ಆರ್.ಎಸ್.ಎಸ್. ಮೇಲಿನ ನಿಷೇಧ ಹಿಂತೆಗೆತ ಬೆಂಕಿಯೊಡನೆ ಚೆಲ್ಲಾಟ . . .

ಟಿ.ಸುರೇಂದ್ರರಾವ್
ಸರ್ಕಾರಿ ನೌಕರರು ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್.ಎಸ್.ಎಸ್.) ದ ಸದಸ್ಯರಾಗಬಹುದು ಎಂದು ಕೇಂದ್ರ ಸರ್ಕಾರ ಮಾಡಿರುವ ನಿರ್ಧಾರ ಬೆಂಕಿಯೊಡನೆ ಚೆಲ್ಲಾಟವಾಗುವುದಿಲ್ಲವೆ? ಏಕೆಂದರೆ ಯಾವ ಹಿನ್ನೆಲೆಯಲ್ಲಿ ಆರ್.ಎಸ್.ಎಸ್. ಹೆಸರನ್ನು ಕೇಂದ್ರ ಸರ್ಕಾರವು ಆ ನಿಷೇಧದ ಪಟ್ಟಿಯಲ್ಲಿ ಸೇರಿಸಿತ್ತು ಎಂಬುದನ್ನು ಅವಲೋಕಿಸಿದಾಗ ಆ ಪ್ರಶ್ನೆ ಉದ್ಭವಿಸುತ್ತದೆ.

“ಯಾವ ಸರ್ಕಾರಿ ನೌಕರರೂ ಯಾವುದೇ ರಾಜಕೀಯ ಪಕ್ಷ ಅಥವಾ ರಾಜಕೀಯದಲ್ಲಿ ತೊಡಗಿಕೊಳ್ಳುವ ಯಾವುದೇ ಸಂಘಟನೆಯ ಸದಸ್ಯನಾಗಬಾರದು ಅಥವಾ ಅವುಗಳ ಚಟುವಟಿಕೆಗಳಲ್ಲಿ ಭಾಗವಹಿಸಬಾರದು; ಯಾವುದೇ ರಾಜಕೀಯ ಚಳವಳಿ ಅಥವಾ ಚಟುವಟಿಕೆಗಳಿಗೆ ಯಾವುದೇ ರೀತಿಯಲ್ಲಿ ಸಹಾಯ ಮಾಡಬಾರದು” ಎಂದು 30.11.1966 ರಲ್ಲಿ ಕೇಂದ್ರ ಸರ್ಕಾರವು ನಿರ್ದೇಶಿಸಿತ್ತು.  ನಂತರದಲ್ಲಿ 25.07.1970 ಹಾಗೂ 28.10.1980 ರಲ್ಲಿ ಕೇಂದ್ರ ಸರ್ಕಾರವು ನೀಡಿದ ನಿರ್ದೇಶನದಲ್ಲಿ ಕೂಡ ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್,ಎಸ್.ಎಸ್.) ಹಾಗೂ ಜಮಾತ್-ಎ-ಇಸ್ಲಾಮಿ ಸಂಘಟನೆಗಳ ಸದಸ್ಯರಾಗಬಾರದು ಮತ್ತು ಅವುಗಳ ಚಟುವಟಿಕೆಗಳಲ್ಲಿ ಭಾಗವಹಿಸಬಾರದು ಎಂದು ಸ್ಪಷ್ಟವಾಗಿ ಹೇಳಲಾಗಿತ್ತು. ನಿಷೇಧ 

ವಾಸ್ತವದಲ್ಲಿ, ಈ ನಿರ್ದೇಶನವನ್ನು ಸರ್ದಾರ್ ವಲ್ಲಭ ಭಾಯ್ ಪಟೇ¯ರು ಗೃಹ ಸಚಿವರಾಗಿದ್ದ ಕಾಲದಲ್ಲಿ, 1949 ರಲ್ಲಿ ರೂಪಿಸಿದ ಕಾನೂನಿಗೆ ಅನುಗುಣವಾಗಿ ರೂಪಿಸಲಾಗಿತ್ತು. ಸರ್ಕಾರಿ ನೌಕರರ ಮಾರ್ಗದರ್ಶಿ ನಿಯಮಗಳು 1949 (ದಿ ಗೌರ್ನಮೆಂಟ್ ಸರ್ವಂಟ್ಸ್ ಕಂಡಕ್ಟ್ ರೂಲ್ಸ್ 1949) ರ ಪ್ರಕಾರ ಸರ್ಕಾರಿ ನೌಕರರು ರಾಜಕೀಯ ಚಟುವಟಿಕೆಗಳಲ್ಲಿ ಭಾಗವಹಿಸುವುದನ್ನು ನಿಷೇಧಿಸಲಾಗಿದೆ. ನೌಕರಶಾಹಿಯು ತಟಸ್ಥವಾಗಿರಬೇಕು ಹಾಗೂ ನಿಷ್ಪಕ್ಷಪಾತಿಗಳಾಗಿರಬೇಕು ಎನ್ನುವುದನ್ನು ಅದು ಖಾತರಿಪಡಿಸಿತ್ತು. ಅಮೆರಿಕದಲ್ಲಿ ನೌಕರಶಾಹಿಯು ಸಾಮಾನ್ಯವಾಗಿ ಆಳುವ ಪಕ್ಷಕ್ಕೆ ಬದ್ಧವಾಗಿರುವಂತೆ ಭಾರತದಲ್ಲಿ ಹಾಗಾಗಬಾರದು ಎನ್ನುವುದು ಅದರ ಉದ್ದೇಶವಾಗಿತ್ತು. ನಿಷೇಧ 

ಇದನ್ನೂ ಓದಿ: ವಯನಾಡ್ ನಲ್ಲಿ ರಾಜ್ಯ ಸರ್ಕಾರದಿಂದ 100 ಮನೆಗಳ ನಿರ್ಮಾಣ: ಸಿಎಂ‌ ಸಿದ್ದರಾಮಯ್ಯ ಘೋಷಣೆ

ನಿಜ ಹೇಳಬೇಕೆಂದರೆ, ಸ್ವಾರಸ್ಯಕರ ಸಂಗತಿಯೆಂದರೆ, ಆರ್,ಎಸ್.ಎಸ್. ಪರವಾಗಿದ್ದ ಮೊರಾರ್ಜಿ ದೇಸಾಯಿ (1977-79) ಹಾಗೂ ಅಟಲ್ ಬಿಹಾರಿ ವಾಜಪೇಯಿ (1996 ರಲ್ಲಿ ಒಂದು ತಿಂಗಳು ಮತ್ತು 1998-2004) ಯವರ ಎರಡೂ ಸರ್ಕಾರಗಳು ಆರ್.ಎಸ್.ಎಸ್. ಮೇಲಿನ ಈ ನಿಷೇಧವನ್ನು ತೆಗೆದುಹಾಕುವ ಮನಸ್ಸು ಮಾಡಲಿಲ್ಲ. ಅಷ್ಟೇ ಅಲ್ಲ, ಕಳೆದ ಒಂದು ದಶಕದಲ್ಲಿ ಸಂಘದ ಸ್ವಯಂಸೇವಕ ತಾನು ಎಂದು ಹೆಮ್ಮೆಯಿಂದ ನೇರವಾಗಿ ಹೇಳಿಕೊಳ್ಳುತ್ತಿದ್ದ ನರೇಂದ್ರ ಮೋದಿಯವರ ಬಿಜೆಪಿ ನೇತೃತ್ವದ ಸರ್ಕಾರ ಕೂಡ ಆರ್.ಎಸ್.ಎಸ್. ಮೇಲಿನ ಈ ನಿಷೇಧವನ್ನು ತೆಗೆದುಹಾಕುವ ಧೈರ್ಯ ಮಾಡಿಲ್ಲ. ನಿಷೇಧ 

ಈ ಹಿನ್ನೆಲೆಯಲ್ಲಿ, ಆರ್.ಎಸ್.ಎಸ್. ಮೇಲಿನ ನಿಷೇಧ ತೆಗೆದುಹಾಕುವ ಜುಲೈ 9 ರ ಆದೇಶದ ಅಗತ್ಯ ಈಗ ಏಕೆ ಬಂತು? ಹಾಗಾದರೆ ಆರ್.ಎಸ್.ಎಸ್. ನ್ನು ಯಾವ ಆಧಾರದಲ್ಲಿ ನಿಷೇಧ ಮಾಡಲಾಗಿತ್ತೋ ಆ ಕಾರಣ ಈಗ ಮಾಯವಾಗಿದೆಯೇ ಎಂಬ ಸತ್ಯವನ್ನು ನಾವೀಗ ಅವಲೋಕಿಸಬೇಕಿದೆ. ನಿಷೇಧ 

ಆರ್.ಎಸ್.ಎಸ್. ಒಂದು ರಾಜಕೀಯ ಸಂಘಟನೆಯಲ್ಲ, ಅದೊಂದು ಸಾಂಸ್ಕೃತಿಕ ಸಂಘಟನೆಯಷ್ಟೆ ಎಂಬ ಸಮರ್ಥನೆ ನಿಜಕ್ಕೂ ಸತ್ಯವೇ ಎನ್ನುವುದನ್ನು ಕೂಡ ನಾವು ಈಗ ಪರಾಂಬರಿಸಬೇಕಿದೆ. ಅದು ವಾಸ್ತವದಲ್ಲಿ ಜಾತ್ಯತೀತ ಪ್ರಜಾಸತ್ತಾತ್ಮಕ ಭಾರತಕ್ಕೆ ನಿಷ್ಠವಾಗಿದೆಯೇ? ಅದರ ಸದಸ್ಯತ್ವದ ಬಾಗಿಲನ್ನು ಭಾರತದ ನೌಕರಶಾಹಿಗೆ ತೆರೆಯುವ ಕೇಂದ್ರ ಸರ್ಕಾರದ ಹಠಾತ್ ನಿರ್ಧಾರವು ಜಗತ್ತಿನ ಬಹು ದೊಡ್ಡ ಪ್ರಜಾಪ್ರಭುತ್ವ ದೇಶವಾಗಿರುವ ಭಾರತವನ್ನು ಎತ್ತ ಕರೆದೊಯ್ಯುತ್ತಿದೆ ಎಂಬ ವಿಚಾರವನ್ನು ನಾವು ವಿಮರ್ಶೆಗೆ ಒಡ್ಡಬೇಕಲ್ಲವೇ? ನಿಷೇಧ

ಆರ್.ಎಸ್.ಎಸ್. ಒಂದು ರಾಜಕೀಯೇತರ ಸಂಘಟನೆ ಹೌದೇ? 

ಆರ್.ಎಸ್.ಎಸ್. ನ ಸ್ಥಾಪಕ ಮುಖಂಡರಾಗಿದ್ದ ಕೆ.ಬಿ.ಹೆಡ್ಗೆವಾರ್ ಅವರ ನಿಧನದ ನಂತರ ಅದರ ಸೈದ್ಧಾಂತಿಕ ನೇತಾರ ಎಂದು ಪರಿಗಣಿಸಲ್ಪಟ್ಟಿರುವ ಎಂ.ಎಸ್. ಗೋಲ್ವಾಲ್ಕರ್ ಅವರು 1954ರ ಮಾರ್ಚ್ 16 ರಂದು ವಾರ್ಧಾದಲ್ಲಿ ಮಾಡಿದ ಭಾಷಣದಲ್ಲಿ ಹೀಗೆ ಹೇಳುತ್ತಾರೆ:

“ನಾವು ಈ ಸಂಘಟನೆಯ ಭಾಗ ಎಂದು ಹೇಳಿದರೆ ಮತ್ತು ಅದರ ಶಿಸ್ತನ್ನು ಒಪ್ಪಿಕೊಂಡರೆ ಬದುಕಿನಲ್ಲಿ ಆಯ್ದುಕೊಳ್ಳುವುದಕ್ಕೆ ಬೇರೇನೂ ಉಳಿದಿಲ್ಲ. ಹೇಳಿದ್ದನ್ನು ಮಾಡಬೇಕು. ಕಬಡ್ಡಿ ಆಡು ಎಂದರೆ ಕಬಡ್ಡಿ ಆಡಬೇಕು; ಸಭೆ ನಡೆಸು ಅಂದರೆ ಸಭೆ ನಡೆಸಬೇಕು. . .ಉದಾಹರಣೆಗೆ ನಮ್ಮ ಕೆಲವು ಮಿತ್ರರಿಗೆ ರಾಜಕೀಯಕ್ಕೆ ಹೋಗಿ ಕೆಲಸಮಾಡಿ ಅಂದರೆ ಅವರು ಅದರಲ್ಲಿ ಬಹಳ ಆಸಕ್ತಿ ಹೊಂದಿದ್ದಾರೆ ಅಥವಾ ಅದರ ಬಗ್ಗೆ ಪ್ರೇರಣೆ ಇದೆ ಎಂಬ ಅರ್ಥವಲ್ಲ. ನೀರಿನಿಂದ ಹೊರಬಿದ್ದ ಮೀನಿನಂತೆ ರಾಜಕೀಯಕ್ಕಾಗಿಯೇ ಅವರು ಸಾಯುವುದಿಲ್ಲ. ರಾಜಕೀಯದಿಂದ ಹೊರಬನ್ನಿ ಎಂದು ಅವರಿಗೆ ಹೇಳಿದರೆ, ಆಗ ಕೂಡ ಆಕ್ಷೇಪಣೆ ಇಲ್ಲ. ಅವರ ವಿವೇಚನೆಯ ಅಗತ್ಯವೇ ಇಲ್ಲ.”

[ಗೋಲ್ವಾಲ್ಕರ್ ಎಂ.ಎಸ್. ಶ್ರೀ ಗುರೂಜಿ ಸಮಗ್ರ ದರ್ಶನ್ (ಗೋಲ್ವಾಲ್ಕರ್ ಅವರ ಹಿಂದಿ ಕೃತಿಗಳ ಸಂಗ್ರಹ), ಭಾರತೀಯ ವಿಚಾರ್ ಸಾಧ್ನಾ, ನಾಗ್ಪುರ್, ಸಂಪುಟ 3, ಪುಟ 33]

ಅವರ ಎರಡನೇ ಹೇಳಿಕೆ ಕೂಡ ಮಹತ್ವಪೂರ್ಣವಾಗಿದೆ, ಅದು ಹೀಗಿದೆ:

“ನಮ್ಮ ಕೆಲವು ಸ್ವಯಂಸೇವಕರು (ಕಾರ್ಯಕರ್ತರು) ರಾಜಕೀಯದಲ್ಲಿ ಕೆಲಸ ಮಾಡುತ್ತಿದ್ದಾರೆ ಎಂಬುದು ಕೂಡ ನಮಗೆ ಗೊತ್ತು. ಅವರು ಅಲ್ಲಿ ಅಗತ್ಯಕ್ಕೆ ತಕ್ಕಂತೆ ಬಹಿರಂಗ ಸಭೆ, ಮೆರವಣಿಗೆ ಮುಂತಾದವುಗಳನ್ನು ನಿರ್ವಹಿಸಬೇಕು, ಘೋಷಣೆಗಳನ್ನೂ ಕೂಗಬೇಕಾಗುತ್ತದೆ. ನಮ್ಮ ಕೆಲಸಗಳಲ್ಲಿ ಇವಾವುದಕ್ಕೂ ಅವಕಾಶವಿಲ್ಲ. ಆದರೆ, ನಟನಾದವನು ತಾನು ಒಪ್ಪಿಕೊಂಡ ಪಾತ್ರವನ್ನು ತನ್ನ ಸಾಮರ್ಥ್ಯಕ್ಕೆ ಅನುಗುಣವಾಗಿ ಅಭಿನಯಿಸಲೇಬೇಕಾಗುತ್ತದೆ. ಆದರೆ ಕೆಲವು ಬಾರಿ ನಮ್ಮ ಸ್ವಯಂಸೇವಕರು ನಮ್ಮ ಈ ಕೆಲಸಕ್ಕೆ ನಿರುಪುಯುಕ್ತರಾಗುವಷ್ಟು, ಅವರ ಹೃದಯದಲ್ಲಿ ಅರಳಿದ ಅತ್ಯುತ್ಸಾಹದಿಂದಾಗಿ ತಾವು ಒಪ್ಪಿಕೊಂಡ ಪಾತ್ರವನ್ನು ಮೀರಿ ಹೋಗುತ್ತಾರೆ. ಇದು ಒಳ್ಳೆಯದಲ್ಲ.” ನಿಷೇಧ

[ಈ ಮೇಲಿನ ಕೃತಿಯ ಸಂಪುಟ 4, ಪುಟ 4 ಮತ್ತು 5]

‘ನಟ’ರಾಗಿ ಅಥವಾ ನಿರ್ವಾಹಕರಾಗಿ ರಾಜಕೀಯ ಅಂಗಸಂಸ್ಥೆಗೆ ಎರವಲು ಹೋದ ಸ್ವಯಂಸೇವಕರು ಆರ್.ಎಸ್.ಎಸ್.ನ ತಾಳಕ್ಕೆ ಸರಿಯಾಗಿ ಕುಣಿಯಬೇಕು ಎಂದು ಗೋಲ್ವಾಲ್ಕರ್ ಈ ಮೇಲಿನ ಹೇಳಿಕೆಯಲ್ಲಿ ಉಲ್ಲೇಖಿಸುವುದನ್ನು ನಾವು ಕಾಣುತ್ತೇವೆ. 1951 ರಲ್ಲೇ ಸ್ಥಾಪನೆಯಾದ ತಮ್ಮ ರಾಜಕೀಯ ಅಂಗಸಂಸ್ಥೆಯಾದ ಜನಸಂಘ (ಬಿಜೆಪಿಯ ಹಿಂದಿನ ಅವತಾರ) ವನ್ನು ನಿಯಂತ್ರಿಸುವ ಉದ್ದೇಶದ ಬಗ್ಗೆ 1960 ರ ಮಾರ್ಚ್ನಲ್ಲಿ, ಅಂದರೆ 9 ವರ್ಷಗಳ ನಂತರ, ಅವರು ವಿಶದಪಡಿಸುತ್ತಿದ್ದಾರೆ ಎಂಬ ಅಂಶವನ್ನು ನಾವು ಮರೆಯಬಾರದು.

ಆರ್.ಎಸ್.ಎಸ್. ಗೆ ಬಲವಾದ ರಾಜಕೀಯ ಆಕಾಂಕ್ಷೆಗಳು ಹಾಗೂ ಹಂಚಿಕೆಗಳನ್ನು ಇವೆ ಎಂಬ ಅಂಶವನ್ನು ಅದು ತನ್ನ ಪ್ರಕಟಣೆಯಲ್ಲಿ ದೃಢೀಕರಿಸಿದೆ. ನವದೆಹಲಿಯ ಜಂಡೇವಾಲಾಂದಲ್ಲಿರುವ ಆರ್.ಎಸ್.ಎಸ್. ನ ಕೇಂದ್ರೀಯ ಪ್ರಕಾಶನ ಸಂಸ್ಥೆ, ಸುರುಚಿ ಪ್ರಕಾಶನದ ಅಡಿ ‘ಪರಮ್ ವೈಭವ್ ಕೆ ಪಾಥ್ ಪರ್’ (1997) ಎಂಬ ಪುಸ್ತಕದಲ್ಲಿ ತನ್ನ ವಿವಿಧ ಕಾರ್ಯಭಾರಗಳಿಗಾಗಿ ತಾನು ಸೃಷ್ಟಿಸಿರುವ 40 ಸಂಘಟನೆಗಳ ಬಗ್ಗೆ ಅದು ವಿವರಗಳನ್ನು ಪ್ರಕಟಿಸಿದೆ. ಬಿಜೆಪಿಯನ್ನು ಒಂದು ರಾಜಕೀಯ ಸಂಘಟನೆಯಾಗಿ ಮೂರನೆಯ ಸ್ಥಾನದಲ್ಲಿ ಇರಿಸಲಾಗಿದೆ; ಅದರೊಂದಿಗೆ ಎಬಿವಿಪಿ (ಅಖಿಲ ಭಾರತ ವಿದ್ಯಾರ್ಥಿ ಪರಿಷತ್), ಹಿಂದೂ ಜಾಗರಣ ಮಂಚ್, ವಿಶ್ವ ಹಿಂದೂ ಪರಿಷತ್ (ವಿಹೆಚ್‌ಪಿ), ಸ್ವದೇಶಿ ಜಾಗರಣ ಮಂಚ್ ಮತ್ತು ಸಂಸ್ಕಾರ ಭಾರತಿ ಮುಂತಾದ ಹೆಸರುಗಳ ಸಂಘಟನೆಗಳನ್ನೂ ಅದು ಹೊಂದಿದೆ. ಆ ಪುಸ್ತಕದ ಮುನ್ನುಡಿಯು ಹೀಗೆ ಹೇಳುತ್ತದೆ:

“ಸ್ವಯಂಸೇವಕರ (ಆರ್‌ಎಸ್‌ಎಸ್‌ನ ಕಾರ್ಯಕರ್ತರು) ವಿವಿಧ ರೀತಿಯ ಚಟುವಟಿಕೆಗಳನ್ನು ತಿಳಿದುಕೊಳ್ಳದೇ ಆರ್‌ಎಸ್‌ಎಸ್‌ನ ಪರಿಚಯ ಪೂರ್ಣಗೊಳ್ಳುವುದಿಲ್ಲ. ಇದನ್ನು ಮನದಲ್ಲಿಟ್ಟುಕೊಂಡೇ ಸ್ವಯಂಸೇವಕರ ನಾನಾ ಬಗೆಯ ಚಟುವಟಿಕೆಗಳ ಬಗ್ಗೆ ಸಂಕ್ಷಿಪ್ತ ಮಾಹಿತಿಯನ್ನು ಈ ಪುಸ್ತಕದಲ್ಲಿ ಒದಗಿಸಲಾಗಿದೆ. ಈ ಪುಸ್ತಕವು 1996 ರವರೆಗಿನ ಸಂಘಟನಾ ಸ್ಥಿತಿಗತಿಯನ್ನು ಒಳಗೊಂಡಿದೆ. . .ಸ್ವಯಂಸೇವಕರೊಂದಿಗೆ ಆರ್‌ಎಸ್‌ಎಸ್‌ನ ಬಗ್ಗೆ ತಿಳಿದುಕೊಳ್ಳಬೇಕು ಎಂದು ಬಯಸುವವರಿಗೆ ಈ ಪುಸ್ತಕವು ಹೆಚ್ಚು ಉಪಯುಕ್ತವಾಗುತ್ತದೆ ಎಂದು ನಾವು ಭಾವಿಸುತ್ತೇವೆ,”

[ಸಪ್ರೆ, ಎಸ್‌ಡಿ, ಪರಮ್ ವೈಭವ್ ಕೆ ಪಾಥ್ ಪರ್, ಸುರುಚಿ, ದೆಹಲಿ, 1997, ಪುಟ 7.]

ಹಿಂದೂ ರಾಷ್ಟ್ರವನ್ನು ಸ್ಥಾಪಿಸಲು ಆರ್‌ಎಸ್‌ಎಸ್ ಬದ್ಧವಾಗಿದೆ

ಸರ್ಕಾರಿ ನೌಕರರು ಆರ್‌ಎಸ್‌ಎಸ್ ಶಾಖೆಗಳನ್ನು ಸೇರಲು ಅವಕಾಶ ನೀಡಿದರೆ ಪ್ರತಿಯೊಂದು ಶಾಖೆಯೂ ಕಡ್ಡಾಯವಾಗಿ ಈ ಕೆಳಗಿನ ಪ್ರಾರ್ಥನೆಯನ್ನು ಹೇಳಬೇಕು ಮತ್ತು ಪ್ರತಿಜ್ಞೆಯನ್ನು ಕೈಗೊಳ್ಳಬೇಕು:

ಪ್ರಾರ್ಥನೆ

“ವಾತ್ಸಲ್ಯಪೂರ್ಣ ಮಾತೃಭೂಮಿಯೇ, ಸದಾ ನಿನಗೆ ತಲೆ ಬಾಗುತ್ತೇನೆ, ಓ ಹಿಂದೂಗಳ ನಾಡೇ, ನೆಮ್ಮದಿಯಿಂದ ನನ್ನನ್ನು ಪೋಷಿಸಿದ್ದೀಯೆ, ಓ ಪವಿತ್ರ ನಾಡೇ, ಒಳ್ಳೆಯದರ ಮಹಾನ್ ಸೃಷ್ಟಿಕರ್ತನೇ, ನನ್ನ ಈ ದೇಹವು ನಿನಗಾಗಿ ಮುಡಿಪಾಗಿದೆ, ಮತ್ತೆ ಮತ್ತೆ ನಿನಗೆ ತಲೆಬಾಗುತ್ತೇನೆ, ಓ ಸರ್ವಶಕ್ತ ದೇವರೇ, ಹಿಂದೂ ರಾಷ್ಟ್ರದ ಅವಿಭಾಜ್ಯ ಅಂಗವಾದ ನಾವು ಭಯಭಕ್ತಿಯಿಂದ ನಮಿಸುತ್ತೇವೆ, ನಿನಗಾಗಿ ನಮ್ಮ ಟೊಂಕ ಕಟ್ಟಿ ನಿಲ್ಲುತ್ತೇವೆ, ಅದು ನೆರವೇರುವಂತಾಗಲು ನೀನು ನಮ್ಮನ್ನು ಹರಸು.” ನಿಷೇಧ

[ಆರ್‌ಎಸ್‌ಎಸ್, ಶಾಖಾ ದರ್ಶಿಕ, ಜ್ಞಾನ ಗಂಗಾ, ಜೈಪುರ, 1997, ಪುಟ 1]

ಪ್ರತಿಜ್ಞೆ

“ಸರ್ವಶಕ್ತನಾದ ದೇವರು ಮತ್ತು ನನ್ನ ಪೂರ್ವಿಕರ ಎದುರು, ನಾನು ಅತ್ಯಂತ ಹೃತ್ಪೂರ್ವಕವಾಗಿ ಪ್ರತಿಜ್ಞೆ ಮಾಡುತ್ತೇನೆ, ನನ್ನ ಪವಿತ್ರ ಹಿಂದೂ ಧರ್ಮ, ಹಿಂದೂ ಸಮಾಜ, ಮತ್ತು ಹಿಂದೂ ಸಂಸ್ಕೃತಿಯ ಬೆಳವಣಿಗೆಯನ್ನು ಉತ್ತೇಜಿಸುವ ಮೂಲಕ ಭರತವರ್ಷದ ಸರ್ವಾಂಗೀಣ ಔನ್ನತ್ಯವನ್ನು ಸಾಧಿಸುವ ಸಲುವಾಗಿ ನಾನು ಆರ್‌ಎಸ್‌ಎಸ್‌ನ ಸದಸ್ಯನಾಗುತ್ತಿದ್ದೇನೆ. ಸಂಘದ ಕೆಲಸವನ್ನು ಪ್ರಾಮಾಣಿಕವಾಗಿ, ನಿಸ್ವಾರ್ಥತೆಯಿಂದ ನನ್ನ ಶಕ್ತಿಮೀರಿ ನಿರ್ವಹಿಸುತ್ತೇನೆ, ಮತ್ತು ನನ್ನ ಬದುಕಿನುದ್ದಕ್ಕೂ ಈ ಧ್ಯೇಯಕ್ಕೆ  ನಿಷ್ಠನಾಗಿರುತ್ತೇನೆ. ಭರತ್ ಮಾತಾ ಕಿ ಜೈ.”

[ಅದೇ ಪುಸ್ತಕದ ಪುಟ 66]

ಆದ್ದರಿಂದ ಆರ್‌ಎಸ್‌ಎಸ್‌ಗೆ ಸೇರಿದ ಸರ್ಕಾರಿ ನೌಕರನು ಜಾತ್ಯತೀತ ಪ್ರಜಾಸತ್ತಾತ್ಮಕ ಭಾರತಕ್ಕೆ ನಿಷ್ಠನಾಗಿರುತ್ತೇನೆ ಎಂದು ತಾನು ಸೇವೆಗೆ ಸೇರುವಾಗ ಮಾಡಿದ ಪ್ರಮಾಣ ವಚನವನ್ನು ಬುಡಮೇಲು ಮಾಡಿ ಹಿಂದೂ ಧಾರ್ಮಿಕ ರಾಷ್ಟ್ರಕ್ಕೆ ಬದ್ಧನಾಗಬೇಕಾಗುತ್ತದೆ.

ರಾಷ್ಟ್ರ ಧ್ವಜವನ್ನು ಆರ್‌ಎಸ್‌ಎಸ್ ಅವಹೇಳನ ಮಾಡುತ್ತದೆ

ನಮ್ಮ ಜಾತ್ಯತೀತ ಪ್ರಜಾಸತ್ತಾತ್ಮಕ ರಾಜ್ಯವ್ಯವಸ್ಥೆಯ ಎರಡು ಮಹಾನ್ ಕುರುಹುಗಳಾದ ತ್ರಿವರ್ಣ ಧ್ವಜ ಹಾಗೂ ಭಾರತೀಯ ಸಂವಿಧಾನವನ್ನು ಹಿಂದೂರಾಷ್ಟ್ರ ನಿರ್ಮಾಣದ ಬದ್ಧತೆಯ ಪರಿಣಾಮದಿಂದಾಗಿ ಆರ್‌ಎಸ್‌ಎಸ್ ದ್ವೇಷಿಸುತ್ತದೆ.

ಆರ್‌ಎಸ್‌ಎಸ್ 1925 ರಲ್ಲಿ ಸ್ಥಾಪನೆಯಾದಾಗಿನಿಂದಲೂ ಭಾರತವು ಹಿಂದೂ ರಾಷ್ಟ್ರವಾಗಬೇಕು ಮತ್ತು ಭಗವಾ ಧ್ವಜ ಮಾತ್ರವೇ ಅದರ ರಾಷ್ಟ್ರ ಧ್ವಜವಾಗಿರಬೇಕು ಎಂದು ಒತ್ತಾಯಿಸುತ್ತಲೇ ಬಂದಿದೆ. ಸಂವಿಧಾನ ರೆಚನಾ ಸಭೆಯು ತ್ರಿವರ್ಣ ಧ್ವಜವನ್ನು ರಾಷ್ಟ್ರ ಧ್ವಜವಾಗಿ ಅಂಗೀಕರಿಸಿದಾಗ ದೆಹಲಿಯ ಕೆಂಪು ಕೋಟೆಯ ಮೇಲೆ ಭಗವಾ ಧ್ವಜವನ್ನೇ ಹಾರಿಸಬೇಕೆಂದು ಒತ್ತಾಯಿಸಿತು ಮತ್ತು ತ್ರಿವರ್ಣ ಧ್ವಜದ ಆಯ್ಕೆಯನ್ನು ಈ ಕೆಳಗಿನ ಪದಗಳಲ್ಲಿ ಬಹಿರಂಗವಾಗಿ ಅವಹೇಳನ ಮಾಡಿದೆ:

“ವಿಧಿಯಾಟದಿಂದ ಅಧಿಕಾರಕ್ಕೆ ಬಂದಿರುವ ಜನ ನಮ್ಮ ಕೈಗೆ ತ್ರಿವರ್ಣ ಧ್ವಜವನ್ನು ಕೊಟ್ಟಿರಬಹುದು, ಆದರೆ ಅದನ್ನು ಎಂದಿಗೂ ಹಿಂದೂಗಳು ಗೌರವಿಸುವುದಿಲ್ಲ ಮತ್ತು ಒಪ್ಪಿಕೊಳ್ಳುವುದಿಲ್ಲ. ಮೂರು ಎಂಬ ಪದವೇ ಹಾನಿಕಾರಕವಾದದ್ದು, ಮತ್ತು ಮೂರು ಬಣ್ಣಗಳನ್ನುಳ್ಳ ಧ್ವಜವು ಖಂಡಿತವಾಗಿಯೂ ಮಾನಸಿಕವಾಗಿ ಅತ್ಯಂತ ದುಷ್ಟ ಪರಿಣಾಮವನ್ನು ಬೀರುತ್ತದೆ ಮತ್ತು ಅದು ದೇಶಕ್ಕೆ ಅಪಚಾರವೆಸಗುತ್ತದೆ.”

[‘ಮಿಸ್ಟರಿ ಬಿಹೈಂಡ್ ದಿ ಭಗ್ವಾ ಧ್ವಜ್’ ಲೇಖನ – ಆರ್ಗನೈಸರ್ ನಲ್ಲಿ (ಆರ್‌ಎಸ್‌ಎಸ್‌ನ ಇಂಗ್ಲಿಷ್ ಪತ್ರಿಕೆ), ಆಗಸ್ಟ್ 14, 1947]

ಜಾತ್ಯತೀತ-ಪ್ರಜಾಸತ್ತಾತ್ಮಕ ಭಾರತೀಯ ಸಂವಿಧಾನದ ಸ್ಥಾನದಲ್ಲಿ ಮನುಸ್ಮೃತಿಯನ್ನು ತರುವುದು ಆರ್‌ಎಸ್‌ಎಸ್‌ನ ಗುರಿಯಾಗಿದೆ

ಭಾರತೀಯ ಸಂವಿಧಾನಕ್ಕೆ ಆರ್‌ಎಸ್‌ಎಸ್ ಎಷ್ಟು ನಿಷ್ಠವಾಗಿದೆ ಎನ್ನುವುದನ್ನು ಅದರ ಪವಿತ್ರ ಗ್ರಂಥವಾದ ‘ಬಂಚ್ ಆಫ್ ಥಾಟ್ಸ್’ (ಕನ್ನಡದಲ್ಲಿ ‘ಚಿಂತನ ಗಂಗಾ’) ಪುಸ್ತಕದಲ್ಲಿ ಎಂ.ಎಸ್.ಗೋಲ್ವಾಲ್ಕರ್ ಅವರ ಈ ಹೇಳಿಕೆಯಿಂದ ಸ್ಪಷ್ಟವಾಗುತ್ತದೆ:

“ನಮ್ಮ ಸಂವಿಧಾನವು ಪಾಶ್ಚಿಮಾತ್ಯ ದೇಶಗಳ ಹಲವಾರು ಸಂವಿಧಾನಗಳಿಂದ ಆಯ್ದ ನಾನಾ ನಿಬಂಧನೆಗಳನ್ನು ಒಂದುಗೂಡಿಸಿದ ತೊಡಕಾಗಿರುವ ಹಾಗೂ ಸಾಂಗತ್ಯವಿಲ್ಲದ ಕೇವಲ ಒಂದು ಗ್ರಂಥವಷ್ಟೆ. ಅದರಲ್ಲಿ ಖಂಡಿತವಾಗಿ ನಮ್ಮದು ಎನ್ನುವ ಏನೂ ಇಲ್ಲ. ಅದರ ಮಾರ್ಗದರ್ಶಿ ತತ್ವಗಳಲ್ಲಿ ನಮ್ಮ ರಾಷ್ಟ್ರೀಯ ಧ್ಯೇಯೋದ್ದೇಶಗಳು ಮತ್ತು ಬದುಕಿನಲ್ಲಿನ ನಮ್ಮ ಪ್ರಧಾನ ಭಾವನೆಗಳ ಬಗ್ಗೆ ಒಂದು ಶಬ್ದವೂ ಇಲ್ಲ.”

[ಗೋಲ್ವಾಲ್ಕರ್, ಎಂ.ಎಸ್., ಬಂಚ್ ಆಫ್ ಥಾಟ್ಸ್, ಸಾಹಿತ್ಯöಸಿಂಧು, ಬೆಂಗಳೂರು 1996, ಪುಟ 238]

ನಿಜ ಹೇಳಬೇಕೆಂದರೆ, ನಮ್ಮ ಸಂವಿಧಾನದ ಬದಲು ಮನುಸ್ಮೃತಿಯನ್ನು ಜಾರಿಗೆ ತರಬೇಕು ಎನ್ನುವುದು ಆರ್‌ಎಸ್‌ಎಸ್‌ನ ಬಯಕೆಯಾಗಿತ್ತು. ಆ ಮನುಸ್ಮೃತಿಯಲ್ಲಿ ಅಸ್ಪೃಶ್ಯರು ಹಾಗೂ ಮಹಿಳೆಯರ ಕುರಿತು ಅವಹೇಳನಕಾರಿಯಾಗಿ ಹಾಗೂ ಅಮಾನವೀಯವಾಗಿ ವ್ಯಾಖ್ಯಾನ ಮಾಡಲಾಗಿದೆ. ಭಾರತದ ಸಂವಿಧಾನ ರಚನಾ ಸಭೆಯು  ಭಾರತೀಯ  ಸಂವಿಧಾನವನ್ನು 1949 ರ ನವಂಬರ್ 6 ರಂದು  ಅಂತಿಮಗೊಳಿಸಿದಾಗ ಆರ್‌ಎಸ್‌ಎಸ್ ತನ್ನ ಪತ್ರಿಕೆ ಆರ್ಗನೈಸರ್ ನ ಸಂಪಾದಕೀಯದಲ್ಲ್ಲಿ ತಕರಾರು ಎತ್ತಿತ್ತು:

“ನಮ್ಮ ಸಂವಿಧಾನದಲ್ಲಿ ಪ್ರಾಚೀನ ಭಾರತದಲ್ಲಿನ ಅಸಾಧಾರಣ ಸಾಂವಿಧಾನಿಕ ಬೆಳವಣಿಗೆಯ ಬಗ್ಗೆ ಚಕಾರ ಶಬ್ದವಿಲ್ಲ. ಮನುವಿನ ಕಾನೂನುಗಳನ್ನು ಪರ್ಶಿಯಾದ ಸೊಲೊನ್ ಅಥವಾ ಸ್ಪಾರ್ಟಾದ ಲೈಕರ್ಗಸ್ ಗಿಂತ ಬಹಳ ಮುಂಚೆಯೇ ಬರೆಯಲಾಗಿತ್ತು. ಇವತ್ತಿಗೂ ಕೂಡ ಮನುಸ್ಮೃತಿಯ ಬಗ್ಗೆ ಇಡೀ ಜಗತ್ತೇ ಬೆರಗಾಗಿ ನೋಡುತ್ತಿದೆ ಮತ್ತು ಸ್ವಾಭಾವಿಕವಾದ ವಿಧೇಯತೆಯನ್ನು ಹಾಗೂ ಅನುಸರಣೆಯನ್ನು ತೋರುತ್ತಿದ್ದಾರೆ. ಆದರೆ ನಮ್ಮ ಸಂವಿಧಾನದ ಪಂಡಿತರಿಗೆ ಅದು ಏನೂ ಅಲ್ಲ.”

ಬಹಿರಂಗವಾಗಿ ತ್ರಿವರ್ಣ ಧ್ವಜವನ್ನು ಅವಹೇಳನ ಮಾಡುವ ಮತ್ತು ನಮ್ಮ ಸಂವಿಧಾನದ ಬಗ್ಗೆ ಗೌರವವೇ ಇಲ್ಲದ ಧೋರಣೆ ಹೊಂದಿರುವ ಆರ್‌ಎಸ್‌ಎಸ್‌ಗೆ ನಮ್ಮ ಸರ್ಕಾರಿ ನೌಕರರು ಸದಸ್ಯರಾಗಿ ಸೇರಿದರೆ ನಮ್ಮ ಜಾತ್ಯತೀತ ಪ್ರಜಾಸತ್ತಾತ್ಮಕ ಭಾರತದ ಅಂತ್ಯ ಬಹಳ ಬೇಗ ಬರುತ್ತದೆ ಎಂಬುದರ ಬಗ್ಗೆ ಅನುಮಾನವೇ ಬೇಡ.

ಪ್ರಜಾಪ್ರಭುತ್ವ ವಿರೋಧಿ

ಭಾರತವು ನಿರಂಕುಶ ಪ್ರಭುತ್ವದ ಅಡಿಯಲ್ಲಿ ಇರಬೇಕು ಎಂದು ಸತತವಾಗಿ ಒತ್ತಾಯಿಸುತ್ತಿರುವ ಆರ್‌ಎಸ್‌ಎಸ್ ಪ್ರಜಾಪ್ರಭುತ್ವದ ಪರಿಕಲ್ಪನೆಗೆ ವಿರೋಧಿಯಾಗಿದೆ. 1940 ರಲ್ಲಿ 1350 ಉನ್ನತ ಮಟ್ಟದ ಆರ್‌ಎಸ್‌ಎಸ್ ಕಾರ್ಯಕರ್ತರನ್ನು ಉದ್ದೇಶಿಸಿ ಮದ್ರಾಸಿನಲ್ಲಿ ಮಾತನಾಡಿದ ಗೋಲ್ವಾಲ್ಕರ್ ಹೀಗೆ ಘೋಷಿಸಿದ್ದಾರೆ: “ಒಂದು ಧ್ವಜ, ಒಬ್ಬ ನಾಯಕ ಮತ್ತು ಒಂದು ಸಿದ್ಧಾಂತದಿಂದ ಪ್ರೇರಿತವಾದ ಆರ್‌ಎಸ್‌ಎಸ್ ಈ ಮಹಾನ್ ನಾಡಿನ ಪ್ರತಿಯೊಂದು ಮೂಲೆ ಮೂಲೆಯಲ್ಲೂ ಹಿಂದುತ್ವದ ಜ್ಯೋತಿಯನ್ನು ಬೆಳಗಿಸಲಿದೆ.” [ಶ್ರೀ ಗುರೂಜಿ ಸಮಗ್ರ ದರ್ಶನ್, ಸಂಪುಟ 1, ಪುಟ 11]

ಒಂದು ಧ್ವಜ, ಒಬ್ಬ ನಾಯಕ ಮತ್ತು ಒಂದು ಸಿದ್ಧಾಂತದ ಘೋಷಣೆಯನ್ನು ನೇರವಾಗಿ ಯೂರೋಪಿನ ನಾಜಿ ಹಾಗೂ ಫ್ಯಾಸಿಸ್ಟ್ ಪಕ್ಷಗಳ ಕಾರ್ಯಕ್ರಮದಿಂದ ಎರವಲು ಪಡೆಯಲಾಗಿದೆ. ಆದ್ದರಿಂದ, ಆರ್‌ಎಸ್‌ಎಸ್ ರಥವನ್ನು ಸೇರುವ ಎಲ್ಲರೂ ಸಹಜವಾಗಿಯೇ ಪ್ರಜಾಸತ್ತಾತ್ಮಕ ಭಾರತದ ವಿರುದ್ಧವಾಗಿರಬೇಕಾಗುತ್ತದೆ. ನಿಷೇಧ

ಒಕ್ಕೂಟವಾದದ ವಿರೋಧಿ

ಭಾರತೀಯ ರಾಜ್ಯವ್ಯವಸ್ಥೆಯ ಮೂಲ ಲಕ್ಷಣವಾಗಿರುವ ಸಂವಿಧಾನದ ಒಕ್ಕೂಟ ಸಂರಚನೆಗೆ ಕೂಡ ಆರ್‌ಎಸ್‌ಎಸ್ ತದ್ವಿರುದ್ಧವಾಗಿದೆ. 1961 ರಲ್ಲಿ ನಡೆದ ರಾಷ್ಟ್ರೀಯ ಸಮಗ್ರತಾ ಮಂಡಳಿಯ (ನ್ಯಾಷನಲ್ ಇಂಟೆಗ್ರೇಷನ್ ಕೌನ್ಸಿಲ್) ಮೊದಲ ಅಧಿವೇಶನಕ್ಕೆ ಗೋಲ್ವಾಲ್ಕರ್ ಅವರು ಕಳಿಸಿದ ಸಂದೇಶ ಆರ್‌ಎಸ್‌ಎಸ್ ನ ಆ ಧೋರಣೆಯನ್ನು ಸ್ಥಿರೀಕರಿಸುತ್ತದೆ. ಅದು ಹೀಗಿದೆ:

“ಈಗಿನ ಸರ್ಕಾರದ ಒಕ್ಕೂಟ ಸ್ವರೂಪವು ಪ್ರತ್ಯೇಕತಾವಾದವನ್ನು ಹುಟ್ಟುಹಾಕುತ್ತದೆ ಅಷ್ಟೇ ಅಲ್ಲ ಅದು ಅಂತಹ ಭಾವನೆಗಳನ್ನು ಪುಷ್ಟೀಕರಿಸುತ್ತದೆ; ಒಂದು ಅರ್ಥದಲ್ಲಿ ಅದು ಒಂದು ದೇಶ ಎನ್ನುವ ವಾಸ್ತವವನ್ನೇ ಗುರುತಿಸಲು ನಿರಾಕರಿಸುತ್ತದೆ ಮತ್ತು ಅದು ಅದನ್ನು ನಾಶಪಡಿಸುತ್ತದೆ. ಅದನ್ನು ಸಂಪೂರ್ಣವಾಗಿ ಬುಡಮಟ್ಟ ಕಿತ್ತುಹಾಕಬೇಕು, ಸಂವಿಧಾನವನ್ನು ಶುದ್ಧೀಕರಿಸಬೇಕು, ಮತ್ತು ಏಕೀಕೃತ ಸ್ವರೂಪದ ಸರ್ಕಾರವನ್ನು ಸ್ಥಾಪಿಸಬೇಕು.” [ಅದೇ ಈ ಮೇಲಿನ ಗ್ರಂಥದ, ಸಂಪುಟ 3, ಪು 128.] ನಿಷೇಧ

ಭಾರತದ ಒಕ್ಕೂಟ ಸ್ವರೂಪಕ್ಕೆ ಬದ್ಧವಾಗಿರಬೇಕಾದ ಅಧಿಕಾರಶಾಹಿಯು ಆರ್‌ಎಸ್‌ಎಸ್ ನ ಆಶಯಕ್ಕೆ ಅನುಸಾರವಾಗಿ ಅದನ್ನು ಧ್ವಂಸ ಮಾಡುವುದನ್ನು ಕಲ್ಪಿಸಿಕೊಳ್ಳಿ. ನಿಷೇಧ

ಗಾಂಧೀಜಿಯವರ ಹತ್ಯೆಯಲ್ಲಿ ಆರ್‌ಎಸ್‌ಎಸ್‌ನ ಪಾತ್ರ 

ಯಾವ ಸಂಘಟನೆಯು ರಾಷ್ಟ್ರಪಿತ ಮಹಾತ್ಮಾ ಗಾಂಧಿಯವರ ಹತ್ಯೆಗೆ ಮುಖ್ಯ ಕಾರಣ ಎಂದು ಸರ್ದಾರ್ ಪಟೇಲ್ ಅಂಥವರು ಹೇಳಿದ್ದರೋ ಅಂತಹ ಸಂಘಟನೆ ಸದಸ್ಯರಾಗಲು ಸರ್ಕಾರಿ ನೌಕರರಿಗೆ ಅನುಮತಿ ನೀಡುತ್ತಿರುವುದು ನಾಚಿಕೆಗೇಡಿನ ಸಂಗತಿ. ಭಾರತದ ಪ್ರಪ್ರಥಮ ಗೃಹ ಸಚಿವರಾಗಿದ್ದ ಸರ್ದಾರ್ ವಲ್ಲಭ ಭಾಯ್ ಪಟೇಲ್ ಅವರು ಜುಲೈ 18, 1948 ರಂದು ಹಿಂದೂ ಮಹಾಸಭಾದ ಪ್ರಮುಖ ಮುಂದಾಳು, ಶ್ಯಾಮಪ್ರಸಾದ್ ಮುಖರ್ಜಿಯವರಿಗೆ  ಹೀಗೆ ಬರೆದಿದ್ದರು:

“ಗಾಂಧೀಜಿಯವರ ಹತ್ಯೆ ಕುರಿತ ಪ್ರಕರಣವು ನ್ಯಾಯಾಲಯದಲ್ಲಿ ವಿಚಾರಣೆಯಲ್ಲಿರುವುದರಿಂದ ಅದರಲ್ಲಿ ಆರ್‌ಎಸ್‌ಎಸ್ ಮತ್ತು ಹಿಂದೂ ಮಹಾಸಭಾದ ಪಾಲ್ಗೊಳ್ಳುವಿಕೆಯ ಕುರಿತು ನಾನು ಏನನ್ನೂ ಹೇಳಬಯಸುವುದಿಲ್ಲ; ಆದರೆ ಈ ಎರಡೂ ಸಂಘಟನೆಗಳ, ಬಹಳ ಮುಖ್ಯವಾಗಿ ಮೊದಲನೇ ಸಂಘಟನೆಯ, ಚಟುವಟಿಕೆಗಳ ಪರಿಣಾಮವಾಗಿ, ಅಂತಹ ಭೀಕರ ದುರಂತವು ಸಂಭವಿಸಲು ಸಾಧ್ಯವಾಗುವಂತಹ ವಾತಾವರಣ ದೇಶದಲ್ಲಿ ಸೃಷ್ಟಿಯಾಗಿದೆ ಎಂದು ನಮ್ಮ ವರದಿಗಳು ಪುಷ್ಟೀಕರಿಸುತ್ತಿವೆ; ಹಿಂದೂ ಮಹಾಸಭಾದ ಉಗ್ರವಾದಿ ಪಂಗಡದವರು ಆ ಪಿತೂರಿಯಲ್ಲಿ ಒಳಗೊಂಡಿರುವ ಬಗ್ಗೆ ನನ್ನ ಮನಸ್ಸಿನಲ್ಲಿ ಯಾವ ಅನುಮಾನವೂ ಇಲ್ಲ. ಆರ್‌ಎಸ್‌ಎಸ್‌ನ ಚಟುವಟಿಕೆಗಳು ಸರ್ಕಾರ ಹಾಗೂ ಪ್ರಭುತ್ವದ ಅಸ್ತಿತ್ವಕ್ಕೇ ಭಾರಿ ಅಪಾಯವನ್ನು ಒಡ್ಡುತ್ತಿದೆ. ನಿಷೇಧದ ಹೊರತಾಗಿಯೂ ಅವುಗಳ ಚಟುವಟಿಕೆಗಳು ತಗ್ಗುತ್ತಿಲ್ಲ ಎಂದು ನಮ್ಮ ವರದಿಗಳು ಹೇಳುತ್ತಿವೆ. ವಾಸ್ತವದಲ್ಲಿ, ದಿನ ಕಳೆದಂತೆ ಆರ್‌ಎಸ್‌ಎಸ್ ಹೆಚ್ಚು ಹೆಚ್ಚು ಉದ್ದಟತನದಿಂದ ವರ್ತಿಸುತ್ತಿದೆ ಮತ್ತು ಸರ್ಕಾರವನ್ನು ಬುಡಮೇಲು ಮಾಡುವ ಚಟುವಟಿಕೆಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ತೊಡಗಿಕೊಂಡಿದೆ.” [ಸರ್ದಾರ್ ಪಟೇಲ್; 1945-1950ರ ಆಯ್ದ ಪತ್ರವ್ಯವಹಾರಗಳು, ಸಂಪುಟ 2, ಪತ್ರ 64 ರಲ್ಲಿ ಉಲ್ಲೇಖಿತ, ನವಜೀವನ್ ಪಬ್ಲಿಷಿಂಗ್ ಹೌಸ್, ಅಹಮದಾಬಾದ್, 1977, ಪುಟ 276-277.] ನಿಷೇಧ

ದೇಶಾದ್ಯಂತ ಕೋಮು ಗಲಭೆಗಳನ್ನು ಹುಟ್ಟುಹಾಕುವಲ್ಲೂ ಆರ್‌ಎಸ್‌ಎಸ್ ಪಾತ್ರ

ಭಾರತದ ವಿವಿಧ ಪ್ರದೇಶಗಳಲ್ಲಿ ಸಂಭವಿಸಿದ ಕೋಮು ಗಲಭೆಗಳಲ್ಲಿ ಆರ್‌ಎಸ್‌ಎಸ್ ಹಾಗೂ ಇತರ ಬಹುಸಂಖ್ಯಾತ ಕೋಮು ಸಂಘಟನೆಗಳ ಪಾತ್ರವಿರುವುದನ್ನು ಸರ್ಕಾರವು ನೇಮಿಸಿದ ನ್ಯಾಯಾಂಗ ತನಿಖಾ ಆಯೋಗಗಳು ದೃಢೀಕರಿಸಿವೆ. ಅಂತಹ ಕೆಲವು ಆಯೋಗಗಳ ವರದಿಯ ಸಾರಾಂಶ ಹೀಗಿವೆ:

1969 ರ ಅಹಮದಾಬಾದ್ ಗಲಭೆಯ ತನಿಖೆ ನಡೆಸಿದ ನ್ಯಾಯಮೂರ್ತಿ ಜಗಮೋಹನ್ ರೆಡ್ಡಿ ತನಿಖಾ ಆಯೋಗದ ವರದಿ ಸಾರಾಂಶ:

“ಗುಪ್ತಚರ ಇಲಾಖೆಯ ವೈಫಲ್ಯ ಹಾಗೂ ಗಲಭೆಯನ್ನು ಹತ್ತಿಕ್ಕುವಲ್ಲಿನ ಖಂಡನೀಯ ವೈಫಲ್ಯ ಮಾತ್ರವಲ್ಲದೇ ಅಲ್ಲಿ ಆ ಗಲಭೆಯಲ್ಲಿ ಕೆಲವು ಆರ್‌ಎಸ್‌ಎಸ್ ಹಾಗೂ ಜನಸಂಘದ ಮುಖಂಡರ ಸಕ್ರಿಯ ಪಾಲ್ಗೊಳ್ಳುವಿಕೆಯ ಸತ್ಯವನ್ನು ಆಯೋಗದಿಂದ ಉದ್ದೇಶಪೂರ್ವಕವಾಗಿ ಮುಚ್ಚಿಡುವ ಪ್ರಯತ್ನಗಳೂ ಆಗಿವೆ.” ನಿಷೇಧ

1970 ರ ಭಿವಂಡಿ, ಜಲಗಾಂವ್ ಮತ್ತು ಮಹಾಡ್ ಪಟ್ಟಣಗಳಲ್ಲಿನ ಕೋಮು ದೊಂಬಿಗಳ ತನಿಖೆ ನಡೆಸಿದ ನ್ಯಾಯಮೂರ್ತಿ ಡಿ.ಪಿ.ಮದನ್ ತನಿಖಾ ಆಯೋಗದ ವರದಿ ಸಾರಾಂಶ:

ಭಿವಂಡಿ, ಜಲಗಾಂವ್ ಮತ್ತು ಮಹಾಡ್ ಪಟ್ಟಣಗಳಲ್ಲಿ ಶಿವ ಜಯಂತಿ ಮೆರವಣಿಗೆಯನ್ನು ಉದ್ದೇಶಪೂರ್ವಕವಾಗಿ ಮುಸ್ಲಿಂ ಪ್ರಾಬಲ್ಯದ ಪ್ರದೇಶಗಳಲ್ಲಿ ಕೊಂಡೊಯ್ದು ಮಸೀದಿಗಳ ಮೇಲೆ ಗುಲಾಲನ್ನು ಎಸೆಯುವುದಲ್ಲದೇ ಪ್ರಚೋದನಕಾರಿ ಘೋಷಣೆಗಳನ್ನು ಕೂಗುವ ಮೂಲಕ ಮುಸ್ಲಿಮರನ್ನು ಕೆರಳಿಸುವ ಕೃತ್ಯಗಳನ್ನು ಎಸಗಲಾಗಿದೆ. ಠಾಣೆ ಜಿಲ್ಲಾ ಪೋಲಿಸ್ ಸೂಪರಿಂಟೆಂಡೆಂಟ್ ಅವರು ತಮ್ಮ ಮೇಲಿನವರಿಗೆ ಕಳಿಸಿದ ವರದಿಯ ಪ್ರಕಾರ “  . .ಹಿಂದೂ ಸಂಘಟನೆಯ, ವಿಶೇಷವಾಗಿ ಆರ್‌ಎಸ್‌ಎಸ್ ಮತ್ತು ಕೆಲವು ಪಿಎಸ್‌ಪಿಯ ಜನರು ಉಪದ್ರವ ಕೊಡಲೆಂದೇ ಅಲ್ಲಿ ಸೇರಿದ್ದರು. ಆ ಮೆರವಣಿಗೆಯಲ್ಲಿ ಅವರ ಪಾಲ್ಗೊಳ್ಳುವಿಕೆಯು ಶಿವಾಜಿ ಮಹಾರಾಜರಿಗೆ ಗೌರವ ಕೊಡಲೆಂದಲ್ಲ, ಬದಲಿಗೆ ತಮ್ಮ ಹಕ್ಕು ಸಾಧಿಸಿ, ಪ್ರಚೋದನೆ ನೀಡಿ ಮುಸ್ಲಿಮರನ್ನು ಕೆಣಕುವುದೇ ಆಗಿತ್ತು.” ನಿಷೇಧ

ಶಿವ ಜಯಂತಿ ಮೆರವಣಿಗೆಗಳು 1964 ರಲ್ಲೇ ಪ್ರಾರಂಭವಾಗಿದ್ದರೂ, 1970 ರಲ್ಲಿ ಮೊದಲ ಬಾರಿಗೆ ಸುತ್ತಮುತ್ತಲ ಹಳ್ಳಿಗಳ ಜನರನ್ನು ಈ ಮೆರವಣಿಗೆಗೆ ಅಣಿನೆರೆಸಲಾಗಿತ್ತು. ಜನಸಂಘದ ಅಂಗ ಸಂಸ್ಥೆಯಾದ ರಾಷ್ಟ್ರೀಯ ಉತ್ಸವ ಮಂಡಲಿಯು (ಆರ್‌ಯುಎಂ) ಮೆರವಣಿಗೆಯನ್ನು ಸಂಘಟಿಸಿತ್ತು. ಹಳ್ಳಿಗರನ್ನು ಹೆಚ್ಚಿನ ಸಂಖ್ಯೆಯಲ್ಲಿ ಸಂಘಟಿಸುವ ಉದ್ದೇಶವು ಮುಸ್ಲಿಮರನ್ನು ಬೆದರಿಸುವುದಾಗಿತ್ತು. ಅವರು ಕೈಯಲ್ಲಿ ಭಗವಾ ಧ್ವಜ ಕಟ್ಟಿದ್ದ ಲಾಠಿಗಳನ್ನು ಹಿಡಿದಿದ್ದರು ಮತ್ತು ಆ ಮೂರೂ ಸಂಘಟನೆಗಳ – ಜನಸಂಘ, ಆರ್‌ಯುಎಂ ಮತ್ತು ಎಸ್‌ಎಸ್ – ಬ್ಯಾನರನ್ನು ಎತ್ತಿ ಹಿಡಿದುಕೊಂಡಿದ್ದರು. ಮುಸ್ಲಿಂ ವಿರೋಧಿ ಉದ್ರೇಕಕಾರಿ ಘೋಷಣೆಗಳನ್ನು ಕೂಗುತ್ತಿದ್ದರು. ಬಂಗಡ್ ಗಲ್ಲಿಯ ಮೋತಿ ಮಸೀದಿ ಹಾಗೂ ಹೈದರಿ ಮಸೀದಿಯ ಮೇಲೆ ಆಕ್ರಮಣಕಾರಿಯಾಗಿ ಗುಲಾಲನ್ನು ಎಸೆಯುತ್ತಿದ್ದಾಗ ಪೋಲಿಸರು ಜಡಭರತರಂತೆ ನಿಂತಿದ್ದರು.

1971 ರ ತೆಲಿಶೆರಿ ಗಲಭೆ ತನಿಖೆ ನಡೆಸಿದ ನ್ಯಾಯಮೂರ್ತಿ ಜೋಸೆಫ್ ವಿದ್ಯಾದಿಲ್ ತನಿಖಾ ಆಯೋಗದ ವರದಿ ಸಾರಾಂಶ

ತೆಲಿಶೆರಿಯಲ್ಲಿ ಹಿಂದೂಗಳು ಹಾಗೂ ಮುಸ್ಲಿಮರು ಶತಮಾನಗಳ ಕಾಲ ಅಣ್ಣತಮ್ಮಂದಿರಂತೆ ಉತ್ತಮ ಬಾಂಧವ್ಯದಿಂದ ಬದುಕು ನಡೆಸುತ್ತಿದ್ದರು. ‘ಮೋಪ್ಲ ದಂಗೆ’ ಕೂಡ ಆ ಸಮುದಾಯಗಳ ನಡುವಿನ ಬಾಂಧವ್ಯವನ್ನು ಕೆಡಿಸಿರಲಿಲ್ಲ. ಆರ್‌ಎಸ್‌ಎಸ್ ಮತ್ತು ಜನಸಂಘವು ತಮ್ಮ ಘಟಕಗಳನ್ನು ಆರಂಭ ಮಾಡಿ ಚಟುವಟಿಕೆಗಳನ್ನು ಶುರುಮಾಡಿದ ನಂತರ ಪರಿಸ್ಥಿತಿ ಬದಲಾಯಿತು. ಎಲ್ಲಿಯತನಕ ಮುಸ್ಲಿಮರು ತಮ್ಮ ಪ್ರತ್ಯೇಕತಾವಾದಿ ಧೋರಣೆಯನ್ನು ಹೊಂದಿರುತ್ತಾರೋ ಮತ್ತು ಭಾರತೀಯ ರಾಷ್ಟ್ರೀಯ ಬದುಕಿನ ಮುಖ್ಯವಾಹಿನಿಯೊಂದಿಗೆ ಸೇರುವುದಿಲ್ಲವೋ ಅಲ್ಲಿತನಕ ಈ ದೇಶದಲ್ಲಿ ಕೋಮು ಸಾಮರಸ್ಯ ಸಾಧ್ಯವಿಲ್ಲ ಎಂಬುದು ಆರ್‌ಎಸ್‌ಎಸ್‌ನ ವಾದ. ಭಾರತದ ಕೋಮು ಗಲಭೆಗಳಿಗೆ ಸರಳ ಪರಿಹಾರವನ್ನು ಗುರೂಜಿ ಗೋಲ್ವಾಲ್ಕರ್ ಸೂಚಿಸಿದ್ದರು: “ಮುಸ್ಲಿಮರು ರಾಮನನ್ನು ತಮ್ಮ ಮಹಾಪುರುಷ ಎಂದು ಭಾವಿಸಿದರೆ ಕೋಮು ಸಮಸ್ಯೆಗಳು ತಾನೇ ತಾನಾಗಿ ಮಾಯವಾಗುತ್ತವೆ.” (ಆರ್ಗನೈಸರ್, ಜೂನ್ 20, 1971). ಆರ್‌ಎಸ್‌ಎಸ್‌ನ ಈ ಧೋರಣೆಯು ಮುಸ್ಲಿಮರನ್ನು ತಮ್ಮದೇ ಆದ ಒಂದು ಕೋಮುವಾದಿ ಸಂಘಟನೆಯ ಕಡೆ ಹೋಗುವಂತೆ ಮಾಡಿತು. ನಿಷೇಧ

1982 ರ ಕನ್ಯಾಕುಮಾರಿ ಗಲಭೆಯ ತನಿಖೆ ನಡೆಸಿದ ನ್ಯಾಯಮೂರ್ತಿ ವೇಣುಗೋಪಾಲ್ ತನಿಖಾ ಆಯೋಗದ ವರದಿ ಸಾರಾಂಶ (ಹಿಂದೂಗಳು ಹಾಗೂ ಕ್ರಿಶ್ಚಿಯನ್ನರ ನಡುವೆ ದೀರ್ಘಕಾಲದ ಮುಖಾಮುಖಿ)

ಆರ್‌ಎಸ್‌ಎಸ್ ಒಂದು ತೀವ್ರವಾದಿ ಹಾಗೂ ಆಕ್ರಮಣಕಾರಿ ಧೋರಣೆಯನ್ನು ತಳೆಯುತ್ತದೆ ಮತ್ತು ಅಲ್ಪಸಂಖ್ಯಾತರ ವಿರುದ್ಧ ಹಿಂದೂಗಳ ಹಕ್ಕುಗಳನ್ನು ರಕ್ಷಿಸುವ ವೀರಯೋಧರು ತಾವು ಎಂದು ಹೇಳಿಕೊಳ್ಳುತ್ತದೆ. ಅಲ್ಪಸಂಖ್ಯಾತರಿಗೆ ತಮ್ಮ ಸ್ಥಾನ ಏನು ಎಂಬುದನ್ನು ಕಲಿಸಬೇಕು ಮತ್ತು ಅವರು ಅದಕ್ಕೆ ಒಪ್ಪದಿದ್ದರೆ ಅದನ್ನು ನಾವು ತೋರಿಸಬೇಕು ಎಂಬುದು ಆರ್‌ಎಸ್‌ಎಸ್ ನ ನಿಲುವು. ಕೋಮು ಹಿಂಸೆಯನ್ನು ಪ್ರಚೋದಿಸುವ ಆರ್‌ಎಸ್‌ಎಸ್‌ನ ವಿಧಿ ವಿಧಾನಗಳು ಹೀಗಿವೆ:

ಎ) ಕ್ರಿಶ್ಚಿಯನ್ನರು ನಮ್ಮ ದೇಶಕ್ಕೆ ನಿಷ್ಠರಾಗಿಲ್ಲ ಎಂದು ಪ್ರಚಾರ ಮಾಡುವ ಮೂಲಕ ಬಹುಸಂಖ್ಯಾತ ಸಮುದಾಯದವರಲ್ಲಿ ಕೋಮು ಭಾವನೆಗಳನ್ನು ಬೆಳೆಸುತ್ತದೆ;

ಬಿ) ಅಲ್ಪಸಂಖ್ಯಾತರ ಜನಸಂಖ್ಯೆ ಹೆಚ್ಚಾಗುತ್ತಿದೆ ಮತ್ತು ಹಿಂದೂಗಳ ಜನಸಂಖ್ಯೆ ಕಡಿಮೆಯಾಗುತ್ತಿದೆ ಎಂದು ಬಹುಸಂಖ್ಯಾತ ಸಮುದಾಯದವರಲ್ಲಿ ಭಯ ಹೆಚ್ಚಿಸುವುದು;

ಸಿ) ಆಡಳಿತದಲ್ಲಿ ಸೇರಿಕೊಳ್ಳುವುದು ಮತ್ತು ನಾಗರಿಕ ಸೇವೆ ಹಾಗೂ ಪೋಲಿಸ್ ಸೇವೆಯ ಸದಸ್ಯರುಗಳಲ್ಲಿ ಕೋಮುವಾದಿ ಧೋರಣೆಗಳನ್ನು ತಳೆಯುವಂತೆ ಮಾಡಿ ಅದನ್ನು ಬೆಳೆಸುವುದು;

ಡಿ) ಬಹುಸಂಖ್ಯಾತ ಸಮುದಾಯದ ಯುವಜನರಿಗೆ ಕಠರಿ, ಖಡ್ಗ ಮತ್ತು ಭರ್ಜಿಗಳಂತಹ ಆಯುಧ ಬಳಸುವ ತರಬೇತಿ ನೀಡುವುದು;

ಇ) ಎಂತಹ ಕ್ಷÄಲ್ಲಕ ಘಟನೆಗೂ ಕೋಮುವಾದಿ ಬಣ್ಣ ಬಳಿದು ಒಡಕುಂಟು ಮಾಡುವ ಹಾಗೂ ಕೋಮುವಾದಿ ಭಾವನೆಗಳು ತೀವ್ರಗೊಳ್ಳುವಂತೆ ಮಾಡುವುದು.

ಆರ್‌ಎಸ್‌ಎಸ್‌ನ ತಾತ್ವಿಕ ಬದ್ಧತೆಗಳು ಹಾಗೂ ಚಟುವಟಿಕೆಗಳು ಹೀಗಿರುವಾಗ ಸರ್ಕಾರಿ ನೌಕರರನ್ನು ಬಿಡಿ ಯಾವುದೇ ದೇಶಪ್ರೇಮಿ ಭಾರತೀಯರನ್ನು ಆರ್‌ಎಸ್‌ಎಸ್‌ನ ಚಟುವಟಿಕೆಗಳಲ್ಲಿ ಭಾಗವಹಿಸಲು ಅವಕಾಶ ಒದಗಿಸುವುದು ಎಷ್ಟು ಸರಿ? ‘ಮಾವೋವಾದಿಗಳು’, ‘ಖಲಿಸ್ತಾನಿಗಳು’, ಮತ್ತು ‘ಇಸ್ಲಾಮಿಗಳು’ ಹಾಗೂ ಅರ್ಬನ್ ನಕ್ಸಲ್ಸ್ ಮುಂತಾದವರನ್ನು ಒಂದು ಪದ್ಧತಿಯಂತೆ ದೇಶವಿರೋಧಿಗಳು ಮತ್ತು ಭಾರತೀಯ ಸಾಂವಿಧಾನಿಕ ರಾಜ್ಯ ವ್ಯವಸ್ಥೆಯನ್ನು ಬುಡಮೇಲು ಮಾಡುತ್ತಿದ್ದಾರೆ ಎಂದು ಘೋಷಿಸಿ ಜೈಲಿಗೆ ಹಾಕುತ್ತಾ ಮತ್ತು ನೇಣುಗಂಬಕ್ಕೇರಿಸುತ್ತಾ ಇರುವಾಗ ಆರ್‌ಎಸ್‌ಎಸ್‌ನವರನ್ನು ಸಮಗ್ರ ತನಿಖೆಯಿಂದ ಏಕೆ ಹೊರಗಿಡಲಾಗಿದೆ ಎಂದು ಭಾರತದ ಜಾತ್ಯತೀತ ಪ್ರಜಾಸತ್ತಾತ್ಮಕ ವ್ಯವಸ್ಥೆಯಲ್ಲಿ ನಂಬಿಕೆ ಇರುವವರೆಲ್ಲರೂ ಪ್ರಶ್ನೆ ಮಾಡಬೇಕಿದೆ.

ಸದ್ಯದಲ್ಲೇ ಕೇಂದ್ರ ಸರ್ಕಾರದ ಕಛೇರಿಗಳು ಹಾಗೂ ಸಂಸ್ಥೆಗಳಲ್ಲಿ ಆರ್‌ಎಸ್‌ಎಸ್ ಶಾಖೆಗಳು ಹಾಗೂ ಬೌಧ್ಧಿಕ ಶಿಬಿರಗಳು ನಡೆಯುವುದನ್ನು ಕಾಣುತ್ತೇವೆ; ಆ ಶಿಬಿರಗಳಲ್ಲಿ ಜಾತ್ಯತೀತ ಪ್ರಜಾಸತ್ತಾತ್ಮಕ ವ್ಯವಸ್ಥೆಯ ವಿರುದ್ಧ ದ್ವೇಷ ಬೋಧನೆ ಮಾಡುವುದನ್ನು ನೋಡುತ್ತೇವೆ. ಒಂದು ಧನಾತ್ಮಕ ಮತ್ತು ಸಮಾಧಾನಕರ ಸಂಗತಿಯೇನೆಂದರೆ ಹಿಂದುತ್ವ ವಿರೋಧಿ ದೇಶಪ್ರೇಮಿ ನೌಕರರು ಕಛೇರಿಗಳಲ್ಲಿ ಅವರ ಚಟುವಟಿಕೆಗಳು ನಡೆಯುವುದನ್ನು ವಿರೋಧಿಸುತ್ತಾರೆ. ಜುಲೈ 9 ರ ನಿರ್ದೇಶನದ ಭಾಗವಾಗಿ ಇನ್ನು ಮುಂದೆ ಸರ್ಕಾರದ ಪ್ರತಿಯೊಂದು ಕಛೇರಿಯೂ ಎರಡು ವಿಭಿನ್ನ ಗುಂಪುಗಳಾಗಿ ಒಡೆಯುವುದರಲ್ಲಿ ಸಂಶಯವಿಲ್ಲ. ಈ ರೀತಿಯಲ್ಲಿ ಸರ್ಕಾರದ ಕಛೇರಿಗಳ ಚಟುವಟಿಕೆಗಳು ಸುಗಮವಾಗಿ ಕಾರ್ಯನಿರ್ವಹಿಸುವುದನ್ನು ಆರ್ ಎಸ್ ಎಸ್ ನಾಶಪಡಿಸುತ್ತದೆ.

ಕಾಂಗ್ರೆಸ್ ಹಾಗೂ ಇತರ ಜಾತ್ಯತೀತ ಪ್ರಜಾಸತ್ತಾತ್ಮಕ ರಾಜಕೀಯ ಪಕ್ಷಗಳು ಜಾತ್ಯತೀತ ಪ್ರಜಾಸತ್ತಾತ್ಮಕ ಭಾರತವನ್ನು ರಕ್ಷಿಸಲು ಗಂಭೀರ ಪ್ರಯತ್ನಗಳನ್ನು ಮಾಡುತ್ತಾರಾದರೆ, ಈ ಮೇಲೆ ಉಲ್ಲೇಖಿಸಿದ ಎಲ್ಲಾ ದಾಖಲೆಗಳ ಆಧಾರದಲ್ಲಿ ಕಾನೂನಾತ್ಮಕವಾಗಿ ಹಾಗೂ ರಾಜಕೀಯವಾಗಿ ಎದುರಿಸಬೇಕು. ಅವರ ಕಾರ್ಯಕರ್ತರ ನಡುವೆಯೇ ಇರುವ ಹಿಂದುತ್ವ ಮನಸ್ಸುಳ್ಳವರನ್ನು ಹೊರಗೆ ಹಾಕಬೇಕಾಗುತ್ತದೆ ಕೂಡ. ಸಮಯ ಮೀರುತ್ತಿದೆ, ಎಷ್ಟು ಬೇಗ ಸಾಧ್ಯವೋ ಅಷ್ಟು ಬೇಗ ಕಾರ್ಯಾಚರಣೆ ಆಗಬೇಕು.

(ಈ ಮೇಲಿನ ಮಾಹಿತಿಗಳನ್ನು ದೆಹಲಿ ವಿಶ್ವವಿದ್ಯಾಲಯದ ನಿವೃತ್ತ ಪ್ರಾಧ್ಯಾಪಕ ಶಂಸುಲ್ ಇಸ್ಲಾಂ ಅವರ ಲೇಖನಗಳಿಂದ ಹಾಗೂ ಸಾಮಾಜಿಕ ಕಾರ್ಯಕರ್ತೆ ತೀಸ್ತಾ ಸೆಟಲ್‌ವಾಡ ಅವರ ಕಮ್ಯುನಲಿಸಂ ಕಂಬ್ಯಾಟ್ ಪತ್ರಿಕೆಯಿಂದ ಪಡೆಯಲಾಗಿದೆ.)

ಇದನ್ನೂ ನೋಡಿ: ವಚನಾನುಭವ -06 |ಕಲ್ಲನಾಗರ ಕಂಡರೆ ಹಾಲನೆರೆವರಯ್ಯ| ಬಸವಣ್ಣನವರ ವಚನ |Basavanna |Nagapanchami Janashakthi Media

Donate Janashakthi Media

Leave a Reply

Your email address will not be published. Required fields are marked *