ಖ್ಯಾತ ಕನ್ನಡ ರಂಗಭೂಮಿ ನಟ ಯಶವಂತ ಸರದೇಶಪಾಂಡೆ ನಿಧನ

ಬೆಂಗಳೂರು: ಸೆಪ್ಟೆಂಬರ್‌ 29 ಬೆಳಗ್ಗೆ ಖ್ಯಾತ ಕನ್ನಡ ರಂಗಭೂಮಿ ನಟ, ಅನೇಕ ನಾಟಕಗಳಲ್ಲಿ ನಟಿಸಿ-ನಿರ್ದೇಶಿಸಿ ಜನಪ್ರಿಯರಾಗಿದ್ದ ಹುಬ್ಬಳ್ಳಿ ಮೂಲದ ಯಶವಂತ ಸರದೇಶಪಾಂಡೆ ಅವರು ನಿಧನರಾಗಿದ್ದಾರೆ.

ಅವರ ಆಲ್ ದಿ ಬೆಸ್ಟ್ ನಾಟಕ ಅಭೂತಪೂರ್ವ ಯಶಸ್ಸು ಕಂಡಿತು. ಕಿರುತೆರೆ ಮತ್ತು ಚಲನಚಿತ್ರಗಳಲ್ಲಿಯೂ ಅವರು ಪಾತ್ರವಹಿಸುತ್ತಿದ್ದರು. ರಾಮ ಶ್ಯಾಮ ಭಾಮ ಎಂಬ ಚಲನಚಿತ್ರಕ್ಕೆ ಸಂಭಾಷಣೆ ಬರೆದ ಅವರು, ಕಮಲ್‌ಹಾಸ್‌ ಅವರಿಂದ ಉತ್ತರ ಕರ್ನಾಟಕದ ಆಡುಭಾಷೆಯನ್ನು ಆಡಿಸಿದ್ದರು. ಅವರ ನಿಧನಕ್ಕೆ ಕುಟುಂಬ ವರ್ಗ, ಅವರ ಅಭಿಮಾನಿಗಳು, ನಾಡಿನ ಗಣ್ಯರು ಕಂಬನಿ ಮಿಡಿದಿದ್ದಾರೆ.

ಇದನ್ನೂ ಓದಿ: ಜುಬೀನ್ ಗರ್ಗ್ ಅವರ ಅಂತಃಕರಣ

ಮೂಲತಃ ವಿಜಯಪುರ ಜಿಲ್ಲೆಯ ಬಸವನಬಾಗೇವಾಡಿ ತಾಲ್ಲೂಕಿನ ಉಕ್ಕಲಿ ಗ್ರಾಮದವರಾದ ಯಶವಂತ ಅವರು ಹೆಗ್ಗೋಡಿನ ನಿನಾಸಂ ನಾಟಕ ಸಂಸ್ಥೆಯಿಂದ ಡಿಪ್ಲೊಮಾ ಪದವಿ ಪಡೆದವರು. ನ್ಯೂಯಾರ್ಕ್‌ ವಿಶ್ವವಿದ್ಯಾಯದಿಂದ ನಾಟಕ ರಚನೆ, ಚಲನಚಿತ್ರ ಸಂಭಾಷಣೆಯ ವಿಶೇಷ ತರಬೇತಿಯನ್ನೂ ಪಡೆದಿದ್ದರು.

ಅಂಧಯುಗ, ಇನ್‌ಸ್ಪೆಕ್ಟರ್‌ ಜನರಲ್, ಮಿಡ್‌ಸಮರ್‌ ನೈಟ್ಸ್‌ಡ್ರೀಮ್, ಬಾಡಿಗೆ ಮನೆ, ಕಿತ್ತೂರು ರಾಣಿ ಚೆನ್ನಮ್ಮ, ಪುಷ್ಪರಾಣಿ, ಗಲಿವರನ ಯಾತ್ರೆ, ಬೆಪ್ಪುತಕ್ಕಡಿ ಬೋಳೇ ಶಂಕರ, ತುಂಟ ಮಕ್ಕಳ ತಂಟೆ, ಮಕ್ಕಳೆರಡೇ ಇರಲಿ, ಕುಂಟಾ ಕುಂಟ ಕುರವತ್ತಿ ಮುಂತಾದ ಅರವತ್ತಕ್ಕೂ ಹೆಚ್ಚು ನಾಟಕಗಳನ್ನು ಅವರು ನಿರ್ದೇಶಿಸಿದ್ದಾರೆ.

ರಂಗವರ್ತುಲ, ಬೇಂದ್ರೆ ರಂಗಾವಳಿಯ ಮುಖಾಂತರ ಬೇಂದ್ರೆಯವರ ಎಲ್ಲ ನಾಟಕಗಳನ್ನೂ ರಂಗಕ್ಕೆ ತಂದ ಕೀರ್ತಿ ಇವರದ್ದು. ರೇಡಿಯೋ, ದೂರದರ್ಶನಗಳಿಗಾಗಿ ಕಾರ್ಯಕ್ರಮಗಳನ್ನು ಅವರು ಸಿದ್ಧಪಡಿಸಿದ್ದರು. ಹಾಸ್ಯ ನಾಟಕಗಳನ್ನು ನಿರ್ದೇಶಿಸಿ, ನಟಿಸಿದ ಯಶವಂತ ಅವರು, ಆಲ್‌ ದಿ ಬೆಸ್ಟ್, ರಾಶಿ ಚಕ್ರ, ಸಹಿ ರೀ ಸಹಿ, ದಿಲ್ ಮಾಂಗೆ ಮೋರ್‌ ರಂಗದ ಮೇಲೆ ತಂದ ರಂಗ ಕಲಾವಿದ ಅವರು.

ದಾವಣಗೆರೆಯ ವೃತ್ತಿ ರಂಗಭೂಮಿ ರಂಗಾಯಣದ ನಿರ್ದೇಶಕರಾಗಿದ್ದರು. ಅಕ್ಟೋನಲ್ಲಿ ಕೊಳಲು ವಾದಕ ಪಂ.ಪ್ರವೀಣ ಗೋಡಖಿಂಡಿ ಅವರೊಂದಿಗೆ ‘ಕೊಳಲು’ ನಾಟಕದಲ್ಲಿ ಅವರು ಅಭಿನಯಿಸಬೇಕಿತ್ತು.

 

ಇದನ್ನೂ ನೋಡಿ: ನೇಮಕಾತಿ | ವಯೋಮಿತಿ ಸಡಿಲಿಕೆಗೆ ಉದ್ಯೋಗಾಕಾಂಕ್ಷಿಗಳ ಆಗ್ರಹ Janashakthi Media

Donate Janashakthi Media

Leave a Reply

Your email address will not be published. Required fields are marked *