ದೇಶದ ಅತಿದೊಡ್ಡ ಅಲ್ಪಸಂಖ್ಯಾತರು ಮಹಿಳೆಯರು; ಮೀಸಲಾತಿ ಅಗತ್ಯ: ಸುಪ್ರೀಂ ಕೋರ್ಟ್

ನವದೆಹಲಿ: ಲೋಕಸಭೆ, ರಾಜ್ಯ ವಿಧಾನಸಭೆಗಳು ಹಾಗೂ ದೆಹಲಿ ವಿಧಾನಸಭೆಯಲ್ಲಿ ಮೂರನೇ ಒಂದು ಭಾಗದಷ್ಟು ಸ್ಥಾನಗಳನ್ನು ಮಹಿಳೆಯರಿಗೆ ಮೀಸಲಿಡುವುದನ್ನು ಕಡ್ಡಾಯಗೊಳಿಸುವ ಮಹಿಳಾ ಮೀಸಲಾತಿ ಕಾಯಿದೆ ಜಾರಿಗೆ ತರುವಂತೆ ಕೋರಿ ಸಲ್ಲಿಸಲಾದ ಸಾರ್ವಜನಿಕ ಹಿತಾಸಕ್ತಿ ಅರ್ಜಿಗೆ (ಪಿಐಎಲ್) ಸಂಬಂಧಿಸಿದಂತೆ ಕೇಂದ್ರ ಸರ್ಕಾರದ ಪ್ರತಿಕ್ರಿಯೆಯನ್ನು ನವೆಂಬರ್‌ 10ರಂದು ಸುಪ್ರೀಂ ಕೋರ್ಟ್ ಕೇಳಿದೆ.

ಮೀಸಲಾತಿ ಕುರಿತಂತೆ ನ್ಯಾಯಮೂರ್ತಿಗಳಾದ ಬಿ ವಿ ನಾಗರತ್ನ ಮತ್ತು ಆರ್‌ ಮಹಾದೇವನ್‌ ಅವರಿದ್ದ ಪೀಠ ಪ್ರಮುಖ ವಿಚಾರಗಳನ್ನು ಪ್ರಸ್ತಾಪಿಸಿತು. ಎಲ್ಲಾ ನಾಗರಿಕರು ರಾಜಕೀಯ ಮತ್ತು ಸಾಮಾಜಿಕ ಸಮಾನತೆಗೆ ಅರ್ಹರು ಎಂದು ಸಂವಿಧಾನದ ಪೀಠಿಕೆ ಹೇಳುತ್ತದೆ. ದೇಶದ ಅತಿದೊಡ್ಡ ಅಲ್ಪಸಂಖ್ಯಾತರು ಮಹಿಳೆಯರು. ಮಹಿಳೆಯರ ಸಂಖ್ಯೆ ಶೇ 48ರಷ್ಟಿದೆ. ಮಹಿಳೆಯರಿಗೆ ರಾಜಕೀಯ ಸಮಾನತೆ ದೊರಕಿಸಿಕೊಡಲು ಈ ಮೀಸಲಾತಿ ಅಗತ್ಯವಿದೆ ಎಂದು ನ್ಯಾ. ನಾಗರತ್ನ ಮೌಖಿಕವಾಗಿ ತಿಳಿಸಿದರು.

ಹೊಸದಾಗಿ ಕ್ಷೇತ್ರ ಪುನರ್ವಿಂಗಡಣೆಗಾಗಿ ಕಾಯದೆ ಮಹಿಳಾ ಮೀಸಲಾತಿ ಮಸೂದೆ 2024ನ್ನು ಜಾರಿಗೆ ತರುವಂತೆ ಕೋರಿ ಕಾಂಗ್ರೆಸ್ ನಾಯಕಿ ಡಾ. ಜಯಾ ಠಾಕೂರ್ ಅರ್ಜಿ ಸಲ್ಲಿಸಿದ್ದರು.

ಇದನ್ನೂ ಓದಿ: ಎಸ್‌ಐಆರ್ ವಿರುದ್ಧ ಸುಪ್ರೀಂ ಕೋರ್ಟ್ ಮೊರೆ ಹೋದ ಪಶ್ಚಿಮ ಬಂಗಾಳದ ಕಾಂಗ್ರೆಸ್ ಪಕ್ಷ

ಜಯಾ ಅವರ ಪರ ವಾದ ಮಂಡಿಸಿದ ಹಿರಿಯ ವಕೀಲೆ ಶೋಭಾ ಗುಪ್ತಾ ಅವರು ಬ್ರಿಟಿಷ್ ವಸಾಹತುಶಾಹಿ ಆಳ್ವಿಕೆಯಿಂದ ಭಾರತ ಸ್ವಾತಂತ್ರ್ಯ ಪಡೆದು 75 ವರ್ಷಗಳ ನಂತರವೂ ಮಹಿಳೆಯರು ರಾಜಕೀಯ ಪ್ರಾತಿನಿಧ್ಯ ಕೋರಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಬೇಕಾಗಿರುವುದು ದುರದೃಷ್ಟಕರ. ಒಟ್ಟು ಸ್ಥಾನಗಳ ಕೇವಲ 1/3 ರಷ್ಟು ಮೀಸಲಾತಿ ಸಾಕಿದ್ದರೂ ಕೆಲವು ದತ್ತಾಂಶಗಳು ಅಗತ್ಯ ಜನಗಣತಿ ಮಾಡಬೇಕಿದೆ ಎಂದು ಸರ್ಕಾರ ಹೇಳುತ್ತಿದೆ ಎಂದರು.

ಇಂತಹ ನೀತಿ ನಿರ್ಧಾರಕ ವಿಚಾರಗಳಲ್ಲಿ ಮಧ್ಯಪ್ರವೇಶಿಸುವುದಕ್ಕೆ ನ್ಯಾಯಾಲಯಕ್ಕೆ ಕೆಲ ಮಿತಿಗಳಿವೆ ಎಂದ ಸುಪ್ರೀಂ ಕೋರ್ಟ್‌ ಈ ಸಂಬಂಧ ಕೇಂದ್ರದ ಪ್ರತಿಕ್ರಿಯೆ ಕೇಳಿತು.

ಮಹಿಳಾ ಮೀಸಲಾತಿ ಮಸೂದೆಯನ್ನು ಲೋಕಸಭೆ ಸೆಪ್ಟೆಂಬರ್ 20, 2023ರಂದು ಮತ್ತು ರಾಜ್ಯಸಭೆ ಅದೇ ವರ್ಷ ಸೆಪ್ಟೆಂಬರ್ 21ರಂದು ಅಂಗೀಕರಿಸಿತ್ತು. ನಂತರ ಸೆಪ್ಟೆಂಬರ್ 28, 2023ರಂದು ರಾಷ್ಟ್ರಪತಿಗಳ ಅಂಕಿತ ದೊರೆತಿತ್ತು.

ಈ ಮಸೂದೆಯು ಭಾರತದ ಸಂವಿಧಾನಕ್ಕೆ 334ಎ ವಿಧಿಯನ್ನು ಸೇರಿಸಿತ್ತು. ಈ ವಿಧಿಯ ಪ್ರಕಾರ ಮುಂದಿನ ಜನಗಣತಿಯ ಮಾಹಿತಿ ಆಧರಿಸಿ ಕ್ಷೇತ್ರ ಮರುವಿಂಗಡಣೆ ಮಾಡಿ ಬಳಿಕ ಮೀಸಲಾತಿ ಜಾರಿಗೆ ತರುವಂತೆ ಕೋರಿತ್ತು.

ಆದರೆ 334 ಎ ವಿಧಿಯಿಂದ “after an exercise of delimitation is undertaken for this purpose…” (ʼಮಹಿಳಾ ಮೀಸಲಾತಿ ಉದ್ದೇಶಕ್ಕಾಗಿ ಕ್ಷೇತ್ರ ಪುನರ್‌ವಿಂಗಡಣೆ ಮಾಡಿದ ನಂತರ) ಎಂಬ ಪದಗಳನ್ನು ಕೈಬಿಡುವಂತೆ ಜಯಾ ಅವರ ಅರ್ಜಿ ಕೋರಿತ್ತು. ಹೊಸದಾಗಿ ಕ್ಷೇತ್ರ ಪುನರ್‌ವಿಂಗಡಣೆಗಾಗಿ ಕಾಯದೆ ಮೀಸಲಾತಿ ಜಾರಿಗೆ ತರಬೇಕು ಎಂದು ಮನವಿ ಮಾಡಲಾಗಿತ್ತು.

2024ರ ಸಾರ್ವತ್ರಿಕ ಚುನಾವಣೆಗೂ ಮುನ್ನ ಸಂಸತ್ತಿನಲ್ಲಿ ಮಹಿಳಾ ಮೀಸಲಾತಿ ಜಾರಿಗೆ ತರಬೇಕೆಂಬ ಕೋರಿಕೆಯೊಂದಿಗೆ ಈ ಅರ್ಜಿಯನ್ನು 2023 ರಲ್ಲಿಯೇ ಸಲ್ಲಿಸಲಾಗಿತ್ತು. ಆದರೆ, 2025 ರಲ್ಲಿ ಅದನ್ನು ಮತ್ತೆ ಸಲ್ಲಿಸಲಾಗಿದ್ದು ಇಂದು ಮೊದಲ ಬಾರಿಗೆ ಮುಕ್ತ ನ್ಯಾಯಾಲಯದಲ್ಲಿ ವಿಚಾರಣೆ ನಡೆಯಿತು.

ಇದನ್ನೂ ನೋಡಿ: ಕಾರ್ಮಿಕರ ಮಕ್ಕಳ ʼಶಿಕ್ಷಾದೀಪʼ ಸಿoಘ್ವಿ ಚಾರಿಟೇಬಲ್ ಟ್ರಸ್ಟ್ Janashakthi Media

Donate Janashakthi Media

Leave a Reply

Your email address will not be published. Required fields are marked *