‘ನಾನು ಬೇಕಾದಾಗ ತೆರಿಗೆ ಕಡಿತ ಮಾಡ್ತೇನೆ’, ‘ನಾನು ಈಗಲೇ ತೆರಿಗೆ ಕಡಿತ ಮಾಡ್ತೇನೆ’
ವಸಂತರಾಜ ಎನ್.ಕೆ
ಈಗಿನ ಯುಕೆ ಆರ್ಥಿಕ ಬಿಕ್ಕಟ್ಟಿಗೆ ಟ್ರಸ್ ದುಸ್ಸಾಹಸ ಮಾತ್ರ ಕಾರಣವೇ? ಕೆಟ್ಟದಾಗಿದ್ದ ಆರ್ಥಿಕ ಪರಿಸ್ಥಿತಿಯನ್ನು ತಮ್ಮ ತಪ್ಪು ನೀತಿಗಳಿಂದ ಅವರು ಪ್ರಪಾತಕ್ಕೆ ತಳ್ಳಿದರು ಎಂಬುದು ನಿಜ. ಆದರೆ ಯು.ಕೆ ಆರ್ಥಿಕ ಬೆಳವಣಿಗೆ 1970ರ ದಶಕದಿಂದಲೇ ಮಂದವಾಗುತ್ತಾ ಬಂದಿದೆ. ಥ್ಯಾಚರ್ ಅವರ ಬಲಪಂಥಿಯ ನೀತಿಗಳು, 2008ರ ಆರ್ಥಿಕ ಮಹಾಕುಸಿತ, ಕಳೆದ 12 ವರ್ಷಗಳ ಟೋರಿ ಆಳ್ವಿಕೆಯ ಮಿತವ್ಯಯದ ಉಗ್ರ ಬಲಪಂಥೀಯ ನೀತಿಗಳು, 2016ರ ಬ್ರೆಕ್ಸಿಟ್, ಕೊವಿದ್ ಪರಿಣಾಮಗಳು, ಈಗ ಉಕ್ರೇನ್ ಯುದ್ಧ ಮತ್ತು ರಶ್ಯಾದ ಮೇಲೆ ಹೇರಲಾದ ಆರ್ಥಿಕ ದಿಗ್ಬಂಧನಗಳ ಒಟ್ಟು ಫಲವೇ ಇಂದಿನ ಬಿಕ್ಕಟ್ಟು ಎನ್ನುತ್ತಾರೆ ಆರ್ಥಿಕ ತಜ್ಞರು.
ಕಳೆದ ಕೆಲವು ತಿಂಗಳುಗಳ ಕಾಲ ಯು.ಕೆ ನಿರಂತರವಾಗಿ ಸುದ್ದಿಯಲ್ಲಿತ್ತು. ಈ ಅವಧಿಯಲ್ಲಿ ಯು.ಕೆ ಎರಡು ರಾಜ-ರಾಣಿ, ಮೂರು ಪ್ರಧಾನಿ, ಆಳುವ ಟೋರಿ ಪಾರ್ಟಿಯಲ್ಲಿ ಮತ್ತು ಸರಕಾರದಲ್ಲಿ ತೀವ್ರ ರಾಜಕೀಯ ಬಿಕ್ಕಟ್ಟು, ತೀವ್ರ ಆರ್ಥಿಕ ಬಿಕ್ಕಟ್ಟಿಗೆ ಸಾಕ್ಷಿಯಾಗಿತ್ತು. ಭಾರತ ಮೂಲದ ಪೂರ್ವಜರನ್ನು ಹೊಂದಿದ ಹಿಂದೂ ರಿಷಿ ಸುನಕ್ ಪ್ರಧಾನಿಯಾಗಿದ್ದನ್ನು ಭಾರತದ ಮಾಧ್ಯಮಗಳು ಮತ್ತು ಸಂಘ ಪರಿವಾರ ಸಂಭ್ರಮಿಸಿದ್ದವು. ಈ ಸಂಭ್ರಮಕ್ಕೆ ಕಾರಣವಿದೆಯಾ? ಪ್ರಧಾನಿ ಸುನಕ್ ಯು.ಕೆ ಬಿಕ್ಕಟ್ಟು ಪರಿಹರಿಸ್ತಾರಾ? ಈ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳಬೇಕಾಗಿದೆ.
ಕಳೆದ ಕೆಲವು ತಿಂಗಳುಗಳ ಘಟನಾವಳಿ ಆಗಿನ ಪ್ರಧಾನಿ ಬೋರಿಸ್ ಜಾನ್ಸನ್ ಅವರ ‘ಕೋವಿದ್ ಪಾರ್ಟಿ ಹಗರಣ’ದೊಂದಿಗೆ ಆರಂಭವಾಯಿತು ಕೋವಿದ್ ಅವಧಿಯಲ್ಲಿ ತನ್ನ ಸರಕಾರವೇ ವಿಧಿಸಿದ್ದ ಕಠಿಣ ನಿರ್ಬಂಧಗಳನ್ನು ಮುರಿದು ಹಲವು ಸಹೋದ್ಯೋಗಿಗಳೊಂದಿಗೆ ‘ಪಾರ್ಟಿ’ ಮಾಡಿದ್ದು, ಅದರ ಬಗ್ಗೆ ಪಾರ್ಲಿಮೆಂಟಿಗೆ ಮತ್ತು ದೇಶಕ್ಕೆ ಸುಳ್ಳು ಹೇಳಿದ್ದು, ‘ಪಾರ್ಟಿ’ ಮಾಡಿದ್ದು ಪೋಲಿಸ್ ತನಿಖೆಯಿಂದ ಬಯಲಾಗಿದ್ದು, ಹಣಕಾಸು ಸಚಿವ ರಿಷಿ ಸುನಕ್ ರಿಂದ ಆರಂಭಿಸಿ ಹಲವು ಸಚಿವರು ರಾಜೀನಾಮೆ ಕೊಟ್ಟಿದ್ದು – ಈ ಘಟನಾವಳಿಗಳ ಕುರಿತು ಪಾರ್ಟಿಯ ಆಂತರಿಕ ತುಮುಲ, ಜನತೆಯ ಆಕ್ರೋಶದ ನಂತರ ಜಾನ್ಸನ್ ಪ್ರಧಾನಿ ಹುದ್ದೆಯಿಂದ ರಾಜೀನಾಮೆ ಕೊಡಬೇಕಾಯಿತು. ಮುಂದಿನ ಪ್ರಧಾನಿ ಯಾರಾಗಬೇಕೆಂಬುದು ಆಳುವ ಕನ್ಸರ್ವೇಟಿವ್ (ಟೋರಿ) ಪಾರ್ಟಿಯಲ್ಲಿ ತೀವ್ರ ಪೈಪೋಟಿಗೆ ಕಾರಣವಾಯಿತು.
ಲಿಝ್-ಸುನಕ್ ಪೈಪೋಟಿ
ಪ್ರಧಾನಿ ಆಯ್ಕೆಯ ಮೊದಲ ಸುತ್ತಿನ ಟೋರಿ ಪಾರ್ಲಿಮೆಂಟ್ ಸದಸ್ಯರಿಂದ ಚುನಾವಣೆಗೆ 8 ಅಭ್ಯರ್ಥಿಗಳಿದ್ದರು. ಅನುಕ್ರಮವಾಗಿ ಮೊದಲ ಎರಡು ಸ್ಥಾನ ಪಡೆದ ರಿಷಿ ಸುನಕ್ ಮತ್ತು ಲಿಝ್ ಟ್ರಸ್ – ಇವರಲ್ಲಿ ಯಾರೂ ಹಿಂದೆ ಸರಿಯದ್ದರಿಂದ ಟೋರಿ ಪಕ್ಷದ ಸರ್ವಸದಸ್ಯರಿಂದ ಚುನಾವಣೆಯ ಎರಡನೆಯ ಸುತ್ತಿನ ಚುನಾವಣೆ ನಡೆಯಿತು. ಈ ಚುನಾವಣೆಯಲ್ಲಿ ರಿಷಿ ಸುನಕ್ ಹಣಕಾಸು ಮಂತ್ರಿಯಾಗಿ ಪ್ರಸ್ತಾವಿಸಿದ್ದ ಶೇ. 19 ರಿಂದ ಶೇ.25ಕ್ಕೆ ಕಾರ್ಪೊರೆಟ್ ತೆರಿಗೆ ಏರಿಸಿದ್ದು ವಿವಾದಾಸ್ಪದ ವಿಷಯವಾಯಿತು. ರಿಷಿ ತೆರಿಗೆ ಏರಿಸಿದ್ದನ್ನು ಸಮರ್ಥಿಸಿಕೊಂಡರೆ, ಲಿಝ್ ತಾನು ಪ್ರಧಾನಿಯಾದರೆ ತೆರಿಗೆಯನ್ನು ಏರಿಸುವುದಿಲ್ಲವೆಂದರು. ತೆರಿಗೆ ಏರಿಸುವುದಿಲ್ಲ ಮಾತ್ರವಲ್ಲ, ತೆರಿಗೆ ಕಡಿತ ಮಾಡುತ್ತೇನೆ ಎಂದರು. ಟೋರಿ ಪಕ್ಷದ ಸದಸ್ಯರು ಶ್ರೀಮಂತರಿಗೆ ಕಾರ್ಪೊರೆಟ್ ಗಳಿಗೆ ತೆರಿಗೆ ಕಡಿಮೆ ಮಾಡಿದರೆ ಅವರು ಹೆಚ್ಚೆಚ್ಚು ಹೂಡಿಕೆ ಮಾಡ್ತಾರೆ. ಅದರಿಂದ ಆರ್ಥಿಕ ಬೆಳವಣಿಗೆಯಾಗುತ್ತದೆ. ಅದರ ಫಲ ‘ಕೆಳಗೆ ಹರಿದು ಬಂದು’ ಎಲ್ಲರಿಗೂ ಅದರ ಹಂಚಿಕೆಯಾಗ್ತದೆ ಎಂಬ ಬಲಪಂಥೀಯ ಬೋಳೆ ನಂಬಿಕೆಯವರಿಗೆ ಲಿಝ್ ನಿಲುವು ಸರಿಯೆನಿಸಿತು. ಅಲ್ಲದೆ ಜಾನ್ಸನ್ ಅವರ ಬಲಗೈ ಆಗಿದ್ದ ಸುನಕ್ ರಾಜೀನಾಮೆ ಕೊಡುವ ಮೂಲಕ ‘ದ್ರೋಹ’ ಮಾಡಿದರು ಎಂಬ ಪ್ರಚಾರ ಸಹ ರಿಷಿಗೆ ಮುಳುವಾಯಿತು. ಲಿಝ್ ಗೆದ್ದರು. ರಿಷಿ ಸೋತರು. ಈ ಚುನಾವಣೆಯ ಪ್ರಚಾರ ಟೋರಿ ಪಕ್ಷದ ಐಕ್ಯತೆಗೆ ಇನ್ನಷ್ಟು ಮುಳುವಾಯಿತು.
ಮಿನಿ ಬಜೆಟ್ ಅವಾಂತರ
ಲಿಝ್ ಟ್ರಸ್ ಪ್ರಧಾನಿಯಾಗುತ್ತಿದ್ದಂತೆ ತಾವು ನುಡಿದಂತೆ ನಡೆದರು. ಅವರ ಹೊಸ ಹಣಕಾಸು ಮಂತ್ರಿ ಕ್ವಾರ್ಟೆಂಗ್ ಮಿನಿ ಬಜೆಟ್ ಮಂಡಿಸಿದರು. ರಿಷಿ ಸುನಕ್ ಹಣಕಾಸು ಮಂತ್ರಿಯಾಗಿ ಪ್ರಸ್ತಾವಿಸಿದ್ದ ಶೇ. 19 ರಿಂದ ಶೇ.25ಕ್ಕೆ ಕಾರ್ಪೊರೆಟ್ ತೆರಿಗೆ ಹೆಚ್ಚಳವನ್ನು ರದ್ದು ಮಾಡಿದರು. ಮಾತ್ರವಲ್ಲ, 1.5 ಲಕ್ಷ ಪೌಂಡ್ ಗಿಂತ ಹೆಚ್ಚಿನ ಆದಾಯದ ಮಟ್ಟಕ್ಕೆ ಇದ್ದ ಶೇ.45 ತೆರಿಗೆ ದರವನ್ನೇ ರದ್ದು ಮಾಡಿದರು. ಈ ಎರಡು ಪ್ರಸ್ತಾವಗಳ ಒಟ್ಟು ತೆರಿಗೆ ಕಡಿತ 45 ಶತಕೋಟಿ ಪೌಂಡಿನಷ್ಟು ಆಯಿತು. ಬೊಕ್ಕಸಕ್ಕೆ ಈ ಆದಾಯ ನಷ್ಟ ತುಂಬಿಕೊಡುವಂಥ ಯಾವುದೇ ಪ್ರಸ್ತಾವ ಮಿನಿ ಬಜೆಟಿನಲ್ಲಿ ಇರಲಿಲ್ಲ. ಈಗಾಗಲೇ ತೈಲ ಕೊರತೆ ಮತ್ತು ಬೆಲೆ ಏರಿಕೆ, ಇದರಿಂದಾದ ಅಭೂತಪೂರ್ವ ಭಾರೀ (ಶೇ.10) ಹಣದುಬ್ಬರ, ಬಡ-ಮಧ್ಯಮ ವರ್ಗದವರ ಜೀವನ ವೆಚ್ಚ ದುಬಾರಿಗೊಳಿಸಿದ ಹಲವು ಕುಟುಂಬಗಳನ್ನು ಬಡತನಕ್ಕೆ ತಳ್ಳಿದ ಸ್ಥಿತಿಯಲ್ಲಿ ಟ್ರಸ್- ಕ್ವಾರ್ಟೆಂಗ್ ಮಿನಿ ಬಜೆಟ್ ಯು.ಕೆ ಆರ್ಥಿಕವನ್ನು ತೀವ್ರ ಬಿಕ್ಕ್ಕಟ್ಟಿಗೆ ತಳ್ಳಿತು. ಶ್ರೀಮಂತರಿಗೆ ಕಾರ್ಪೊರೆಟ್ ಗಳಿಗೆ ತೆರಿಗೆ ಕಡಿತದಿಂದ ಶೇರು ಮಾರುಕಟ್ಟೆ ‘ಖುಶ್’ ಆಗಿ ಏರುತ್ತದೆ ಎಂಬ ಟ್ರಸ್ ನಿರೀಕ್ಷೆ ತಲೆಕೆಳಗಾಗಿಸಿ ಹಣಕಾಸು ಮಾರುಕಟ್ಟೆ ಅಲ್ಲೋಲ ಕಲ್ಲೋಲವಾಯಿತು. ಪೌಂಡ್ ಬೆಲೆ ಮಾರ್ಚ್ ನಲ್ಲಿದ್ದ 1.33 ಡಾಲರಿನಿಂದ 1.03 ಡಾಲರಿಗೆ (ಈ ವರೆಗಿನ ಅತ್ಯಂತ ಕೆಳಮಟ್ಟ) ಕುಸಿಯಿತು. ಮಾರುಕಟ್ಟೆ ಅಲ್ಲೋಲ ಕಲ್ಲೋಲದಿಂದ ಪೆನ್ಶನ್ ನಿಧಿ ಕರಗಿ ಹೋಗುವ ಅಪಾಯ ತಡೆಯಲು ಬ್ಯಾಂಕ್ ಆಫ್ ಇಂಗ್ಲೆಂಡ್ 65 ಶತಕೋಟಿ ಡಾಲರ್ ಖರ್ಚು ಮಾಡಬೇಕಾಯಿತು. ದೇಶೀಯವಾಗಿಯೂ, ಅಂತರ್ರಾಷ್ಟ್ರೀಯವಾಗಿಯೂ ಈ ಬೇಜವಾಬ್ದಾರ ಕ್ರಮಕ್ಕೆ ತೀವ್ರ ಟೀಕೆಗಳು ಕೇಳಿ ಬಂದವು. ಸಾಮಾನ್ಯವಾಗಿ ಬಡ ಮೂರನೆಯ ಜಗತ್ತಿನ ದೇಶಗಳ ಆರ್ಥಿಕ ನೀತಿಗಳ ಕುರಿತು ಉಪದೇಶ ಮಾಡುವ ಐ.ಎಂ.ಎಫ್ ಈ ಕ್ರಮದ ವಿರುದ್ಧ ಹೇಳಿಕೆ ನೀಡಿತು. ಮೊದ ಮೊದಲು ಟೀಕೆಗಳನ್ನು ಲೆಕ್ಕಿಸದ ಪ್ರಧಾನಿ ಟ್ರಸ್ ಹಣಕಾಸು ಮಂತ್ರಿಯನ್ನು ಬಲಿಕೊಟ್ಟರು. ಕೊನೆಗೆ ಸಾರ್ವತ್ರಿಕ ಆಕ್ರೋಶಕ್ಕೆ ಮಣಿದು ರಾಜೀನಾಮೆ ಕೊಟ್ಟರು.
ಮತ್ತೆ ಪ್ರಧಾನಿ ಪಟ್ಟಕ್ಕೆ ಪೈಪೋಟಿ ಆರಂಭವಾಯಿತು. ರಿಷಿ ಸುನಕ್, ಪೆನ್ನಿ ಮೊರ್ಡೌಂಟ್ ಕಣಕ್ಕೆ ಇಳಿದರು. ಬೊರಿಸ್ ಜಾನ್ಸನ್ ಸಹ ಕಣದಲ್ಲಿ ಇಳಿಯುವವರಿದ್ದರು. ಆದರೆ, ಈಗಾಗಲೇ ಟೋರಿ ಪಕ್ಷ ಒಡೆದ ಮನೆಯಾಗಿರುವ ಕುರಿತು ಆತಂಕಗೊಂಡ ಟೋರಿ ಪಾರ್ಲಿಮೆಂಟ್ ಸದಸ್ಯರ ಮತ್ತು ಸಾರ್ವಜನಿಕ ಪ್ರತಿಕ್ರಿಯೆ ಕಂಡು ಪೆನ್ನಿ ಮೊರ್ಡೌಂಟ್ ಮತ್ತು ಬೊರಿಸ್ ಜಾನ್ಸನ್ ಕಣದಿಂದ ಹಿಂದೆ ಸರಿದರು. ರಿಷಿ ಸುನಕ್ ಪ್ರಧಾನಿಯಾಗಿ ಆಯ್ಕೆಯಾದರು.
ಯು.ಕೆ ಆರ್ಥಿಕ ಬಿಕ್ಕಟ್ಟಿಗೆ ಟ್ರಸ್ ದುಸ್ಸಾಹಸ ಮಾತ್ರ ಕಾರಣವೇ?
ಈಗಿನ ಯುಕೆ ಆರ್ಥಿಕ ಬಿಕ್ಕಟ್ಟಿಗೆ ಟ್ರಸ್ ದುಸ್ಸಾಹಸ ಮಾತ್ರ ಕಾರಣವೇ? ಕೆಟ್ಟದಾಗಿದ್ದ ಆರ್ಥಿಕ ಪರಿಸ್ಥಿತಿಯನ್ನು ತಮ್ಮ ತಪ್ಪು ನೀತಿಗಳಿಂದ ಪ್ರಪಾತಕ್ಕೆ ತಳ್ಳಿದರು ಎಂಬುದು ನಿಜ. ಆದರೆ ಯು.ಕೆ ಆರ್ಥಿಕ ಬೆಳವಣಿಗೆ 1970ರ ದಶಕದಿಂದಲೇ ಮಂದವಾಗುತ್ತಾ ಬಂದಿದೆ. ಥ್ಯಾಚರ್ ಅವರ ಬಲಪಂಥಿಯ ನೀತಿಗಳು, 2008ರ ಆರ್ಥಿಕ ಮಹಾಕುಸಿತ, ಕಳೆದ 12 ವರ್ಷಗಳ ಟೋರಿ ಆಳ್ವಿಕೆಯ ಮಿತವ್ಯಯದ ಉಗ್ರ ಬಲಪಂಥೀಯ ನೀತಿಗಳು, 2016ರ ಬ್ರೆಕ್ಸಿಟ್, ಕೊವಿದ್ ಪರಿಣಾಮಗಳು, ಈಗ ಉಕ್ರೇನ್ ಯುದ್ಧ ಮತ್ತು ರಶ್ಯಾದ ಮೇಲೆ ಹೇರಲಾದ ಆರ್ಥಿಕ ದಿಗ್ಬಂಧನಗಳ ಒಟ್ಟು ಫಲವೇ ಇಂದಿನ ಬಿಕ್ಕಟ್ಟು ಎನ್ನುತ್ತಾರೆ ಆರ್ಥಿಕ ತಜ್ಞರು.
ಯು.ಕೆ ಜಿಡಿಪಿ ಬೆಳವಣಿಗೆ (ನಿಜ ಬೆಲೆಗಳಲ್ಲಿ) 1945-73 ಅವಧಿಯಲ್ಲಿ ಶೇ.2.8 ಇತ್ತು. 1974 ಮತ್ತು 2008 ಮಧ್ಯೆ ಯು,ಕೆ ಯುರೋಪಿನ ಆರ್ಥಿಕ ಸಮುದಾಯ ಮತ್ತು ಆ ಮೇಲೆ ಯುರೋ ಕೂಟದ ಸದಸ್ಯ ಆಗಿದ್ದಾಗ ಶೇ. 2.3ಕ್ಕೆ ಇಳಿಯಿತು. ಇದೇ ಅವಧಿಯಲ್ಲಿ ಥ್ಯಾಚರ್ ನೀತಿಗಳು ಜಾರಿಗೆ ಬಂದವು. 2008 ರ ಜಾಗತಿಕ ಆರ್ಥಿಕ ಕುಸಿತ ಮತ್ತು 2016ರ ಬ್ರೆಕ್ಸಿಟ್ ವರೆಗೆ ಅದು ಶೇ.1.3ಕ್ಕೆ ಕುಸಿಯಿತು.
ಹಿಂದಿನ ಅಂಶಗಳು ಇದ್ದರೂ, ಇಂದಿನ ಬಿಕ್ಕಟ್ಟಿನ ಆರಂಭ ಟೋರಿ ದೊಡ್ಡ ರೀತಿಯಲ್ಲಿ ಬೆಂಬಲಿಸಿದ 2016ರ ಬ್ರೆಕ್ಸಿಟ್, ಅದರಲ್ಲೂ ಟೋರಿ ಸರಕಾರಗಳು ಬ್ರೆಕ್ಸಿಟ್ ಜಾರಿ ಮಾಡಿದ ರೀತಿಯಿಂದಲೇ ಆರಂಭವಾಯಿತು ಎನ್ನಬಹುದು. ಅಲ್ಲದೆ ಬ್ರೆಕ್ಸಿಟ್ ಜಾರಿಯ ಆರಂಭ ಮತ್ತು ಕೊವಿದ್ ಒಟ್ಟಿಗೆ ಬಂದಿದ್ದು ಇನ್ನಷ್ಟು ಆಳವಾಗಿ ಆರ್ಥಿಕವನ್ನು ಪ್ರಭಾವಿಸಿತು. ಬ್ರೆಕ್ಸಿಟ್ ನ ದೀರ್ಘಕಾಲೀನ ಪರಿಣಾಮಗಳು ಕೊವಿದ್ ಪರಿಣಾಮಗಳ ಇಮ್ಮಡಿಗಿಂತಲೂ ಹೆಚ್ಚು ತೀವ್ರ ಪರಿಣಾಮ ಬೀರಲಿವೆ ಎಂದು ಅಧಿಕೃತವಾಗಿ ಅಂದಾಜು ಮಾಡಲಾಗಿದೆ. ಬ್ರೆಕ್ಸಿಟ್ ಹಲವು ರೀತಿಯಲ್ಲಿ ಯು.ಕೆ ಆರ್ಥಿಕದ ಮೇಲೆ ದುಷ್ಪರಿಣಾಮ ಬೀರಿತು.
ಬ್ರೆಕ್ಸಿಟ್ ಮತ್ತು ‘ಮಿತವ್ಯಯ’ದ ಅಧ್ವಾನಗಳು
ಮೊದಲನೆಯದಾಗಿ ಅದು ಯು.ಕೆಯ ದೊಡ್ಡ ಮಾರುಕಟ್ಟೆಯಾಗಿದ್ದ ಯುರೋ ಮಾರುಕಟ್ಟೆ ಕಳೆದುಕೊಂಡಿತು. ಈ ನಷ್ಟವನ್ನು ಇತರ ದೇಶಗಳ ಜತೆ ದ್ವಿಪಕ್ಷೀಯ ಒಪ್ಪಂದಗಳಿಂದ ತುಂಬಿಕೊಳ್ಳಬಹುದು ಎಂದುಕೊಂಡದ್ದು ಹುಸಿಯಾಯಿತು. ನಿಕಟ ಸಹವರ್ತಿಯಾದ ಯು,ಎಸ್ ಜತೆಗೆ ಇನ್ನೂ ದ್ವಿಪಕ್ಷೀಯ ಒಪ್ಪಂದವಾಗಿಲ್ಲ. ಎರಡನೆಯದಾಗಿ ಯು.ಕೆ ಮತ್ತು ಯುರೋಪಿನ ನಡುವೆ ಇದ್ದ ಕಾರ್ಮಿಕರ ಮುಕ್ತ ಓಡಾಟ ಬಂದ್ ಆಗಿದ್ದು, ಕಾರ್ಮಿಕರ ಕೊರತೆ ವಿಪರೀತವಾಗಿ ಏರಿತು. ಬ್ರೆಕ್ಸಿಟ್, ಕೊವಿದ್ ಮೊದಲು ಇದ್ದ ಕಾರ್ಮಿಕ ಕೊರತೆ 8.23 ಲಕ್ಷದಿಂದ ಈ ವರ್ಷದ ಮೂರನೆಯ ತ್ರೈಮಾಸಿಕದಲ್ಲಿ 12.46 ಲಕ್ಷಕ್ಕೆ ಏರಿದೆ. ದೊಡ್ಡ, ಸಣ್ಣ ಎಲ್ಲಾ ರೀತಿಯ ಉದ್ಯಮಗಳ ಮೇಲೆ ಇದು ದುಷ್ಪರಿಣಾಮ ಬೀರಿದೆ. ದೀರ್ಘಾವಧಿಯಲ್ಲಿ ರಫ್ತು, ಆಮದು ಎರಡೂ ಶೇ. 15ರಷ್ಟು ಕುಸಿಯಲಿದೆ, ಉತ್ಪಾದಕತೆ ಶೇ. 4ರಷ್ಟು ಕಡಿಮೆಯಾಗಲಿದೆ.
ಇದಲ್ಲದೆ ಬ್ರೆಕ್ಸಿಟ್ ಯು.ಕೆಯ ಒಳಗೂ, ಹೊರಗೂ ರಾಜಕೀಯ ಸಮಸ್ಯೆಗಳನ್ನೂ ಸೃಷ್ಟಿಸಿದೆ. ಯು.ಕೆ ಭಾಗವಾಗಿರುವ ಉತ್ತರ ಐರ್ಲೆಂಡ್ ಮತ್ತು ಯುರೋ ಕೂಟದ ಭಾಗವಾಗಿರುವ ಐರ್ಲೆಂಡ್ ನಡುವೆ ಕಸ್ಟಮ್ಸ್ ಗಡಿ ಅಲ್ಲಿನ ರಾಜಕೀಯ ಸಮಸ್ಯೆಗಳನ್ನು ಮರುಕಳಿಸಬಹುದು ಎಂಬ ಆತಂಕದಿಂದ ಪರಸ್ಪರ ಒಪ್ಪಲಾಗಿದ್ದ ನಿರ್ಬಂಧಗಳನ್ನು ಯು.ಕೆ ಏಕಪಕ್ಷೀಯವಾಗಿ ಬದಲಾಯಿಸ ಹೊರಟಿದೆ. ಇದಕ್ಕೆ ಯುರೋ ಕೂಟದಿಂದಲೂ, ಉತ್ತರ ಐರ್ಲೆಂಡಿನ ಕೆಲವು ರಾಜಕೀಯ ಪಕ್ಷಗಳಿಂದಲೂ ಆಕ್ಷೇಪ ವ್ಯಕ್ತವಾಗಿದೆ. ಯು.ಕೆ ಯಲ್ಲಿ ಇಡಿಯಾಗಿ ಬ್ರೆಕ್ಸಿಟ್ ಪರವಾಗಿ ಅಲ್ಪ ಬಹುಮತವಿದ್ದರೂ, ಸ್ಕಾಟ್ ಲ್ಯಾಂಡ್ ನಲ್ಲಿ ಬಹುಸಂಖ್ಯಾತರು ಬ್ರೆಕ್ಸಿಟ್ ವಿರುದ್ಧವಾಗಿದ್ದರು. ಬ್ರೆಕ್ಸಿಟ್ ನಂತರ ಸ್ಕಾಟ್ ಲ್ಯಾಂಡಿನಲ್ಲಿ ಯು.ಕೆ ಯಿಂದ ಹೊರ ಬಂದು ಸ್ವತಂತ್ರ ರಾಷ್ಟ್ರವಾಗಿ ಯುರೋ ಕೂಟ ಸೇರಲು ಒತ್ತಾಯ ಜಾಸ್ತಿಯಾಗುತ್ತಿದೆ.
ಕಳೆದ 12 ವರ್ಷಗಳ ಟೋರಿ ಆಳ್ವಿಕೆಯ ‘ಮಿತವ್ಯಯ’ ಎಂದು ಕರೆಯಲಾಗುವ ಉಗ್ರ ಬಲಪಂಥೀಯ ನೀತಿಗಳು ಬಡ-ಮಧ್ಯಮ ವರ್ಗಗಳನ್ನು ತೀವ್ರವಾಗಿ ಬಾಧಿಸಿವೆ. 2012-2019ರ ಅವಧಿಯಲ್ಲಿ ‘ಮಿತವ್ಯಯ’ದ ಸಮಾಜ ಕಲ್ಯಾಣ ಕ್ರಮಗಳಲ್ಲಿ ತೀವ್ರ ಕಡಿತಗಳನ್ನು ತಂದ ನೀತಿಗಳ ಫಲವಾಗಿ ಕನಿಷ್ಠ 3.35 ಲಕ್ಷ ಹೆಚ್ಚಿನ ಸಾವುಗಳು ಆಗಿವೆ ಎಂದು ಅಧ್ಯಯನ ತಿಳಿಸಿದೆ.
ಇದು ಸಾಲದೆಂಬಂತೆ ಬಡ-ಮಧ್ಯಮ ವರ್ಗಗಳ ಮೇಲೆ ಕೊವಿದ್ ಬಂದೆರಗಿ ಜೀವನ ಮಟ್ಟ ಇನ್ನಷ್ಟು ಕುಸಿದಿತ್ತು. ಅದರ ಮೇಲೆ ಉಕ್ರೇನ್ ಯುದ್ಧ ಮತ್ತು ರಶ್ಯಾದ ಮೇಲೆ ಹೊರಿಸಲಾದ ಆರ್ಥಿಕ ದಿಗ್ಬಂಧನಗಳು ಇಂಧನ-ವಿದ್ಯುತ್ ಮತ್ತು ಜೀವನಾವಶ್ಯಕ ವೆಚ್ಚದಲ್ಲಿ ಭಾರೀ ಏರಿಕೆ, ತೀವ್ರ ಹಣದುಬ್ಬರ ಬಡ-ಮಧ್ಯಮ ವರ್ಗಗಳನ್ನು ಕಂಗಾಲಾಗಿಸಿದೆ. ಸರಾಸರಿ ಯು.ಕೆ ಕುಟುಂಬಗಳ ಸರಾಸರಿ ಜೀವನ ವೆಚ್ಚ 2500 ಪೌಂಡಿನಷ್ಟು ಏರಿದೆ, ಆದಾಯ 40 ವರ್ಷಗಳಲ್ಲೇ ಕಡಿಮೆ ಮಟ್ಟಕ್ಕೆ ಕುಸಿದಿದೆ.
ಪ್ರಧಾನಿ ಸುನಕ್ ಬಿಕ್ಕಟ್ಟು ಹೇಗೆ ಪರಿಹರಿಸ್ತಾರೆ?
ಪ್ರಧಾನಿ ಬದಲಾದ ಮಾತ್ರಕ್ಕೆ ಬಿಕ್ಕಟ್ಟು ಪರಿಹಾರವಾಗುತ್ತಾ? ಅವರ ಬಳಿ ಬಿಕ್ಕಟ್ಟು ಪರಿಹಾರದ ಮಂತ್ರದಂಡ ಇದೆಯಾ? ಲಿಝ್ ತರಹದ ಹುಚ್ಚುತನ ಮಾಡಲಿಕ್ಕಿಲ್ಲ ಅಂತ ಬಿಟ್ಟರೆ, ಮೂಲಭೂತ ಟೋರಿ ಆರ್ಥಿಕ ನೀತಿಗಳನ್ನೆ ಬದಲಾಯಿಸದೆ ತತ್ಕಾಲದ ಅಥವಾ ದೀರ್ಘಗಾಮಿ ಪರಿಹಾರಗಳಾಗಲಿ ಇಲ್ಲ. ಈಗಾಗಲೇ ಹೇಳಿದ ಹಾಗೆ ಬ್ರೆಕ್ಸಿಟ್ ಇಂದಿನ ಬಿಕ್ಕಟ್ಟಿಗೆ ಒಂದು ಕಾರಣ. ಆದರೆ ರಿಷಿ ಸಹ ಬ್ರೆಕ್ಸಿಟ್ ಪರನೇ. ಬ್ರೆಕ್ಸಿಟ್ ನಿರ್ಣಯವನ್ನು ಅವರು ಪುನರ್ವಿಮರ್ಶೆ ಮಾಡಲಾರರು. ಬ್ರೆಕ್ಸಿಟ್ ಸಂಬಂಧಿತ ಉತ್ತರ ಐರ್ಲೆಂಡ್ ಮತ್ತು ಸ್ಕಾಟ್ಲೆಂಡ್ ಸಮಸ್ಯೆಗಳ ಕುರಿತು ಯಾವುದೇ ಆಯ್ಕೆ ಅವರ ಬಳಿ ಇದ್ದಂತಿಲ್ಲ. ಕಲ್ಯಾಣ ಕ್ರಮಗಳ ಕಡಿತದ ಮಿತವ್ಯಯದ ನೀತಿಗಳ ಪುನರ್ವಿಮರ್ಶೆ ಮಾಡುವರೇ? ಅವರು ಆರೋಗ್ಯ ಸವಿವರಾಗಿದ್ದ 2012-18ರಲ್ಲಿ ಎನ್.ಎಚ್.ಎಸ್. (ರಾಷ್ಟ್ರೀಯ ಆರೋಗ್ಯ ವ್ಯವಸ್ಥೆ) ಯಲ್ಲಿ ಹೂಡಿಕೆಯು, ಶಿಫಾರಸು ಮಾಡಲಾದ ಶೇ.4.3 ಹೆಚ್ಚಳದ ಬದಲು ಶೇ.1 ರ ಹೆಚ್ಚಳ ಮಾತ್ರ ಕಂಡಿತ್ತು. ಅವರು ಹಣಕಾಸು ಸಚಿವರಾಗಿ 2021ರಲ್ಲಿ ಮಾಡಿದ ಸಾಮಾಜಿಕ ಭದ್ರತೆಯಲ್ಲಿ ವೆಚ್ಚದ ಕಡಿತ 60 ಲಕ್ಷ ಬಡವರ ಹಲವು ಸವಲತ್ತುಗಳನ್ನು ಕಡಿತ ಮಾಡಿ 2 ಲಕ್ಷ ಮಕ್ಕಳು ಸೇರಿದಂತೆ 5 ಲಕ್ಷ ಜನರನ್ನು ಬಡತನಕ್ಕೆ ತಳ್ಳಿತು. ಅವರು ಈ ಮಾರ್ಚ್ ನಲ್ಲಿ ಮಂಡಿಸಿದ ಮಿನಿ ಬಜೆಟ್ ನಲ್ಲಿ ಕೆಲವು ಬಡವರಿಗೆ ಪರಿಹಾರ ನೀಡುವ ಕ್ರಮಗಳನ್ನು ಘೋಷಿಸಿದರು. ಅದು 8 ಬಡವರಲ್ಲಿ ಒಬ್ಬರಿಗೆ 2024ರ ಹೊತ್ತಿಗೆ ಅಲ್ಪ ಪರಿಹಾರ ನೀಡಬಹುದು ಅಷ್ಟೇ.
ಇಂದಿನ ಬಿಕ್ಕಟ್ಟು ಉಲ್ಬಣಗೊಳ್ಳಲು ಉಕ್ರೇನ್ ಯುದ್ಧ ಮತ್ತು ಆರ್ಥಿಕ ದಿಗ್ಬಂಧನ ಇನ್ನೊಂದು ಕಾರಣ. ರಿಷಿ ಉಕ್ರೇನ್ ಗೆ ಮಿಲಿಟರಿ ಸಹಾಯ ಪೂರೈಕೆ ನಿಲ್ಲಿಸಿ, ರಶ್ಯಾದ ಆರ್ಥಿಕ ದಿಗ್ಬಂಧನ ಹಿಂದಕ್ಕೆ ತೆಗೆದುಕೊಳ್ಳುವರೇ? ಅಥವಾ ಯುದ್ಧವಿರಾಮಕ್ಕೆ ಯು.ಎಸ್, ಮೇಲೆ ಒತ್ತಡ ಹಾಕುವರೇ? ಇವ್ಯಾವನ್ನೂ ರಿಷಿ ಮಾಡಲಾರರು. ಇವುಗಳಲ್ಲಿ ಎಲ್ಲವನ್ನೂ ಅಥವಾ ಕನಿಷ್ಠ ಯಾವುದನ್ನಾದರೂ ಮಾಡದೆ ರಿಷಿ ಬಿಕ್ಕಟ್ಟು ಪರಿಹಾರ ಮಾಡಲು ಸಾಧ್ಯವಿಲ್ಲ. ಅವರು ಬಿಳಿಯರಲ್ಲದ ಅಲ್ಪಸಂಖ್ಯಾತ ಸಮುದಾಯದ ಮೊದಲ ಪ್ರಧಾನಿ ಎಂಬುದೊಂದೇ ಅವರ ಹೆಗ್ಗಳಿಕೆ. ಮೊದಲ ಬಿಳಿಯರಲ್ಲದ ಅಲ್ಪಸಂಖ್ಯಾತ ಕರಿಯ ಅಧ್ಯಕ್ಷರಾಗಿ ಒಬಾಮಾ ಅವರಿಂದಲೂ ಭಾರೀ ಬದಲಾವಣೆ ನಿರೀಕ್ಷಿಸಲಾಗಿತ್ತು. ಅವರು ಮಧ್ಯಮ ಕುಟುಂಬದಿಂದ ಬಂದಿದ್ದರಿಂದ ಇನ್ನಷ್ಟು ಹೆಚ್ಚು ನಿರೀಕ್ಷೆ ಇತ್ತು. ಆ ಮೇಲೆ ಏನಾಯ್ತು ಎಂದು ಎಲ್ಲರಿಗೂ ತಿಳಿದಿದೆ. ಯು.ಎಸ್ ಮಿಲಿಟರಿ ಅತಿರೇಕಗಳನ್ನು ಸಹ ಅವರಿಗೆ ನಿಲ್ಲಿಸಲು ಸಾಧ್ಯವಾಗಲಿಲ್ಲ. ರಿಷಿಯಂತೂ ಆಗರ್ಭ ಶ್ರೀಮಂತರು, ಪಕ್ಕಾ ಟೋರಿ. ಸರಕಾರದ ಮುಖ್ಯಸ್ಥ ವ್ಯಕ್ತಿಗಳು ಏನೇ ಇದ್ದರೂ, ಅವರಿಗೆ ಎಷ್ಟೇ ಅಧಿಕಾರವಿದ್ದರೂ, ಆಳುವ ವರ್ಗಗಳ ಆಣತಿ ಮೀರಲಾರರು. ಅಲ್ಪಸಂಖ್ಯಾತ ಹಿನ್ನೆಲೆಯಿಂದ ಬಂದವರು ಅಧಿಕಾರ ಉಳಿಸಿಕೊಳ್ಳಬೇಕಾದರೆ ಅವರನ್ನು ಸಂಪ್ರೀತಗೊಳಿಸಲು ಇನ್ನೂ ಹೆಚ್ಚು ಪ್ರಯತ್ನ ಮಾಡಬೇಕಾಗುತ್ತದೆ. ಹಾಗಾಗಿ ರಿಷಿ ಸುನಕ್ ಅವರಿಂದ ಭಾರೀ ನಿರೀಕ್ಷೆ ಇಟ್ಟುಕೊಳ್ಳಬೇಕಾಗಿಲ್ಲ.