ಸಂತಾನೋತ್ಪತ್ತಿಗೂ ಧರ್ಮಕ್ಕೂ ಸಂಬಂಧವಿಲ್ಲ – ಶಿವಸುಂದರ್

ಬೆಂಗಳೂರು: ಮುಸ್ಲಿಂರ ಜನಸಂಖ್ಯೆಯ ವೃದ್ಧಿದರ ಹಿಂದುಗಳಿಗಿಂತ ಹೆಚ್ಚು ಎನ್ನುವ ವಾದಗಳಿಗೆ ಯಾವುದೇ ಗಣಿತಾಧಾರ ಇಲ್ಲ. 2100ರ ನಂತರ ಜಾಗತಿಕ ಜನಸಂಖ್ಯೆ ಕುಸಿಯಲಿದೆ; ಭಾರತದಲ್ಲೂ 2070ರ ನಂತರ ಜನಸಂಖ್ಯೆ ಇಳಿಕೆಯಾಗುವ ನಿರೀಕ್ಷೆಯಿದೆ. ಇಂತಹ ಸಂದರ್ಭದಲ್ಲಿ “ಮುಸ್ಲಿಂರ ಜನಸಂಖ್ಯೆ ಹಿಂದೂಗಳನ್ನು ಮೀರುತ್ತದೆ” ಎಂಬ ಚರ್ಚೆಗಳು ಆರ್‌ಎಸ್‌ಎಸ್ ಅಜೆಂಡಾ ಜಾರಿಗಾಗಿ ಸೃಷ್ಟಿಸಲ್ಪಟ್ಟಿವೆ ಎಂದು ಚಿಂತಕ ಶಿವಸುಂದರ ವಿಷಾದ ವ್ಯಕ್ತಪಡಿಸಿದರು. ಧರ್ಮ

ನಗರದ ಗಾಂಧಿ ಭವನದಲ್ಲಿ ಎಂ.ಜಿ. ಹೆಗಡೆಯವರ ‘ಭಾರತ ಮುಸ್ಲಿಂ ರಾಷ್ಟ್ರವಾಗುವುದೇ?’ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದ ಅವರು, “ಸಂತಾನೋತ್ಪತ್ತಿಗೂ ಧರ್ಮಕ್ಕೂ ಯಾವುದೇ ಸಂಬಂಧವಿಲ್ಲ. ಹಿಂದೂ–ಮುಸ್ಲಿಂ ಎರಡೂ ಸಮುದಾಯಗಳಲ್ಲೂ ಜನನದರ ನಿರಂತರವಾಗಿ ಕುಸಿಯುತ್ತಿದೆ. ಅಕ್ರಮ ವಲಸಿಗರ ಸಂಖ್ಯೆ ಹೆಚ್ಚಾಗಿದೆ ಎಂದು ಬಿಜೆಪಿ ಹೇಳುತ್ತಿದೆಯಾದರೂ, ದಾಖಲೆ–ಪುರಾವೆ ಕೇಳಿದರೆ ಮೌನವಾಗುತ್ತಾರೆ. ಮಾಹಿತಿ ಹಕ್ಕಿನಲ್ಲಿ ಕೇಳಿದರೂ ಸ್ಪಷ್ಟ ಉತ್ತರ ನೀಡುವುದಿಲ್ಲ,” ಎಂದು ಆರೋಪಿಸಿದರು. ಧರ್ಮ

“ಗಡ್ಡ ಬಿಟ್ಟವರು, ಟೋಪಿ ಹಾಕಿದವರು ನಮ್ಮ ವಿರೋಧಿಗಳು ಎಂಬ ರೀತಿಯ ಭಾಷಣಗಳಿಂದ ದೇಶದಲ್ಲಿ ವಿಷಬೀಜ ಬಿತ್ತಲಾಗುತ್ತಿದೆ. ಇತಿಹಾಸದಲ್ಲಿನ ಅನೇಕ ನರಮೇಧಗಳು ಇದೇ ರೀತಿಯ ದ್ವೇಷ ಪ್ರಚಾರದಿಂದ ಆರಂಭವಾಗಿವೆ. ಕ್ಷೇತ್ರಗಳನ್ನು ಆಯ್ಕೆ ಮಾಡಿಕೊಂಡು ದ್ವೇಷ ರಾಜಕಾರಣ ನಡೆಯುತ್ತಿದೆ. ತಾಹೀರನ ಕೊಲೆ ಅದರ ತಾಜಾ ಉದಾಹರಣೆ,” ಎಂದು ಅವರು ಹೇಳಿದರು.

ಇದನ್ನೂ ಓದಿ: 5 ಲಕ್ಷ ಲಂಚ ಪಡೆಯುತ್ತಿದ್ದ ಬಿಜೆಪಿ ಶಾಸಕ ಲೋಕಾಯುಕ್ತ ಬಲೆಗೆ

ಕೋಮುವಾದದ ಅಪಾಯಗಳನ್ನು ವಿರೋಧಿಸಬೇಕಾದ ಕಾಂಗ್ರೆಸ್ ಪಕ್ಷ ಮತಭೀತಿಯಿಂದ ಮೃದು ಧೋರಣೆ ಅನುಸರಿಸುತ್ತಿದೆ ಎಂದು ಶಿವಸುಂದರ ಟೀಕಿಸಿದರು. “ಎಡಪಕ್ಷಗಳು ಹಾಗೂ ಜನಚಳುವಳಿಗಳು ಮಾತ್ರ ಕೋಮುವಾದದ ವಿರುದ್ಧ ಸ್ಪಷ್ಟ ಹೋರಾಟ ನಡೆಸುತ್ತಿವೆ; ಜನಜಾಗೃತಿ ಮೂಡಿಸುತ್ತಿವೆ,” ಎಂದರು.

ಹಿರಿಯ ಪತ್ರಕರ್ತ ಬಿ.ಎಂ. ಹನೀಫ್ ಮಾತನಾಡಿ, “ಭಾರತ ಮುಸ್ಲಿಂ ರಾಷ್ಟ್ರವಾಗುವುದು ನನಗೆ ಬೇಕಾಗಿಲ್ಲ. ಭಾರತ ಸೌಹಾರ್ದ ರಾಷ್ಟ್ರವಾಗಿರಲಿ; ಭಾರತ ದೇಶ ಭಾರತವಾಗಿಯೇ ಉಳಿಯಲಿ,” ಎಂದು ಅಭಿಪ್ರಾಯಪಟ್ಟರು.

“ಒಂದು ಮಗು ಜನಿಸಬೇಕಾದರೆ ಒಂಬತ್ತು ತಿಂಗಳು ಬೇಕು. ಮೋಹನ್ ಭಾಗವತ್ ಅವರು ಯಾವ ಅಂಕಗಣಿತದ ಲೆಕ್ಕಾಚಾರದಿಂದ ಹೇಳಿಕೆ ನೀಡಿದ್ದಾರೆ ಎಂಬುದು ತಿಳಿದಿಲ್ಲ. ಅವಿವಾಹಿತರಾಗಿರುವ ಅವರಿಗೆ ಸಂತಾನೋತ್ಪತ್ತಿ ವಿಚಾರದಲ್ಲಿ ಏಕೆ ಇಷ್ಟೊಂದು ಆಸಕ್ತಿ ಎಂಬುದು ಪ್ರಶ್ನಾರ್ಹ. ಇಂತಹ ಹೇಳಿಕೆಗಳನ್ನು ನಂಬಿ ಮನಬಂದಂತೆ ಮಾತನಾಡುವವರು ಚಿಂತನೆ ಮಾಡಬೇಕು,” ಎಂದು ಹನೀಫ್ ಹೇಳಿದರು.

“ಕೋಮುವಾದ ಹಿಂದೂ–ಮುಸ್ಲಿಂ ಎರಡೂ ಸಮುದಾಯಗಳಲ್ಲಿ ಇದೆ. ಹಿಂದೂಗಳು ಕೋಮುಗಲಭೆಯಲ್ಲಿ ತೊಡಗಿದರೆ ದೇಶವೇ ನಾಶವಾಗುತ್ತದೆ; ಮುಸ್ಲಿಂರು ತೊಡಗಿದರೆ ಮುಸ್ಲಿಂ ಸಮುದಾಯವೇ ಹಾನಿಗೊಳಗಾಗುತ್ತದೆ. ಸೌಹಾರ್ದತೆ ಮತ್ತು ಸಂವಿಧಾನವೇ ಭಾರತದ ಶಕ್ತಿ. ಅದರಡಿ ಎಲ್ಲರೂ ಸಮಾನವಾಗಿ, ಸಂತೋಷದಿಂದ ಬದುಕಬೇಕು,” ಎಂದು ಅವರು ಕರೆ ನೀಡಿದರು.

ಮಾಜಿ ಸಂಸದ ವಿ.ಎಸ್ ಉಗ್ರಪ್ಪ ಮಾತನಾಡಿ, ರಾಜಕೀಯ ಬೇಳೆಗಳನ್ನು ಬೇಯಿಸಿಕೊಳ್ಳಲು ರಾಜಕಾರಣಿಗಳು, ರಾಜಕೀಯ ಪಕ್ಷಗಳು ಧರ್ಮ, ಜಾತಿಗಳನ್ನು ಬಳಸಿಕೊಳ್ಳುತ್ತಿದೆ ಎಂದು ಆರೋಪಿಸಿದರು.

ರಾಮ, ಕೃಷ್ಣನ್ನು ಹೈಜಾಕ್ ಮಾಡಿದ ಆರ್ ಎಸ್ ಎಸ್ ನವರು ಆ ಪಾತ್ರಗಳನ್ನು ಸೃಷ್ಟಿಸಿದ ವಾಲ್ಮೀಕಿ ಹಾಗೂ ವ್ಯಾಸರನ್ನು ಹೈಜಾಕ್ ಮಾಡಲಿಲ್ಲ. ಬಿಜೆಪಿ ಹಾಗೂ ಆರ್ ಎಸ್ ಎಸ್ ನವರು ರಾಜಕೀಯ ಲಾಭಕ್ಕಾಗಿ ಏನೆಲ್ಲಾ ಮಾಡುತ್ತಾರೆ ಎಂಬುದನ್ನು ಇದರಿಂದಲೇ ಅರ್ಥಮಾಡಿಕೊಳ್ಳಬೇಕು ಎಂದರು.

ರಾಮನ ಬಗ್ಗೆ ಜಪ ಮಾಡುವ ಇವರುಗಳು ರಾಮನ ಯಾವ ಆದರ್ಶಗಳನ್ನು ಪಾಲಿಸುತ್ತಿಲ್ಲ. ಸಾಲ ಇಲ್ಲದ ದೇಶ ಅಭಿವೃದ್ಧಿಯಾಗುತ್ತದೆ ಎಂದು ರಾಮ ಸಾವಿರ ವರ್ಷಗಳ ಹಿಂದೇಯೇ ಹೇಳಿರುವ ಉಲ್ಲೇಖ ರಾಮಾಯಣದಲ್ಲಿ ಬರುತ್ತದೆ. ಈಗ ಭಾರತದ ಸಾಲ ನೂರು ಪಟ್ಟು ಹೆಚ್ಚಳವಾಗಿದೆ ಎಂದು ವ್ಯಂಗ್ಯವಾಡಿದರು.

ಕಾರ್ಯಕ್ರಮದಲ್ಲಿ ಕ್ರಿಯಾ ಮಾಧ್ಯಮದ ನಿರ್ದೇಶಕಿ ಕೆ.ಎಸ್. ವಿಮಲಾ, ಲೇಖಕ ಎಂ.ಜಿ. ಹೆಗಡೆ, ಸಿನಿಮಾ ನಿರ್ದೇಶಕ ಸುಧಾಕರ ಬನ್ನಂಜೆ ಉಪಸ್ಥಿತರಿದ್ದರು.

ಇದನ್ನೂ ನೋಡಿ: ಪುಸ್ತಕ ಬಿಡುಗಡೆ | ʻ ಭಾರತ ಮುಸ್ಲಿಂ ರಾಷ್ಟ್ರವಾಗುವುದೇ?ʼ | ಕ್ರಿಯಾ ಮಾಧ್ಯಮ | ಎಂ.ಜಿ. ಹೆಗಡೆ

Donate Janashakthi Media

Leave a Reply

Your email address will not be published. Required fields are marked *