ಬೆಂಗಳೂರು : ಆಪರೇಷನ್ ಕಮಲಕ್ಕೆ ಒಳಗಾಗಿದ್ದ ಮುನಿರತ್ನ ರವರ ರಾಜಿನಾಮೆಯಿಂದಾಗಿ ತೆರುವಾಗಿದ್ದ ಆರ್.ಆರ್. ನಗರ ಉಪಚುನಾವಣೆಗೆ ಇಂದು ಕಾಂಗ್ರೆಸ್, ಜೆಡಿಎಸ್, ಬಿಜೆಪಿ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದರು. ಕಾದು ನೋಡುವ ತಂತ್ರ ಅನುಸರಿಸಿದ್ದ ಜೆಡಿಎಸ್ ತನ್ನ ಅಭ್ಯರ್ಥಿಯನ್ನು ಹಾಕುವ ಮೂಲಕ ರಾಷ್ಟ್ರೀಯ ಪಕ್ಷಗಳಿಗೆ ಪೈಪೋಟಿ ನೀಡಲು ಸಿದ್ದವಾಗಿದೆ.
ಮುನಿರತ್ನ : ಆಪರೇಷನ್ ಕಮಲಕ್ಕೆ ಒಳಗಾಗಿದ್ದ ಮುನಿರತ್ನರವರು ಬಿಜೆಪಿ ಗೆ ಬಂದ ನಂತರದಲ್ಲಿ ಬಿಜೆಪಿಯೊಳಗೆ ಅಸಮಾಧಾನ ಎದ್ದಿತ್ತು, ಅವರಿಗೆ ಟಿಕೇಟ್ ನೀಡುವುದು ಬೇಡ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ನಿರ್ಧರಿಸಿದ್ದರು, ಆದರೆ ಯಡಿಯೂರಪ್ಪ ರಾಜಿ ಸಂಧಾನದ ಮೂಲಕ ಈಗ ಸಮಸ್ಯೆ ಬಗೆಹರಿದಿದ್ದು ಅವರು ಅಧಿಕೃತವಾಗಿ ಬಿಜೆಪಿ ಅಭ್ಯರ್ಥಿಯಾಗಿ ಬಿಬಿಎಂಪಿ ಕಚೇರಿಯಲ್ಲಿ ಇಂದು ನಾಮಪತ್ರ ಸಲ್ಲಿಸಿದ್ದರು. ಉಪ ಮುಖ್ಯಮಂತ್ರಿ ಅಶ್ವಥ್ ನಾರಾಯಣ, ಕಂದಾಯ ಸಚಿವ ಆರ್. ಅಶೋಕ್ ಮುನಿರತ್ನರ ನಾಮಪತ್ರಕ್ಕೆ ಸಾಥ್ ನೀಡಿದರು.
ಕಳೆದ ಚುನಾವಣಿಯಲ್ಲಿ ಮುನಿರತ್ನ ವಿರುದ್ಧ ಸೋಲುಂಡಿದ್ದ ಬಿಜೆಪಿ ಅಭ್ಯರ್ಥಿ ತುಳಸಿ ಮುನಿರಾಜುಗೌಡರನ್ನು ಬಿಜೆಪಿ ಯಾವ ರೀತಿ ಸಮಾಧಾನ ಪಡೆಸಬಹುದು ಎಂಬ ಕುತೂಹಲ ಈಗ ಮೂಡಿದೆ. ಮುನಿರತ್ನರವರು ಅಕ್ರಮ ಮಾಡಿ ನಕಲಿ ಮತದಾನದ ಮೂಲಕ ಗೆಲುವು ಸಾಧಿಸಿದ್ದಾರೆ ಎಂದು ತುಳಸಿಯವರು ಕಾನೂನು ಹೋರಾಟ ನಡೆಸಿದ್ದರು. ಆಗ ತುಳಸಿಯವರಿಗೆ ಸಾಥ್ ನೀಡಿದ್ದ ನಾಯಕರೇ ಈಗ ಮುನಿರತ್ನ ರವರ ಬೆನ್ನಿಗೆ ನಿಂತಿದ್ದಾರೆ. ಮೇಲ್ನೋಟಕ್ಕೆ ಸುಮ್ಮನಿರುವ ತುಳಸಿಯವರ ಅತೃಪ್ತಿಯ ಕಟ್ಟೆ ಯಾವಾಗ ಬೇಕಾದರೂ ಒಡೆಯಬಹುದು ಎಂದು ಆರ್.ಆರ್. ನಗರದ ಮತದಾರರು ಮಾತನಾಡಿಕೊಳ್ಳುತ್ತಿದ್ದಾರೆ.
ಕುಸುಮಾ ಹನುಮಂತರಾಯಪ್ಪ : ಐಎಎಸ್ ಅಧಿಕಾರಿ ದಿ. ಡಿ.ಕೆ ರವಿಯವರ ಪತ್ನಿ ಕುಸುಮಾ ಹನುಮಂತರಾಯಪ್ಪ ಕಾಂಗ್ರೆಸ್ ಅಭ್ಯರ್ಥಿಯಾಗಿ ಇಂದು ಬಿಬಿಎಂಪಿ ಕಚೇರಿಯಲ್ಲಿ ನಾಮಪತ್ರ ಸಲ್ಲಿಸಿದರು. ಕೆಪಿಸಿಸಿ ರಾಜ್ಯಾಧ್ಯಕ್ಷ ಡಿ.ಕೆ ಶಿವಕುಮಾರ್ ಹಾಗೂ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯನವರು ಕುಸುಮಾರವರಿಗೆ ಸಾಥ್ ನೀಡಿದರು. ಕುಸುಮಾ ಚುನಾವಣೆಗೆ ಸ್ಪರ್ಧಿಸುವ ಕುರಿತು ಡಿ.ಕೆ.ರವಿಯವರ ತಾಯಿ ಅಸಮಧಾನ ವ್ಯಕ್ತ ಪಡಿಸಿದ್ದರು. ಕಾಂಗ್ರೆಸ್ ನ ಭದ್ರಕೋಟೆಯಾಗಿರುವ ಆರ್.ಆರ್. ನಗರದಲ್ಲಿ ಈಗ ಪಕ್ಷದ ವರ್ಚಸ್ಸು ಕುಂದಿದ್ದು ಬಿಜೆಪಿ ಅಭ್ಯರ್ಥ ಮುನಿರತ್ನ ರವರಿಗೆ ಕುಸಮಾ ಪ್ರಭಲ ಪೈಪೋಟಿ ನೀಡುತ್ತಾರಾ? ಎಂಬ ಪ್ರಶ್ನೆ ಆರ್.ಆರ್. ನಗರದಲ್ಲಿ ಕೇಳಿಬರುತ್ತಿದೆ.
ಕೃಷ್ಣಮೂರ್ತಿ : ಆರ್.ಆರ್ ನಗರದ ಉಪಚುನಾವಣೆಗೆ ಅಭ್ಯರ್ಥಿ ಘೊಷಣೆ ವಿಚಾರದಲ್ಲಿ ಕಾದು ನೋಡುವ ತಂತ್ರ ಅನುಸರಿಸಿದ್ದ ಜೆಡಿಎಸ್ ಈಗ ತನ್ನ ಹುರಿಯಾಳನ್ನು ನಿಲ್ಲಿಸುವ ಮೂಲಕ ರಾಷ್ಟ್ರೀಯ ಪಕ್ಷಗಳಿಗೆ ಸ್ಪರ್ಧೆ ಒಡ್ಡಲು ಮುಂದಾಗಿದೆ. ಇಂದು ಜೆಡಿಎಸ್ ಅಭ್ಯರ್ಥಿಯಾಗಿ ಕೃಷ್ಣಮೂರ್ತಿ ವಿ. ನಾಮಪತ್ರ ಸಲ್ಲಿಸಿದರು. ಮಾಜಿ ಮುಖ್ಯಮಂತ್ರಿ ಕುಮಾರ ಸ್ವಾಮಿ ಹಾಗೂ ಬೆಂಗಳೂರು ನಗರ ಘಟಕದ ಜೆಡಿಎಸ್ ಅಧ್ಯಕ್ಷ ಆರ್. ಪ್ರಕಾಶ್ ಸಾಥ್ ನೀಡಿದರು. ಕೃಷ್ಣಮೂರ್ತಿಯವರು ಕುಸಮಾ ಅಥವಾ ಮುನಿರತ್ನ ಇವರಿಬ್ಬರಲ್ಲಿ ಒಬ್ಬರ ಸೋಲಿಗೆ ಕಾರಣವಾಗಲಿದ್ದಾರೆ ಎಂದು ಆರ್. ಆರ್. ನಗರದ ನಿವಾಸಿ ಅನಂತ್ ಕೆ ಜನಶಕ್ತಿ ಮೀಡಿಯಾ ಗೆ ತಿಳಿಸಿದ್ದಾರೆ.
ಪ್ರಮುಖ ಮೂರು ಪಕ್ಷಗಳ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದು, ನಾಮಪತ್ರ ಸಲ್ಲಿಸಲು 16 ಕೊನೆಯ ದಿನವಾಗಿದ್ದು ಇನ್ನೆಷ್ಟು ಹುರಿಯಾಳುಗಳು ನಾಮಪತ್ರ ಸಲ್ಲಿಸಬಹುದು ಎಂಬುದು ತಿಳಿಯದ ಸಂಗತಿಯಾಗಿದೆ. ಕೆಲವರು ಬಂಡಾಯ ಅಭ್ಯರ್ಥಿಗಳಾಗಿ ಸ್ಪರ್ಧಿಸಿದರೂ ಅಚ್ಚರಿ ಪಡಬೇಕಿಲ್ಲ. ಆರ್.ಆರ್. ನಗರದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ನೇರ ಹಣಾಹಣಿ ನಡೆಯುತ್ತಾ? ಅಥವಾ ತ್ರಿಕೋನ ಸ್ಪರ್ಧೆ ಏರ್ಪಡುತ್ತಾ ಕಾದು ನೋಡಬೇಕಿದೆ.