವೇಶ ಪ್ರಕ್ರಿಯೆಯ ಬಗ್ಗೆ ಅಸಮಾಧಾನ ವ್ಯಕ್ತ ವಾಗಿದೆ. ‘ನವೀನ್‌ ಸಾವಿಗೆ ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆ(ನೀಟ್‌) ಕಾರಣವಾಗಿದೆ. ನೀಟ್‌ ರದ್ದು ಪಡಿಸಬೇಕು’ ಎಂದು ಒತ್ತಾಯಿಸಿ ಹಲವು ಮಂದಿ ಟ್ವಿಟರ್‌ನಲ್ಲಿ ಬೃಹತ್ ಅಭಿಯಾನ ನಡೆಸಿದ್ದಾರೆ.

ಕರ್ನಾಟಕ ರಕ್ಷಣಾ ವೇದಿಕೆ ಆರಂಭಿಸಿದ ಅಭಿಯಾನಕ್ಕೆ 20 ಸಾವಿರಕ್ಕೂ ಹೆಚ್ಚು ಮಂದಿ ಪ್ರತಿಕ್ರಿಯಿಸಿದರು. ಕೆಲವರು ವ್ಯಂಗ್ಯಚಿತ್ರಗಳನ್ನು ಲಗತ್ತಿಸುವ ಮೂಲಕ ಅಭಿಯಾನವನ್ನು ಬೆಂಬಲಿಸಿದರು.

‘ಉತ್ತರ ಪ್ರದೇಶ 21 ಕೋಟಿ ಜನಸಂಖ್ಯೆ ಹೊಂದಿದೆ. ಆದರೆ, 6.5 ಕೋಟಿ ಜನಸಂಖ್ಯೆಯ ಕರ್ನಾಟಕದಲ್ಲಿ ಇರುವಷ್ಟು ವೈದ್ಯಕೀಯ ಕಾಲೇಜುಗಳು ಆ ರಾಜ್ಯದಲ್ಲಿ ಇಲ್ಲ! ನೀಟ್ ಜಾರಿಗೆ ಬಂದಿದ್ದು ಈ ಕಾರಣಕ್ಕೆ. ಒಟ್ಟು 69 ವೈದ್ಯಕೀಯ ಕಾಲೇಜು ಗಳೊಂದಿಗೆ ಕರ್ನಾಟಕ ಮೊದಲ ಸ್ಥಾನದಲ್ಲಿದೆ. ಆದರೆ, ಕನ್ನಡದ ಮಕ್ಕಳಿಗೇ ವೈದ್ಯಕೀಯ ಸೀಟು ಇಲ್ಲ. ನೀಟ್ ಹೆಸರಲ್ಲಿ ನಮ್ಮ ಹಕ್ಕುಗಳನ್ನು ಕಿತ್ತು ಕೊಳ್ಳಲಾಗಿದೆ. ಕರ್ನಾಟಕದ ಕಾಲೇಜು ಗಳಲ್ಲಿ ಉತ್ತರ ಭಾರತೀಯರನ್ನು ತುಂಬುವ ಯೋಜನೆಯೇ ನೀಟ್. ಮತ್ತೇನೂ ಅಲ್ಲ’ ಎಂದು ವಿವರಿಸಿದ್ದಾರೆ.

ವಿದ್ಯಾರ್ಥಿಗಳ ವೈದ್ಯ ಶಿಕ್ಷಣದ ಕನಸು ನುಚ್ಚುನೂರು ಕುಮಾರಸ್ವಾಮಿ ಆಕ್ರೋಶ

ನವೀನ್ ಸಾವು ಕುರಿತು ಸರಣಿ ಟ್ವೀಟ್ ಮಾಡಿರುವ ಮಾಜಿ ಮುಖ್ಯಮಂತ್ರಿ ಹೆಚ್‌.ಡಿ. ಕುಮಾರಸ್ವಾಮಿ ನೀಟ್ ವ್ಯವಸ್ಥೆ ವಿರೋಧಿಸಿದ್ದಾರೆ. ಅಲ್ಲದೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿಕೆಯನ್ನು ಖಂಡಿಸಿದ್ದಾರೆ. ವೈದ್ಯ ಶಿಕ್ಷಣದ ಕನಸು ಕಾಣುವ ಬಡ, ಮಧ್ಯಮ ವರ್ಗದ ಬದುಕನ್ನು ಛಿದ್ರಗೊಳಿಸುತ್ತಿರುವ ನೀಟ್, ವಿದ್ಯಾರ್ಥಿಗಳು ಮತ್ತು ಪೋಷಕರ ಪಾಲಿಗೆ ಮರಣಶಾಸನವಾಗಿದೆ. ಉನ್ನತ ಶಿಕ್ಷಣವನ್ನು ಉಳ್ಳವರಿಗೆ ಮೀಸಲಿಟ್ಟು ಉಳಿದವರಿಗೆ ವ್ಯವಸ್ಥಿತವಾಗಿ ನಿರಾಕರಿಸಲಾಗುತ್ತಿದೆ ಎಂದಿದ್ದಾರೆ.

10ನೇ ತರಗತಿಯಲ್ಲಿ 96%, 2ನೇ ಪಿಯುಸಿಯಲ್ಲಿ 97% ಅಂಕ ಗಳಿಸಿದ್ದರೂ ನವೀನ್‍ಗೆ ಜಗತ್ತಿನ ಶಿಕ್ಷಣ ಕಾಶಿ ಭಾರತದಲ್ಲಿ ವೈದ್ಯಸೀಟು ಸಿಗಲ್ಲ. ಗ್ರಾಮೀಣ ವಿದ್ಯಾರ್ಥಿಯೊಬ್ಬ ಇಷ್ಟು ಉತ್ತಮ ಅಂಕ ಗಳಿಸುವುದು ಸುಲಭವಲ್ಲ. ಆದರೂ, ಆತನಿಗೆ ನಮ್ಮ ದೇಶದಲ್ಲಿ ವೈದ್ಯಶಿಕ್ಷಣವನ್ನು ನಿರಾಕರಿಸಲಾಗಿದೆ. ಭಾರತದಲ್ಲಿ ನಿರಾಕರಿಸಲ್ಪಟ್ಟ ಶಿಕ್ಷಣವನ್ನು ಹುಡುಕಿಕೊಂಡು ಉಕ್ರೇನ್ ಗೆ ಹೋಗಿ ಅಲ್ಲಿ ಕಲಿತು ಇನ್ನೊಬ್ಬರ ಜೀವ ಉಳಿಸಲು ನೂರುಕಾಲ ಬಾಳಿ ಬದುಕಬೇಕಿದ್ದ ನವೀನ್ ಇಂದು ಜೀವ ಕಳೆದುಕೊಂಡಿದ್ದಾನೆ.

ಜಾಗ ಮೂಲಸೌಕರ್ಯ ಕನ್ನಡಿಗರದ್ದು, ಫಲಾನುಭವಿಗಳು ಕನ್ನಡಿಗರಲ್ಲ

ರಾಜ್ಯಸಭೆಯ ಕಾಂಗ್ರೆಸ್‌ ಸದಸ್ಯ ಜಿ.ಸಿ. ಚಂದ್ರಶೇಖರ್‌, ‘ಕರ್ನಾಟಕದ ಜನ ಸಂಖ್ಯೆಗಿಂತಲೂ ಮೂರು ಪಟ್ಟು ಹೆಚ್ಚು ಇರುವ ಉತ್ತರ ಪ್ರದೇಶದಲ್ಲಿ ಕೇವಲ 55 ವೈದ್ಯಕೀಯ ಕಾಲೇಜುಗಳಿವೆ. ನಾವು ಕಷ್ಟಪಟ್ಟು ಕಟ್ಟಿಕೊಂಡ ಸೌಕರ್ಯಗಳನ್ನು ಬೇರೆಯವರಿಗೆ ಬಿಟ್ಟುಕೊಡುವಂತಾಯಿತು! ಕನ್ನಡಿಗರದ್ದು ಜಾಗ ಮತ್ತು ಮೂಲಸೌಕರ್ಯಗಳು. ಆದರೆ, ಫಲಾನುಭವಿಗಳು ಮಾತ್ರ ಕನ್ನಡಿಗರಲ್ಲ’ ಎಂದು ಟ್ವೀಟ್‌ ಮಾಡಿದ್ದಾರೆ.

ಪ್ರತಿಮೆ ನಿರ್ಮಾಣ ಕೈಬಿಡಿ

ಚೇತನ್‌ ಕೃಷ್ಣ ಎನ್ನುವವರು ‘ನೀಟ್‌ ಮಾರಕ. ಹೆಚ್ಚು ವೈದ್ಯಕೀಯ ಕಾಲೇಜುಗಳನ್ನು ಸ್ಥಾಪಿಸಿ. ಪ್ರತಿಮೆಗಳನ್ನು ನಿರ್ಮಿಸಿ ಹಣ ವ್ಯರ್ಥ ಮಾಡುವ ಬದಲು ವೈದ್ಯಕೀಯ ಕಾಲೇಜುಗಳನ್ನು ಸ್ಥಾಪಿಸಿ. ಶೇ 95ಕ್ಕೂ ಹೆಚ್ಚು ಅಂಕ ಗಳಿಸಿದ ಪರಿಶಿಷ್ಟ ವಿದ್ಯಾರ್ಥಿಗಳಿಗೂ ವೈದ್ಯಕೀಯ ಸೀಟುಗಳು ದೊರೆಯುತ್ತಿಲ್ಲ. ಆದ್ದರಿಂದ, ಮೀಸಲಾತಿಯ ಬಗ್ಗೆ ದೂರುವುದನ್ನು ನಿಲ್ಲಿಸಿ, ನೀಟ್‌ ವ್ಯವಸ್ಥೆ ವಿರುದ್ಧ ಮಾತನಾಡಿ’ ಎಂದು ಟ್ವೀಟ್‌ ಮಾಡಿದ್ದಾರೆ.

ಡಾ. ಸಿ.ಎಸ್‌. ದ್ವಾರಕಾನಾಥ್‌ ಅವರು, ನೀಟ್‌ ಎಂದರೆ ಮತ್ತೇನೂ ಅಲ್ಲ, ಸ್ಪಷ್ಟವಾಗಿ ನಮ್ಮ ಕನ್ನಡದ ಮಕ್ಕಳಿಗೆ ಸೀಟ್‌ ಸಿಗದಂತೆ ನೋಡಿಕೊಳ್ಳುವ ದುರುದ್ದೇಶದ ವ್ಯವಸ್ಥೆ ಎಂದಿದ್ದಾರೆ.

ರೂಪೇಶ್‌ ರಾಜಣ್ಣ ಅವರು, ‘ತಮಿಳುನಾಡು ನೀಟ್ ತೆಗೆದು ಹಾಕಲು ಹೋರಾಟ ಮಾಡುತ್ತಿದ್ದರೆ, ನಾವಿಲ್ಲಿ ಕಿತ್ತಾಡುತ್ತಿದ್ದೇವೆ. ದ್ವಿತೀಯ ಪಿಯುಸಿಯಲ್ಲಿ ಶೇ. 97ರಷ್ಟು ಅಂಕಗಳನ್ನು ತೆಗೆದರೂ ನಮ್ಮಲ್ಲಿ ನವೀನ್‌ಗೆ ವೈದ್ಯಕೀಯ ಸೀಟ್ ಸಿಗಲಿಲ್ಲ. ಅದಕ್ಕೆ ಕಾರಣ ನೀಟ್‌. ಈ ಪರೀಕ್ಷೆಯನ್ನು ಮೊದಲು ರದ್ದುಮಾಡಿ. ಸಿಇಟಿ ಮರುಸ್ಥಾಪಿಸಿ’ ಎಂದು ಟ್ವೀಟ್‌ ಮಾಡಿದ್ದಾರೆ.

ಶ್ರುತಿ ಮರುಳಪ್ಪ ಅವರು, ‘ವೈದ್ಯಕೀಯ ಕಾಲೇಜುಗಳಿಗೆ ಭೂಮಿ ಮತ್ತು ಮೂಲಸೌಕರ್ಯ ಕಲ್ಪಿಸಲು ರಾಜ್ಯ ಸರ್ಕಾರ ನೆರವು ನೀಡುತ್ತದೆ. ಆದರೆ, ನಮ್ಮ ಮಕ್ಕಳ ಅವಕಾಶಗಳನ್ನು ಕೇಂದ್ರ ಸರ್ಕಾರ ಕಬಳಿಸುತ್ತಿದೆ’ ಎಂದು ಟ್ವೀಟ್‌ ಮಾಡಿದ್ದಾರೆ.

ಪತ್ರಕರ್ತ ದಿನೇಶ್‌ ಕುಮಾರ್‌, ‘ಇದು ಸರಿಯಾದ ಸಮಯ. ಎಲ್ಲ ಖಾಸಗಿ ವೈದ್ಯಕೀಯ, ಎಂಜಿನಿಯರಿಂಗ್ ಕಾಲೇಜುಗಳ ರಾಷ್ಟ್ರೀಕರಣವಾಗಬೇಕು. ಸರ್ಕಾರ ಉನ್ನತ ಹಂತದ ಶಿಕ್ಷಣಕ್ಕೆ ಕಡಿಮೆ ಶುಲ್ಕ ನಿಗದಿಪಡಿಸಬೇಕು’ ಎಂದು ಒತ್ತಾಯಿಸಿದ್ದಾರೆ.

ಕನ್ನಡಿಗ ಜಗನ್‌ ಎಂಬುವರು, ನೀಟ್ ಎಂಬುದು ಕೋಚಿಂಗ್ ದಂಧೆ ನೀಟ್ ನಿಂದ ಹಿಂದುಳಿದ ದಲಿತ ಹಳ್ಳಿ ಮಕ್ಕಳಿಗೆ ದೊಡ್ಡ ಅನ್ಯಾಯ ಒಂದು ಸಲ ಕೋಚಿಂಗ್ ಗೆ 1.5- 2 ಲಕ್ಷ ಹಣವನ್ನು ಬಡ ಮತ್ತು ಹಳ್ಳಿ ಮಕ್ಕಳು ಎಲ್ಲಿ ತರಬೇಕು? ಎಂದು ಪ್ರಶ್ನಿಸಿದ್ದಾರೆ.

 

 

ವಿಲಾಸ್‌ ಹೆಗಡೆ ಎಂಬುವವರು, ಇತ್ತೀಚಿನ ವರ್ಷಗಳಲ್ಲಿ ಮೆಡಿಕಲ್ ಶಿಕ್ಷಣಕ್ಕಾಗಿ ಉಕ್ರೇನ್ ದೇಶಕ್ಕೆ ಮಾತ್ರವಲ್ಲದೆ ಚೈನಾ, ರಶಿಯಾಗೂ ಕೂಡ ಹೋಗುತ್ತಿರುವ ಭಾರತೀಯ ವಿದ್ಯಾರ್ಥಿಗಳ ಸಂಖ್ಯೆ ದೊಡ್ಡದಿದೆ. ಭಾರತದಲ್ಲಿ ವೈದ್ಯಕೀಯ ಶಿಕ್ಷಣದ ವ್ಯಾಪಾರೀಕರಣ, ದುಬಾರಿ ವೆಚ್ಚ ಮತ್ತು ನೀಟ್ ಪರೀಕ್ಷೆಗಳಂತಹ ಕೇಂದ್ರೀಕೃತ ವ್ಯವಸ್ಥೆಗಳೇ ಇದಕ್ಕೆ ಕಾರಣ ಎಂದು ಟ್ವೀಟ್‌ ಮಾಡಿದ್ದಾರೆ.

ಬಸವರಾಜು ಮಹದೇವಪುರ ಎಂಬುವವರು, ಮೋದಿಯವರ ಹೇಳಿಕೆಗೆ ನನ್ನ ಬೆಂಬಲವಿದೆ ಆದ್ರೆ ವೈದ್ಯಕೀಯ ಶಿಕ್ಷಣ ಖರ್ಚು 15 ಲಕ್ಷಕ್ಕಿಂತ ಕಡಿಮೆ ಮಾಡಿ ಮತ್ತೆ ರಾಜ್ಯದ ವಿದ್ಯಾರ್ಥಿಗಳಿಗೆ ಮಾರಕವಾಗಿರುವ ನೀಟ್ ಪರೀಕ್ಷೆಯನ್ನು ನಿಷೇದಿಸಿ ಆಗ ನಿಮ್ಮ ಮಾತಿಗೆ ಶಕ್ತಿ ಬರುತ್ತೆ ಸರ್ ಎಂದು ಟ್ವೀಟ್‌ ಮಾಡಿದ್ದಾರೆ.

 

Donate Janashakthi Media

Leave a Reply

Your email address will not be published. Required fields are marked *