ಹಾಸ್ಯಾಸ್ಪದ ಟಿಪ್ಪಣಿಗಳು ನಿಂದನಾ ಕ್ರಮಕ್ಕೂ ಯೋಗ್ಯವಲ್ಲ – ಸರ್ವೋಚ್ಚ ನ್ಯಾಯಾಲಯದ ತೀಕ್ಷ್ಣನುಡಿ

ವಕ್ಫ್ ತಿದ್ದುಪಡಿ ಕಾಯ್ದೆಗೆ ಸವಾಲಿನ ಅರ್ಜಿಯ ವಿಚಾರಣೆಯ ನಡೆಸುತ್ತಿರುವ ಸುಪ್ರಿಂ ಕೋರ್ಟಿನ ಪೀಠ ಕಾಯ್ದೆಯ ಕೆಲವು ಅಂಶಗಳಿಗೆ ತಡೆ ಹಾಕುವ ವಿಷಯದಲ್ಲಿ ಹೇಳಿದ ಕೆಲವು ಮಾತುಗಳ ಬಗ್ಗೆ ಬಿಜೆಪಿಯ ಸಂಸದ ನಿಶಿಕಾಂತ್ ದುಬೆ ಮಾಡಿರುವ ಟಿಪ್ಪಣಿಗಳು ಬೇಜವಾಬ್ದಾರಿ, ಅಸಂಬದ್ಧ, ಇದರಲ್ಲಿ ನ್ಯಾಯಾಲಯ ಮತ್ತು ನ್ಯಾಯಾಧೀಶರನ್ನು ದೂಷಿಸುವ ಉದ್ದೇಶಪೂರ್ವಕ ಆಶಯ ಸ್ಪಷ್ಟವಾಗಿ ಕಾಣುತ್ತಿದ್ದರೂ, ಇಂತಹ ಹಾಸ್ಯಾಸ್ಪದ ಟಿಪ್ಪಣಿಗಳು ನಿಂದನಾ ಕ್ರಮಗಳಿಗೂ ಯೋಗ್ಯವಲ್ಲ ಎಂದು ದೇಶ ಸವೋಚ್ಚ ನ್ಯಾಯಾಲಯ ಟಿಪ್ಪಣಿ ಮಾಡಿದೆ.

ನ್ಯಾಯಾಲಯಗಳು ಹೂಗಳಷ್ಟು ನಾಜೂಕಲ್ಲ, ಇಂತಹ ಹಾಸ್ಯಾಸ್ಪದ ಹೇಳಿಕೆಗಳಿಂದೇನೂ ಅವು ಮುದುಡಿ ಹೋಗುವುದಿಲ್ಲ ಎಂದೂ ಅದು ಮಾರ್ಮಿಕವಾಗಿ ಹೇಳಿದೆ.

ದೇಶದ ಮುಖ್ಯ ನ್ಯಾಯಾಧೀಶರು ಭಾರತದಲ್ಲಿ ಸಂಭವಿಸುತ್ತಿರುವ ಎಲ್ಲ ಅಂತರ್ಯುದ್ಧಕ್ಕೆ ಹೊಣೆಗಾರರು, ಸರ್ವೋಚ್ಚ ನ್ಯಾಯಾಲಯ ದೇಶದಲ್ಲಿ ಮತೀಯ ಯುದ್ಧಗಳನ್ನು ಉದ್ರೇಕಿಸುವುದಕ್ಕೆ ಹೊಣೆಗಾರರಾಗುತ್ತಾರೆ ಎಂದೆಲ್ಲಾ ಆ ಬಿಜೆಪಿ ಸಂಸದ ಹೇಳಿದ್ದರು. ಇಂತಹ ಹೇಳಿಕೆಗಳನ್ನು ತಡೆಯಲು ನ್ಯಾಯಾಲಯ ತಾನಾಗಿಯೇ ನ್ಯಾಯಾಂಗ ನಿಂದನೆ ಕಲಾಪಗಳನ್ನು ಕೈಗೆತ್ತಿಕೊಳ್ಳಬೇಕು, ದುಬೆ ವಿರುದ್ಧ ಪ್ರಕರಣ ದಾಖಲಿಸುವಂತೆ ನಿರ್ದೇಶನ ನೀಡಬೇಕು ಎಂದು ಒಬ್ಬ ವಕೀಲ ವಿಶಾಲ್‍ ತಿವಾರಿ ಸಲ್ಲಿಸಿದ ಅರ್ಜಿಯ ವಿಚಾರಣೆಯ ವೇಳೆಯಲ್ಲಿ ಸುಪ್ರಿಂ ಕೋರ್ಟ್‍ ಪೀಠ ಟಿಪ್ಪಣಿ ಮಾಡಿದೆ.

ಇದನ್ನೂ ಓದಿ: ಭಾರತ-ಪಾಕಿಸ್ತಾನ ಶಸ್ತ್ರಸಂಯಮದ ನಂತರ ಷೇರುಪೇಟೆಯಲ್ಲಿ ಇತಿಹಾಸದ ಅತಿದೊಡ್ಡ ಏರಿಕೆ

ಭಾರತದಲ್ಲಿ ಅಂತರ್ಯುದ್ಧ ನಡೆಯುತ್ತಿಲ್ಲ ಎಂದ ನ್ಯಾಯಪೀಠ ದುಬೆಯರ ಟಿಪ್ಪಣಿಗಳು ಸಂವಿಧಾನಿಕ ನ್ಯಾಯ ಪೀಠಗಳ ಪಾತ್ರದ ಬಗ್ಗೆ ಮತ್ತು ಸಂವಿಧಾನ ಅವುಗಳ ಮೇಲೆ ವಿಧಿಸಿರುವ ಕರ್ತವ್ಯಗಳು ಮತ್ತು ಬಾಧ್ಯತೆಗಳ ಬಗ್ಗೆ ಅಜ್ಞಾನವನ್ನು ಪ್ರದರ್ಶಿಸುತ್ತವೆ ಎಂದೂ ಹೇಳಿತು.

ವಕ್ಫ್ ತಿದ್ದುಪಡಿ ಕಾಯ್ದೆಗೆ ಸಂಬಂಧಪಟ್ಟಂತೆ, ರಾಜಕೀಯ ಪಕ್ಷಗಳು ಮತ್ತು ರಾಜಕೀಯ ಮುಖಂಡರು ದ್ವೇಷ ಮತ್ತು ಉದ್ರೇಕಕಾರಿ ಭಾಷಣಗಳುನ್ನು ಮಾಡದಂತೆ ರಾಜ್ಯ ಸರಕಾರಗಳ ಮುಖ್ಯ ಕಾರ್ಯದರ್ಶಿಗಳು ಸಲಹಾ ದೇಶಗಳನ್ನು ನೀಡುವಂತೆ ನಿರ್ದೇಶನ ನೀಡಬೇಕು ಎಂದೂ ಅರ್ಜಿದಾರರು ಕೋರಿದ್ದರು.

ಈ ಬಗ್ಗೆ ಹೇಳುತ್ತ ದ್ವೇಷ ಭಾಷಣ ಸಲ್ಲದು, ಇದರ ವಿರುದ್ಧ ಕಟ್ಟುನಿಟ್ಟಾಗಿ ವರ್ತಿಸಬೇಕು ಎಂದು ನ್ಯಾಯಪೀಠ ಹೇಳಿತು. ದ್ವೇಷ ಭಾಷಣಗಳನ್ನು ಸಹಿಸಿಕೊಳ್ಳಲು ಸಾಧ್ಯವಿಲ್ಲ, ಏಕೆಂದರೆ ಅವುಗಳಿಂದಾಗಿ ಅದಕ್ಕೆ ಗುರಿಯಾದ ಗುಂಪಿನ ಸದಸ್ಯರ ಘನತೆ ಮತ್ತು ಸ್ವಯಂ-ಯೋಗ್ಯತೆಗೆ ಪೆಟ್ಟಾಗುತ್ತದೆ. ಇದು ವಿವಿಧ ಗುಂಪುಗಳ ನಡುವೆ ಅಸಾಮರಸ್ಯಕ್ಕೆ ಕಾರಣವಾಗುತ್ತದೆ ಮತ್ತು ಸಮಾನತೆಯ ವಿಚಾರಕ್ಕೆ ಬದ್ಧವಾಗಿರುವ ಒಂದು ಬಹು-ಸಂಸ್ಕೃತಿಗಳ ಸಮಾಜದಲ್ಲಿ ಅನಿವಾರ್ಯವಾದ ಸಹನೆ ಹಾಗೂ ಮುಕ್ತ ಮನೋಭಾವವನ್ನು ಕ್ಷಯಿಸುತ್ತದೆ. ಯಾವುದೇ ಗುಂಪಿನ ಮೇಲೆ ಗುರಿಯಿಟ್ಟು ಅವರಲ್ಲಿ ಪರಕೀಯ ಭಾವ ಉಂಟು ಮಾಡುವುದು ಅಥವ ಅವಮಾನಿಸುವುದು ಒಂದು ಶಿಕ್ಷಾರ್ಹ ಅಪರಾಧ ಎಂದೂ ನ್ಯಾಯಪೀಠ ಈ ಸಂದರ್ಭದಲ್ಲಿ ಒತ್ತಿ ಹೇಳಿರುವುದಾಗಿ ವರದಿಯಾಗಿದೆ.

ದೇಶದ ಉಪರಾಷ್ಟ್ರಪತಿಗಳೂ ಸರ್ವೋಚ್ಚ ನ್ಯಾಯಾಲಯದ ವಿರುದ್ಧ ಇಂತಹುದೇ ಟೀಕೆಗಳನ್ನು ಮಾಡುತ್ತಿದ್ದಾರೆ ಎಂಬುದನ್ನು ಇಲ್ಲಿ ನೆನಪಿಸಿಕೊಳ್ಳಬಹುದು.

ಸುಪ್ರಿಂ ಕೋರ್ಟ್ ಬಾರ್ ಅಸೋಸಿಯೇಷನ್ ಮತ್ತು ಇತರ ಹಲವು ವಕೀಲರು ಕೂಡ ದುಬೆಯವರ ವಿರುದ್ಧ ನ್ಯಾಯಾಂಗ ನಿಂದನೆಗೆ ಸಮ್ಮತಿ ನೀಡಬೇಕು ಎಂದು ಅಟಾರ್ನಿ ಜನರಲ್‌ಗೆ ಪತ್ರ ಬರೆದಿದ್ದಾರೆ. ಆದರೆ ಅದಕ್ಕೆ ಇನ್ನೂ ಯಾವುದೇ ನಿರ್ಧಾರ ಬಂದಿಲ್ಲ ಎಂದೂ ವರದಿಯಾಗಿದೆ. ಇದು ಈ ಸಂಸದ ಕೇಂದ್ರ ಸರಕಾರದ ಅತ್ಯುನ್ನತ ಸ್ಥಾನಗಳಲ್ಲಿರುವವರ ಆಯ್ದ ತುತ್ತೂರಿಯೇ ಎಂಬ ಸಂದೇಹಕ್ಕೆ ಎಡೆ ಮಾಡಿ ಕೊಟ್ಟಿದೆ.‌

ಇದನ್ನೂ ನೋಡಿ: ಹಾವುಗಳ ವಿಸ್ಮಯಕಾರಿ ವಿಷಯಗಳು | ಡಾ : ಶ್ರೀಧರ Janashakthi Media

Donate Janashakthi Media

Leave a Reply

Your email address will not be published. Required fields are marked *