ಸಂವಿಧಾನ ರಚನೆಯಲ್ಲಿ ಮಹಿಳೆಯರ ಪಾತ್ರ

ಸಾರ್ವಜನಿಕ ಸಂಕಥನದಲ್ಲಿ ಮಹಿಳೆ ಹಿಂಬದಿಗೆ ಸರಿಯುವುದೂ ಪಿತೃಪ್ರಧಾನತೆಯ ಲಕ್ಷಣ

-ನಾ ದಿವಾಕರ

ಭಾರತದ ಸಂವಿಧಾನ ರಚನೆಗಾಗಿ ರೂಪಿಸಲಾಗಿದ್ದ 299 ಸದಸ್ಯರನ್ನು ಒಳಗೊಂಡ ಸಂವಿಧಾನ ಸಭೆಯಲ್ಲಿ 15 ಮಹಿಳಾ ಸದಸ್ಯರಿದ್ದರು. ಸಂವಿಧಾನ ಸಿದ್ಧವಾಗುವ ಮೊದಲು 2 ವರ್ಷ, 11 ತಿಂಗಳು ಮತ್ತು 17 ದಿನಗಳ ಕಾಲ ಸೂಕ್ತ ಸಲಹೆ, ಮಾರ್ಗದರ್ಶನ ನೀಡಿದ ಈ ಮಹಿಳೆಯರು ಸ್ವತಂತ್ರ ಭಾರತದ ಸಾರ್ವಜನಿಕ ಸಂಕಥನದಲ್ಲಿ ಪ್ರಧಾನವಾಗಿ ಕಂಡುಬಂದಿಲ್ಲ.  ಹಾಗಾಗಿ ಭಾರತದ  ಸಂವಿಧಾನಕ್ಕೆ ಈ ಮಹಿಳೆಯರ  ಕೊಡುಗೆಯೂ ವಿಸ್ಮೃತಿಗೆ ಜಾರಿದೆ. ದೇಶದ ಈ 15 ಮಹಿಳೆಯರು ಅವರು ವಿಭಿನ್ನ ಸಾಮಾಜಿಕ-ಸಾಂಸ್ಕೃತಿಕ-ಶೈಕ್ಷಣಿಕ ಹಿನ್ನೆಲೆಯಿಂದ ಬಂದವರು ಮತ್ತು ಸಮಾಜದ ಅನೇಕ ತುಳಿತಕ್ಕೊಳಗಾದ ಮತ್ತು ಸಂಕಷ್ಟದ ವರ್ಗಗಳೊಂದಿಗೆ ಸಂವಿಧಾನವನ್ನು ಸಮೀಕರಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಈ ಲೇಖನವು ಅವರ ಜೀವನ ಮತ್ತು ಕೊಡುಗೆಯನ್ನು ಬಹಳ ನಿಖರವಾಗಿ ಒತ್ತಿಹೇಳುತ್ತದೆ.

ಸಂವಿಧಾನದಲ್ಲಿ ಸ್ತ್ರೀವಾದಿ ಸಿದ್ಧಾಂತ

(ಆಧಾರ :: ದ ಹಿಂದೂ ಪತ್ರಿಕೆಯ Feminist ideology in Indiaʼs Constitutional Discourse – Faisal C K ಲೇಖನ 26-ನವಂಬರ್‌ 2024)

ಭಾರತದ ಸಂವಿಧಾನದ ಶ್ರೇಷ್ಠತೆ ಇರುವುದು ಅದರ ಪ್ರಜಾಸತ್ತಾತ್ಮಕ ಗುಣಗಳಲ್ಲಿ ಮತ್ತು ಸಮಾನತೆಯ ಆಶಯಗಳಲ್ಲಿ. ಈ ಎರಡೂ ಆಶಯಗಳು ಇಂದು ಮತ್ತೊಮ್ಮೆ ಅಗ್ನಿಪರೀಕ್ಷೆಗೆ ಗುರಿಯಾಗುತ್ತಿರುವುದು ವಿಪರ್ಯಾಸ. ಆದಾಗ್ಯೂ ಮೂಲತಃ ಸಂವಿಧಾನ ಭಾರತದ ಸಾಮಾಜಿಕ-ಸಾಂಸ್ಕೃತಿಕ ಬದುಕನ್ನು ನಿರ್ದೇಶಿಸುವ ಪಿತೃಪ್ರಧಾನತೆ, ಊಳಿಗಮಾನ್ಯ ಲಕ್ಷಣಗಳು ಹಾಗೂ ನಿರಂಕುಶಾಧಿಕಾರವನ್ನು ಕೊನೆಗಾಣಿಸಿ, ಸಮ ಸಮಾಜದ ನಿರ್ಮಾಣಕ್ಕೆ ಬುನಾದಿಯಾಗಿರುವುದು ವಾಸ್ತವ. ಆದರೆ ಸಂವಿಧಾನವನ್ನು ಕುರಿತಾದ ಸಾರ್ವಜನಿಕ-ಬೌದ್ಧಿಕ ಸಂಕಥನಗಳನ್ನು ಸೂಕ್ಷ್ಮವಾಗಿ ಗಮನಿಸಿದಾಗ Founding Fathers (ಸಂಸ್ಥಾಪಕ ಪಿತೃಗಳು) ಎಂಬ ಗುಣವಿಶೇಷಣವನ್ನು ಬಳಸುವುದು ಕಾಣುತ್ತದೆ. ಎಲ್ಲಿಯೂ ಸಹ ಸಂವಿಧಾನ ರಚನೆಯ ಪ್ರಕ್ರಿಯೆಯಲ್ಲಿ ಮಹತ್ತರ ಕೊಡುಗೆ ನೀಡಿರುವ ಮಹಿಳೆಯರನ್ನು ಗುರುತಿಸುವ ಲಕ್ಷಣ ಕಾಣುವುದಿಲ್ಲ. ಇನ್ನು Founding Mothers (ಸಂಸ್ಥಾಪಕ ಮಾತೆಯರು) ಎನ್ನುವುದು ಬಹುದೂರದ ಮಾತು.

ಆದರೂ ಚರಿತ್ರೆ ಇದನ್ನು ದಾಖಲಿಸಿದೆ. ಬೌದ್ಧಿಕ ಚರ್ಚೆ-ಸಂವಾದಗಳಲ್ಲಿ ಪುನರುಚ್ಚಾರವಾಗದೆ ಇದ್ದರೂ ಈ ಮಹತ್ತರ ಲಕ್ಷಣವನ್ನು ಮರೆಮಾಚಲಾಗುವುದಿಲ್ಲ. ಏಳು ದಶಕಗಳು  ಕಳೆದರೂ ಭಾರತದ ಸಾಮಾಜಿಕ ಸಂವಹನ ಮತ್ತು ರಾಜಕೀಯ ಸಂಕಥನಗಳಲ್ಲಿ ಗಂಡಾಳ್ವಿಕೆಯ ಲಕ್ಷಣಗಳೇ ಪ್ರಧಾನವಾಗಿರುವುದರಿಂದ, ಸಹಜವಾಗಿಯೇ ಈ Founding Mothers ಗಳನ್ನು ವಿಸ್ಮೃತಿಯ ಕಣಜದಿಂದ ಹೊರತೆಗೆದು ಜನಸಾಮಾನ್ಯರ ಮುಂದಿಡಬೇಕಿದೆ.  ತಮ್ಮ Founding Mothers of Indian Republic ; Gender politics of the framing of constitution ಕೃತಿಯಲ್ಲಿ ಅಚ್ಯುತ್‌ ಪಟ್ಟವರ್ಧನ್‌ ಹೀಗೆ ಹೇಳಿದ್ದಾರೆ: “ ತಮ್ಮ ಇಚ್ಛಾಶಕ್ತಿ, ಸಮ್ಮತಿ ಮತ್ತು ಸಾಕಷ್ಟು ಭಿನ್ನಾಭಿಪ್ರಾಯಗಳನ್ನು ಸಮರ್ಪಕವಾಗಿ ಬಳಸುವ ಮೂಲಕ ಮಹಿಳಾ ಸದಸ್ಯರು ಸ್ತ್ರೀವಾದಿ ಚಳುವಳಿಯನ್ನು ಸಂವಿಧಾನ ಸಭೆಯ ಮೂಲಕ ಮತ್ತು ಅದರಿಂದಾಚೆಗೂ ಕೊಂಡೊಯ್ದಿದ್ದರು. ಆದ್ದರಿಂದಲೇ ಸಂವಿಧಾನದ ಪ್ರತಿಯೊಂದು ಅನುಚ್ಛೇದವೂ ಭಾರತದ ಸ್ತ್ರೀವಾದದ ಚರಿತ್ರೆಯಲ್ಲಿ ಅಚಲವಾಗಿ ಉಳಿಯುವ ಅಂಶವಾಗಿದೆ. ಸಂವಿಧಾನವು ಮಹಿಳೆಯರ ಸಮ್ಮತಿಯಿಂದ ಮಾತ್ರವಲ್ಲದೆ ಅವರ ಇಚ್ಛಾಶಕ್ತಿಯಿಂದಲೂ ರಚಿಸಲ್ಪಟ್ಟಿದೆ.”

ಇದನ್ನೂ ಓದಿ: ಬಿಎಸ್‌ಎನ್‌ಎಲ್: ಇಂಟರ್‌ನೆಟ್ ಪ್ರೋಟೋಕಾಲ್ ಆಧಾರಿತ ಫೈಬರ್‌ ಟಿವಿ ಆರಂಭ – 500 ಕ್ಕೂ ಹೆಚ್ಚು ಲೈವ್ ಟಿವಿ ಚಾನೆಲ್‌ಗಳು

ಕ್ರಿಸ್ಟೀನ್‌ ಕೀಟಿಂಗ್‌ ತಮ್ಮ Framing of Post colonial sexual contract ; Democracy̧  Fraternalism and State authority of India ಕೃತಿಯಲ್ಲಿ ವಿಭಿನ್ನ ವ್ಯಾಖ್ಯಾನ ಮಾಡುತ್ತಾರೆ. “ಸಂವಿಧಾನ ಸಭೆಯು ಹೊಸ ಭಾರತೀಯ ಪ್ರಭುತ್ವದ ರಾಜಕೀಯ ಅಧಿಕಾರಕ್ಕಾಗಿ ಸಮ್ಮತಿಯನ್ನು ಪಡೆಯುವ ಪ್ರಯತ್ನಗಳೊಂದಿಗೆ ಸಮಾನತೆಯ ರಾಜಕೀಯಕ್ಕೆ ತಮ್ಮ ಬದ್ಧತೆಯನ್ನು ಸಮನ್ವಯಗೊಳಿಸಲು ಶ್ರಮಿಸಿತು,,,, ಈ ನಿಟ್ಟಿನಲ್ಲಿ ಸಂವಿಧಾನ ಸಭೆಯು ರಾಜಿ ಮಾಡಿಕೊಂಡಿದ್ದು ನಾನು ಅದನ್ನು ಆ ಸಂದಿಗ್ಧತೆಯನ್ನು ಪರಿಹರಿಸಲು ಮಾಡಿಕೊಂಡಂತಹ ವಸಾಹತೋತ್ತರ ಲೈಂಗಿಕ ಒಪ್ಪಂದ ಎಂದು ಕರೆಯುತ್ತೇನೆ ;  ಅವರು ಸಾರ್ವಜನಿಕ ವಲಯದಲ್ಲಿ ಸಮಾನತೆಯನ್ನು ಮಹಿಳೆಯರಿಗೆ ಮೂಲಭೂತ ಹಕ್ಕಾಗಿ ಸ್ಥಾಪಿಸಿದರು ಆದರೆ ಮಹಿಳೆಯರನ್ನು ಕುಟುಂಬಗಳಲ್ಲಿ ಅಧೀನರನ್ನಾಗಿಸುವಂತಹ ತಾರತಮ್ಯದ ವೈಯಕ್ತಿಕ ಕಾನೂನುಗಳನ್ನು ಅನುಮೋದಿಸಿದರು. ಬಹುಶಃ ಕೇಂದ್ರೀಕೃತ ಆಳ್ವಿಕೆಗೆ ಭ್ರಾತೃತ್ವದ ಸಮ್ಮತಿಯನ್ನು ಪಡೆಯಲು ಹೀಗೆ ಮಾಡಲಾಯಿತು ”

ಸಂವಿಧಾನದ ಸಂಸ್ಥಾಪಕ ಮಾತೆಯರು ಅಂಬೇಡ್ಕರ್‌ ಅವರೊಡನೆ ಪರಸ್ಪರ ಛೇದಿಸುವ (intersectional) ಮೈತ್ರಿ ಸಾಧಿಸುವ ಮೂಲಕ ಅವರ ಸಾಮಾಜಿಕ ಕ್ರಾಂತಿಯನ್ನು ಸಾಕಾರಗೊಳಿಸಲು ನೆರವಾಗಿದ್ದರು. ಬ್ರಾಹ್ಮಣಶಾಹಿಯ ಪಿತೃಪ್ರಧಾನತೆಯಲ್ಲಿ ಆಳವಾಗಿ ಬೇರೂರಿರುವ ಭಾರತೀಯ ಸಂಸ್ಕೃತಿಯ ಅತಿಯಾದ ವೈಭವೀಕರಣದ ಬಗ್ಗೆ ಅಂಬೇಡ್ಕರ್‌ ಅವರಿಗಿದ್ದ ಆತಂಕಗಳಿಗೆ ಈ ಮಹಿಳೆಯರು ಸ್ಪಂದಿಸಿದ್ದರು. ಇವರಲ್ಲಿ ಪ್ರಮುಖರಾದ ಅಮೃತ್ ಕೌರ್‌ 1932ರಲ್ಲೇ “ ಭಾರತದ ಮಹಿಳೆಯರು ಸಮುದಾಯದಲ್ಲಿರುವ ಪುರುಷ ಪ್ರಜ್ಞೆಯು ರೂಪಿಸುರುವಂತಹ ಯಾವುದೇ ಸ್ಥಳೀಯ, ನೈತಿಕ, ರಾಜಕೀಯ ಮಾನದಂಡಗಳಿಗೆ ಆಧೀನರಾಗಿರಲು ಬಯಸುವುದಿಲ್ಲ ” ಎಂದು ಸ್ಪಷ್ಟವಾಗಿ ಹೇಳಿದ್ದರು. ಸಂವಿಧಾನ ರಚನಾ ಮಂಡಲಿಯಲ್ಲಿದ್ದ ಪಿತೃಪ್ರಧಾನ ವಾತಾವರಣವನ್ನು ಭೇದಿಸಲು ಈ ಮಹಿಳೆಯರು ನಿರಂತರ ಪ್ರಯತ್ನದಲ್ಲಿದ್ದರು.

ಈ ಮಹಿಳೆಯರ ಅಭಿಪ್ರಾಯದಲ್ಲಿ ಮೂಲಭೂತ ಹಕ್ಕುಗಳು ಎನ್ನುವುದು ಕೇವಲ ಪ್ರಭುತ್ವದ ವಿರುದ್ಧದ ಕಟ್ಟಣೆ (Injunction) ಮಾತ್ರವೇ ಅಲ್ಲ ಬದಲಾಗಿ ಅದು ಸಾಮಾಜಿಕ ಸನ್ನದು ಸಹ ಆಗಿರುತ್ತದೆ, ಖಾಸಗಿ ಬದುಕಿನಲ್ಲಿ, ರಕ್ಷಣಾತ್ಮಕ ರಾಜಕೀಯ ಹಸ್ತಕ್ಷೇಪಗಳ ಮೂಲಕ,  ಧಾರ್ಮಿಕ ಮತ್ತು ಕೌಟುಂಬಿಕ ಪರಿಸರದ ಬಲಾಢ್ಯರು  ನಿರ್ಬಂಧಿಸಿರುವ ಸ್ವಾತಂತ್ರ್ಯಗಳನ್ನು ಈ ಸಾಮಾಜಿಕ ಸನ್ನದು ಮರುಸ್ಥಾಪಿಸುತ್ತದೆ ಎಂದು ಈ ಮಹಿಳೆಯರು ದೃಢವಾಗಿ ನಂಬಿದ್ದರು. ಹನ್ಸಾ ಮೆಹ್ತಾ ಮತ್ತು ಅಮೃತ್ ಕೌರ್‌ , ಸಾಮಾಜಿಕ-ಪಿತೃಪ್ರಧಾನ ಶಕ್ತಿಗಳನ್ನು ಮತ್ತಷ್ಟು ಬಲಪಡಿಸುವ ಪ್ರವೃತ್ತಿಯನ್ನು ತಡೆಗಟ್ಟುವ ಸಲುವಾಗಿ ಸಮಾನ ನಾಗರಿಕ ಸಂಹಿತೆಯನ್ನು ಮೂಲಭೂತ ಹಕ್ಕು ಎಂದು ಪರಿಗಣಿಸಲು ಒತ್ತಾಯಿಸಿದ್ದರು. ‌

ಸಮಾನ ನಾಗರಿಕ ಸಂಹಿತೆಯನ್ನು ನಿರ್ದೆಶಕ ತತ್ವಗಳಡಿ ಸೇರಿಸಿದಾಗ , ಈ ನಿರ್ದೆಶಕ ತತ್ವಗಳಿಗೆ ಮುನ್ನುಡಿಯೊಂದನ್ನು ರೂಪಿಸುವಲ್ಲಿ ಈ ಮಹಿಳೆಯರು ಸಫಲರಾಗಿದ್ದರು.  ಈ ನಿರ್ದೇಶಕ ತತ್ವಗಳು ದೇಶದ ಆಳ್ವಿಕೆಯ ಮೂಲ ಆಧಾರವಾಗಿದ್ದು ಅದನ್ನು ಕಾನೂನಾತ್ಮಕವಾಗಿ ಅನುಷ್ಠಾನಗೊಳಿಸುವ ಕರ್ತವ್ಯ ಪ್ರಭುತ್ವದ್ದಾಗಿರುತ್ತದೆ ಎಂಬ ಈ ಮುನ್ನುಡಿ ಸಂವಿಧಾನದಲ್ಲಿ ದಾಖಲಾಗುವುದರ ಹಿಂದೆ ಈ ಮಹಿಳೆಯರ ಮಹತ್ತರ ಕೊಡುಗೆ ಇದೆ. 1980ರ ದಶಕದಲ್ಲಿ ಭಾರತದ ಸಾಂವಿಧಾನಿಕ ನ್ಯಾಯ ವ್ಯವಸ್ಥೆಯಲ್ಲಿ ನಿರ್ದೇಶಕ ತತ್ವಗಳು ಪ್ರಧಾನ ಪಾತ್ರ ವಹಿಸಿದ್ದರ ಹಿಂದೆ ಈ ಮಹಿಳೆಯರ ಪರಿಶ್ರಮನವನ್ನು ಗುರುತಿಸಲೇಬೇಕು.

ಶ್ರೀಮತಿ ಬೇಗಂ ಐಜಾಜ್‌ ರಸೂಲ್‌, ಜಾತ್ಯತೀತೆಯೇ ಸಂವಿಧಾನದ ಮಹತ್ತರವಾದ ಲಕ್ಷಣ ಎಂದು ಪ್ರತಿಪಾದಿಸಿದ್ದರು. ಮೂಲಭೂತ ಹಕ್ಕುಗಳ ಉಪಸಮಿತಿಯಲ್ಲಿ ಹನ್ಸಾ ಮೆಹ್ತಾ ಅವರು ಧಾರ್ಮಿಕ ಹಕ್ಕುಗಳನ್ನು ಸೀಮಿತಗೊಳಿಸುವಂತೆ ಆಗ್ರಹಿಸಿದ್ದರು. ಬಾಲ್ಯ ವಿವಾಹ ನಿಷೇಧ ಮುಂತಾದ ಸಾಮಾಜಿಕ ಸುಧಾರಣೆಗಳು ಮತ್ತು ಮಹಿಳೆಯರ ಸಮಾನತೆಯ ಹಕ್ಕುಗಳನ್ನು ಅಸೀಮ ಧಾರ್ಮಿಕ ಹಕ್ಕುಗಳು ಭಂಗಗೊಳಿಸುತ್ತವೆ ಎಂದು ಮೆಹ್ತಾ ವಾದಿಸಿದ್ದರು. ಸಂವಿಧಾನದಲ್ಲಿ ʼ ಮುಕ್ತ ಧಾರ್ಮಿಕ ಆಚರಣೆ ʼ ಎಂಬ ಪದವನ್ನು ತೆಗೆದುಹಾಕಿ  ʼ ಧಾರ್ಮಿಕ ಉಪಾಸನೆಯ ಸ್ವಾತಂತ್ರ್ಯ ʼ ಎಂದು ಹೇಳುವಂತೆ ಹನ್ಸಾ ಮೆಹ್ತಾ ಮತ್ತು ಅಮೃತ್ ಕೌರ್‌ ಒತ್ತಾಯಿಸಿದ್ದರು. ಧರ್ಮಗಳಿಗೆ ಸಾಂವಿಧಾನಿಕ ಭೂಮಿಕೆಯನ್ನು ಒದಗಿಸುವುದರಿಂದ ಭಾರತದ ಮಹಿಳೆಯರ ವಿಮೋಚನೆಗೆ ಭಂಗ ಉಂಟಾಗುತ್ತದೆ ಎಂದು ಈ ಮಹಿಳೆಯರು ಬಲವಾಗಿ ಪ್ರತಿಪಾದಿಸಿದ್ದರು.

ʼಧಾರ್ಮಿಕ  ಸ್ವಾತಂತ್ರ್ಯʼದ ಬಗ್ಗೆ ಪ್ರತಿರೋಧ ವ್ಯಕ್ತಪಡಿಸಿದ್ದ ಅಮೃತ್ ಕೌರ್‌ ತಮ್ಮ ಟಿಪ್ಪಣಿಯಲ್ಲಿ, ಧಾರ್ಮಿಕ ಆಚರಣೆಗಳಲ್ಲಿ ಅಂತರ್ಗತವಾಗಿರುವ ಮಹಿಳಾ ವಿರೋಧಿ ಪ್ರವೃತ್ತಿಯನ್ನು ಎತ್ತಿ ತೋರಿಸಿದ್ದರು.‌ “ಮಿತಿಯಿಲ್ಲದ ಧಾರ್ಮಿಕ ಸ್ವಾತಂತ್ರ್ಯ ಭವಿಷ್ಯದ ಶಾಸನಗಳಿಗೆ ಅಡ್ಡಿಯಾಗುವುದಷ್ಟೇ ಅಲ್ಲದೆ ಈ ಹಿಂದೆ ಜಾರಿಯಾಗಿರುವ ವಿಧವಾ ಮರುವಿವಾಹ ಕಾಯ್ದೆ, ಸರ್ದಾ ಕಾಯ್ದೆ ಮತ್ತು ಸತಿ ನಿಷೇಧದ ಕಾಯ್ದೆಗಳನ್ನು ವಿಫಲಗೊಳಿಸುತ್ತದೆ.

ನಿಷೇಧಿಸಬೇಕಾದಂತಹ ಎಷ್ಟೊಂದು ದುಷ್ಟ ಆಚರಣೆಗಳು, ಉದಾಹರಣೆಗೆ ಬಹುಪತ್ನಿತ್ವ, ಪರ್ದಾ ಪದ್ಧತಿ, ದೇವಾಲಯಗಳಿಗೆ ಹೆಣ್ಣುಮಕ್ಕಳನ್ನು ಅರ್ಪಿಸುವ ಪದ್ಧತಿ ಇತ್ಯಾದಿ ಆಚರಣೆಗಳು ಧರ್ಮದ ಹೆಸರಿನಲ್ಲಿ ನಡೆಯುತ್ತಿದೆ ಎನ್ನುವುದನ್ನು ಎಲ್ಲರೂ ಬಲ್ಲರು ” ಎಂದು ತಮ್ಮ ಟಿಪ್ಪಣಿಯಲ್ಲಿ ದಾಖಲಿಸಿದ್ದರು. ಭಾರತೀಯ ಗಣತಂತ್ರದ ಒಂದು ದುರದೃಷ್ಟಕರ ಅಂಶವೆಂದರೆ ಪುರುಷರ ಧಾರ್ಮಿಕ ಹಕ್ಕುಗಳು ಮಹಿಳೆಯರ ಘನತೆ ಮತ್ತು ಸಮಾನತೆಯ ಹಕ್ಕುಗಳನ್ನು ಆಕ್ರಮಿಸಿಕೊಂಡಿದೆ.

ಕಮಲಾದೇವಿ ಚಟ್ಟೋಪಾಧ್ಯಾಯ ಅವರು ಭಾರತದ ಸಂವಿಧಾನವು ಸಮಾನತೆ ಮತ್ತು ನ್ಯಾಯವನ್ನು ಖಚಿತಪಡಿಸುವ ಮೂಲಕ ಭಾರತೀಯ ಮಹಿಳೆಯರಿಗೆ ಹೊಸ ಯುಗವೊಂದಕ್ಕೆ ನಾಂದಿ ಹಾಡುತ್ತದೆ ಎಂದು ನಂಬಿದ್ದರು.  ಅದರೆ ಈ ನಂಬಿಕೆ, ಉತ್ಸಾಹ ಬಹಳ ದಿನಗಳ ಕಾಲ ಉಳಿಯಲಿಲ್ಲ. ಭಾರತ ಸರ್ಕಾರದ ಅಧಿಕೃತ ವರದಿ “ Towards Equality ; Report of the Committee on status of women in India ”1974 (ಸಮಾನತೆಯೆಡೆಗೆ ; ಭಾರತದಲ್ಲಿ ಮಹಿಳೆಯರ ಸ್ಥಿತಿಗತಿಗಳ ಬಗ್ಗೆ ಸಮಿತಿಯ ವರದಿ 1974) ತನ್ನ ಅಂತಿಮ ನಿರ್ಣಯದಲ್ಲಿ, ಸಂವಿಧಾನ ಪೀಠಿಕೆಯಲ್ಲಿ ಭರವಸೆ ನೀಡಿ ಎರಡು ದಶಕಗಳು ಕಳೆದಿದ್ದರೂ, ಭಾರತದ ಗಣತಂತ್ರವು ತನ್ನ ಮಹಿಳಾ ಸಂಕುಲಕ್ಕೆ ಸಮಾನತೆಯನ್ನು ಸಾಧಿಸುವಲ್ಲಿ ವಿಫಲವಾಗಿದೆ ಎಂದು ಹೇಳಿತ್ತು.

ಭಾರತೀಯ ಸಂವಿಧಾನದ ಸಂಸ್ಥಾಪಕ ಮಾತೆಯರು ಅಗಲಿಕೆಯು, ದೇಶದ ಸ್ತ್ರೀವಾದಿ ಸಾಂವಿಧಾನಿಕತೆಯ ಮೇಲೆ ಗಾಢವಾದ ಪರಿಣಾಮವನ್ನು ಬೀರಿದೆ. ರಾಜಕೀಯದಲ್ಲಿ ಪ್ರಬಲ ಮಹಿಳಾ ನಾಯಕಿಯರು ಇದ್ದರೂ ಸಹ ಭಾರತ ಇಂದಿಗೂ ಸಹ ಒಬ್ಬ ಸ್ತ್ರೀವಾದಿ ರಾಜನೀತಿಜ್ಞರನ್ನಾಗಲೀ, ನ್ಯಾಯಶಾಸ್ತ್ರಜ್ಞರನ್ನಾಗಲೀ ರೂಪಿಸಲು ಸಾಧ್ಯವಾಗಿಲ್ಲ. ಅಧಿಕಾರ ಕೇಂದ್ರಗಳಲ್ಲಿ ಮಹಿಳೆಯರ ಉಪಸ್ಥಿತಿಯೂ ಸಹ ನಗಣ್ಯವಾಗಿದೆ. ಲಿಂಗತ್ವ ನ್ಯಾಯವನ್ನು ಒದಗಿಸಲೆಂದೇ ರೂಪಿಸಲಾದ ಸಮಾನ ನಾಗರಿಕ ಸಂಹಿತೆ  ಭಾರತೀಯ ಮಹಿಳೆಯರ ಪರವಾಗಿ ಸಂವಿಧಾನದ ಸಂಸ್ಥಾಪಕ ಪಿತೃಗಳು ಮತ್ತು ಮಾತೆಯರು ನೀಡಿರುವ ಒಂದು ಸಮರ್ಪಕವಾದ ದಸ್ತಾವೇಜು. ಆದರೆ ಗಣತಂತ್ರದ ರಾಜಕೀಯ ನಾಯಕರು, ಸಾಕಷ್ಟು ನ್ಯಾಯಶಾಸ್ತ್ರದ ನಿಧಿಯ ಲಭ್ಯತೆಯ ಹೊರತಾಗಿಯೂ, ಈ ದಸ್ತಾವೇಜನ್ನು ಕಡೆಗಣಿಸುತ್ತಲೇ ಬಂದಿದ್ದಾರೆ.

ಸಂವಿಧಾನ ಸಭೆಯಲ್ಲಿ ಮಹಿಳೆಯರು

(ಆಧಾರ : Stories of women who helped draft the Constitution of India – Rishika Singh- Indian express 1-12-2024)

ಅಮ್ಮು ಸ್ವಾಮಿನಾಥನ್ (1894-1978) ಕೇರಳದ ಪಾಲ್ಘಾಟ್ ಜಿಲ್ಲೆಯ ಅನಕ್ಕರಾದಲ್ಲಿ ಮೇಲ್ಜಾತಿ ಹಿಂದೂ ಕುಟುಂಬದಲ್ಲಿ ಜನಿಸಿದ್ದರು. ಅನ್ನಿ ಬೆಸೆಂಟ್, ಮಾರ್ಗರೆಟ್ ಕಸಿನ್ಸ್, ಮಾಲತಿ ಪಟವರ್ಧನ್, ದಾದಾಭೋಯ್ ಮತ್ತು ಅಂಬುಜಮ್ಮಾಲ್ ಅವರಂತಹ ಇತರ ಶ್ರೇಷ್ಠ ಮಹಿಳೆಯರೊಂದಿಗೆ 1917 ರಲ್ಲಿ ಮದ್ರಾಸ್‌ನಲ್ಲಿ ಮಹಿಳಾ ಭಾರತ ಸಂಘವನ್ನು ರಚಿಸುವಲ್ಲಿ ಅವರು ಪ್ರಮುಖ ಪಾತ್ರ ವಹಿಸಿದರು. 1946 ರಲ್ಲಿ ಮದ್ರಾಸ್ ಕ್ಷೇತ್ರದಿಂದ ಸಂವಿಧಾನ ಸಭೆಯ ಭಾಗವಾದರು. 1975 ರಲ್ಲಿ ಅಂತರಾಷ್ಟ್ರೀಯ ಮಹಿಳಾ ವರ್ಷದ ಉದ್ಘಾಟನೆಯಲ್ಲಿ ಅವರು “ವರ್ಷದ ತಾಯಿ” ಎಂದು ಆಯ್ಕೆಯಾದರು.

ದಾಕ್ಷಾಯಣಿ ವೇಲಾಯುಧನ್ (1912-1978) ದಾಕ್ಷಾಯಣಿ ವೇಲಾಯುಧನ್ ಕೊಚ್ಚಿನ್‌ನ ಬೊಲ್ಗಟ್ಟಿ ದ್ವೀಪದಲ್ಲಿ ಜನಿಸಿದರು. ಅವಳು ತುಳಿತಕ್ಕೊಳಗಾದ ವರ್ಗಗಳ ನಾಯಕಿಯಾಗಿದ್ದರು. ಅವರು ಭಾರತದಲ್ಲಿ ಪದವಿ (ವಿಜ್ಞಾನ) ಪಡೆದ ಪರಿಶಿಷ್ಟ ವರ್ಗಕ್ಕೆ ಸೇರಿದ ಪ್ರಥಮ ಮಹಿಳೆ. ಅವರು 1946 ರಲ್ಲಿ ಚುನಾಯಿತರಾದ ಭಾರತದ ಸಂವಿಧಾನ ಸಭೆಯ ಒಂಬತ್ತು ಮಹಿಳಾ ಸದಸ್ಯರಲ್ಲಿ ಒಬ್ಬರು. ಅವರು ಕಟ್ಟಾ ಗಾಂಧಿವಾದಿಯಾಗಿದ್ದರೂ ಸಹ ಸಂವಿಧಾನ ಸಭೆಯ ಚರ್ಚೆಗಳಲ್ಲಿ ಪರಿಶಿಷ್ಟ ಜಾತಿಗಳಿಗೆ ಸಂಬಂಧಿಸಿದ ಅನೇಕ ವಿಷಯಗಳ ಬಗ್ಗೆ ಬಿ ಆರ್ ಅಂಬೇಡ್ಕರ್ ಅವರ ಪರವಾಗಿ ನಿಂತರು.

ಬೇಗಂ ಐಜಾಜ್ ರಸೂಲ್ (1909-2002) ಅವರು ಮಲೇರ್‌ ಕೋಟ್ಲಾದಲ್ಲಿ ರಾಜಮನೆತನದಲ್ಲಿ ಜನಿಸಿದರು . ಸಂವಿಧಾನ ಸಭೆಯ ಏಕೈಕ ಮುಸ್ಲಿಂ ಮಹಿಳಾ ಸದಸ್ಯರಾಗಿದ್ದರು. 1935 ರ ಭಾರತ ಸರ್ಕಾರದ ಕಾಯಿದೆಯನ್ನು ಜಾರಿಗೊಳಿಸುವುದರೊಂದಿಗೆ, ಬೇಗಂ ಮತ್ತು ಅವರ ಪತಿ ಮುಸ್ಲಿಂ ಲೀಗ್‌ಗೆ ಸೇರಿಕೊಂಡರು ಮತ್ತು ಚುನಾವಣಾ ರಾಜಕೀಯವನ್ನು ಪ್ರವೇಶಿಸಿದರು. ಧಾರ್ಮಿಕ ಅಲ್ಪಸಂಖ್ಯಾತರಿಗೆ ಮೀಸಲು ಸ್ಥಾನಗಳ ಬೇಡಿಕೆಯನ್ನು ಸ್ವಯಂಪ್ರೇರಣೆಯಿಂದ ಬಿಟ್ಟುಕೊಡಲು ಮುಸ್ಲಿಂ ನಾಯಕತ್ವದ ನಡುವೆ ಒಮ್ಮತವನ್ನು ಮೂಡಿಸುವಲ್ಲಿ ಅವರು ಪ್ರಮುಖ ಪಾತ್ರ ವಹಿಸಿದರು.

ದುರ್ಗಾಬಾಯಿ ದೇಶಮುಖ್ (1909-1981) ಜುಲೈ 15, 1909 ರಂದು ರಾಜಮಂಡ್ರಿಯಲ್ಲಿ ಜನಿಸಿದರು. ಅವರು 12 ವರ್ಷ ವಯಸ್ಸಿನವರಾಗಿದ್ದಾಗ ಅವರು ಅಸಹಕಾರ ಚಳವಳಿಯನ್ನು ಪ್ರವೇಶಿಸಿ ಆಂಧ್ರ ಕೇಸರಿ ಟಿ ಪ್ರಕಾಶಂ ಅವರೊಂದಿಗೆ ಉಪ್ಪಿನ ಸತ್ಯಾಗ್ರಹ ಚಳವಳಿಯಲ್ಲಿ ಭಾಗವಹಿಸಿದರು. 1936 ರಲ್ಲಿ, ಅವರು ಆಂಧ್ರ ಮಹಿಳಾ ಸಭಾವನ್ನು ಸ್ಥಾಪಿಸಿದರು, ಇದು ಒಂದು ದಶಕದಲ್ಲಿ ಮದ್ರಾಸ್ ನಗರದಲ್ಲಿ ಶಿಕ್ಷಣ ಮತ್ತು ಸಮಾಜ ಕಲ್ಯಾಣದ ಒಂದು ದೊಡ್ಡ ಸಂಸ್ಥೆಯಾಯಿತು.

ಇದನ್ನೂ ನೋಡಿ: ಸಿ ಎಂ ಸುದ್ದಿಗೋಷ್ಠಿ | ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ

ಹಂಸ ಜೀವರಾಜ್ ಮೆಹ್ತಾ @ ಹಂಸ ಮೆಹ್ತಾ (1897-1995) ಜುಲೈ 3, 1897 ರಂದು ಬರೋಡಾದ ದಿವಾನ್ ಮನುಭಾಯಿ ನಂದಶಂಕರ್ ಮೆಹ್ತಾ ಅವರಿಗೆ ಜನಿಸಿದ ಹಂಸಾ ಮೆಹ್ತಾ ಅವರು ಇಂಗ್ಲೆಂಡ್‌ನಲ್ಲಿ ಪತ್ರಿಕೋದ್ಯಮ ಮತ್ತು ಸಮಾಜಶಾಸ್ತ್ರವನ್ನು ಅಧ್ಯಯನ ಮಾಡಿದರು. ಸುಧಾರಕ ಮತ್ತು ಸಾಮಾಜಿಕ ಕಾರ್ಯಕರ್ತೆ  ಅಷ್ಟೇ ಅಲ್ಲದೆ ಶಿಕ್ಷಣತಜ್ಞರೂ ಮತ್ತು ಬರಹಗಾರರೂ ಆಗಿದ್ದರು. ಅವರು ಮಹಾತ್ಮಾ ಗಾಂಧಿಯವರೊಂದಿಗೆ ಹಲವಾರು ಸ್ವಾತಂತ್ರ್ಯ ಚಳುವಳಿಗಳಲ್ಲಿ ಭಾಗವಹಿಸಿದರು. ಅವರು 1930 ರಲ್ಲಿ ದೇಶ ಸೇವಿಕಾ ದಳವನ್ನು ಸ್ಥಾಪಿಸಿದರು. ಹಂಸಾ 1946 ರಲ್ಲಿ ಮಹಿಳೆಯರ ಸ್ಥಾನಮಾನದ ಪರಮಾಣು ಉಪಸಮಿತಿಯಲ್ಲಿ ಭಾರತವನ್ನು ಪ್ರತಿನಿಧಿಸಿದರು.

ಕಮಲಾ ಚೌಧರಿ (1908-1970) ಲಕ್ನೋದ ಶ್ರೀಮಂತ ಕುಟುಂಬದಲ್ಲಿ ಜನಿಸಿದರು, ಆದಾಗ್ಯೂ ಅವರ ಶಿಕ್ಷಣವನ್ನು ಮುಂದುವರಿಸಲು ಸಾಕಷ್ಟು ಹೋರಾಡಬೇಕಾಯಿತು. ಸಾಮ್ರಾಜ್ಯಶಾಹಿ ಸರ್ಕಾರಕ್ಕೆ ತನ್ನ ಕುಟುಂಬದ ನಿಷ್ಠೆಯನ್ನು ವಿರೋಧಿಸಿ ರಾಷ್ಟ್ರೀಯವಾದಿಗಳೊಂದಿಗೆ ಸೇರಿಕೊಂಡರು ಮತ್ತು 1930 ರಲ್ಲಿ ಗಾಂಧಿಯವರು ಪ್ರಾರಂಭಿಸಿದ ನಾಗರಿಕ ಅಸಹಕಾರ ಚಳವಳಿಯಲ್ಲಿ ಸಕ್ರಿಯವಾಗಿ ಭಾಗವಹಿಸಿದರು.

ಲೀಲಾ ರಾಯ್ (1900-1970) ಲೀಲಾ ರಾಯ್ ಅವರು ಅಕ್ಟೋಬರ್ 1900 ರಲ್ಲಿ ಅಸ್ಸಾಂನ ಗೋಲ್ಪಾರಾದಲ್ಲಿ ಜನಿಸಿದರು. 1921 ರಲ್ಲಿ ಬೆಥೂನ್ ಕಾಲೇಜಿನಿಂದ ಪದವಿ ಪಡೆದಿದ್ದರು. ಬೆಂಗಾಲ್ ಮಹಿಳಾ ಮತದಾರರ ಸಮಿತಿಯ ಸಹಾಯಕ ಕಾರ್ಯದರ್ಶಿಯಾಗಿದ್ದರು. ತೀವ್ರಗಾಮಿ ಎಡಪಂಥೀಯ ಭಾರತೀಯ ಮಹಿಳಾ ರಾಜಕಾರಣಿ ಮತ್ತು ಸುಧಾರಕರಾಗಿದ್ದರು ಮತ್ತು ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ನಿಕಟ ಸಹವರ್ತಿಯಾಗಿದ್ದರು.

ಮಾಲತಿ ಚೌಧರಿ (1904– 1998) 1904 ರಲ್ಲಿ ಆಗಿನ ಪೂರ್ವ ಬಂಗಾಳ (ಈಗಿನ ಬಾಂಗ್ಲಾದೇಶ) ದ ಪ್ರತಿಷ್ಠಿತ ಕುಟುಂಬದಲ್ಲಿ ಜನಿಸಿದರು. ತಮ್ಮ 16 ನೇ ವಯಸ್ಸಿನಲ್ಲಿ ಅವರನ್ನು ಶಾಂತಿನಿಕೇತನಕ್ಕೆ ಕಳುಹಿಸಲಾಯಿತು, ಅಲ್ಲಿ ಅವರು ವಿಶ್ವ-ಭಾರತಿಗೆ ಸೇರಿಸಿಕೊಂಡರು. ಉಪ್ಪಿನ ಸತ್ಯಾಗ್ರಹದ ಸಮಯದಲ್ಲಿ, ಮಾಲತಿ ಚೌಧರಿ ಅವರು ತಮ್ಮ ಪತಿಯೊಂದಿಗೆ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ಗೆ ಸೇರಿ ಚಳವಳಿಯಲ್ಲಿ ಭಾಗವಹಿಸಿದರು. ಸತ್ಯಾಗ್ರಹಕ್ಕೆ ಅನುಕೂಲಕರ ವಾತಾವರಣವನ್ನು ಸೃಷ್ಟಿಸಲು ಅವರು ಶಿಕ್ಷಣ ಮತ್ತು ಜನರೊಂದಿಗೆ ಸಂವಹನ ನಡೆಸಿದರು.

ಪೂರ್ಣಿಮಾ ಬ್ಯಾನರ್ಜಿ (1911-1951) ಉತ್ತರ ಪ್ರದೇಶದ ಅಲಹಾಬಾದ್‌ನಲ್ಲಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಸಮಿತಿಯ ಕಾರ್ಯದರ್ಶಿಯಾಗಿದ್ದರು. ಅವರು 1930 ಮತ್ತು 40 ರ ದಶಕದ ಉತ್ತರಾರ್ಧದಲ್ಲಿ ಸ್ವಾತಂತ್ರ್ಯ ಚಳುವಳಿಯ ಮುಂಚೂಣಿಯಲ್ಲಿ ನಿಂತ ಉತ್ತರ ಪ್ರದೇಶದ ಮಹಿಳೆಯರಲ್ಲಲಿ ಪ್ರಮುಖರಾಗಿದ್ದರು. 1946 ರಿಂದ 1950 ರವರೆಗೆ ಸಂವಿಧಾನ ಸಭೆಯ ಭಾಗವಾಗಿದ್ದು ಸಂವಿಧಾನವನ್ನು ರಚಿಸುವಲ್ಲಿ ಪ್ರಮುಖ ಪಾತ್ರ ವಹಿಸಿದರು.

ರಾಜಕುಮಾರಿ ಅಮೃತ್ ಕೌರ್ (1889–1964) ಫೆಬ್ರವರಿ 2, 1889 ರಂದು ಉತ್ತರ ಪ್ರದೇಶದ ಲಕ್ನೋದಲ್ಲಿ ಜನಿಸಿದರು. ಅವರು ಭಾರತದ ಮೊದಲ ಆರೋಗ್ಯ ಸಚಿವರಾಗಿ ಹತ್ತು ವರ್ಷಗಳ ಕಾಲ ಆ ಹುದ್ದೆಯಲ್ಲಿದ್ದರು. ಅವರು ಇಂಗ್ಲೆಂಡ್‌ನ ಡಾರ್ಸೆಟ್‌ನಲ್ಲಿರುವ ಶೆರ್ಬೋರ್ನ್ ಸ್ಕೂಲ್ ಫಾರ್ ಗರ್ಲ್ಸ್‌ನಲ್ಲಿ ಶಿಕ್ಷಣ ಪಡೆದರು, ಆದರೆ 16 ವರ್ಷಗಳ ಕಾಲ ಮಹಾತ್ಮ ಗಾಂಧಿಯವರ ಕಾರ್ಯದರ್ಶಿಯಾಗುವ ಸಲುವಾಗಿ ಎಲ್ಲವನ್ನೂ ತ್ಯಜಿಸಿದರು. ಅವರು ಆಲ್ ಇಂಡಿಯಾ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ (AIIMS) ಸ್ಥಾಪಕರಾಗಿದ್ದರು ಮತ್ತು ಅದರ ಸ್ವಾಯತ್ತತೆಗಾಗಿ ಶ್ರಮಿಸಿದ್ದರು.

ರೇಣುಕಾ ರೇ  (1904–1997) ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್‌ನಿಂದ ಬಿಎ ಪೂರ್ಣಗೊಳಿಸಲು ಲಂಡನ್‌ನಲ್ಲಿ ವಾಸಿಸುತ್ತಿದ್ದರು. ಅಖಿಲ ಭಾರತ ಕಾರ್ಯಕಾರಿ ಸಮಿತಿ  ಕಾನೂನು ಕಾರ್ಯದರ್ಶಿಯಾಗಿ 1934 ರಲ್ಲಿ  ಅವರು ಭಾರತದಲ್ಲಿ ಮಹಿಳೆಯರ ಕಾನೂನು ಅಸಮರ್ಪಕತೆಯ ಬಗ್ಗೆ ವರದಿ ಸಲ್ಲಿಸಿದ್ದರು . 1952-57 ವರ್ಷಗಳಲ್ಲಿ ಪಶ್ಚಿಮ ಬಂಗಾಳದ ಪರಿಹಾರ ಮತ್ತು ಪುನರ್ವಸತಿ ಸಚಿವರಾಗಿ ನೇಮಕಗೊಂಡಿದ್ದರು. 1959 ರಲ್ಲಿ ಅವರು ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಸಮಿತಿಯ (ರೇಣುಕಾ ರೇ ಸಮಿತಿ) ಮುಖ್ಯಸ್ಥರಾಗಿದ್ದರು.

ಸರೋಜಿನಿ ನಾಯ್ಡು (1879–1949) ಸರೋಜಿನಿ ನಾಯ್ಡು ಅವರು ತಮ್ಮ ಕಾವ್ಯ ಕೃಷಿಯ ಮೂಲಕ ಭಾರತದ ನೈಟಿಂಗೇಲ್ ಎಂದೂ ಕರೆಯಲ್ಪಡುತ್ತಾರೆ. ಫೆಬ್ರವರಿ 13, 1879 ರಂದು ಹೈದರಾಬಾದ್‌ನಲ್ಲಿ ಜನಿಸಿದ ಸರೋಜಿನಿ ನಾಯ್ಡು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ನ ಅಧ್ಯಕ್ಷರಾದ ಮೊದಲ ಭಾರತೀಯ ಮಹಿಳೆ ಮತ್ತು ಭಾರತದ ರಾಜ್ಯ ಗವರ್ನರ್ ಆಗಿ ನೇಮಕಗೊಂಡ ಮೊದಲ ಮಹಿಳೆಯಾಗಿದ್ದರು.

ಸುಚೇತಾ ಕೃಪಲಾನಿ (1908–1974) 1908 ರಲ್ಲಿ ಇಂದಿನ ಹರಿಯಾಣದ ಅಂಬಾಲಾ ಪಟ್ಟಣದಲ್ಲಿ ಜನಿಸಿದ ಸುಚೇತ 1942 ರ ಕ್ವಿಟ್ ಇಂಡಿಯಾ ಚಳುವಳಿಯಲ್ಲಿ ಅವರು ನಿರ್ವಹಿಸಿದ ಪಾತ್ರಕ್ಕಾಗಿ ಅವರು ವಿಶೇಷವಾಗಿ ಗುರುತಿಸಲ್ಪಡುತ್ತಾರೆ. ಕ್ವಿಟ್ ಇಂಡಿಯಾ ಚಳವಳಿಯ ಸಮಯದಲ್ಲಿ ಮುಂಚೂಣಿಗೆ ಬಂದ ಅವರು ಬ್ರಿಟಿಷರಿಂದ ಬಂಧಿಸಲ್ಪಟ್ಟರು. ನಂತರ ಅವರು ವಿಭಜನೆಯ ಗಲಭೆಗಳ ಸಮಯದಲ್ಲಿ ಮಹಾತ್ಮ ಗಾಂಧಿಯವರೊಂದಿಗೆ ನಿಕಟವಾಗಿ ಕೆಲಸ ಮಾಡಿದರು. 14 ಆಗಸ್ಟ್ 1947 ರಂದು, ನೆಹರೂ ಅವರು ತಮ್ಮ ಪ್ರಸಿದ್ಧ “ಟ್ರಿಸ್ಟ್ ವಿತ್ ಡೆಸ್ಟಿನಿ” ಭಾಷಣವನ್ನು ಮಾಡುವ ಕೆಲವು ನಿಮಿಷಗಳ ಮೊದಲು ಅವರು ಸಂವಿಧಾನ ಸಭೆಯ ಸ್ವಾತಂತ್ರ್ಯ ಅಧಿವೇಶನದಲ್ಲಿ ವಂದೇ ಮಾತರಂ ಹಾಡಿದ್ದರು.

ವಿಜಯಲಕ್ಷ್ಮಿಪಂಡಿತ್ (1900–1990) ಆಗಸ್ಟ್ 18, 1900 ರಂದು ಅಲಹಾಬಾದ್‌ನಲ್ಲಿ ಜನಿಸಿದ ವಿಜಯಲಕ್ಷ್ಮಿ ಪಂಡಿತ್‌  ಭಾರತದ ಮೊದಲ ಪ್ರಧಾನಿ ಜವಾಹರಲಾಲ್ ನೆಹರು ಅವರ ಸಹೋದರಿ. ಆಕೆ 1932-1933, 1940 ಮತ್ತು 1942-1943ರಲ್ಲಿ ಮೂರು ವಿಭಿನ್ನ ಸಂದರ್ಭಗಳಲ್ಲಿ ಜೈಲುವಾಸ ಅನುಭವಿಸಿದ್ದರು. ಸ್ವತಂತ್ರ ಪೂರ್ವ ಭಾರತದಲ್ಲಿ ಕ್ಯಾಬಿನೆಟ್ ಹುದ್ದೆಯನ್ನು ಅಲಂಕರಿಸಿದ ಮೊದಲ ಭಾರತೀಯ ಮಹಿಳೆಯಾಗಿ ಗುರುತಿಸಲ್ಪಡುತ್ತಾರೆ.

ಅನ್ನಿ ಮಸ್ಕರೇನ್ (1902–1963) ಅನ್ನಿ ಮಸ್ಕರೇನ್ ಕೇರಳದ ತಿರುವನಂತಪುರದ ಲ್ಯಾಟಿನ್ ಕ್ಯಾಥೋಲಿಕ್ ಕುಟುಂಬದಲ್ಲಿ ಜನಿಸಿದರು. ತಿರುವಾಂಕೂರು ರಾಜ್ಯ ಕಾಂಗ್ರೆಸ್ ಕಾರ್ಯಕಾರಿ ಸಮಿತಿಯ ಭಾಗವಾದ ಮೊದಲ ಮಹಿಳೆ. ತಿರುವಾಂಕೂರು ರಾಜ್ಯದಲ್ಲಿ ಸ್ವಾತಂತ್ರ್ಯ ಮತ್ತು ಭಾರತೀಯ ರಾಷ್ಟ್ರದೊಂದಿಗೆ ಏಕೀಕರಣಕ್ಕಾಗಿ ಚಳುವಳಿಗಳ ನಾಯಕರಲ್ಲಿ ಒಬ್ಬರಾಗಿದ್ದರು. ಹಿಂದೂ ಕೋಡ್ ಬಿಲ್ ಅನ್ನು ಪರಿಶೀಲಿಸುವ ವಿಧಾನಸಭೆಯ ಆಯ್ಕೆ ಸಮಿತಿಯಲ್ಲಿ ಒಬ್ಬರಾಗಿದ್ದರು.

ಭಾರತದ ಸಂವಿಧಾನದಲ್ಲಿ ಮಹಿಳಾಪರ/ಸ್ತ್ರೀವಾದಿ ನಿಲುವುಗಳು ಇರುವುದರ ಹಿಂದೆ ಈ ಮಹಿಳೆಯರ ಮಹತ್ವದ ಕೊಡುಗೆ ಇರುವುದನ್ನು ಹೆಮ್ಮೆಯಿಂದ ನೆನೆಯಬೇಕಿದೆ.

ಇದನ್ನೂ ಓದಿ: ತಿರುಪತಿ: ವೈಕುಂಠದ್ವಾರ ಸರ್ವದರ್ಶನದ ಟಿಕೆಟ್​​ ವಿತರಣಾ ಕೇಂದ್ರಗಳಲ್ಲಿ ನೂಕುನುಗ್ಗಲು – 6 ಜನ ಸಾವು

Donate Janashakthi Media

Leave a Reply

Your email address will not be published. Required fields are marked *