ಹಿರಿಯ ಪತ್ರಕರ್ತ ಎಂ.ಎಸ್.ಪ್ರಭಾಕರ(ಕಾಮರೂಪಿ) ನಿಧನ

ಕೋಲಾರ: ಹೆಸರಾಂತ ಪತ್ರಕರ್ತ ಹಾಗೂ ಲೇಖಕ, ಕಾಮರೂಪಿ ಕಾವ್ಯನಾಮದಿಂದ ಲೇಖನಗಳನ್ನು ಬರೆಯುತ್ತಿದ್ದ ಎಂ.ಎಸ್‌. ಪ್ರಭಾಕರ ಇಂದು(ಡಿಸೆಂಬರ್‌ 29) ಬೆಳಿಗ್ಗೆ 11.30ರ ಸುಮಾರಿಗೆ ನಿಧನರಾಗಿದ್ದಾರೆ. ಅವರಿಗೆ 87 ವರ್ಷ ವಯಸ್ಸಾಗಿತ್ತು.

ಕೋಲಾರ ತಾಲ್ಲೂಕು ಮಟ್ನಹಳ್ಳಿ ಗ್ರಾಮದ ಸೂರಪ್ಪ – ಸುಬ್ಬಮ್ಮ ದಂಪತಿಯ 11ನೇಯ ಮಗನಾಗಿ 1936ರಲ್ಲಿ  ಎಂ. ಎಸ್. ಪ್ರಭಾಕರ್ ಜನಿಸಿದರು. ಇವರು, ಕೋಲಾರದ ಕಟಾರಿಪಾಳ್ಯದಲ್ಲಿ ವಾಸವಾಗಿದ್ದರು. ಇವರು ತಮ್ಮ ಕಾಲೇಜು ವಿದ್ಯಾಭ್ಯಾಸವನ್ನು ಪೂರ್ಣಗೊಳಿಸಿದ್ದು, ಬೆಂಗಳೂರಿನ ಸೆಂಟ್ರಲ್ ಕಾಲೇಜಿನಲ್ಲಿ. ಇಂಗ್ಲೀಷಿನಲ್ಲಿ ಸ್ನಾತಕೋತ್ತರ ಪದವಿ ಪಡೆದ ನಂತರ ಅಧ್ಯಾಪಕರಾಗಿ ಇವರು ಸೇವೆ ಸಲ್ಲಿಸಿದ್ದರು.

ಇದನ್ನು ಓದಿ: ಕನ್ನಡದ ಪರವಾಗಿ ಧ್ವನಿ ಎತ್ತಿ- ನಾಯಕತ್ವ ನೀಡುವ ಅರ್ಹತೆಯನ್ನು ಕಸಾಪ ಕಳೆದುಕೊಂಡಿದೆ

ಧಾರವಾಡ, ಬೆಂಗಳೂರು ಮುಂತಾದ ಕಡೆಗಳಲ್ಲಿ ಅಧ್ಯಾಪಕರಾಗಿ ಸೇವೆ ಸಲ್ಲಿಸಿದ ಎಂ.ಎಸ್‌. ಪ್ರಭಾಕರ ನಂತರದ ದಿನಗಳಲ್ಲಿ ಅನಿವಾರ್ಯ ಕಾರಣಗಳಿಂದಾಗಿ ಪೂರ್ಣವಧಿ ಪತ್ರಕರ್ತರಾಗಿ ಸೇವೆ ಸಲ್ಲಿಸಲು ಪತ್ರಿಕಾರಂಗವನ್ನು ಪ್ರವೇಶ ಮಾಡಿದರು. ಪತ್ರಿಕಾರಂಗದಲ್ಲಿ ಅವರು, ತಮ್ಮದೇ ವಿಶಿಷ್ಟ ಬರವಣಿಗೆಯ ಮೂಲಕ ಛಾಪು ಮೂಡಿಸಿದ್ದರು.  ಅಧ್ಯಾಪನ ವೃತ್ತಿಯಿಂದ ಪತ್ರಿಕಾರಂಗ ಪ್ರವೇಶಿಸಿದರು. ಮೊದಲಿಗೆ ಅವರು ಮುಂಬೈಯಲ್ಲಿ ಇಕಾನಮಿಕ್ ಆಂಡ್ ಪೊಲಿಟಿಕಲ್ ವೀಕ್ಲಿ ಯಲ್ಲಿ ಕಾರ್ಯನಿರ್ವಹಿಸಿದರು.

ಇಕಾನಮಿಕ್ ಆಂಡ್ ಪೊಲಿಟಿಕಲ್ ವೀಕ್ಲಿಯಲ್ಲಿ ಏಳು ವರ್ಷಗಳ ಕಾಲ ವೃತ್ತಿಯನ್ನು ಕೈಗೊಂಡ ನಂತರ ಅವರು, 1983ರಲ್ಲಿ ದಿ ಹಿಂದೂ ಪತ್ರಿಕೆ ಸೇರಿ ಅಸ್ಸಾಂನ ವಿಶೇಷ ವರದಿಗಾರರಾಗಿ ಕಾರ್ಯನಿರ್ವಹಿಸಿದರು.  ಅಸ್ಸಾಂ ರಾಜಕಾರಣ, ಸಾಂಸ್ಕೃತಿಕ ಚಟುವಟಿಕೆ, ಮಾನವೀಯ ಸಂವೇದನೆ ಬಗ್ಗೆ ವರದಿ ಮಾಡುತ್ತಿದ್ದ ಅವರನ್ನು ದಿ ಹಿಂದೂ ದಕ್ಷಿಣ ಆಫ್ರಿಕಾಕ್ಕೆ ವರ್ಗ ಮಾಡಿತು. ಸುಮಾರು 10 ವರ್ಷ ಅವರು ಅಲ್ಲಿ ಕೆಲಸ ಮಾಡಿದ್ದರು. ಅಲ್ಲಿನ ಸ್ವಾತಂತ್ರ್ಯ ಹೋರಾಟಗಾರ ನೆಲ್ಸನ್ ಮಂಡೇಲಾ ಅವರ ಸಂದರ್ಶನ ನಡೆಸಿದ ಭಾರತದ ಮೊದಲ ಪತ್ರಕರ್ತ ಎಂಬ ಖ್ಯಾತಿ ಗಳಿಸಿದ್ದರು.

ಇದನ್ನು ಓದಿ: ದಲಿತ ಗೋಷ್ಠಿಗೆ ನಿರಾಕರಣೆ : ದಲಿತ ಸಂಘಟನೆಗಳಿಂದ ಮಹೇಶ್‌ ಜೋಷಿಗೆ ತರಾಟೆ

ಮಾತೃಭಾಷೆ ಕನ್ನಡದೊಂದಿಗೆ ತೆಲುಗು ಬಲ್ಲವರಾಗಿದ್ದ ಎಂ.ಎಸ್.ಪ್ರಭಾಕರ ಅವರು ಇಂಗ್ಲೀಷ್‌ ಪ್ರಾಧ್ಯಾಪಕರಾಗಿ, ನಂತರ ಇಂಗ್ಲೀಷ್‌ ಪತ್ರಿಕಾ ರಂಗದಲ್ಲಿ ಅವರು ಹಲವು ವರ್ಷಗಳ ಸೇವೆ ಸಲ್ಲಿಸಿದ್ದರೂ ಸಹ. ಸೃಜನಶೀಲ ಬರವಣಿಗೆಗೆ ಅವರು ಕನ್ನಡವನ್ನು ಆಯ್ದುಕೊಂಡರು.

ಪೂರ್ಣಕಾಲದ ಪತ್ರಿಕಾ ವೃತ್ತಿಯಿಂದ ಬಿಡುಗಡೆ ಹೊಂದಿದ ಎಂ.ಎಸ್.ಪ್ರಭಾಕರ ತಮ್ಮ ಕೊನೆಯ ದಿನಗಳನ್ನು ಕೋಲಾರ ಕಟಾರಿಪಾಳ್ಯದ ಸ್ವಗೃಹದಲ್ಲಿ ಕಳೆದರು. ಕನ್ನಡ ಸಾಹಿತ್ಯ ಲೋಕಕ್ಕೆ ಇವರ ವೃತ್ತಿ ಜೀವನದ ಅನುಭವ ಹಾಗೂ ಭಾವಗಳನ್ನ ಧಾರೆ ಎಳೆದಿದ್ದಾರೆ. 87 ವರ್ಷದ ತಮ್ಮ ಜೀವನದಲ್ಲಿ ಅಪಾರ ಅಭಿಮಾನಿಗಳನ್ನು ಅಗಲಿದ್ದಾರೆ.  ತಮ್ಮ ದೇಹವನ್ನು ಬೆಂಗಳೂರಿನ ಎಂ. ಎಸ್. ರಾಮಯ್ಯ ವೈದ್ಯಕೀಯ ಕಾಲೇಜಿಗೆ ದೇಹದಾನವನ್ನು ಮಾಡಿದ್ದಾರೆ. ಪಾರ್ಥೀವ ಶರೀರವನ್ನು ಇಂದು ಮಧ್ಯಾಹ್ನ ಎಂ.ಎಸ್. ರಾಮಯ್ಯ ವೈದ್ಯಕೀಯ ಕಾಲೇಜಿಗೆ ನೀಡಲಾಯಿತು ಎಂದು ಕುಟುಂಬದ ಮೂಲಗಳು ತಿಳಿಸಿವೆ.

ಸಾಹಿತ್ಯ ಕ್ಷೇತ್ರದಲ್ಲಿ ಅವರ ಸಾಧನೆಗಾಗಿ 2018 ರಲ್ಲಿ ಕರ್ನಾಟಕ ರಾಜ್ಯ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿತ್ತು. ಒಂದು ತೊಲ ಪುನುಗು ಮತ್ತು ಇತರ ಕತೆಗಳು, ಕಿರು ಕಾದಂಬರಿಗಳಾದ ಕುದುರೆ ಮೊಟ್ಟೆ ಮತ್ತು ಅಂಜಿಕಿನ್ಯಾತಕಯ್ಯ ಇವರ ಪ್ರಮುಖ ಸಾಹಿತ್ಯ ಕೃತಿಗಳು. ಕಾಮರೂಪಿಯವರ ಕಥೆ, ಕಾದಂಬರಿ, ಕವನ, ಬರಹ, ಬ್ಲಾಗ್ ಬರಹಗಳನ್ನೊಳಗೊಂಡ ಕಾಮರೂಪಿ ಸಮಗ್ರ ಕೃತಿಯನ್ನು ಸಂಚಯ ಪುಸ್ತಕ ಪ್ರಕಾಶನ ಪ್ರಕಟಿಸಿದೆ.

ಇಲ್ಲಿ ಕ್ಲಿಕ್‌ ಮಾಡಿ : ಜನಶಕ್ತಿ ಮೀಡಿಯಾ ವಾಟ್ಸ್‌ಪ್‌ ಗುಂಪು ಸೇರಲು ಈ ಲಿಂಕ್‌ ಕ್ಲಿಕ್‌ ಮಾಡಿ

Donate Janashakthi Media

Leave a Reply

Your email address will not be published. Required fields are marked *