ಬೆಂಗಳೂರು: ಇಂದು ಬೆಳಗ್ಗೆ 11 ಗಂಟೆಗೆ ಫಕೀರ್ ಕಾಲೋನಿಯ ನಿವಾಸಿಯಾದ ಖಾದರ್ ಬಿ. ಮತ್ತು NFIW ವತಿಯಿಂದ ಜ್ಯೋತಿ ಅವರು ಧ್ವಜಾರೋಹಣ ನೆರವೇರಿಸಿದರು. ರಾಷ್ಟ್ರಗೀತೆಯನ್ನು ಹಾಡಲಾಯಿತು ಹಾಗೂ ಸಮಾರಂಭದಲ್ಲಿ ಹಾಜರಿದ್ದ ಎಲ್ಲರೂ ಸಂವಿಧಾನದ ಪೀಠಿಕೆಯನ್ನು ಓದಿದರು. ಕಾರ್ಯಕ್ರಮದಲ್ಲಿ ಐದು ದೇಶಭಕ್ತಿ ಗೀತೆಗಳ ಗಾಯನ ಮತ್ತು ಭಾಷಣಗಳು ನಡೆಯಿತು.
ಫಕೀರ್ ಕಾಲೋನಿ, ಕೋಗಿಲು ಲೇಔಟ್‌ನಲ್ಲಿ ಬಡವರ ಗಣರಾಜ್ಯೋತ್ಸವವನ್ನು ಅತ್ಯಂತ ಅರ್ಥಪೂರ್ಣವಾಗಿ ಆಚರಿಸಲಾಯಿತು. ದುಡಿಯುವ ಜನರ ವೇದಿಕೆ, AITUC, CITU, ಭಾರತ ಪ್ರಜಾಸತ್ತಾತ್ಮಕ ಯುವಜನ ಫೆಡರೇಶನ್ (DYFI), ಗಮನ ಮಹಿಳಾ ಸಮೂಹ, ಜನವಾದಿ ಮಹಿಳಾ ಸಂಘಟನೆ, ಕರ್ನಾಟಕ ಜನಶಕ್ತಿ, ಲಿಂಗತ್ವ ಮತ್ತು ಲೈಂಗಿಕ ಬಹುತ್ವಕ್ಕಾಗಿ ಚಳುವಳಿ (MGSP), NFIW, ಭಾರತ ವಿದ್ಯಾರ್ಥಿ ಫೆಡರೇಷನ್ (SFI), ಸ್ಲಂ ಜನರ ಸಂಘಟನೆ, ಸ್ಲಂ ಮಹಿಳಾ ಸಂಘಟನೆ, ಕರ್ನಾಟಕ ಸ್ಟೇಟ್ ಗಾರ್ಮೆಂಟ್ಸ್ & ಟೆಕ್ಸ್ಟೈಲ್ ವರ್ಕರ್ಸ್ ಯೂನಿಯನ್, ಸ್ಲಂ ಜಗತ್ತು ಮತ್ತಿತರ ಪ್ರಗತಿಪರ ಸಂಘಟನೆಗಳು ಹಾಗೂ ಹೋರಾಟಗಾರರ ಸಹಯೋಗದೊಂದಿಗೆ ಕಾರ್ಯಕ್ರಮವನ್ನು ಆಯೋಜನೆ ಮಾಡಲಾಯಿತು.
ಇದನ್ನೂ ಓದಿ : ಬೆಂಗಳೂರು | ಮನರೇಗಾ ಉಳಿಸಲು ರಾಜಭವನ ಚಲೋ: ಡಿಸಿಎಂ ಡಿ.ಕೆ. ಶಿವಕುಮಾರ್
ಎ ಜ್ಯೋತಿ : ವಿಧಾನಸೌಧದಲ್ಲಿ ಗಣರಾಜ್ಯೋತ್ಸವ ಆಚರಣೆ ಮಾಡುತ್ತದೆ, ಆದರೆ ಅಲ್ಲಿ ಬಡವರನ್ನು ಒಳಗೆ ಬಿಡುವುದಿಲ್ಲ. ನಾವು ಇಲ್ಲಿ ಆಚರಿಸುತ್ತಿರುವುದು ಬಡವರ ಗಣರಾಜ್ಯೋತ್ಸವ. ಇದು ನಮ್ಮ ಹಕ್ಕು. ನಮ್ಮ ಬೇಡಿಕೆ ಒಂದೇ – ನಮಗೆ ವಸತಿ ಸೌಲಭ್ಯ ಒದಗಿಸಬೇಕು” ಎಂದು ಹೇಳಿದರು.
ಹನುಮಂತರಾವ್ ಹವಾಲ್ದಾರ್ : ಅವರು ಮಾತನಾಡಿ , “ಒಂದು ರೂಪಾಯಿಗೆ ಒಂದು ಎಕರೆ ಜಮೀನನ್ನು ಅದಾನಿಗೆ ನೀಡುತ್ತಿರುವ ಸರ್ಕಾರ, ಇಲ್ಲಿ ಹುಟ್ಟಿ ಬೆಳೆದ ನಮಗೆ ಒಂದು ಚಿಕ್ಕ ಜಾಗವನ್ನೂ ನೀಡುತ್ತಿಲ್ಲ” ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸ್ಲಂ ಮಹಿಳಾ ಸಂಘಟನೆಯ ಹಸೀಬಾ : “ನಾವು ಯಾವಾಗಲೂ ನಿಮ್ಮ ಜೊತೆ ಇದ್ದೇವೆ. ನೀವು ಇದೇ ರೀತಿ ಒಗ್ಗಟ್ಟಾಗಿ ಇರಬೇಕು. ನಿಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸಿ, ಉತ್ತಮ ಶಿಕ್ಷಣ ನೀಡಬೇಕು. ಯಾವ ಪರಿಸ್ಥಿತಿ ಬಂದರೂ ಒಗ್ಗಟ್ಟಿನಿಂದ ನಮ್ಮ ಹಕ್ಕನ್ನು ನಾವು ಪಡೆಯಬೇಕು” ಎಂದು ಕರೆ ನೀಡಿದರು.
ನಿಶಾ ಗೂಳೂರು : ಅವರು ದುಡಿಯುವ ಜನರ ವೇದಿಕೆಯ ಮಾತನಾಡಿ, “ಬಾಬಾಸಾಹೇಬ್ ಡಾ. ಬಿ.ಆರ್. ಅಂಬೇಡ್ಕರ್ ಅವರು ಸಂವಿಧಾನದಲ್ಲಿ ಎಲ್ಲರಿಗೂ ಸಮಪಾಲು ಹಾಗೂ ಸಮಬಾಳು ದೊರೆಯಬೇಕು ಎಂದು ಬರೆದಿದ್ದಾರೆ. ಆದರೆ ಇಂದು ಸಂವಿಧಾನವನ್ನು ಹಾಳು ಮಾಡುವವರು ನಿರಂತರವಾಗಿ ಅದನ್ನು ಹಾಳು ಮಾಡುತ್ತಲೇ ಇದ್ದಾರೆ. ಸಂವಿಧಾನ ಜಾರಿಯಾಗಿ 77 ವರ್ಷಗಳು ಕಳೆದರೂ ಸಮುದಾಯದ ಜನರಿಗೆ ಸಂವಿಧಾನದ ಆಶಯಗಳು ತಲುಪಿಲ್ಲ” ಎಂದು ವಿಷಾದ ವ್ಯಕ್ತಪಡಿಸಿದರು.
ಸ್ಲಂ ಜನರ ಸಂಘಟನೆಯ ರಾಜೇಶ್ “ಸರ್ಕಾರದ ಹಂತದಲ್ಲಿ ಅರ್ಜಿಗಳು ಪ್ರಕ್ರಿಯೆಯಲ್ಲಿವೆ. ಶೀಘ್ರದಲ್ಲೇ ಎಲ್ಲರಿಗೂ ವಸತಿ ಸೌಲಭ್ಯ ದೊರಕಲೆಂದು ನಾನು ಆಶಿಸುತ್ತೇನೆ” ಎಂದರು.
ಬಸವರಾಜ ಗುಳೆದಾಳ : “ಸಂವಿಧಾನದಲ್ಲಿ ‘ಪ್ರಜೆಗಳಿಂದ, ಪ್ರಜೆಗಳಿಗಾಗಿ, ಪ್ರಜೆಗಳಿಗೋಸ್ಕರ’ ಎಂದು ಹೇಳಲಾಗಿದೆ. ಆದರೆ ಇಂದು ಅದು ‘ಪ್ರಭುಗಳಿಂದ, ಪ್ರಭುಗಳಿಗಾಗಿ, ಪ್ರಭುಗಳಿಗೋಸ್ಕರ’ ಎನ್ನುವಂತಾಗಿದೆ. ನಮ್ಮ ಸಂವಿಧಾನ ಎಲ್ಲ ಜನರಿಗೋಸ್ಕರ ಇರುವುದಾದರೂ, ಆಳುವವರು ಅದನ್ನು ತಮ್ಮದೇ ಎಂದು ಭಾವಿಸುತ್ತಿದ್ದಾರೆ. ಸಮಾಜದಲ್ಲಿ ಜಾತಿ ಹಾಗೂ ಧರ್ಮದ ಹೆಸರಿನಲ್ಲಿ ಬೇಧಭಾವ ಹೆಚ್ಚುತ್ತಿದೆ” ಎಂದು ಆತಂಕ ವ್ಯಕ್ತಪಡಿಸಿದರು.
ಇದನ್ನೂ ನೋಡಿ : ಉತ್ತರ ಪ್ರದೇಶದ ಬುಲ್ಡೋಜರ್ ನೀತಿ ಕರ್ನಾಟಕಕ್ಕೂ ಬೀಸಿತೆ!? Janashakthi Media
