ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವ ಸುನೀಲ್ ಕುಮಾರ್ ಅವರು ಸುಳ್ಳು ಹೇಳುವುದು ಕೂಡಾ ಸಂಸ್ಕೃತಿಯ ಭಾಗ ಎಂದು ತಿಳಿದುಕೊಂಡಂತೆ ಕಾಣುತ್ತಿದೆ. ಗಣರಾಜ್ಯೋತ್ಸವದ ಪರೇಡ್ ನಲ್ಲಿ ಪ್ರತಿಯೊಂದು ರಾಜ್ಯದ ಸ್ತಬ್ಧಚಿತ್ರಕ್ಕೆ ಮೂರು ವರ್ಷಗಳಿಗೊಮ್ಮೆ ಮಾತ್ರ ಭಾಗವಹಿಸುವ ಅವಕಾಶ ನೀಡುವ ನಿಯಮವಿದೆ ಎಂದು ಸುನೀಲ್ ಕುಮಾರ್ ಪತ್ರಿಕಾ ಹೇಳಿಕೆ ಅಪ್ಪಟ ಸುಳ್ಳು ಎಂದು ಪತ್ರಕರ್ತ ದಿನೇಶ್ ಅಮೀನ್ ಮಟ್ಟು ಹೇಳಿದ್ದಾರೆ.
ಮುಂದುವರೆದು, ಈ ಮೂಲಕ ನಾರಾಯಣ ಗುರುಗಳ ಸ್ಥಬ್ದಚಿತ್ರಕ್ಕೆ ಅವಕಾಶ ನಿರಾಕರಿಸಿದ ಕೇಂದ್ರದ ಬಿಜೆಪಿ ಸರ್ಕಾರದ ವಿದ್ರೋಹವನ್ನು ಸಮರ್ಥಿಸಿಕೊಳ್ಳುವ ಪ್ರಯತ್ನವನ್ನು ಸಚಿವ ಸುನೀಲ್ ಕುಮಾರ್ ಮಾಡುತ್ತಿದ್ದಾರೆ.
ಸಿದ್ದರಾಮಯ್ಯನವರು ಮುಖ್ಯಮಂತ್ರಿಯಾಗಿದ್ದಾಗ ಸತತ ಐದು ವರ್ಷಗಳ ಕಾಲ ಕರ್ನಾಟಕದ ಸ್ತಬ್ದಚಿತ್ರಗಳು ಗಣರಾಜ್ಯೋತ್ಸವದ ಪರೇಡ್ ನಲ್ಲಿ ಭಾಗವಹಿಸಿರುವುದನ್ನು ಸುನೀಲ್ ಕುಮಾರ್ ಮರೆತುಬಿಟ್ಟಂತೆ ಕಾಣುತ್ತಿದೆ.
ಸಚಿವರು ಉಲ್ಲೇಖಿಸಿರುವ ನಿಯಮ ಆಗ ಜಾರಿಯಲ್ಲಿರಲಿಲ್ಲವೇ? ಈ ನಿಯಮವನ್ನು ನಾರಾಯಣ ಗುರುಗಳ ಸ್ತಬ್ದಚಿತ್ರವನ್ನು ನಿರಾಕರಿಸುವ ದುರುದ್ದೇಶದಿಂದ ಇದೇ ವರ್ಷ ಹೊಸದಾಗಿ ರೂಪಿಸಲಾಗಿದೆಯೇ? ಇದನ್ನು ಕನ್ನಡ ಮತ್ತು ಸಂಸ್ಕೃತಿ ಸಚಿವರು ಸ್ಪಷ್ಟಪಡಿಸಬೇಕು.
ನಾರಾಯಣ ಗುರುಗಳ ಸ್ಥಬ್ದಚಿತ್ರಕ್ಕೆ ಅವಕಾಶ ನಿರಾಕರಿಸಿದ ಅಧಿಕಾರಿಗಳ ತಂಡ ಸಚಿವರು ಹೇಳಿರುವ ನಿಯಮವನ್ನು ಯಾಕೆ ಉಲ್ಲೇಖಿಸಿಲ್ಲ? ಯಾಕೆ ಅವರು ನಾರಾಯಣ ಗುರುಗಳ ಸ್ತಬ್ದಚಿತ್ರಕ್ಕೆ ಬದಲಾಗಿ ಶಂಕರಾಚಾರ್ಯರ ಸ್ತಬ್ದಚಿತ್ರವನ್ನು ಸೂಚಿಸಿದ್ದರು? ಈ ಪ್ರಶ್ನೆಗಳಿಗೆ ಸಚಿವ ಸುನೀಲ್ ಕುಮಾರ್ ಉತ್ತರಿಸಬೇಕಾಗುತ್ತದೆ.
ತಾವು ಉಲ್ಲೇಖಿಸಿರುವ ನಿಯಮದ ಮೂಲವನ್ನು ಸುನೀಲ್ ಕುಮಾರ್ ಬಹಿರಂಗಪಡಿಸಿ ತನ್ನ ಮಾತನ್ನು ಸಮರ್ಥಿಸಿಕೊಳ್ಳಬೇಕು, ಇಲ್ಲದೆ ಇದ್ದರೆ ತಾವು ಹೇಳಿದ ಸುಳ್ಳಿಗಾಗಿ ಸಾರ್ವಜನಿಕರು ಮತ್ತು ನಾರಾಯಣ ಗುರುಗಳ ಅನುಯಾಯಿಗಳ ಕ್ಷಮೆ ಕೇಳಬೇಕು ಎಂದು ದಿನೇಶ್ ಅಮೀನ್ ಮಟ್ಟು ಎಂದಿದ್ದಾರೆ.
ಸುನೀಲ್ ಕುಮಾರ್ ಒಬ್ಬ ಜವಾಬ್ದಾರಿಯುತ ಸಚಿವರು. ಅವರು ಇಲ್ಲದ ನಿಯಮಗಳನ್ನು ಸ್ವಯಂ ಸೃಷ್ಟಿಸಿ ಜನರನ್ನು ದಾರಿ ತಪ್ಪಿಸುವ ಕೆಲಸ ಮಾಡಬಾರದು. ನಾರಾಯಣ ಗುರುಗಳ ಅನುಯಾಯಿ ಎಂದು ಹೇಳಿಕೊಳ್ಳುತ್ತಿರುವ ಸುನೀಲ್ ಕುಮಾರ್ ಮೊದಲು ಸರ್ಕಾರದಿಂದ ಆಗಿರುವ ತಪ್ಪನ್ನು ಪ್ರಧಾನ ಮಂತ್ರಿಯವರಿಗೆ ಮನವರಿಕೆ ಮಾಡಿಕೊಟ್ಟು ನಾರಾಯಣ ಗುರುಗಳ ಸ್ತಬ್ದಚಿತ್ರಕ್ಕೆ ಅವಕಾಶ ನೀಡುವಂತೆ ಮಾಡಬೇಕು ಎಂದಿದ್ದಾರೆ.
ಸುನೀಲ್ ಕುಮಾರ್ ಇದನ್ನು ಗಮನಿಸಿ
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತಮ್ಮ ಸಹೋದ್ಯೋಗಿ ಸುನೀಲ್ ಕುಮಾರ್ ಹೇಳಿರುವುದು ಸುಳ್ಳು ಎಂದು ಸಾಬೀತುಪಡಿಸಿದ್ದಾರೆ.
ಕರ್ನಾಟಕದ ಸ್ತಬ್ದಚಿತ್ರ ಸತತ ೧೩ನೇ ಬಾರಿ ಗಣರಾಜ್ಯೋತ್ಸವ ಪರೇಡ್‌ಗೆ ಆಯ್ಕೆಯಾಗಿರುವುದನ್ನು ಮುಖ್ಯಮಂತ್ರಿಗಳು ಹೆಮ್ಮೆ-ಸಂತೋಷದಿಂದ ಹೇಳಿಕೊಂಡಿದ್ದಾರೆ.
ಈ ಸುನೀಲ್ ಕುಮಾರ್ ಮೂರು ವರ್ಷಗಳ ನಿಯಮವನ್ನು ಎಲ್ಲಿಂದ ಅಗೆದು ತೆಗೆದಿದ್ದಾರೆ ಎನ್ನುವುದನ್ನು ತಿಳಿಸಬೇಕು.