ಕೃಷಿ ಉತ್ಪಾದನೆ, ಕೃಷಿ ಭೂಮಿ ರಕ್ಷಣೆ ನಿರ್ಲಕ್ಷಕ್ಕೆ ಆಕ್ಷೇಪ
ಬೆಂಗಳೂರು: ಎಪಿಎಂಸಿ ತಿದ್ದುಪಡಿ ರದ್ದು, ಐದು ಗ್ಯಾರಂಟಿ ಯೋಜನೆಗಳ ಜಾರಿಗೆ ಒತ್ತು, ರಾಷ್ಟ್ರೀಯ ಶಿಕ್ಷಣ ನೀತಿ ರದ್ದು ಸ್ವಾಗತಾರ್ಹವಾಗಿವೆ, ಅದೇ ಸಂದರ್ಭದಲ್ಲಿ ರದ್ದು ಮಾಡುವುದಾಗಿ ಘೋಷಿಸಿದ್ದ ರೈತ ವಿರೋಧಿ ಭೂ ಸುಧಾರಣಾ ತಿದ್ದುಪಡಿ ಕಾಯ್ದೆ 2020, ಜಾನುವಾರು ಹತ್ಯೆ ನಿಷೇಧ ಕಾಯ್ದೆ 2020 ರ ಬಗ್ಗೆ ಮೌನ ವಹಿಸಿರುವುದಕ್ಕೆ ಕರ್ನಾಟಕ ಪ್ರಾಂತ ರೈತ ಸಂಘ ( ಕೆಪಿಆರ್‌ಎಸ್) ಬಲವಾದ ಅಕ್ಷೇಪವನ್ನು ವ್ಯಕ್ತಪಡಿಸಿದೆ.
ನವ ಉದಾರೀಕರಣ ಧೋರಣೆಗಳನ್ನೇ ಮುಂದುವರೆಸಿರುವ ರಾಜ್ಯ ಸರ್ಕಾರದ ಈ ಬಜೆಟ್, ಕೃಷಿ ಉತ್ಪಾದನೆ ಹಾಗೂ ಕೃಷಿ ಭೂಮಿ ರಕ್ಷಣೆಯನ್ನು ಸಂಪೂರ್ಣ ನಿರ್ಲಕ್ಷಿಸಿದೆ. ಸಾಲಭಾಧೆಗೆ ತುತ್ತಾಗಿರುವ ಹಾಗೂ ಕೃಷಿ ಉತ್ಪನ್ನಗಳ ಬೆಲೆ ಕುಸಿತದಿಂದ ಕಂಗೆಟ್ಟಿರುವ ರೈತ ಸಮುದಾಯಕ್ಕೆ ಯಾವುದೇ ಪರಿಹಾರ ಒದಗಿಸಿಲ್ಲ ಎಂದು ಟೀಕಿಸಿದೆ.
ಇದನ್ನೂ ಓದಿ:ರೈತರ ಭೂಮಿ ಕಿತ್ತು ರಿಯಲ್ ಎಸ್ಟೇಟ್ ದಂಧೆ!: ನೈಸ್ ಸಂಸ್ಥೆ ವಿರುದ್ಧ ಬೃಹತ್ ಪ್ರತಿಭಟನೆಗೆ ಸಜ್ಜು
ಕೃಷಿ ಉತ್ಪನ್ನಗಳ ಸಂಸ್ಕರಣೆ, ಮೌಲ್ಯವರ್ಧನೆಯಲ್ಲಿ ಖಾಸಗಿ ಸಹಭಾಗಿತ್ವವನ್ನು ಪ್ರೋತ್ಸಾಹಿಸುವ ಘೋಷಣೆ ಮಾಡಲಾಗಿದೆ. ಕರ್ನಾಟಕ ಭೂ ಕಂದಾಯ ಕಾಯ್ದೆ ಸೆಕ್ಷನ್ 95 ಕ್ಕೆ ತಿದ್ದುಪಡಿ ತಂದು ಸ್ವಯಂ ಘೋಷಣೆ ಮೂಲಕ ಕೃಷಿಯೇತರ ಉದ್ದೇಶಕ್ಕೆ ಭೂ ಪರಿವರ್ತನೆಗೆ ಅವಕಾಶ ಕಲ್ಪಿಸುವ ಘೋಷಣೆ ಮಾಡಲಾಗಿದೆ. ರಾಜಸ್ವ ಸಂಗ್ರಹದ ಗುರಿ ಮುಟ್ಟಲು ಗಣಿಗಾರಿಕೆಗೆ ಉತ್ತೇಜನದ ಪ್ರಸ್ತಾಪ ಮಾಡಲಾಗಿದೆ. ಯಾರೂ ಬೇಕಾದರೂ, ಎಷ್ಟು ಬೇಕಾದರೂ ಕೃಷಿ ಭೂಮಿ ಖರೀದಿ ಮಾಡಿಕೊಳ್ಳುವ ಭೂ ಸುಧಾರಣಾ ತಿದ್ದುಪಡಿ ಕಾಯ್ದೆ 2020 ಅನ್ನು ರದ್ದುಪಡಿಸದೇ ಕೃಷಿಯೇತರ ಭೂ ಪರಿವರ್ತನೆಗೆ ಅವಕಾಶ ನೀಡುವುದು ರೈತರ ಭೂಮಿ ಹಕ್ಕಿಗೆ ಗಂಭೀರ ಧಕ್ಕೆ ಉಂಟು ಮಾಡುತ್ತದೆ ಎಂದು ಅಭಿಪ್ರಾಯ ಪಟ್ಟಿದೆ.
ಮೋದಿ ನೇತೃತ್ವದ ಬಿಜೆಪಿ ಕೇಂದ್ರ ಸರ್ಕಾರದ ಒಕ್ಕೂಟ ವಿರೋಧಿ ನಡವಳಿಕೆ, ಕಾರ್ಪೊರೇಟ್ ಪರವಾದ ನೀತಿಗಳು ,ಕಲ್ಯಾಣ ಕಾರ್ಯಕ್ರಮ ವಿರೋಧಿ ಧೋರಣೆಗಳನ್ನು ಪ್ರತಿರೋಧಿಸಲು ಅಗತ್ಯವಾದ ಕೃಷಿ ಉತ್ಪಾದನಾ ವೆಚ್ಚ ಕಡಿಮೆ ಮಾಡುವುದು ಸೇರಿದಂತೆ ಕೃಷಿ ಬಿಕ್ಕಟ್ಟಿಗೆ ಪರಿಹಾರ, ಗ್ರಾಮೀಣ ನಿರುದ್ಯೋಗ ಕಡಿಮೆ ಮಾಡುವ ಕ್ರಮಗಳು, ಬೆಲೆ ಏರಿಕೆ ನಿಯಂತ್ರಣದ ಮಧ್ಯಪ್ರವೇಶಗಳು ಹಾಗೂ ಸಹಕಾರಿ ವ್ಯವಸ್ಥೆಯನ್ನು ಬಲಪಡಿಸುವ ನಿರ್ಧಾರಗಳು ಈ ಬಜೆಟ್ ನಲ್ಲಿ ಪ್ರಾಮುಖ್ಯತೆ ಪಡೆದಿಲ್ಲ. ಆದರೂ ಹಿಂದಿನ ಬಿಜೆಪಿ ರಾಜ್ಯ ಸರ್ಕಾರದ ಅದಕ್ಷ-ಕಳಪೆ ನಿರ್ವಹಣೆ, ಆರ್ಥಿಕ ಆಶಿಸ್ತು, ಕಾರ್ಪೊರೇಟ್ ಲೂಟಿಗೆ ಮುಕ್ತ ಅವಕಾಶ ಮುಂತಾದವುಗಳಿಗೆ ಹೋಲಿಸಿದರೆ, ಐದು ಗ್ಯಾರಂಟಿ ಯೋಜನೆಗಳ ಜಾರಿಗೆ ಪ್ರಯತ್ನ ನಡೆಸಿರುವುದು ಸ್ವಾಗತಾರ್ಹವಾಗಿದೆ ಎಂದು ಸಂಘಟನೆ ತಿಳಿಸಿದೆ.
ಇದನ್ನೂ ಓದಿ:ಜಾನುವಾರು ಹತ್ಯೆ ನಿಷೇದ ಸುಗ್ರೀವಾಜ್ಞೆ ಜಾರಿಗೊಳಿಸುವ ದುರ್ನಡೆಯನ್ನು ನಿಲ್ಲಿಸಿ ! – KPRS ಒತ್ತಾಯ
ರಾಷ್ಟ್ರೀಯ ಶಿಕ್ಷಣ ನೀತಿ (ಎನ್‌ಇಪಿ) ರದ್ದು, ಪರಿಶಿಷ್ಟ ಜಾತಿ/ಪಂಗಡ ಉಪಯೋಜನೆ ಅನುದಾನವನ್ನು ಅನ್ಯ ಬಳಕೆಗೆ ಅವಕಾಶ ನೀಡಿದ್ದ ಕಲಂ ರದ್ದು, ಇ ಕಾಮರ್ಸ್ ರಂಗದ ಉದ್ಯೋಗಿಗಳಿಗೆ ಉಚಿತ ವಿಮಾ ರಕ್ಷಣೆ, ಅ್ಯಸಿಡ್ ಸಂತ್ರಸ್ಥ ಮಹಿಳೆಯರ ಸಬಲೀಕರಣ ಮುಂತಾದ ಕ್ರಮಗಳು ಸ್ವಾಗತಾರ್ಹವಾಗಿವೆ. ಕನಿಷ್ಠ ಕೂಲಿಯನ್ನು ಅತ್ಯಂತ ತಳಮಟ್ಟದಲ್ಲಿ ಇಟ್ಟು, ಅಲ್ಪ ಪ್ರಮಾಣದ ನಗದು ವರ್ಗಾವಣೆ ಮೂಲಕ ನೆರವಾಗುವುದು , ಗುತ್ತಿಗೆ-ಹೊರಗುತ್ತಿಗೆ ಯಂತಹ ಉದ್ಯೋಗದ ಪರಿಸ್ಥಿತಿಯನ್ನು ಮತ್ತಷ್ಟು ವಿಸ್ತರಿಸಿ ಮುಂದುವರೆಸುವುದು ಯಾವುದೇ ರೀತಿಯಲ್ಲಿ ಪ್ರಗತಿ-ಅಭಿವೃದ್ದಿಯನ್ನು ಉಂಟು ಮಾಡುವುದಿಲ್ಲ ಎಂದು ವಿಶ್ಲೇಷಿಸಿದೆ.
ಅನ್ನಭಾಗ್ಯ ಯೋಜನೆಗೆ ಅಗತ್ಯ ಧಾನ್ಯ ನೀಡದೇ ಕೇಂದ್ರ ಸರ್ಕಾರ ಅಸಹಕಾರ ನೀಡುತ್ತಿದೆ.ಕರ್ನಾಟಕ ರಾಜ್ಯಕ್ಕೆ ಬೇಕಾದ ಆಹಾರ ಧಾನ್ಯ ವನ್ನು ಭಾರತ ಆಹಾರ ನಿಗಮ (ಎಫ್‌ಸಿಐ) ದ ಒಪನ್ ಮಾರ್ಕೆಟ್ ಸೇಲ್ಸ್ ಯೋಜನೆ ಮೂಲಕ ಪಡೆಯಲು ನಿರ್ಬಂಧ ಹೇರಿಕೆ ಮೂಲಕ ಕಿರುಕುಳ ನೀಡುತ್ತಿದೆ. ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆಯ ಪರಿಮಿತಿ ಆಚೆಗೂ ರಾಜ್ಯದಲ್ಲಿ ಸುಮಾರು 40 ಲಕ್ಷ ಬಿಪಿಎಲ್ ಕಾರ್ಡ್ ದಾರರು ಇದ್ದಾರೆ. ಈ ಹಿನ್ನಲೆಯಲ್ಲಿ ಆಹಾರ ಭದ್ರತೆ ಒದಗಿಸಲು ,ಆಹಾರ ಧಾನ್ಯಗಳ ಉತ್ಪಾದನೆಗೆ ಹೆಚ್ಚಿನ ಒತ್ತು ನೀಡುವ ತುರ್ತು ಇದ್ದರೂ ಈ ಬಜೆಟ್ ಯಾವುದೇ ಕ್ರಮ ವಹಿಸಿಲ್ಲ. ರಾಜ್ಯಾದ್ಯಂತ ಲಕ್ಷಾಂತರ ಸಂಖ್ಯೆಯಲ್ಲಿರುವ ಬಗರ್ ಹುಕಂ ಹಾಗೂ ಅರಣ್ಯ ಭೂಮಿ ಸಾಗುವಳಿದಾರರಿಗೆ ಭೂಮಿ ಹಕ್ಕು ನೀಡಿ ಕನಿಷ್ಠ ಬೆಂಬಲ ಬೆಲೆಯ ಖಾತರಿ ಖರೀದಿ ಮೂಲಕ ಆಹಾರ ಧಾನ್ಯ ಉತ್ಪಾದನೆಯನ್ನು ಪ್ರೊತ್ಸಾಹಿಸಬೇಕಾಗಿತ್ತು. ಅರಣ್ಯ ಹಕ್ಕು ಕಾಯ್ದೆ 2006 ಅನ್ನು ಪರಿಣಾಮಕಾರಿಯಾಗಿ ಜಾರಿ ಮಾಡಬೇಕಾಗಿತ್ತು.ಆದರೆ ಬೃಹತ್ ಕೈಗಾರಿಕಾ ಟೌನ್ ಶಿಪ್ ನಂತಹ ಪ್ರಸ್ತಾಪದ ಮೂಲಕ ಈ ಬಜೆಟ್ ಕೃಷಿ ಭೂಮಿ ಕಬಳಿಕೆಗೆ ಉತ್ತೇಜನ ನೀಡುವಂತೆದೆ ಎಂದು ಕರ್ನಾಟಕ ಪ್ರಾಂತ ರೈತ ಸಂಘದ (ಕೆಪಿಆರ್‌ಎಸ್) ರಾಜ್ಯಾಧ್ಯಕ್ಷ ಜಿಸಿ ಬಯ್ಯಾರೆಡ್ಡಿ, ಪ್ರಧಾನ ಕಾರ್ಯದರ್ಶಿ ಟಿ.ಯಶವಂತ ಪ್ರಕಟಣೆ ಮೂಲಕ ತಿಳಿಸಿದ್ದಾರೆ.