ಬೆಂಗಳೂರು: ಪಠ್ಯಪುಸ್ತಕ ಪರಿಷ್ಕರಣಾ ಸಮಿತಿ ಅಧ್ಯಕ್ಷ ರೋಹಿತ್ ಚಕ್ರತೀರ್ಥ ಬಂಧಿಸಿ, ಆತನ ಮೇಲೆ ಕಾನೂನು ಕ್ರಮಕೈಗೊಳ್ಳಬೇಕು ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಆಗ್ರಹಿಸಿದ್ದು, ಈ ಸಂಬಂಧ ಹೇಳಿಕೆ ಬಿಡುಗಡೆ ಮಾಡಿದ್ದಾರೆ.
ಸ್ಪಷ್ಟ ಸರ್ಕಾರಿ ಆದೇಶವಿಲ್ಲದೆ ಪಠ್ಯಪುಸ್ತಕಗಳನ್ನು ಪರಿಷ್ಕರಿಸಲು ಒಬ್ಬ ಕಿಡಿಗೇಡಿ ಟ್ರೋಲರ್ಗೆ ಅವಕಾಶ ನೀಡಿ, ಈಗ ಆತ ಮಾಡಿಟ್ಟಿರುವ ಕೊಳಕುಗಳನ್ನೆಲ್ಲ ಯಾವ ಅಂಜಿಕೆಯೂ ಇಲ್ಲದೆ, ಸಮರ್ಥಿಸಿಕೊಳ್ಳುರುವ ಬೇಜವಾಬ್ದಾರಿ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಅವರನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಕ್ಷಣದಿಂದಲೇ ಸಂಪುಟದಿಂದ ವಜಾ ಮಾಡಬೇಕು ಎಂದು ಆಗ್ರಹಿಸಿದ್ದಾರೆ.
ರಾಜ್ಯದ ಶೈಕ್ಷಣಿಕ, ಸಾಮಾಜಿಕ, ಸಾಹಿತ್ಯಿಕ ಕ್ಷೇತ್ರವನ್ನು ಕಲುಷಿತಗೊಳಿಸಿರುವ ಪಠ್ಯಪುಸ್ತಕ ಪರಿಷ್ಕರಣೆಯ ಅದ್ವಾನಕ್ಕೆ ಕಾರಣಕರ್ತರಾಗಿರುವ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಅವರನ್ನು ಮುಖ್ಯಮಂತ್ರಿಗಳು ಇನ್ನೂ ಸಮರ್ಥಿಸಿಕೊಳ್ಳಲು ಹೊರಡುವುದಾದರೆ ಅವರೇ ಮೊದಲು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕಾಗುತ್ತದೆ ಎಂದಿದ್ದಾರೆ.
ಪಠ್ಯಪುಸ್ತಕ ಪರಿಷ್ಕರಣೆಯಂತಹ ಅತ್ಯಂತ ಜವಾಬ್ದಾರಿಯುತ ಕೆಲಸವನ್ನು ಸ್ವಭಾವತಃ ವಿಕೃತನಾದ ಒಬ್ಬ ಯಕಶ್ಚಿತ್ ಟ್ರೋಲರ್ಗೆ ಒಪ್ಪಿಸಿ, ಅವನು ಮಾಡುವ ಅವಾಂತರಗಳಿಗೆ ಅವನೇ ಹೊಣೆ ಎಂದು ಅಧಿಕೃತ ಆದೇಶದಲ್ಲಿ ತಿಳಿಸಿ, ಈಗ ಆತ ಮಾಡಿಟ್ಟಿರುವ ರಾಡಿಗಳನ್ನೆಲ್ಲ ಸಮರ್ಥಿಸುತ್ತ ಕೂತಿರುವ ಸರ್ಕಾರಕ್ಕೆ ಅಧಿಕಾರದಲ್ಲಿ ಮುಂದುವರಿಯುವ ಯಾವ ನೈತಿಕತೆ ಇದೆ? ಪಠ್ಯಪುಸ್ತಕ ಪರಿಷ್ಕರಣೆಗೆ ಅವಸರದಲ್ಲಿ ಮೌಖಿಕ ಸೂಚನೆ ನೀಡಿ ಘಟನೋತ್ತರ ಅನುಮತಿ ನೀಡಲು ಇದೇನು 40% ಕಮಿಷನ್ ಬಾಚುವ ರಸ್ತೆ ಕಾಮಗಾರಿಯೇ? ಇಂತಹ ಮೌಖಿಕ ಸೂಚನೆಯಲ್ಲಿ ಕೆಲಸಮಾಡಿಸಿ ಅಮಾಯಕ ಗುತ್ತಿಗೆದಾರನನ್ನು ಬಲಿ ಪಡೆದಿರುವ ಈ ಸರ್ಕಾರ ಈಗ ಎಳೆಯ ಮಕ್ಕಳ ಭವಿಷ್ಯವನ್ನೇ ಬಲಿಕೊಡಲು ಹೊರಟಿದೆ ಎಂದು ಸಿದ್ದರಾಮಯ್ಯ ಕಿಡಿಕಾರಿದ್ದಾರೆ.
ಪಠ್ಯಪುಸ್ತಕ ಸಮಿತಿಯ ಅಧ್ಯಕ್ಷ ಮತ್ತು ಅವನ ತಂಡ, ಜ್ಞಾನದೀವಿಗೆಗಳಾದ ಬಸವಣ್ಣ, ಅಂಬೇಡ್ಕರ್, ಜ್ಯೋತಿಬಾ ಪುಲೆ, ನಾರಾಯಣ ಗುರು, ಕೆಂಪೇಗೌಡ, ಕುವೆಂಪು ಮಾತ್ರವಲ್ಲ ಮಹರ್ಷಿ ವಾಲ್ಮೀಕಿಯವರನ್ನೂ ಬಿಡದೆ ಅವಮಾನಿಸಿದ್ದಾರೆ. ಇಂತಹ ಜ್ಞಾನವಿರೋಧಿ ಮತ್ತು ಮನುಷ್ಯ ವಿರೋಧಿ ಪಠ್ಯಗಳನ್ನು ತರಗತಿಗಳಲ್ಲಿ ಬೋಧನೆಗೆ ಅವಕಾಶ ನೀಡಿದರೆ ಅದು ನಾಡಿಗೆ ಬಗೆಯುವ ಘನಘೋರ ದ್ರೋಹವಾಗುತ್ತದೆ ಎಂದಿದ್ದಾರೆ.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರೇ ನಿಮ್ಮ ಕುರ್ಚಿ ಉಳಿಯಬೇಕಿದ್ದಲ್ಲಿ ಉಳಿದಿರುವುದೊಂದೇ ದಾರಿ. ಮೊದಲು ಶಿಕ್ಷಣ ಸಚಿವರನ್ನು ವಜಾ ಮಾಡಿ, ಪಠ್ಯಪುಸ್ತಕ ಪರಿಷ್ಕರಣಾ ಸಮಿತಿ ಅಧ್ಯಕ್ಷನನ್ನು ಬಂಧಿಸಿ ಸರ್ಕಾರಕ್ಕೆ ಆತನಿಂದ ಆಗಿರುವ ನಷ್ಟವನ್ನು ಕಕ್ಕಿಸಿ ಮತ್ತು ಬರಗೂರು ರಾಮಚಂದ್ರಪ್ಪ ಸಮಿತಿಯ ಶಿಫಾರಸಿನ ಹಳೆಯ ಪಠ್ಯವನ್ನೇ ಈ ಶೈಕ್ಷಣಿಕ ವರ್ಷಕ್ಕೆ ಮುಂದುವರೆಸಿ ಎಂದು ತಿಳಿಸಿದ್ದಾರೆ.
ಇಷ್ಟೆಲ್ಲ ಅವಾಂತರಗಳ ನಂತರವೂ ಮುಖ್ಯಮಂತ್ರಿಗಳು ಸಂಘ ಪರಿವಾರ ಒಡ್ಡಿರುವ ನೇಣಿಗೆ ಕೊರಳೊಡ್ಡುವುದಾದರೆ ನಮ್ಮದೇನೂ ಅಭ್ಯಂತರ ಇಲ್ಲ. ಪರಿಷ್ಕೃತ ಪಠ್ಯಪುಸ್ತಕಗಳ ವಿರುದ್ಧದ ಪ್ರತಿಭಟನೆಯನ್ನು ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯಲು ಕಾಂಗ್ರೆಸ್ ಕಟಿಬದ್ಧವಾಗಿದೆ. ನಮ್ಮ ಕಾರ್ಯಕರ್ತರು ಈ ಹೋರಾಟವನ್ನು ಜಿಲ್ಲೆ, ತಾಲೂಕು, ಹೋಬಳಿ ಮಟ್ಟಕ್ಕೂ ಕೊಂಡೊಯ್ಯಲಿದ್ದಾರೆ. ಆಗ ಮುಖ್ಯಮಂತ್ರಿಗಳ ತಲೆದಂಡ ಅವರ ಪಕ್ಷಕ್ಕೂ ಅನಿವಾರ್ಯವಾಗಬಹುದು ಎಂದು ಸಿದ್ಧರಾಮಯ್ಯ ಹೇಳಿದ್ದಾರೆ.