ಯುರೋಪಿಯನ್ ಕೇಂದ್ರ ಬ್ಯಾಂಕ್‌ನ ಒಂದು ವರದಿಯು 2020ರ(ಕೋವಿಡ್ ಕಾಲದ) ಯುರೋಪಿಯನ್ ಒಕ್ಕೂಟ ಮತ್ತು ಅಮೇರಿಕಾ ತಮ್ಮ ನಾಗರಿಕರಿಗೆ ಕೊಟ್ಟ ಹಣಕಾಸು ಬೆಂಬಲದ ಪ್ರಮಾಣವನ್ನು ಅನುಕ್ರಮವಾಗಿ ಜಿಡಿಪಿಯ ಶೇಕಡಾ 4.2 ಮತ್ತು ಶೇಕಡಾ 7.8 ಎಂದು ಹೇಳುತ್ತದೆ. ಭಾರತದಲ್ಲಿ ಇದು ಜಿಡಿಪಿಯ ಶೇಕಡಾ ಒಂದಕ್ಕಿಂತ ಕಡಿಮೆ. ಸಾಂಕ್ರಾಮಿಕದ ಸಮಯದಲ್ಲಿ ಭಾರತದ ಸರ್ಕಾರವು ಜನರಿಗೆ ನೀಡಿದ ಬೆಂಬಲಕ್ಕೆ ಸಂಬಂಧಿಸಿದಂತೆ ಹೇಳುವುದಾದರೆ, ಪಶ್ಚಿಮ ದೇಶಗಳು ಮತ್ತು ಭಾರತದ ನಡುವೆ ಅಗಾಧ ವ್ಯತ್ಯಾಸವಿದೆ. ಸರ್ಕಾರದ ವಿಪರೀತ ಜಿಪುಣತನಕ್ಕೆ ದುಡಿಯುವ ಜನರ ಬಗ್ಗೆ ಅದಕ್ಕಿರುವ ಕಾಳಜಿಯ ಕೊರತೆ ಮಾತ್ರ ಸಂಪೂರ್ಣ ಕಾರಣವೆಂದು ಹೇಳಬಹುದು. ಈ ಅಂಶವು ಬಡವರ ಬಗ್ಗೆ ಭಾರತದ ಮತ್ತು ಪಶ್ಚಿಮದ ದೇಶಗಳ ಆಳುವ ವರ್ಗದ ನಡವಳಿಕೆಗಳ ನಡುವಿನ ವ್ಯತ್ಯಾಸದತ್ತ ನಮ್ಮನ್ನು ಮರಳಿ ಕೊಂಡೊಯ್ಯುತ್ತದೆ ಎನ್ನುತ್ತಾರೆ ಹಿರಿಯ ಆರ್ಥಿಕ ತಜ್ಞ ಪ್ರೊ. ಪ್ರಭಾತ್ ಪಟ್ನಾಯಕ್ ಅವರು.
ಅಮೆರಿಕದ ಅಧ್ಯಕ್ಷ ಹುದ್ದೆಗೆ 2020ರಲ್ಲಿ ನಡೆದ ಚುನಾವಣೆಯಲ್ಲಿ ಡೆಮಾಕ್ರಟಿಕ್ ಪಕ್ಷದ ನಾಮ ನಿರ್ದೇಶನದ ಆಕಾಂಕ್ಷಿಯಾಗಿದ್ದ ಸೆನೆಟರ್ ಎಲಿಜಬೆತ್ ವಾರೆನ್ ಅವರು ತಮ್ಮ ಪ್ರಚಾರ ಸಭೆಗಳಲ್ಲಿ ತಾವು ಆಯ್ಕೆಯಾದರೆ ಶ್ರೀಮಂತರ ಮೇಲೆ ಸಂಪತ್ತು ತೆರಿಗೆಯನ್ನು ವಿಧಿಸುವುದಾಗಿ ಹೇಳಿದ್ದರು. ಸಂಪತ್ತು ತೆರಿಗೆಯನ್ನು ಹೇರುವ ಅವರ ಪ್ರಗತಿಪರ ಪ್ರಸ್ತಾಪವನ್ನು ಅಮೆರಿಕದ 18 ಮಂದಿ ಬಿಲಿಯನೇರ್‌ಗಳು ಬೆಂಬಲಿಸಿದ್ದರು. ಇಂತಹ ಒಂದು ನಡವಳಿಕೆಯನ್ನು ಭಾರತದ ಸನ್ನಿವೇಶದಲ್ಲಿ ಜ್ಞಾಪಿಸಿಕೊಳ್ಳುವ ಮಾತಿರಲಿ, ಊಹಿಸಿಕೊಳ್ಳಲೂ ಸಾಧ್ಯವಿಲ್ಲ. ಅಮೇರಿಕದ ಅಥವಾ ಇನ್ನೂ ಸಾಮಾನ್ಯವಾಗಿ ಹೇಳುವುದಾದರೆ, ಪಶ್ಚಿಮ ದೇಶಗಳ ಬಂಡವಾಳಶಾಹಿಗಳು ದಯಾಮಯಿಗಳು ಅಥವಾ ಅವರ ಮನೋಭಾವವು ಉದಾರವಾದದ್ದು ಎಂಬ ಅಭಿಪ್ರಾಯವನ್ನು ಬಿಲಿಯನೇರ್‌ಗಳ ಈ ಪ್ರಸ್ತಾಪಕ್ಕೆ ಸಂಬಂಧಿಸಿ ಹೇಳುವಂತಿಲ್ಲ. ಯಾವ ಪ್ರತಿರೋಧವೂ ಇಲ್ಲದೆ ತಾವು ಐಶಾರಾಮದ ಜೀವನ ನಡೆಸಬೇಕು ಎಂಬುದಷ್ಟೇ ಅವರ ಕಾಳಜಿ. ತಮ್ಮ ದೇಶಗಳಲ್ಲಿ ಬಂಡವಾಳಶಾಹಿ ವ್ಯವಸ್ಥೆಯು ಅಬಾಧಿತವಾಗಿರಬೇಕು ಎಂದಾದರೆ, ಬಡವರ ಬಗ್ಗೆ ಅಲ್ಪ ಸ್ವಲ್ಪ ಕಾಳಜಿ ತೋರಿಸುವುದು ಅಗತ್ಯ ಎಂಬುದು ಅವರ ವ್ಯಾವಹಾರಿಕ ನಂಬಿಕೆ. ಅದಕ್ಕಿಂತ ಹೆಚ್ಚಿಗೆ ಏನೂ ಇಲ್ಲ.
ಕೋವಿಡ್-19ರ ಸಂದರ್ಭದಲ್ಲಿ ಆಳುವ ವರ್ಗಗಳ ಎರಡು ಗುಂಪುಗಳು ಘೋಷಣೆ ಮಾಡಿರುವ ರಕ್ಷಣಾ ಪ್ಯಾಕೇಜ್‌ಗಳ ನಡುವೆ ಇದೇ ರೀತಿಯ ವ್ಯತ್ಯಾಸವನ್ನು ಗುರುತಿಸಬಹುದು. ಸಾಂಕ್ರಾಮಿಕ ಸಂಬಂಧಿತ ಲಾಕ್‌ಡೌನ್‌ನಿಂದಾಗಿ, ಜಿಡಿಪಿಯು ಪಶ್ಚಿಮದ ದೇಶಗಳಲ್ಲಿ ಹಾಗೂ ಭಾರತದಲ್ಲಿ ತೀವ್ರವಾಗಿ ಕುಸಿದಿದೆ. ಆದ್ದರಿಂದ ಈ ಎರಡೂ ಕಡೆಯಲ್ಲಿ ತೆರಿಗೆ ಆದಾಯವೂ ತೀವ್ರವಾಗಿ ಕುಸಿದಿದೆ. ಆದ್ದರಿಂದ, ಸಾಂಕ್ರಾಮಿಕ ಇರಲಿ ಅಥವಾ ಇಲ್ಲದಿರಲಿ, ಸರ್ಕಾರದ ಖರ್ಚು ವೆಚ್ಚಗಳನ್ನು ಸಂಪೂರ್ಣವಾಗಿ ಮತ್ತು ಸಮರ್ಪಕವಾಗಿ ನಿರ್ವಹಿಸಬೇಕು ಎಂದಾದರೆ, ಸಾಮಾನ್ಯವಾಗಿ ವಿತ್ತೀಯ ಕೊರತೆ ಹೆಚ್ಚುತ್ತದೆ ಹಾಗೂ ಜಿಡಿಪಿ ಮತ್ತು ವಿತ್ತೀಯ ಕೊರತೆಗಳ ಅನುಪಾತವೂ ಏರುತ್ತದೆ. ಆದ್ದರಿಂದ, ಲಾಕ್‌ಡೌನ್ ಎಷ್ಟು ತೀವ್ರವಾಗಿರುತ್ತದೆಯೋ ಅಷ್ಟೇ ತೀವ್ರ ಪ್ರಮಾಣದಲ್ಲಿ ತೆರಿಗೆ ಆದಾಯಗಳೂ ಕುಸಿಯುತ್ತವೆ ಮತ್ತು ಜಿಡಿಪಿ ಮತ್ತು ವಿತ್ತೀಯ ಕೊರತೆಗಳ ಅನುಪಾತವೂ ಏರುತ್ತದೆ. ಆದರೂ ಸಹ, ವಿತ್ತೀಯ ಕೊರತೆಗಳ ಸಾಪೇಕ್ಷ ಗಾತ್ರಗಳ ಹೋಲಿಕೆಯ ಮೂಲಕ ರಕ್ಷಣಾ ಪ್ಯಾಕೇಜ್‌ಗಳ ಪ್ರಮಾಣವನ್ನು ನಿರ್ಧರಿಸುವುದು ತಪ್ಪಾಗುತ್ತದೆ. ಜೊತೆಗೆ, ಈ ಪ್ಯಾಕೇಜ್‌ಗಳಲ್ಲಿ ಬಡವರಿಗೆ ಎಷ್ಟು ಮೊತ್ತದ ವಿವೇಚನಾ ಹಣಕಾಸಿನ ಬೆಂಬಲವನ್ನು ನಿಗದಿಪಡಿಸಲಾಗಿದೆ ಎಂಬುದನ್ನು ನಿರ್ದಿಷ್ಟವಾಗಿ ಪರಿಶೀಲಿಸುವುದು ಅಗತ್ಯವಾಗುತ್ತದೆ.
2019ರ ಮತ್ತು 2020ರ ಜಿಡಿಪಿ ಮತ್ತು ಪ್ರಾಥಮಿಕ ವಿತ್ತೀಯ ಕೊರತೆಯ ಅನುಪಾತದ ಹೆಚ್ಚಳವನ್ನು ಹೋಲಿಸಿದ ಯುರೋಪಿಯನ್ ಕೇಂದ್ರ ಬ್ಯಾಂಕ್, ಯುರೋಪಿಯನ್ ಒಕ್ಕೂಟ ಮತ್ತು ಅಮೇರಿಕಾ ಕ್ರಮವಾಗಿ ಶೇಕಡಾ 6.7 ಮತ್ತು 9.8 ವಿತ್ತೀಯ ಕೊರತೆ ಹೊಂದಿದ್ದವು ಎಂದು ಹೇಳಿದೆ. ಈ ಅಂಕಿ ಅಂಶಗಳಿಂದ ವಿವೇಚನಾ ವಿತ್ತೀಯ ಬೆಂಬಲ ಎಷ್ಟು ಎಂಬುದು ಗೊತ್ತಾಗುವುದಿಲ್ಲ. ಆದರೆ, ಯುರೋಪಿಯನ್ ಕೇಂದ್ರ ಬ್ಯಾಂಕ್‌ನ ಒಂದು ವರದಿಯು 2020ರ ಯುರೋಪಿಯನ್ ಒಕ್ಕೂಟ ಮತ್ತು ಅಮೇರಿಕಾ ವಿವೇಚನಾ ವಿತ್ತೀಯ ಬೆಂಬಲದ ಪ್ರಮಾಣವನ್ನು ಅನುಕ್ರಮವಾಗಿ ಜಿಡಿಪಿಯ ಶೇಕಡಾ 4.2 ಮತ್ತು ಶೇಕಡಾ 7.8 ಎಂದು ಹೇಳುತ್ತದೆ. (ಐಎಂಎಫ್, ಅಮೇರಿಕಾದ ವಿವೇಚನಾ ವಿತ್ತೀಯ ಬೆಂಬಲವನ್ನು ಜಿಡಿಪಿಯ ಶೇಕಡಾ 16.7 ರಷ್ಟು ಎತ್ತರದ ಮಟ್ಟದಲ್ಲಿ ಇರಿಸುತ್ತದೆ).
ವಿವೇಚನಾ ವಿತ್ತೀಯ ಬೆಂಬಲದ ಪ್ರಮಾಣಕ್ಕೆ ಸಂಬಂಧಿಸಿದ ಈ ಅಂಕಿಅಂಶಗಳಲ್ಲಿ ಯಾವುದನ್ನೇ ಒಪ್ಪಿಕೊಂಡರೂ ಸಹ, ಅವೆಲ್ಲವೂ ಭಾರತದ ವಿವೇಚನಾ ವಿತ್ತೀಯ ಬೆಂಬಲದ ಪ್ರಮಾಣಕ್ಕಿಂತ ಬಹಳ ಹೆಚ್ಚಿನ ಪ್ರಮಾಣದಲ್ಲಿವೆ. ಭಾರತದ ವಿವೇಚನಾ ವಿತ್ತೀಯ ಬೆಂಬಲದ ಪ್ರಮಾಣವು 1.65 ರಿಂದ 1.9 ಲಕ್ಷ ಕೋಟಿ ರೂ.ಗಳ ಆಸುಪಾಸಿನಲ್ಲಿದೆ. ಇದು ನಮ್ಮ ಜಿಡಿಪಿಯ ಶೇಕಡಾ ಒಂದಕ್ಕಿಂತ ಕಡಿಮೆ. ಸಾಂಕ್ರಾಮಿಕದ ಸಮಯದಲ್ಲಿ ಭಾರತದ ಸರ್ಕಾರವು ಜನರಿಗೆ ನೀಡಿದ ಬೆಂಬಲಕ್ಕೆ ಸಂಬಂಧಿಸಿದಂತೆ ಹೇಳುವುದಾದರೆ, ಪಶ್ಚಿಮ ದೇಶಗಳು ಮತ್ತು ಭಾರತದ ನಡುವೆ ಅಗಾಧ ವ್ಯತ್ಯಾಸವಿದೆ.
ಭಾರತ ಮತ್ತು ಪಶ್ಚಿಮದ ದೇಶಗಳ ಆಳುವ ವರ್ಗದ ನಡವಳಿಕೆಗಳ ನಡುವಿನ ಹೋಲಿಕೆಯಲ್ಲಿ ಕಾಣುವ ಈ ವ್ಯತ್ಯಾಸಗಳಿಗೆ ಮೂರು ಸಂಗತಿಗಳನ್ನು ಗುರುತಿಸಬಹುದು.
- ಭಾರತದ ದುಡಿಯುವ ಜನರ ಚೌಕಾಶಿಯ ಬಲದ ಕೊರತೆ ಮತ್ತು ಬಹುಸಂಖ್ಯಾತರು ಅಸಂಘಟಿತರಾಗಿರುವುದು.
- ಜನರನ್ನು ಕೋಮು ಆಧಾರದ ಮೇಲೆ ವಿಭಜಿಸುವಲ್ಲಿ, ಬಹುಸಂಖ್ಯಾತ ಸಮುದಾಯವನ್ನು ಒಗ್ಗೂಡಿಸಿ ಅದರ ಒಟ್ಟು ಬಲವನ್ನು ತನ್ನ ಹಿಂದೆ ಹಿಡಿದಿಟ್ಟುಕೊಳ್ಳುವಲ್ಲಿ ದುಡಿಯುವ ಜನರ ಪರಿಸ್ಥಿತಿಗಳ ಬಗ್ಗೆ ಕಾಳಜಿ ವಹಿಸದ ಲೋಪವನ್ನು ಜೀರ್ಣಿಸಿಕೊಳ್ಳಬಹುದು ಎನ್ನುವಷ್ಟು ಮೋದಿ ಸರಕಾರದ ಅಪರಿಮಿತ ಆತ್ಮವಿಶ್ವಾಸ.
- ಭಾರತೀಯ ಸಮಾಜ ವ್ಯವಸ್ಥೆಯಲ್ಲಿ ಜಾತಿ-ಪದ್ಧತಿಯಿಂದಾಗಿ ಒಂದು ಸಂಪ್ರದಾರದಂತೆಯೇ ಆಗಿರುವ ಬಡವರು ಮತ್ತು ದುಡಿಯುವ ಜನರ ಬಗ್ಗೆ ಉಳಿದವರು ತೋರುವ ನಿಷ್ಕಾಳಜಿ.
ಒಂದು ವಾಸ್ತವ ಸಂಗತಿಯೇ ಈ ಅಗಾಧ ವ್ಯತ್ಯಾಸವನ್ನು ಸ್ಪಷ್ಟಪಡಿಸುತ್ತದೆ. ಅಮೆರಿಕದಲ್ಲಿ ವಿವೇಚನಾ ವಿತ್ತೀಯ ಬೆಂಬಲವು ಸಾರ್ವತ್ರಿಕವಾಗಿದೆ. ಅಂದರೆ, ಪ್ರತಿ ಮನೆಗೂ ಹಣಕಾಸು ಬೆಂಬಲವನ್ನು ವಿಸ್ತರಿಸಲಾಗಿದೆ. ಉದಾಹರಣೆಗೆ, ಬಿಡೆನ್ ಪ್ಯಾಕೇಜ್‌ನಲ್ಲಿ ವರ್ಷಕ್ಕೆ $75,000ಕ್ಕಿಂತ ಕಡಿಮೆ ಸಂಪಾದಿಸುವ ಪ್ರತಿಯೊಬ್ಬ ವ್ಯಕ್ತಿಗೂ ತಿಂಗಳಿಗೆ $1400 ಮತ್ತು ಪ್ರತಿಯೊಬ್ಬ ನಿರುದ್ಯೋಗಿ ವ್ಯಕ್ತಿಗೂ ವಾರಕ್ಕೆ $300 ಪಾವತಿಸುವ ಅವಕಾಶವನ್ನು ಕಲ್ಪಿಸಲಾಗಿದೆ. ಆದರೆ, ಇದನ್ನು ಬಿಡೆನ್ ಅವರ ಸ್ಪಂದನೆ ಮಾತ್ರ ಎನ್ನುವಂತಿಲ್ಲ. ಟ್ರಂಪ್ ಕೂಡ ಬಡವರಿಗೆ ಇದೇ ರೀತಿಯ ಸಾರ್ವತ್ರಿಕ ವರ್ಗಾವಣೆಗಳಿಂದ ಕೂಡಿದ ಪ್ಯಾಕೇಜನ್ನು ಅನಾವರಣಗೊಳಿಸಿದ್ದರು. ಈ ಕ್ರಮಗಳಿಗೆ ಹೋಲಿಸಿದರೆ, ಭಾರತದಲ್ಲಿ ಬಡವರಿಗೆ ಅಂತಹ ಸಾರ್ವತ್ರಿಕ ವರ್ಗಾವಣೆಗಳು ಇರಲೇ ಇಲ್ಲ. ಹಲವಾರು ಅರ್ಥಶಾಸ್ತ್ರಜ್ಞರು, ನಾಗರಿಕ ಸಮಾಜ ಸಂಘಟನೆಗಳು ಮತ್ತು ರಾಜಕೀಯ ಪಕ್ಷಗಳು ಮಾಡಿದ ಮನವಿಗಳ ಹೊರತಾಗಿಯೂ ಭಾರತದಲ್ಲಿ ಅಂತಹ ಯಾವ ವರ್ಗಾವಣೆಯ ಕ್ರಮವನ್ನೂ ಕೈಗೊಳ್ಳಲಿಲ್ಲ. ಆದಾಯ ತೆರಿಗೆಯ ವ್ಯಾಪ್ತಿಯಿಂದ ಹೊರಗುಳಿದಿರುವ ಪ್ರತಿ ಕುಟುಂಬಕ್ಕೂ ತಿಂಗಳಿಗೆ 7,000 ರೂ.ಗಳ ನೆರವು ಒದಗಿಸಬೇಕೆಂದು ಎಡಪಕ್ಷಗಳು ನಿರ್ದಿಷ್ಟವಾಗಿ ಒತ್ತಾಯಿಸಿದ್ದವು.
ಒಟ್ಟಾರೆಯಾಗಿ ದುಡಿಯುವ ಜನರಿಗೆ ಸಿಕ್ಕಿದ ಚೂರು ಪಾರು ನೆರವು ಕೂಡ ಹಣ ವರ್ಗಾವಣೆಯ ರೂಪದಲ್ಲಿಲ್ಲ. ಅದು ಉದ್ಯೋಗ ಖಾತ್ರಿ ಯೋಜನೆಯಡಿಯಲ್ಲಿ ಮಾಡಿದ ಕೆಲಸಕ್ಕೆ ಕೊಟ್ಟ ಕೂಲಿಯಾಗಿತ್ತು. 2019-20 ಮತ್ತು 2020-21ರ ನಡುವೆ ಈ ಯೋಜನೆಯಡಿ ಉದ್ಯೋಗ ಪಡೆದವರ ಸಂಖ್ಯೆಯು 7.88 ಕೋಟಿಯಿಂದ 11.17 ಕೋಟಿಗೆ ಏರಿದೆ. ಹಠಾತ್ ಲಾಕ್‌ಡೌನ್‌ನಿಂದಾಗಿ ವಲಸೆ ಕಾರ್ಮಿಕರು ತಮ್ಮ ಆದಾಯದ ಮೂಲಗಳನ್ನು ಮತ್ತು ನಂತರ ತಮ್ಮ ವಾಸದ ಸ್ಥಳಗಳನ್ನೂ ಕಳೆದುಕೊಂಡ ಕಾರಣದಿಂದ ತಮ್ಮ ತಮ್ಮ ಹಳ್ಳಿಗಳಿಗೆ ಮರಳಿದ್ದುದೇ ಈ ಹೆಚ್ಚಳಕ್ಕೆ ಕಾರಣ. ಅವರು ಗ್ರಾಮೀಣ ನಿರುದ್ಯೋಗಿ ಪಡೆಯನ್ನು ಉಬ್ಬಿಸಿ, ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿಯಲ್ಲಿ ಕೆಲಸ ಗಿಟ್ಟಿಸಿಕೊಂಡರು.
ಈ ಅಂಶವನ್ನು ಇನ್ನೊಂದು ರೀತಿಯಲ್ಲಿ ಹೇಳುವುದಾದರೆ, ಅವರು ತಮ್ಮ ಆದಾಯವನ್ನು ದೈಹಿಕ ಶ್ರಮದ ಅಗತ್ಯವಿರುವ ಯೋಜನೆಗಳಲ್ಲಿ ಬೆವರು ಸುರಿಸಿ ಪಡೆದರು. ಹಣ ವರ್ಗಾವಣೆ ಮಾಡುವ ಸ್ಪಂದನೆಯನ್ನು ಸರ್ಕಾರ ತೋರಿಸಲಿಲ್ಲ. ಅಮೆರಿಕದಲ್ಲಿ ಟ್ರಂಪ್ ಆಡಳಿತವು ಬಾಡಿಗೆದಾರರನ್ನು ಹೊರಹಾಕದಂತೆ ಆಜ್ಞೆ ಹೊರಡಿಸಿತ್ತು. ಅದೇ ರೀತಿಯಲ್ಲಿ, ಲಾಕ್‌ಡೌನ್ ಸಮಯದಲ್ಲಿ ಬಾಡಿಗೆದಾರರನ್ನು ಹೊರಹಾಕದಂತೆ ಮೋದಿ ಸರ್ಕಾರವು ತಡೆಯಬಹುದಿತ್ತು. ಅಷ್ಟನ್ನೂ ಮಾಡಲಿಲ್ಲ. ಅಂತಹ ಭಾವಶೂನ್ಯತೆಯನ್ನು ಅಥವಾ ಕಲ್ಲು ಹೃದಯವನ್ನು ಅದು ಪ್ರದರ್ಶಿಸಿತು.
ಒಂದು ದೊಡ್ಡ ಮೊತ್ತದ ರಕ್ಷಣಾ ಪ್ಯಾಕೇಜ್ ಒದಗಿಸುವುದರಿಂದ ವಿತ್ತೀಯ ಕೊರತೆಯ ಅನುಪಾತವು ಮತ್ತಷ್ಟು ವೃದ್ಧಿಸುತ್ತಿತ್ತು ಮತ್ತು ಅದು ಜಾಗತಿಕ ಹಣಕಾಸು ಬಂಡವಾಳವನ್ನು ಮತ್ತು ಐಎಂಎಫ್ ನಂತಹ ಸಂಸ್ಥೆಗಳನ್ನು ಸಿಟ್ಟಿಗೇಳಿಸುತ್ತಿತ್ತು ಎಂದು ವಾದಿಸಬಹುದು. ಆದರೆ ಈ ವಾದವು ಮೂರನೇ ಜಗತ್ತಿನ ಬಹುತೇಕ ದೇಶಗಳಿಗೆ ಅನ್ವಯವಾಗುತ್ತದೆಯಾದರೂ ಸಹ, ಭಾರತದ ಪ್ರಕರಣವನ್ನು ಈ ರೀತಿಯಲ್ಲಿ ವಿವರಿಸಲು ಸಾಧ್ಯವಿಲ್ಲ. ಭಾರತದ ಪ್ರಭುತ್ವವು ಇಂತಹ ಕ್ರಮಗಳಿಗೆ ಮುಂದಾಗಲೇ ಇಲ್ಲ. ಐಎಂಎಫ್ ನಿಂದಾಗಲಿ ಅಥವಾ ಆರ್ಥಿಕ ಹೊರಹರಿವಿನ ಪ್ರವಾಹದ ಆರಂಭದ ಮೂಲಕವಾಗಲಿ, ಖರ್ಚು ವೆಚ್ಚಗಳನ್ನು ನಿಯಂತ್ರಿಸುವ ನವ ಉದಾರವಾದಿ ಚೌಕಟ್ಟಿನ ಒತ್ತಾಯಕ್ಕೆ ಭಾರತವು ಒಳಗಾಗಿರಲಿಲ್ಲ. ಆದ್ದರಿಂದ, ಸರ್ಕಾರದ ವಿಪರೀತ ಜಿಪುಣತನಕ್ಕೆ ದುಡಿಯುವ ಜನರ ಬಗ್ಗೆ ಅದಕ್ಕಿರುವ ಕಾಳಜಿಯ ಕೊರತೆ ಮಾತ್ರ ಸಂಪೂರ್ಣ ಕಾರಣವೆಂದು ಹೇಳಬಹುದು. ಹಾಗಾಗಿ, ಈ ಅಂಶವು ಬಡವರ ಬಗ್ಗೆ ಭಾರತದ ಮತ್ತು ಪಶ್ಚಿಮದ ದೇಶಗಳ ಆಳುವ ವರ್ಗದ ನಡವಳಿಕೆಗಳ ನಡುವಿನ ವ್ಯತ್ಯಾಸದತ್ತ ನಮ್ಮನ್ನು ಮರಳಿ ಕೊಂಡೊಯ್ಯುತ್ತದೆ.
ಭಾರತ ಮತ್ತು ಪಶ್ಚಿಮದ ದೇಶಗಳ ಆಳುವ ವರ್ಗದ ನಡವಳಿಕೆಗಳ ನಡುವಿನ ಹೋಲಿಕೆಯಲ್ಲಿ ಕಾಣುವ ಈ ವ್ಯತ್ಯಾಸಗಳಿಗೆ ಮೂರು ಸಂಗತಿಗಳನ್ನು ಗುರುತಿಸಬಹುದು. ಮೊದಲನೆಯದು, ಭಾರತದ ದುಡಿಯುವ ಜನರ ಚೌಕಾಶಿಯ ಬಲದ ಕೊರತೆ ಮತ್ತು ಬಹುಸಂಖ್ಯಾತರು ಅಸಂಘಟಿತರಾಗಿರುವುದು. ನಿರುದ್ಯೋಗವು ಬಹಳ ದೊಡ್ಡ ಪ್ರಮಾಣದಲ್ಲಿರುವುದರಿಂದ “ಉದ್ಯೋಗ ಪಡಿತರ”ವು ಕೆಲವರಿಗೆ ಪೂರ್ಣ ಉದ್ಯೋಗ ಮತ್ತು ಇತರರಿಗೆ ಪೂರ್ಣ ನಿರುದ್ಯೋಗ ಎಂಬ ರೂಪದಲ್ಲಿ ಸ್ಪಷ್ಟವಾಗಿ ವ್ಯಕ್ತವಾಗುವುದಿಲ್ಲ. ಬದಲಿಗೆ, ಪ್ರತಿಯೊಬ್ಬರೂ ಕೇವಲ ಭಾಗಶಃ ಉದ್ಯೋಗದಲ್ಲಿದ್ದಾರೆ. ಈ ಪರಿಸ್ಥಿತಿಯಲ್ಲಿ ಕಾರ್ಮಿಕರನ್ನು ಸಂಘಟಿಸುವುದು ದುಪ್ಪಟ್ಟು ಕಷ್ಟವಾಗುತ್ತದೆ. ಏಕೆಂದರೆ, ಮೊದಲಿಗೆ ನಿರುದ್ಯೋಗದ ಅಗಾಧತೆ, ನಂತರ, ಈ ಅಗಾಧ ನಿರುದ್ಯೋಗವು ಅಷ್ಟು ದೊಡ್ಡ ಸಂಖ್ಯೆಯ ಜನರನ್ನು ಬಾಧಿಸುವುದರಿಂದ ಅವರ ಮೇಲೆ ಅದು ಬೀರುವ ಪರಿಣಾಮವು ತೆಳುವಾಗುತ್ತದೆ. ಮೋದಿ ಸರ್ಕಾರವು ಸಾಂಕ್ರಾಮಿಕದ ಕಾಲದಲ್ಲಿ, ಸಂಸತ್ತಿನಲ್ಲಿ ಅವಸರ ಅವಸರವಾಗಿ ಅಂಗೀಕಾರ ಪಡೆದ ಕಾರ್ಮಿಕ ಕಾನೂನುಗಳು ಕಾರ್ಮಿಕರ ಪರಿಸ್ಥಿತಿಯನ್ನು ಮತ್ತಷ್ಟು ಹದಗೆಡಿಸುತ್ತವೆ.
ಈ ಸಂಬಂಧವಾಗಿ ಒಂದು ಪ್ರಶ್ನೆಯನ್ನು ಎತ್ತಬಹುದು: ಕಾರ್ಮಿಕರ, ರೈತರ ಮತ್ತು ಕೃಷಿ ಕಾರ್ಮಿಕರ ಸಂಘಟನೆಗಳು ದುರ್ಬಲವಾಗಿರಬಹುದು, ನಿಜ. ಆದರೆ, ಚುನಾವಣೆಯಲ್ಲಿ ಅವರೆಲ್ಲರೂ ಆಳುವ ಪಕ್ಷದ ವಿರುದ್ಧವಾಗಿ ಮತ ಹಾಕಿದರೆ ನಿಜಕ್ಕೂ ಅದರ ಪರಿಣಾಮ ತಮ್ಮ ವಿರುದ್ಧವಾಗಿ ತಿರುಗಬಹುದು ಎನ್ನುವ ಭೀತಿಯು ಸರ್ಕಾರವನ್ನು ದುಡಿಯುವ ಜನರ ಅಗತ್ಯಗಳಿಗೆ ಸ್ಪಂದಿಸುವಂತೆ ಮತ್ತು ಜನರ ದುಃಸ್ಥಿತಿಯ ಬಗ್ಗೆ ಸಹಾನುಭೂತಿ ಹೊಂದಿರುವಂತೆ ಮಾಡಬೇಕು, ಅಲ್ಲವೆ?
ಈ ಪ್ರಶ್ನೆಗೆ ಉತ್ತರವಾಗಿ, ಎರಡನೇ ಸಂಗತಿಯನ್ನು ಪ್ರಸ್ತಾಪಿಸಬಹುದು ಮತ್ತು ಅದು ಮೋದಿ ಸರ್ಕಾರದ ವಿಷಯದಲ್ಲಿ ಹೆಚ್ಚು ನಿರ್ದಿಷ್ಟವೂ ಹೌದು. ಜನರನ್ನು ಕೋಮು ಆಧಾರದ ಮೇಲೆ ವಿಭಜಿಸುವಲ್ಲಿ, ಬಹುಸಂಖ್ಯಾತ ಸಮುದಾಯವನ್ನು ಒಗ್ಗೂಡಿಸಿ ಅದರ ಒಟ್ಟು ಬಲವನ್ನು ತನ್ನ ಹಿಂದೆ ಹಿಡಿದಿಟ್ಟುಕೊಳ್ಳುವಲ್ಲಿ ಅದೆಷ್ಟು ಆತ್ಮವಿಶ್ವಾಸ ಹೊಂದಿದೆ ಎಂದರೆ, ದುಡಿಯುವ ಜನರ ಪರಿಸ್ಥಿತಿಗಳ ಬಗ್ಗೆ ಕಾಳಜಿ ವಹಿಸದ ಲೋಪವನ್ನು ಜೀರ್ಣಿಸಿಕೊಳ್ಳಬಹುದು ಎನ್ನುವಷ್ಟು ಅಪರಿಮಿತವಾಗಿದೆ. ಲಾಕ್‌ಡೌನ್ ಕಠಿಣವಾಗಿಯೇ ಇದ್ದಿರಬಹುದು, ಅದನ್ನು ಕೇವಲ ನಾಲ್ಕು ಗಂಟೆಗಳ ನೋಟೀಸ್ ಕೊಟ್ಟು ಜಾರಿ ಮಾಡಿದ್ದಿರಬಹುದು, ತಮ್ಮ ತಮ್ಮ ಊರು – ಮನೆ ಸೇರಿಕೊಳ್ಳಲು ಲಕ್ಷಾಂತರ ವಲಸೆ ಕಾರ್ಮಿಕರು ಬೀದಿಗೆ ಬಿದ್ದಿರಬಹುದು, ಅವರಿಗೆ ಯಾವುದೇ ನೆರವೂ ದೊರಕದೇ ಇದ್ದಿರಬಹುದು, ತಮ್ಮ ಹೊಟ್ಟೆ ಪಾಡಿಗಾಗಿ ಗ್ರಾಮೀಣ ಉದ್ಯೋಗ ಯೋಜನೆಯ ಅಡಿಯಲ್ಲಿ ಬೆವರು ಹರಿಸಿ ಮೈ ಮುರಿಯುವ ಕೆಲಸ ಮಾಡುವ ಒತ್ತಾಯಕ್ಕೆ ಒಳಗಾಗಿದ್ದಿರಬಹುದು. ಆದರೆ, ಚುನಾವಣೆ ಬಂತೆನ್ನಿ, ಆಡಳಿತ ಪಕ್ಷವು ಕೋಮು ಧ್ರುವೀಕರಣದ ಮೂಲಕ ಅವರ ಮತಗಳನ್ನು ಬಾಚಿಕೊಳ್ಳಬಹುದು ಎಂದು ಭಾವಿಸುತ್ತದೆ. ಈ ರೀತಿಯ ಚಿಂತನೆಯು ದುಡಿಯುವ ಜನರ ದಿನ ನಿತ್ಯದ ಅಗತ್ಯಗಳಿಗೆ ಸಂಪೂರ್ಣವಾಗಿ ಸ್ಪಂದಿಸದಂತೆ ಮಾಡಿದೆ.
ಮೂರನೆಯ ಸಂಗತಿ ಎಂದರೆ, ಬಹಳ ದೀರ್ಘಕಾಲದಿಂದಲೂ ಭಾರತೀಯ ಸಮಾಜ ವ್ಯವಸ್ಥೆಯ ಒಂದು ಗುಣ ಲಕ್ಷಣವೇ ಆಗಿರುವ ಜಾತಿ-ಪದ್ಧತಿಯಿಂದಾಗಿ ಬಡವರು ಮತ್ತು ದುಡಿಯುವ ಜನರ ಬಗ್ಗೆ ಉಳಿದವರು ತೋರುವ ನಿಷ್ಕಾಳಜಿಯು ಒಂದು ಸಂಪ್ರದಾಯದಂತೆ ಕೆಲಸ ಮಾಡುತ್ತಿದೆ. ದುಡಿಯುವ ಜನರು ಸಾಧಾರಣವಾಗಿ “ಕೆಳಜಾತಿ”ಗಳಿಗೆ ಸೇರಿದವರೇ ಆಗಿರುತ್ತಾರೆ. ಹಾಗಾಗಿ, “ಕೆಳಜಾತಿ”ಗಳಿಗೆ ತೋರಿಸುವ ಅಸಡ್ಡೆ-ಸಂವೇದನಾಶೂನ್ಯತೆಗಳು ದುಡಿಯುವ ಜನರ ಅಗತ್ಯಗಳನ್ನೂ ಆವರಿಸುತ್ತವೆ.
ಸಮಾಜವಾದದ ಚಿಂತನೆಯು ಬೆಳೆಯುತ್ತಿದ್ದ ಐತಿಹಾಸಿಕ ಸನ್ನಿವೇಶದಲ್ಲಿ ಸಂಭವಿಸಿದ ವಸಾಹತುಶಾಹಿ ವಿರೋಧಿ ಹೋರಾಟವು ಈ ಮನೋಭಾವವನ್ನು ಗಮನಾರ್ಹವಾಗಿ ಜಯಿಸಿತು ಮತ್ತು ಜಾತಿ, ವರ್ಗ, ಧರ್ಮ ಅಥವಾ ಲಿಂಗಭೇದವಿಲ್ಲದೆ ಜನರು ನಾಗರಿಕರಾಗಿ ಸಮಾನ ಹಕ್ಕುಗಳನ್ನು ಅನುಭವಿಸುವಂತಹ ಹೊಸ ಭಾರತದ ಒಂದು ಕಲ್ಪನೆಯನ್ನು ಸೃಷ್ಟಿಸಿತು. ಆದರೆ ಹಿಮ್ಮುಖವಾಗಿ ಸಾಗುವ ಬದಲಾವಣೆ ಸಂಭವಿಸುತ್ತಿರುವ ಸನ್ನಿವೇಶದಲ್ಲಿ, ಹಳೆಯ ಪೂರ್ವಾಗ್ರಹಗಳು ಹಗೆ ತೀರಿಸಿಕೊಳ್ಳುವ ರೀತಿಯಲ್ಲಿ ಮರಳಿವೆ.
ಪ್ರಸಿದ್ದ ಕೈಗಾರಿಕೋದ್ಯಮಿ ಮತ್ತು ಗಾಂಧೀಜಿಯ ಬೆಂಬಲಿಗ ಜಿ.ಡಿ. ಬಿರ್ಲಾ ಅವರು ಒಮ್ಮೆ ತಮ್ಮ ಕೆಲವು ಸಹ ಕೈಗಾರಿಕೋದ್ಯಮಿಗಳಿಗೆ ಬರೆದ ಒಂದು ಪತ್ರದಲ್ಲಿ ಕೈಗಾರಿಕೋದ್ಯಮಿಗಳು ತಮ್ಮ ಸಂಪತ್ತನ್ನು ಅಷ್ಟೊಂದು ಬಹಿರಂಗವಾಗಿ ಪ್ರದರ್ಶಿಸಿಕೊಳ್ಳಬಾರದು, ಏಕೆಂದರೆ, ಅದು ಸಾರ್ವಜನಿಕ ಅಭಿಪ್ರಾಯವನ್ನು ಅವರ ವಿರುದ್ಧ ತಿರುಗಿಸುತ್ತದೆ ಎಂದು ತಿಳಿಸಿದ್ದರು. ಇದೊಂದು ಗಮನಾರ್ಹವಾದ ಅಂಶವೇ. ಆದರೆ, ಇಂದು ದೇಶದ ಅತ್ಯಂತ ಶ್ರೀಮಂತ ಕೈಗಾರಿಕೋದ್ಯಮಿಯು ಮುಂಬೈ ನಗರದ ಮಧ್ಯಭಾಗದಲ್ಲಿ ಲಕ್ಷಗಟ್ಟಲೆ ಕೋಟಿ ರೂ. ಮೌಲ್ಯದ 27 ಅಂತಸ್ತಿನ ವೈಭವೋಪೇತ ಬೃಹತ್ ಭವನವನ್ನು ಹೊಂದುವ ಮೂಲಕ ತನ್ನ ಸಂಪತ್ತನ್ನು ಪ್ರದರ್ಶಿಸುತ್ತಾರೆ. ಅವರ ಈ ಆಡಂಬರದ ಜೀವನ ಶೈಲಿಯನ್ನು ಟೀಕಿಸುವ ಬದಲು, ಅವರನ್ನು ಗೌರವಾನ್ವಿತ “ಸಂಪತ್ತು-ಸೃಷ್ಟಿಕರ್ತ” ಎಂದು ಮೋದಿ ಶ್ಲಾಘಿಸುತ್ತಾರೆ! ಇದು ಸನ್ನಿವೇಶದಲ್ಲಿ ಆಗಿರುವ ಬದಲಾವಣೆಯ ಚಾರಿತ್ರಿಕ ಸಂಕೇತ.
ಅನು: ಕೆ.ಎಂ. ನಾಗರಾಜ್