ಶಿಮ್ಲಾ: ಮಂಡಿ ಜಿಲ್ಲೆಯ ಕೋಲ್ ಅಣೆಕಟ್ಟು ಜಲವಿದ್ಯುತ್ ಯೋಜನಾಸ್ಥಳದಲ್ಲಿ ಭಾನುವಾರ ಸಂಜೆ ಸಿಲುಕಿದ್ದ ಹತ್ತು ಜನರನ್ನು ಸೋಮವಾರ ಬೆಳಗಿನ ಜಾವ 3ರ ಗಂಟೆಗೆ ರಕ್ಷಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಹಠಾತ್ ನೀರಿನ ಮಟ್ಟ ಹೆಚ್ಚಾಗಿದ್ದ ಪರಿಣಾಮ ಅಧಿಕಾರಿಗಳಿದ್ದ ದೋಣಿ ಅಣೆಕಟ್ಟಿನಲ್ಲಿ ಸಿಲುಕಿತ್ತು.ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (ಎನ್‌ಡಿಆರೆಎಫ್) ಮತ್ತು ಸ್ಥಳೀಯ ಆಡಳಿತ ತಂಡಗಳು ಕಾರ್ಯಾಚರಣೆ ನಡೆಸಿ ಅವರನ್ನು ರಕ್ಷಿಸಿವೆ ಎಂದು ಮಂಡಿಯ ಉಪ ಆಯುಕ್ತ ಅರಿಂದಮ್ ಬೌಧರಿ ಹೇಳಿದ್ದಾರೆ.
ಇದನ್ನೂ ಓದಿ:ಹಿಮಾಚಲ ಪ್ರದೇಶದಲ್ಲಿ ಭಾರಿ ಮಳೆ; ಮೃತರ ಸಂಖ್ಯೆ 74ಕ್ಕೆ ಏರಿಕೆ
ಹಿಮಾಚಲ ಪ್ರದೇಶದಾದ್ಯಂತ ಕಳೆದ ಕೆಲವು ದಿನಗಳಿಂದ ನಿರಂತರವಾಗಿ ಮಳೆ ಸುರಿಯುತ್ತಿದ್ದು ಮಳೆಯಿಂದಾಗಿ ಅವಘಡಗಳು ಸಮಸ್ಯೆಗಳು ಸಂಭವಿಸುತ್ತಿವೆ.
ಭಾರತೀಯ ಹವಾಮಾನ ಇಲಾಖೆ( IMD) ಸೋಮವಾರವೂ ಮಳೆ ಮುಂದುವರೆಯುವ ಸಾಧ್ಯತೆ ಇರುವ ಕಾರಣ ಯೆಲ್ಲೋ ಅಲರ್ಟ್ ಘೋಷಣೆ ಮಾಡಿದೆ
ಅಲ್ಲದೆ ಆಗಸ್ಟ್ 22ರಿಂದ ಆಗಸ್ಟ್24 ರವರೆಗೆ ಆರೆಂಜ್ ಆಲರ್ಟ್ ಘೋಷಣೆ ಮಾಡಿದೆ. ಜತೆಗೆ ಚಂಬಾ ಮತ್ತು ಮಂಡಿ ಜಿಲ್ಲೆಗಳ ಜಲಾನಯನ ಪ್ರದೇಶಗಳಲ್ಲಿ ಹಠಾತ್ ಪ್ರವಾಹ ಉಂಟಾಗುವ ಅಪಾಯದ ಬಗ್ಗೆ ಭಾರತೀಯ ಹವಾಮಾನ ಇಲಾಖೆ ಇಲಾಖೆ ಎಚ್ಚರಿಕೆ ನೀಡಿದೆ.