ಮೊಹಾಲಿ: ಗುಪ್ತಚರ ಇಲಾಖೆ ಠಾಣೆ ಮೇಲೆ ರಾಕೆಟ್ ಚಾಲಿತ ಗ್ರೆನೇಡ್ ದಾಳಿ

ಮೊಹಾಲಿ: ರಾಕೆಟ್ ಚಾಲಿತ ಗ್ರೆನೇಡ್ ಅಥವಾ ರಾಕೆಟ್ ಚಾಲಿತ ಪ್ರೋಪೆಲ್ಡ್‌ ಗ್ರೆನೇಡ್ (ಆರ್‌ಪಿಜಿ)ಯನ್ನು ರಸ್ತೆಯಿಂದ ಹಾರಿಸಲಾಗಿದ್ದು, ಮೊಹಾಲಿಯಲ್ಲಿರುವ ಪಂಜಾಬ್ ಪೊಲೀಸ್ ಗುಪ್ತಚರ ಪ್ರಧಾನ ಕಚೇರಿಯ ಗಾಜುಗಳು ಒಡೆದಿವೆ ಎಂದು ವರದಿಯಾಗಿದೆ.

ಎಸ್‌ಎಎಸ್‌ ನಗರದ ಸೆಕ್ಟರ್ 77ರಲ್ಲಿರುವ ಪಂಜಾಬ್ ಪೊಲೀಸ್ ಗುಪ್ತಚರ ಇಲಾಖೆ ಪ್ರಧಾನ ಕಛೇರಿಗೆ ನೆನ್ನೆ (ಮೇ 09) ರಾತ್ರಿ 7.45 ರ ಸುಮಾರಿಗೆ ದಾಳಿಯಾಗಿದ್ದು ಸಣ್ಣಪುಟ್ಟ ಸ್ಪೋಟ ಸಂಭವಿಸಿದೆ. ಕಟ್ಟಡದ ಗಾಜುಗಳು ಮಾತ್ರ ಒಡೆದು ಹೋಗಿದ್ದು, ಕಚೇರಿಯೊಳಗಿನ ಯಾವುದೇ ದಾಖಲೆಗಳಿಗೆ ಹಾನಿ ಆಗಿಲ್ಲ. ಪ್ರಕರಣದ ಸಂಬಂಧ 11 ಜನರನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ವಿಧಿವಿಜ್ಞಾನ ವಿಭಾಗದ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ತನಿಖೆಯಲ್ಲಿ ಆರಂಭಿಸಿದ್ದಾರೆ. ಈ ಸ್ಫೋಟಕ ಮತ್ತು ಏ.24ರಂದು ಬುರೈಲ್‌ ಜೈಲಿನಲ್ಲಿ ವಶಪಡಿಸಿಕೊಂಡ ಸ್ಫೋಟಕಕ್ಕೆ ಸಾಕಷ್ಟು ಸಾಮ್ಯತೆ ಇದೆ ಎನ್ನಲಾಗಿದೆ.

ಅಧಿಕ ಭದ್ರತೆ ಇರುವ ಕಟ್ಟಡದ ಮೂರನೇ ಮಹಡಿಯಲ್ಲಿ ಗ್ರೆನೇಡ್ ಬಿದ್ದಿದೆ. ಆದರೆ ಇದು ದೊಡ್ಡ ಮಟ್ಟದಲ್ಲಿ ಸ್ಫೋಟಿಸಿಲ್ಲ. ಹರ್ಯಾಣದ ಕರ್ನಾಲ್‌ನಲ್ಲಿ ಸುಧಾರಿತ ಸ್ಫೋಟಕಗಳನ್ನು ಹೊತ್ತ ನಾಲ್ವರು ಶಂಕಿತ ಖಲಿಸ್ತಾನಿ ಭಯೋತ್ಪಾದಕರನ್ನು ಬಂಧಿಸಿದ ಮೂರು ದಿನಗಳ ನಂತರ ಈ ದಾಳಿ ನಡೆದಿದೆ.

ಚಂಢೀಗಡದ ಪೊಲೀಸ್ ಕ್ಷಿಪ್ರ ಕಾರ್ಯಪಡೆಯು ಸ್ಥಳಕ್ಕೆ ಭೇಟಿ ನೀಡಿದ್ದು, ತನಿಖೆ ಕೈಗೊಂಡಿದ್ದಾರೆ. ಇದೊಂದು ಭಯೋತ್ಪಾದನಾ ಕೃತ್ಯವಾ? ಎಂಬ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಮೊಹಾಲಿ ಎಸ್ಪಿ ರವೀಂದರ್ ಪಾಲ್ ಸಿಂಗ್, “ಈ ಘಟನೆಯನ್ನು ಕಡೆಗಣಿಸಲಾಗುವುದಿಲ್ಲ. ಭಯೋತ್ಪಾದನಾ ಕೃತ್ಯ ಅಲ್ಲ ಎಂದು ಹೇಳಲು ಆಗಲ್ಲ. ತನಿಖೆ ನಡೆಸುತ್ತಿದ್ದೇವೆ” ಎಂದು ಹೇಳಿದ್ದಾರೆ.

ಪಂಜಾಬ್ ಮುಖ್ಯಮಂತ್ರಿ ಭಗವಂತ್‌ ಸಿಂಗ್‌ ಮಾನ್‌  “ಮೊಹಾಲಿ ಸ್ಫೋಟ ಘಟನೆಯನ್ನು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಪಂಜಾಬ್ ರಾಜ್ಯದ ವಾತಾವರಣ ಹಾಳು ಮಾಡಲು ಯತ್ನಿಸಿದ ಯಾರನ್ನೂ ಸುಮ್ಮನೆ ಬಿಡುವುದಿಲ್ಲ” ಎಂದು ಟ್ವೀಟ್ ಮಾಡಿದ್ದಾರೆ. ಅಲ್ಲದೆ, ಮುಖ್ಯಮಂತ್ರಿಗಳು ತಮ್ಮ ನಿವಾಸದಲ್ಲಿ ಹಿರಿಯ ಪೊಲೀಸ್ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದ್ದಾರೆ. ಡಿಜಿಪಿ ಹಾಗು ಇತರ ಹಿರಿಯ ಪೊಲೀಸ್ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿ ಪ್ರಕರಣದ ಬಗ್ಗೆ ಮಾಹಿತಿ ನೀಡಿದ್ದಾರೆ.

ಆರ್‌ಪಿಜಿ ಎಂದರೆ ʻರಾಕೆಟ್ ಪ್ರೊಪೆಲ್ಡ್ ಗ್ರೆನೇಡ್ʼ. ಇದು ಮೂಲತಃ ಸೋವಿಯತ್ ರಷ್ಯಾ ಕಾಲದಲ್ಲಿ ರೂಪಿಸಲಾಗಿದ್ದ ತಂತ್ರಜ್ಞಾನದ ಶಸ್ತ್ರವಾಗಿದೆ. ಹೆಗಲ ಮೇಲಿಟ್ಟುಕೊಂಡು ಕ್ಷಿಪಣಿ ಹಾರಿಸುವಂಥದ್ದು. ಒಬ್ಬ ವ್ಯಕ್ತಿ ಇದನ್ನು ಹೊತ್ತೊಯ್ಯಬಲ್ಲಷ್ಟು ಹಗುರವಾಗಿರುತ್ತದೆ. ಇದನ್ನು ಆ್ಯಂಟಿ-ಟ್ಯಾಂಕ್ ಶಸ್ತ್ರವಾಗಿ ಸಾಮಾನ್ಯವಾಗಿ ಇದನ್ನು ಬಳಸಲಾಗುತ್ತದೆ.

ಎಎಪಿ ಮುಖ್ಯಸ್ಥ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್  “ಮೊಹಾಲಿಯಲ್ಲಿ ನಡೆದ ದಾಳಿಯು ಪಂಜಾಬ್‌ನ ಶಾಂತಿಯನ್ನು ಕದಡಲು ಬಯಸಿರುವವರು ನಡೆಸಿರುವ ಹೇಡಿತನದ ಕೃತ್ಯ. ಆಮ್ ಆದ್ಮಿ ಪಾರ್ಟಿ ನೇತೃತ್ವದ ಪಂಜಾಬ್ ಸರ್ಕಾರವು ಆ ಜನರ ಬಯಕೆಗಳನ್ನು ಈಡೇರಿಸಲು ಬಿಡುವುದಿಲ್ಲ. ಪಂಜಾಬ್ ಜನತೆಯ ಸಹಕಾರದೊಂದಿಗೆ ಎಲ್ಲ ಸನ್ನಿವೇಶಗಳಲ್ಲಿಯೂ ಶಾಂತಿ ಕಾಪಾಡಲಾಗುವುದು ಮತ್ತು ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ವಿಧಿಸಲಾಗುವುದು” ಎಂದು ಹೇಳಿದ್ದಾರೆ.

Donate Janashakthi Media

Leave a Reply

Your email address will not be published. Required fields are marked *