‘ಮುಕ್ತ ವ್ಯಾಪಾರ’ವನ್ನು ಆಧರಿಸಿದ ಬೆಳವಣಿಗೆಯ ಅಪಾಯಗಳು

-ಪ್ರೊ. ಪ್ರಭಾತ್ ಪಟ್ನಾಯಕ್
-ಅನು:ಕೆ.ಎಂ. ನಾಗರಾಜ್

‘ಮುಕ್ತ’ ಅಥವಾ ಅನಿರ್ಬಂದಿತ ವ್ಯಾಪಾರವನ್ನು ಆಧರಿಸಿದ ಬೆಳವಣಿಗೆಯ ಕಾರ್ಯ-ತಂತ್ರವು ಹಲವು ಕಾರಣಗಳಿಂದ ನೈತಿಕವಾಗಿ ಆಕ್ಷೇಪಾರ್ಹವಾಗಿದೆ. ಆರ್ಥಿಕ ನೆಲೆಯಲ್ಲಿಯೂ ಸಹ, ಈ ಕಾರ್ಯ-ತಂತ್ರವು, ಸ್ಪಷ್ಟವಾಗಿ, ಆಂತರಿಕ ಮಾರುಕಟ್ಟೆಯ ವಿಸ್ತರಣೆಯನ್ನು ಆಧರಿಸಿದ ಬೆಳವಣಿಗೆಗಿಂತಲೂ ಕೆಳಮಟ್ಟದ್ದೇ ಇರುತ್ತದೆ. ಆದ್ದರಿಂದ, ಮುಕ್ತ ವ್ಯಾಪಾರವನ್ನು ಆಧರಿಸಿದ ಬೆಳವಣಿಗೆಯ ಹಾದಿಗಿಂತಲೂ ಉದ್ಯೋಗಗಳನ್ನು, ಉತ್ಪತ್ತಿಯನ್ನು ಮತ್ತು ಒಟ್ಟಾರೆ ಬೇಡಿಕೆಯನ್ನು ಹೆಚ್ಚಿಸುವಲ್ಲಿ ಪ್ರಭುತ್ವದ ಮಧ್ಯಪ್ರವೇಶವು ಮೂರನೇ ಜಗತ್ತನ್ನು ಉತ್ತಮಗೊಳಿಸಬಲ್ಲದು.

ಮೂರನೆಯ ಜಗತ್ತಿನೊಳಗೆ ತಮ್ಮ ರಫ್ತುಗಳ ಮೂಲಕ ಯಶಸ್ವಿಯಾಗಿರುವ ಕೆಲವು ದೇಶಗಳಿವೆ, ನಿಜ. ಬೂರ್ಜ್ವಾ ಅರ್ಥಶಾಸ್ತ್ರವು ಈ ಕೆಲವರ ಯಶಸ್ಸನ್ನು ಮಾತ್ರ ವೈಭವೀಕರಿಸುತ್ತದೆಯಾದರೂ, ಮೂರನೆಯ ಜಗತ್ತಿನ ಉಳಿದ ಭಾಗಗಳಲ್ಲಿ ಆ ಯಶಸ್ಸನ್ನು ನಕಲು ಮಾಡುವುದು ಸಾಧ್ಯವಿಲ್ಲ. ಲಾಟರಿಯಲ್ಲಿ ಒಬ್ಬನ ಗೆಲುವನ್ನು ಅದರಲ್ಲಿ ಭಾಗವಹಿಸಿದ ಇತರರು ನಕಲು ಮಾಡುವುದು ಸಾಧ್ಯವಿಲ್ಲ.

ಯಾವುದೇ ಅರ್ಥವ್ಯವಸ್ಥೆಯಲ್ಲಿ ಒಟ್ಟಾರೆ ಬೇಡಿಕೆಯ ಸಮಸ್ಯೆ ಇರಲಾಗದು, ಏಕೆಂದರೆ, ಉತ್ಪಾದನೆ ಎಷ್ಟೇ ಇರಲಿ, ಉತ್ಪಾದನೆಯಾದ ಕಾರಣದಿಂದಲೇ ಅದಕ್ಕೆ ಬೇಡಿಕೆ ಬಂದುಬಿಡುತ್ತದೆ ಎಂದು ಫ್ರೆಂಚ್ ಅರ್ಥಶಾಸ್ತ್ರಜ್ಞ ಜೆ ಬಿ ಸೇ ನಂಬಿದ್ದರು. ಮಾರುಕಟ್ಟೆಯಲ್ಲಿ ಕೆಲವೊಮ್ಮೆ ಸುರಕ್ಷಾ-ಪಿನ್‌ಗಳ ದಾಸ್ತಾನು ಬಹಳ ಹೆಚ್ಚು ಇರಬಹುದು ಮತ್ತು ಬ್ಲೇಡ್‌ಗಳ ದಾಸ್ತಾನು ಬಹಳ ಕಡಿಮೆ ಇರಬಹುದು.

ಇದನ್ನೂ ಓದಿ: ಬಿಲ್ಲು ಬಾಣ ಮಾದರಿಯ ವಿದ್ಯುತ್ ಕಂಬ ತೆರವಿಗೆ ನೀಡಿದ್ದ ಆದೇಶ ವಾಪಸ್ ಪಡೆದ ತಹಸೀಲ್ದಾರ್!

ಅಂತಹ ಜುಜುಬಿ ಪ್ರಮಾಣದ ಹೊಂದಾಣಿಕೆಗಳನ್ನು ಹೊರತುಪಡಿಸಿದರೆ, ಒಟ್ಟಾರೆಯಾಗಿ, ಉತ್ಪಾದನೆಗೆ ಹೋಲಿಸಿದರೆ ಬೇಡಿಕೆ ಬಹಳ ಕಡಿಮೆ ಇರಲಾರದು. ಅರ್ಥಶಾಸ್ತ್ರದಲ್ಲಿ ಸೇ’ಸ್ ಲಾ ಎಂದು ಕರೆಯಲ್ಪಡುವ ಈ ಪ್ರತಿಪಾದನೆಯು ನಿಸ್ಸಂಶಯವಾಗಿ ಒಂದು ಅಸಂಬದ್ಧವೇ ಸರಿ. ಏಕೆಂದರೆ, ಒಂದು ವೇಳೆ ಈ ನಿಯಮವು ನಿಜವೇ ಇದ್ದರೆ, ಅತಿ-ಉತ್ಪಾದನಾ ಬಿಕ್ಕಟ್ಟು ಉದ್ಭವಿಸುವುದೇ ಇಲ್ಲ. ಸೇಸ್‌ನ ಈ ನಿಯಮವನ್ನು ಮಾರ್ಕ್ಸ್ ಕಟುವಾಗಿ ಟೀಕಿಸಿದ್ದರು.

ಮತ್ತು, 1930ರ ದಶಕದಲ್ಲಿ ಜೆ ಎಂ ಕೇನ್ಸ್ ಮತ್ತು ಮೈಕಲ್ ಕಲೆಕಿ, ಪ್ರತ್ಯೇಕವಾಗಿ ಮತ್ತು ಬಹುತೇಕ ಏಕಕಾಲದಲ್ಲಿ ಅದರ ತಾರ್ಕಿಕ ದೌರ್ಬಲ್ಯವನ್ನು ತೋರಿಸಿಕೊಟ್ಟಿದ್ದರು. ಆದಾಗ್ಯೂ, ಬೂರ್ಜ್ವಾ ಅರ್ಥಶಾಸ್ತ್ರವು, ಬಂಡವಾಳಶಾಹಿಯ ಕಾರ್ಯಾಚರಣೆಯಲ್ಲಿ ಕಂಡುಬರುವ ಯಾವ ನ್ಯೂನತೆಯನ್ನೂ ಒಪ್ಪಿಕೊಳ್ಳುವುದಿಲ್ಲ, ಮಾತ್ರವಲ್ಲ, ಅವಿಶ್ವಸನೀಯ ಸೈದ್ಧಾಂತಿಕ ತಂತ್ರಗಳ ಮೂಲಕ ಸೇಸ್ ಕಾನೂನನ್ನು ಪುನರ್-ಸ್ಥಾಪಿಸಲು ಶ್ರದ್ಧಾಪೂರ್ವಕವಾಗಿ ಪ್ರಯತ್ನಿಸಿದೆ.

ಈ ಎಲ್ಲವನ್ನೂ ಇಲ್ಲಿ ನೆನಪಿಸಿಕೊಳ್ಳುವ ಕಾರಣವೆಂದರೆ, ಮುಕ್ತ ವ್ಯಾಪಾರವನ್ನು ಸಮರ್ಥಿಸುವ ಪ್ರತಿಯೊಂದು ವಾದವೂ ಸೇನಿಯಮವನ್ನು ಅಂಗೀಕಾರಾರ್ಹವೆಂದು ಭಾವಿಸಿಕೊಂಡಿರುತ್ತದೆ. ಸ್ಪಷ್ಟವಾಗಿ ಅಲ್ಲದಿದ್ದರೂ ಸೂಚ್ಯವಾಗಿ ಈ ನಿಯಮವನ್ನು ಒಪ್ಪಿಕೊಂಡಿದ್ದರೂ ಸಹ, ಮುಕ್ತ ವ್ಯಾಪಾರದ ಸಮರ್ಥನೆಗಾಗಿ ಮಾಡುವ ವಾದವು, ಎಲ್ಲ ಅರ್ಥವ್ಯವಸ್ಥೆಗಳೂ, ಮುಕ್ತ ವ್ಯಾಪಾರದಲ್ಲಿ ಭಾಗವಹಿಸುವ ಮೊದಲು ಮತ್ತು ನಂತರ ಈ ಎರಡೂ ಸಂದರ್ಭಗಳಲ್ಲಿ, ಪೂರ್ಣ ಉದ್ಯೋಗ ಪರಿಸ್ಥಿತಿಯಲ್ಲಿರುತ್ತವೆ ಎಂದು ಭಾವಿಸಿಕೊಳ್ಳುತ್ತದೆ. ಮತ್ತು ಈ ವ್ಯಾಪಾರವು ಎಂಥಹ ಬದಲಾವಣೆಯನ್ನು ಉಂಟುಮಾಡುತ್ತದೆ ಎಂದರೆ, ಪ್ರತಿಯೊಂದು ದೇಶವೂ ತನ್ನ ಎಲ್ಲ ಸಂಪನ್ಮೂಲಗಳನ್ನೂ ಸಂಪೂರ್ಣವಾಗಿ ಬಳಕೆಮಾಡಿಕೊಳ್ಳುವಂತೆ ನೋಡಿಕೊಳ್ಳುತ್ತದೆ ಮತ್ತು ಅದು ವಿಶ್ವದ ಒಟ್ಟು
ಉತ್ಪಾದನೆಯನ್ನು ಹೆಚ್ಚಿಸುತ್ತದೆ (ಪ್ರತಿಯೊಂದು ದೇಶವೂ ತುಲನಾತ್ಮಕ ಅನುಕೂಲ ಹೊಂದಿದ ಒಂದು ಕ್ಷೇತ್ರದಲ್ಲಿ ಹೆಚ್ಚು ಹೆಚ್ಚು ಪರಿಣತಿ ಹೊಂದುತ್ತಾ ಹೋಗುತ್ತದೆ).

ಈ ವಿವರಣೆಯಿಂದ ಮುಕ್ತ ವ್ಯಾಪಾರವು ಎಲ್ಲ ದೇಶಗಳಿಗೂ ಪ್ರಯೋಜನಕಾರಿಯಾಗಿದೆ ಎಂಬ ಭಾವನೆ ವ್ಯಕ್ತವಾಗುತ್ತದೆ, ಆದರೆ, ಈ ಪ್ರತಿಪಾದನೆಯು ನಿಸ್ಸಂಶಯವಾಗಿಯೂ ದೋಷಯುಕ್ತವಾದುದೇ. ಏಕೆಂದರೆ, ಬೇರೆ ಕಾರಣಗಳ ಜೊತೆಗೆ, ಸೇ ನಿಯಮವೇ ದೋಷಯುಕ್ತವಾಗಿದೆ. ಬಂಡವಾಳಶಾಹಿ ದೇಶಗಳಲ್ಲಿ ಸಾಮಾನ್ಯವಾಗಿ ಆಂತರಿಕ ಬೇಡಿಕೆಯ ಕೊರತೆಯ ಕಾರಣದಿಂದಾಗಿ, ಎಲ್ಲ ಸಂಪನ್ಮೂಲಗಳನ್ನು ಸಂಪೂರ್ಣವಾಗಿ ಬಳಕೆ ಮಾಡಿಕೊಳ್ಳಲಾಗುವುದಿಲ್ಲ. ಇದು ಇಡೀ ವಿಶ್ವದ ಅರ್ಥವ್ಯವಸ್ಥೆಯಲ್ಲಿ ಕಂಡುಬರುವ ಸಮಸ್ಯೆಯೂ ಹೌದು.

ವಿಶ್ವ ಅರ್ಥವ್ಯವಸ್ಥೆಯು ಒಟ್ಟಾರೆಯಾಗಿ ಒಂದು ವೇಳೆ ಬೇಡಿಕೆಯ ಸಮಸ್ಯೆಯಿಂದ ಬಳಲುತ್ತಿದೆ ಎಂದುಕೊಂಡರೆ, ಈ ಸನ್ನಿವೇಶದಲ್ಲಿ, ಮುಕ್ತ ವ್ಯಾಪಾರದ ಕಾರಣದಿಂದ, ಆಗುವುದು ಏನೆಂದರೆ, ಒಂದು ಅರ್ಥವ್ಯವಸ್ಥೆಯು ತನ್ನ ಉತ್ಪಾದನೆಯ ಮತ್ತು ಉದ್ಯೋಗದ ಮಟ್ಟವನ್ನು ಹೆಚ್ಚಿಸಿಕೊಂಡರೆ, ಆಗ, ಯಾವುದೋ ಒಂದು ದೇಶವು ಅದರ ಉತ್ಪಾದನಾ ಮತ್ತು ಉದ್ಯೋಗದ ಇಳಿಕೆಯ ಸಮಸ್ಯೆಯನ್ನು ಅನುಭವಿಸಿರುತ್ತದೆ. ಆದ್ದರಿಂದ, ಮುಕ್ತ ವ್ಯಾಪಾರವು ಎಲ್ಲರಿಗೂ ಪ್ರಯೋಜನಕಾರಿಯಾಗುವ ಬದಲು ದೇಶ ದೇಶಗಳ ನಡುವೆ ಒಂದು ಅನಾರೋಗ್ಯಕರ ಪೈಪೋಟಿಯನ್ನು ಹುಟ್ಟಿಹಾಕುತ್ತದೆ. ಈ ಪೈಪೋಟಿಯಲ್ಲಿ ಪ್ರತಿಯೊಬ್ಬರೂ ಉಳಿದವರಿಗೆ ನಷ್ಟ ಉಂಟುಮಾಡಿ ತಾವು ಬದುಕುಳಿಯಲು ಪ್ರಯತ್ನಿಸುತ್ತಾರೆ ಎಂಬುದು ಇದರಿಂದ ತಿಳಿದುಬರುತ್ತದೆ.

ಅನೈತಿಕ ಕಾರ್ಯತಂತ್ರ ಆದ್ದರಿಂದ, ನವ-ಉದಾರವಾದದ ಅಡಿಯಲ್ಲಿ ಬೆಳವಣಿಗೆಯ ಈ ಕಾರ್ಯ-ತಂತ್ರವು ಮೂಲಭೂತವಾಗಿ ನೈತಿಕ ನೆಲೆಯಲ್ಲಿ
ಸ್ವೀಕಾರಾರ್ಹವಲ್ಲ. ಇದು ಮೂರನೆಯ ಜಗತ್ತಿನ ದೇಶಗಳನ್ನು ಪರಸ್ಪರರ ವಿರುದ್ಧ ಕಾದಾಡುವ ಒತ್ತಾಯಕ್ಕೆ ಒಳಪಡಿಸುತ್ತದೆ. ಮೂಲಭೂತವಾಗಿ ಇದು ಬೂರ್ಜ್ವಾ ಕಾರ್ಯ-ತಂತ್ರವೂ ಹೌದು. ಬಂಡವಾಳಶಾಹಿಗಳು ದುಡಿಯುವ ಜನರನ್ನು ಉದ್ಯೋಗ ಪಡೆಯಲು ಅವರ ನಡುವೆಯೇ ಪೈಪೋಟಿಗೆ ಇಳಿಯುವ ಪರಿಸ್ಥಿತಿಗೆ ಒಳಪಡಿಸುತ್ತಾರೆ (ಬಂಡವಾಳಶಾಹಿಗಳ ಇಚ್ಛೆಗೆ ವಿರುದ್ಧವಾಗಿ ಅವರು ಕಾರ್ಮಿಕ ಸಂಘಗಳಲ್ಲಿ ಸೇರಿಕೊಳ್ಳುವವರೆಗೆ, ಆದಾಗ್ಯೂ, ಉದ್ಯೋಗಿ ಮತ್ತು ನಿರುದ್ಯೋಗಿಗಳ ನಡುವಿನ ಪೈಪೋಟಿಯಂತೂ ನಿಲ್ಲುವುದೇ ಇಲ್ಲ).

ಅದೇ ರೀತಿಯಲ್ಲಿ ನವ-ಉದಾರವಾದಿ ಬಂಡವಾಳಶಾಹಿಯು ಮೂರನೆಯ ಜಗತ್ತಿನ ದೇಶಗಳನ್ನು ಪರಸ್ಪರ ಪೈಪೋಟಿಗೆ ಇಳಿಯಲೇಬೇಕಾದ ಪರಿಸ್ಥಿತಿಗೆ ಒಳಪಡಿಸುತ್ತದೆ. ವಸಾಹತುಶಾಹಿ-ವಿರೋಧಿ ಹೋರಾಟಗಳಲ್ಲಿ ಶತಮಾನಗಳ ಕಾಲ ಐಕ್ಯತೆ ಮತ್ತು ಒಗ್ಗಟ್ಟಿನ ಪ್ರಜ್ಞೆಯನ್ನು ಬೆಳೆಸಿಕೊಂಡಿದ್ದ ಈ ದೇಶಗಳು ಇಂದೂ ಸಹ ಸಾಮ್ರಾಜ್ಯಶಾಹಿಯನ್ನು ಎದುರಿಸಲು ತಮ್ಮ ನಡುವೆ ಒಗ್ಗಟ್ಟನ್ನು ಕಾಪಾಡಿಕೊಳ್ಳಬೇಕಾಗುತ್ತದೆ – ಮನುಕುಲಕ್ಕೆ ಅದರ ಉಳಿವಿಗಾಗಿ ಮತ್ತು ಏಳಿಗೆಗಾಗಿ ಪೈಪೋಟಿಗಿಂತ ಸಹಕಾರದ ಅಗತ್ಯವಿದೆ ಎಂಬ ಮೂಲಭೂತ ಸತ್ಯದ ಹೊರತಾಗಿಯೂ – ನವ-ಉದಾರವಾದಿ ಬಂಡವಾಳಶಾಹಿಯು ತದ್ವಿರುದ್ಧ ದಿಕ್ಕಿನಲ್ಲಿ ಹೇರುವ ಈ ಒತ್ತಡವು ನೈತಿಕವಾಗಿ ಆಕ್ಷೇಪಾರ್ಹವಾಗಿದೆ.

ಮುಕ್ತ ಅಥವಾ ಅನಿರ್ಬಂದಿತ ವ್ಯಾಪಾರವನ್ನು ಆಧರಿಸಿದ ಬೆಳವಣಿಗೆಯ ಕಾರ್ಯ-ತಂತ್ರವು ನೈತಿಕವಾಗಿ ಆಕ್ಷೇಪಾರ್ಹವಾಗಲು ಒಂದು ಅಧಿಕ ಕಾರಣವೂ ಇದೆ. ವ್ಯಾಪಾರದ ಮೇಲಿನ ನಿರ್ಬಂಧಗಳನ್ನು ತೆಗೆದುಹಾಕಿದಾಗ ಅದಕ್ಕೆ ಅಗತ್ಯವಾಗಿರುವಂತೆ ಬಂಡವಾಳದ ಹರಿವಿನ ಮೇಲಿನ ನಿರ್ಬಂಧಗಳನ್ನೂ ತೆಗೆದುಹಾಕಬೇಕಾಗುತ್ತದೆ. ಬಂಡವಾಳದ ಒಳಹರಿವು ನಿಂತಾಗ, ಚಾಲ್ತಿ ಖಾತೆ ಕೊರತೆಗಳಿಗೆ ಹಣಕಾಸು ಒದಗಿಸಿಕೊಳ್ಳುವುದು ಹಲವು ದೇಶಗಳಿಗೆ ಅಸಾಧ್ಯವಾಗುತ್ತದೆ ಎಂಬುದು ನವ-ಉದಾರವಾದದ ಅಡಿಯಲ್ಲಿ ನಮ್ಮ ಅನುಭವದಿಂದ ನಮಗೆ ತಿಳಿದಿದೆ. ಆದರೆ, ಈ ನಿರ್ಬಂಧಗಳನ್ನು ತೆಗೆದುಹಾಕಿದಾಗ, ಅದು ಆ ದೇಶವನ್ನು ಜಾಗತಿಕ ಹಣಕಾಸಿನ ಹರಿವಿನ ಸುಳಿಗೆ ತೆರೆದುಕೊಳ್ಳುವಂತೆ ಮಾಡುತ್ತದೆ ಮಾತ್ರವಲ್ಲ ದೇಶದ ಪ್ರಭುತ್ವವನ್ನು ದುರ್ಬಲಗೊಳಿಸುತ್ತದೆ. ಮತ್ತು, ಉದ್ಯೋಗ ಮತ್ತು ಉತ್ಪಾದನೆಯ ಮಟ್ಟವನ್ನು ಹೆಚ್ಚಿಸುವುದಕ್ಕಾಗಿ ಪ್ರಭುತ್ವವು ಮಧ್ಯಪ್ರವೇಶಿಸದಂತೆ ಅದನ್ನು ಸಂಪೂರ್ಣವಾಗಿ ಅಸಮರ್ಥಗೊಳಿಸುತ್ತದೆ.

ಅ-ಸ್ವಾತಂತ್ರ‍್ಯದ ಮುಂದುವರಿಕೆ ಆದ್ದರಿಂದ, ಜನರ ಜೀವನ ಮಟ್ಟವು, ಅವರ ಶಕ್ತಿ-ಸಾಮರ್ಥ್ಯಗಳಿಗೆ ಮೀರಿದ ಮತ್ತು ವಿಶ್ವದ ಬೇಡಿಕೆಯ ಮಟ್ಟವನ್ನು ನಿರ್ಧರಿಸುವ
ನಿರಾಕಾರ ಶಕ್ತಿಗಳ ಮೇಲೆ ಅವಲಂಬಿತವಾಗುತ್ತದೆ. ವಸಾಹತುಶಾಹಿ-ವಿರೋಧಿ ಹೋರಾಟವು, ವಸಾಹತುಶಾಹಿ ಕೊನೆಗೊಂಡ ನಂತರ ಜನರು ತಮ್ಮ ಇಚ್ಛೆಗಳನ್ನು ಪ್ರತಿಬಿಂಬಿಸುವ ಪ್ರಜಾಸತ್ತಾತ್ಮಕವಾಗಿ-ಚುನಾಯಿತ ಸರ್ಕಾರದ ಮೂಲಕ ತಮ್ಮ ಆರ್ಥಿಕ ಭವಿಷ್ಯವನ್ನು ರೂಪಿಸಿಕೊಳ್ಳುತ್ತಾರೆ ಎಂಬ ಭರವಸೆಯನ್ನು ನೀಡಿತ್ತು. ಆದರೆ, ಅರ್ಥವ್ಯವಸ್ಥೆಯು ತನ್ನಲ್ಲಿ ಅಂತರ್ಗತವಾಗಿರುವ ಪ್ರವೃತ್ತಿಗಳ ಮೂಲಕ ಒಂದು ನಿರಾಕಾರ ಆಡಳಿತವನ್ನು ನಡೆಸಿದರೆ ಮತ್ತು ಜನರು ಸ್ವಲ್ಪ ಹಿಡಿತ ಹೊಂದಿರುವ ರಾಜಕೀಯದ ಮೂಲಕ ತಮ್ಮ ಆರ್ಥಿಕ ಜೀವನವನ್ನು ಸುಧಾರಿಸಿಕೊಳ್ಳುವುದು ಸಾಧ್ಯವಾಗದಿದ್ದರೆ, ಆಗ ಅದು ವಸಾಹತುಶಾಹಿ ಕಾಲದಲ್ಲಿದ್ದ ಅವರ ಅ-ಸ್ವಾತಂತ್ರ‍್ಯದ ಮುಂದುವರಿಕೆಯಾಗುತ್ತದೆ. ಅಷ್ಟೇ ಅಲ್ಲ, ಈ ಇಡೀ ಏರ್ಪಾಟು ಅವರನ್ನು ತಮ್ಮ ಭವಿಷ್ಯವನ್ನು ತಾವೇ ರೂಪಿಸಿಕೊಳ್ಳುವ ಪ್ರಜೆಗಳ ಬದಲಾಗಿ, ಮಾರುಕಟ್ಟೆಗಳ ಮರ್ಜಿಗೆ ಒಳಗಾದ ವಸ್ತುಗಳ ಸ್ಥಿತಿಗೆ ಇಳಿಸುತ್ತದೆ. ನೈತಿಕವಾಗಿ ಇದು ಹೆಚ್ಚು ಆಕ್ಷೇಪಾರ್ಹವಾಗಿದೆ.

ಸೇ ನಿಯಮ ನಾವು ಊಹಿಸಿದುದಕ್ಕಿಂತಲೂ ಹೆಚ್ಚು ದೋಷಪೂರ್ಣವಾಗಿದೆ. ಆರ್ಥಿಕ ನೆಲೆಯಲ್ಲಿಯೂ ಸಹ, ನೈತಿಕ ಆಕ್ಷೇಪಣೆಗಳ ಹೊರತಾಗಿ, ಮುಕ್ತ ವ್ಯಾಪಾರವನ್ನು ಆಧರಿಸಿದ ಬೆಳವಣಿಗೆಯ ಕಾರ್ಯ-ತಂತ್ರವು, ಸ್ಪಷ್ಟವಾಗಿ, ಆಂತರಿಕ ಮಾರುಕಟ್ಟೆಯ ವಿಸ್ತರಣೆಯನ್ನು ಆಧರಿಸಿದ ಬೆಳವಣಿಗೆಗಿಂತಲೂ ಕೆಳಮಟ್ಟದ್ದೇ ಇರುತ್ತದೆ. ವಿಶ್ವ ಅರ್ಥವ್ಯವಸ್ಥೆಯು ಒಂದು ವೇಳೆ ಬೇಡಿಕೆಯ ಸಮಸ್ಯೆಯಿಂದ ಬಳಲುತ್ತಿದೆ ಎಂದಾದರೆ, ಆಗ ಅದರೊಳಗಿನ ಬಿಡಿ ಬಿಡಿ ಅರ್ಥವ್ಯವಸ್ಥೆಗಳು ಬೇಡಿಕೆಯ ಸಮಸ್ಯೆಯಿಂದ ತಪ್ಪದೇ ಬಳಲುತ್ತಿರುತ್ತವೆ (ಎಲ್ಲವೂ ಸಮಸ್ಯೆಯಿಂದ ಬಳಲುತ್ತಿವೆ ಎಂದಲ್ಲ). ನವ-ಉದಾರವಾದಿ ಆಳ್ವಿಕೆಯಲ್ಲಿ, ಮೂರನೆಯ ಜಗತ್ತು ಇಡಿಯಾಗಿ ಒಟ್ಟು ಬೇಡಿಕೆಯ ಅಸಮರ್ಪಕತೆಯಿಂದ ಬಳಲುತ್ತದೆ ಎಂಬುದು ಸಾಮಾನ್ಯವಾಗಿ ಕಂಡುಬರುವ ಸಂಗತಿ. ಆದ್ದರಿಂದ, ಮುಕ್ತ
ವ್ಯಾಪಾರದ ಕಾರಣದಿಂದ ನಿರೂಪಿಸಲ್ಪಟ್ಟ ಬೆಳವಣಿಗೆಯ ಹಾದಿಗಿಂತಲೂ ಉದ್ಯೋಗಗಳನ್ನು, ಉತ್ಪತ್ತಿಯನ್ನು ಮತ್ತು ಒಟ್ಟಾರೆ ಬೇಡಿಕೆಯನ್ನು ಹೆಚ್ಚಿಸುವಲ್ಲಿ ಪ್ರಭುತ್ವದ ಮಧ್ಯಸ್ಥಿಕೆಯು ಮೂರನೇ ಜಗತ್ತನ್ನು ಉತ್ತಮಗೊಳಿಸಬಲ್ಲದು.

ಯಶಸ್ಸನ್ನು ನಕಲು ಮಾಡುವುದು ಸಾಧ್ಯವಿಲ್ಲ ಇಲ್ಲಿ ಮೂರು ಎಚ್ಚರಿಕೆಗಳ ಅಗತ್ಯವಿದೆ. ಮೊದಲನೆಯದು, ಮೂರನೆಯ ಜಗತ್ತಿನ ಬಗ್ಗೆ ನಾವು ಒಟ್ಟಾರೆಯಾಗಿ ಮಾತನಾಡಿದ್ದೇವೆ. ಮೂರನೆಯ ಜಗತ್ತಿನೊಳಗೆ ತಮ್ಮ ರಫ್ತುಗಳ ಮೂಲಕ ಯಶಸ್ವಿಯಾಗಿರುವ ಕೆಲವು ದೇಶಗಳಿವೆ, ನಿಜ. ಆದರೆ, ಅವರ ಉದ್ಯೋಗಗಳು ಮತ್ತು ಉತ್ಪತ್ತಿಯು ಈಗಾಗಲೇ ಎಷ್ಟು ಹೆಚ್ಚಿನ ಮಟ್ಟದಲ್ಲಿವೆ ಎಂದರೆ, ಅಲ್ಲಿ ಪ್ರಭುತ್ವದ ಮಧ್ಯಪ್ರವೇಶವು ಹಣದುಬ್ಬರವನ್ನುಂಟು ಮಾಡದೇ ಒಟ್ಟಾರೆ ಬೇಡಿಕೆಯನ್ನು ಹೆಚ್ಚಿಸುವುದು ಸಾಧ್ಯವಿಲ್ಲ. ಕೆಲವರ ಯಶಸ್ಸು ಇತರರ ವೈಫಲ್ಯವನ್ನು ಮರೆಮಾಚಬಾರದು. ಬೂರ್ಜ್ವಾ ಅರ್ಥಶಾಸ್ತ್ರವು ಈ ಕೆಲವರ ಯಶಸ್ಸನ್ನು ಮಾತ್ರ ವೈಭವೀಕರಿಸುತ್ತದೆಯಾದರೂ, ಮೂರನೆಯ ಜಗತ್ತಿನ ಉಳಿದ ಭಾಗಗಳಲ್ಲಿ ಆ ಯಶಸ್ಸನ್ನು ನಕಲು ಮಾಡುವುದು ಸಾಧ್ಯವಿಲ್ಲ. ಲಾಟರಿಯಲ್ಲಿ ಒಬ್ಬನ ಗೆಲುವನ್ನು ಅದರಲ್ಲಿ ಭಾಗವಹಿಸಿದ ಇತರರು ನಕಲು ಮಾಡುವುದು ಸಾಧ್ಯವಿಲ್ಲ.

ಎರಡನೆಯದು, ಮೂರನೆಯ ಜಗತ್ತಿನೊಳಗೆ ಕಂಡ ಈ ಯಶೋಗಾಥೆಗಳ ಹಿಂದಿರುವ ಗುಟ್ಟು ಯಾವುದು ಎಂದರೆ, ಒಟ್ಟಾರೆ ಬೇಡಿಕೆಯನ್ನು ಹೆಚ್ಚಿಸುವಲ್ಲಿ ಪ್ರಭುತ್ವದ ಹಸ್ತಕ್ಷೇಪವಿಲ್ಲ, ರಫ್ತು ಕಾರ್ಯಕ್ಷಮತೆಯನ್ನು ಹೆಚ್ಚಿಸುವಲ್ಲಿ ಪ್ರಭುತ್ವದ ಹಸ್ತಕ್ಷೇಪವಿದೆ ಎಂಬುದು. ಈ ಸಂಬಂಧವಾಗಿ, ಮೂರನೆಯ ಜಗತ್ತಿನ ದೇಶಗಳ ರಫ್ತು ಕಾರ್ಯಕ್ಷಮತೆಯನ್ನು ಹೆಚ್ಚಿಸಲು, ವಿಷಯವನ್ನು ಮುಕ್ತ ವ್ಯಾಪಾರದ ಕಾರ್ಯಾಚರಣೆಗೆ ಬಿಡುವುದರ ಬದಲು, ಪ್ರಭುತ್ವಗಳು ಮಧ್ಯಪ್ರವೇಶಿಸಬೇಕೆಂದು ಅನೇಕರು ವಾದಿಸಿದ್ದಾರೆ. ಬೇರೆ ರೀತಿಯಲ್ಲಿ ಹೇಳುವುದಾದರೆ, ಅವರು ವಾದಿಸುವುದು ನವ-ಉದಾರವಾದಿ ಕಾರ್ಯ-ತಂತ್ರದ ಬದಲಾಗಿ, ನವ-ವ್ಯಾಪಾರವಾದಿ ಕಾರ್ಯ- ತಂತ್ರವನ್ನು. ವಿಶ್ವ ಅರ್ಥವ್ಯವಸ್ಥೆಯು ಬೇಡಿಕೆಯ ಸಮಸ್ಯೆಯಿಂದ ಬಳಲುತ್ತಿರುವುದರಿಂದ, ನವ-ವ್ಯಾಪಾರವಾದಿ ಕಾರ್ಯ-ತಂತ್ರದ ಮೂಲಕ ರಫ್ತುಗಳನ್ನು ಹೆಚ್ಚಿಸುವಲ್ಲಿ ಯಾವುದೇ ಒಂದು ದೇಶದ ಯಶಸ್ಸೂ ಕೂಡ ಅಗತ್ಯವಾಗಿ ಇತರ ಕೆಲವು ದೇಶಗಳಿಗೆ ನಷ್ಟವನ್ನುಂಟುಮಾಡಿ ಸಾಧಿಸಲ್ಪಟ್ಟಿರುತ್ತದೆ.

ಆದ್ದರಿಂದ, ಮೂರನೆಯ ಜಗತ್ತಿಗೆ ಕೊಡುವ ಈ ಸಲಹೆಯು ನೈತಿಕವಾಗಿ ಆಕ್ಷೇಪಾರ್ಹವಾಗಿದೆ ಮತ್ತು ಅವರೆಲ್ಲರಿಗೂ ಒಟ್ಟಾಗಿ ಸಾಧಿಸಲು ಆರ್ಥಿಕ ದೃಷ್ಟಿಯಲ್ಲೂ ಅಸಾಧುವಾಗಿದೆ. ಮೂರನೆಯದು, ಮೂರನೆಯ ಜಗತ್ತಿನ ಅನೇಕ ದೇಶಗಳು ಅವರ ಎಲ್ಲ ಸಂಪನ್ಮೂಲಗಳನ್ನು ಬಳಸಿಕೊಂಡರೂ, ಅವು ಹೊಂದಿರುವ
ಉತ್ಪಾದನಾ ಸಾಮರ್ಥ್ಯಕ್ಕೆ ಹೋಲಿಸಿದರೆ, ಅವುಗಳ ಉತ್ಪತ್ತಿಯು ಕೆಳ ಮಟ್ಟದಲ್ಲಿದೆ. ಆದರೆ, ಅವರವರ ಪ್ರಭುತ್ವವು ಒಟ್ಟು ಬೇಡಿಕೆಯ ಮಟ್ಟವನ್ನು ಹೆಚ್ಚಿಸಲು ಒಂದು ವೇಳೆ ಮಧ್ಯಪ್ರವೇಶ ಮಾಡಿದರೆ ಮತ್ತು ಆ ಮೂಲಕ ಉದ್ಯೋಗಗಳ ಮತ್ತು ಉತ್ಪತ್ತಿಯ ಮಟ್ಟವನ್ನು ಹೆಚ್ಚಿಸಿದರೆ, ಆಗ ವಿದೇಶಿ ವಿನಿಮಯದ ಕೊರತೆ ಉಂಟಾಗುತ್ತದೆ. ಆದ್ದರಿಂದ, ರಫ್ತುಗಳನ್ನು ಉತ್ತೇಜಿಸುವ ಕಾರ್ಯ-ತಂತ್ರಕ್ಕೆ ಯಾವುದೇ ಪರ್ಯಾಯವಿಲ್ಲ ಎಂದು ತೋರುತ್ತದೆ. ಆಂತರಿಕ ಬೇಡಿಕೆಯನ್ನಷ್ಟೇ ಹೆಚ್ಚಿಸುವುದರಿಂದ ಸಮಸ್ಯೆಯನ್ನು ಬಗೆಹರಿಸಲಾಗದು.

ಒಂದು ನವ-ಉದಾರವಾದಿ ವ್ಯವಸ್ಥೆಯ ಸನ್ನಿವೇಶದಲ್ಲಿ ರಫ್ತುಗಳನ್ನು ಹೆಚ್ಚಿಸುವ ವಿಶಿಷ್ಟ ವಿಧಾನವೆಂದರೆ, ವಿನಿಮಯ ದರದ ಅಪಮೌಲ್ಯವೇ. ಆದರೆ, ಈ ವಿನಿಮಯ ದರದ ಅಪಮೌಲ್ಯವು, ತೈಲದಂತಹ ಅತ್ಯಗತ್ಯ ಲಾಗುವಾಡು ಸೇರಿದಂತೆ ಆಮದುಗಳ ಬೆಲೆಗಳನ್ನು ಹೆಚ್ಚಿಸುತ್ತದೆ ಮತ್ತು ಅದರಿಂದಾಗಿ ದೇಶದ ಎಲ್ಲ ವಸ್ತುಗಳ ಬೆಲೆಗಳನ್ನು ಏರಿಸುತ್ತದೆ. ಆಮದುಗಳ ಬೆಲೆಗಳ ಈ ಏರಿಕೆಯನ್ನು ಅಂತಿಮವಾಗಿ ಅವುಗಳನ್ನು ಬಳಸಿ ತಯಾರಿಸಿದ ವಸ್ತುಗಳಿಗೆ ವರ್ಗಾಯಿಸಿದಾಗ ಹಣದುಬ್ಬರ ಉಂಟಾಗುತ್ತದೆ. ನವ-ಉದಾರವಾದದ ಅಡಿಯಲ್ಲಿ ಸಾಮಾನ್ಯವಾಗಿ ಏನಾಗುತ್ತದೆ ಎಂದರೆ, ವಿನಿಮಯ ದರವು ಅಪಮೌಲ್ಯಕ್ಕೊಳಗಾದಾಗಲೂ ಕಾರ್ಮಿಕರ ಹಣ-ವೇತನ ದರವನ್ನು ಇಳಿಕೆ ಮಾಡುವ ಮೂಲಕ (ಅಥವಾ ಕಾರ್ಮಿಕ ಉತ್ಪಾದಕತೆಗೆ ಅನುಗುಣವಾಗಿ ಅದರ ಏರಿಕೆಯನ್ನು ತಡೆಯುವ ಮೂಲಕ) ಹಣದುಬ್ಬರವನ್ನು ನಿಯಂತ್ರಿಸಲಾಗುತ್ತದೆ. ಕಾರ್ಮಿಕರ ಮೇಲೆ ಮಾಡುವ ಈ ದಾಳಿಯನ್ನು ಒಪ್ಪಲಾಗದು. ಆದರೆ, ಶ್ರೀಮಂತರು ಬಳಸುವ ವಿವಿಧ ಐಷಾರಾಮಿ
ಆಮದು ವಸ್ತುಗಳ ಮೇಲೆ ಪ್ರಭುತ್ವವು ಒಂದು ವೇಳೆ ನಿಯಂತ್ರಣ ಹೇರಿದರೆ, ಕಾರ್ಮಿಕರ ಮೇಲೆ ನಡೆಸುವ ಈ ದಾಳಿಯು ಅನಗತ್ಯವಾಗುತ್ತದೆ.

ಪ್ರಭುತ್ವದ ಮಧ್ಯಪ್ರವೇಶದಿಂದ..

ಆದ್ದರಿಂದ, ಆಂತರಿಕ ಒಟ್ಟು ಬೇಡಿಕೆಯನ್ನು ಹೆಚ್ಚಿಸುವಲ್ಲಿ ಪ್ರಭುತ್ವವು ಮಧ್ಯಪ್ರವೇಶಿಸುವಂತೆ ಮಾಡುವ ಮೂಲಕ ಉದ್ಯೋಗಗಳನ್ನು ಮತ್ತು ಉತ್ಪತ್ತಿಯನ್ನು ಹೆಚ್ಚಿಸುವುದು ಸಾಧ್ಯವಿದೆ. ಮತ್ತು, ವ್ಯಾಪಾರದ ಮೇಲೆ (ಆಮದುಗಳ ಮೇಲೆ) ನಿಯಂತ್ರಣಗಳನ್ನು (ಬಂಡವಾಳ ಹರಿವಿನ ನಿಯಂತ್ರಣಗಳ ಹೊರತಾಗಿ) ಹೇರುವ ಮೂಲಕ ವಿದೇಶಿ ವಿನಿಮಯ ಕೊರತೆಯನ್ನು ನೀಗಿಸಿಕೊಳ್ಳುವುದು ಸಾಧ್ಯವಿದೆ. ಈ ತರ್ಕವನ್ನು ಬಾಹ್ಯ ಸಾಲದ ಹೊರೆಯಿಂದ ಒತ್ತಡಕ್ಕೊಳಗಾದ ದೇಶಗಳ ಸಮಸ್ಯೆಗೂ ಅನ್ವಯಿಸಬಹುದು. ಎಲ್ಲಾ ಸಾಲಗಾರರಿಗೂ ಪೂರ್ಣ ಪರಿಹಾರ ಒದಗಿಸುವ ಒಪ್ಪಂದಕ್ಕೆ ಪ್ರಯತ್ನಿಸುವ ಬದಲು, ಮೊದಲು ಕೆಲವು ಸಾಲಗಳನ್ನು ಆದ್ಯತೆಯ ಮೇಲೆ ಪಾವತಿಸಬೇಕು. ನಂತರ, ಉಳಿದ ಸಾಲಗಳನ್ನು ಪಾವತಿಸಬೇಕು.

ಇಂತಹ ಒಂದು ಆತ್ಮಾವಲೋಕನವನ್ನು ಜಾಗತೀಕರಣಗೊಂಡ ಹಣಕಾಸು ಬಂಡವಾಳ ಮತ್ತು ಅದರ ಹಿಂದೆ ನಿಂತಿರುವ ಪ್ರಬಲ ಶಕ್ತಿಗಳು ವಿರೋಧಿಸುತ್ತವೆ. ಅವರ ಇಡೀ ಸಿದ್ಧಾಂತ ಮತ್ತು ಈ ಸಿದ್ಧಾಂತ ದ ಆಧಾರದ ಮೇಲೆ ಅವರು ನೀಡುವ ಸೌಮ್ಯವಾಗಿ ತೋರುವ ಸಲಹೆಯು ಸಂಪೂರ್ಣವಾಗಿ ದೋಷಪೂರಿತವಾಗಿದೆ, ಏಕೆಂದರೆ, ವಿಶ್ವ ಅರ್ಥವ್ಯವಸ್ಥೆಯ ಪರಿಸ್ಥಿತಿ ಅವರು ಅಂದುಕೊಂಡಂತೆ ಇಲ್ಲ ಎಂಬುದನ್ನು ನಾವು ಕಂಡಿದ್ದೇವೆ. ಸೇ ನಿಯಮವು ಅಪ್ರಸ್ತುತ. ವಿಶ್ವ ಅರ್ಥವ್ಯವಸ್ಥೆಯು ಬೇಡಿಕೆಯ ಸಮಸ್ಯೆಯಿಂದ ಬಳಲುತ್ತಿದೆ. ಈ ಸಮಸ್ಯೆಯನ್ನು ಮೂರನೆಯ ಜಗತ್ತಿನ ಎಲ್ಲ ಪ್ರಭುತ್ವಗಳೂ, ಸ್ವತಃ ತಾವು ಅಥವಾ ಒಬ್ಬರೊಂದಿಗೊಬ್ಬರು ಹೊಂದಿಕೊಂಡು, ನಿವಾರಿಸುವುದು ಆದ್ಯತೆಯ ವಿಷಯವಾಗಬೇಕು. ಅದರಿಂದಾಗಿ ಉದ್ಯೋಗಗಳು ಹೆಚ್ಚುತ್ತವೆ ಮತ್ತು ಉತ್ಪತ್ತಿಯೂ ಹೆಚ್ಚುತ್ತದೆ. ಜೊತೆಗೆ, ವಿದೇಶಿ ವಿನಿಮಯದ ಬಳಕೆಯನ್ನು ಪಡಿತರಕ್ಕೆ ಒಳಪಡಿಸಬೇಕಾಗುತ್ತದೆ.

ಇದನ್ನೂ ನೋಡಿ: ಏನಿದು ಹೇಮಾ ಸಮಿತಿ ಶಿಫಾರಸ್ಸು? ಈ ಹಿಂದೆ ಬಂದ ಶಿಫಾರಸ್ಸುಗಳು ಏನಾದವು?? Janashakthi Media

Donate Janashakthi Media

Leave a Reply

Your email address will not be published. Required fields are marked *