ಸದನದ ಕಲಾಪ ನುಂಗಿದ ಅಮಿತ್‌ ಶಾ, ಮತ್ತೆ ಉ.ಕ ನಿರ್ಲಕ್ಷ್ಯ , ಅದೇ ಭಾಷಣ! ಅದೇ ಭರವಸೆ!! ಮತ್ತದೆ ನಿರಾಸೆ!!!

ಗುರುರಾಜ ದೇಸಾಯಿ

 

ಬೆಳಗಾವಿ ಅಧಿವೇಶನ ಉತ್ತರ ಕರ್ನಾಟಕಕ್ಕೆ ಮೀಸಲು ಅಂತಾರೆ, ಕಳೆದ 09 ದಿನಗಳಲ್ಲಿ ಉತ್ತರ ಕರ್ನಾಟಕ ಭಾಗದ ಸಮಸ್ಯೆಗಳ ಬಗ್ಗೆ ಚರ್ಚೆಗೆ ಸಿಕ್ಕಿದ್ದು ಕೊನೆಯ ದಿನದ ಕೊನೆಯ ಕ್ಷಣದಲ್ಲಿ. ಇದನ್ನು ಗಮನಿಸಿದರೆ,  ಉತ್ತರ ಕರ್ನಾಟಕದ ಗತಿ-ಸ್ಥಿತಿ, ಕಥೆ ಇಷ್ಟೇನಾ? ಈ ಪ್ರಶ್ನೆ ಯಾರನ್ನು ಕೇಳಬೇಕು, ಯಾರ ಮುಂದೆ ಅಳಲು ತೋಡಿಕೊಳ್ಳಬೇಕು? ಎಂಬ ಪ್ರಶ್ನೆ ಆ ಭಾಗದ ಜನರದ್ದಾಗಿದೆ.

ಅಮಿತ್ ಶಾ ಅವರ ಚುನಾವಣಾ ರಾಜ್ಯ ಪ್ರವಾಸಕ್ಕಾಗಿ ಬೆಳಗಾವಿಯಲ್ಲಿ ನಡೆಯುತ್ತಿರುವ ವಿಧಾನಮಂಡಲ ಅಧಿವೇಶನವನ್ನು ಮೊಟಕುಗೊಳಿಸಿ ಸರಕಾರ ರಾಜ್ಯದ ಜನರಿಗೆ ಪ್ರಮಾದ ಎಸಗಿದೆ. ಕಾಂಗ್ರೆಸ್‌ ಮೌನ ವಹಿಸಿ, ಕೊನೆ ಗಳಿಗೆಯಲ್ಲಿ ಚರ್ಚೆಗೆ ಪಟ್ಟು ಹಿಡಿದಿದ್ದು ಹಲವು ಅನುಮಾನಗಳಿಗೆ ಕಾರಣವಾಗಿದೆ.

ಈ ಹಿಂದೆ ನಿಗದಿ ಮಾಡಿದ ವೇಳಾಪಟ್ಟಿ ಪ್ರಕಾರ ಡಿ.30ರವರೆಗೆ ಅಂದರೆ ಬೆಳಗಾವಿಯ ಸುವರ್ಣ ಸೌಧದಲ್ಲಿ 10 ದಿನಗಳ ಕಾಲ ವಿಧಾನಮಂಡಲ ಅಧಿವೇಶನ ನಡೆಯಬೇಕಿತ್ತು. ಆದರೆ, ಡಿ. 29,  ಗುರುವಾರ ಸಂಜೆಗೆ  ಅಧಿವೇಶನ ಮುಕ್ತಾಯವಾಯಿತು.  ಜ್ವಲಂತ ಸಮಸ್ಯೆಗಳ ಚರ್ಚೆ ನಡೆಯುವಾಗ ಅಧಿವೇಶನ ಕಡೆಗಣಿಸಿ ಪಕ್ಷ ಕಾರ್ಯಕ್ರಮಕ್ಕೆ ಒತ್ತು ನೀಡಿ ರಾಜ್ಯ ಹಿತಾಸಕ್ತಿ ಬಲಿಕೊಟ್ಟು ಕೆಟ್ಟ ಪರಂಪರೆಯನ್ನು ಬಿಜೆಪಿ  ಹುಟ್ಟು ಹಾಕಿದೆ.

ಅಮಿತ್‌ ಶಾ ಆಗಮನಕ್ಕಾಗಿ ಕಲಾಪ ಬಲಿ : ಬಿಜೆಪಿ ಪಕ್ಷ ಮಂಡ್ಯದಲ್ಲಿ ಡಿಸೆಂಬರ್ 30 ರಂದು 1 ಲಕ್ಷ ಜನರ ಬೃಹತ್ ಸಮಾವೇಶವನ್ನು ಆಯೋಜಿಸಿದ್ದು, ಕೇಂದ್ರ ಗೃಹ ಮತ್ತು ಸಹಕಾರ ಸಚಿವ ಅಮಿತ್ ಶಾ ಅವರು ಸಮಾವೇಶವನ್ನುದ್ದೇಶಿಸಿ ಮಾತನಾಡಲಿದ್ದಾರೆ.  ಅದೇ ದಿನ ಬೆಂಗಳೂರಿನ ವಿವಿಧೆಡೆಗಳಲ್ಲಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಹಾಗಾಗಿ ಕಲಾಪವನ್ನು ಒಂದು ದಿನ ಮುಂದೂಡಲಾಗಿದೆ.

ಪಕ್ಷದ ನಾಯಕರು ಬರುತ್ತಾರೆ ಎಂಬ ಕಾರಣಕ್ಕೆ ಕಲಾಪವನ್ನು ಮೊಟಕುಗೊಳಿಸಿದ್ದು ಸರಿಯಾದ ಕ್ರಮವಲ್ಲ ಎಂದು ಸಾರ್ವಜನಿಕರು ಚರ್ಚೆ ಮಾಡುತ್ತಿದ್ದಾರೆ. ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ಹಾಗೂ ಕೇಂದ್ರ ಸಚಿವರು, ಸಂಸತ್ತ ಸದಸ್ಯರು ಭಾಗವಹಿಸಿ ಕಲಾಪವನ್ನು ನಡೆಸಲು ಅನುವು ಮಾಡಿಕೊಡಬಹುದಿತ್ತು. ಆದರೆ ಆ ರೀತಿ ಮಾಡದೆ ಕಲಾಪವನ್ನೆ  ಮೊಟಕುಗೊಳಿಸಿದ್ದಾರೆ. ಮುಖ್ಯಮಂತ್ರಿಗಳಿಗೆ ರಾಜ್ಯದ ಜನರ ಸಮಸ್ಯೆಗಿಂತ ತಮ್ಮ ಖುರ್ಚಿ ಉಳಿಸಿಕೊಳ್ಳುವುದು ಮುಖ್ಯವಾದಂತೆ ಕಾಣುತ್ತಿದೆ.

ಶಿಸ್ತಿನ ಪಕ್ಷ ಎಂದು ಎಲ್ಲಕಡೆಯೂ ಪ್ರಚಾರಗಟ್ಟಿಸಿಕೊಳ್ಳುವ ಬಿಜೆಪಿಯ ಶಿಸ್ತು ಎಂತದ್ದು ಎಂಬುದೀಗ ಬಯಲಾಗಿದೆ. ಪ್ರತಿಯೊಂದಕ್ಕೂ ಮೂಗು ತೂರಿಸುವ ಬಿಜೆಪಿಯ ಹೈಕಮಾಂಡ್‌ “ಅಧಿವೇಶನ ಮೊದಲು ಮುಗಿಯಲಿ ಆಮೇಲೆ ಅಮಿತ್‌ ಶಾ ಕಾರ್ಯಕ್ರಮ”, ಎಂದು ಹೇಳಬಹುದಿತ್ತು. ಆದರೆ ರಾಜ್ಯ ಸರಕಾರದ ಮೇಲೆ ಕೇಳಿ ಬರುತ್ತಿರುವ ಆಪಾದನೆಗಳು, ಜನಾಕ್ರೋಶವನ್ನು ತಣ್ಣಗೆ ಮಾಡಲು ಅಮಿತ್‌ ಶಾ ಅವರೇ ಹೆಣದಿರುವ ತಂತ್ರ ಇದು ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ : ವಿಧಾನಮಂಡಲ ಅಧಿವೇಶನ; ಉತ್ತರ ಕರ್ನಾಟಕ ಭಾಗದ ವಿಷಯಗಳ ಚರ್ಚೆ ಎಂದು?

ಕಾಂಗ್ರೆಸ್‌ಗೂ ಅಧಿವೇಶನ ಬೇಕಿರಲಿಲ್ಲ : ಪ್ರಮುಖ ವಿಪಕ್ಷ ಕಾಂಗ್ರೆಸ್‌ ಕೂಡ ಅಧಿವೇಶನ ಮೊಟಕಿಗೆ ತಲೆ ಅಲ್ಲಾಡಿಸಿದೆ. ಡಿ 30 ಕ್ಕೆ ನೀರಾವರಿ ಹೋರಾಟ ನಿಗದಿಯಾದ ಕಾರಣಕ್ಕೆ ನಾಯಕರೆಲ್ಲ ಅಲ್ಲಿ ಭಾಗವಹಿಸಿ ಶಕ್ತಿ ಪ್ರದರ್ಶನ ಮಾಡಬೇಕಿರುವ ಕಾರಣ ತುಪ್ಪ ಜಾರಿ ರೊಟ್ಟಿಗೆ ಬಿದ್ದಂತಾಗಿದೆ.

ವಿಜಯಪುರದಲ್ಲಿ ಕೃಷ್ಣಾ ನೀರಾವರಿ ಯೋಜನೆಗಳಲ್ಲಿ ಬಿಜೆಪಿ ನೀತಿ ಖಂಡಿಸಿ ಬೃಹತ್ ಸಮಾವೇಶವನ್ನು ಕಾಂಗ್ರೆಸ್‌ ನಡೆಸುತ್ತಿದೆ. ಈ ಸಮಾವೇಶಕ್ಕೆ ಪಕ್ಷದ ರಾಜ್ಯಾಧ್ಯಕ್ಷ ಭಾಗವಹಿಸಿ ಕಲಾಪದಲ್ಲಿ ಇರುತ್ತೇವೆ ಚರ್ಚೆ ನಡೆಸಿ ಎಂದು ಒತ್ತಡ ಹೇರಬೇಕಿತ್ತು. ಆದರೆ ಕಾಂಗ್ರೆಸ್‌ ಸಮಸ್ಯೆಗಳ ಚರ್ಚೆಯ ಬದಲಾಗಿ ಚುನಾವಣೆಯಲ್ಲಿ ಗೆಲ್ಲುವುದು ಪ್ರಮುಖವಾದಂತೆ ಕಾಣುತ್ತಿದೆ.

ಉ.ಕ ನಿರ್ಲಕ್ಷ್ಯ , ಅದೇ ಭಾಷಣ, ಅದೇ ಭರವಸೆ. ಮತ್ತದೆ ನಿರಾಸೆ :  ಉತ್ತರ ಕರ್ನಾಟಕ ರೈತರ ಸಮಸ್ಯೆಗಳ ಕುರಿತು ಚರ್ಚೆ ನಡೆಸುವುದುದಾಗಿ ಆರಂಭದಲ್ಲಿ ಹೇಳಲಾಗಿತ್ತು. ಆದರೆ ಮೊದಲೆರಡು ದಿನ ಚರ್ಚೆಯ ಕಾವು ಜೋರಾಗಿತ್ತು ನಂತರದಲ್ಲಿ ಮೂರು ಪಕ್ಷಗಳ ಶಾಸಕರ ಗೈರಿನಲ್ಲಿ ಪ್ರಮುಖ ವಿಚಾರಗಳು ಚರ್ಚೆಯಾಗಲೇ ಇಲ್ಲ. ಚಳಿಗಾಲಕ್ಕೊಮ್ಮೆ ಬೆಳಗಾವಿಯತ್ತ ಮುಖ ಮಾಡುವ ಅಧಿಕಾರ ವ್ಯವಸ್ಥೆ, ಮತ್ತೆ ಬೆಂಗಳೂರಿಗೆ ಶಿಫ್ಟ್​ ಆಗ್ತಿದೆ. ಅಲ್ಲಿಂದ ಇಲ್ಲಿಗೆ ಇಲ್ಲಿಂದ ಅಲ್ಲಿಗೆ ಕಡತ ಸಾಗಿಸಿದ್ದು ಬಿಟ್ಟರೆ ಇನ್ನ್ಯಾವ ಸಮಸ್ಯೆಯ ಗಂಟನ್ನು ಬಿಚ್ಚಿ ಪರಿಹಾರದ ಮುಲಾಮು ನೀಡುವ ಕೆಲಸ ಆಗಲೆ ಇಲ್ಲ. ಅಧಿವೇಶನದ 8 ನೇ ದಿನ ಆಡಳಿತ ಪಕ್ಷದ ಉತ್ತರ ಕರ್ನಾಟಕ ಶಾಸಕರು ಹಾಗೂ ವಿಪಕ್ಷ ನಾಯಕ ಸಿದ್ಧರಾಮಯ್ಯ  ಉತ್ತರ ಕರ್ನಾಟಕ ಭಾಗದ ಸಮಸ್ಯೆಗಳ ಕುರಿತು ಚರ್ಚೆಯಾಗಬೇಕು ಎಂದಾಗ ಕೊನೆ ಗಳಿಗೆಯಲ್ಲಿ ಅವಕಾಶವನ್ನು ನೀಡಲಾಯಿತು.

ಬೆಳಗಾವಿ ಭಾಗದ ಕಳಸಾ ಬಂಡೂರಿ ನಾಲಾ ಯೋಜನೆಗೆ ಕೇಂದ್ರ ಸರಕಾರ ಸಮ್ಮತಿ ಸೂಚಿಸಿದೆ ಎಂದು ಮುಖ್ಯಮಂತ್ರಿಗಳು ಸದನದಲ್ಲಿ ಗೋಷಿಸಿದ ಸಮಾಧಾನ ಸಂಗತಿ. 32 ಟಿಎಂಸಿ ನೀರ ಸಿಗಬೇಕು ಆದರೆ ಕೇವಲ ನಾಲ್ಕು ಟಿಎಂಸಿ ಸಿಗುವ ಸಾಧ್ತೆ ಇದೆ ಎಂದು ಹೇಳಲಾಗುತ್ತಿದೆ.  ಹೊರತುಪಡಿಸಿ ಈ ಭಾಗದ ಕುರಿತು ಚರ್ಚೆಗಳು ಮತ್ತೆ ಗಂಟುಮೂಟೆ ಸೇರಿದವು. ಕರಗಾಂವ ಏತ ನೀರಾವರಿ ಯೋಜನೆ, ಮಹಾಲಕ್ಷ್ಮೀ ನೀರಾವರಿ ಯೋಜನೆ, ಕೃಷ್ಣಾ ನೀರಾವರಿ ಯೋಜನೆ ಸೇರಿದಂತೆ ಅನಕ ನೀರಾವರಿ ಸಮಸ್ಯೆಗಳಿವೆ. 371 ಜೆ ಕಲಂ ನಲ್ಲಿ ಅನೇಕ ದೋಷಗಳಿವೆ ಎಂದು ತಜ್ಞರು ಹೇಳುತ್ತಿದ್ದಾರೆ. ಈ ಕುರಿತು ಚರ್ಚೆ, ಸಮಿತಿ ರಚಿಸಬಹುದು ಎಂದು ನಿರೀಕ್ಷಿಸಲಾಗಿತ್ತು. ರೈತರ ಹಲವು ಸಮಸ್ಯೆಗಳ ಬಗ್ಗೆ ಈ ಅಧಿವೇಶನದಲ್ಲಿ ಪರಿಹಾರ ಸಿಗಬಹುದು ಎಂದು ಅಂದಾಜಿಸಲಾಗಿತ್ತು. ಅತೀವೃಷ್ಠಿ ಮಳೆಯಿಂದಾಗಿ ಸಾವಿರಾರು ಹೆಕ್ಟೇರ್ಭೂಮಿಯಲ್ಲಿ ಬೆಳೆಯಲಾಗಿದ್ದ ಹೆಸರು,ಅಲಸಂದೆ, ಉದ್ದು, ತೊಗರಿ ಬೆಳೆ, ಶೇಂಗಾ, ಸೈರ್ಯಕಾಂತಿ, ಭತ್ತದ ಬೆಳೆ ನಾಶವಾಗಿತ್ತು.ಉಕ ಭಾಗದ ವಿದ್ಯಾವಂತ ಯುವಕರು ನಿರುದ್ಯೋಗಿಗಳಾಗಿ ಅಲೆದಾಡುತ್ತಿದ್ದಾರೆ. ಇದನ್ನು ತಪ್ಪಿಸಲು ಯೋಜನೆಗಳನ್ನು ರೂಪಿಸಬೇಕಿತ್ತು. ಆದರೆ ಇದ್ಯಾವುದು ಚರ್ಚೆಗೆ ಬರದೆ ಖಾಸಗೀ ವಿವಿ ಮಸೂದೆಯನ್ನು ಜಾರಿ ಮಾಡಲು ಮುತುವರ್ಜಿವಹಿಸಿದ್ದು, ಸರಕಾರ ಹಾಗೂ ಶಾಸಕರು ಯಾರ ಪರ ಇದ್ದಾರೆ ಎಂಬುದಕ್ಕೆ ಹಿಡಿದ ಕನ್ನಡಿಯಾಗಿತ್ತು.

ಇದನ್ನೂ ಓದಿ : ಮಹದಾಯಿ ಹೋರಾಟಗಾರರಿಗೆ ಮತ್ತೆ ಸಮನ್ಸ್: ಕೋರ್ಟ್‌ಗೆ ಹಾಜರಾಗದಿರಲು ನಿರ್ಧಾರ

ಮೂಗಿಗೆ ತುಪ್ಪ : ಬೆಳಗಾವಿ ಅಧಿವೇಶನ ಉತ್ತರ ಕರ್ನಾಟಕಕ್ಕೆ ಮೀಸಲು ಅಂತಾರೆ, ಕಳೆದ 09 ದಿನಗಳಲ್ಲಿ ಉತ್ತರ ಕರ್ನಾಟಕ ಭಾಗದ ಸಮಸ್ಯೆಗಳ ಬಗ್ಗೆ ಚರ್ಚೆಗೆ ಸಿಕ್ಕಿದ್ದು ಕೊನೆಯ ದಿನದ ಕೊನೆಯ ಕ್ಷಣದಲ್ಲಿ. ಇದನ್ನು ಗಮನಿಸಿದರೆ,  ಉತ್ತರ ಕರ್ನಾಟಕದ ಗತಿ-ಸ್ಥಿತಿ, ಕಥೆ ಇಷ್ಟೇನಾ? ಈ ಪ್ರಶ್ನೆ ಯಾರನ್ನು ಕೇಳಬೇಕು, ಯಾರ ಮುಂದೆ ಅಳಲು ತೋಡಿಕೊಳ್ಳಬೇಕು? ಎಂಬ ಪ್ರಶ್ನೆ ಆ ಭಾಗದ ಜನರದ್ದಾಗಿದೆ.

ಶಿಕ್ಷಣ, ನೀರಾವರಿ, ಮೂಲ ಸೌಲಭ್ಯ, ಅಭಿವೃದ್ಧಿ ವಿಚಾರದಲ್ಲಿ ಸರಕಾರಗಳ ವರ್ತನೆ, ಉದಾಸೀನತೆ ಈ ಭಾಗದ ಅಸಂಖ್ಯಾತರ ಮನದೊಳಗೆ ಇಂತಹ ಪ್ರಶ್ನೆಗಳನ್ನು ಮೂಡುವಂತೆ ಮಾಡಿದೆ. ನಿಮಗಾಗಿಯೇ ‘ಸುವರ್ಣ ವಿಧಾನ ಸೌಧ’ ಕಟ್ಟಿದ್ದೇವೆಂದು ಹೇಳುತ್ತಲೇ ಉತ್ತರ ಕರ್ನಾಟಕವನ್ನು ಮತ್ತೆ ಮತ್ತೆ ಕಡೆಗಣಿಸಲಾಗುತ್ತಿದೆ. ಅಭಿವೃದ್ಧಿ ಯೋಜನೆಗಳು ಕಡತಗಳಲ್ಲೇ ಅಣಕಿಸುತ್ತಿವೆ, ಇದ್ದ ಸೌಲಭ್ಯಗಳನ್ನು ಕಿತ್ತುಕೊಂಡು ಬೇರೆ ಕಡೆ ತೆಗೆದುಕೊಂಡು ಹೋಗುವ ಹುನ್ನಾರ ನಡೆಯುತ್ತಲೇ ಇದೆ. ವಿವಿಧ ಇಲಾಖೆಗಳಲ್ಲಿ ನೂರಾರು ಸಮಸ್ಯೆಗಳಿವೆ. ಆ ಭಾಗದ ಜನ ಸಾಕಷ್ಟು ಸಮಸ್ಯೆ ಎದುರಿಸುತ್ತಿದ್ದಾರೆ. ಆದರೆ ಕೇವಲ ಮೂಗಿಗೆ ತುಪ್ಪ ಸವರುವ ಕೆಲಸ ಮಾಡಲಾಗುತ್ತಿದೆ.

ನಂಜುಂಡಪ್ಪ ವರದಿಯ ಪ್ರಕಾರವೇ 114 ಹಿಂದುಳಿದ ತಾಲ್ಲೂಕುಗಳ ಪೈಕಿ 59 ತಾಲ್ಲೂಕುಗಳು ಉತ್ತರ ಕರ್ನಾಟಕದಲ್ಲಿಯೇ ಇವೆ. ಅದರಲ್ಲಿ 39 ಅತಿ ಹೆಚ್ಚು ಹಿಂದುಳಿದ ತಾಲ್ಲೂಕುಗಳು. ಅವು ಎಲ್ಲವೂ ಉತ್ತರದಲ್ಲಿಯೇ ಇವೆ. ಬೆಂಗಳೂರು ಮತ್ತು ಮೈಸೂರು ಕಂದಾಯ ವಿಭಾಗದ ಜಿಲ್ಲೆ ಮತ್ತು ತಾಲ್ಲೂಕುಗಳಿಗೆ ಹೋಲಿಸಿದರೆ ಉತ್ತರದ ಬೆಳಗಾವಿ ಮತ್ತು ಕಲ್ಬುರ್ಗಿ ಕಂದಾಯ ವಲಯಗಳಲ್ಲಿ ತಲಾವಾರು ಆದಾಯ ಈಗಲೂ ಕಡಿಮೆಯೇ ಇದೆ. ಒಂದು ಸಾರಿ ಒಂದು ಪ್ರದೇಶ ಹಿಂದುಳಿದುದು ಎಂಬ ತಲೆಪಟ್ಟಿ ಗಳಿಸಿಬಿಟ್ಟರೆ ಸಾಕು ಅಲ್ಲಿನ ಜನರು ಒರಟರು, ದಡ್ಡರು ಎಂಬ ಹಣೆಪಟ್ಟಿ ಹಚ್ಚಿಕೊಂಡು ಬಿಡುತ್ತಾರೆ. ಉತ್ತರ ಕರ್ನಾಟಕದ ಮಂದಿಗೆ ಈಗ ಆಗಿರುವುದೂ ಅದೇ.  ಪ್ರತಿ ಬಾರಿಯೂ ಇಲ್ಲ ಅಧಿವೇಶನ ನಡೆದಾಗ ಉತ್ತರ ಕರ್ನಾಟಕ ಬದಲಾವಣೆಗಾಗಿ ನಡೆಯುವ ಅಧಿವೇಶನ ಎಂದು ಆಸೆಗಣ್ಣಿನಿಂದ ಜನ ಕಾಯುತ್ತಾರೆ. ಆದರೆ ಇಲ್ಲಿಯವರೆಗೆ 1% ರಷ್ಟಾದರೂ ಚರ್ಚೆ, ಜಾರಿ ನಡೆದಿದೆಯೇ ಎಂಬುದಕ್ಕೆ ದಾಖಲೆಯೂ ಇಲ್ಲ, ಉತ್ತರವೂ ಇಲ್ಲ.

ಉತ್ತರ ಕರ್ನಾಟಕ ಭಾಗದ ಸಮಗ್ರ ಅಭಿವೃದ್ಧಿಯ ದೂರದೃಷ್ಟಿ. ದಶಕಗಳಿಂದ ಹಾಗೆ ಉಳಿದಿರುವ ಹಲವು ಸಮಸ್ಯೆಗಳಿಗೆ ಶಾಶ್ವತ ಪರಿಹಾರದ ಆಶಾಭಾವ. ಪ್ರತಿವರ್ಷದಂತೆ ಕಾಲ ಉರುಳಿತು. ಸಿಗಬೇಕಿದ್ದ ಪರಿಹಾರ ಸಿಕ್ಕಿತಾ? ಸಮಸ್ಯೆಗಳು ಕೊನೆ ಆದ್ವಾ? ಸುವರ್ಣಸೌಧ ಕಟ್ಟಿದ ಉದ್ದೇಶ ಈಡೇರಿತಾ? ಈ ಪ್ರಶ್ನೆಗೆ ಸುವರ್ಣಸೌಧವೇ ಉತ್ತರ ಕೊಡಬೇಕು. 10 ದಿನ ನಡೆಯಬೇಕಿದ್ದ ಅಧಿವೇಶನ 9ನೇ ದಿನಕ್ಕೆ ಅಂತ್ಯ ಆಯ್ತು. ಅದೇ ಭಾಷಣ, ಅದೇ ಭರವಸೆ. ಮತ್ತದೆ ನಿರಾಸೆಯಲ್ಲಿ ಅಧಿವೇಶನ ನಡೆಯಿತು.

ಬೆಳಗಾವಿ ಅಂದಾಕ್ಷಣ ಅಸಢ್ಯ ತೋರುವ ಶಾಸಕರು, ಈ ಬಾರಿಯೂ ನಿರ್ಲಕ್ಷ್ಯ ಮುಂದುವರೆಸಿದ್ದಾರೆ. ಅಧಿವೇಶನ ಅಂತ್ಯವಾದ ಬಳಿಕ ಸರ್ಕಾರಕ್ಕೆ ಮತ್ತೆ ಮುಂದಿನ ಚಳಿಗಾಲಕ್ಕೆ ಈ ಸುವರ್ಣಸೌಧ ನೆನಪಾಗಲಿದೆ. ಮುಂಬರುವ ಹೊಸ ಸರ್ಕಾರವಾದ್ರೂ ಸುವರ್ಣಸೌಧದ ಉದ್ದೇಶವನ್ನ ಈಡೇರಿಸುವ ಸಾರ್ಥಕತೆಯನ್ನು ತೋರಬೇಕಿದೆ.

ಇಲ್ಲಿ ಕ್ಲಿಕ್‌ ಮಾಡಿ : ಜನಶಕ್ತಿ ಮೀಡಿಯಾ ವಾಟ್ಸ್‌ಪ್‌ ಗುಂಪು ಸೇರಲು ಈ ಲಿಂಕ್‌ ಕ್ಲಿಕ್‌ ಮಾಡಿ

Donate Janashakthi Media

Leave a Reply

Your email address will not be published. Required fields are marked *