ಮಂಗಳೂರು: “ಉಡುಪಿ ಜಿಲ್ಲೆಯ ವ್ಯಕ್ತಿ ಕೊರೊನಾ ಲಸಿಕೆ ತೆಗೆದುಕೊಂಡ ಬಳಿಕ ದೇಹದಲ್ಲಿ ಅಯಸ್ಕಾಂತೀಯ ಶಕ್ತಿ ಉತ್ಪತ್ತಿಯಾಗುತ್ತದೆ ಎನ್ನುವುದು ಬರೀ ಬೊಗಸ್, ನನ್ನ ಎದುರಲ್ಲಿ ಅದನ್ನು ರುಜುವಾತು ಮಾಡಿದರೆ, ಒಂದು ಲಕ್ಷ ರೂಪಾಯಿ ಬಹುಮಾನ ನೀಡುವೇನು.ʼʼ ಎಂದು ಮಂಗಳೂರಿನ ವಿಚಾರವಾದಿ ಚಿಂತಕ ಪ್ರೊ. ನರೇಂದ್ರ ನಾಯಕ್ ಘೋಷಿಸಿದ್ದಾರೆ.
ಇತ್ತೀಚೆಗೆ ಉಡುಪಿಯ ತೆಂಕಪೇಟೆ ನಿವಾಸಿ ರಾಮದಾಸ್ ಶೇಟ್ ಕೋವಿಡ್ ವ್ಯಾಕ್ಸಿನ್ ಪಡೆದುಕೊಂಡಿದ್ದರು. ಆ ಬಳಿಕ ಕೆಲವು ವೈರಲ್ ಆಗಿದ್ದ ವಿಡಿಯೋ ಗಮನಿಸಿದ ರಾಮದಾಸ್ ಶೇಟ್, ತಾನೂ ಒಂದು ಪ್ರಯತ್ನ ಮಾಡ್ತೇನೆ ಅಂತ ಮನೆಯಲ್ಲಿರೋ ಸ್ಪೂನ್, ನಾಣ್ಯಗಳನ್ನು ದೇಹದ ಬಳಿ ತೆಗೆದುಕೊಂಡು ಹೋದಾಗ ದೇಹದಲ್ಲಿ ಅಯಸ್ಕಾಂತೀಯ ಅನುಭವ ಆಗಿದೆ.
ಮತ್ತೆ ಮುಂದುವರೆದು ದೇಹದ ಮೇಲೆ ನಾಣ್ಯ, ಸ್ಪೂನು, ಸೌಟುಗಳನ್ನೆಲ್ಲ ಇಟ್ಟಾಗ ಎಲ್ಲವೂ ದೇಹಕ್ಕೆ ಅಂಟಿಕೊಂಡಿದೆ. ಅಯಸ್ಕಾಂತೀಯ ಅನುಭವ ಪಡೆದ ರಾಮದಾಸ್, ತನ್ನ ನೆರೆಮನೆ ಸ್ನೇಹಿತ ಕೆ.ವಿ ಕಾಮತ್ ಅವರನ್ನು ಕರೆದು ಮ್ಯಾಗ್ನೆಟಿಕ್ ಲಕ್ಷಣ ತೋರಿಸಿ ಚರ್ಚಿಸಿದ್ದರು. ವೈದ್ಯರೊಬ್ಬರಲ್ಲೂ ಸಲಹೆ ಪಡೆದುಕೊಂಡರು. ಆದರೆ, ಯಾವುದೇ ಸರಿಯಾದ ಉತ್ತರ ಸಿಕ್ಕಿಲ್ಲ. ಕೊನೆಗೆ ಜಿಲ್ಲಾಧಿಕಾರಿ ಜಗದೀಶ್ ಇವರನ್ನು ಸಂಪರ್ಕಿಸಿ ಪರೀಕ್ಷೆಗೂ ಒಳಪಡಿಸಿದ್ದಾರೆ. ಪರೀಕ್ಷೆಯಲ್ಲಿ ಇದು ವ್ಯಾಕ್ಸಿನಿಂದ ಆಗಿರುವುದಲ್ಲ ಅಂತಾ ತಿಳಿದುಬಂದಿದೆ.
ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದ್ದು, ಈ ವಿಡಿಯೋ ಗಮನಿಸಿದ ನರೇಂದ್ರ ನಾಯಕ್, ಅಯಸ್ಕಾಂತೀಯ ಅಸಲಿಯತ್ತುನ್ನು ಬಿಚ್ಚಿಟ್ಟಿದ್ದಾರೆ. ಈ ಬಗ್ಗೆ ಸ್ವತಃ ವಿಡಿಯೋ ಮಾಡಿರುವ ನರೇಂದ್ರ ನಾಯಕ್, “ದೇಹದ ಚರ್ಮದಲ್ಲಿ ತ್ವಚೆಯ ಒತ್ತಡ ಜಾಸ್ತಿಯಾದಾಗ ಈ ರೀತಿಯಾಗಿ ಹಗುರವಾದ ವಸ್ತುಗಳು ಅಂಟಿಕೊಳ್ಳುತ್ತದೆ. ಇದು ಯಾವುದೇ ರೀತಿಯ ಅದ್ಭುತ ಅಲ್ಲ. ತ್ವಚೆಯನ್ನು ಸ್ಯಾನಿಟೈಸರ್ ಅಥವಾ ಇತರ ರಾಸಾಯನಿಕಗಳಿಂದ ತೊಳೆದು, ಒಣಗಿದ ಬಳಿಕ ಯಾವುದೇ ವಸ್ತುಗಳು ಅಂಟಿಕೊಳ್ಳೋದಿಲ್ಲ. ಬಿಟ್ಟಿ ಪ್ರಚಾರದ ದೃಷ್ಟಿಯಿಂದ ಇದನ್ನೆಲ್ಲಾ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಡಲಾಗುತ್ತಿದೆ,” ಎಂದು ಪ್ರೊ. ನರೇಂದ್ರ ನಾಯಕ್ ಹೇಳಿದ್ದಾರೆ.
“ಉಡುಪಿಯ ಆ ವ್ಯಕ್ತಿಯನ್ನು ಸ್ವತಃ ಜಿಲ್ಲಾಧಿಕಾರಿಗಳೇ ಆರೋಗ್ಯ ಪರೀಕ್ಷೆ ಮಾಡುವ ಬದಲು ನನ್ನ ಬಳಿ ಕರೆದುಕೊಂಡು ಬಂದರೆ ಹತ್ತು ಸೆಕೆಂಡ್‌ನಲ್ಲಿ ಸಮಸ್ಯೆ ಬಗೆಹರಿಸುತ್ತಿದ್ದೆ. ಇತ್ತೀಚೆಗೆ ದೆಹಲಿ ಮತ್ತು ನಾಸಿಕ್‌ನಲ್ಲೂ ಇಂತಹದೇ ಘಟನೆಯಾಗಿದೆ. ದೇಶದಲ್ಲಿ ವ್ಯಾಕ್ಸಿನ್ ವಿರುದ್ಧ ಬಹುದೊಡ್ಡ ಗೌಪ್ಯ ಕೆಟ್ಟ ಪ್ರಚಾರ ನಡೆಯುತ್ತಿದೆ. ಇದೆಲ್ಲಾ ಅದರ ಭಾಗವಾಗಿದೆ. ನನ್ನ ಎದುರಲ್ಲಿ ವ್ಯಾಕ್ಸಿನ್ ಪಡೆದ ಬಳಿಕ ದೇಹದಲ್ಲಿ ಅಯಸ್ಕಾಂತೀಯ ಗುಣ ಬಂದಿದೆ,” ಎಂದು ಧೃಡ ಪಡಿಸದರೆ ಒಂದು ಲಕ್ಷ ರೂಪಾಯಿ ಬಹುಮಾನ ನೀಡುವುದಾಗಿ ನರೇಂದ್ರ ನಾಯಕ್ ಘೋಷಣೆ ಮಾಡಿದ್ದಾರೆ.
ವರದಿ ಕೃಪೆ : ಮಂಗಳೂರು ಪ್ರತಿನಿಧಿ, ಒನ್ ಇಂಡಿಯಾ ಕನ್ನಡ