ಸಂಸದರ ಅಮಾನತು ವಿಚಾರ-ಪ್ರತಿಪಕ್ಷಗಳ ಧರಣಿ: ರಾಜ್ಯಸಭೆ ಕಲಾಪ ಮುಂದೂಡಿಕೆ

ನವದೆಹಲಿ: ಸಂಸದರ ಅಮಾನತು ಕ್ರಮವು ಪ್ರಜಾಪ್ರಭುತ್ವ ವಿರೋಧಿ ಮತ್ತು ನಿಯಮಗಳಿಗೆ ವಿರುದ್ಧವಾಗಿದೆ ಎಂದು ಪ್ರತಿಪಕ್ಷಗಳು ಒತ್ತಾಯಿಸುತ್ತಿವೆ. ಆದರೆ ಸರ್ಕಾರ ಮಾತ್ರ ಅವರು ಮೊದಲು ಕ್ಷಮೆಯಾಚಿಸಬೇಕು ನಂತರ ಅಮಾನತು ಹಿಂತೆಗೆತದ ಬಗ್ಗೆ ಯೋಚಿಸಲಾಗುವುದು ಎಂದು ಹೇಳುತ್ತಿದೆ. ಪ್ರತಿಪಕ್ಷಗಳ ಧರಣಿ-ಗದ್ದಲದಿಂದಾಗಿ ರಾಜ್ಯಸಭೆ ಕಲಾಪವು ಸೋಮವಾರಕ್ಕೆ ಮುಂದೂಡಲ್ಪಟ್ಟಿದೆ.

ರಾಜ್ಯಸಭೆಯ 12 ಮಂದಿ ಸಂಸದರ ಅಮಾನತು ವಿಚಾರವಾಗಿ ರಾಜ್ಯಸಭೆಯಲ್ಲಿ ಹಗ್ಗಜಗ್ಗಾಟ ಉಂಟಾಗಿದ್ದು, ಅಮಾನತು ಹಿಂಪಡೆಯುವಂತೆ ಪ್ರತಿಪಕ್ಷಗಳ ಸದಸ್ಯರು ಧರಣಿ ನಡೆಸಿದ್ದರಿಂದ ಸದನದ ಕಲಾಪದಲ್ಲಿ ವ್ಯತ್ಯಯ ಉಂಟಾಗಿದೆ.

ರಾಜ್ಯಸಭೆ ಸಭಾಪತಿ ವೆಂಕಯ್ಯ ನಾಯ್ಡು ಇಂದು ಸದನದ ಸದಸ್ಯರಲ್ಲಿ ಒಮ್ಮತಕ್ಕೆ ಬರಲು ಮತ್ತು ಸದನವು ಸುಗಮವಾಗಿ ಕಾರ್ಯನಿರ್ವಹಿಸಲು ಹಾಗೂ ಸಮಸ್ಯೆಗಳನ್ನು ಬಗೆಹರಿಸುವಂತೆ ಮನವಿ ಮಾಡಿದರು. ” ಸದಸ್ಯರಿಗೆ ಸಮಸ್ಯೆಯನ್ನು ಚರ್ಚಿಸಲು, ಸಮಯ ನೀಡಲು ಮತ್ತು ಅದನ್ನು ವಿಂಗಡಿಸಲು” ಕಲಾಪವನ್ನು ಸೋಮವಾರಕ್ಕೆ ಮುಂದೂಡಿದರು.

ಸಂಸದರ ಅಮಾನತು ವಿಚಾರದಲ್ಲಿ ಸರಕಾರ ಮತ್ತು ಪ್ರತಿಪಕ್ಷಗಳು ಒಮ್ಮತಕ್ಕೆ ಬರುವಂತೆ ಸಭಾಪತಿ ಅವರು ಸಭಾನಾಯಕ ಪಿಯೂಷ್ ಗೋಯಲ್ ಮತ್ತು ವಿರೋಧ ಪಕ್ಷದ ಕೆಲವು ಹಿರಿಯ ಸದಸ್ಯರನ್ನು ಭೇಟಿ ಮಾಡಿ ಚರ್ಚೆ ನಡೆಸುವಂತೆ ಕೇಳಿಕೊಂಡಿದ್ದಾರೆ.

“ನಾನು ಸದನದ ನಾಯಕರೊಂದಿಗೆ ಮತ್ತು ವಿರೋಧ ಪಕ್ಷದ ಕೆಲವು ಹಿರಿಯ ಸದಸ್ಯರೊಂದಿಗೆ ಮಾತುಕತೆ ನಡೆಸಿದ್ದೇನೆ. ಸದನವು ಸುಗಮವಾಗಿ ಕಾರ್ಯನಿರ್ವಹಿಸುವಂತೆ ನೋಡಿಕೊಳ್ಳಲು ದಯವಿಟ್ಟು ಒಂದು ರೀತಿಯ ಒಮ್ಮತಕ್ಕೆ ಬರುವಂತೆ ನಾನು ನಿಮ್ಮಲ್ಲಿ ಪ್ರತಿಯೊಬ್ಬರಿಗೂ ಮನವಿ ಮಾಡುವೆ” ಎಂದು ರಾಜ್ಯಸಭೆಯ ಸದಸ್ಯರಿಗೆ ತಿಳಿಸಿದರು.

Donate Janashakthi Media

Leave a Reply

Your email address will not be published. Required fields are marked *