ಕೋವಿಡ್-೧೯ ರ ಪ್ರಸಾರವನ್ನು ತಡೆಗಟ್ಟುವ ಜವಾಬ್ದಾರಿಯಿಂದ ಕೇಂದ್ರದ ಮೋದಿ ಸರ್ಕಾರ ತನ್ನ ಕೈ ತೊಳೆದುಕೊಂಡಿದೆ ಎಂದು ಹೇಳಲು ತೀರಾ ಖೇದ ವೆನಿಸುತ್ತದೆ. ಕೊರೊನಾ ದೊಡ್ಡ ರೋಗವಲ್ಲ, ಅದನ್ನು ಧೈರ್ಯದಿಂದ ಎದುರಿಸಬೇಕು. ಅವರೊಂದಿಗೆ ಬದುಕಲು ಕಲಿಯಬೇಕು ಎಂಬ ಬಿಜೆಪಿ ಸರ್ಕಾರದ ಹೃದಯಹೀನ ಆದೇಶ ಜನಮನ ಕುಲುಕುತ್ತಿದೆ. ಸರ್ಕಾರ ಈ ಮೂಲಕ ತನ್ನ ಕಾರ್ಯವಿಫಲತೆಯನ್ನು ಮರೆಮಾಚಲು ಪ್ರಯತ್ನ ಮಾಡುತ್ತಿದೆ. ಸತ್ತರೆ ಸಾಯಿರಿ, ಬದುಕಿದರೆ ಬದುಕಿರಿ ಎಂಬ ಅಮಾನವೀಯ ಪರಿಸ್ಥಿತಿಯನ್ನು ಒಪ್ಪಿಕೊಳ್ಳಲು ಒತ್ತಾಯಿಸುತ್ತಿದೆ.
ಕೊರೊನಾ ಸಾಂಕ್ರಾಮಿಕವನ್ನು ಪರಿಣಾಮಕಾರಿಯಾಗಿ ಎದುರಿಸಿ ಹಿಮ್ಮೆಟಿಸಲು ನಮ್ಮ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಾಗಿರಬೇಕು. ರೋಗ ತಗಲುವ ಮುನ್ನಾವೇ ದೇಹದಲ್ಲಿ ರೋಗ ನಿರೋಧಕ ಶಕ್ತಿ ಗಣನೀಯ ಪ್ರಮಾಣದಲ್ಲಿದ್ದರೆ ವೈರಾಣುಗಳ ದಾಳಿ ನಿಯಂತ್ರಣಕ್ಕೆ ಒಳಪಡುವುದು. ಸದ್ಯಕ್ಕೆ ಕೊರೊನಾ ವೈರಸ್‌ಗೆ ಔಷಧ ಇಲ್ಲದ ಕಾರಣ ಅದನ್ನು ತಡೆಗಟ್ಟಲು ನಮ್ಮ ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳುವುದೊಂದೇ ಮಾರ್ಗ. ಈ ಸಂದರ್ಭದಲ್ಲಿ ಹೆಚ್ಚು ಪೌಷ್ಟಿಕ ಆಹಾರವನ್ನು ಸೇವಿಸುವುದು ಅತ್ಯಗತ್ಯ.
ಗ್ರಾಮೀಣ ಹಾಗೂ ನಗರ ಪ್ರದೇಶಗಳ ದುಡಿಯುವ ಜನಗಳು ಪೌಷ್ಟಿಕ ಆಹಾರ ಕೊರತೆಯನ್ನು ತೀವ್ರವಾಗಿ ಅನುಭಸುತ್ತಿರುತ್ತಾರೆ. ನಮ್ಮ ದುಡಿಮೆಗಾರ ಮಹಿಳೆಯರು ನಿರಂತರವಾಗಿ ರಕ್ತಹೀನತೆಯಿಂದ ನರಳುತ್ತಿರುತ್ತಾರೆ. ಹಾಗಾಗಿ ಅವರು ಸುಲಭವಾಗಿ ಇಂತಹ ಸಾಂಕ್ರಾಮಿಕ ರೋಗಗಳಿಗೆ ಬಲಿಯಾಗುತ್ತಾರೆ. ಒಳ್ಳೆಯ ಆಹಾರ ಸೇವಿಸಲು ಸಾಧ್ಯವಾಗಬೇಕಾದರೆ ಅವರಿಗೆ ಹಣ ಸಂಪಾದನೆಗೆ ನಿರಂತರ ಕೆಲಸ ಸಿಗುವಂತಿರಬೇಕು. ಉದ್ಯೋಗ ಖಾತ್ರಿಯಂತ ಯೋಜನೆ ಸಮರ್ಪಕವಾಗಿ ಜಾರಿಯಾಗಬೇಕು. ಉದ್ಯೋಗ ಖಾತ್ರಿ ವಿಷಯದಲ್ಲಿ ಕಿರುಕುಳ ನೀಡುವುದನ್ನು ತಡೆಗಟ್ಟಬೇಕು. ಗ್ರಾಮೀಣ ಉದ್ಯೋಗ ಖಾತ್ರಿಯಲ್ಲಿ ಮನೆಗೊಬ್ಬರಂತೆ ಕೆಲಸ ಕೊಡುವುದು ಏನೇನು ಸಾಲದು. ಒಂದು ಮನೆಯಲ್ಲಿ ಕೆಲಸ ಬಯಸುವರೆಲ್ಲರಿಗೂ ಕೆಲಸ ಕೊಡಬೇಕು. ಆಗ ಮಾತ್ರ ಕುಟುಂಬದ ಆದಾಯ ಹೆಚ್ಚಾಗಿ ಅವರು ಒಳ್ಳೆಯ ಪೌಷ್ಟಿಕ ಆಹಾರವನ್ನು ಸೇವಿಸಬಹುದು.
ಅಗತ್ಯ ವಸ್ತುಗಳ ಬೆಲೆಗಳು ಗಗನಕ್ಕೇರುತ್ತಿವೆ. ದಿನಸಿ, ತರಕಾರಿ, ಹಣ್ಣುಹಂಪಲುಗಳು. ಬಡವರಿಗೆ ಕೈಗೆಟುಕ ಇವುಗಳನ್ನು ಗಣನೀಯವಾಗಿ ಸೇವನೆ ಮಾಡದಿದ್ದರೆ ದೇಹದಲ್ಲಿ ರೋಗ ನಿರೋಧಕ ಶಕ್ತಿ ವೃದ್ಧಿಯಾಗದು. ಇತ್ತೀಚೆಗೆ ಇಂಧನ ದರ ಏರಿಕೆಯಿಂದಾಗಿ ಸಾರಿಗೆ ವೆಚ್ಚ ಅಧಿಕವಾಗಿದೆ. ಅಡುಗೆ ಎಣ್ಣೆ ದರದಲ್ಲಿ ಕೆ.ಜಿ. ಒಂದಕ್ಕೆ ೨೦ ರೂ. ಹೆಚ್ಚಳವಾಗಿದೆ. ಈ ಬೆಲೆ ಏರಿಕೆಗೆ ತಕ್ಕಂತೆ ಕೂಲಿಕಾರರ ವೇತನ ಹೆಚ್ಚಾದರೆ ಮಾತ್ರ ಅವರು ಕನಿಷ್ಟ ಬದುಕನ್ನಾದರೂ ಬದುಕಬಹುದು. ಇನ್ನೊಂದೆಡೆ ನಿರುದ್ಯೋಗ ಉಲ್ಬಣಗೊಳ್ಳುತ್ತಿದೆ. ಮತ್ತೊಂದೆಡೆ ಅಗತ್ಯ ವಸ್ತುಗಳ ಕಾಯ್ದೆಯನ್ನು ತೆಗೆದು ಹಾಕಲು ಸಂಚು ಹೂಡಲಾಗುತ್ತಿದೆ. ಇದು ದೇಶದ ಆಹಾರ ವ್ಯವಸ್ಥೆಯನ್ನೇ ನಾಶ ಮಾಡಲಿದೆ.
ಈ ಹಿನ್ನೆಲೆಯಲ್ಲಿ, ಎಡಪಕ್ಷಗಳು ಉದ್ಯೋಗ ಖಾತ್ರಿಯಲ್ಲಿ ದಿನಗೂಲಿಯನ್ನು ೬೦೦ ರೂ. ಹೆಚ್ಚಿಸಬೇಕೆಂದು ಒತ್ತಾಯಿಸುತ್ತಾ ಬಂದಿವೆ. ವರ್ಷದಲ್ಲಿ ೧೦೦ ದಿನಗಳ ಬದಲಾಗಿ ವರ್ಷದಲ್ಲಿ ಕನಿಷ್ಟ ೨೦೦ ದಿನಗಳ ಕೆಲಸ ಕೊಡಬೇಕೆಂದು ಒತ್ತಾಸುತ್ತಿವೆ. ನಗರ ಪ್ರದೇಶಗಳಿಗೂ ಒಂದು ಉದ್ಯೋಗ ಖಾತ್ರಿ ಯೋಜನೆಯನ್ನು ಜಾರಿಗೆ ತರಲು ಕೇಂದ್ರ ಸರ್ಕಾರ ಒಲವು ತೋರಿದೆ ಎಂದು ತಿಳಿದು ಬಂದಿದೆ. ಇದು ಎಡಪಕ್ಷಗಳಿಗೆ ಸಿಕ್ಕ ಜಯವಾಗಿದೆ. ಎಲ್ಲ ನಿರುದ್ಯೋಗಿಗಳಿಗೆ ನಿರುದ್ಯೋಗ ಭತ್ಯೆಯನ್ನು ಜಾರಿಗೆ ತರಲು ಕೇಂದ್ರ ಸರ್ಕಾರ ಮುಂದಾಗಬೇಕು. ನಿರುದ್ಯೋಗಿಗಳ ಹೋರಾಟವೂ ತೀವ್ರವಾಗಬೇಕು.
ತಿಂಗಳುಗಟ್ಟಲೆ ಘೋಷಿಸಲಾದ ಲಾಕ್‌ಡೌನ್‌ನಿಂದಾಗಿ ವಲಸೆ ಕಾರ್ಮಿಕರು, ಅಸಂಘಟಿತ ವಲಯದ ಕಾರ್ಮಿಕರು, ಪೌರಕಾರ್ಮಿಕರು, ಹಮಾಲಿ ಕಾರ್ಮಿಕರು ಆದಾಯದ ಕೊರತೆಯಿಂದ ತೀವ್ರ ಸಂಕಷ್ಟ ಅನುಭವಿಸಿದ್ದಾರೆ. ಇದುವರೆಗೂ ಅವರು ಚೇತರಿಸಿಕೊಂಡಿಲ್ಲ ಅಂತಹ ಪ್ರತಿಯೊಂದು ಕುಟುಂಬಕ್ಕೆ ಮುಂದಿನ ೬ ತಿಂಗಳು ಮಾಸಿಕ ತಲಾ ರೂ.೭೫೦೦ ಆರ್ಥಿಕ ನೆರವು ನೀಡಬೇಕೆಂದು ಎಡಪಕ್ಷಗಳು ಒತ್ತಾಯ ಮಾಡುತ್ತಿವೆ. ಇಂತಹ ಕುಟುಂಬದ ಪ್ರತಿಯೊಂದ ಸದಸ್ಯನಿಗೆ ಉಚಿತ ಆಹಾರ ದಾನ್ಯ ವಿತರಿಸಬೇಕು. ಅದು ಕೇವಲ ಅಕ್ಕಿ ಮಾತ್ರವಲ್ಲ, ಗೋಧಿ, ಅಡುಗೆ ಎಣ್ಣೆ, ಸಕ್ಕರೆ, ತೊಗರಿಬೇಳೆ, ಸೀಮೆಎಣ್ಣೆಯನ್ನು ಉಚಿತವಾಗಿ ವಿತರಿಸಬೇಕು. ಇಂತಹ ಕನಿಷ್ಟ ಸೌಲಭ್ಯಗಳನ್ನು ಒದಗಿಸಿದರೆ ಮಾತ್ರ ಅವರು ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಂಡು ಸಾಂಕ್ರಾಮಿಕವನ್ನು ತಡೆಗಟ್ಟಬಹುದು.