ಶ್ರೀನಗರ: ಜಮ್ಮು ಮತ್ತು ಕಾಶ್ಮೀರದಲ್ಲಿ 2019ರಲ್ಲಿ ಸಂವಿಧಾನದ 370ನೇ ವಿಧಿಯ ವಿಶೇಷ ಸ್ಥಾನಮಾನ ರದ್ದುಗೊಳಿಸಿದ ನಂತರ, ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆಯಾಗುತ್ತಿದೆ. ಇದರಿಂದ ಕಾಶ್ಮೀರೇತರೂ ಮತ ಚಲಾಯಿಸಲು ಮತ್ತು ಭೂಮಿಯನ್ನು ಹೊಂದಲು ಅನುವು ಮಾಡಿಕೊಡಲಿದೆ.
ಜಮ್ಮು ಮತ್ತು ಕಾಶ್ಮೀರದಲ್ಲಿ 370ನೇ ವಿಧಿ ತೆರವು ಮಾಡಿದ ನಂತರ ಇದೇ ಮೊದಲಬಾರಿಗೆ ಚುನಾವಣೆ ನಡೆಯುತ್ತಿದ್ದು, ಸ್ಥಳೀಯರಲ್ಲದವರಿಗೂ ಮತದಾನಕ್ಕೆ ಅವಕಾಶ ಮಾಡಿಕೊಡಲಾಗುತ್ತಿದೆ.
ಜಮ್ಮು ಹಾಗೂ ಕಾಶ್ಮೀರ ಮುಖ್ಯ ಚುನಾವಣಾ ಅಧಿಕಾರಿ ಹಿರ್ದೇಶ್ ಕುಮಾರ್ ಅವರ ಹೇಳಿಕೆಯಂತೆ, ಚುನಾವಣೆಗೆ ಮುನ್ನ 20 ಲಕ್ಷಕ್ಕೂ ಅಧಿಕ ಹೊಸ ಮತದಾರರು ನೋಂದಣಿಯಾಗುವ ಸಾಧ್ಯತೆಗಳಿವೆ. ಇದರಿಂದ ಮತದಾರರ ಸಂಖ್ಯೆ ಶೇ. 33ರಷ್ಟು ಹೆಚ್ಚಾಗಲಿವೆ. ಸದ್ಯ ಈ ಕೇಂದ್ರಾಡಳಿತ ಪ್ರದೇಶದಲ್ಲಿ 76 ಲಕ್ಷ ಮತದಾರರಿದ್ದಾರೆ ಎಂದು ಹೇಳಿದ್ದಾರೆ.
ಆದರೆ, ಚುನಾವಣಾ ಆಯೋಗದ ಈ ನಡೆಗೆ ಜಮ್ಮು ಕಾಶ್ಮೀರದ ಪ್ರಮುಖ ರಾಜಕೀಯ ಪಕ್ಷಗಳು ವಿರೋಧ ವ್ಯಕ್ತಪಡಿಸಿವೆ. ಈ ಪ್ರದೇಶದಲ್ಲಿ ಬಿಜೆಪಿಗೆ ಸಿಗುವ ಬೆಂಬಲದ ಬಗ್ಗೆ “ಅಭದ್ರತೆ” ಯಿಂದ ಈ ನಿರ್ಧಾರಕ್ಕೆ ಬಂದಿದ್ದಾರೆ ಎಂದಿದ್ದಾರೆ.
ನ್ಯಾಷನಲ್ ಕಾನ್ಫರೆನ್ಸ್ ನಾಯಕ ಓಮರ್ ಅಬ್ದುಲ್ಲಾ, `ಜಮ್ಮು ಮತ್ತು ಕಾಶ್ಮೀರದಲ್ಲಿ ತನ್ನ ಸ್ಥಾನಗಳನ್ನು ಗೆಲ್ಲಲು ಬಿಜೆಪಿ ತಾತ್ಕಾಲಿಕ ಮತದಾರರನ್ನು ಆಮದು ಮಾಡಿಕೊಳ್ಳುತ್ತಿವೆಯೇ? ಜಮ್ಮು ಹಾಗೂ ಕಾಶ್ಮೀರದ ಜನರಿಗೆ ತಮ್ಮ ಹಕ್ಕು ಚಲಾಯಿಸಲು ಅವಕಾಶ ನೀಡಿದಾಗ ಇವುಗಳಲ್ಲಿ ಯಾವುದೂ ಬಿಜೆಪಿಗೆ ಸಹಾಯ ಮಾಡುವುದಿಲ್ಲ ಎಂದು ಅವರು ಟೀಕಿಸಿದ್ದಾರೆ.
ಮಾಜಿ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ, ಬಿಜೆಪಿ ಚುನಾವಣಾ ಫಲಿತಾಂಶಗಳ ಮೇಲೆ ಪ್ರಭಾವ ಬೀರಲು ಮುಂದಾಗಿದೆ. ಸ್ಥಳೀಯರಲ್ಲದವರಿಗೆ ಮತ ಚಲಾಯಿಸಲು ಅವಕಾಶ ನೀಡುವುದೆಂದರೆ, ನಿಸ್ಸಂಶಯವಾಗಿ ಚುನಾವಣಾ ಫಲಿತಾಂಶಗಳ ಮೇಲೆ ಪ್ರಭಾವ ಬೀರುವುದು. ಸ್ಥಳೀಯರನ್ನು ಬಲಹೀನಗೊಳಿಸಲು ಕಬ್ಬಿಣದ ಮುಷ್ಟಿಯೊಂದಿಗೆ ಜಮ್ಮು ಹಾಗೂ ಕಾಶ್ಮೀರದ ಆಡಳಿತವನ್ನು ಮುಂದುವರಿಸುವುದು ನಿಜವಾದ ಗುರಿಯಾಗಿದೆ. ಅದಕ್ಕಾಗಿ ಹಿಂಬಾಗಿಲಿನಿಂದ 25 ಲಕ್ಷ ಬಿಜೆಪಿ ಮತದಾರರನ್ನು ತರುವ ಪ್ರಯತ್ನ ಮಾಡುತ್ತಿದೆ ಎಂದು ಟ್ವೀಟ್ ಮೂಲಕ ಕಿಡಿ ಕಾರಿದ್ದಾರೆ.
370ನೇ ವಿಧಿ ಜಾರಿಯಿದ್ದ ಸಂದರ್ಭದಲ್ಲಿ ಮತ ಹಾಕಲು ಸಾಧ್ಯವಿಲ್ಲದವರೂ ಈಗ ಮತದಾರರಾಗಿ ನೋಂದಾಯಿಸಿಕೊಳ್ಳಬಹುದಾಗಿದೆ. ಈ ಹಿನ್ನೆಲೆ ಕಾಶ್ಮೀರಿಯಲ್ಲದವರು ಸೇರಿ ಮತದಾರರ ಅಂತಿಮ ಪಟ್ಟಿಯಲ್ಲಿ 20 – 25 ಲಕ್ಷ ಹೊಸ ಮತದಾರರು ಸೇರ್ಪಡೆಯಾಗುವ ಸಾಧ್ಯತೆಯಿದೆ ಎನ್ನಲಾಗಿದೆ. ಜಮ್ಮು ಹಾಗೂ ಕಾಶ್ಮೀರದಲ್ಲಿ ವಾಸಿಸುತ್ತಿರುವ ಹಾಗೂ ಕೆಲಸ ಮಾಡುತ್ತಿರುವ ಯಾರಾದರೂ ಮತದಾರರಾಗಬಹುದು.