ಮಾಹಿತಿ ಹಕ್ಕು – ಈಗ ಮಾಹಿತಿ ನಿರಾಕರಣೆಯ ಹಕ್ಕು ಆಗಿದೆ: ಶೈಲೇಶ್‌ ಗಾಂಧಿ

ಮೂಲ ಆರ್‌ಟಿಐ ಕಾಯ್ದೆಯನ್ನು ಕ್ರಿಯಾಶೀಲಗೊಳಿಸಲು ಸಾರ್ವಜನಿಕರು ದನಿ ಎತ್ತಬೇಕಿದೆ

( ಮೂಲ : The RTI is now the  ʼ Right to deny information ʼ- ದ ಹಿಂದೂ 25 ಫೆಬ್ರವರಿ 2025)

ಭಾರತದಲ್ಲಿ ಮಾಹಿತಿ ಹಕ್ಕು ಕಾಯ್ದೆಯನ್ನು (ಆರ್‌ಟಿಐ) ಜಾರಿಗೊಳಿಸಿದ್ದು ಒಂದು ಚಾರಿತ್ರಿಕ ಘಟ್ಟವಾಗಿದ್ದು , ಪ್ರಜೆಗಳನ್ನೇ ಪ್ರಭುಗಳು ಎಂದು ಗುರುತಿಸುವ ಪ್ರಜಾಸತ್ತಾತ್ಮಕ ವ್ಯವಸ್ಥೆಯಲ್ಲಿ ಇದು ಭರವಸೆದಾಯಕವಾಗಿತ್ತು.  ಈ ಕಾಯ್ದೆಯು ನಾಗರಿಕರಿಗೆ ಸರ್ಕಾರಗಳಿಂದ ಮಾಹಿತಿಯನ್ನು ಪಡೆಯುವ ಹಕ್ಕನ್ನು ಪಡೆಯುವ ಶಕ್ತಿಯನ್ನು ನೀಡಿದ್ದುದೇ ಅಲ್ಲದೆ , ಈ ಮಾಹಿತಿಯನ್ನು ಘನತೆ ಗೌರವಗಳಿಂದ ಪಡೆಯುವಂತೆಯೂ ಮಾಡಿತ್ತು. ಭಾರತದ ಜನತೆ ಕಳೆದುಕೊಂಡಿದ್ದ ಸ್ವರಾಜ್‌ ಅವರಿಗೆ ಮರಳಿ ದೊರಕಿದೆ ಎನ್ನುವ ಭಾವನೆಯನ್ನು ಈ ಕಾಯ್ದೆ ಮೂಡಿಸಿತ್ತು. ಹಕ್ಕು

ಕನ್ನಡಕ್ಕೆ: ನಾ ದಿವಾಕರ

ಮಾಹಿತಿಯನ್ನು ಪಡೆಯುವ ನಾಗರಿಕರ ಮೂಲಭೂತ ಹಕ್ಕನ್ನು ಈ ಕಾಯ್ದೆ ಒಂದು ಸಂಹಿತೆಯಾಗಿ ಅಂಗೀಕರಿಸಿದ್ದೇ ಅಲ್ಲದೆ ವಿಶ್ವದಲ್ಲೇ ಅತಿ ಉತ್ತಮವಾದ ಪಾರದರ್ಶಕ ಕಾನೂನು ಎಂದೂ ಹೆಸರಾಗಿತ್ತು. ಆಡಳಿತದಲ್ಲಿ ಭ್ರಷ್ಟಾಚಾರವನ್ನು ಮತ್ತು ಅನಿಯಂತ್ರಿತ ಅಧಿಕಾರವನ್ನು ಈ ಕಾಯ್ದೆಯು ಮೊಟಕುಗೊಳಿಸುತ್ತದೆ, ನಾಗರಿಕರು ತಾವು ಆಯ್ಕೆ ಮಾಡುವ ಸರ್ಕಾರಗಳನ್ನು ಎಚ್ಚರದಿಂದ ಗಮನಿಸಲು ಸಹಾಯ ಮಾಡುತ್ತದೆ ಎಂದು ಭಾವಿಸಲಾಗಿತ್ತು. ಆದರೆ ಒಪ್ಪಲೇಬೇಕಾದ ವಾಸ್ತವ ಎಂದರೆ ನಮ್ಮ ನಿರೀಕ್ಷೆಗಳನ್ನು ಮೀಟುವುದರಲ್ಲಿ ಈ ಕಾಯ್ದೆಯು ವಿಫಲವಾಗಿದ್ದು , ಭಾರತದ ಪ್ರಜಾಪ್ರಭುತ್ವ ವ್ಯವಸ್ಥೆಯೇನೂ ಉತ್ತಮವಾಗಿಲ್ಲ. ಹಕ್ಕು

ಕಾಯ್ದೆ ಜಾರಿಯಾದ ಕೆಲವೇ ತಿಂಗಳುಗಳ ಅಂತರದಲ್ಲಿ, ಈ ಕಾಯ್ದೆಯ  ಪರಿಣಾಮವಾಗಿ ಅಧಿಕಾರವನ್ನು ಜನಪ್ರತಿನಿಧಿಗಳಿಂದ ಸಾರ್ವಜನಿಕರಿಗೆ ಹಸ್ತಾಂತರ ಮಾಡುವ ಸಾಧ್ಯತೆಗಳಿರುವುದನ್ನು ಸರ್ಕಾರ ಕಂಡುಕೊಂಡಿತ್ತು. ಒಂದು ವರ್ಷದ ಒಳಗಾಗಿ ಸರ್ಕಾರವು ಈ ಕಾಯ್ದೆಯನ್ನು ತಿದ್ದುಪಡಿ ಮಾಡುವ ಮೂಲಕ ಆರ್‌ಟಿಐ ಕಾಯ್ದೆಯನ್ನು ದುರ್ಬಲಗೊಳಿಸಿತ್ತು.  ಆದರೆ ಇದರ ವಿರುದ್ಧ ದೇಶವ್ಯಾಪಿ ಪ್ರತಿರೋಧ ನಾಗರಿಕರಿಂದ ವ್ಯಕ್ತವಾಗಿತ್ತು. ಪ್ರತಿಭಟನೆಗಳು ನಡೆದಿದ್ದವು. ದೇಶದಲ್ಲಿ ಉದ್ಭವಿಸಿದ್ದ ಈ ಭಾವನೆಯನ್ನು ಅರಿತ ಸರ್ಕಾರವು ತಿದ್ದುಪಡಿಯನ್ನು ಕೈಬಿಟ್ಟಿತ್ತು. ಹಕ್ಕು

ಕ್ರಮೇಣವಾಗಿ ಶಿಥಿಲವಾದ ಕಾಯ್ದೆ

ಕಾನೂನು ಜಾರಿಗೊಳಿಸುವುದಕ್ಕಾಗಿ ಆರ್‌ಟಿಐ ಕಾಯ್ದೆಯು ಮಾಹಿತಿ ಆಯುಕ್ತರ ಹುದ್ದೆಯನ್ನು ಸೃಷ್ಟಿಸಿದ್ದು, ಈ ಕಚೇರಿಯು ಕಾಯ್ದೆಯನ್ನು ಅನುಷ್ಠಾನ ಮಾಡುವ ಅತ್ಯುನ್ನತ ಅಧಿಕಾರವನ್ನು ಪಡೆದಿತ್ತು. ಈ ಮಾಹಿತಿ ಆಯುಕ್ತರ ಬಹುತೇಕ ಹುದ್ದೆಗಳನ್ನು ಅಧಿಕಾರಶಾಹಿಯ ನಿವೃತ್ತ ಅಧಿಕಾರಿಗಳು ವಹಿಸಿಕೊಂಡಿದ್ದರು. ಹಲವು ವರ್ಷಗಳ ಕಾಲ ಹಿರಿಯ ಅಧಿಕಾರಿಗಳಾಗಿ ಸೇವೆ ಸಲ್ಲಿಸಿದ ನಂತರ, ಈ ಇವರಿಗೆ ಅಧಿಕಾರವನ್ನು ನಾಗರಿಕರಿಗೆ ಹಸ್ತಾಂತರ ಮಾಡುವುದು ಕಷ್ಟಕರವಾಗಿತ್ತು. ಅಷ್ಟೇ ಅಲ್ಲದೆ ನಾಗರಿಕರೇ ಸರ್ಕಾರದ ನ್ಯಾಯಯುತ ಮಾಲೀಕರು ಎಂಬ ವಾಸ್ತವವನ್ನು ಗುರುತಿಸಲು ಇವರಿಗೆ ಸಾಧ್ಯವಾಗಲಿಲ್ಲ. ಪಾರದರ್ಶಕ ಅಧಿಕಾರಾವಧಿಯ ಚರಿತ್ರೆ ಇರುವಂತಹ ಅಧಿಕಾರಿಗಳನ್ನು ಆಯ್ಕೆ ಮಾಡುವ ಯಾವುದೇ ಪ್ರಯತ್ನಗಳೂ ನಡೆಯಲಿಲ್ಲ. ಅನೇಕರು ಈ ಹುದ್ದೆಗಳನ್ನು ನಿವೃತ್ತಿಯ ನಂತರದ ಉತ್ತಮ ಅವಕಾಶ ಎಂದೇ ಭಾವಿಸಿ, ಕೆಲವೇ ಗಂಟೆಗಳ ಕಾಲ ಕಾರ್ಯನಿರ್ವಹಣೆ ಮಾಡಲಾರಂಭಿಸಿದರು. ಹಕ್ಕು

ಇದನ್ನೂ ಓದಿ: ಬಾಗಲಕೋಟೆ| ಕುರಿ ಕಳ್ಳರ ಬೆನ್ನತ್ತಿದ್ದ ಯುವಕ ಬರ್ಬರವಾಗಿ ಕೊಲೆ

ದೇಶದ ಹೈಕೋರ್ಟ್‌ ನ್ಯಾಯಮೂರ್ತಿಗಳು ವಿಲೇವಾರಿ ಮಾಡುತ್ತಿದ್ದ ಮೊಕದ್ದಮೆಗಳ ವಾರ್ಷಿಕ ಸರಾಸರಿ ಪ್ರಮಾಣ 2,500 ಇದ್ದರೆ, ಮಾಹಿತಿ ಆಯುಕ್ತರು ವಿಲೇವಾರಿ ಮಾಡುತ್ತಿದ್ದ ಪ್ರಕರಣಗಳ ಸಂಖ್ಯೆ ಇನ್ನೂ ಕಡಿಮೆಯಾಗಿತ್ತು.  ಹೈಕೋರ್ಟ್‌ ಮುಂದೆ ಬರುವಂತಹ ಮೊಕದ್ದಮೆಗಳಿಗೆ ಹೋಲಿಸಿದರೆ, ಮಾಹಿತಿ ಆಯುಕ್ತರ ಮುಂದೆ ಬರುವ ಪ್ರಕರಣಗಳ  ಸಂಕೀರ್ಣತೆ ಕಡಿಮೆಯೇ ಇರುವುದರಿಂದ, ಪ್ರತಿಯೊಬ್ಬ ಆಯುಕ್ತರೂ ಪ್ರತಿವರ್ಷ ಕನಿಷ್ಠ 5,000 ಪ್ರಕರಣಗಳನ್ನಾದರೂ ಇತ್ಯರ್ಥ ಮಾಡಬಹುದಿತ್ತು. ಕಾನೂನಿನ ಪ್ರಕಾರ ಮಾಹಿತಿಯನ್ನು ಅರ್ಜಿದಾರರಿಗೆ ಒದಗಿಸಲು ಗರಿಷ್ಠ 30 ದಿನಗಳ ಗಡುವು ಇದ್ದು, ಇದೇ ನಿಯಮವನ್ನು ಮೊದಲ ಹಂತದ ಮೇಲ್ಮನವಿ ಅಧಿಕಾರಿಗಳಿಗೂ ಅನ್ವಯಿಸಲಾಗಿದ್ದರೂ, ಅಂತಿಮ ಹಂತದ ಮಾಹಿತಿ ಆಯುಕ್ತರಿಗೆ ಯಾವುದೇ ಸಮಯ ನಿಗದಿಪಡಿಸಿರಲಿಲ್ಲ. ಹಕ್ಕು

ತತ್ಪರಿಣಾಮವಾಗಿ ಅನೇಕ ಆಯೋಗಗಳಲ್ಲಿ ಪ್ರಕರಣಗಳು ಒಂದು ವರ್ಷಕ್ಕೂ ಹೆಚ್ಚು ಕಾಲ ಬಾಕಿ ಉಳಿದವು. ಕ್ರಮೇಣ ಮಾಹಿತಿ ಹಕ್ಕು ಎನ್ನುವುದು ಚರಿತ್ರೆಯ ಹಕ್ಕಾಗಿ ಪರಿವರ್ತನೆಯಾಯಿತು. (ಅಂದರೆ ಕೋರಿದ ಅರ್ಜಿ ಇತಿಹಾಸದಂತಾಯಿತು –ಅನು). ಹಾಗಾಗಿ ಮಾಹಿತಿಯ ನಿರಾಕರಣೆಯೇ ಹೆಚ್ಚಾದುದರಿಂದ ಅಸಂಖ್ಯಾತ ಸಾಮಾನ್ಯ ಜನರು ಈ ನಿಟ್ಟಿನಲ್ಲಿ ಮುಂದುವರೆಯಲಿಲ್ಲ. ಆರ್‌ಟಿಐ ಕಾಯ್ದೆಯ ದಂಡ ವಿಧಿಸುವ ನಿಯಮಗಳು ಮೂಲ ಕಾನೂನಿನ ಪ್ರಬಲ ಅಸ್ತ್ರವಾಗಿತ್ತು. ಆದರೆ ಬಹುಪಾಲು ಆಯುಕ್ತರು ಈ ಅಸ್ತ್ರವನ್ನು ಬಳಸಲು ಹಿಂಜರಿಯುತ್ತಿದ್ದರು. ಸರ್ಕಾರಗಳೂ ಸಹ ಮಾಹಿತಿ ಆಯುಕ್ತರನ್ನು ನೇಮಿಸುವ ಪ್ರಕ್ರಿಯೆಯಲ್ಲಿ ವಿಳಂಬ ಮಾಡಲಾರಂಭಿಸಿದವು. ತತ್ಪರಿಣಾಮವಾಗಿ ಬಾಕಿ ಉಳಿದ ಪ್ರಕರಣಗಳ ಪ್ರಮಾಣ ಹೆಚ್ಚಾಗುತ್ತಲೇ ಹೋಯಿತು. ಹಕ್ಕು

ಅನೇಕ ಹೈಕೋರ್ಟ್‌ ತೀರ್ಪುಗಳಲ್ಲಿ ಕಾಣಬಹುದಾದ ಸ್ಪಷ್ಟವಾದ ಸಂದೇಶ ಎಂದರೆ, ಆರ್‌ಟಿಐ ಕಾಯ್ದೆಯ ಸೆಕ್ಷನ್‌ 8ರಲ್ಲಿ ಪಟ್ಟಿ ಮಾಡಲಾಗಿರುವ ವಿನಾಯಿತಿಗಳು ನಾಗರಿಕರ ಪ್ರಜಾಸತ್ತಾತ್ಮಕ ಹಕ್ಕುಗಳ ಮೇಲಿನ ನಿರ್ಬಂಧಗಳಾಗಿದ್ದವು. ಹಾಗಾಗಿ ಇವುಗಳನ್ನು ಕಾನೂನಿನ ಅನುಸಾರ ವ್ಯಾಖ್ಯಾನಿಸಬೇಕು ಎಂದು ಕೋರ್ಟ್‌ ತೀರ್ಪುಗಳು ಹೇಳಿದ್ದವು. ಬಹುಪಾಲು ಮಾಹಿತಿಯನ್ನು ನಾಗರಿಕರಿಗೆ ನೀಡಬೇಕು ಎಂಬ ಉದ್ದೇಶದೊಂದಿಗೆ ಸಂಸತ್ತು ಸಹ ವಿನಾಯಿತಿಗಳನ್ನು ಬಹಳ ಜಾಗ್ರತೆಯಿಂದ ರೂಪಿಸಿತ್ತು. ಹಕ್ಕು

ನಾಗರಿಕರ ಮಾಹಿತಿ ಹಕ್ಕುಗಳ ಬಗ್ಗೆ ಇದ್ದ ಧೋರಣೆ 2011ರಲ್ಲಿ ಸಂಪೂರ್ಣ ಬದಲಾಗಿಹೋಗಿತ್ತು.   “ ಸಿಬಿಎಸ್‌ಇ ಮತ್ತಿತರರು  Vs ಆದಿತ್ಯ ಬಂಧೋಪಾಧ್ಯಾಯ ಮತ್ತಿತರರು” ಮೊಕದ್ದಮೆಯಲ್ಲಿ ಸುಪ್ರೀಂಕೋರ್ಟ್‌ 33ನೇ ಪ್ಯಾರಾದಲ್ಲಿ ಹೀಗೆ ಹೇಳಿತ್ತು : “ ಕೆಲವು ಹೈಕೋರ್ಟ್‌ಗಳು ಆರ್‌ಟಿಐ ಕಾಯ್ದೆಯ ಸೆಕ್ಷನ್‌ 8ನ್ನು, ನಾಗರಿಕರಿಗೆ ಮಾಹಿತಿ ಹಕ್ಕನ್ನು ಪಡೆಯುವ ಬಲವನ್ನು ನೀಡುವ ಸೆಕ್ಷನ್‌ 3ರ ನಿಯಮಗಳ ವಿನಾಯಿತಿ ಎಂದು ಭಾವಿಸಿರುವುದಲ್ಲದೆ,  ಸೆಕ್ಷನ್‌ 3ರ ನಿಯಮಗಳು ವಾಕ್‌ ಸ್ವಾತಂತ್ರ್ಯದ ಸಾಂವಿಧಾನಿಕ ಹಕ್ಕನ್ನು ಧ್ವನಿಸುತ್ತದೆ. ಆದ್ದರಿಂದ ಸೆಕ್ಷನ್‌ 8 ನ್ನು ಕಡ್ಡಾಯವಾಗಿ ಅರ್ಥೈಸುವುದೇ ಅಲ್ಲದೆ, ಅಕ್ಷರಶಃ, ಸಂಕುಚಿತಗೊಳಿಸಿ ವ್ಯಾಖ್ಯಾನಿಸಬೇಕಾಗುತ್ತದೆ ಎಂದು ಭಾವಿಸಿವೆ. ಇದು ಸರಿಯಾದ ಧೋರಣೆ ಅಲ್ಲ. ”

ಇದೇ ತೀರ್ಪಿನ ಪ್ಯಾರಾ 37ರಲ್ಲಿ ನ್ಯಾಯಾಲಯವು ಯಾವುದೇ ಪುರಾವೆ ಇಲ್ಲದೆಯೇ: “ಸಾರ್ವಜನಿಕ ಅಧಿಕಾರಿಗಳ ಕಾರ್ಯನಿರ್ವಹಣೆಯಲ್ಲಿ ಪಾರದರ್ಶಕತೆ ಮತ್ತು ಹೊಣೆಗಾರಿಕೆ ಮತ್ತು ಭ್ರಷ್ಟಾಚಾರ ನಿರ್ಮೂಲನೆಗೆ ಹೊಂದಿಕೆಯಾಗದ ಎಲ್ಲಾ ರೀತಿಯ ಮಾಹಿತಿಗಳ ಬಹಿರಂಗಪಡಿಸುವಿಕೆಗೆ ಆರ್‌ಟಿಐ ಕಾಯ್ದೆಯಡಿಯಲ್ಲಿ ಅಸ್ಪಷ್ಟ ಮತ್ತು ಅಪ್ರಾಯೋಗಿಕ ಬೇಡಿಕೆಗಳನ್ನು ಪುರಸ್ಕರಿಸುವುದರಿಂದ,  ಅಥವಾ ನಿರ್ದೇಶನಗಳನ್ನು ಆಗ್ರಹಿಸುವುದರಿಂದ ಆಡಳಿತದ ದಕ್ಷತೆಯ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತವೆ ಮತ್ತು ಕಾರ್ಯಾಂಗವು ಮಾಹಿತಿಯನ್ನು ಸಂಗ್ರಹಿಸುವ ಮತ್ತು ಒದಗಿಸುವ ಅನುತ್ಪಾದಕ ಕೆಲಸದಲ್ಲಿ ಸಿಲುಕಿಕೊಳ್ಳುವಂತೆ ಮಾಡುತ್ತದೆ. ” ಎಂದು ಹೇಳಿತ್ತು.

ಮುಂದುವರೆದು “ಈ ಕಾಯ್ದೆಯ ದುರುಪಯೋಗ ಅಥವಾ ತಪ್ಪು ಬಳಕೆಗೆ ಅವಕಾಶ ನೀಡಕೂಡದು. ಇದರಿಂದ ಕಾಯ್ದೆಯು ದೇಶದ ಅಖಂಡತೆ ಮತ್ತು ಅಭಿವೃದ್ಧಿಗೆ ತೊಡಕಾಗಿ ಪರಿಣಮಿಸುತ್ತದೆ. ಅಥವಾ ನಾಗರಿಕರ ನಡುವೆ ಶಾಂತಿ, ಸೌಹಾರ್ದತೆ ಮತ್ತು ನೆಮ್ಮದಿಯನ್ನು ಹಾಳುಮಾಡುತ್ತದೆ. ಹಾಗೆಯೇ ಈ ಕಾಯ್ದೆಯನ್ನು ದಮನಕಾರಿ ಅಸ್ತ್ರವಾಗಿ ಅಥವಾ ದಕ್ಷತೆಯಿಂದ ಕಾರ್ಯ ನಿರ್ವಹಿಸುತ್ತಿರುವ ಪ್ರಾಮಾಣಿಕ ಅಧಿಕಾರಿಗಳನ್ನು ಬೆದರಿಸುವ ಅಸ್ತ್ರವಾಗಿ ಪರಿವರ್ತಿಸಕೂಡದು” ಎಂದು ಹೇಳಿತ್ತು. ಈ ನ್ಯಾಯಾಂಗದ ತೀರ್ಪು ಮಾಹಿತಿ ಹಕ್ಕನ್ನು ಅನಪೇಕ್ಷಿತ ಚಟುವಟಿಕೆಯನ್ನಾಗಿ ಮಾಡಿದ್ದೇ ಅಲ್ಲದೆ ಈ ಕಾಯ್ದೆಯ ಬಳಕೆದಾರರನ್ನು ಬಹಿಷ್ಕೃತರನ್ನಾಗಿ ಮಾಡುವುದರಲ್ಲಿ ಯಶಸ್ವಿಯಾಗಿತ್ತು. ಮಾಹಿತಿಯ ನಿರಾಕರಣೆಯನ್ನು ಮತ್ತು ಆರ್‌ಟಿಐ ಕಾಯ್ದೆಯ ಮೇಲಿನ ದಾಳಿಗಳನ್ನು ಸಮರ್ಥಿಸಿಕೊಳ್ಳಲು ಇದು ಸಹಾಯಕವಾಗಿತ್ತು.

ವೈಯ್ಯುಕ್ತಿಕ ಮಾಹಿತಿಯ ವಿಚಾರ

ಈ ನಿಟ್ಟಿನಲ್ಲಿ ಎರಡನೆ ಪ್ರಮುಖ ಪ್ರಹಾರ ನಡೆದದ್ದು ಅಕ್ಟೋಬರ್‌ 2012 ʼ ಗಿರೀಶ್‌ ರಾಮಚಂದ್ರ ದೇಶಪಾಂಡೆ Vs ಕೇಂದ್ರ ಮಾಹಿತಿ ಆಯುಕ್ತರು ಮತ್ತಿತರರು” ಮೊಕದ್ದಮೆಯ ತೀರ್ಪಿನಲ್ಲಿ.

ಆರ್‌ಟಿಐ ಅರ್ಜಿದಾರ ಗಿರೀಶ್‌ ರಾಮಚಂದ್ರ ದೇಶಪಾಂಡೆ ಅವರು ಎ. ಬಿ. ಲೂಟೆ ಎಂಬ ಸಾರ್ವಜನಿಕ ಅಧಿಕಾರಿಗೆ ನೀಡಲಾಗಿದ್ದ ಎಲ್ಲ ಮೆಮೋಗಳನ್ನು, ಷೋ ಕಾಸ್‌ ನೋಟಿಸ್‌ಗಳನ್ನು, ದಂಡ ಮತ್ತು ಶಿಕ್ಷೆಯ ಮಾಹಿತಿಯನ್ನು ತಮ್ಮ ಅರ್ಜಿಯ ಮೂಲಕ ಕೋರಿದ್ದರು. ಇದರೊಟ್ಟಿಗೆ ಗಿರೀಶ್‌ ಅವರು ಲೂಟೆ ಅವರ ಸ್ತಿರಾಸ್ತಿ ಮತ್ತು ಚರಾಸ್ತಿಯ ವಿವರಗಳನ್ನೂ, ಅವರ ಹೂಡಿಕೆಯ ವಿವರಗಳನ್ನೂ, ಬ್ಯಾಂಕುಗಳು ಮತ್ತಿತರ ಹಣಕಾಸು ಸಂಸ್ಥೆಗಳಿಂದ ಪಡೆದಿರುವ ಸಾಲ ಸೌಲಭ್ಯಗಳ ವಿವರಗಳನ್ನೂ ಕೋರಿದ್ದರು.

ಆದರೆ ಈ ಬೇಡಿಕೆಯನ್ನು ಆರ್‌ಟಿಐ ಕಾಯ್ದೆಯ ಸೆಕ್ಷನ್‌ 8 (1) (j) ಅಡಿಯಲ್ಲಿ ತಿರಸ್ಕರಿಸಲಾಗಿತ್ತು. ಕಾಯ್ದೆಯ ಈ ಸೆಕ್ಷನ್‌ನಲ್ಲಿ “ಸಾರ್ವಜನಿಕ ಚಟುವಟಿಕೆಗಳಿಗೆ ಅಥವಾ ಆಸಕ್ತಿಗೆ ಸಂಬಂಧವಿಲ್ಲದ ಮಾಹಿತಿಗಳನ್ನು, ಅಥವಾ ಸಂಬಂಧಪಟ್ಟ ವ್ಯಕ್ತಿಯ ಖಾಸಗಿತನವನ್ನು ಅನಗತ್ಯವಾಗಿ ಆಕ್ರಮಿಸುವಂತಹ ಮಾಹಿತಿಗಳನ್ನು ನೀಡಲು ವಿನಾಯಿತಿ ನೀಡಲಾಗಿದೆ. ಕೇಂದ್ರ ಸಾರ್ವಜನಿಕ ಮಾಹಿತಿ ಅಧಿಕಾರಿಯ ಅಭಿಪ್ರಾಯದಲ್ಲಿ ಸಾರ್ವಜನಿಕ ಹಿತಾಸಕ್ತಿಯ ಕಾರಣಕ್ಕಾಗಿ ಮಾಹಿತಿಯು ಸಮಾಧಾನಕರವಾಗಿದ್ದಲ್ಲಿ, ಅಂತಹ ಮಾಹಿತಿಯನ್ನು ಬಹಿರಂಗಪಡಿಸಬಹುದು. ಆದರೆ ಸಂಸತ್ತಿಗೆ ಅಥವಾ ರಾಜ್ಯ ವಿಧಾನಸಭೆಗಳಿಗೆ ನಿರಾಕರಿಸಲಾಗದಂತಹ ಮಾಹಿತಿಯನ್ನು ಯಾವುದೇ ವ್ಯಕ್ತಿಗೂ ನಿರಾಕರಿಸಲಾಗುವುದಿಲ್ಲ. “ ಎಂದು ಹೇಳಲಾಗಿದೆ.

ಈ ನಿಯಮಗಳನ್ನು ಸರಳವಾಗಿ ಗಮನಿಸಿದಾಗ, ಸಾರ್ವಜನಿಕ ಚಟುವಟಿಕೆ ಅಥವಾ ಹಿತಾಸಕ್ತಿಗೆ ಯಾವುದೇ ರೀತಿಯ ಸಂಬಂಧ ಇಲ್ಲದ ವೈಯುಕ್ತಿಕ ಮಾಹಿತಿಯನ್ನು ಒದಗಿಸಲು ನಿರಾಕರಿಸಬಹುದಾಗಿದೆ. ಅಥವಾ ವ್ಯಕ್ತಿಯ ಖಾಸಗಿತನವನ್ನು ಅನಗತ್ಯವಾಗಿ ಭೇದಿಸುವಂತಹ ಯಾವುದೇ ಮಾಹಿತಿಯನ್ನು ನಿರಾಕರಿಸಬಹುದಾಗಿದೆ.

ಆದರೆ ಯಾವುದೇ ಮಾಹಿತಿಯು ಸಾರ್ವಜನಿಕ ಚಟುವಟಿಕೆಯ  ಫಲಿತಾಂಶವೋ ಅಥವಾ ಇಂತಹ ಮಾಹಿತಿಯ ಬಹಿರಂಗಪಡಿಸುವಿಕೆಯು ವ್ಯಕ್ತಿಯ ಖಾಸಗಿತನವನ್ನು ಅನಗತ್ಯವಾಗಿ ಭೇದಿಸುವುದೋ ಎನ್ನುವುದನ್ನು ನ್ಯಾಯಾಲಯ ನಿರ್ಧರಿಸಲಿಲ್ಲ. ನಿಯಮದ ಮೊದಲ ಏಳು ಪದಗಳನ್ನು ಮಾತ್ರವೇ ಓದಿ ನ್ಯಾಯಾಲಯವು ಮಾಹಿತಿಯನ್ನು ನಿರಾಕರಿಸಿದ್ದು, ಇದು ಖಾಸಗಿ ಮಾಹಿತಿ ಎಂದು ವ್ಯಾಖ್ಯಾನಿಸಿತ್ತು.  ಬಹುಪಾಲು ಮಾಹಿತಿಯನ್ನು ಯಾವುದಾದರೂ ಒಬ್ಬ ವ್ಯಕ್ತಿಯೊಡನೆ ಹೊಂದಿಸಬಹುದು.

ಸಾರ್ವಜನಿಕ ಮಾಹಿತಿ ಅಧಿಕಾರಿಗಳಿಗೆ ಅಥವಾ ಅಂತಿಮ ಸ್ತರದ ಅಧಿಕಾರಿಗಳಿಗೆ ಖಾಸಗಿತನ ಎನ್ನುವುದನ್ನು ನಿಷ್ಕೃಷ್ಟವಾಗಿ ನಿಷ್ಕರ್ಷೆ ಮಾಡುವುದು ಕಷ್ಟಕರವಾಗುವುದನ್ನು ಗಮನಿಸಿ,  ಸಂಸತ್ತು ಈ ನಿಯಮದಲ್ಲಿ, ಸಂಸತ್ತು ಅಥವಾ ವಿಧಾನಸಭೆಗೆ ನಿರಾಕರಿಸಲಾಗದ ಮಾಹಿತಿಯನ್ನು ವ್ಯಕ್ತಿಗಳಿಗೂ ನಿರಾಕರಿಸಲಾಗುವುದಿಲ್ಲ ಎಂಬ  ಸರಳ ಮಾನದಂಡವನ್ನು ರೂಪಿಸಿತ್ತು. ಅಂದರೆ,  ನಾಗರಿಕರಿಗೆ ಮಾಹಿತಿಯನ್ನು ನಿರಾಕರಿಸಬಹುದು ಎಂದು ಯಾರೇ ಪ್ರತಿಪಾದಿಸಿದರೆ, ಅದು ಪರೋಕ್ಷವಾಗಿ ಆ ವ್ಯಕ್ತಿಯು ಸಂಸತ್ತಿಗೂ ಮಾಹಿತಿಯನ್ನು ನಿರಾಕರಿಸಬಹುದು ಎಂದು ಹೇಳಿದಂತಾಗುತ್ತದೆ.

ಒಂದು ಸ್ವೀಕೃತವಾಗಿರುವ ಅಭಿಪ್ರಾಯ ಎಂದರೆ ಅಸಂಬದ್ಧ ಎನಿಸದೆ ಹೋದರೆ ಯಾವುದೇ ಶಾಸನವನ್ನು ಅಕ್ಷರಶಃ ಅರ್ಥೈಸಲು ಅವಕಾಶವಿರುತ್ತದೆ. “ನಾಸಿರುದ್ದಿನ್‌ ಮತ್ತಿತರರು Vs ಸೀತಾರಾಮ್‌ ಅಗರ್ವಾಲ್‌ (2003) 2 ಎಸ್‌ಸಿಸಿ 577” ಪ್ರಕರಣದಲ್ಲಿ ಕೋರ್ಟ್‌ ಹೀಗೆ ಹೇಳಿತ್ತು : “ ಶಾಸನವೊಂದು ಅಸ್ಪಷ್ಟವಾಗಿದ್ದಾಗ ಅದನ್ನು  ಅರ್ಥೈಸಲು ನ್ಯಾಯಾಲಯದ ಅಧಿಕಾರ ವ್ಯಾಪ್ತಿಯನ್ನು ಅನ್ವಯಿಸಬಹುದು, ಅದು ಶಾಸನವನ್ನು ಪುನಃ ರಚಿಸಲು ಅಥವಾ ಮರುರೂಪಿಸಲು ಸಾಧ್ಯವಿಲ್ಲ ಶಾಸಕಾಂಗವು ಯಾವುದೇ ಅನಗತ್ಯ ಪದಗಳನ್ನು ಬಳಸಿಲ್ಲ ಎಂಬ ವಿಶ್ವಾಸ ಇರುವುದನ್ನು ನಿರ್ಧರಿಸುವುದು ಸಹ ಅಗತ್ಯವಾಗಿದೆ. ಶಾಸನದ ನಿಜವಾದ ಉದ್ದೇಶವನ್ನು ಬಳಸಲಾಗಿರುವ ಭಾಷೆಯಿಂದ ಸಂಗ್ರಹಿಸಬೇಕು ಎನ್ನುವುದು ಸ್ಥಾಪಿತ ನಿಯಮವಾಗಿದೆ. ”

ಗಿರೀಶ್‌ ರಾಮಚಂದ್ರ ದೇಶಪಾಂಡೆ ಪ್ರಕರಣವು ಆರ್‌ಟಿಐ ಕಾಯ್ದೆಯನ್ನು ತಿದ್ದುಪಡಿ ಮಾಡಲು ಚಾಲನೆ ನೀಡಿದ್ದು, ತದನಂತರದ ಆರು ನ್ಯಾಯಾಂಗ ಮೊಕದ್ದಮೆಗಳಲ್ಲಿ ಇದನ್ನೇ ಪೂರ್ವನಿದರ್ಶನವಾಗಿ ಪರಿಗಣಿಸಲಾಗಿದೆ. ತತ್ಪರಿಣಾಮವಾಗಿ ಈ ತಿದ್ದುಪಡಿಯಾದ ನಿಯಮವೇ ಮಾಹಿತಿ ಹಕ್ಕು ಪರಿಕಲ್ಪನೆಯನ್ನು ಮಾಹಿತಿ ನಿರಾಕರಣೆಯಾಗಿ ಪರಿವರ್ತಿಸುವ ಮಾನದಂಡವಾಗಿ ಪರಿಣಮಿಸಿದೆ. ವೈಯುಕ್ತಿಕ ಡಿಜಿಟಲ್‌ ದತ್ತಾಂಶ ರಕ್ಷಣಾ ಕಾಯ್ದೆ (Digital Personal Data Protection Act) ಇದರ ಸುಳಿವನ್ನೇ ಪ್ರಧಾನವಾಗಿ ಪರಿಗಣಿಸಿ ಆರ್‌ಟಿಐ ಕಾಯ್ದೆಯನ್ನೇ ತಿದ್ದುಪಡಿ ಮಾಡುತ್ತದೆ. ಕಾನೂನಿನಲ್ಲಿ ಬಳಸಲಾಗಿರುವ ಪದಗಳಿಗೆ ಅವುಗಳ ಸಹಜ ಅರ್ಥವನ್ನು ನೀಡದೆ ಇರುವ ಹಲವು ಪ್ರಕರಣಗಳೂ ಇವೆ.

ಆರ್‌ಟಿಐ ಕಾಯ್ದೆಯು ತನ್ನ ಮೂಲ ಭರವಸೆ ಈಡೇರಿಸುವುದನ್ನು ಖಚಿತಪಡಿಸಿಕೊಳ್ಳಲು ನಾಗರಿಕರು ಮೂಲ ಕಾಯ್ದೆಯನ್ನೇ ಅನುಸರಿಸಬೇಕಿದ್ದು ಯಾವುದೇ ರೀತಿ ವಿರೂಪವಾಗಲು ಅವಕಾಶ ನೀಡಬಾರದು.ನಾಗರಿಕರು ಮತ್ತು ಮಾಧ್ಯಮಗಳು ಈ ಜವಾಬ್ದಾರಿಯನ್ನು ವಹಿಸಿಕೊಂಡು ಇದನ್ನು ಸಮರ್ಥಿಸಬೇಕಿದೆ. ಇಲ್ಲವಾದಲ್ಲಿ ಭಾರತೀಯ ಸಂವಿಧಾನದ ಅನುಚ್ಛೇದ 19 (1) (ಎ) ಅಡಿಯಲ್ಲಿ ನಾವು ಪಡೆದಿರುವ ಮೂಲಭೂತ ಹಕ್ಕು ಸಡಿಲವಾಗುತ್ತಲೇ ಹೋಗುತ್ತದೆ.

 (ಲೇಖಕರು ಮಾಜಿ ಕೇಂದ್ರ ಮಾಹಿತಿ ಆಯುಕ್ತರು )

ಇದನ್ನೂ ನೋಡಿ: ಶ್ರಮಜೀವಿಗಳ ಹೋರಾಟ 4ನೇ ದಿನಕ್ಕೆ |ಸಂಘಟಿತ, ಅಸಂಘಟಿತ, ಗುತ್ತಿಗೆ ಕಾರ್ಮಿಕರ ಪ್ರತಿಭಟನೆ

Donate Janashakthi Media

Leave a Reply

Your email address will not be published. Required fields are marked *