ರೋಹಿತ್‌ ಚಕ್ರತೀರ್ಥ ಪೂರ್ವಗ್ರಹ ಪೀಡಿತ: ಇತಿಹಾಸಕಾರರು, ಶಿಕ್ಷಣ ತಜ್ಞರ ಆಕ್ರೋಶ

ಬೆಂಗಳೂರು: ‘ಅಕಾಡೆಮಿಕ್ ನೆಲೆಯಲ್ಲಿ ಅಧ್ಯಯನ ನಡೆಸದ ಮತ್ತು ಇತಿಹಾಸದ ವೈಧಾನಿಕತೆಯ ಅರಿವು ಇರದ ರೋಹಿತ್ ಚಕ್ರತೀರ್ಥ ಪೂರ್ವಗ್ರಹ ಪೀಡಿತರು. ತಮ್ಮ ಅಪ್ರಬುದ್ಧ ಹೇಳಿಕೆಗಳ ಮೂಲಕ ಸಾರ್ವಜನಿಕರ ದಿಕ್ಕು ತಪ್ಪಿಸುತ್ತಿದ್ದಾರೆ’ ಎಂದು ಇತಿಹಾಸಕಾರರು, ಶಿಕ್ಷಣ ತಜ್ಞರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಜಂಟಿ ಹೇಳಿಕೆ ಬಿಡುಗಡೆ ಮಾಡಿರುವ ತುಮಕೂರು ವಿಶ್ವವಿದ್ಯಾಲಯದ ನಿವೃತ್ತ ಕುಲಪತಿ ಪ್ರೊ. ಓ. ಅನಂತರಾಮಯ್ಯ, ಕಲಬುರ್ಗಿಯ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ನಿವೃತ್ತ ಸಮ ಕುಲಾಧಿಪತಿ ಪ್ರೊ.ಎಸ್‌. ಚಂದ್ರಶೇಖರ್‌, ಬೆಂಗಳೂರು ವಿಶ್ವವಿದ್ಯಾಲಯದ ನಿವೃತ್ತ ಪ್ರಾಧ್ಯಾಪಕ ಪ್ರೊ. ಅಶ್ವತ್ಥ ನಾರಾಯಣ, ಇತಿಹಾಸ ದರ್ಪಣದ ಸಂಪಾದಕ ಡಾ. ಹಂ.ಗು. ರಾಜೇಶ್ ಹಾಗೂ ಇತಿಹಾಸಕಾರ ಡಾ.ಎಚ್.ಎಸ್. ಗೋಪಾಲರಾವ್ ಮತ್ತು ಇತಿಹಾಸ ಸಂಶೋಧಕ ಡಾ. ಕೆ. ಪ್ರಕಾಶ್ ಅವರು, ‘ಮರುಪರಿಷ್ಕರಣೆ ಕುರಿತು ಸರ್ಕಾರಕ್ಕೆ ವರದಿ ಸಲ್ಲಿಸಿದ ನಂತರ ರೋಹಿತ್‌ ಚಕ್ರತೀರ್ಥ ನೀಡಿರುವ ಹೇಳಿಕೆಗಳನ್ನು ಗಮನಿಸಿದಾಗ ಇತಿಹಾಸ ಪಠ್ಯ ಪುಸ್ತಕಗಳಲ್ಲಿನ ವಿಷಯವನ್ನು ತಿರುಚುವ ಹುನ್ನಾರ ನಡೆಸಿದಂತೆ ತೋರುತ್ತದೆ’ ಎಂದಿದ್ದಾರೆ.

ಇದನ್ನು ಓದಿ: ಟಿಪ್ಪುವಿನ ರಾಕೆಟ್ ತಂತ್ರಜ್ಞಾನ, ಶೃಂಗೇರಿ ಮಠಕ್ಕೆ ದೇಣಿಗೆ, ರೇಷ್ಮೆ ವ್ಯವಸಾಯ ಪಾಠಾಂಶ ಕೈಬಿಟ್ಟ ಚಕ್ರತೀರ್ಥ ಸಮಿತಿ

‘ಪಠ್ಯ ಮರುಪರಿಷ್ಕರಣಾ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿದ ಮೇಲೆ ಅಧ್ಯಕ್ಷರ ಜವಾಬ್ದಾರಿ ಮುಗಿಯುತ್ತದೆ. ಒಪ್ಪುವುದು ಬಿಡುವುದು ಸರ್ಕಾರದ ವಿವೇಚನೆ. ಆದರೆ, ಶಿಷ್ಟಾಚಾರ ಮರೆತು ಹಿಂದಿನ ಅಧ್ಯಕ್ಷರನ್ನು ದೂಷಿಸುವುದು ಮತ್ತು ಅಕಾಡೆಮಿಕ್ ವಲಯದಲ್ಲಿ ನಡೆಯಬೇಕಾದ ಚರ್ಚೆಯನ್ನು ಸಂತೆಯಲ್ಲಿ ನಿಂತು ಮಾತನಾಡುವುದು ಸರ್ಕಾರದ ನಿಯಮಗಳಿಗೂ ವಿರುದ್ಧವಾದುದು. ಆದ್ದರಿಂದ ರೋಹಿತ್ ಚಕ್ರತೀರ್ಥ ಅವರ ವರ್ತನೆಯನ್ನು ಸರ್ಕಾರ ನಿಯಂತ್ರಿಸಬೇಕು’ ಎಂದು ಒತ್ತಾಯಿಸಿದ್ದಾರೆ.

‘2017ರಲ್ಲಿ ಜಾರಿಗೊಂಡ ಪರಿಷ್ಕೃತ ಪಠ್ಯಪುಸ್ತಕಗಳು ಬರಗೂರು ರಾಮಚಂದ್ರಪ್ಪ ಅವರ ಸರ್ವಾಧ್ಯಕ್ಷತೆಯಲ್ಲಿ ವಿವಿಧ ವಿಷಯಗಳ 27 ತಜ್ಞರ ಸಮಿತಿಗಳಿಂದ ರೂಪುಗೊಂಡವು. ಐದು ವರ್ಷಗಳ ನಂತರ ಪರಿಷ್ಕರಣೆಯನ್ನು ಆಕ್ಷೇಪಿಸಿ, ರೋಹಿತ್ ಚಕ್ರತೀರ್ಥ ಅವರ ಅಧ್ಯಕ್ಷತೆಯ ಒಂದು ಸಮಿತಿ ಮರುಪರಿಷ್ಕರಣೆ ನಡೆಸಿರುವುದೇ ಸಂಶಯಗಳಿಗೆ ಎಡೆಮಾಡಿಕೊಟ್ಟಿದೆ. ಜೊತೆಗೆ ಪಠ್ಯ ಪುಸ್ತಕಗಳ ಮರುಪರಿಷ್ಕರಣ ಸಮಿತಿಯ ಅಧ್ಯಕ್ಷರು ಸರ್ಕಾರಕ್ಕೆ ವರದಿ ಸಲ್ಲಿಸಿದ ನಂತರದಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ನೀಡಿರುವ ಹೇಳಿಕೆಗಳನ್ನು ಮತ್ತು ವಿವಿಧ ಮಾಧ್ಯಮಗಳ ವರದಿಗಳನ್ನು ಗಮನಿಸಿದಾಗ ರಾಜ್ಯದ ಇತಿಹಾಸ ಪಠ್ಯ ಪುಸ್ತಕಗಳಲ್ಲಿ ವಸ್ತುವಿಷಯವನ್ನು ತಿರುಚುವ ಹುನ್ನಾರ ನಡೆದಿರುವಂತೆ ತೋರುತ್ತದೆ’ ಎಂದು ದೂರಿದ್ದಾರೆ.

ಜಂಟಿ ಹೇಳಿಕೆಯ ವಿವರ ಈ ರೀತಿ ಇದೆ:

ಚಕ್ರತೀರ್ಥ ಅವರು ವಿಡಿಯೊವೊಂದರಲ್ಲಿ ‘ತುಪ್ಪ ಇಲ್ಲದೆ ಜನ ಒದ್ದಾಡಬೇಕಾಯಿತು; ಹಸಿವಿನಿಂದ ಮಕ್ಕಳು ಸಾಯಬೇಕಾಯಿತು’ ಎಂದು ಪಠ್ಯ ಪುಸ್ತಕದಲ್ಲಿ ಇರುವುದಾಗಿ ಹಸಿ ಸುಳ್ಳು ಹೇಳಿದ್ದಾರೆ. ಯಾವ ತರಗತಿಯ ಇತಿಹಾಸ ಪಠ್ಯದಲ್ಲಿ ಹೀಗೆ ಬರೆದಿದೆ ಎಂಬುದನ್ನು ಅವರೇ ತೋರಿಸಬೇಕು ಎಂದು ಹೇಳಿದ್ದಾರೆ.

ಇದನ್ನು ಓದಿ: ಶಿಕ್ಷಣದಲ್ಲಿ ಆಳುವ ಪಕ್ಷದ ಹೊಸ ಅಜೆಂಡಾ

‘ವೇದಗಳ ಕಾಲದಲ್ಲಿ ಮಹಿಳೆಯರಿಗೆ ಸ್ಥಾನಮಾನಗಳಿರಲಿಲ್ಲ. ಅವರನ್ನು ಗೌರವದಿಂದ ನೋಡಿಕೊಳ್ಳುತ್ತಿರಲಿಲ್ಲ’ ಎಂಬುದಾಗಿ ಪಠ್ಯ ಪುಸ್ತಕಗಳಲ್ಲಿ ಬರೆದಿದ್ದಾರೆಂದು ಆರೋಪಿಸುತ್ತಾರೆ. ಬಹುಶಃ ಚಕ್ರತೀರ್ಥ ಅವರು ಪಠ್ಯ ಪುಸ್ತಕವನ್ನು ಸರಿಯಾಗಿ ಓದಿಕೊಂಡಿರುವಂತೆ ಕಾಣುವುದಿಲ್ಲ. ಏಕೆಂದರೆ, 6ನೇ ತರಗತಿ ಸಮಾಜ ವಿಜ್ಞಾನ ಪಠ್ಯ ಪುಸ್ತಕ ಭಾಗ-1 ರ ‘ವೇದಕಾಲದ ಸಂಸ್ಕೃತಿ’ ಪಾಠದಲ್ಲಿ (ಪುಟ: 74ರಲ್ಲಿ) ‘ಸ್ತ್ರೀಯರ ಸ್ಥಾನಮಾನ’ ಎಂಬ ಉಪಶೀರ್ಷಿಕೆ ಅಡಿಯಲ್ಲಿ ಋಗ್ವೇದ ಕಾಲದಲ್ಲಿ ಸ್ತ್ರೀಯರಿಗಿದ್ದ ಉನ್ನತ ಸ್ಥಾನಮಾನಗಳಿದ್ದವೆಂದು ಬರೆಯಲಾಗಿದೆ. ಆ ಕಾಲದ ಪ್ರಮುಖ ಮಹಿಳಾ ವಿದ್ವನ್ಮಣಿಗಳನ್ನೂ ಹೆಸರಿಸಲಾಗಿದೆ. ಋಗ್ವೇದ ಕಾಲದಲ್ಲಿದ್ದ ಮಹಿಳೆಯರ ಸ್ಥಾನಮಾನಗಳು ನಂತರದ ವೇದಗಳ ಕಾಲದ ಸಮಾಜದಲ್ಲಿ ಕುಸಿಯುತ್ತವೆ. ಇದು ಕೂಡ ಸ್ಪಷ್ಟವಾಗಿದೆ. ಹೀಗೆ ಕಣ್ಮುಂದೆ ಇರುವ ಪಠ್ಯಪುಸ್ತಕಗಳನ್ನೇ ಇಟ್ಟುಕೊಂಡು, ಸರ್ಕಾರ ನೀಡಿರುವ ಜವಾಬ್ದಾರಿಯುತ ಸ್ಥಾನದಲ್ಲಿರುವ ವ್ಯಕ್ತಿ ಈ ಪರಿಯಲ್ಲಿ ಸುಳ್ಳುಗಳನ್ನು ಹೇಳುತ್ತಿರುವುದು ದುರದೃಷ್ಟಕರ ಎಂದಿದ್ದಾರೆ.

ಹರಪ್ಪ ನಾಗರಿಕತೆಯನ್ನು ಸಿಂಧೂ-ಸರಸ್ವತಿ ನಾಗರಿಕತೆ ಎಂದು ಕರೆಯುವುದು; ಸಿಂಧೂ-ಸರಸ್ವತಿ ನಾಗರಿಕತೆಯು ವೇದಗಳ ನಂತರ ಕಾಲದ್ದೆಂದು ಪ್ರತಿಪಾದಿಸಲು ಹೊರಟಿರುವುದು, ಇದೆಲ್ಲ ಅವರ ತಿಳಿವಳಿಕೆಯ ಕೊರತೆಯನ್ನು ತೋರ್ಪಡಿಸುತ್ತವೆ ಎಂದಿದ್ದಾರೆ.

1921ರಲ್ಲಿ ಸಿಂಧೂ ಕಣಿವೆಯ ಹರಪ್ಪಾ ಎಂಬಲ್ಲಿ ನಾಗರಿಕತೆಯ ಮೊದಲ ನೆಲೆಯು ಬೆಳಕಿಗೆ ಬಂದಿತು. ತದನಂತರದ ವರ್ಷಗಳಲ್ಲಿ ಈ ನಾಗರಿಕತೆಯ ನೆಲೆಗಳು ಸಿಂಧೂ ಕಣಿವೆಯ ಆಚೆಗೂ ಅಂದರೆ, ಯಮುನಾ, ತಪತಿ, ನರ್ಮದಾ ಕಣಿವೆಗಳಲ್ಲಿಯೂ ಬೆಳಕಿಗೆ ಬಂದಿದ್ದರಿಂದ ನದಿ ಕಣಿವೆಯ ಹೆಸರಿನಿಂದ ಈ ನಾಗರಿಕತೆಯನ್ನು ಗುರುತಿಸಲು ಅಸಾಧ್ಯವಾಯಿತು. ಆದ್ದರಿಂದ ಅದರ ಮೊದಲ ನೆಲೆಯಾದ ‘ಹರಪ್ಪಾ’ ಹೆಸರಿನಿಂದ ಈ ನಾಗರಿಕತೆಯನ್ನು ಇತಿಹಾಸಕಾರರು ಗುರುತಿಸುತ್ತಾ ಬರುತ್ತಿದ್ದಾರೆ. ಪುರಾತತ್ವ ಸಂಶೋಧನಾ ಶಾಸ್ತ್ರದ ವೈಧಾನಿಕತೆಯಲ್ಲಿ ನೆಲೆಗಳ ಹೆಸರಿನಿಂದಲೇ ಸಂಸ್ಕೃತಿಗಳನ್ನು ಗುರುತಿಸುವುದು ಇಲ್ಲಿವರೆಗೂ ನಡೆದು ಬಂದಿರುವ ಮಾದರಿ.

ಸಿಂಧೂ ನಾಗರಿಕತೆಯು ವೇದಗಳ ನಂತರ ಕಾಲದ್ದು ಎಂದು ಚಕ್ರತೀರ್ಥ ಅವರು ಸುಳ್ಳು ಪ್ರತಿಪಾದನೆಗೆ ಮುಂದಾಗಿದ್ದಾರೆ. ಪ್ರಸಿದ್ಧ ಇತಿಹಾಸಕಾರ ಆರ್.ಸಿ. ಮಜುಂದಾರ್ ಅವರೇ ಸಿಂಧೂ ನಾಗರಿಕತೆಯು ವೇದ ಕಾಲಕ್ಕೂ ಮೊದಲಿನದೆಂದು ಸ್ಪಷ್ಟವಾಗಿ ತೋರಿಸಿ ಕೊಟ್ಟಿದ್ದಾರೆ. ಅವರು ತಮ್ಮ ‘An Advanced History of India’ ಎಂಬ ಕೃತಿಯಲ್ಲಿ (ಪುಟ: 22-23) ಸಿಂಧೂ ನಾಗರಿಕತೆ ಮತ್ತು ವೇದಗಳ ಸಂಸ್ಕೃತಿ ಹೇಗೆ ಬೇರೆ ಬೇರೆ, ಹಾಗೂ ಸಿಂಧೂ ನಾಗರಿಕತೆ ವೇದಗಳ ನಾಗರಿಕತೆಗಿಂತ ಹೇಗೆ ಪ್ರಾಚೀನ ಎಂಬುದನ್ನು ತರ್ಕಬದ್ಧವಾಗಿ ನಿರೂಪಿಸಿದ್ದಾರೆ. ಚಕ್ರತೀರ್ಥ ಅವರು ಇಷ್ಟಾದರೂ ಕೂಡ ಬರಗೂರರೇ ಎಡಪಂಥಿಯರ ಸಿದ್ಧಾಂತವನ್ನು ಪಠ್ಯದಲ್ಲಿ ತಂದಿದ್ದಾರೆ ಎಂದು ಆರೋಪಿಸುವ ಮೂಲಕ ತಮ್ಮ ಅಜ್ಞಾನವನ್ನು ಜಗಜ್ಜಾಹೀರು ಮಾಡಿಕೊಂಡಿದ್ದಾರೆ. ತಮ್ಮ ವಿಚಾರಧಾರೆಗೆ ಒಪ್ಪದ ಭಿನ್ನ ನೋಟಗಳನ್ನು ಎಡಪಂಥಿಯ ವಿಚಾರಧಾರೆ ಎಂದೇ ಆರೋಪಿಸುವ ಮೂಲಕ ಚರಿತ್ರೆಯನ್ನು ಅರ್ಥೈಸುವ ಬಹುಮಾದರಿಗಳನ್ನು ನಿರಾಕರಿಸುತ್ತಾರೆ ಎಂದು ದೂರಿದ್ದಾರೆ.

ಚಕ್ರತೀರ್ಥ ಅವರು ಟಿಪ್ಪುವನ್ನು ‘ಮೈಸೂರು ಹುಲಿ’ಎಂದು ಕರೆದವರು ಯಾರು? ಅವನಿಗೆ ‘ಸುಲ್ತಾನ’ ಎಂಬ ಬಿರುದು ಕೊಟ್ಟವರು ಯಾರು? ಎಂದು ಪ್ರಶ್ನಿಸಿರುವುದಲ್ಲದೆ, ಪಠ್ಯ ಪುಸ್ತಕದಲ್ಲಿ ಪ್ರಸ್ತಾಪಿಸಿರುವ ಟಿಪ್ಪುವಿನ ಪ್ರಗತಿಪರ ಕಾರ್ಯಗಳಾದ ರಾಕೆಟ್ ತಂತ್ರಜ್ಞಾನ ಅಭಿವೃದ್ಧಿ, ಮರಾಠರಿಂದ ಲೂಟಿಗೊಳಗಾದ ಶೃಂಗೇರಿ ಮಠಕ್ಕೆ ದೇಣಿಗೆ ನೀಡಿದ್ದು, ರೇಷ್ಮೆ ಅಭಿವೃದ್ಧಿ ಕೈಗೊಂಡ ವಿಚಾರಗಳನ್ನು ವೈಭವೀಕರಣಗೊಂಡಿವೆ ಎಂಬ ನೆಪದಲ್ಲಿ ಪಠ್ಯದಿಂದ ಕೈಬಿಟ್ಟಿರುವ ಅಂಶಗಳು ಮಾಧ್ಯಮಗಳಿಂದ ಬೆಳಕಿಗೆ ಬಂದಿವೆ. ಬ್ರಿಟಿಷ್ ಅಧಿಕಾರಿ ಮೆಡೋಸ್ ಟೇಲರ್ ಅವರು ಜನರು ಟಿಪ್ಪುವನ್ನು ‘ಮೈಸೂರು ಹುಲಿ’ ಎಂದು ಕರೆಯುತ್ತಿದ್ದರೆಂದು ದಾಖಲಿಸಿದ್ದಾರೆ. ಅವರ ಮಾತುಗಳನ್ನು ಜನಪದ ಲಾವಣಿಗಳು ಕೂಡ ಪುಷ್ಟಿಕರಿಸಿದ್ದು, ಲಾವಣಿಗಳು ಟಿಪ್ಪುವನ್ನು ‘ಮೈಸೂರು ಹುಲಿ’ಎಂದು ಹಾಡಿ ಹೊಗಳಿವೆ. ಟಿಪ್ಪು ರಾಕೆಟ್ ತಂತ್ರಜ್ಞಾನವನ್ನು ಅಭಿವೃದ್ಧಿ ಮಾಡಿದ ಬಗ್ಗೆ ಖ್ಯಾತ ವಿಜ್ಞಾನಿಗಳಾದ ರೊದ್ದಂ ನರಸಿಂಹ ಮತ್ತು ಎ.ಪಿ.ಜೆ. ಅಬ್ದುಲ್ ಕಲಾಂ ಅವರೇ ಉಲ್ಲೇಖಿಸಿದ್ದಾರೆ. ರೇಷ್ಮೆ ಅಭಿವೃದ್ಧಿಪಡಿಸಿದ ಕುರಿತು ಖ್ಯಾತ ಇತಿಹಾಸಕಾರರಾದ  ಡಾ. ಸೂರ್ಯನಾಥ ಕಾಮತ್, ಪ್ರೊ. ಷೇಕ್ ಅಲಿ ಮೊದಲಾದವರು ದಾಖಲಿಸಿದ್ದಾರೆ. ಅಲ್ಲದೆ, ಶೃಂಗೇರಿ ಮಠದ ಸಚ್ಚಿದಾನಂದ ಭಾರತಿ ಸ್ವಾಮೀಜಿಗಳೊಂದಿಗೆ ಟಿಪ್ಪು 23 ಪತ್ರ ವ್ಯವಹಾರಗಳನ್ನು ನಡೆಸಿರುವ ದಾಖಲೆಗಳು ಎ.ಕೆ. ಶಾಸ್ತ್ರಿ ಅವರು ಸಂಪಾದಿಸಿರುವ ‘ಶೃಂಗೇರಿಮಠದ ಕಡತಗಳಲ್ಲಿಯ ಆಯ್ದ ಚಾರಿತ್ರಿಕ ದಾಖಲೆಗಳು’ಕೃತಿಯಲ್ಲಿ (ಪುಟ: 242-272) ಪ್ರಕಟವಾಗಿವೆ. ಇವುಗಳಲ್ಲಿ ಮಠಕ್ಕೆ ಟಿಪ್ಪು ನೀಡಿರುವ ಅಪಾರ ಪ್ರಮಾಣದ ದಾನ ದತ್ತಿಯನ್ನು ಯಾರೂ ಕೂಡ ಅಲ್ಲಗಳೆಯಲಾರರು. ಈ ಎಲ್ಲಾ ಕಾರಣಗಳಿಂದಾಗಿಯೇ ಇತಿಹಾಸಕಾರ ತಿ.ತಾ. ಶರ್ಮ ಅವರು ‘ಅನಾಮಧೇಯ ಮೈಸೂರಿಗೆ ಅಭಿಮಾನಧನ ಟಿಪ್ಪು ಸುಲ್ತಾನ ಅಂತಾರಾಷ್ಟ್ರೀಯ ಸ್ಥಾನಗಳಿಸಿಕೊಟ್ಟ’ ಎಂದು ಪ್ರಶಂಸಿಸಿದ್ದಾರೆ. ಟಿಪ್ಪುವನ್ನು ಕೇವಲ ಮುಸ್ಲಿಮನಾಗಿ ನೋಡದೆ 18ನೇ ಶತಮಾನದ ರಾಜಕೀಯ ಸಂಘರ್ಷಗಳ ಹಿನ್ನೆಲೆಯಲ್ಲಿ  ಗ್ರಹಿಸುವುದು ಇತಿಹಾಸವು ಅಪೇಕ್ಷಿಸುವ ವಿಧಾನ ಎಂದು ವಿವರಿಸಿದ್ದಾರೆ.

ಇತಿಹಾಸ ವಿಷಯದಲ್ಲಿ ಇತಿಹಾಸಕಾರರ ಅಭಿಪ್ರಾಯಗಳು ಅಂತಿಮವಾಗಬೇಕೇ ವಿನಃ ಇತರರ ಅಭಿಪ್ರಾಯಗಳಲ್ಲ. ಸಂಬಂಧಪಟ್ಟ ಸಂಘ ಸಂಸ್ಥೆಗಳು, ತಜ್ಞರ ಜೊತೆಗೆ ವರದಿ ಸಿದ್ಧತೆಯ ಪೂರ್ವದಲ್ಲಿ ಇವರು ಚರ್ಚಿಸಬೇಕಿತ್ತೆ ವಿನಃ ವರದಿ ಸಲ್ಲಿಸಿದ ನಂತರದಲ್ಲಲ್ಲ. ಒಮ್ಮೆ ಪಠ್ಯ ಮರುಪರಿಷ್ಕರಣಾ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿದ ಮೇಲೆ ಅಧ್ಯಕ್ಷರ ಜವಾಬ್ದಾರಿ ಮುಗಿಯುತ್ತದೆ. ಒಪ್ಪುವುದು ಬಿಡುವುದು ಸರ್ಕಾರಕ್ಕೆ ಬಿಟ್ಟ ವಿಚಾರ. ಆದರೆ ಶಿಷ್ಟಾಚಾರ ಮರೆತು ಹಿಂದಿನ ಅಧ್ಯಕ್ಷರನ್ನು ದೂಷಿಸುವುದಾಗಲಿ, ಅಕಾಡೆಮಿಕ್ ವಲಯದಲ್ಲಿ ನಡೆಯಬೇಕಾದ ಚರ್ಚೆಯನ್ನು ಸಂತೆಯಲ್ಲಿ ನಿಂತು ಮಾತನಾಡುವುದಾಗಲಿ ಸರ್ಕಾರದ ನಿಯಮಗಳಿಗೂ ಕೂಡ ವಿರುದ್ಧವಾದುದು. ಆದ್ದರಿಂದ ರೋಹಿತ್ ಚಕ್ರತೀರ್ಥ ಅವರ ಈ ವರ್ತನೆಯನ್ನು ಸರ್ಕಾರವು ಕೂಡಲೇ ನಿಯಂತ್ರಿಸಬೇಕೆಂದು ಒತ್ತಾಯಿಸುತ್ತೇವೆ.

Donate Janashakthi Media

Leave a Reply

Your email address will not be published. Required fields are marked *