ರಾಜ್ಯಾದ್ಯಂತ ರೋಹಿತ್ ಕಾಯ್ದೆಗಾಗಿ ಜನಾಂದೋಲನ ಪ್ರಾರಂಭ
ಬೆಂಗಳೂರು: ಬಾಬಾಸಾಹೇಬ್ ಅಂಬೇಡ್ಕರ್ ನೀಡಿರುವ ಸಂವಿಧಾನದ ಪೀಠಿಕೆ ಪ್ರತಿ ಪ್ರಜೆಗೆ ಅವಕಾಶ ಹಾಗು ಸ್ಥಾನಮಾನದ, ಸಮಾನತೆಯ ಭರವಸೆ ನೀಡುತ್ತದೆ. ಆದರೆ ಸಂವಿಧಾನ ಜಾರಿಯಾದ 75 ವರ್ಷಗಳ ನಂತರವೂ ದಲಿತ ಬಹುಜನ ಯುವಜನರಿಗೆ ಈ ಎರಡು ಭರವಸೆಗಳು ಈಡೇರಿಲ್ಲ ಎಂದು ದಲಿತ ನಾಯಕ ಮಾವಳ್ಳಿ ಶಂಕರ್ ಆಕ್ರೋಶ ವ್ಯಕ್ತಪಡಿಸಿದರು. ಉನ್ನತ
ನಗರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ರೋಹಿತ್ ವೇಮುಲ, ಪಾಯಲ್ ತದ್ವಿ ಅವರ ಸಾಂಸ್ಥಿಕ ಕೊಲೆಗಳು ಈ ಭರವಸೆಯ ನಿರಾಕರಣೆಯ ತೀವ್ರ ಉದಾಹರಣೆಯಾಗಿದೆ. 2021 ರಲ್ಲಿ, ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಲೋಕಸಭಾ ಸದಸ್ಯರಿಗೆ 2014-2021 ರ ಅವಧಿಯಲ್ಲಿ, ಐಐಟಿ, ಐಐಎಂ, ಎನ್‌ಐಟಿ ಮತ್ತು ಇತರ ಕೇಂದ್ರೀಯ ವಿಶ್ವವಿದ್ಯಾಲಯಗಳಲ್ಲಿ 122 ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಹೇಳಿದರು.
ಈ 122 ರಲ್ಲಿ 68 ವಿದ್ಯಾರ್ಥಿಗಳು SC/ST/OBC ವರ್ಗಗಳಿಗೆ ಸೇರಿದವರು. ಜೊತೆಗೆ ಈ ಸಮಾನತೆಯ ನಿರಾಕರಣೆಯಿಂದ ಪ್ರತಿ ವರ್ಷ ಸಾವಿರಾರು ದಲಿತ ಬಹುಜನರು ಉನ್ನತ ಶಿಕ್ಷಣ ಸೇರಿದ ನಂತರ ಡ್ರಾಪ್ ಔಟ್ ಆಗುತ್ತಿದ್ದಾರೆ. ಡಿಸೆಂಬರ್ 2023 ರಲ್ಲಿ ಸರ್ಕಾರ ಸಂಸತ್ತಿನಲ್ಲಿ ನೀಡಿದ ಅಂಕಿ ಅಂಶಗಳ ಪ್ರಕಾರ , ಕೇವಲ ಕೇಂದ್ರೀಯ ವಿಶ್ವಾ ವಿದ್ಯಾನಿಲಯಗಳಿಂದಲೇ , 2018-2023 ಮಧ್ಯೆ 13000 ಹೆಚ್ಚು SC/ST/OBC ಸಮುದಾಯದ ವಿಧಾರ್ಥಿಗಳು ಡ್ರಾಪ್ ಔಟ್ ಆಗಿದ್ದರು ಎಂದು ಕಳವಳ ವ್ಯ್ತಪಡಿಸಿದರು.
ಇದನ್ನೂ ಓದಿ: ಬೆಂಗಳೂರಿನಲ್ಲಿ ದಕ್ಷಿಣ ಭಾರತದ ಅತಿದೊಡ್ಡ ಅಂಗಾಂಗ ಮರುಪಡೆಯುವ ಕೇಂದ್ರ ಸ್ಥಾಪನೆ
ಜೊತೆಗೆ , ಕಾಲೇಜಿನಲ್ಲಿ ಓದುತ್ತಿರುವ ವಿದ್ಯಾರ್ಥಿಗಳಿಗೆ ಜಾತಿ ತಾರತಮ್ಯ ದಿನನಿತ್ಯ ಎದುರಿಸುವ ಹಿಂಸೆಯಾಗಿದೆ. ಈ ದಿನನಿತ್ಯದ ಹಿಂಸೆಯನ್ನು ನಿವೃತ್ತ ಯು.ಜಿ.ಸಿ ಅಧ್ಯಕ್ಷರಾದ ಸುಖದೇವ್ ಥೋರಟ್ ನೇತೃತ್ವದ ಸಮಿತಿಯ ವರದಿಯಲ್ಲಿ ವಿವರಿಸಲಾಯಿತು. ಹಾಸ್ಟೆಲ್ ನಲ್ಲಿ , ಮೆಸ್ ನಲ್ಲಿ, ಆಟದ ಮೈದಾನ ಹಾಗು ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಸಹ ಹೇಗೆ ಜಾತಿಯು ಅಡ್ಡವಾಗಿದೆ ಎಂದು ಅವರ ವರದಿ ವಿವರಿಸಿತ್ತು ಎಂದರು.
ದಲಿತ ನಾಯಕ ಬಸವರಾಜ ಕೌತಾಳ ಮಾತನಾಡಿ, ಇಂದು ಸಹ ಕರ್ನಾಟಕದಲ್ಲಿ ಜಾತಿ ಸಾಮಾನ ಶಿಕ್ಷಣಕ್ಕೆ ಅಡ್ಡಿಯಾಗಿದೆ. ಒಂದು ಕಡೆ ಸರ್ಕಾರ ಸಾರ್ವಜನಿಕ ಶಿಕ್ಷಣಕ್ಕಾಗಿ ನೀಡುತ್ತಿರುವ ಅನುದಾನ ಸಾಲುತ್ತಿಲ್ಲ, ಇನ್ನೊಂದೆಡೆ ಶಿಕ್ಷಣದ ಖಾಸಗೀಕರಣ ವೇಗವಾಗಿ ಮುಂದುವರಿಯುತ್ತಿದೆ. ಇದರ ಜೊತೆಗೆ NEP, CUET, NEET ನಂತಹ ನೀತಿಗಳಿಂದ ಶಿಕ್ಷಣದ ಕೇಂದ್ರೀಕರಣವಾಗುತ್ತಿದೆ. ಇದರ ಪರಿಮಾಣ ಉತ್ತಮ ಉನ್ನತ ಶಿಕ್ಷಣ ದಲಿತ-ಬಹುಜನರಿಂದ ದೂರವಾಗಿದೆ. ಇದಕ್ಕೆ ಎರಡು ಇತ್ತೀಚಿನ ಉದಾಹರಣೆಗಳೆಂದರೆ -ಎರಡು ದಿವಸಗಳ ಹಿಂದೆ ತಾನೇ , ಸರ್ಕಾರ SC/ST/OBC ಸಮುದಾಯದ ವಿದ್ಯಾರ್ಥಿಗಳಿಗೆ ನಡೆಸುವ ಹಾಸ್ಟೆಲ್ ಗಳು ಇಂತಹ ಹೀನಾಯ ಪರಿಸ್ಥಿತೆಯಲ್ಲಿದೆ ಎಂದು ಮುಖ್ಯವಾಹಿನಿಗಳ ಮುಖಪುಟದಲ್ಲಿ ಪ್ರಕಟವಾಗಿತ್ತು. ವಿದ್ಯಾರ್ಥಿಗಳಿಗೆ ಪ್ರತಿದಿವಸ ಸ್ನಾನ ಮಾಡಲು ಸಹ ಆಗದ, ಆರೋಗ್ಯಕರ ಊಟ ಸಿಗದ ಪರಿಸ್ಥಿತಿ ರಾಜ್ಯವನ್ನೇ ಬೆಚ್ಚಿ ಬೀಳಿಸಿದೆ ಎಂದರು.
ಇತ್ತೀಚಿಗೆ ಬಿಡುಗಡೆಯಾದ ‘ಶಿಕ್ಷಣ , ಮಹಿಳೆಯರು, ಮಕ್ಕಳು,ಯುವಜನರ ಹಾಗು ಕ್ರೀಡಾ ಸ್ಥಾಯಿ ಸಮಿತಿ’ಯಾ (Parliamentary Standing Committee on Education, Women, Children, Youth and Sports) ವರದಿಯ ಪ್ರಕಾರ ದೇಶದ 30 ದೊಡ್ಡ ಖಾಸಗಿ ವಿಶ್ವವಿದ್ಯಾನಿಲಯಗಳಲ್ಲಿ SC ಸಮುದಾಯದ ವಿಧಾರ್ಥಿಗಳ ಸಂಖ್ಯೆ ಕೇವಲ 5%! ಮಾತ್ರ ಎಂದರು.
ರೋಹಿತ್ ಕಾಯ್ದೆಯ ಅಗತ್ಯ
ರೋಹಿತ್ ವೇಮುಲ ಅವರ ತಾಯಿ ಹಾಗು ಪಾಯಲ್ ತದ್ವಿ ಅವರ ತಾಯಿ, ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಜಾತಿ ತಾರತಮ್ಯ ತಡೆಯಲು ಸರ್ಕಾರ ಉತ್ತಮ ಕ್ರಮಗಳನ್ನು ತೆಗೆದುಕೊಳ್ಳಬೇಕೆಂದು 2019 ರಲ್ಲಿ ಸರ್ವೋಚ್ಛ ನ್ಯಾಯಾಲಯದ ಮೊರೆ ಹೋದರು. ಉನ್ನತ ಶಿಕ್ಷಣ ಕ್ಷೇತ್ರದಲ್ಲಿ ತಾರತಮ್ಯವನ್ನು ತಡೆಯಲು ಯು.ಜಿ.ಸಿ ನಿಯಮಗಳೇನೋ ಇವೆ (ಉದಾಹರಣೆಗೆ – Equal Opportunity Cell), ಆದರೆ ಅವುಗಳು ಸಂಪೂರ್ಣವಾಗಿ ಜಾರಿಯಾಗದೇ ತಾರತಮ್ಯವನ್ನು, ದಲಿತ ಬಹುಜನ ವಿದ್ಯಾರ್ಥಿಗಳು ಶಿಕ್ಷಣ ತೊರೆಯುವುದನ್ನು ತಡೆದಿಲ್ಲ ಎಂದು ನ್ಯಾಯಾಲಯಕ್ಕೆ ತಿಳಿಸಿದರು.
ಸರ್ವೋಚ್ಚ ನ್ಯಾಯಾಲಯದಲ್ಲಿ ಪ್ರಕರಣವನ್ನು ದಾಖಲಿಸಿ ಆರು ವರ್ಷಗಳಾಗಿದ್ದು ಹಾಗು ಯು.ಜಿ.ಸಿ ನಿಯಮಾವಳಿ ಜಾರಿಯಾಗಿ 13 ವರ್ಷಗಳಾಗಿದ್ದರೂ, ದೇಶದ ವಿಶ್ವವಿದ್ಯಾನಿಲಯಗಳ ಮೇಲ್ವಿಚಾರಣೆ ಮಾಡುವ ಯು.ಜಿ.ಸಿ ತಾರತಮ್ಯವಾನ್ನು ತಡೆಗಟ್ಟುವಲ್ಲಿ ಸಂಪೂರ್ಣವಾಗಿ ವಿಫಲವಾಗಿದೆ. ಪ್ರಸ್ತುತದಲ್ಲಿರುವ ನಿಯಮಾವಳಿಯನ್ನು ಜಾರಿ ಮಾಡದೆ, ಸ್ವೆಚ್ಚಾನುಸಾರವಾಗಿ ನಿಶ್ಯಕ್ತವಾದ ನೂತನ ನಿಯಮಾವಳಿಯನ್ನು ಫೆಬ್ರವರಿ 2025ಲ್ಲಿ ಜಾರಿಮಾಡಿದೆ.
ಇನ್ನೊಂದು ಕಡೆ ಜಾತಿ ತಾರತಮ್ಯವನ್ನು ತಡೆಯಲು ಇರುವ ಕಾಯ್ದೆ ಎಂದರೆ ಜಾತಿ ದೌರ್ಜನ್ಯ ತಡೆ ಕಾಯ್ದೆ. ದೌರ್ಜನ್ಯ ತಡೆ ಕಾಯ್ದೆ ಹಲ್ಲೆ, ಜಾತಿ ನಿಂದನೆ, ಲೈಂಗಿಕ ಅತ್ಯಾಚಾರದಂತಹ ಕ್ರಿಮಿನಲ್ ಆಚರಣೆಗಳಿಗೆ ಸೂಕ್ತ ಆದರೆ ಕಾಲೇಜು ಮಟ್ಟದಲ್ಲಿ ನಡೆಯುವ ತಾರತಮ್ಯ ಈ ಕಾಯ್ದೆಯಡಿ ಪರಿಹರಿಸಲು ಸೂಕ್ತವಾಗಿರುವುದಿಲ್ಲ.
ಹಾಗು ಈ ಕಾಯ್ದೆಯಲ್ಲಿ ಉನ್ನತ ಶಿಕ್ಷಣ ಕ್ಷೇತ್ರವನ್ನು ಶೋಷಿತ ಸಮುದಾಯದ ವಿದ್ಯಾರ್ಥಿಗಳಿಗೆ ಅನುಕೂಲಕರ ವಾತಾವರಣ ಸೃಷ್ಟಿಸಲು ಸಾಧ್ಯವಿಲ್ಲ. ಥೋರಟ್ ಸಮಿತಿ ವರದಿ ಹೇಳಿದಂತೆ ಉತ್ತಮ ವಾತಾವರಣ ಸೃಷ್ಟಿಸಲು ದಲಿತ ಬಹುಜನ ವಿದ್ಯಾರ್ಥಿಗಳಿಗೆ ಆಂಗ್ಲದಲ್ಲಿ ವಿಶೇಷ ತರಬೇತಿ ನೀಡುವುದು, ದಮನಿಸುವ ಜಾತಿಗಳಿಗೆ ಸೇರಿದ ಶಿಕ್ಷಕರಿಗೂ ಹಾಗು ವಿದ್ಯಾರ್ಥಿಗಳಿಗೂ ಜಾತಿ ಬಗ್ಗೆ caste sensitization workshops ಮಾಡುವುದು ಇತ್ಯಾದಿ ಸಹ ಆಗಬೇಕು. ಅದು ಇಂದಿನ ನಿಯಮ-ಕಾನೂನುಗಳಲ್ಲಿ ಸಾಧ್ಯವಾಗುತ್ತಿಲ್ಲ.
ಹಾಗಾಗಿ ಈಗಿರುವ ನಿಯಮಗಳು ಹಾಗು ಕಾನೂನು ದಲಿತ ಬಹುಜನ ವಿದ್ಯಾರ್ಥಿಗಳಿಗೆ ಘನತೆ, ಸಮಾನ ಅವಕಾಶ, ಸ್ಥಾನಮಾನ ಖಾತ್ರಿ ಪಡಿಸಲು ವಿಫಲವಾದ ಕಾರಣ, ಇಂದು ರೋಹಿತ್ ಕಾಯ್ದೆ ಅಗತ್ಯವಾಗಿದೆ.
ಹಾಗಾಗಿ ರೋಹಿತ್ ಕಾಯ್ದೆ ಜಾರಿಯಾಗುವಂತೆ, ಸಾರ್ವಜನಿಕ ವಿಶ್ವಾವಿದ್ಯಾನಿಲಯಗಳಲ್ಲಿ ಉತ್ತಮ, ಗುಣಮಟ್ಟ ಶಿಕ್ಷಣ ನೀಡುವಂತೆ ಹಾಗು ಖಾಸಗಿ ವಿಶ್ವವಿದ್ಯಾನಿಲಯಗಳ ನಿಯಂತ್ರಣ ಆಗುವಂತೆ ಒತ್ತಾಯಿಸಲು ನಾವು ರಾಜ್ಯ ಮಟ್ಟದ ಆಂದೋಲನ ಕೈಗೊಳ್ಳುತ್ತಿದ್ದೇವೆ. ರಾಜ್ಯದ ಯುವಜನರು ನಮ್ಮೊಂದಿಗೆ ಕೈಜೋಡಿಸುವಂತೆ ವಿನಂತಿಸುತ್ತೇವೆ. ಜಾತಿ ರಹಿತ ಕರ್ನಾಟಕವನ್ನು ಕಟ್ಟುವುದೇ ನಮ್ಮ ಅಂತಿಮ ಗುರಿ !
ಪತ್ರಿಕಾಗೋಷ್ಠಿಯಲ್ಲಿ ಡಾ. ಕೆ.ಪಿ ಅಶ್ವಿನಿ, ಆಶ್ನಾ, ಡಾ. ನಂದಕುಮಾರ್, ಲೇಖಾ ಅಡವಿ, ಸರೋವರ್ ಬೆಂಕಿಕೆರೆ, ವೆಂಕಟೇಶ್ ಹಾಜರಿದ್ದರು.
ಇದನ್ನೂ ನೋಡಿ: ಮಂಗಳೂರು | ಕುಡಿಯಲು ನೀರು ಕೊಡಿ : ಖಾಲಿ ಕೊಡಗಳೊಂದಿಗೆ ಪಾಲಿಕೆಗೆ ಬರ್ತಿವಿ Janashakthi Media