* ‘ಕಾರ್ಮಿಕ ಸಂಹಿತೆಗಳನ್ನು ನಿರ್ಣಾಯಕವಾಗಿ ಸೋಲಿಸಿ’
* ಕಾರ್ಮಿಕ ಸಮಾವೇಶದಲ್ಲಿ ಸಂಹಿತೆಗಳ ಕುರಿತು ಕಿರುಪುಸ್ತಕ ಬಿಡುಗಡೆ
ಬೆಂಗಳೂರು : ಕಾರ್ಮಿಕ ವಿರೋಧಿ ಕಾರ್ಮಿಕ ಸಂಹಿತೆಗಳನ್ನು ರದ್ದುಪಡಿಸಲು ಫೆಬ್ರವರಿ 12ರ ಸಾರ್ವತ್ರಿಕ ಮುಷ್ಕರದ ಕರೆಯ ಭಾಗವಾಗಿ AICCTU ವತಿಯಿಂದ ಬೆಂಗಳೂರಿನ ಗಾಂಧಿ ಭವನದಲ್ಲಿ ಇಂದು ‘ಕಾರ್ಮಿಕರ ಸಮಾವೇಶವನ್ನು’ ಹಮ್ಮಿಕೊಳ್ಳಲಾಗಿದ್ದು, ಸರ್ವೋಚ್ಚ ನ್ಯಾಯಾಲಯದ ಮಾಜಿ ನ್ಯಾಯಾಧೀಶ ಜಸ್ಟೀಸ್ ವಿ. ಗೋಪಾಲ ಗೌಡ ಸಮ್ಮುಖದಲ್ಲಿ ‘ಕಾರ್ಮಿಕ ಸಂಹಿತೆಗಳು: ಮೋದಿ ಕಟ್ಟುತ್ತಿರುವ ಸುಳ್ಳುಗಳ ಅನಾವರಣ’ ಎಂಬ ಕೃತಿಯನ್ನು ಬಿಡುಗಡೆ ಮಾಡಲಾಯಿತು.
ನೂರಾರು ಅಸಂಘಟಿತ ಹಾಗೂ ನೆಪಮಾತ್ರ ಗುತ್ತಿಗೆ ಪದ್ಧತಿ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ನೂರಾರು ಕಾರ್ಮಿಕರ ಸಭೆಯನ್ನು ಉದ್ದೇಶಿಸಿ ಜಸ್ಟೀಸ್ ವಿ. ಗೋಪಾಲ ಗೌಡ ಮಾತನಾಡಿ ಕಾರ್ಮಿಕ ಕಾನೂನುಗಳನ್ನು ವಿವರಿಸುತ್ತಾ ಈ ಕಾನೂನುಗಳು ಬಂಡವಾಳ ಮತ್ತು ಶ್ರಮಶಕ್ತಿ ನಡುವೆ ಸಮಾನತೆಯನ್ನು ತರುವ ಪ್ರಯತ್ನ ಮಾಡಿತ್ತು, ಆದರೆ ಪ್ರಸ್ತುತದಲ್ಲಿ ಜಾರಿಮಾಡಲಾದ ಕಾರ್ಮಿಕ ಸಂಹಿತೆಗಳು ಕಾರ್ಮಿಕರನ್ನು ಗುಲಾಮಗಿರಿಯ ಪರಿಸ್ಥಿತಿಗೆ ನೂಕಲಿದೆ ಎಂದು ಹೇಳಿದರು. ಸರ್ವೋಚ್ಛ ನ್ಯಾಯಾಲಯದ ಮುಖ್ಯನ್ಯಾಯಾಧೀಶರ ಕಾರ್ಮಿಕ ಸಂಘಟನೆಗಳ ವಿರುದ್ಧ ನೀಡಿದ ಇತ್ತೀಚಿನ ಹೇಳಿಕೆಗೆ ಪ್ರತಿಕ್ರಿಯಿಸುತ್ತಾ ಶ್ರೀ. ಗೋಪಾಲ ಗೌಡರು ಶ್ರಮಿಕರಿಗೆ ಹಕ್ಕು, ಘನತೆ, ಸಮಾನತೆ ದೊರಕಲು ಕಾರ್ಮಿಕ ಸಂಘಟನೆಗಳ ಬಹುಮುಖ್ಯ ಪಾತ್ರವಿದೆ.ಸಂಘಟನೆಗಳನ್ನು ಕಡೆಗಣಿಸುವುದು ಸರಿಯಲ್ಲ ಎಂದರು. ಮನೆಕೆಲಸ ಕಾರ್ಮಿಕರು ತಮ್ಮ ಶ್ರಮದಿಂದ ನಮ್ಮೆಲ್ಲರ ಮನೆ ಮತ್ತು ಸಮಾಜವನ್ನು ನಡೆಸುತ್ತಿದ್ದರೂ, ಅವರ ಶ್ರಮವನ್ನು ಗುರುತಿಸಲು ಸರ್ವೋಚ್ಚ ನ್ಯಾಯಾಲಯವು ವಿಫಲವಾಗಿದೆ. ಕಾರ್ಮಿಕರಿಂದಲೇ ಇಡೀ ದೇಶ ನಡೆಯುತ್ತದೆ ಎಂದು ತಿಳಿದಿದ್ದರೂ ಸರ್ವೋಚ್ಛ ನ್ಯಾಯಾಲಯವು ಕಾರ್ಮಿಕರ ಪರವಾಗಿ ನಿಲ್ಲದಿರುವುದು ವಿಷಾಧನೀಯ ಎಂದು ಹೇಳಿದರು.
“ಸಮಾನತೆ ಇರಲಿ, ಕಾರ್ಮಿಕರಿಗೆ ಕನಿಷ್ಠ ವೇತನ, ಕೆಲಸದ ಭದ್ರತೆ, ಸಾಮಾಜಿಕ ಭದ್ರತೆಯನ್ನೂ ಒದಗಿಸದೇ, ಈಗ ಕಾರ್ಮಿಕರನ್ನು ಕಾಲಾಳುಗಳಾಗಿ ಪರಿವರ್ತಿಸಲು ಈ ಕಾರ್ಮಿಕ ಸಂಹಿತೆಗಳನ್ನು ಜಾರಿಮಾಡಲಾಗಿದೆ. ಈ ಸಂಹಿತೆಗಳನ್ನು ಹಿಂಪಡೆಯಬೇಕೆಂದರೆ, ದೆಹಲಿಯ ಗಡಿಭಾಗದಲ್ಲಿ ಕರಾಳ ಕೃಷಿ ಕಾಯ್ದೆಗಳ ವಿರುದ್ಧ ರೈತರು ರಚಿಸಿದ್ದ ಸಂಘರ್ಷದಂತೆ ಕಾರ್ಮಿಕ ವರ್ಗದವರೂ ಸಹ ಹೋರಾಟವನ್ನು ಹಮ್ಮಿಕೊಳ್ಳಲು ಸಿದ್ಧರಾಗಬೇಕು,” ಎಂದು ಹೇಳಿದರು. ಕಾರ್ಮಿಕ ಹಕ್ಕುಗಳನ್ನು ನೀಡುವುದಲ್ಲದೆ, ಕಾರ್ಮಿಕ ಕಾನೂನುಗಳು ಕೈಗಾರಿಕಾ ಶಾಂತಿಯನ್ನು ಕಾಪಾಡಲು, ‘ಕಾರ್ಮಿಕ’, ‘ಕೈಗಾರಿಕಾ’ ವ್ಯಾಖ್ಯಾನ ನೀಡಿ, ಕಾರ್ಮಿಕ ನ್ಯಾಯಾಲಯಗಳು ಹೇಗೆ ನಡೆಯಬೇಕು, ಕೈಗಾರಿಕಾ ವಿವಾದಗಳನ್ನು ಹೇಗೆ ಪರಿಹರಿಸಬೇಕು, ಇತ್ಯಾದಿ ವಿಷಯಗಳ ಕುರಿತು ಪ್ರಕ್ರಿಯೆಗಳನ್ನು ಹೇಳಿಕೊಟ್ಟಿತ್ತು. ಇದನ್ನೆಲ್ಲಾ ತಲೆಮೇಲು ಮಾಡಿರುವ ಕಾರ್ಮಿಕ ಸಂಹಿತೆಗಳು ಕಾರ್ಮಿಕರಿಗೆ ಇಂತಹ ನ್ಯಾಯವನ್ನು ಒದಗಿಸುವುದು ಎಂದು ಪ್ರಶ್ನಿಸಿದರು.
ಇದನ್ನೂ ಓದಿ : ವಿಬಿ-ಜಿರಾಮ್ (ಜಿ): “ಸಮರ್ಥಿಸಿಕೊಳ್ಳಲಾಗದನ್ನು ಸಮರ್ಥಿಸಿಕೊಳ್ಳಲು ಈಗ ಕೃಷಿ ಸಚಿವರ ಜುಮ್ಲಾಗಳು”

AICCTU ರಾಷ್ಟ್ರಾಧ್ಯಕ್ಷರು ವಿ. ಶಂಕರ್ ಅವರು ಸಭೆಯನ್ನು ಉದ್ದೇಶಿಸಿ ಮಾತನಾಡುತ್ತಾ, ಗುತ್ತಿಗೆ ಪದ್ಧತಿಯು ಖಾಯಂ ರೆಟಿಯಲ್ಲಿ ನಡೆದುಕೊಂಡು ಬಂದಿದ್ದು, ಕರ್ನಾಟಕದ ಪೌರಕಾರ್ಮಿಕರು, ಫ್ಯಾಕ್ಟರಿ ಕಾರ್ಮಿಕರು ಹಾಗೂ ಇತರರು ತಮ್ಮ ಸಂಘರ್ಷದ ಮೂಲಕ ಖಾಯಮಾತಿಯನ್ನು ಪಡೆದುಕೊಂಡರು. ಆದರೆ ಈಗ ನಿರುದ್ಯೋಗವು ಹೆಚ್ಚುತ್ತಿದ್ದು, ಸ್ವಿಗ್ಗಿ-ಝೋಮಟೋ ರಂತಹ ಆಪ್-ಕಾರ್ಮಿಕರು ಅನುಭಾವಿಸುತ್ತಿರುವ ಕೆಲಸದ ಅಭದ್ರತೆ, ವೇತನ ಅಭ್ದ್ರತೆಯಂತೆ ಎಲ್ಲಾ ಕಾರ್ಮಿಕರು ಬೀದಿಪಾಲಾಗಬೇಕಾಗುತ್ತದೆ. ಫೆಬ್ರವರಿ 12ರ ಸಾರ್ವತ್ರಿಕ ಮುಷ್ಕರವನ್ನು ಯಶಸ್ವಿಗೊಳಿಸುವುದಲ್ಲದೆ, ಮೋದಿ ಸರ್ಕಾರಕ್ಕೆ ತಕ್ಕ ಪಾಠವನ್ನು ದುಡಿಯುವ ವರ್ಗದವರೇ ಕಲಿಸಬೇಕೆಂದು ಹೇಳಿದರು.
ಕಾರ್ಮಿಕ ಸಂಹಿತೆಗಳು ಶ್ರಮಿಕ ವರ್ಗಕ್ಕೆ ಸವಾಲನ್ನೊಡ್ಡಿರುವುದು, ನಾವು ಒಂದು ನಿರ್ಣಾಯಕ ಕಾಲಘಟ್ಟದಲ್ಲಿ ಬದುಕುತ್ತಿದ್ದೇವೆ. ಇಲ್ಲವೇ ನಾವು ಗುಲಾಮಿತನವನ್ನು ಒಪ್ಪಿಕೊಳ್ಳಬೇಕು, ಇಲ್ಲಾ ನಾವು ಘನತೆಯುಕ್ತ ಕೆಲಸಕ್ಕಾಗಿ ಹೋರಾಟವನ್ನು ಮಾಡಬೇಕು, ಎಂದು AICCTU ರಾಷ್ಟ್ರ ಉಪಾಧ್ಯಕ್ಷ ಕ್ಲಿಫ್ಟನ್ ಡಿ’ರೊಜಾರಿಯೋ ಅವರು ಹೇಳಿದರು. ನಾವು ಕೇಳುತ್ತಿರುವುದು ರೂ. 42,000/- ವೇತನ. ಆದರೆ, ಕಾರ್ಮಿಕ ಸಂಹಿತೆಗಳಡಿ ಕನಿಷ್ಠ ವೇತನವಲ್ಲ ನೆಲಮಟ್ಟದ ವೇತನವನ್ನು ನೀಡಲಿದ್ದಾರೆ. ಕಾರ್ಮಿಕರನ್ನು ಗುಲಾಮಗಿರಿಗೆ ತಳ್ಳಲಾಗುತ್ತಿದೆ ಎಂದು ಮಾತನಾಡಿದರು.
ಈಗಾಗಲೇ ದೇಶವನ್ನು ಅದಾನಿ-ಅಂಬಾನಿಗಳಂತಹ ಬಂಡವಾಳಿಗರಿಗೆ ಮಾರಾಟ ಮಾಡುತ್ತಿದ್ದು, ಇವರುಗಳು ಕಾರ್ಮಿಕರ ಶ್ರಮ ದೋಚಿ ಅತಿಹೆಚ್ಚು ಲಾಭ ಪಡೆಯಲು ಕೊರ್ಪೊರೇಟ್ ಪರ ಕಾರ್ಮಿಕ ಸಂಹಿತೆಗಳನ್ನು ಜಾರಿಮಾಡಿದ್ದಾರೆ. ಈ ಕಾರ್ಮಿಕ ಸಂಹಿತೆಗಳು ನಮ್ಮನ್ನು ಹೇಗೆ ಶೋಷಣೆ ಮಾಡುತ್ತದೆ ಎಂದು ತಿಳಿದು ಇದರ ವಿರುದ್ಧ ಹೋರಾಟ ಮಾಡುವುದು ಅತ್ಯಗತ್ಯವಾಗಿದೆ ಎಂದು AICCTU ರಾಜ್ಯಧ್ಯಕ್ಷರು ಪಿ.ಪಿ. ಅಪ್ಪಣ್ಣ ಅವರು ಮಾತನಾಡಿದರು. ಮೋದಿ ಸರ್ಕಾರವು ಕಾರ್ಮಿಕ ಸಂಹಿತೆಗಳನ್ನು ಜರಿ ಮಾಡಿದ್ದಲ್ಲದೆ, ಇದು ಕಾರ್ಮಿಕರ ಹಿತಕ್ಕಾಗಿ ತಂದಿರುವ ಬದಲಾವಣೆಗಳು ಎಂದು ಸುಳ್ಳುಗಳನ್ನು ಹೇಳುತ್ತಿದ್ದಾರೆ. ಕಾರ್ಮಿಕ ಸಂಘರ್ಷದಿಂದ ಮಾತ್ರ ಕಾರ್ಮಿಕ ಪರ ಕಾನೂನುಗಳು ನಮ್ಮ ದೇಶಕ್ಕೆ ಬಂದಿದ್ದು. ಕೈಗಾರಿಕಾ ವಿವಾದ ಮಸೂದೆಯ ವಿರುದ್ಧ ಭಗತ್ ಸಿಂಗ್ ಅವರು ತಮ್ಮ ಜೀವವನ್ನು ಮುಡಿಪಿಟ್ಟು ಸಂಘರ್ಷ ಮಾಡಿದರೋ, ಅದರಂತೆಯೇ ನಾವು ಹೋರಾಟವನ್ನು ನಿರ್ಮಿಸಬೇಕು, ಎಂದು AICCTU ರಾಜ್ಯ ಕಾರ್ಯದರ್ಶಿ ಮೈತ್ರೇಯಿ ಅವರು ಮಾತನಾಡಿದರು.
ಕೇರಳ ಸರ್ಕಾರವು ಕಾರ್ಮಿಕ ಸಂಹಿತೆಯ ಪರ್ಯಾಯಕ್ಕಾಗಿ ಕಾರ್ಮಿಕ-ಪರ ಕಾನೂನುಗಳು ಹೇಗಿರಬೇಕೆಂದು ಸಮಿತಿಯನ್ನು ರಚಿಸಿದ್ದು, ಜಸ್ಟೀಸ್ ವಿ. ಗೋಪಾಲಗೌಡ ಹಾಗೂ AICCTU ಕರ್ನಾಟಕ ರಾಜ್ಯ ಕಾರ್ಯದರ್ಶಿ ಮೈತ್ರೇಯಿ ಅವರು ಸಮಿತಿ ಸದಸ್ಯರಾಗಿ ಕೆಲಸ ಮಾಡುತ್ತಿದ್ದಾರೆ ಎಂದು ಮುಖಂಡರು ತಿಳಿಸಿದರು.
ಸಾರ್ವಜನಿಕ ಉದ್ದಿಮೆಗಳಲ್ಲಿ ನೆಪಮಾತ್ರ ಗುತ್ತಿಗೆ ಪದ್ಧತಿಯಡಿ ಕೆಲಸ ಮಾಡುತ್ತಿರುವ HAL, DRDO, ITI, NAL, ಹಾಗೂ ಇತರೆ ಕಾರ್ಮಿಕರು, ಗಾರ್ಮೆಂಟ್ಸ್ ಕಾರ್ಮಿಕರು, ಆಸ್ಪತ್ರೆ ಕಾರ್ಮಿಕರು, ಗ್ರಂಥಾಲಯ ಕಾರ್ಮಿಕರು, ಬೀದಿ ವ್ಯಾಪಾರಿಗಳು, ಸ್ವಚ್ಛತಾ ಕಾರ್ಮಿಕರು, ಗಣಿ ಕಾರ್ಮಿಕರು, ನೀರಾವರಿ ಕಾರ್ಮಿಕರು, ಹಾಗೂ ಕರ್ನಾಟಕದಾದ್ಯಂತ AICCTU ಮುಖಂಡರು ಹಾಗೂ ಸದಸ್ಯರು ಈ ಕಾರ್ಮಿಕ ಸಮಾವೇಶದಲ್ಲಿ ಪಾಲ್ಗೊಂಡರು.
ಇದನ್ನೂ ನೋಡಿ : ಗಾಂಧೀಜಿಯವರ ವಿಚಾರಗಳೊಂದಿಗೆ ಮುಖಾಮುಖಿ ಆಗಬೇಕಿದೆ – ಬರಗೂರು ರಾಮಚಂದ್ರಪ್ಪ Janashakthi Media
